ಉಚ್ಚಂಗಿ
ಉಚ್ಚಂಗಿ: ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ತುಂಗಭದ್ರಾ ನದಿಯ ದಕ್ಷಿಣಕ್ಕಿರುವ ಒಂದು ಗ್ರಾಮ. ಇಲ್ಲಿ ಇತಿಹಾಸ ಪ್ರಸಿದ್ಧವಾದೊಂದು ದುರ್ಗವಿದೆ. ಈ ದುರ್ಗದ ಮೇಲೆ ಉತ್ಸವಾಂಬ (ಉಚ್ಚಂಗಮ್ಮ) ದೇವತೆಯಿರುವುದರಿಂದ ಈ ಸ್ಥಳಕ್ಕೆ ಉಚ್ಚಂಗಿಯೆಂಬ ಹೆಸರು ಬಂತೆಂದು ಹೇಳಲಾಗಿದೆ. ಅಷ್ಟೇನೂ ಎತ್ತರವಲ್ಲದ ಈ ದುರ್ಗ ಉತ್ತರ-ದಕ್ಷಿಣವಾಗಿ ಸು. 3.22 ಕಿಮೀ, ನೈಋತ್ಯಕ್ಕೆ ಸು. 3.22 ಕಿಮೀ ದೂರದಲ್ಲಿ ಕರಡಿ ಬೆಟ್ಟವೂ ದಕ್ಷಿಣಕ್ಕೆ ಸು. 8. ಕಿಮೀ ದೂರದಲ್ಲಿ ಪ್ರಸಿದ್ಧವಾದ ಅಣಜಿ ಕೆರೆಯೂ ಇವೆ. ಗುಡ್ಡಕ್ಕೆ ಹೊಂದಿಕೊಂಡಂತೆ ಪೂರ್ವ ದಿಕ್ಕಿನಲ್ಲಿರುವುದೇ ಉಚ್ಚಂಗಿದುರ್ಗ ಗ್ರಾಮ.
ಇತಿಹಾಸ
[ಬದಲಾಯಿಸಿ]11, 12ನೆಯ ಶತಮಾನಗಳಲ್ಲಿ ಇದು ಪಾಂಡ್ಯ ಮನೆತನದರಸರ ರಾಜಧಾನಿಯಾಗಿತ್ತು. ಪಾಂಡ್ಯರ ರಾಜ್ಯವನ್ನು ನೊಳಂಬವಾಡಿ 32,000 ಎಂದು ಕರೆಯಲಾಗಿತ್ತು. ಉಚ್ಚಂಗಿ ಪಾಂಡ್ಯರು ಕಲ್ಯಾಣಿ ಚಾಳುಕ್ಯರ ಅಧೀನರಾಗಿ ವೈಭವದಿಂದ ರಾಜ್ಯವಾಳಿದರು. ಚೋಳವಂಶದ ಪ್ರಸಿದ್ಧ ರಾಜನಾದ ಮೊದಲನೆಯ ರಾಜೇಂದ್ರ ಚಾಳುಕ್ಯ ದೊರೆಯಾದ ಎರಡನೆಯ ಜಯಸಿಂಹ ಜಗದೇಕಮಲ್ಲನೊಡನೆ (1015-1042) ಮುಸಂಗಿ ಅಥವಾ ಮುಯಂಗಿ ಎಂಬಲ್ಲಿ ಯುದ್ಧಮಾಡಿ ಅವನನ್ನು ಸೋಲಿಸಿದನೆಂದು ಚೋಳರ ಗ್ರಂಥಗಳೂ ಆತ ಸೋಲಲಿಲ್ಲವೆಂದು ಚಾಳುಕ್ಯರ ಶಿಲಾಲೇಖನಗಳೂ ತಿಳಿಸುತ್ತವೆ. ಈ ಮುಸಂಗಿಯೇ ಉಚ್ಚಂಗಿಯೆಂದು ಇತಿಹಾಸಕಾರರ ಅಭಿಪ್ರಾಯ. ಚಾಳುಕ್ಯವಂಶದ ಒಂದನೆಯ ಸೋಮೇಶ್ವರ ಆಹವಮಲ್ಲನ ಮಗನಾದ ಇಮ್ಮಡಿ ಸೋಮೇಶ್ವರನ ಬಲ ಮುರಿದು ರಾಜ್ಯ ಕಸಿದುಕೊಳ್ಳುವ ಉದ್ದೇಶದಿಂದ ಅವನ ತಮ್ಮನಾದ ಆರನೆಯ ವಿಕ್ರಮಾದಿತ್ಯ ತ್ರಿಭುವನ ಮಲ್ಲ (1076-1127) ಆ ಸುತ್ತಿನ ಅನೇಕ ಸಾಮಂತರಾಜರನ್ನು ಪುಸಲಾಯಿಸಿ ಎಬ್ಬಿಸಿದನೆಂದೂ ಇಂಥವರ ಪೈಕಿ ಉಚ್ಚಂಗಿಯ ಪಾಂಡ್ಯರಾಜ ಇರುಕ್ಕವೇಲನೂ ಒಬ್ಬನೆಂದೂ ಹೇಳಲಾಗಿದೆ. ಉಚ್ಚಂಗಿ ಪಾಂಡ್ಯರಾಜರಲ್ಲಿ, ಇರುಕ್ಕವೇಲ ಪಾಂಡ್ಯ, ವೀರಪಾಂಡ್ಯ, ಮತ್ತು ವಿಜಯಪಾಂಡ್ಯ (ಕಾಮದೇವ) ಪ್ರಸಿದ್ಧರು. ಇವರು