ವಿಷಯಕ್ಕೆ ಹೋಗು

ಆರುಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉದ್ದಾಲಕ ಆರುಣಿ ಇಂದ ಪುನರ್ನಿರ್ದೇಶಿತ)

ಹಿಂದೂ ಧರ್ಮದಲ್ಲಿ, ಆರುಣಿ ಅಥವಾ ಉದ್ದಾಲಕ ಅಥವಾ ಉದ್ದಾಲಕ ಆರುಣಿ ಉಪಮನ್ಯು ಮತ್ತು 'ವೇದ'ನ ಜೊತೆಗೆ ಧೌಮ್ಯ ಋಷಿಯ ಶಿಷ್ಯರಲ್ಲಿ ಒಬ್ಬನು. ಆರುಣಿ ಪಂಚಾಲ ದೇಶದಿಂದ ಬಂದವನು ಮತ್ತು ಪಂಚಾಲದ ಆರುಣಿ ಎಂದು ಪರಿಚಿತನಾಗಿದ್ದನು. ಆರುಣಿಯ ಸಮರ್ಪಣೆ ಮತ್ತು ಪ್ರಾಮಾಣಿಕತೆಯನ್ನು ನೋಡಿ ಧೌಮ್ಯ ಋಷಿಗಳು ಬಹಳ ಸಂತಸಗೊಂಡರು ಮತ್ತು ಅವನಿಗೆ ಉದ್ದಾಲಕನೆಂಬ ಬಿರುದು ನೀಡಿದರು. ಕೃಷ್ಣಯಜುರ್ವೇದೀಯ ಸಂಹಿತೆಗಳಲ್ಲಿ ಶತಪಥ ಬ್ರಾಹ್ಮಣದಲ್ಲಿ ಅರುಣನ ಸ್ಥಾನ ಮಹತ್ತ್ವದ್ದು. ಅರುಣಿಯ ಮಂತ್ರಸಾಕ್ಷಾತ್ಕಾರಶಕ್ತಿ ತಂದೆಯ ತಪೋಶಕ್ತಿಯನ್ನೂ ಮೀರಿಸಿದ್ದು. ಅಖಂಡ ಋಷಿಸಂತಾನ ಪರಂಪರೆಯಲ್ಲಿ ದೇದೀಪ್ಯಮಾನವಾಗಿ ಬೆಳಗಿದವನಿವನು. ಉದ್ದಾಲಕನ ಋಷಿಪುತ್ರ ಶ್ವೇತಕೇತು ಔದ್ದಾಲಕಿ ಅಥವಾ ಶ್ವೇತಕೇತು ಆರುಣೇಯ. ಈತನ ಹೆಸರು ಭಾರತೀಯ ದರ್ಶನದ ಗ್ರಂಥಗಳಾದ ಉಪನಿಷತ್ತುಗಳಲ್ಲಿ ಅವುಗಳಷ್ಟೇ ಪ್ರಸಿದ್ದವಾದದ್ದು. ಉದ್ದಾಲಕನ ಮತ್ತೊಬ್ಬ ಶಿಷ್ಯ ಬ್ರಹ್ಮಮೀಮಾಂಸೆಯ ಪುರೋಗಾಮಿ ಯಾಜ್ಞವಲ್ಕ್ಯ. ಗುರುವಿಗೇ ಪರಾಜಯವನ್ನುಣ್ಣಿಸಿದ ಯಶಸ್ಸು ಮೇಧಾವಿ ಯಾಜ್ಞವಲ್ಕ್ಯನದು. ಮದ್ರ ಮತ್ತು ಪಾಂಚಾಲ ದೇಶಗಳು ಉದ್ದಾಲಕನ ದಾರ್ಶನಿಕ ಕಾರ್ಯರಂಗ. ಕೌಶಾಂಬಿಯ ರಾಜಪೊತ್ರೀ ಕೌಸುರು ಬಿಂದಿ ಇವನ ಶಿಷ್ಯ. ಈತನ ಋಷಿಕ್ರತುವಿನ ಪ್ರಖರತೆಯ ಮುಂದೆ ಯೌಗ್ಯಶೌಚೇಯ, ಭದ್ರಸೇನ, ಅಜಾತಶತ್ರವ ಮುಂತಾದ ಪ್ರಾಚೀನ ಬ್ರಹ್ಮಜ್ಞಾನಿಗಳು ತಲೆ ತಗ್ಗಿಸಬೇಕಾಯಿತು. ಯಾಜ್ನಿಕ ವಿಧಿಗಳಿಗೆ, ತತ್ತ್ವವಾದಗಳಿಗೆ ಉದ್ದಾಲಕನ ವಾಣಿ ಅಧಿಕೃತವಾದುದೆಂದು ಶತಪಥ, ಐತರೇಯ ಕೌಷೀತಕಿ, ಷಡ್ವಿಂಶ ಬ್ರಾಹ್ಮಣಗಳೂ ಬೃಹದಾರಣ್ಯಕ ಮತ್ತು ಛಾಂದೋಗ್ಯ ಉಪನಿಷತ್ತುಗಳೂ ಘೋಷಿಸುತ್ತವೆ. ಜೈಮಿನೀಯ ಬ್ರಾಹ್ಮಣದ ಸುಪ್ರಸಿದ್ಧವಾದ ಸುಬ್ರಹ್ಮಣ್ಯ ಸ್ತವದ ಕರ್ತೃವಾದ ಆರುಣಿಯಶಸ್ವಿನ್ ಎಂಬಾತ ಉದ್ದಾಲಕನೇ ಇರಬಹುದೆಂಬ ನಂಬಿಕೆಯಿದೆ. ಉದ್ದಾಲಕನಿಗೆ ಸಂಬಂಧಿಸಿದಂತೆ ಮಹಾಭಾರತದಲ್ಲಿ ಅನೇಕ ಕಥಾಸನ್ನಿವೇಶಗಳು ಬೆಳೆದುಬಂದಿವೆ. ವಾಯುಪುರಾಣದಲ್ಲೂ ಉದ್ದಾಲಕನೆಂಬ ಋಷಿಯ ಉಲ್ಲೇಖವಿದೆ. ತೈತ್ತಿರೀಯ ಬ್ರಾಹ್ಮಣದ ವಾಜಶ್ರವಸ ಗೌತಮನ ಮಗ ನಚಿಕೇತನೇ ಉದ್ದಾಲಕನೆಂದು ಸಾಯಣಾಚಾರ್ಯರ ಮತ.

ಉದ್ದಾಲಕನ ಕಥೆ

[ಬದಲಾಯಿಸಿ]

ಮಹಾಭಾರತದಲ್ಲಿ ಉದ್ದಾಲಕನ ಬಗ್ಗೆ ಬಂದಿರುವ ಎರಡು ಕಥೆಗಳು ಹೀಗಿವೆ: ಉದ್ದಾಲಕ ಒಬ್ಬ ಬ್ರಾಹ್ಮಣ. ಸಕಲಶಾಸ್ತ್ರ ಪಾರಂಗತ. ಹೆಂಡತಿ ಚಂಡಿ; ಹೇಳಿದ ಮಾತಿಗೆ ಪ್ರತಿ ಆಡುವವಳು; ಪ್ರತಿ ನಡೆಯುವವಳು. ಈಕೆಯ ನಡೆನುಡಿಗಳನ್ನು ನೋಡಿದ ಉದ್ದಾಲಕ ತೀವ್ರ ಚಿಂತೆಗೊಳಗಾದ. ಒಮ್ಮೆ ಕೌಂಡಿನ್ಯ ಮುನಿ ಇವನ ಮನೆಗೆ ಬಂದಾಗ ಉದ್ದಾಲಕ ತನ್ನ ಹೆಂಡತಿಯ ನಡೆವಳಿಕೆಗಳನ್ನು ಋಷಿಗೆ ತಿಳಿಸಿದ. ಅದನ್ನು ಕೇಳಿದ ಋಷಿ ಆತನನ್ನು ಕುರಿತು, ನೀನು ಯಾವುದು ಮಾಡಬೇಕೆಂದು ಅಪೇಕ್ಷಿಸುವೆಯೋ ಅದಕ್ಕೆ ವಿರುದ್ಧವಾಗಿ ಚಂಡಿಗೆ ಹೇಳಿದರೆ ನಿನ್ನ ಅಪೇಕ್ಷೆಗಳು ಈಡೇರುತ್ತವೆ ಎಂದು ಹೇಳಿದ. ಅದರಂತೆ ಉದ್ದಾಲಕ ನಡೆಯಹತ್ತಿದ. ಒಮ್ಮೆ ಆತನ ತಂದೆಯ ಶ್ರಾದ್ಧ ಬಂತು. ಉಪಾಯವಾಗಿ ಕೌಂಡಿನ್ಯನ ಉಪದೇಶದಂತೆ ನಡೆದು ಶ್ರಾದ್ಧವನ್ನು ಕ್ರಮಗೊಳಿಸಿದ. ಆದರೆ ಕೊನೆಯಲ್ಲಿ ಅಡ್ಡಜ್ಞಾನದಿಂದ ಪಿಂಡಗಳನ್ನು ತಿಪ್ಪೆಗೆ ಬಿಸಾಡು ಎಂದು ಮಾಡಬಾರದ್ದನ್ನು ಹೇಳುವುದಕ್ಕೆ ಪ್ರತಿಯಾಗಿ ನೀರಿನಲ್ಲಿ ಬಿಡು ಎಂದು ಮಾಡಬೇಕಾದ್ದನ್ನು ತಿಳಿಸಿದ. ಚಂಡಿ ಅದನ್ನು ತಿಪ್ಪೆಗೆ ಎಸೆದಳು. ಇದರಿಂದ ಕುಪಿತನಾದ ಉದ್ದಾಲಕ ಚಂಡಿಗೆ ಶಿಲೆಯಾಗುವಂತೆ ಶಾಪವಿತ್ತ. ಈ ಪ್ರಸಂಗ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ರಸಪೂರ್ಣವಾಗಿ ಮೂಡಿಬಂದಿದೆ. ಧೌಮ್ಯ ಮುನಿಯ ಶಿಷ್ಯನಾದ ಉದ್ದಾಲಕನೊಬ್ಬನಿದ್ದ. ಈತ ಆಪೋದ ಮುನಿಯ ಪುತ್ರ. ಒಮ್ಮೆ ಗದ್ದೆಗೆ ಹರಿಯುತ್ತಿದ್ದ ನೀರನ್ನು ಅಡ್ಡಗಟ್ಟುವಂತೆ ಗುರುವಿನಿಂದ ಆಜ್ಞೆ ಬರಲು ಎಷ್ಟು ಪ್ರಯತ್ನಿಸಿದರೂ ಹರಿಯುವ ನೀರು ನಿಲ್ಲದಿರಲು ತಾನೇ ಪ್ರವಾಹಕ್ಕೆ ಅಡ್ಡಲಾಗಿ ಮಲಗಿದ. ಶಿಷ್ಯ ಎಷ್ಟು ಹೊತ್ತಾದರೂ ಆಶ್ರಮಕ್ಕೆ ಬಾರದಿರಲು ಧೌಮ್ಯ ಗದ್ದೆಯ ಬಳಿಗೆ ಹೋಗಿ ಕರೆದ. ಆಗ ಶಿಷ್ಯ ನೀರನ್ನು ಭೇದಿಸಿಕೊಂಡು ಬಂದುದರಿಂದ ಉದ್ದಾಲಕನೆಂಬ ಹೆಸರಾಯಿತೆಂದೂ ಈತ ಕುಶಿಕ ಪುತ್ರಿಯನ್ನು ಮದುವೆಯಾಗಿ ಶ್ವೇತಕೇತು, ನಚಿಕೇತರೆಂಬ ಪುತ್ರರನ್ನೂ ಸುಜಾತೆಯೆಂಬ ಪುತ್ರಿಯನ್ನೂ ಪಡೆದನೆಂದೂ ಒಮ್ಮೆ ಅಪುತ್ರನಾದ ಬ್ರಾಹ್ಮಣನೊಬ್ಬ ಸಂತಾನಾರ್ಥವಾಗಿ ಈತನ ಮಡದಿಯನ್ನು ಕೇಳಿದ್ದನ್ನು ನೋಡಿದ ಶ್ವೇತಕೇತು ಕೋಪಗೊಂಡು ಸ್ತ್ರೀಪುರುಷರ ನಡವಳಿಕೆಗಳನ್ನು ಗೊತ್ತು ಪಡಿಸಿದನೆಂದೂ ಅಷ್ಟಾವಕ್ರ ಈತನ ದೌಹಿತ್ರನೆಂದೂ ಮಹಾಭಾರತದಿಂದ ತಿಳಿದುಬರುತ್ತದೆ.

ಉಲ್ಲೇಖ

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಆರುಣಿ&oldid=803398" ಇಂದ ಪಡೆಯಲ್ಪಟ್ಟಿದೆ