ಉತ್ಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಪಾತ: ಪ್ರಕೃತಿ ತನ್ನ ಸ್ವಭಾವಕ್ಕೆ ಭಿನ್ನವಾಗುವುದು. ಎಂದರೆ ಅಕಸ್ಮಾತ್ ಸಂಭವಿಸುವ ಪ್ರಕೃತಿವಿಕಾರ. ಇದು ಅಶುಭಸೂಚಕ ಚಿಹ್ನೆ. ದಿವ್ಯ, ಅಂತರಿಕ್ಷ, ಭೌಮ ಎಂದು ಉತ್ಪಾತ ಮೂರು ವಿಧ. ಹುಣ್ಣಿಮೆ ಅಮಾವಾಸ್ಯೆ ದಿನಗಳಲ್ಲಿ ಮಾತ್ರ ಸಂಭವಿಸುವ ಗ್ರಹಣಾದಿ ಪರ್ವದಿವಸಗಳನ್ನು ಬಿಟ್ಟು ಇತರ ದಿನಗಳಲ್ಲಿ ಉಂಟಾಗುವುದು-ಇವೇ ಮೊದಲಾದವು ಸಹಜ ಭಿನ್ನವಾದವು ದಿವ್ಯ ಉತ್ಪಾತಗಳು. ಉಲ್ಕಾಪಾತ (ಬೆಂಕಿಯಮಳೆ) ನಿರ್ಘಾತ (ಬಿರುಗಾಳಿಯ ಪರಸ್ಪರ ಹೊಡೆತ) ಇವೇ ಮೊದಲಾದ ವಿಕಾರಗಳು ಅಂತರಿಕ್ಷ ಉತ್ಪಾತಗಳು. ಭೂಕಂಪ ದಿಗ್ದಾಹ ಮೊದಲಾಗಿ ಭೂಮಿಯಲ್ಲಿ ಸಂಭವಿಸುವ ಪ್ರಕೃತಿವಿಕಾರಗಳು ಭೌಮ ಉತ್ಪಾತಗಳು. ಸೂರ್ಯ, ಚಂದ್ರಾದಿ ಗ್ರಹಗಳು ಮತ್ತು ನಕ್ಷತ್ರಗಳು ಸಹಜಸಿದ್ಧವಾದ ವರ್ಣ ಮತ್ತು ಆಕಾರ ಸ್ಥಿತಿಯಲ್ಲಿ ಸ್ವಭಾವವಿರುದ್ಧವಾಗಿ ಕಾಣುವುದು, ಸೂರ್ಯಪ್ರಕಾಶದಲ್ಲಿ ನಕ್ಷತ್ರಗಳು ಕಾಣುವುದು, ಋತುಗಳಲ್ಲಿ ಸಹಜವಾಗಿ ಇರಬೇಕಾದ ಪ್ರಕೃತಿಗೆ ವಿರುದ್ಧವಾಗಿ ಇತರ ಋತುಗಳು, ಧರ್ಮಗಳು ಇರುವುದು; ಭೂಮಿಯಲ್ಲಿ ಧೂಳೆದ್ದು ಹಗಲಿನಲ್ಲಿ ಕತ್ತಲೆ ಕವಿಯುವುದು, ಬೆಂಕಿ ಇಲ್ಲದಿದ್ದರೂ ಉರಿಯುವಂತೆ ಕಾಣುವುದು, ರಕ್ತದ ಮಳೆ, ಬಾಲಚುಕ್ಕೆ, ಕೇತುದರ್ಶನ, ಅಂಗವೈಕೃತ, ಅಗ್ನಿವೈಕೃತ, ವೃಕ್ಷವೈಕೃತ, ಸಸ್ಯವೈಕೃತ, ವೃಷ್ಟಿವೈಕೃತ, ಜಲವೈಕೃತ, ಪ್ರಸವವೈಕೃತ, ಚತುಷ್ಪದ ವೈಕೃತ, ವಾಯುವೈಕೃತ, ಮೃಗಪಕ್ಷ್ಯಾದಿವೈಕೃತ, ಶಕ್ರಧ್ವಜೇಂದ್ರಕೀಲಾದಿವೈಕೃತ-ಇವೆಲ್ಲ ಉತ್ಪಾತಗಳೇ. ದೇಶಕ್ಕೆ ಮುಂದೆ ಸಂಭವಿಸಬಹುದಾದ ಕೆಟ್ಟಫಲಗಳನ್ನು ಇವು ಸೂಚಿಸುತ್ತವೆ. ಮನುಷ್ಯರು ಮಾಡುವ ಅಕೃತ್ಯಗಳಿಂದುಂಟಾದ ಪಾಪದ ಹೆಚ್ಚಳದಿಂದ ಆಗಬಹುದಾದ ಅಶುಭಗಳನ್ನು ಸೂಚಿಸಿ ಎಚ್ಚರಿಕೆ ಕೊಡುತ್ತವೆ. ಈ ಉತ್ಪಾತ ಕಂಡಾಗ ಅದಕ್ಕೆ ಶಾಸ್ತ್ರದಲ್ಲಿ ವಿಹಿತವಾಗಿರುವಂತೆ ಶಾಂತಿಗಳನ್ನು ಮಾಡಿ ಸಂಭವಿಸಬಹುದಾದ ಕೆಟ್ಟ ಫಲಗಳನ್ನು ನಿವಾರಿಸಬಹುದು. (ಎಸ್.ಎನ್.ಕೆ.)

"https://kn.wikipedia.org/w/index.php?title=ಉತ್ಪಾತ&oldid=715509" ಇಂದ ಪಡೆಯಲ್ಪಟ್ಟಿದೆ