ಉತ್ತರ ವಿಯೆಟ್ನಾಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರ ವಿಯೆಟ್ನಾಂ: ಫ್ರೆಂಚ್ ಇಂಡೋಚೀನದ ಒಂದು ರಾಜ್ಯವಾಗಿದ್ದ ವಿಯೆಟ್ನಾಮಿನ ಉತ್ತರಭಾಗ. ವಿಯೆಟ್ನಾಂ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಇದರ ಅಧಿಕೃತನಾಮ. 17ನೆಯ ಉತ್ತರ ಅಕ್ಷಾಂಶ ರೇಖೆಯೇ ಇದಕ್ಕೂ ದಕ್ಷಿಣ ವಿಯೆಟ್ನಾಮಿಗೂ ನಡುವಣ ಗಡಿಗೆರೆ. ಉತ್ತರ ಪಶ್ಚಿಮಗಳಲ್ಲಿ ಚೀನ, ಲಾವೋಸ್ಗಳೂ ಪೂರ್ವದಲ್ಲಿ ದಕ್ಷಿಣ ಚೀನ ಸಮುದ್ರವೂ ಇವೆ. ವಿಸ್ತೀರ್ಣ 63,360 ಚ. ಮೈ. ಜನಸಂಖ್ಯೆ 1,59,03,000 (1960). ರಾಜಧಾನಿ ಹಾನಾಯ್.

ಈ ದೇಶವು ೧೯೪೫ ರಿಂದ ೧೯೭೬ರ ವರೆಗೆ ಪ್ರತ್ಯೇಕವಾಗಿದ್ದು ದಕ್ಷಿಣ ವಿಯೆಟ್ನಾಮನೊಂದಿಗೆ ವಿಲೀನವಾಗಿ ವಿಯೆಟ್ನಾಮ್ ಎಂದಾಯಿತು

ಮೇಲ್ಮೈ ಲಕ್ಷಣ[ಬದಲಾಯಿಸಿ]

ಉತ್ತರ ವಿಯೆಟ್ನಾಮಿನ ಭೂಪ್ರದೇಶವನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು: 1 ವಾಯವ್ಯದಿಂದ ಆಗ್ನೇಯಕ್ಕೆ ಹಬ್ಬಿರುವ ಪರ್ವತ ಶ್ರೇಣಿ. 2 ಕೆಂಪುನದಿಗೆ ದಕ್ಷಿಣದಲ್ಲಿ ಸುಣ್ಣಕಲ್ಲು ಹಾಗೂ ಬೆಣಚುಕಲ್ಲುಗಳಿಂದ ತುಂಬಿದ ಪರ್ವತ ಸಮೂಹ ಮತ್ತು ಯುನ್ನಾನ್ ಪ್ರದೇಶ. 3 ಇನ್ನೂ ದಕ್ಷಿಣಕ್ಕೆ ಸಮುದ್ರದ ಸನಿಹದವರೆಗೂ ಹಬ್ಬಿರುವ ಎತ್ತರದ ಪರ್ವತ. 4 ಕಡಲ ದಂಡೆಗುಂಟ ಹಬ್ಬಿರುವ ಕಿರು ಅಗಲದ ಮೈದಾನ. 5 ಇವುಗಳ ನಡುವೆ ಟಾಂಕಿನ್ ಖಾರಿಯ ಮಗ್ಗುಲಲ್ಲಿ ಮೈಚಾಚಿ ಮಲಗಿರುವ ಕೆಂಪುನದೀ ಮುಖಜಭೂಮಿ. ಈ ನದಿಯ ಸ್ವಭಾವ ಬಲು ಚಂಚಲ; ಮಣ್ಣು ತಂದು ಪಾತ್ರದಲ್ಲಿ ತುಂಬಿ ದಡಮೀರಿ ಹರಿದು ಹಾದಿಯನ್ನೇ ಬದಲಾಯಿಸುತ್ತಿರುತ್ತದೆ.