ಉಚ್ಚಂಗಿಯ ಕೋಟೆಯನ್ನೂ ಅನೇಕ ಶೈವ, ಜೈನ ದೇವಾಲಯಗಳನ್ನೂ ಕಟ್ಟಿಸಿದರು. ಉಚ್ಚಂಗಿ ಆ ಕಾಲದಲ್ಲಿ ಅಭೇದ್ಯ ದುರ್ಗವಾಗಿತ್ತೆಂಬುದು ಹೊಯ್ಸಳರ ಶಾಸನಗ ಳಿಂದ ತಿಳಿದುಬರುವ ವಿಷಯ. 1173ರಲ್ಲೂ 1187ರಲ್ಲೂ ಹೊಯ್ಸಳರಾಜ ಎರಡನೆಯ ವೀರಬಲ್ಲಾಳ ಇದನ್ನು ಆಕ್ರಮಿಸಿದ್ದ. ಎರಡನೆಯ ಮುತ್ತಿಗೆಯಲ್ಲಿ ಉಚ್ಚಂಗಿಯ ಪಾಂಡ್ಯರಾಜ ಸತ್ತು ಇದು ಹೊಯ್ಸಳರ ವಶವಾಯಿತು. ವಿಜಯನಗರದ ಸಾಮ್ರಾಜ್ಯದ ಪತನಾನಂತರ ಇಲ್ಲಿ ಅನೇಕ ಹಿಂದೂ ಮತ್ತು ಮುಸ್ಲಿಂ ಪಾಳೆಯಗಾರರು ಆಡಳಿತ ನಡೆಸಿದರೆಂಬುದಕ್ಕೆ ಆಧಾರಗಳಿವೆ.
ಆಕರ್ಷಣೆಗಳು
[ಬದಲಾಯಿಸಿ]ದುರ್ಗದಲ್ಲಿ ಕಲ್ಲಿನಿಂದ ಕಟ್ಟಿದ ಕೋಟೆಕೊತ್ತಲಗಳ, ದೇವಾಲಯಗಳ ಮತ್ತು ಪಾಳುಕೊಳಗಳ ಅನೇಕ ಭಗ್ನಾವಶೇಷಗಳನ್ನು ಕಾಣಬಹುದು. ದುರ್ಗದ ಪ್ರವೇಶದ್ವಾರದಲ್ಲಿ ಪಾದದೇವರ ಗುಡಿಯಿದೆ. ಈ ದೇವಾಲಯದ ಎದುರಿನಲ್ಲಿ 15 ಮೀ ಎತ್ತರದ ದೀಪಸ್ತಂಭ. ಶಿಥಿಲ ಕೋಟೆಗೆ ಕೋಟೆಬಾಗಿಲು, ಮಳೆಬಾಗಿಲು, ಅಗಸೆಬಾಗಿಲು, ಹರಿಹರೇಶ್ವರ ಬಾಗಿಲು, ಅಣಜಿ ಬಾಗಿಲು ಎಂಬ ನಾಲ್ಕು ಹೆಬ್ಬಾಗಿಲುಗಳಿದ್ದುವು. ದುರ್ಗದ ಪಾದದಿಂದ ತುದಿಯ ವರೆಗೂ ಪಾಂಡ್ಯರ ಕಾಲದಲ್ಲಿ ನಿರ್ಮಿತವಾದ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಹನುಮಂತ, ಬನಶಂಕರಿ, ವೀರಭದ್ರ, ತವಕೇಶ್ವರ, ಹೊನ್ನೆತ್ತಮ್ಮ ಇವರ ಗುಡಿಗಳು ಮುಖ್ಯ. ಪಾಳು ಬಿದ್ದ ಅನೇಕ ಜೈನ ಬಸದಿಗಳೂ ಉಂಟು. ಹಲವಾರು ಚಿಕ್ಕ ಕೊಳಗಳನ್ನೂ ಹೊಂಡಗಳನ್ನೂ ಕಾಣಬಹುದು. ಇವುಗಳಲ್ಲಿ ಹಿರೇ ಹೊಂಡ, ಚಿಗೆ ಹೊಂಡ, ಹೊನ್ನೆ ಝರಿ, ಆನೆ ಹೊಂಡ, ಸಗಣಿ ಹೊಂಡ, ಅರಿಶಿನ ಹೊಂಡಗಳು ಮುಖ್ಯ. ಅರಶಿನ ಹೊಂಡದ ನೀರನ್ನು ಇಂದಿಗೂ ಉಪಯೋಗಿಸುತ್ತಾರೆ. ಬೆಟ್ಟದ ಮೇಲಿರುವ ಬಾವಿಗಳಲ್ಲಿ ತೊಟ್ಟಿಲು ಬಾವಿ, ಬಟ್ಟಲು ಬಾವಿ ಪ್ರಸಿದ್ಧ. ದುರ್ಗದ ಮೇಲಿರುವ ಉತ್ಸವಾಂಬ ದೇವಾಲಯ ಕಲೆಯ ದೃಷ್ಟಿಯಿಂದ ಮುಖ್ಯವಲ್ಲದಿದ್ದರೂ ಪ್ರಾಚೀನವಾದದ್ದೆಂದು ಹೇಳಲಾಗಿದೆ. ಇಂದಿಗೂ ಈ ದೇವಾಲಯಕ್ಕೆ ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಬರುತ್ತಾರೆ.