ಉತ್ತರ ಭಾರತದ ಬೃಹತ್ ಶಿಲಾಸಂಸ್ಕೃತಿ
ಉತ್ತರ ಭಾರತದ ಬೃಹತ್ ಶಿಲಾಸಂಸ್ಕೃತಿ: ಉತ್ತರ ಪ್ರದೇಶದ ಪೂರ್ವಭಾಗ, ರಾಜಸ್ತಾನ ಪ್ರದೇಶಗಳಲ್ಲಿ ಹಲವಾರು ಕಡೆಗಳಲ್ಲಿ ಕಲ್ಗುಪ್ಪೆ ಮಾದರಿಯ ಕಲ್ಗೋರಿಗಳಿವೆ. ಉತ್ತರ ಪ್ರದೇಶದ ವಾರಾಣಸಿ, ಮಿರ್ಜಾಪುರ, ಅಲಹಾಬಾದ್, ಬಾಂದಾ, ಆಗ್ರ, ರಾಜಸ್ತಾನದ ದೌಸ (ಜೈಪುರ ಜಿಲ್ಲೆ) ಈ ಪ್ರದೇಶಗಳಲ್ಲಿ ನೂರಾರು ತುಂಡುಕಲ್ಲುಗಳ ಗುಪ್ಪೆ ಮಾದರಿಯ ಕಲ್ಗೋರಿ ನೆಲೆಗಳಿವೆ. ಉತ್ತರಾಂಚಲದ ಆಲ್ಮೋರದ ದೇವದೂರದಲ್ಲಿ ನೆಲಕೋಣೆ ಗೋರಿಗಳನ್ನು ಹಿಂದೆಯೆ ಕಾಕ್ಬರ್ನ್, ಕಾರ್ಲೈಲ್ ಮೊದಲಾದವರು ಪತ್ತೆ ಮಾಡಿದ್ದರು. ಕಾಶ್ಮೀರ ಕಣಿವೆಯಲ್ಲಿಯ ಬೂರ್ಜ಼ಹೋಮ್, ಗುಫ್ಕ್ರಾಲ್, ಲಡಾಕ್ದಲ್ಲಿಯ ಲೆಹ್, ಪಾಕಿಸ್ತಾನದ ವಾಯವ್ಯ ಸರಹದ್ದು, ಸಿಂಧದಲ್ಲಿಯ ಕರಾಚಿ ಸಮೀಪ ಬೃಹತ್ ಶಿಲಾಗೋರಿಗಳು ಕಂಡುಬಂದಿವೆ. ಬೂರ್ಜಹಾಮ್ ಮತ್ತು ಪಾಕಿಸ್ತಾನದ ವಾಯವ್ಯ ಸರಹದ್ದಿನ ಅಸೋಟದಲ್ಲಿ ನಿಲಸುಕಲ್ಲುಗಳಿದ್ದರೆ ಲೆಹ್ ಕರಾಚಿ ಸಮೀಪ ನೆಲದಡಿಯ ಚಪ್ಪಡಿ ಕಲ್ಲಿನ ಗೋರಿಗಳಿವೆ. ಇವುಗಳಲ್ಲಿ ಜಿ.ಆರ್.ಶರ್ಮ ವಾರಾಣಸಿ ಜಿಲ್ಲೆಯ ಕಕೋರಿಯ, ಅಲಹಾಬಾದ್ ಜಿಲ್ಲೆಯ ಕೋಟಿಯ, ಎ.ಕೆ.ನಾರಾಯಣ್ ಮಿರ್ಜಾಪುರದಲ್ಲಿಯ ಬನಿಮಿಲಿಯ-ಬಹೆರದಲ್ಲಿ ಕಲ್ಗೋರಿ ನೆಲೆಗಳನ್ನು ಉತ್ಖನನ ಮಾಡಿದರು. ಕಕೋರಿಯದಲ್ಲಿ ಒಂದು ಜನ ವಾಸ್ತವ್ಯದ ನೆಲೆಯನ್ನು ಮತ್ತು 12 ಕಲ್ಗೋರಿಗಳನ್ನು ಉತ್ಖನನ ಮಾಡಲಾಗಿದೆ. ಕಬ್ಬಿಣದ ಯಾವುದೇ ಅವಶೇಷಗಳಿಲ್ಲದೆ, ಸೂಕ್ಷ್ಮ ಶಿಲಾ ಉಪಕರಣಗಳು ಮಾಳವ, ಸೋನ್ಪುರ-ಚಿರಂದ್, ತಾಮ್ರ-ಶಿಲಾ ಸಂಸ್ಕೃತಿಯ ಪಾತ್ರೆಗಳಿಗೆ ಹೋಲುವ ಕೆಂಪು, ಕಪ್ಪು ಮತ್ತು ಕಪ್ಪು-ಕೆಂಪು ವರ್ಣದ ಮಣ್ಪಾತ್ರೆಗಳು, ಮಣ್ಣಿನ ಮನೆಯ ಭಾಗಗಳು ಅಂತ್ಯ ಹಂತದಲ್ಲಿ ತಾಮ್ರದ ಚೂರುಗಳು ಸಿಕ್ಕಿವೆ. ಆದ್ದರಿಂದ ಇದನ್ನು ನವ-ತಾಮ್ರ-ಶಿಲಾ ಸಂಸ್ಕೃತಿಯೆಂದು ಗುರುತಿಸಲಾಗಿದೆ. ಇದರ ಕಾಲಮಾನ ಪ್ರ.ಶ.ಪು.