ವಿಷಯಕ್ಕೆ ಹೋಗು

ಎತ್ತರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉಚ್ಚ ಇಂದ ಪುನರ್ನಿರ್ದೇಶಿತ)

ಎತ್ತರ ಎಂದರೆ ಲಂಬ ದೂರದ ಅಳತೆ, ಈ ವಸ್ತು ಅಥವಾ ಈ ವ್ಯಕ್ತಿ ಎಷ್ಟು ಎತ್ತರವಿದೆ/ಎತ್ತರವಿದ್ದಾನೆ ಎಂದು, ಅಥವಾ ಈ ಸ್ಥಾನ ಎಷ್ಟು ಎತ್ತರವಿದೆ ಎಂದು. ಉದಾಹರಣೆಗೆ, "ಆ ಕಟ್ಟಡದ ಎತ್ತರ ೫೦ ಮೀ. ಇದೆ" ಅಥವಾ "ಒಂದು ವಿಮಾನದ ಎತ್ತರ ಸುಮಾರು ೧೦,೦೦೦ ಮೀ. ಇರುತ್ತದೆ".

ಕಾರ್ಟೇಸಿಯನ್ ಪ್ರದೇಶದಲ್ಲಿ, ಒಂದು ನಿರ್ದಿಷ್ಟ ಬಿಂದು ಮತ್ತು ಸಮಾನವಾದ ವೈ-ಮೌಲ್ಯವನ್ನು ಹೊಂದಿರದ ಮತ್ತೊಂದು ಬಿಂದು ನಡುವಿನ ಎತ್ತರವನ್ನು ಲಂಬ ಅಕ್ಷದ (ವೈ) ಉದ್ದಕ್ಕೆ ಅಳೆಯಲಾಗುತ್ತದೆ. ಎರಡೂ ಬಿಂದುಗಳು ಸಮಾನ ವೈ-ಮೌಲ್ಯವನ್ನು ಹೊಂದಿದ್ದರೆ, ಅವುಗಳ ನಡುವಿನ ತುಲನಾತ್ಮಕ ಎತ್ತರ ಶೂನ್ಯವಿರುತ್ತದೆ.

ಎತ್ತರವು ಒಂದು ಉಲ್ಲೇಖ ಸಮತಲಕ್ಕೆ ಸಾಪೇಕ್ಷವಾಗಿರುತ್ತದಾದರೂ, ಭೌತಿಕ ಪ್ರಪಂಚದಲ್ಲಿನ ಎತ್ತರದ ಬಹುತೇಕ ಅಳತೆಗಳು ಸಮುದ್ರ ಮಟ್ಟ ಎಂದು ಕರೆಯಲ್ಪಡುವ ಒಂದು ಶೂನ್ಯ ಮೇಲ್ಮೈಯನ್ನು ಆಧರಿಸಿರುತ್ತವೆ. ಭೂಗೋಳ ಶಾಸ್ತ್ರದಲ್ಲಿ, ಎತ್ತರವನ್ನು ಸಾಮಾನ್ಯವಾಗಿ ಸರಾಸರಿ ಸಮುದ್ರ ಮಟ್ಟದ ಮೇಲಿನ ಒಂದು ಬಿಂದುವಿನ ಸ್ಥಾನ ಎಂದು ವ್ಯಾಖ್ಯಾನಿಸಲಾಗುತ್ತದೆ. ಸಮುದ್ರ ಮಟ್ಟದ ಮೇಲ್ಮೈಯನ್ನು ಭೂಖಂಡಗಳ ಕೆಳಗೆ ವಿಸ್ತರಿಸಬಹುದು: ಅಕೃತ್ರಿಮವಾಗಿ, ಒಬ್ಬರು ಭೂಖಂಡಗಳ ಮೂಲಕ ಸಾಗುವ ಅನೇಕ ಕಿರಿದಾದ ಕಾಲುವೆಗಳನ್ನು ಕಲ್ಪಿಸಿಕೊಳ್ಳಬಹುದು. ಆಚರಣೆಯಲ್ಲಿ, ಭೂಖಂಡದ ಕೆಳಗಿನಲ್ಲಿನ ಸಮುದ್ರ ಮಟ್ಟವನ್ನು ಗುರುತ್ವ ಮಾಪನಗಳಿಂದ ಗಣನೆ ಮಾಡಬೇಕಾಗುತ್ತದೆ, ಮತ್ತು ಸ್ವಲ್ಪ ಭಿನ್ನ ಗಣನಾ ವಿಧಾನಗಳು ಅಸ್ತಿತ್ವದಲ್ಲಿವೆ.

