ಉಚ್ಛೇದವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಚ್ಛೇದವಾದ : ಆತ್ಮನ ವಿಷಯವಾಗಿ ಬುದ್ಧನ ಕಾಲದಲ್ಲಿದ್ದ ಪರಸ್ಪರ ವಿರುದ್ಧವಾದ ಎರಡು ಮತಗಳಲ್ಲೊಂದು. ಆತ್ಮ ಎಂಬ ಪದಾರ್ಥವೇ ಇಲ್ಲ. ಅದು ಭೌತಿಕವಾದ ಶರೀರದ ಒಂದು ಅವಸ್ಥೆ ಅಥವಾ ಧರ್ಮ. ಅದೇ ಚೈತನ್ಯ. ಶರೀರ ನಾಶವಾದ ಮೇಲೆ ವ್ಯಕ್ತಿಯ ಯಾವ ಅಂಶವೂ ಉಳಿಯುವುದಿಲ್ಲ. ಮರಣವೇ ಪೂರ್ಣ ಉಚ್ಛೇದ ಎಂಬುದು ಈ ವಾದದ ಸಾರ. ಇದಕ್ಕೆ ವಿರುದ್ಧವಾದದ್ದು ಪುದ್ಗಲವಾದ, ಉಪನಿಷತ್ ಸಂಪ್ರದಾಯದಿಂದ ಬಂದದ್ದು. ಆತ್ಮ ಅವಿನಾಶಿ, ಸ್ಥಿರ, ಅಖಂಡ ಎನ್ನುವುದು ಈ ವಾದದ ತಿರುಳು. ಪ್ರಾಚೀನ ಬೌದ್ಧಗ್ರಂಥಗಳಲ್ಲಿ ಇವುಗಳ ಉಲ್ಲೇಖವಿದೆ. ಬುದ್ಧ ಈ ಎರಡು ಪಂಥಗಳನ್ನೂ ಬಿಟ್ಟು ಒಂದು ಹೊಸ, ಮಧ್ಯಮ ದೃಷ್ಟಿಯನ್ನು ಉಪದೇಶಿಸುತ್ತಾನೆ. ಸ್ಥಿರವಾದ, ಅಖಂಡವಾದ ಆತ್ಮ ವಸ್ತುವಿಲ್ಲ. ಪಂಚಸ್ಕಂದವೆಂಬ ಐದು ಅಂಶಗಳ ಸಮುದಾಯವೇ ಆತ್ಮ. ಮರಣಾನಂತರವೂ ಈ ಸಮುದಾಯ ಪ್ರವಾಹರೂಪೇಣ ಇರುತ್ತದೆ. ಈ ಪ್ರವಾಹ ಪುರ್ತಿಯಾಗಿ ಕೊನೆಗಾಣುವುದು ನಿರ್ವಾಣ ಅಥವಾ ಮೋಕ್ಷ ಪ್ರಾಪ್ತವಾದಾಗ. ಬೌದ್ಧ ಧರ್ಮದಲ್ಲಿ ಪುನರ್ಜನ್ಮವನ್ನು ಒಪ್ಪಿಕೊಂಡಿರುವುದು ಈ ಕಾರಣದಿಂದಲೇ. ಬೌದ್ಧರ ಉಚ್ಛೇದವಾದವೇ ಮುಂದಿನ ಚಾರ್ವಾಕಮತಕ್ಕೆ ಆಧಾರವಾಯಿತು (ನೋಡಿ-ಪುದ್ಗಲವಾದ; ಚಾರ್ವಾಕ-ಸಿದ್ಧಾಂತ). (ಎಸ್.ಎಸ್.ಆರ್.)