ಸು.1500-700 ಆಗಿದ್ದಿರಬಹುದೆಂದು ತರ್ಕಿಸಲಾಗಿದೆ. ಸಮೀಪದಲ್ಲಿಯ ಶವ-ಸಂಸ್ಕಾರದ ನೆಲೆಯಲ್ಲಿ 12 ಕಲ್ಗುಪ್ಪೆಗಳನ್ನು ಉತ್ಖನನ ಮಾಡಲಾಯಿತು. ಇವುಗಳಲ್ಲಿ ಎರಡು ಪ್ರಕಾರಗಳಿದ್ದುವು; ಶವಕುಣಿ ಮತ್ತು ನೆಲದಡಿಯ ಕುಣಿಯಲ್ಲಿ ಕಲ್ಲುಚಪ್ಪಡಿಗಳ ಕೋಣೆ. ಮೊದಲನೆಯ ಪ್ರಕಾರದಲ್ಲಿ ಸು.1-2 ಮೀ ಆಳದ ಆಯತಾಕಾರದ ಗುಂಡಿಯಲ್ಲಿ ಹೊರಗಿಟ್ಟ ಶವದ ಕೆಲವೇ ಅಸ್ಥಿ ಚೂರುಗಳು, ಸೂಕ್ಷ್ಮ ಶಿಲಾ ಉಪಕರಣಗಳು ಒಂದೆರಡು ಚಿನ್ನದ ಚೂರುಗಳು, ಅರೆ ಪ್ರಶಸ್ತ ಕಲ್ಲಿನ ಮಣಿಗಳು ಮತ್ತು ಮಣ್ಪಾತ್ರೆಗಳು. ಎರಡನೆಯ ಪ್ರಕಾರದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮಣ್ಪಾತ್ರೆ ಚೂರುಗಳು, ಅಸ್ಥಿ ಅವಶೇಷಗಳು ತೀರ ಅಪರೂಪವಾಗಿ ಚಿನ್ನದುಂಗುರ, ಸೂಕ್ಷ್ಮ ಶಿಲಾ ಉಪಕರಣಗಳಿದ್ದುವು. ಪ್ರತಿಯೊಂದು ಬದಿಯಲ್ಲಿ ನಿಸರ್ಗ ಲಭ್ಯ ಒಂದಕ್ಕಿಂತ ಹೆಚ್ಚು ಕಲ್ಲುಚಪ್ಪಡಿಗಳನ್ನು ನಿಲ್ಲಿಸಲಾಗಿತ್ತು. ಬನಿಮಿಲಿಯ-ಬಹೆರದ ಜನವಾಸ್ತವ್ಯದ ನೆಲೆಯ ಉತ್ಖನನದಲ್ಲಿ ಎರಡು ಉಪ ಹಂತಗಳನ್ನು ಗುರುತಿಸಿದ್ದು ಆದಿ ಉಪಹಂತದಲ್ಲಿ ಅಷ್ಟಾಗಿ ಸರಿಯಾಗಿ ಸುಡದ ಕೆಂಪುಬಣ್ಣದ ಮಣ್ಪಾತ್ರೆ ಚೂರುಗಳು, ಅಂತಿಮ ಉಪಹಂತದಲ್ಲಿ ಕಪ್ಪು ಹಾಗೂ ಕಪ್ಪು-ಕೆಂಪು ದ್ವಿವರ್ಣ ಪಾತ್ರೆ ಚೂರುಗಳಿದ್ದವು. ಈ ನೆಲೆಯಲ್ಲಿಯೂ ಕೂಡ ಶವಕುಣಿ ಮತ್ತು ನೆಲ ಕೋಣೆಯಿದ್ದು ಇದನ್ನು ಒಂದಕ್ಕಿಂತ ಹೆಚ್ಚು ಚಪ್ಪಡಿಗಳಿಂದ ಮುಚ್ಚಲಾಗುತ್ತಿತ್ತು. ಒಟ್ಟು 5 ಕಲ್ಗುಪ್ಪೆಗಳನ್ನು ಉತ್ಖನನ ಮಾಡಲಾಯಿತು. ಕಲ್ಲುಕೋಣೆಗಳು ಪೂರ್ವ-ಪಶ್ಚಿಮಾಭಿಮುಖವಾಗಿದ್ದು ಇದರ ಪಶ್ಚಿಮ ಭಾಗ ಸ್ವಲ್ಪ ಹೆಚ್ಚು ಅಗಲ-ಎತ್ತರವಾಗಿರುತ್ತದೆ. ಇವುಗಳಲ್ಲಿ ಒಂದನ್ನು ಬಿಟ್ಟು ಯಾವುದ ರಲ್ಲೂ ಅಸ್ಥಿ ಅವಶೇಷಗಳಿರದೆ ಕೆಲವು ಮಣ್ಪಾತ್ರೆ ಚೂರುಗಳಿದ್ದುವು. 5ನೆಯ ಕಲ್ಲಿನ ಕೋಣೆ ಬಂಡೆಯ ಮೇಲೆ ಇದೆ. ಇದರ ಸುತ್ತಲೂ ಕಲ್ಲುತುಂಡುಗಳ ರಾಶಿ ಇದ್ದಿತ್ತು. ಚುನಾರ್ ಮತ್ತು ಕೋಟಿಯದಲ್ಲಿ ಕಲ್ಗುಪ್ಪೆ ನೆಲೆಗಳು ಇದ್ದು ಇವುಗಳಲ್ಲಿಯೂ ಸ್ವಲ್ಪ ಹೆಚ್ಚು-ಕಡಿಮೆ ಇದೇ ಪ್ರಕಾರದ ಅವಶೇಷಗಳು ತೀರ ಕಡಿಮೆ ಪ್ರಮಾಣದಲ್ಲಿದ್ದುವು. ಆದರೆ ಹಂದಿ, ಹೋತ, ಎತ್ತು-ದನಗಳ ಎಲುಬುಗಳಿದ್ದುದು ಕುತೂಹಲಕಾರಿಯಾಗಿದೆ. ಇಲ್ಲಿಯ ಮಣ್ಪಾತ್ರೆ ಪ್ರಕಾರಗಳು ಬನಿಮಿಲಿಯ-ಬಹೆರ ಕಕೋರಿಯದಲ್ಲಿ ಕಂಡುಬಂದಿಲ್ಲ. ವಿಶಿಷ್ಟವಾಗಿದ್ದ 1ನೆಯ ನೆಲ ಕೋಣೆಯನ್ನು ಇದರ ಮಧ್ಯದಲ್ಲಿ ಒಂದು ಕಲ್ಲುಚಪ್ಪಡಿಯಿಂದ ಎರಡು ಭಾಗಗಳನ್ನಾಗಿ ಮಾಡಿದೆ. ಒಂದು ಭಾಗದಲ್ಲಿ ಬಹಳ ಪ್ರಾಣಿಗಳ ಎಲುಬುಗಳು ಮತ್ತು ಕಬ್ಬಿಣದ ಉಪಕರಣಗಳಿದ್ದುವು. ಇನ್ನೊಂದು ಭಾಗದಲ್ಲಿ ಮನುಷ್ಯನ ಅಸ್ಥಿ ಚೂರು ಗಳಿದ್ದುವು. 5ನೆಯದು ಒಂದು ಶವಕುಣಿ ಕಲ್ಗುಪ್ಪೆಯಾಗಿದ್ದು ಇದರಲ್ಲಿ 38 ಸೆಂಮೀ ದಪ್ಪದಷ್ಟು ಬೂದಿಯಿದ್ದಿತ್ತು. ಇದರೊಳಗೆ ಕಬ್ಬಿಣದ ಬಾಣದ ಮೊನೆ, ಮಡಕೆಗಳು ಮತ್ತು ಕೆಲವು ಅಸ್ಥಿ ಚೂರುಗಳಿದ್ದುವು. ಇಲ್ಲಿಯ ಕಲ್ಗೋರಿಗಳು ಮತ್ತು ಅಲಹಾಬಾದ್ ಜಿಲ್ಲೆಯ ಸಿಯೋತಿ (ಕೋರೆಗಾಂವ್ ತಾಲ್ಲೂಕು) ಮೊದಲಾದೆಡೆಗಳಲ್ಲಿ ಆದಿ ಕಬ್ಬಿಣಯುಗದ ಕಲ್ಗುಪ್ಪೆಗಳಿವೆ. ಖೇಡ (ಆಗ್ರ)ದಲ್ಲಿ ಅರ್ಧಗೋಲಾಕೃತಿಯ ಹಾಗೂ ಮೇಲ್ಭಾಗ ಸಮತಟ್ಟಾದ ಕಲ್ಗುಪ್ಪೆಗ ಳಿವೆ. ಪರೀಕ್ಷಿಸಿದ ಇವುಗಳಡಿಯಲ್ಲಿ ಬಂಡೆಕಲ್ಲಿನಲ್ಲಿ ಕೊರೆದ ಆಯತಾಕಾರದ ಮೊಟ್ಟೆಯಾಕಾರದ ತಗ್ಗುಗಳಿದ್ದು ಇವುಗಳಲ್ಲಿ ಸುಟ್ಟ ಅಸ್ಥಿ ಚೂರುಗಳು ಮತ್ತು ಬೂದಿ ಇದ್ದುವು. ಆದರೆ ಈಚಿನ ಅಧ್ಯಯನದಲ್ಲಿ ಇವುಗಳ ಪ್ರಾಚೀನತೆ ಬಗ್ಗೆ ಅನುಮಾನಪಡಲಾಗಿದೆ. ಮೇಲ್ಭಾಗ ಸಮತಟ್ಟಿನ ಕಲ್ಗುಪ್ಪೆಗಳಡಿಯಲ್ಲಿ ತುಂಡು ಚಪ್ಪಡಿಕಲ್ಲುಗಳಿಂದ ಮಾಡಿದ ಸಣ್ಣ ಕೋಣೆಯಿದ್ದಿತು. ಈ ಪ್ರ್ರಕಾರದ ಕಲ್ಗುಪ್ಪೆಗಳು ಇದೇ ಪ್ರದೇಶದ ಸತ್ಮಸ್ನಲ್ಲಿಯೂ ಇವೆ.
ಜೈಪುರ-ಆಗ್ರ ಹಾದಿಯಲ್ಲಿರುವ ದೌಸದಲ್ಲಿ ಖೇಡ, ಸತ್ಮಸ್ ತರಹದ ಕಲ್ಗುಪ್ಪೆಗಳಲ್ಲದೆ ನಿಲಸುಗಲ್ಲು ಮತ್ತು ಕಲ್ಗುಪ್ಪೆ ಮಧ್ಯದಲ್ಲಿ ನಿಲಸುಗಲ್ಲುಗಳೂ ಇವೆ. ಲೆಹ್ಕೊಳ್ಳ (ಲಡಾಕ್)ದಲ್ಲಿ ನೆಲದಡಿಯ ಕಲ್ಲು ಕೋಣೆಗಳಿದ್ದು ಇವುಗಳ ಕೆಲವೊಂದರಲ್ಲಿ ಹಲವಾರು ತಲೆಬುರುಡೆಗಳು, ಕೆಂಪು ಬಣ್ಣ ಹಚ್ಚಿದ ಮಣ್ಪಾತ್ರೆ ಕಂಚಿನ ಪಾತ್ರೆ, ಉಪಕರಣಗಳು, ಉದ್ದನೆ ಮಣಿ, ಕಬ್ಬಿಣದ ಉಪಕರಣಗಳಿದ್ದುವು. 