ಉದ್ದರಿ ಮಾರಾಟ

ವಿಕಿಪೀಡಿಯ ಇಂದ
Jump to navigation Jump to search

ಉದ್ದರಿ ಮಾರಾಟ: ಸರಕಿನ ಬೆಲೆಯನ್ನು ಗೊತ್ತಾದ ಒಂದು ಅವಧಿಯೊಳಗೆ ಪಾವತಿ ಮಾಡಲು ಕೊಳ್ಳಿಕೆದಾರನಿಗೆ ಅನುಮತಿ ನೀಡಿ ಮಾಡಿದ ಮಾರಾಟ (ಕ್ರೆಡಿಟ್ ಸೇಲ್). ಕೊಳ್ಳುವವನಿಂದ ಹಣ ಪಡೆಯದೆಯೇ ಮಾರಾಟಗಾರ ಸರಕನ್ನು ಸಾಮಾನ್ಯವಾಗಿ ಅವನಿಗೆ ಸ್ವಾಧೀನಪಡಿಸುತ್ತಾನೆ. ಉದ್ದರಿಯ ಅವಧಿ ಆಯಾ ಪರಿಸ್ಥಿತಿಗೆ ತಕ್ಕಂತೆ ಹೆಚ್ಚೋ ಕಡಿಮೆಯೋ ಆಗಿರುತ್ತದೆ. ವ್ಯಾಪಾರರೀತಿ, ವಹಿವಾಟಿನ ಪ್ರಮಾಣ, ಗ್ರಾಹಕನ ಪ್ರತ್ಯಯ (ಕ್ರೆಡಿಟ್)-ಮುಂತಾದ ಅಂಶಗಳು ಉದ್ದರಿಯ ಅವಧಿಯನ್ನು ನಿರ್ಣಯಿಸುತ್ತವೆ. ಆರ್ಥಿಕವಾಗಿ ಉದ್ದರಿ ಮಾರಾಟ ಬಲು ಪ್ರಾಮುಖ್ಯವುಳ್ಳದ್ದು. ಸಟ್ಟಾವ್ಯಾಪಾರಿ ಸಾಮಾನ್ಯ ವಾಗಿ ಚಿಲ್ಲರೆ ವ್ಯಾಪಾರಿಗಳಿಗೆ ಈ ಬಗೆಯ ಸೌಕರ್ಯ ಒದಗಿಸುವುದುಂಟು. ಚಿಲ್ಲರೆ ವ್ಯಾಪಾರಿಯ ವ್ಯವಹಾರ ನಡೆಸಲು ಅಗತ್ಯವಾದ ಬಂಡವಾಳದ ಒಂದು ಭಾಗ ಈ ಮೂಲಕ ಆತನಿಗೆ ಲಭ್ಯವಾದಂತಾಗುತ್ತದೆ. ಸರಕಿನ ಬೆಲೆ ಪಾವತಿ ಮಾಡಲು ದೊರಕಿದ ಸಮಯದಲ್ಲಿ ಆತ ಅದನ್ನು ಮಾರಿ ಹಣ ಪಡೆದೋ ಇದು ಸಾಧ್ಯವಾಗದಿದ್ದರೆ ಬೇರೆ ಮೂಲಗಳಿಂದ ಹಣ ಪಡೆದೋ ಉದ್ದರಿ ಚುಕ್ತಾ ಮಾಡಬಹುದು. ಉದ್ದರಿ ಒದಗಿಸುವ ಸಟ್ಟಾವ್ಯಾಪಾರಿಗೆ ತಾತ್ಕಾಲಿಕವಾಗಿ ಅಷ್ಟು ಮೊತ್ತದ ಬಂಡವಾಳ ಇಲ್ಲದಂತಾಗುವುದಾದರೂ ತನ್ನ ಸರಕುಗಳನ್ನು ಬೇಗ ವಿಲೇವಾರಿ ಮಾಡಿ ವಹಿವಾಟಿನ ಮೊತ್ತ ಹೆಚ್ಚಿಸಿ, ಹೆಚ್ಚು ಲಾಭ ಗಳಿಸುವುದು ಇದರಿಂದ ಸಾಧ್ಯ. ಅನೇಕ ವ್ಯಾಪಾರಿಗಳು ತಮ್ಮ ಅನುಭೋಗಿ ಗ್ರಾಹಕರಿಗೂ ಉದ್ದರಿ ಸೌಲಭ್ಯ ನೀಡುವು ದುಂಟು. ಕಂತು ಮಾರಾಟವೂ ಉದ್ದರಿ ಮಾರಾಟವೇ (ನೋಡಿ-ಕಂತು-ವಿಕ್ರಯ) ಇಲ್ಲಿ ಗ್ರಾಹಕ ಒಂದು ಗೊತ್ತಾದ ಅವಧಿಯಲ್ಲಿ ತನಗೆ ಅನುಕೂಲವಾದ ಕಂತುಗಳಲ್ಲಿ ಸರಕಿನ ಬೆಲೆಯನ್ನು (ಬಡ್ಡಿಯ ಸಮೇತ) ಸಲ್ಲಿಸುವ ಸೌಲಭ್ಯ ಪಡೆಯುತ್ತಾನೆ. ಬಾಡಿಗೆ-ಕೊಳ್ಳಿಕೆಯನ್ನು (ಹೈರ್-ಪರ್ಚೇಸ್) ಒಂದು ಬಗೆಯ ಉದ್ದರಿ ವ್ಯವಹಾರವೆನ್ನಬಹುದಾದರೂ ಈ (ನೋಡಿ-ಬಾಡಿಗೆ-ಕೊಳ್ಳಿಕೆ) ವ್ಯವಹಾರದಲ್ಲಿ ಮಾರಾಟಗಾರನಿಂದ ಕೊಳ್ಳುವವನಿಗೆ ಸರಕಿನ ಮೇಲೆ ಸ್ವಾಮ್ಯ ತಕ್ಷಣವೇ ವರ್ಗವಾಗಿರುವುದಿಲ್ಲ. ಇಂದು ವ್ಯಾಪಾರ ಅಧಿಕವಾಗಿ ಬೆಳೆದಿರುವುದಕ್ಕೆ ಉದ್ದರಿ ಮಾರಾಟ ಬಹಳ ಮಟ್ಟಿಗೆ ಕಾರಣ. ಒಬ್ಬ ಗ್ರಾಹಕನಿಗೆ ಯಾವ ಮಿತಿಯವರೆಗೆ ಉದ್ದರಿ ನೀಡಬಹುದು ಎಂಬ ಬಗ್ಗೆ ಆತನ ಪ್ರತ್ಯಯವನ್ನು ಕುರಿತ ಪರಿಶೀಲನೆ ನಡೆಸಿ ಸೂಕ್ತ ಸಲಹೆ ನೀಡುವ ಅನೇಕ ಸಂಸ್ಥೆಗಳು ಪಾಶ್ಚಾತ್ಯ ದೇಶಗಳಲ್ಲುಂಟು. ಈ ಬಗೆಯ ಮಾರಾಟ ಮಾಡುವವರು ತಮ್ಮ ಗ್ರಾಹಕರ ಲೆಕ್ಕಗಳ ಮೇಲೆ ಕಣ್ಣಿಟ್ಟು ಉದ್ದರಿ ಬಾಕಿ ವಸೂಲಿಯ ಬಗ್ಗೆ ಸೂಕ್ತ ವ್ಯವಸ್ಥೆ ಏರ್ಪಡಿಸಬೇಕು. ವಸೂಲಿಯಾಗದ ಉದ್ದರಿಯನ್ನು ನಷ್ಟವೆಂದು ಪರಿಗಣಿಸಿ ಅದನ್ನು ಲಾಭದಿಂದ ತೂಗಿಸಲು ವರ್ಷೇ ವರ್ಷೇ ಕ್ರಮ ಕೈಕೊಳ್ಳಬೇಕಾಗಿ ಬರಬಹುದು (ನೋಡಿ-ಕರಡುಸಾಲ-ಅಥವಾ-ಕರಡುಋಣ). ವ್ಯಾಪಾರ ಸಂಸ್ಥೆಯ ದೃಷ್ಟಿಯಿಂದಲೂ ಸೂಕ್ತ ಉದ್ದರಿ ನಿಯಂತ್ರಣ ವ್ಯವಸ್ಥೆ ಅವಶ್ಯ. ಒಂದು ಗೊತ್ತಾದ ಕಾಲದಲ್ಲಿ ವ್ಯಾಪಾರಸಂಸ್ಥೆಯಲ್ಲಿನ ಕರ್ಮವಾಹಕ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್), ಮಾರಾಟ ವ್ಯವಸ್ಥೆಯ ಪ್ರಾವೀಣ್ಯ, ವ್ಯಾಪಾರದ ಒಟ್ಟಿನ ಸ್ಥಾನಮಾನ-ಇವನ್ನು ನಿರ್ಧರಿಸಲು ಆ ಸಂಸ್ಥೆಯ ಉದ್ದರಿ ವ್ಯಾಪಾರವೇ ಆಧಾರ. (ಸಿ.ಸಿ.ಪಿ.)