ವಿಷಯಕ್ಕೆ ಹೋಗು

ಉತ್ಸವ ಕವಾಯತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಸವ ಕವಾಯತು: ಕವಾಯತು ಶಿಕ್ಷಣ ಪಡೆದ ದಳಗಳು ವಿಶೇಷ ಸಂತೋಷ ಸಮಾರಂಭಗಳಲ್ಲಿ ವಿಧಿವತ್ತಾಗಿ ಪ್ರದರ್ಶಿಸುವ ಸಾಮೂಹಿಕ ಕ್ರಿಯೆ (ಸೆರಿಮೋನಿಯಲ್ ಪೆರೇಡ್, ಸೆರಿಮೋನಿಯಲ್ ಡ್ರಿಲ್). ಸೈನ್ಯ, ಪೊಲೀಸ್, ಎನ್ಸಿಸಿ., ಸ್ಕೌಟ್ ಮತ್ತು ಇತರ ಸುವ್ಯವಸ್ಥಿತ ಸ್ವಯಂಸೇವಕ ದಳಗಳು ಒಟ್ಟಾಗಿ ಅಥವಾ ಪ್ರತ್ಯೇಕವಾಗಿ ಇಂಥ ಪ್ರದರ್ಶನಗಳಲ್ಲಿ ಭಾಗವಹಿಸುತ್ತವೆ. ರಾಷ್ಟ್ರೀಯ ದಿವಸಗಳು, ಆಯಾ ದಳಕ್ಕೆ ವಿಶಿಷ್ಟವಾದ ಸಮಾರಂಭಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಕ್ತಿಗಳ ಆಗಮನ ನಿರ್ಗಮನ ಘಟನೆಗಳು ಇಂಥಲ್ಲೆಲ್ಲ ಉತ್ಸವ ಕವಾಯತಿನ ಮೂಲಕ ಗೌರವ ವ್ಯಕ್ತಪಡಿಸುವುದು ವಾಡಿಕೆ. ಭಾಗಿಗಳ ದೃಷ್ಟಿಯಿಂದ ಹಿನ್ನೆಲೆಯಲ್ಲಿರುವ ಉದ್ದೇಶಗಳು: (1) ಸಮಷ್ಟಿಪ್ರಜ್ಞೆಯನ್ನು ವರ್ಧಿಸುವುದು; (2) ಕವಾಯ ತುರಂಗದಲ್ಲಿ ಉನ್ನತಮಟ್ಟದ ಸ್ತಿಮಿತತೆ ಮತ್ತು ಸಂಬದ್ಧತೆಗಳನ್ನು ಅಸ್ತಿತ್ವಕ್ಕೆ ತರುವುದು; (3) ಯುದ್ಧದಲ್ಲಿ ಜಯ (ಅಥವಾ ಉದ್ದೇಶ) ಸಿದ್ದಿಸಲು ಆವಶ್ಯಕವಾದ ನೈತಿಕ ಗುಣಗಳ ಬೆಳವಣಿಗೆಯನ್ನು ಪೋಷಿಸುವುದು. ಒಂದು ದಳದ ಶಿಕ್ಷಣಸಾಫಲ್ಯದ ಪ್ರತೀಕ ಆ ದಳ ಪ್ರದರ್ಶಿಸುವ ಉತ್ಸವ ಕವಾಯತಿ. ಆಯಾ ದಳಗಳ ಉದ್ದೇಶಗಳನ್ನು (ಎಂದರೆ ವಾಯುಪಡೆಯ ಶಿಕ್ಷಣದ ಉದ್ದೇಶ ನೌಕಾಪಡೆಯದಕ್ಕಿಂತ ಭಿನ್ನ; ಭೂಮಿಪಡೆಯ ಉದ್ದೇಶ ಬೇರೆಯೇ; ಇದೇ ರೀತಿ ಇತರ ದಳಗಳ ಶಿಕ್ಷಣದ ಉದ್ದೇಶಗಳು ಭಿನ್ನವಾಗಿವೆ.) ಸಿದ್ಧಿಸಲು ನೀಡುವ ಶಿಕ್ಷಣ ನಿರಂತರ ಹಂತಹಂತವಾಗಿ ನಡೆದಿರುತ್ತದೆ. ಅದು ಪ್ರೇಕ್ಷಣೀಯವಲ್ಲ. ಆದರೆ ಇಂಥ ಶಿಕ್ಷಣ ಯಾವ ಮಟ್ಟಕ್ಕೆ ಏರಿದೆ, ಸಾಮೂಹಿಕವಾಗಿ ಒಂದೊಂದು ದಳ ತನ್ನಲ್ಲಿಯೂ ಇತರ ದಳಗಳೊಡ ನೆಯೂ ಹೇಗೆ ವರ್ತಿಸುತ್ತದೆ ಎಂಬುದನ್ನು ಉತ್ಸವಕವಾಯತಿನಂದು ರಾಷ್ಟ್ರ ನೋಡುತ್ತದೆ. ಒಂದು ಆಜ್ಞೆ, ಒಂದು ಕ್ರಿಯೆ-ಇದು ಇಲ್ಲಿನ ಸೂತ್ರ. ಇದರ ಪಾಲನೆಯಲ್ಲಿ ನಿಷ್ಕೃಷ್ಟತೆ ಸಿದ್ಧಿಸಿದರೆ ದಳಗಳ ಶಿಕ್ಷಣದ ಉದ್ದೇಶ ಸಫಲವಾಗಿದೆ ಎಂದು ಭಾವಿಸಬಹುದು. ಶಿಸ್ತಿನ ಕ್ರಮಬದ್ಧ ಶಿಕ್ಷಣ ಪಡೆದ ದಳಗಳು ವಿಧಿವತ್ತಾಗಿ ಪ್ರದರ್ಶಿಸುವ, ಉತ್ಸವಕವಾಯತು ನೋಡಲು ಒಂದು ಸುಂದರ ದೃಶ್ಯ. ಇದರಲ್ಲಿ ಸಾಮಾನ್ಯವಾಗಿರುವ ವಿಧಿಗಳು-(1) ರಂಗಸ್ಥಳಕ್ಕೆ ವ್ಯವಸ್ಥಿತ ತುಕಡಿಗಳು ಕ್ರಮಬದ್ಧವಾಗಿ ನಡೆದುಬಂದು ನಿಯಮಿತ ಸ್ಥಾನಗಳಲ್ಲಿ ಕವಾಯತು ರೀತ್ಯ ನಿಲ್ಲುತ್ತವೆ. ಭಾಗಿಗಳು ಶಸ್ತ್ರಗಳನ್ನು ಹೊಂದಿರಬಹುದು, ಹೊಂದದೆಯೂ ಇರಬಹುದು. ಹೊಂದಿದ್ದರೆ ಆ ಕವಾಯತು ಶ್ರೇಷ್ಠವೆಂದು ಸಂಕೇತ. (2) ಕವಾಯತಿನಾಯಕ ಯುಕ್ತ ಆಜ್ಞೆಯನ್ನು ಘೋಷಿಸಿ ತುಕ್ಕಡಿಗಳ ನೆಲೆಯನ್ನು ವ್ಯವಸ್ಥೆಗೊಳಿಸುತ್ತಾನೆ. ಜೊತೆಗೆ ಅವುಗಳ ಸಹಕ್ರಿಯಾ ಸಾಮರ್ಥ್ಯವನ್ನು ದೃಢಪಡಿಸಿಕೊಳ್ಳುತ್ತಾನೆ. (3) ಗೌರವ ಸ್ವೀಕರಿಸುವ ಮುಖ್ಯ ವ್ಯಕ್ತಿ ನಿಶ್ಚಿತವೇಳೆಗೆ ಆಗಮಿಸಿ ವಂದನವೇದಿಕೆಯ (ಸೆಲ್ಯೂಟಿಂಗ್ ಬೇಸ್) ಮೇಲೆ ನಿಂತೊಡನೆಯೇ ದಳಗಳಿಗೆ ನಾಯಕ ಆಜ್ಞೆ ನೀಡಿ ಶಸ್ತ್ರವಂದನೆ ಸಮೇತ ಗೌರವ ಪ್ರದರ್ಶಿಸುತ್ತಾನೆ. ಮುಖ್ಯವ್ಯಕ್ತಿ ಪ್ರತಿವಂದನೆ ಇತ್ತು ಗೌರವವನ್ನು ಸ್ವೀಕರಿಸುವನು. (4) ದಳಗಳನ್ನು ನಾಯಕ ಸಾವಧಾನ ಸ್ಥಿತಿಯಲ್ಲಿ ಇರುವಂತೆ ವಿಧಿಸಿ ಮುಖ್ಯವ್ಯಕ್ತಿಯಲ್ಲಿಗೆ ಆಗಮಿಸಿ ಉತ್ಸವಕವಾಯತು ವೀಕ್ಷಣೆಗೆ ಸನ್ನದ್ಧವಾಗಿದೆಯೆಂದು ಅರುಹುತ್ತಾನೆ. (5) ಮುಖ್ಯವ್ಯಕ್ತಿಯನ್ನು ನಾಯಕ ದಳಗಳ ಮುಂಚೂಣಿಯಲ್ಲಿ ನಡಿಗೆಯಿಂದಲೋ ವಾಹನದಲ್ಲಿಯೋ ವೀಕ್ಷಿಸಲು ಕರೆದೊಯ್ಯುತ್ತಾನೆ. ಇದು ಮುಖ್ಯವ್ಯಕ್ತಿಯಿಂದ ದಳಗಳ ಸಮೀಪ ಮತ್ತು ಪ್ರತ್ಯೇಕ ವೀಕ್ಷಣೆ. (6) ಮುಖ್ಯವ್ಯಕ್ತಿ ಸ್ವಸ್ಥಾನಕ್ಕೆ ಮರಳಿದ ಅನಂತರ ನಾಯಕ ದಳಗಳಿಗೆ ಪ್ರದರ್ಶನ ನಡಿಗೆ (ಮಾರ್ಚ್ಪಾಸ್ಟ್‌) ನಡೆಯಲು ಆಜ್ಞೆ ನೀಡುತ್ತಾನೆ. ಮೊದಲು ನಾಯಕ; ಆತನ ಹಿಂದೆ ದಳಗಳು ಅವು ನಿಂತಿರುವ ಕ್ರಮದಲ್ಲಿ ಬಲಕ್ಕೆ ತಿರುಗಿ ಸರಿಸುಮಾರು ವೃತ್ತಪಥದಲ್ಲಿ ನಡೆದು ಮುಖ್ಯವ್ಯಕ್ತಿ ಬಲಕ್ಕೆ ಇರುವಂತೆ ಗಮನಿಸುತ್ತವೆ. ಮುಖ್ಯವ್ಯಕ್ತಿ ನಿಂತಿರುವ ವಂದನವೇದಿಕೆಯ ಸಮೀಪ ಬರುವಾಗ ದೃಷ್ಟಿಯನ್ನು ಬಲಕ್ಕೆ (ಎಂದರೆ, ಮುಖ್ಯ ವ್ಯಕ್ತಿಯೆಡೆಗೆ) ಹರಿಸುವುದರ ಮೂಲಕ ಗೌರವ ಸಲ್ಲಿಸುತ್ತವೆ. ಆಗ ಆತನೂ ಪ್ರತಿವಂದನೆ ನೀಡುತ್ತಾನೆ. ಇಲ್ಲಿಗೆ ಉತ್ಸವ ನಡಿಗೆ ಮುಕ್ತಾಯವಾಗುತ್ತದೆ. ಉತ್ಸವಕವಾಯತಿನಲ್ಲಿ ಭಾಗವಹಿಸಬಲ್ಲ ತುಕಡಿಗಳ ಸಂಖ್ಯೆಯನ್ನು ನಿಗದಿಸಿಲ್ಲ. ಲಭ್ಯ ಸುಶಿಕ್ಷಿತ ಪಡೆಗಳು ಮತ್ತು ರಂಗಸ್ಥಳದ ವಿಸ್ತಾರ ಇವನ್ನು ಅವಲಂಬಿಸಿ ಅನುಕೂಲ ಸಂಖ್ಯೆಯ ತುಕಡಿಗಳನ್ನು ಆರಿಸುವುದು ವಾಡಿಕೆ. ಮಿಶ್ರ ಉತ್ಸವಕವಾಯತಿನಲ್ಲಿ (ಎಂದರೆ ಸೈನ್ಯ, ಪೊಲೀಸ್, ಎನ್ಸಿಸಿ ಮುಂತಾದ ವಿವಿಧ ದಳಗಳು ಒಟ್ಟಾಗಿ ಭಾಗವಹಿಸುವಾಗ) ಯಾವ ದಳ ಮೊದಲು ಬರಬೇಕು ಯಾವುದುಅನಂತರ ಬರಬೇಕು ಎಂಬ ಜ್ಯೇಷ್ಠತೆಯ ನಿರ್ಧಾರವನ್ನು ಸರ್ಕಾರ ಮೊದಲೇ ವಿಧಿಸಿರುತ್ತದೆ. ಉತ್ಸವಕವಾಯತಿನಲ್ಲಿ ಮುಖ್ಯವ್ಯಕ್ತಿಗೆ ಶಸ್ತ್ರವಂದನೆ ಸಲ್ಲಿಸುವಾಗ ಕೆಲವು ನಿರ್ಧಿಷ್ಟ ವಿಧಿಗಳನ್ನು ಪಾಲಿಸಬೇಕು : (1) ರಾಷ್ಟ್ರಾಧ್ಯಕ್ಷರು ಮುಖ್ಯವ್ಯಕ್ತಿಯಾದಾಗ, ರಾಜ್ಯಪಾಲರು ಅವರ ರಾಜ್ಯದಲ್ಲಿ ನೆರವೇರುವ ಉತ್ಸವಕವಾಯತಿನಲ್ಲಿ ಮುಖ್ಯವ್ಯಕ್ತಿಯಾದಾಗ, ಸ್ವಾತಂತ್ರ್ಯ ದಿವಸ, ಗಣರಾಜ್ಯ ದಿವಸಗಳಿಂದ ರಾಷ್ಟ್ರಧ್ವಜಾರೋಹಣ ಮಾಡಿದಾಗ-ಇಲ್ಲೆಲ್ಲ ರಾಷ್ಟ್ರಗೀತೆಯನ್ನು ನುಡಿಸಬೇಕು. (2) ಮಿಕ್ಕ ಎಲ್ಲ ಉತ್ಸವಕವಾಯತು ಗಳಲ್ಲೂ ಬೇರೆ ಗೀತೆಯನ್ನು (ಇದನ್ನೂ ವಿಧಿಸಲಾಗಿದೆ) ನುಡಿಸಬೇಕು (ನೋಡಿ-ಗೌರವರಕ್ಷೆ).