1857ರಲ್ಲಿ ಕ್ಯಾಪ್ಟನ್ ಪ್ರೀಡಿ ಕರಾಚಿ ಹತ್ತಿರ ವಘೂದರ್ನಲ್ಲಿ ನೆಲದಡಿಯ ಕಂಡಿಯಿಲ್ಲದ ಚಪ್ಪಡಿ ನೆಲ, ಕೋಣೆಗೋರಿಗಳನ್ನು ಪ್ರೆರ್ ಅವರು ಕರಾಚಿ ಕೊಕ್ರಿ ರಸ್ತೆ ಮತ್ತು ಕೊಕ್ರಿ-ಶಹಬಲವಲ್ ರಸ್ತೆ ಪ್ರದೇಶದಲ್ಲಿ ಇಂಥ ಕಲ್ಮನೆಗಳನ್ನು ಶೋಧಿಸಿದ್ದರು. ಕರಾಚಿಯಲ್ಲಿಯ ಕಲ್ಮನೆಗಳ ಒಂದರಲ್ಲಿ ಕಂಡಿಯಿದೆಯೆಂದು ಫೇರ್ ಸರ್ವಿಸ್ ಅವರು ವರದಿ ಮಾಡಿದ್ದಾರೆ. ಇವುಗಳಿಗೂ ದಕ್ಷಿಣ ಭಾರತದ ಕಂಡಿಕೋಣೆಗೋರಿಗಳಿಗೂ ಸಂಬಂಧವಿದ್ದಿರಬಹುದೆಂಬ ಅನುಮಾನವಿದೆ. (ಎ.ಎಸ್.)
ಅದ್ವ ಬಯಲು
[ಬದಲಾಯಿಸಿ]ಮಧ್ಯಪ್ರದೇಶದ ರೇವ ಮತ್ತು ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಗಳಲ್ಲಿ ಹರಿಯುವ ಬೇಲನ್ ನದಿಯ ಉಪನದಿಯಾದ ಅದ್ವ ನದಿ ಬಯಲಿನಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯ 1979-81ರಲ್ಲಿನಡೆಸಿದ ಕ್ರಮಬದ್ಧ ಸರ್ವೇಕ್ಷಣೆಯಲ್ಲಿ 67 ಬೃಹತ್ ಶಿಲಾಯುಗ ಗೋರಿನೆಲೆಗಳೂ 41 ಸಮಕಾಲೀನ ವಸತಿನೆಲೆಗಳೂ ಬೆಳಕಿಗೆ ಬಂದವು. ಈ ಸಂಶೋಧನೆಯಿಂದ ಉತ್ತರ-ಮಧ್ಯ ವಿಂಧ್ಯ ಪ್ರಾಂತಕ್ಕೆ ಸೇರುವ ಅದ್ವ ಬಯಲಿನ ಬೃಹತ್ ಶಿಲಾ ಸಂಸ್ಕೃತಿಯ ಗುಣಲಕ್ಷಣಗಳನ್ನು ತಿಳಿಯುವುದು ಸಾಧ್ಯವಾಗಿದೆ. ಅದ್ವ ಬಯಲಿನಲ್ಲಿ ಮುಖ್ಯವಾಗಿ 3 ನಮೂನೆಯ ಬೃಹತ್ಶಿಲಾ ಸಮಾಧಿಗಳಿವೆ. ಇವು ಕಲ್ಗುಪ್ಪೆ ವೃತ್ತ (ಕೇರ್ನ್ ಸರ್ಕಲ್), ನೆಲಕೋಣೆ ಸಹಿತವಾದ ಕಲ್ಗುಪ್ಪೆ (ಸಿಸ್ಟ್ ವಿತ್ ಇನ್ ಕೇರ್ನ್) ಮತ್ತು ಕಲ್ಲುವೃತ್ತ (ಸ್ಟೋನ್ ಸರ್ಕಲ್).
51 ಸಮಾಧಿನೆಲೆಗಳಲ್ಲಿ ಮೊದಲೆರಡು ಪ್ರಕಾರಗಳ ಗೋರಿಗಳಿದ್ದರೆ ಉಳಿದ 12 ನೆಲೆಗಳಲ್ಲಿ ಕಲ್ಗುಪ್ಪೆ ವೃತ್ತಗಳು ಮಾತ್ರ ಇದ್ದವು. ಕವಲಿಝರ್ನಲ್ಲಿ ಮಾತ್ರ ಕಲ್ಲುವೃತ್ತಗಳು ಕಂಡುಬಂದವು. ಈ 3 ಪ್ರಕಾರಗಳಲ್ಲಿ ಕಲ್ಗುಪ್ಪೆ ವೃತ್ತಗಳ ಸಂಖ್ಯೆ ಅತ್ಯಧಿಕ; ಈ ಪ್ರಕಾರದ ಸಮಾಧಿಗಳಲ್ಲಿ ವೃತ್ತದ ವ್ಯಾಸ 3.55ಮೀ-14.15ಮೀ ಇದೆ. ಇದರ ಕೇಂದ್ರದಲ್ಲಿ ನೆಲದಡಿಯಲ್ಲಿ ಪೂರ್ವ-ಪಶ್ಚಿಮಾಭಿಮುಖವಾಗಿರುವ ಕಲ್ಲುಚಪ್ಪಡಿಯ ಕೋಣೆಯಿದ್ದು ಇದರ ಮೇಲ್ಭಾಗ ಮತ್ತೊಂದು ಕಲ್ಲುಚಪ್ಪಡಿಯಿಂದ ಮುಚ್ಚಲ್ಪಟ್ಟಿರುತ್ತದೆ. ಭೂಮಟ್ಟದಲ್ಲಿ ವೃತ್ತದ ಒಳಗಿನ ಭಾಗವನ್ನು ವಿವಿಧ ಗಾತ್ರ-ಆಕಾರದ ಕಲ್ಲುಗಳ ಗುಪ್ಪೆಯಿಂದ ತುಂಬಲಾಗಿರುತ್ತದೆ.
