ವಿಷಯಕ್ಕೆ ಹೋಗು

ಉಜ್ಜುವುದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಜ್ಜುವುದು: ವಸ್ತುವಿನ ಹೊರಮೈಯನ್ನು ನಯಗೊಳಿಸಲು ಅಥವಾ ಸ್ವಲ್ಪಭಾಗವನ್ನು ಕತ್ತರಿಸಿ ತೆಗೆಯಲು ಅನುಸರಿಸುವ ಒಂದು ವಿಧಾನ (ಗ್ರೈಂಡಿಂಗ್). ಲೋಹವಸ್ತುಗಳನ್ನು ಕುರಿತು ಹೇಳುವಾಗ ಸಾಮಾನ್ಯವಾಗಿ ಗ್ರೈಂಡಿಂಗ್ ಪದದ ಬಳಕೆ. ಈ ಪದವನ್ನು ಮರಮುಟ್ಟುಗಳನ್ನು ಒಪ್ಪಮಾಡುವ ಕ್ರಿಯೆಗೂ ಬಳಸುವುದುಂಟು. ಕ್ರಿಯೆ ಯಾವುದೇ ಇರಲಿ ಅದರ ಸೂತ್ರವಿಷ್ಟು: ದೊರಗು ಮತ್ತು ಗಡಸಾದ (ರಫ್ ಅಂಡ್ ಹಾರ್ಡ್) ವಸ್ತು ಮತ್ತು ನಯಗೊಳಿಸಬೇಕಾದ ವಸ್ತು ಇವೆರಡರ ಉಜ್ಜುವಿಕೆ. ಮೊದಲಿನದರ ಹೆಸರು ಘರ್ಷಕ (ಅಬ್ರೇಸಿವ್). ಈ ಎರಡು ವಸ್ತುಗಳ ಪೈಕಿ ಒಂದು ನಿಶ್ಚಲವಾಗಿಯೂ ಇನ್ನೊಂದು ಚಲಿಸುತ್ತಲೂ ಇರಬೇಕು. ಉಜ್ಜುವ ಯಂತ್ರಕ್ಕೆ ಸಾಣೆಯಂತ್ರ (ಗ್ರೈಂಡಿಂಗ್ ಮೆಶೀನ್) ಒಂದು ಉದಾಹರಣೆ. ಅದರ ಚಕ್ರ ತಿರುಗುವಾಗ ಘರ್ಷಕ ವಸ್ತುವನ್ನು ಹೊದಿಸಿರುವ ಅಥವಾ ಘರ್ಷಕದಿಂದಲೇ ಮಾಡಿರುವ ಅದರ ಹೊರಮೈ ನಯಗೊಳಿಸಬೇಕಾದ ವಸ್ತುವಿಗೆ ಬೇಕಾದ ಒಪ್ಪವನ್ನು ನೀಡಬಲ್ಲುದು. ನೆರವೇರಬೇಕಾದ ಕಾರ್ಯ ಅದರ ನಿಖರತೆ, ಸೂಕ್ಷ್ಮತೆ ಮುಂತಾದುವನ್ನು ಅನುಸರಿಸಿ ಚಕ್ರದ ರಚನೆ ಇದೆ; ಅಲ್ಲದೆ ಕೆಲಸಗಾರನ ಕೌಶಲ್ಯವೂ ಇಲ್ಲಿ ಪ್ರಧಾನಪಾತ್ರ ವಹಿಸುತ್ತದೆ. ಉಜ್ಜುಕಾಗದ ಮರಳು ಅಂಟಿಸಿದಂತೆ ದೊರಗುಮೈ ಇರುವ ಇದನ್ನು ಸ್ಯಾಂಡ್ ಪೇಪರ್ ಎಂದು ಕರೆಯುತ್ತಾರೆ. ಅರ, ಸಾರಣಿಕಲ್ಲು, ಕೀಸುಳಿ ಇವೆಲ್ಲ ಬಳಕೆಯಲ್ಲಿರುವ ಘರ್ಷಕಗಳು.