ವಾಯುಗುಣ[ಬದಲಾಯಿಸಿ]

ಉತ್ತರ ವಿಯೆಟ್ನಾಮಿನದು ಉಷ್ಣ ಹಾಗೂ ತೇವದ ಮಾನ್ಸೂನ್ ಮಾದರಿಯ ವಾಯುಗುಣ. ಸಾಮಾನ್ಯವಾಗಿ ಮೇ ಯಿಂದ ಅಕ್ಟೋಬರ್ ವರೆಗೆ ಮಳೆಗಾಲ. ಆದರೆ ದಕ್ಷಿಣಭಾಗದ ಕಡಲ ತೀರದಲ್ಲಿ ಚಳಿಗಾಲದಲ್ಲೂ ಈಶಾನ್ಯ ಮಾನ್ಸೂನ್ ಮಾರುತಗಳಿಂದ ಸ್ವಲ್ಪ ಮಳೆ ಬೀಳುತ್ತದೆ.

ಸ್ವಾಭಾವಿಕ ಸಸ್ಯವರ್ಗ[ಬದಲಾಯಿಸಿ]

ಮಳೆ ಹಾಗೂ ನೆಲದ ಎತ್ತರಕ್ಕೆ ಅನುಗುಣವಾಗಿ ಇಲ್ಲಿನ ಸಸ್ಯಗಳು ವ್ಯತ್ಯಾಸಗೊಳ್ಳುತ್ತವೆ. ಪರ್ವತಗಳ ಮೇಲೆ (5000'ವರೆಗೆ) ತೇಗ, ಬಿದಿರು ಮುಂತಾದ ಮರಗಳ ಕಾಡುಗಳುಂಟು. ಇನ್ನೂ ಎತ್ತರದಲ್ಲಿ (5000'-6000') ಪೈನ್ ಮುಂತಾದ ಸಮಶೀತೋಷ್ಣವಲಯದ ಮರಗಳು ಬೆಳೆಯುತ್ತವೆ.

ವ್ಯವಸಾಯ[ಬದಲಾಯಿಸಿ]

ಈ ದೇಶದಲ್ಲಿ ವೈಜ್ಞಾನಿಕವಾದ ಸಾಂದ್ರ ಬೇಸಾಯ ವ್ಯಾಪಕವಾಗಿ ರೂಢಿಯಲ್ಲುಂಟು. ತಪ್ಪಲುಗಳ ಮೇಲೆ ಜಮೀನುಗಳನ್ನು ಮೆಟ್ಟಿಲು ಮೆಟ್ಟಿಲಾಗಿ ಮಾಡಿ ಸಾಗುವಳಿ ಮಾಡುತ್ತಾರೆ. ಹಿಡುವಳಿಗಳು ಚಿಕ್ಕವು. ದೇಶದ ಹೆಚ್ಚು ಜನ ಬೇಸಾಯ ನಿರತರು. ಬತ್ತ, ಗೋದಿ, ಕಬ್ಬು, ಹತ್ತಿ, ಮೆಕ್ಕೆಜೋಳ, ದ್ವಿದಳಧಾನ್ಯಗಳು, ಜೋಳ, ಎಳ್ಳು, ನೆಲಗಡಲೆ, ತೆಂಗು, ಬಾಳೆ, ಹೊಗೆಸೊಪ್ಪು, ಉಪ್ಪುನೆರಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ವಿವಿಧ ಹಣ್ಣುಗಳೂ ತರಕಾರಿಗಳೂ ಬೆಳೆಯುತ್ತವೆ. ಆದ್ದರಿಂದ ದೇಶ ಆಹಾರದಲ್ಲಿ ಸ್ವಯಂಪೂರ್ಣತೆ ಪಡೆದಿದೆ. ಕಡಲ ತೀರದಲ್ಲೂ ನದಿಗಳಲ್ಲೂ ಮೀನುಗಾರಿಕೆ ಮುಖ್ಯ ಕಸಬು. ಸಣ್ಣಕೊಳಗಳಲ್ಲೂ ಮೀನುಗಳನ್ನು ಸಾಕುತ್ತಾರೆ. ದನಕರು, ಕುರಿ, ಕೋಳಿ, ಹಂದಿಗಳು ಸಾಕಷ್ಟು ಹೆಚ್ಚು ಸಂಖ್ಯೆಯ ಲ್ಲುಂಟು. ಹಾಲು, ಮಾಂಸ, ಉಣ್ಣೆ, ಮೊಟ್ಟೆ ಮತ್ತು ಚರ್ಮ ಸಿಗುತ್ತವೆ.