ಅದ್ವ ಮತ್ತು ಅದರ ಉಪನದಿಗಳ ದಂಡೆಯ ಮೇಲೆ ಸು.45 ವಸತಿನೆಲೆಗಳಿವೆ. ಹೆಚ್ಚಾಗಿ ಇವು ಸಮಾಧಿನೆಲೆಗಳ ಸಮೀಪದಲ್ಲಿಯೇ ಇವೆ. ಕೆಲವೊಂದು ವಸತಿನೆಲೆಗಳು ವಿಸ್ತಾರವಾಗಿದ್ದರೂ ದಿಬ್ಬದ ರೂಪದಲ್ಲಿಲ್ಲ. ಹೀಗಾಗಿ ಈ ಜನರು ಹೆಚ್ಚು ಸಮಯ ಒಂದೇ ಕಡೆ ನೆಲೆನಿಂತಂತೆ ತೋರುವುದಿಲ್ಲ. ಮಣ್ಪಾತ್ರೆ ಹಾಗೂ ಇತರ ಅವಶೇಷಗಳ ಆಧಾರಗಳ ಮೇಲೆ ವಸತಿನೆಲೆಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಇವೆಂದರೆ ಕಕೋರಿಯ (ತಾಮ್ರ-ಶಿಲಾಯುಗ) ಮತ್ತು ಕೋಟಿಯ (ಕಬ್ಬಿಣಯುಗ). ಕೆಲವು ನೆಲೆಗಳಲ್ಲಿ ಈ ಎರಡೂ ಪ್ರಾದೇಶಿಕ ಸಂಸ್ಕೃತಿಗಳ ಮಿಶ್ರ ಲಕ್ಷಣಗಳಿವೆ. ಕಕೋರಿಯ (ಚಂದೌಲಿ ಜಿಲ್ಲೆ) ಹಾಗೂ ಕೋಟಿಯ (ಅಲಹಾಬಾದ್ ಜಿಲ್ಲೆ) ಉತ್ತರಪ್ರದೇಶದ ಮಾದರಿ ನೆಲೆಗಳು. ಕಕೋರಿಯ ವರ್ಗಕ್ಕೆ ಸೇರುವ 17 ವಸತಿನೆಲೆಗಳಲ್ಲಿ ಮುಖ್ಯವಾದುವು ಮಾಘ, ಇಂದಾರಿ ಮತ್ತು ಬರೌನ್ಹ. ಅಂಡಾಕಾರದ ನೆಲಗಟ್ಟುಗಳು, ಅರೆಯುವ ಕಲ್ಲು, ತ್ರಪೀಜ್, ಅರ್ಧಚಂದ್ರಾಕೃತಿ, ಅಲಗು ಮುಂತಾದ ಸೂಕ್ಷ್ಮಶಿಲೋಪಕರಣಗಳು ಹಾಗೂ ತಿರುಳುಗಲ್ಲು, ಉಂಗುರಕಲ್ಲು, ಮಣಿಗಳು, ಕವಣೆಕಲ್ಲು, ಬೊಂಬಿನ ಗುರುತುಳ್ಳ ಸುಟ್ಟಮಣ್ಣಿನುಂಡೆಗಳು ಇವು ಈ ನೆಲೆಗಳಲ್ಲಿ ಸಿಕ್ಕಿರುವ ಸಾಂಸ್ಕೃತಿಕ ಅವಶೇಷಗಳು. ಈ ಜನರು ಉಪಯೋಗಿಸುತ್ತಿದ್ದ ಪಾತ್ರೆಗಳು ಕಪ್ಪು-ಕೆಂಪು ದ್ವಿವರ್ಣ, ಕೆಂಪು ಹಾಗೂ ಕಪ್ಪುಬಣ್ಣದ್ದಾಗಿವೆ. ಸಾಮಾನ್ಯ ಆಕಾರಗಳೆಂದರೆ ಬಟ್ಟಲು, ರಂಧ್ರವಿರುವ ಬೋಗುಣಿಗಳು, ಪುಟ್ಟ ತಳದ ದಾನಿ, ಶೇಖರಣಾ ಜಾಡಿ, ಪುಟ್ಟ ದಾನಿಗಳು ಇತ್ಯಾದಿ. ಕೋಟಿಯ ಮಾದರಿಯ ಪಾತ್ರೆಗಳಾದ ದಪ್ಪ ಬೂದುಬಣ್ಣದ ಪಾತ್ರೆ, ಕಪ್ಪು-ಕೆಂಪು ದ್ವಿವರ್ಣ ಪಾತ್ರೆ, ಕಪ್ಪು ಹಾಗೂ ಕೆಂಪು ಪಾತ್ರೆಗಳು 35 