ವಿಷಯಕ್ಕೆ ಹೋಗು

ಉಗಿಬಂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb

ಉಗಿಬಂಡಿಯು ಉಗಿಯಂತ್ರದ ಮೂಲಕ ತನ್ನ ಎಳೆಯುವ ಶಕ್ತಿಯನ್ನು ಉತ್ಪಾದಿಸುವ ರೈಲುಬಂಡಿಯ ಪ್ರಕಾರ. ಈ ಬಂಡಿಗಳು ಸಾಮಾನ್ಯವಾಗಿ ಕಲ್ಲಿದ್ದಲು, ಕಟ್ಟಿಗೆ, ಅಥವಾ ಎಣ್ಣೆಯಂತಹ ದಹನಶೀಲ ವಸ್ತುಗಳನ್ನು ಸುಟ್ಟು ಇಂಧನವಾಗಿ ಬಳಸುತ್ತವೆ. ಈ ಇಂಧನವು ಆವಿಗೆಯಲ್ಲಿ ಉಗಿಯನ್ನು (ಆವಿ) ಉತ್ಪಾದಿಸುತ್ತದೆ. ಆವಿಯು ಬಂಡಿಯ ಮುಖ್ಯ ಗಾಲಿಗಳಿಗೆ (ಚಾಲಕಗಳು) ಯಾಂತ್ರಿಕವಾಗಿ ಜೋಡಿಸಲಾದ ಸರಳರೇಖೆಯಲ್ಲಿ ಹಿಂದೆಮುಂದೆ ಚಲಿಸುವ ಆಡುಬೆಣೆಗಳನ್ನು ಚಲಿಸುತ್ತದೆ. ಇಂಧನ ಮತ್ತು ನೀರು ಪೂರೈಕೆ ಎರಡನ್ನೂ ಬಂಡಿಯ ಜೊತೆಗೆ ಸಾಗಿಸಲಾಗುತ್ತದೆ, ಸ್ವತಃ ಬಂಡಿಯೊಳಗೆಯೇ ಅಥವಾ ಹಿಂದೆ ಜೋಡಿಸಲಾದ ಹೆಚ್ಚುವರಿ ಬಂಡಿಗಳೊಳಗೆ (ಸರಬರಾಜು ಬಂಡಿಗಳು).

ಉಗಿಬಂಡಿಗಳನ್ನು ಗ್ರೇಟ್ ಬ್ರಿಟನ್‍ನಲ್ಲಿ ೧೯ನೇ ಶತಮಾನದ ಮುಂಚಿನ ಭಾಗದಲ್ಲಿ ಮೊದಲು ಅಭಿವೃದ್ಧಿಗೊಳಿಸಲಾಯಿತು. ಉಗಿಬಂಡಿಗಳನ್ನು ರೈಲು ಸಾರಿಗೆಗಾಗಿ ೨೦ನೇ ಶತಮಾನದ ಮಧ್ಯಭಾಗದವರೆಗೆ ಬಳಸಲಾಯಿತು. ೧೮೦೧ ಮೊದಲ ರಸ್ತೆ ಬಂಡಿಯನ್ನು ತಯಾರಿಸಿದ್ದ ರಿಚರ್ಡ್ ಟ್ರೆವಿಥಿಕ್ ಅವರು ಮೂರು ವರ್ಷದ ನಂತರ, ೧೮೦೪ರಲ್ಲಿ ಮೊದಲ ಉಗಿಬಂಡಿಯನ್ನು ತಯಾರಿಸಿದರು. ಮೊದಲ ವಾಣಿಜ್ಯಿಕವಾಗಿ ಸಫಲ ಉಗಿಬಂಡಿಯನ್ನು ೧೮೧೨-೧೩ರಲ್ಲಿ ಜಾನ್ ಬ್ಲೆಂಕಿನ್‍ಸಾಪ್ ಸೃಷ್ಟಿಸಿದರು.[]