ಖನಿಜ, ಕೈಗಾರಿಕೆ[ಬದಲಾಯಿಸಿ]

ಕ್ವಾಂಗ್ ಯೆನ್ನಲ್ಲಿ ದೊರಕುವ ಆಂಥ್ರಸೈಟ್ ಮುಖ್ಯ ಖನಿಜ. ತವರ, ಸತು, ತಾಮ್ರ, ಕ್ರೋಮಿಯಂ, ಕಬ್ಬಿಣ, ಬೆಳ್ಳಿ, ಪಾದರಸ, ಚಿನ್ನ, ಫಾಸ್ಫೇಟ್-ಇವು ಇತರ ಖನಿಜಗಳು. ಅಕ್ಕಿ ಗಿರಣಿ, ಸಕ್ಕರೆ, ಸಾಬೂನು, ಬೆಂಕಿ ಪೆಟ್ಟಿಗೆ, ಕಾಗದ, ಆಹಾರ ವಸ್ತು, ಗಾಜಿನ ಸಾಮಾನು, ಅಲ್ಯೂಮಿನಿಯಂ ವಸ್ತು, ಸಿಮೆಂಟ್, ಜವಳಿ, ರಾಸಾಯನಿಕ ವಸ್ತು, ಕಬ್ಬಿಣ, ಉಕ್ಕು, ಯಂತ್ರೋಪಕರಣ, ಹಡಗು ಮತ್ತು ಮರ ಕೊಯ್ಯುವುದು ಇಲ್ಲಿನ ಮುಖ್ಯ ಕೈಗಾರಿಕೆಗಳು. ಹಾನಾಯ್ ಹೈಫಾಂಗ್, ಥೈ ನ್ಗುಯೆನ್-ಈ ಕೆಲವು ಕೈಗಾರಿಕಾ ಕೇಂದ್ರಗಳು.

ಜನ, ಜೀವನ[ಬದಲಾಯಿಸಿ]

ಇಲ್ಲಿನ ಜನಕ್ಕೆ ವ್ಯವಸಾಯವೇ ಮುಖ್ಯ ಕಸಬು. ಗ್ರಾಮದಲ್ಲಿ ವಾಸಮಾಡು ವವರು ಅಧಿಕ ಸಂಖ್ಯೆಯಲ್ಲಿದ್ದಾರೆ. ನದೀಬಯಲುಗಳಲ್ಲೂ ಕೈಗಾರಿಕಾ ಕೇಂದ್ರಗಳಲ್ಲೂ ಜನಸಾಂದ್ರತೆ ಹೆಚ್ಚು. ಆಹಾರದ ಉತ್ಪನ್ನ ಸಾಕಷ್ಟಿದೆ. ಜನರ ಭಾಷೆ ವಿಯೆಟ್ನಾಮೀ. ಇಲ್ಲಿ ಬೌದ್ಧರು ಅಧಿಕ ಸಂಖ್ಯೆಯಲ್ಲಿದ್ದಾರೆ. ಕ್ರೈಸ್ತಮತವೂ ಪ್ರಚಾರದಲ್ಲಿದೆ.