ವಸತಿನೆಲೆಗಳಲ್ಲಿ ದೊರೆತಿವೆ. ಅದೈಪುರ್, ಸರ್ದಮನ್, ಜೋಗಿಬೀರ್, ಬೀರದೇಯಿ (ರೇವ ಜಿಲ್ಲೆ), ಪಿಪರಹಿ, ಕವಲಿಝರ್, ಸೋನಗರ, ಬೈದ, ಮಧೋರ್, ದೇವ್ರಿ ಮತ್ತು ಚೌರ (ಮಿರ್ಜಾಪುರ ಜಿಲ್ಲೆ) ಇವು ಉಲ್ಲೇಖಾರ್ಹ ನೆಲೆಗಳು. ಅರೆಪ್ರಶಸ್ತ ಶಿಲೆಗಳ ಮಣಿಗಳು, ಸುಡಾವೆ ಮಣ್ಣು-ಶಂಖ -ಗಾಜಿನ ಬಳೆಗಳು, ಕದಿರಣಿಗೆ ಗುಂಡಿ, ಕಬ್ಬಿಣದ ಉಪಕರಣಗಳು ಮತ್ತು ಕಿಟ್ಟ, ಬೊಂಬಿನ ಗುರುತುಳ್ಳ ಸುಟ್ಟಮಣ್ಣಿನುಂಡೆ ಇವೇ ಮೊದಲಾದ ಅವಶೇಷಗಳನ್ನು ಈ ನೆಲೆಗಳಿಂದ ಸಂಗ್ರಹಿಸಲಾಗಿದೆ. ಅಮಹತ, ಮುನೈ, ನಕ್ವಲ್ (ರೇವ ಜಿಲ್ಲೆ), ಪರ್ಸಿಯ, ರಾಮ್ಪುರ್, ಗೌರ್ವ (ಮಿರ್ಜಾಪುರ ಜಿಲ್ಲೆ) ಮೊದಲಾದ 20 ನೆಲೆಗಳಲ್ಲಿ ಕೋಟಿಯ ಹಾಗೂ ಕಕೋರಿಯ ಮಾದರಿಯ ಪಾತ್ರೆಗಳು ಮಿಶ್ರವಾಗಿದ್ದು ಈ ನೆಲೆಗಳು ಸ್ಥಿತ್ಯಂತರ ಹಂತಕ್ಕೆ ಸೇರುತ್ತವೆ. ಸಮಾಧಿಯ ರಚನೆ ಹಾಗೂ ವಸತಿನೆಲೆಗಳ ವಿಶೇಷ ಲಕ್ಷಣಗಳನ್ನು ತಿಳಿಯುವ ಉದ್ದೇಶದಿಂದ ಅಮಹತ, ಮುನೈ ಮತ್ತು ಮಾಘ- ಈ 3 ನೆಲೆಗಳಲ್ಲಿ ಉತ್ಖನನವನ್ನು ನಡೆಸಲಾಯಿತು. ಸುಮಾರು 200 ಸಮಾಧಿಗಳಿರುವ ಅಮಹತದಲ್ಲಿ (ರೇವ ಜಿಲ್ಲೆ) ಕಲ್ಗುಪ್ಪೆವೃತ್ತವೊಂದನ್ನು ಅನಾವರಣಗೊಳಿಸಲಾಯಿತು. ಈ ಸಮಾಧಿಯಲ್ಲಿ ತಳಬಂಡೆಯ ವರೆಗೆ ಗೋಲ ಗುಂಡಿಯನ್ನು ಅಗೆದು ಅದರೊಳಗೆ 4-ಚಪ್ಪಡಿಗಳಿಂದ ಆಯತಾಕಾರದ ನೆಲಕೋಣೆಯನ್ನು ನಿರ್ಮಿಸಲಾಗಿತ್ತು. ನೆಲಕೋಣೆ ಪೂರ್ವ-ಪಶ್ಚಿಮಾಭಿಮುಖವಾಗಿತ್ತು. ಕೋಣೆಯ ಹೊರಗಿನ ಭಾಗವನ್ನು (ಚಪ್ಪಡಿ ಹಾಗೂ ಗುಂಡಿಯ ಗೋಡೆಯ ನಡುವಿನ ಭಾಗ) ಮಣ್ಣು ಹಾಗೂ ವಿವಿಧ ಗಾತ್ರದ ಕಲ್ಲುಗಳಿಂದ ಒತ್ತಿ ತುಂಬಲಾಗಿತ್ತು. ಕೋಣೆಯೊಳಗಿನ ಭಾಗವನ್ನು ಪೂರ್ಣವಾಗಿ ಮಣ್ಣಿನಿಂದ ತುಂಬಿ ಮೇಲೆ ಮತ್ತೊಂದು ಚಪ್ಪಡಿಕಲ್ಲನ್ನು ಹಾಸಲಾಗಿತ್ತು. ಈ ಸಮಾಧಿಯೊಳಗೆ ಮಣ್ಪಾತ್ರೆಯ ಚೂರುಗಳು, ಸೂಕ್ಷ್ಮಶಿಲೋಪಕರಣಗಳು ಮತ್ತು ಕಾವಿಕಲ್ಲಿನ 1 ಚೂರು ದೊರೆತವು. ಅದ್ವ ನದಿಯ ಎಡದಂಡೆಯ ಮೇಲಿರುವ 2 ನೆಲೆಗಳಲ್ಲೊಂದಾದ ಮುನೈನಲ್ಲಿ ಒಟ್ಟು 35 ಕಲ್ಗುಪ್ಪೆವೃತ್ತಗಳಿದ್ದು ಇವುಗಳಲ್ಲಿ ಎರಡನ್ನು