ಉದ್ಗಮವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದ್ಗಮವಾದ: ಒಂದು ಕಡೆ ಅಧ್ಯಾತ್ಮರಹಸ್ಯವಾದಕ್ಕೂ ಮತ್ತೊಂದು ಕಡೆ ನವ ಪ್ಲೇಟೊ ತತ್ತ್ವಕ್ಕೂ ಸಂಬಂಧಿಸಿದ್ದು, ಸೃಷ್ಟಿರಹಸ್ಯವನ್ನು ವಿವರಿಸುವ ಒಂದು ವಾದ (ಎಮನೇಷನ್). ಭಾರತೀಯ ತತ್ತ್ವಶಾಸ್ತ್ರದಲ್ಲಿ ಬಹಳ ಕಡೆ ಇದರ ಉಲ್ಲೇಖವಿದೆ. ಒಂದು ತತ್ತ್ವದಿಂದ ಮತ್ತೊಂದು ಹೊರಹೊಮ್ಮುತ್ತದೆಯಲ್ಲದೆ ಹೊಮ್ಮಿದ ಎಲ್ಲ ತತ್ತ್ವಗಳೂ ಕೊನೆಗೆ ಮೂಲತತ್ತ್ವದಲ್ಲಿ ಲೀನವಾಗುತ್ತವೆ ಎಂದು ಹೇಳುವುದೇ ಈ ವಾದದ ಸಾರ. ಇದರಂತೆ ಇನ್ನೆರಡು ವಾದಗಳು ಪ್ರಚಲಿತದಲ್ಲಿವೆ. ಶೂನ್ಯದಿಂದ ಅಕ್ಷರನಾದ ಪರಮಾತ್ಮ ಜಗತ್ತನ್ನು ಸೃಷ್ಟಿಸಿದನೆನ್ನುವುದು ಒಂದು ವಾದ. ವಿಕಾಸತತ್ತ್ವಕ್ಕನುಗುಣವಾಗಿ ವೈವಿಧ್ಯಮಯವಾದ ಈ ಸೃಷ್ಟಿ ಆಯಿತೆನ್ನುವುದು ಇನ್ನೊಂದು. ಮೊದಲಿನದನ್ನು ಆರಂಭವಾದವೆನ್ನಬಹುದು. ಎರಡನೆಯದು ಪರಿಣಾಮವಾದ. ಒಂದು ತತ್ತ್ವ ಮತ್ತೊಂದು ತತ್ತ್ವದಿಂದ ಹೊರಹೊಮ್ಮುವುದರ ವರ್ಣನೆಯನ್ನು ಅನೇಕ ದರ್ಶನಗಳಲ್ಲಿ ಕಾಣುತ್ತೇವೆ. ಈ ತತ್ತ್ವಗಳು ಬೀಜವೃಕ್ಷನ್ಯಾಯದಂತೆ ಒಂದರೊಳಗಿಂದ ಒಂದು ಹೊರಹೊಮ್ಮುತ್ತವೆ. ಇದು ಸಾಂಖ್ಯ ದರ್ಶನದ ಪರಿಣಾಮವಾದದಲ್ಲಿ ಕಂಡುಬರುತ್ತದೆ. ಪರಿಣಾಮವಾದ ಆರಂಭವಾದಕ್ಕೆ ಪ್ರತಿಯಾದದ್ದು. ಅಸತ್ನಿಂದ ಸತ್ ಬರುವುದೆಂದು ಆರಂಭವಾದ ಹೇಳಿದರೆ, ಸತ್ ನಿಂದಲೇ ಅಸತ್ ಬರಬಲ್ಲದೆಂದು ಪರಿಣಾಮವಾದ ತಿಳಿಸುತ್ತದೆ. ಸಾಂಖ್ಯದರ್ಶನದ ಪರಿಣಾಮವಾದ ಪ್ರಕೃತಿಯ ಪರಿಣಾಮವಾದ ಮಾತ್ರ. ಆದರೆ ಪ್ಲಾಟೈನಸ್ ಮೊದಲಾದ ಪಾಶ್ಚಾತ್ಯ ದಾರ್ಶನಿಕರಲ್ಲಿ ಮತ್ತು ವೇದಾಂತದಾರ್ಶನಿಕರಲ್ಲಿ ಈ ಉದ್ಗಮವಾದ ಜೀವಾತ್ಮದ ವಿಕಾಸಕ್ಕೆ ಅನ್ವಯಿಸುವಂಥದಾಗಿದೆ. ಸೃಷ್ಟಿ ಸೃಷ್ಟಿಕರ್ತನಿಂದ ಹೊರಹೊಮ್ಮುತ್ತದೆ. ಮಾತ್ರವಲ್ಲದೆ ಮತ್ತೆ ಹಿಂತಿರುಗಿ ಸೃಷ್ಟಿಕರ್ತನಲ್ಲಿಯೇ ಸಮಾವೇಶಗೊಳ್ಳುತ್ತದೆ ಎಂಬ ಭಾವ ಈ ತತ್ತ್ವದಲ್ಲಡಗಿದೆ. ಯಥೋರ್ಣನಾಭಿಃ ಸೃಜತೇ ಗೃಹ್ಣತೇಚ ಎಂಬ ಉಪನಿಷದ್ವಾಕ್ಯದಿಂದ ಜೇಡ ತನ್ನಲ್ಲಿಯೇ ಇರುವ ದ್ರವ್ಯದಿಂದ ಬಲೆಯೊಂದನ್ನು ಸೃಷ್ಟಿಸಿ, ಹರಡಿ, ಅದರಲ್ಲಿಯೇ ಪ್ರವೇಶಿಸುವಂತೆ ಈಶ್ವರ ಜಗತ್ತನ್ನು ಸೃಷ್ಟಿಸಿ ಆ ಜಗತ್ತನ್ನೇ ಪ್ರವೇಶಿಸುತ್ತಾನೆ ಎಂದು ವೇದಾಂತ ವಿವರಿಸುತ್ತದೆ. ತನ್ನಿಂದಲೇ ಸೃಷ್ಟಿಕಾರ್ಯ ನಡೆದು ಸೃಷ್ಟಿಯಾದುದನ್ನು ತನ್ನಲ್ಲಿಯೇ ಮತ್ತೆ ಸೆಳೆದುಕೊಳ್ಳುವ ಈ ಚಕ್ರರೂಪದ ವ್ಯಾಪಾರವೇ ಜಗತ್ಸೃಷ್ಟಿಯೆಂದು ವೇದಾಂತದರ್ಶನವು ಲೋಕವತ್ತು ಲೀಲಾಕೈವಲ್ಯಂ ಅನ್ನುವ ಬ್ರಹ್ಮಸೂತ್ರದಿಂದ ತಿಳಿಸುತ್ತದೆ. (ನೋಡಿ -ನವಪ್ಲೇಟೊ ತತ್ತ್ವ; ಪ್ಲಾಟೈನಸ್) (ಎಂ.ವೈ.)