ಉಗುರುಸುತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಗುರುಸುತ್ತು: ಉಗುರಿನ ಸುತ್ತಲ ಮೆತ್ತನೆಯ ಭಾಗದಲ್ಲಿ ಸೊಂಕಿನಿಂದ ಏಳುವ ಕೀವು ಕುರು (ಪ್ಯಾರೋನೈಕಿಯ) (ವಿಟ್ಲೊ, ರನರೌಂಡ್). ಕಾಲುಬೆರಳುಗಳಲ್ಲಿ ಏಳಬಹುದಾ ದರೂ ಕೈ ಬೆರಳುಗಳ ಸುತ್ತ ಏಳುವುದೇ ಹೆಚ್ಚು. ಉಗುರಿನ ಸುತ್ತಲಿನ ಚರ್ಮವು ಕೆಂಪಾಗಿ, ಊದಿಕೊಂಡು, ಕೀವಿನಿಂದ ತುಂಬಿಕೊಳ್ಳುತ್ತದೆ ಹಾಗೂ ನೋವಿನಿಂದ ಕೂಡಿರುತ್ತದೆ. ಉಗುರುಸುತ್ತು ತೀವ್ರ ಅಥವಾ ದೀರ್ಘಾವಧಿಯದ್ದಾಗಿರಬಹುದು. ಮುಳ್ಳು ತಾಗಿ, ಅಥವಾ ಗಾಯವಾಗುವುದರಿಂದ ಬ್ಯಾಕ್ಟೀರಿಯ ರೋಗಾಣುಗಳ ಸೋಂಕಾಗಿ ತೀವ್ರ ಉಗುರುಸುತ್ತು ಕಾಣಿಸಿಕೊಳ್ಳುತ್ತದೆ. ದೀರ್ಘಾವಧಿಯ ಉಗುರುಸುತ್ತು, ಸಾಮಾನ್ಯವಾಗಿ ಅಣಬೆರೋಗದಿಂದ ಉಂಟಾಗುತ್ತದೆ. ಹೆಚ್ಚು ಕಾಲ ನೀರಲ್ಲಿ ಕೆಲಸ ಮಾಡುವುದು ಈ ತೊಂದರೆಯಾಗಲು ಕಾರಣವಾಗುತ್ತದೆ; ಉಗುರು ಒಳಗೊಳಗೇ ಬೆಳೆದುಕೊಳ್ಳುವುದು, ಉಗುರಿನ ತಳಭಾಗ, ಬಹುಕಾಲದ ನೀರು, ಸಾಬೂನುಗಳ ಸ್ಪರ್ಶದಿಂದ ನಾಶವಾಗುವುದು, ಮೊದಲಾದ ಉಗುರಿನ ರಚನೆಯ ತೊಂದರೆಗಳಿಂದ ದೀರ್ಘಕಾಲದ ಉಗುರುಸುತ್ತು ಬರುತ್ತದೆ. ಉಗುರುಸುತ್ತು ತೀವ್ರವಾಗಿದ್ದರೆ, ಊದಿಕೊಂಡ ಸ್ಥಳದಲ್ಲಿ ಶುದ್ಧ ಸೂಜಿಯಿಂದ ಚುಚ್ಚಿ, ಶಸ್ತ್ರವೈದ್ಯರು ಕೀವನ್ನು ಹೊರತೆಗೆಯಬಹುದು. ಅನಂತರ, ಜೀವನಿರೋಧಕ ಔಷಧಿಗಳಿಂದ ಚಿಕಿತ್ಸೆ ಮಾಡುತ್ತಾರೆ. ಅದು ದೀರ್ಘಕಾಲದ್ದಾದರೆ, ಸೂಕ್ತ ಅಣಬೆನಾಶಕ ಚಿಕಿತ್ಸೆ ಹಾಗೂ ಇತರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬೆರಳಿಗೆ ಎಲ್ಲಾದರೂ ಮುಳ್ಳು ತಗಲಿದರೆ ಅಥವಾ ಗಾಯವಾದರೆ, ಸೋಂಕುಗಳು ಸೇರದಂತೆ ಮುಂಜಾಗ್ರತೆಯಿಂದ ಸೋಂಕುನಿರೋಧಕ ಮದ್ದು ಹಚ್ಚಿ ಉಗುರುಸುತ್ತು ಏಳದಂತೆ ನೋಡಿಕೊಳ್ಳುವುದು ಬಹುಮುಖ್ಯ. ಅಲ್ಲಿಗೂ ಸೋಂಕು ನೆಲೆಯೂರಿ ಕೀವು ಸೇರುವ ಲಕ್ಷಣ ಕಂಡರೆ ಕೂಡಲೇ ವೈದ್ಯರ ಸಲಹೆ ಪಡೆಯಲೇಬೇಕು (ನೋಡಿ-ಕೈಯ-ರೋಗಗಳು,ಊನಗಳು). (ಡಿ.ಎಸ್.ಎಸ್.)