ಉತ್ಖನನಕ್ಕೆ ಒಳಪಡಿಸಲಾಯಿತು. ಎರಡೂ ಗೋರಿಗಳಲ್ಲಿ ಪೂರ್ವ-ಪಶ್ಚಿಮವಾಗಿ ಅಂಡಾಕಾರದ ಗುಳಿಯನ್ನು ತಳಬಂಡೆಯ ವರೆಗೆ ತೋಡಿ ಅದರೊಳಗೆ ಶವಸಂಸ್ಕಾರ ಮಾಡಲಾಗಿತ್ತು. ಏರುಪೇರಾಗಿದ್ದ ಗುಳಿಗಳ ತಳವನ್ನು ಕೆಮ್ಮಣ್ಣಿನ ಹಾಸಿನಿಂದ ಮಟ್ಟ ಮಾಡಿದ್ದುದು ಗಮನಕ್ಕೆ ಬಂದಿತು. ಗುಳಿಗಳಿಂದ ಅಗೆದು ತೆಗೆದ ಮಣ್ಣಿನಿಂದಲೇ ಮತ್ತೆ ಅವನ್ನು ಮುಚ್ಚಿದ್ದರು. ಪ್ರಾಣಿಮೂಳೆಗಳು, ಬೂದು ಹಾಗೂ ಕೆಂಪುಪಾತ್ರೆಗಳ ಚೂರುಗಳು, ಸೂಕ್ಷ್ಮಶಿಲೋಪಕರಣಗಳು ಗುಳಿಯ ತಳದಲ್ಲಿ ಕಂಡುಬಂದವು. ಇವು ಕಕೋರಿಯ ಹಾಗೂ ಕೋಟಿಯ ಸಂಸ್ಕೃತಿಗಳ ನಡು ವಿನ ಸ್ಥಿತ್ಯಂತರ ಹಂತವನ್ನು ಸೂಚಿಸುತ್ತವೆ. ಸಮೀಪದ ವಸತಿನೆಲೆಯಲ್ಲಿ ನಡೆಸಿದ ಉತ್ಖನನದಲ್ಲಿ ಕಕೋರಿಯ ಸಂಸ್ಕೃತಿ ಕೋಟಿಯ ಸಂಸ್ಕೃತಿಗಿಂತ ಮುಂಚಿನದು ಎಂಬ ಅಂಶ ಸ್ತರಕ್ರಮದಿಂದ ಸಾಬೀತಾಯಿತು. ಮಿರ್ಜಾಪುರ ಜಿಲ್ಲೆಯಲ್ಲಿರುವ ಮಾಘ ನೆಲೆಯಲ್ಲಿ ಒಟ್ಟು 159 ಗೋರಿಗಳಿವೆ. ಇವುಗಳಲ್ಲಿ 2 ಕಲ್ಗುಪ್ಪೆವೃತ್ತ ಹಾಗೂ 3 ನೆಲಕೋಣೆ ಸಹಿತ ಕಲ್ಗುಪ್ಪೆಗಳಲ್ಲಿ ಉತ್ಖನನ ನಡೆಸಲಾಯಿತು. ಈ ಎಲ್ಲ ಗೋರಿಗಳು ರಚನೆಯಲ್ಲಿ ಮುನೈ-ಅಮಹತದ ಗೋರಿಗಳನ್ನು ಹೋಲುತ್ತವೆ. ಕಲ್ಗುಪ್ಪೆ ವೃತ್ತಗಳಲ್ಲಿ ಮಣ್ಪಾತ್ರೆಗಳೊಂದಿಗೆ ಅಲಗು, ಅರ್ಧಚಂದ್ರಾಕೃತಿ, ತ್ರಿಕೋಣ ಮುಂತಾದ ಕ್ಯಾಲ್ಸೆಡನಿಯಿಂದ ತಯಾರಿಸಿದ ಸೂಕ್ಷ್ಮಶಿಲೋಪಕರಣಗಳಿದ್ದವು. ನೆಲಕೋಣೆ ಸಹಿತ ಕಲ್ಗುಪ್ಪೆಗಳಲ್ಲಿ ತಾಮ್ರದ ಚೂರುಗಳು, ಸೂಕ್ಷ್ಮಶಿಲೋಪಕರಣಗಳು, ಪ್ರಾಣಿಗಳ ಮೂಳೆಯ ತುಣುಕುಗಳು ಮತ್ತು ಮಣ್ಪಾತ್ರೆಯ ಚೂರುಗಳು ಸಿಕ್ಕವು. ಒಂದು ಸಮಾಧಿಯಲ್ಲಿ ಮಾತ್ರ ಅವಶೇಷಗಳು 2 ಸ್ತರಗಳಲ್ಲಿದ್ದವು. ತಳದಲ್ಲಿ ಸುಟ್ಟಮಣ್ಣಿನುಂಡೆಗಳು, ಪ್ರಾಣಿಮೂಳೆ ಹಾಗೂ ಮಣ್ಪಾತ್ರೆಗಳನ್ನು ಇಟ್ಟು ಇವುಗಳ ಸುತ್ತಲೂ ಚಿಕ್ಕ ಕಲ್ಲುಗಳನ್ನು ಅಂಡಾಕಾರದಲ್ಲಿ ಇಡಲಾಗಿತ್ತು. ಇದಕ್ಕೆ 30 ಸೆಂಮೀ ಮೇಲೆ ಉಂಗುರಕಲ್ಲು, ಮಣ್ಪಾತ್ರೆ ಹಾಗೂ ಸಣ್ಣಸಣ್ಣ ಕಲ್ಲುಗಳನ್ನು ಇಟ್ಟು ಇವುಗಳ ಸುತ್ತಲೂ ಮತ್ತೆ ಚಿಕ್ಕ ಕಲ್ಲಿನ ಅಂಡಾಕಾರದ ವೃತ್ತ ರಚಿಸಲಾಗಿತ್ತು. ಈ ಪ್ರಕಾರದ ಮತ್ತೊಂದು ಸಮಾಧಿಯಲ್ಲಿ ಕರ್ನಾಟಕದ ಬ್ರಹ್ಮಗಿರಿ ಯಲ್ಲಿರುವಂತೆ ನೆಲಕೋಣೆಯ ಸುತ್ತ ಸೈಜುಗಲ್ಲಿನ ಗೋಡೆಯನ್ನು ಕೋಣೆಗೆ ಆಧಾರವಾಗಿ ಕಟ್ಟಲಾಗಿತ್ತು. ಇಲ್ಲಿನ ವಸತಿನೆಲೆ ಯಲ್ಲಿ ಕೈಗೊಂಡ ಉತ್ಖನನದಲ್ಲಿ ವೃತ್ತ-ಗೋಲಾಕಾರದ ಮಣ್ಣಿನ ನೆಲಗಟ್ಟುಗಳು-ಅವುಗಳ ಸುತ್ತ ಆಧಾರಕಂಬದ ಗುಳಿಗಳು, ಉಂಗುರಕಲ್ಲು, ಸುತ್ತಿಗೆಕಲ್ಲು, ಅರೆಯುವ ಕಲ್ಲು, ಅರೆಪ್ರಶಸ್ತ ಕಲ್ಲಿನ ಮಣಿಗಳು, ಪ್ರಾಣಿಮೂಳೆಗಳು, ಕ್ಯಾಲ್ಸೆಡನಿ-ಅಗೇಟ್ ಮತ್ತು ಚರ್ಟ್ ಶಿಲೆಯ ಸೂಕ್ಷ್ಮಶಿಲೋಪಕರಣಗಳು, ಸುಟ್ಟಮಣ್ಣಿನ ಉಂಡೆಗಳು ಕಂಡುಬಂದವು. ಒಂದು ನೆಲಗಟ್ಟಿನ ಮೇಲೆ ಮಣ್ಣಿನ ಒಲೆಯ ಅವಶೇಷಗಳಿದ್ದವು. ಮಣ್ಪಾತ್ರೆ ಗಳಲ್ಲಿ ಹೆಚ್ಚಿನವು ಚಕ್ರದ ಮೇಲೆ ತಯಾರಾದುವು. ಕೆಲವೇ ಕೆಲವನ್ನು ಕೈಯಿಂದ ಮಾಡಲಾಗಿದೆ. ಇಲ್ಲಿಯ ಕೆಂಪು, ಕಪ್ಪು ಹಾಗೂ ಕಪ್ಪು-ಕೆಂಪು ದ್ವಿವರ್ಣ ಪಾತ್ರೆಗಳು ಈ ವಸತಿ ಒಂದೇ ಸಂಸ್ಕೃತಿಗೆ ಸೇರಿದ್ದೆಂಬುದನ್ನು ತಿಳಿಸುತ್ತವೆ. ಸರ್ವೇಕ್ಷಣೆ ಹಾಗೂ ಉತ್ಖನನಗಳಿಂದ ತಿಳಿದುಬಂದ ಮುಖ್ಯ ಅಂಶಗಳೆಂದರೆ ದಕ್ಷಿಣಭಾರತದಲ್ಲಿರುವಂತೆ ಅದ್ವ ಬಯಲಿನ ನೆಲಕೋಣೆಗಳಲ್ಲಿ ಕಂಡಿಗಳಿಲ್ಲ. ಅಲ್ಲದೆ ಇವುಗಳನ್ನು ‘ಸ್ವಸ್ತಿಕ’ ವಿನ್ಯಾಸದಲ್ಲಿ ನಿರ್ಮಿಸಿಲ್ಲ. ನೆಲಕೋಣೆಯ ತಳದಲ್ಲಿ ಚಪ್ಪಡಿಕಲ್ಲನ್ನು ಹಾಸದಿರುವುದು ಮತ್ತೊಂದು ಗಮನಾರ್ಹ ವ್ಯತ್ಯಾಸ. ಪರೀಕ್ಷಿಸಲಾದ ಯಾವ ಸಮಾಧಿಯಲ್ಲಿಯೂ ಮಾನವನ ಅಸ್ಥಿ ಅವಶೇಷಗಳಿರಲಿಲ್ಲ. ದಕ್ಷಿಣ ಭಾರತದ ಬೃಹತ್ ಶಿಲಾಯುಗ ಸಮಾಧಿಗಳು ಕಬ್ಬಿಣ ಯುಗಕ್ಕೆ ಮಾತ್ರ ಸೇರಿದವಾದರೆ ಅದ್ವ ಬಯಲಿನ ಗೋರಿಗಳು ತಾಮ್ರ-ಶಿಲಾಯುಗದಿಂದ ಕಬ್ಬಿಣಯುಗದ ಅವಧಿಗೆ ಸೇರಿದವು. ವಿಂಧ್ಯ ಪ್ರದೇಶದ ಇತರ ನೆಲೆಗಳಲ್ಲಿ ದೊರೆತಿರುವ ಕಾಲಮಾನಗಳ ಆಧಾರದ ಮೇಲೆ ಅದ್ವ ಬಯಲಿನ ಬೃಹತ್ ಶಿಲಾಯುಗ ಸಂಸ್ಕೃತಿಯ ಕಾಲಮಾನವನ್ನು ಪ್ರ.ಶ.ಪೂ. 2ನೆಯ ಸಹಸ್ರಮಾನದ ಪೂರ್ವಾರ್ಧದಿಂದ ಪ್ರ.ಶ.ಪೂ. 3ನೆಯ ಶತಮಾನ ಎಂದು ನಿರ್ಧರಿಸಲಾಗಿದೆ.