ಉತ್ತರದೇಶದ ಬಸವಲಿಂಗದೇವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರದೇಶದಬಸವಲಿಂಗದೇವ: ಸು.1600. ವೀರಶೈವ ಕವಿ. ಬಸವೇಶ್ವರಪುರಾಣದ ಕಥಾಸಾಗರ, ಭೈರವೇಶ್ವರಕಾವ್ಯದ ಕಥಾಸಾಗರ, ಉಚಿತ ಕಥೆಗಳು ಎಂಬ ಗ್ರಂಥಗಳನ್ನು ಗದ್ಯದಲ್ಲಿ ಬರೆದಿದ್ದಾನೆ. ಇವುಗಳಲ್ಲಿ ತಾನು ಷಟ್ಸ್ಥಲಚಕ್ರವರ್ತಿ ಚೆನ್ನಬಸವದೇವನ ಕಾರುಣ್ಯದ ಶಿಶುವೆಂದೂ ಬಸವಣ್ಣನ ಕಥೆಗಳನ್ನು ಭಕ್ತಮಾಹೇಶ್ವರರು ಸುಲಭದಲ್ಲಿ ತಿಳಿಯುವಂತೆ ಹೇಳಹೊರಟಿರುವೆನೆಂದೂ ಕವಿ ಹೇಳಿಕೊಂಡಿದ್ದಾನೆ. ಈತನ ಭಾಷಾ ಸ್ವರೂಪವನ್ನು ನೋಡಿದರೆ ಸುಮಾರು 17ನೆಯ ಶತಮಾನದವನೆಂದೂ ಹೇಳಬಹುದು. ಬಸವೇಶ್ವರಪುರಾಣದ ಕಥಾಸಾಗರದಲ್ಲಿ 464 ಕಥೆಗಳಿವೆ. ಈ ಕಥೆಗಳಲ್ಲಿ ಅಷ್ಟಾದಶ ಪುರಾಣಗಳು, ರಾಮಾಯಣ, ಮಹಾಭಾರತ ಮೊದಲಾದ ಸಂಸ್ಕೃತ ಗ್ರಂಥಗಳಿಂದ ಆಯ್ದುಕೊಂಡ ಕೆಲವು ಕಥೆಗಳು ಕಂಡುಬರುತ್ತವೆಯಾದರೂ ಬಸವಣ್ಣನವರನ್ನು ಕುರಿತ ಕಥೆಗಳನ್ನು ನಿರೂಪಿಸುವುದು ಇಲ್ಲಿನ ಮುಖ್ಯ ಗುರಿ. ಆದ್ದರಿಂದ ಈತ ಹರಿಹರ, ರಾಘವಾಂಕ, ಲಕ್ಕಣ್ಣ ದಂಡೇಶ, ನೀಲಕಂಠಾಚಾರ್ಯ, ಸಿಂಗಿರಾಜ, ಗುಬ್ಬಿಯ ಮಲ್ಲಣಾರ್ಯ ಮೊದಲಾದ ಪ್ರಸಿದ್ಧ ವೀರಶೈವ ಕವಿಗಳ ಕಾವ್ಯಗಳಿಂದ ತನ್ನ ಕತೆಗಳನ್ನು ಆಯ್ದುಕೊಂಡಿದ್ದಾನೆ. ಈ ಮೂಲ ಕಾವ್ಯಗಳ ಪದಗಳನ್ನೂ ಪದಪುಂಜಗಳನ್ನೂ ಸಂಗ್ರಹಕಾರನು ತನ್ನ ನಿರೂಪಣೆಯಲ್ಲಿ ಬಳಸಿರುವುದರಿಂದ, ಹಿಂದಿನ ಕವಿಕಾವ್ಯಗಳ ಕರ್ತೃತ್ವವನ್ನು ನಿರ್ಧರಿಸುವಲ್ಲಿ ಈ ಕಥೆಗಳು ಬಹು ಉಪಯುಕ್ತವಾಗಿವೆ. ‘ಭೈರವೇಶ್ವರಕಾವ್ಯದ ಕಥಾಸಾಗರ’ ಕಿಕ್ಕೇರಿಯಾರಾಧ್ಯ ನಂಜುಂಡ ಕವಿಯ (ಸು.1550) ಭೈರವೇಶ್ವರಕಾವ್ಯದ ಕಥಾಮಣಿ ಸೂತ್ರರತ್ನಾಕರದಿಂದ ಎತ್ತಿಕೊಂಡ 316 ಕಥೆಗಳನ್ನು ಒಳಗೊಂಡಿದೆ. ‘ಉಚಿತ ಕಥೆಗಳು’ ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿರುವ 74 ಕಥೆಗಳನ್ನು ಒಳಗೊಂಡಿದೆ. (ಟಿ.ಎಸ್.ಎಸ್.)