ಸಾರಿಗೆ ವ್ಯವಸ್ಥೆ, ವ್ಯಾಪಾರ[ಬದಲಾಯಿಸಿ]

ಇಲ್ಲಿ 937 ಮೈಲಿ ಮಾರ್ಗಗಳಿವೆ. ರಸ್ತೆಗಳೆಲ್ಲ ಯುದ್ಧಕಾಲದಲ್ಲಿ ನಾಶವಾಗಿದ್ದುವು. ಈಗ ಅವು ಪುನರ್ನಿರ್ಮಿತವಾಗಿವೆ. ಅವುಗಳ ಉದ್ದ 8400 ಮೈ. ಸಾರಿಗೆಗೆ ನದಿಗಳೂ ಸ್ವಲ್ಪಮಟ್ಟಿಗೆ ಉಪಯುಕ್ತ. ಹೈಫಾಂಗ್ ಮುಖ್ಯ ಬಂದರು. ಇಲ್ಲಿ ಆಂತರಿಕ ವಿಮಾನ ವ್ಯವಸ್ಥೆಯುಂಟು. ಹಾನಾಯ್-ಪೀಕಿಂಗ್ ನಡುವೆ ವಿಮಾನ ಸಂಪರ್ಕವಿದೆ.

ಮೀನು, ಕಲ್ಲಿದ್ದಲು, ಮೆಕ್ಕೆಜೋಳ ಮತ್ತು ಖನಿಜಗಳು ಈ ದೇಶದ ನಿರ್ಯಾತ, ಪೆಟ್ರೋಲಿಯಂ, ಯಂತ್ರ, ಜವಳಿ, ಮತ್ತು ಆಹಾರ ಆಯಾತ.

ಹಾನಾಯ್, ಹೈಫಾಂಗ್, ನಾಂಪಿನ್ಹ್‌ ಮುಖ್ಯ ಪಟ್ಟಣಗಳು.

ಆಡಳಿತ, ಅರ್ಥವ್ಯವಸ್ಥೆ[ಬದಲಾಯಿಸಿ]

ಟಾಂಕಿನ್ ಹಾಗೂ ಉತ್ತರ ಅನ್ನಾಂ ಪ್ರದೇಶಗಳನ್ನೊಳಗೊಂಡಿ ರುವ ಉತ್ತರ ವಿಯೆಟ್ನಾಮನ್ನು ಒಟ್ಟು 33 ಪ್ರಾಂತ್ಯಗಳಾಗಿ (ಟಾಂಕಿನ್ 29, ಅನ್ನಾಂ 4) ವಿಂಗಡಿಸಲಾಗಿದೆ.

ವಿಯೆಟ್ನಾಂ ಪ್ರಜಾಪ್ರಭುತ್ವವಾದಿ ಗಣಕರಾಜ್ಯದ ಪರಮಾಧಿಕಾರ ಇರುವುದು ರಾಷ್ಟ್ರೀಯ ಸಭೆಯಲ್ಲಿ. ಇದಕ್ಕೆ ನಾಲ್ಕು ವರ್ಷಗಳಿಗೊಮ್ಮೆ ವಯಸ್ಕ ಮತದಾನದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ. ಈ ಸಭೆ ಗಣರಾಜ್ಯದ ಅಧ್ಯಕ್ಷನನ್ನು ಆಯ್ಕೆ ಮಾಡುತ್ತದೆ. ಅಧ್ಯಕ್ಷನ ಅಧಿಕಾರಾವಧಿಯೂ ನಾಲ್ಕು ವರ್ಷ. ಮಂತ್ರಿ ಮಂಡಲ ಅಥವಾ ಸಂಪುಟವನ್ನು ನೇಮಿಸುವುದು ಅಧ್ಯಕ್ಷನ ಹೊಣೆ. ಇದು ರಾಷ್ಟ್ರೀಯ ಸಭೆಗೆ ಜವಾಬ್ದಾರಿಯಾಗಿರುತ್ತದೆ. ಇಲ್ಲಿ ವಿಯೆಟ್ನಾಂ ಕಮ್ಯೂನಿಸ್ಟ್‌ ಪಕ್ಷದ್ದೇ (ವಿಯೆಟ್ಮಿನ್ಹ್‌) ಆಡಳಿತ. ಆದ್ದರಿಂದ ಈ ದೇಶವನ್ನು ವಿಯೆಟ್ಮಿನ್ಹ್‌ ಎಂದೂ ಕರೆಯುವುದುಂಟು.