ಸಮುದ್ರ ಮಟ್ಟವನ್ನು ಬಳಸುವುದರ ಬದಲು, ಭೂಗಣಿತಜ್ಞರು ಎತ್ತರವನ್ನು ಹಲವುವೇಳೆ ಒಂದು ಉಲ್ಲೇಖ ಅಂಡಾಭದ ಮೇಲ್ಮೈಯಿಂದ ವ್ಯಾಖ್ಯಾನಿಸಲು ಇಷ್ಟಪಡುತ್ತಾರೆ. ಭೌಗೋಳಿಕ ಹೆಗ್ಗುರುತುಗಳನ್ನು ವ್ಯಾಖ್ಯಾನಿಸುವುದು ಉಲ್ಲೇಖದ ಪ್ರಶ್ನೆಯಾಗಿಬಿಡುತ್ತದೆ. ಉದಾಹರಣೆಗೆ, ಸಮುದ್ರ ಮಟ್ಟದ ಉಲ್ಲೇಖದಲ್ಲಿ ಅತಿ ಎತ್ತರದ ಪರ್ವತ ನೇಪಾಳ ಮತ್ತು ಟಿಬೆಟ್‍ನ ಗಡಿಯಲ್ಲಿ ಸ್ಥಿತವಾಗಿರುವ ಎವರೆಸ್ಟ್ ಶಿಖರವಾಗಿದೆ; ಆದರೆ, ತುದಿಯಿಂದ ಬುಡದವೆರೆಗಿನ ಅಳತೆಯ ದೃಷ್ಟಿಯಿಂದ ಅತಿ ಎತ್ತರದ ಪರ್ವತ ಹವಾಯಿ, ಅಮೇರಿಕದಲ್ಲಿರುವ ಮೌನಾ ಕೀ ಆಗಿದೆ.

ಮಾನವನ ಎತ್ತರವು ಮಾನವಮಾಪನ ಶಾಸ್ತ್ರದಲ್ಲಿನ ಅಧ್ಯಯನ ಕ್ಷೇತ್ರಗಳಲ್ಲಿ ಒಂದಾಗಿದೆ. ಒಂದು ಜನಸಂಖ್ಯೆಯಲ್ಲಿನ ಎತ್ತರದ ಬದಲಾವಣೆಗಳು ಹೆಚ್ಚಾಗಿ ಆನುವಂಶಿಕವಾಗಿರುತ್ತವಾದರೂ, ಜನಸಂಖ್ಯೆಗಳ ನಡುವಿನ ಎತ್ತರದ ಬದಲಾವಣೆಗಳು ಬಹುತೇಕವಾಗಿ ಪಾರಿಸರಿಕವಾಗಿರುತ್ತವೆ. ಅಭಿವೃದ್ಧಿಶೀಲ ರಾಷ್ಟ್ರಗಳ ಪೋಷಣೆಯಲ್ಲಿನ ಬದಲಾವಣೆಗಳ ಮೇಲ್ವಿಚಾರಣೆ ಮಾಡಲು ಸಂಯುಕ್ತ ರಾಷ್ಟ್ರ ಸಂಸ್ಥೆಯು (ಇತರ ಅಂಕಿಅಂಶಗಳ ಜೊತೆಗೆ) ಎತ್ತರವನ್ನು ಬಳಸುತ್ತದೆ. ಮಾನವ ಜನಸಂಖ್ಯೆಯಲ್ಲಿ, ಸರಾಸರಿ ಎತ್ತರವು ಸಂಕೀರ್ಣ ಮಾಹಿತಿಯಿಂದ ಗುಂಪಿನ ಜನನ, ಸಾಕುವಿಕೆ, ಸಾಮಾಜಿಕ ವರ್ಗ, ಆಹಾರ, ಮತ್ತು ಆರೋಗ್ಯರಕ್ಷಣೆ ವ್ಯವಸ್ಥೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತದೆ.

"https://kn.wikipedia.org/w/index.php?title=ಎತ್ತರ&oldid=845933" ಇಂದ ಪಡೆಯಲ್ಪಟ್ಟಿದೆ