ಚರಿತ್ರೆ[ಬದಲಾಯಿಸಿ]

19ನೆಯ ಶತಮಾನದ ಕೊನೆಯಲ್ಲಿ ವಿಯೆಟ್ನಾಮು ಫ್ರೆಂಚ್ ಚಕ್ರಾಧಿಪತ್ಯಕ್ಕೆ ಅಧೀನವಾಗಿ, ಕಾಂಬೋಡಿಯ ಮತ್ತು ಲಾವೋಸ್ಗಳೊಂದಿಗೆ ಇಂಡೋ-ಚೀನ ಒಕ್ಕೂಟದ ಭಾಗವಾಯಿತು. 2ನೆಯ ಮಹಾಯುದ್ಧಕಾಲದಲ್ಲಿ ಜಪಾನೀಯರು ಇಂಡೋಚೀನವನ್ನಾ ಕ್ರಮಿಸಿಕೊಂಡರು. (ನೋಡಿ-ಇಂಡೋ-ಜೀನದ-ಇತಿಹಾಸ ) ಯುದ್ಧದಲ್ಲಿ ಜಪಾನು ಸೋತಾಗ ಫ್ರೆಂಚರು ಇಲ್ಲಿಗೆ ಮರಳಿ ಬಂದು ಮತ್ತೆ ತಮ್ಮ ಅಧಿಕಾರ ಸ್ಥಾಪಿಸಲೆಳಸಿದಾಗ ವಿಯೆಟ್ನಾಮಿನ ತಾತ್ಕಾಲಿಕ ಸರ್ಕಾರದಲ್ಲಿ ಕಮ್ಯೂನಿಸ್ಟ್‌ ಮಿಯೆಟ್ಮಿನ್ಹ್‌ ಪಕ್ಷದ್ದೇ ಪ್ರಾಬಲ್ಯವಿತ್ತು. ಫ್ರೆಂಚರೊಂದಿಗೆ ಸಂಧಾನ ಮುರಿದು ಬಿದ್ದು (1946) ಯುದ್ಧ ಆರಂಭವಾಯಿತು. ವಿಯೆಟ್ನಾಮಿನ ಉತ್ತರ ಭಾಗದ ಮೇಲೆ ಕಮ್ಯೂನಿಸ್ಟರು ಹೊಂದಿದ್ದ ಹಿಡಿತವನ್ನು ಬಿಡಿಸಲು ಫ್ರೆಂಚರಿಗೆ ಸಾಧ್ಯವಾಗಲಿಲ್ಲ. ದಕ್ಷಿಣ ಭಾಗದಲ್ಲಿ ಫ್ರೆಂಚರು ಕಮ್ಯೂನಿಸ್ಟ್‌ ವಿರೋಧಿ ಪಂಗಡಗಳೊಂದಿಗೆ ಸಂಧಾನ ಮಾಡಿಕೊಂಡು 1949ರಲ್ಲಿ ವಿಯೆಟ್ನಾಂ ಸಂಯುಕ್ತ ರಾಜ್ಯ ಸ್ಥಾಪನೆ ಮಾಡಿದರು. 1954ರ ಜಿನೀವ ಒಪ್ಪಂದದ ಒಂದು ಮುಖ್ಯ ಪರಿಣಾಮವೆಂದರೆ ಯುದ್ಧದ ಅಂತ್ಯ.

17ನೆಯ ಅಕ್ಷಾಂಶ ರೇಖೆಗೆ ಉತ್ತರದ ಭಾಗದಲ್ಲಿ ಕಮ್ಯೂನಿಸ್ಟ್‌ ಸೈನಿಕ ಬಣವೂ ದಕ್ಷಿಣದ ಭಾಗದಲ್ಲಿ ಕಮ್ಯೂನಿಸ್ಟ್‌ ವಿರೋಧಿ ಸೈನಿಕ ಬಣವೂ ಕೇಂದ್ರೀಕೃತವಾದುದರ ಪರಿಣಾಮವಾಗಿ ವಿಯೆಟ್ನಾಮನನ್ನು ವಿಭಜಿಸುವುದು ಅನಿವಾರ್ಯವಾದರೂ ಇದು ತಾತ್ಕಾಲಿಕವೆಂದೂ ಮುಂದೆ ರಾಜಕೀಯ ಒಡಂಬಡಿಕೆಯ ಮೂಲಕ ಇವೆರಡು ಭಾಗಗಳನ್ನೂ ಒಂದುಗೂಡಿಸಬೇಕೆಂದೂ ಆಗಿನ ಉದ್ದೇಶವಾಗಿತ್ತು. ಆದರೆ ಉತ್ತರ ದಕ್ಷಿಣ ವಿಯೆಟ್ನಾಮುಗಳು ಪ್ರತ್ಯೇಕವಾಗಿಯೇ ಮುಂದುವರಿದುವು. ಇಡೀ ವಿಯೆಟ್ನಾಮಿನಲ್ಲಿ ನಡೆಸಬೇಕೆಂದು ಸೂಚಿಸಲಾ ಗಿದ್ದ ಚುನಾವಣೆ ಜರುಗಲಿಲ್ಲ. ದಕ್ಷಿಣದಲ್ಲಿನ ಸರ್ಕಾರ ವಿರೋಧಿ ವಿಯೆಟ್ ಕಾಂಗರ ಚಳವಳಿಗೆ ಉತ್ತರ ವಿಯೆಟ್ನಾಂ ಸರ್ಕಾರದ ಬೆಂಬಲವಿದೆಯೆಂದು ಹೇಳಲಾಗಿದೆ. ಈ ಚಳವಳಿ 1963ರಲ್ಲಿ ಉಗ್ರವಾಗಿ ಪರಿಣಮಿಸಿತು. ಉತ್ತರ ದಕ್ಷಿಣಗಳ ನಡುವಣ ಬಡಿದಾಟದ ಮಧ್ಯೆ ಅಮೆರಿಕ ಸಂಯುಕ್ತ ಸಂಸ್ಥಾನ ಪ್ರವೇಶಮಾಡಿದ್ದು 1965ರಲ್ಲಿ. ಅಮೆರಿಕದ ಸೈನಿಕರು ದಕ್ಷಿಣ ವಿಯೆಟ್ನಾಮಿನ ನೆರೆವಿಗೆ ಬಂದರು. ಉತ್ತರ ವಿಯೆಟ್ನಾಂ ಪ್ರದೇಶ ಬಾಂಬುದಾಳಿಗೆ ತುತ್ತಾಯಿತು.

1968ರ ನವೆಂಬರಿನಲ್ಲಿ ಬಾಂಬುದಾಳಿ ಕೊನೆಗೊಂಡು, ಯುದ್ಧದಲ್ಲಿ ನಿರತವಾದ ನಾಲ್ಕು ಪಕ್ಷಗಳ ನಡುವೆ ಪ್ಯಾರಿಸ್ಸಿನಲ್ಲಿ ಸಂಧಾನ ಆರಂಭವಾಯಿತಾದರೂ ಫಲ ದೊರಕಲಿಲ್ಲ.

೧೯೭೬ ರಲ್ಲಿ ಯುದ್ಧ ಕೊನೆಗೊಂಡು ಉತ್ತರ ವಿಯೆಟ್ನಾಂ ದೇಶವು ದಕ್ಷಿಣ ವಿಯೆಟ್ನಾಮನೊಂದಿಗೆ ವಿಲೀನವಾಯಿತು

(ನೋಡಿ-ವಿಯೆಟ್ನಾಮಿನ-ಇತಿಹಾಸ)