೧೯೦೦ರ ದಶಕದ ಆರಂಭದ ವರ್ಷಗಳಿಂದ ಕ್ರಮೇಣವಾಗಿ ಉಗಿಬಂಡಿಗಳ ಬದಲಾಗಿ ವಿದ್ಯುತ್ ಮತ್ತು ಡೀಸಲ್ ಬಂಡಿಗಳು ಬಂದವು. ರೈಲು ಕಂಪನಿಗಳು ೧೯೩೦ರ ದಶಕದ ಕೊನೆಯ ವರ್ಷಗಳಿಂದ ಆರಂಭಗೊಂಡು ಸಂಪೂರ್ಣವಾಗಿ ವಿದ್ಯುತ್ ಮತ್ತು ಡೀಸಲ್ ಶಕ್ತಿಗೆ ಪರಿವರ್ತಿತವಾದವು. ಉಗಿಬಂಡಿಗಳಲ್ಲಿ ಬಹುತೇಕವನ್ನು ೧೯೮೦ರ ದಶಕದ ಹೊತ್ತಿಗೆ ನಿಯಮಿತ ಸೇವೆಯಿಂದ ನಿವೃತ್ತಿಗೊಳಿಸಲಾಯಿತು. ಆದಾಗ್ಯೂ ಹಲವು ಉಗಿಬಂಡಿಗಳು ಪ್ರಯಾಣಿಕ ಮತ್ತು ಪರಂಪರೆ ಮಾರ್ಗಗಳ ಮೇಲೆ ಚಲಿಸುವುದು ಮುಂದುವರೆದಿದೆ.

ಉಗಿಬಂಡಿಗಳಲ್ಲಿ ಬೆಂಕಿ-ಕೊಳವೆ ಆವಿಗೆಯನ್ನು ಬಳಸುವುದು ಸಾಮಾನ್ಯ ಅಭ್ಯಾಸವಾಗಿತ್ತು. ಇತರ ಬಗೆಗಳ ಆವಿಗೆಗಳನ್ನು ಮೌಲ್ಯಮಾಪನ ಮಾಡಲಾಯಿತಾದರೂ ಅವನ್ನು ವ್ಯಾಪಕವಾಗಿ ಬಳಸಲಾಗಲಿಲ್ಲ. ಆವಿಗೆಯು ಅಗ್ನಿಪೆಟ್ಟಿಗೆ, ಪೀಪಾಯಿ, ಹೊಗೆಪೆಟ್ಟಿಗೆಯನ್ನು ಹೊಂದಿರುತ್ತದೆ. ಅಗ್ನಿಪೆಟ್ಟಿಗೆಯಲ್ಲಿ ಇಂಧನವನ್ನು ಸುಡಲಾಗುತ್ತದೆ. ಪೀಪಾಯಿಯಲ್ಲಿ ನೀರನ್ನು ಆವಿಯಾಗಿ ಪರಿವರ್ತಿಸಲಾಗುತ್ತದೆ. ಹೊಗೆಪೆಟ್ಟಿಗೆಯನ್ನು ಅಗ್ನಿಪೆಟ್ಟಿಗೆಯ ಹೊರಗಡೆಯ ಒತ್ತಡಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ ಒತ್ತಡದಲ್ಲಿ ಇಡಲಾಗುತ್ತದೆ.

ಕಟ್ಟಿಗೆ, ಕಲ್ಲಿದ್ದಲು ಅಥವಾ ಕೋಕ್‍ನಂತಹ ಘನ ಇಂಧನವನ್ನು ಅಗ್ನಿಪೆಟ್ಟಿಗೆಯೊಳಗೆ ದ್ವಾರದ ಮೂಲಕ ಬೆಂಕಿಯವನು ಸರಳುಗಳ ಚೌಕಟ್ಟಿನ ಮೇಲೆ ಎಸೆಯುತ್ತಾನೆ. ಈ ಚೌಕಟ್ಟು ಇಂಧನವು ಸುಡುತ್ತಿರುವಾಗ ಅದನ್ನು ಹಿಡಿದಿಡುತ್ತದೆ. ಬೂದಿಯು ಚೌಕಟ್ಟಿನ ಮೂಲಕ ಬೂದಿಪಾತ್ರೆಯೊಳಗೆ ಬೀಳುತ್ತದೆ. ಎಣ್ಣೆಯನ್ನು ಇಂಧನವಾಗಿ ಬಳಸಿದರೆ, ಗಾಳಿ ಹರಿವನ್ನು ಹೊಂದಾಣಿಕೆ ಮಾಡಲು, ಅಗ್ನಿಪೆಟ್ಟಿಗೆಯನ್ನು ನಿರ್ವಹಿಸಲು, ಮತ್ತು ಎಣ್ಣೆ ನಳಿಕೆಯ ಬಾಯಿಗಳನ್ನು ಸ್ವಚ್ಛಮಾಡಲು ಬಾಗಿಲು ಬೇಕಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "John Blenkinsop - English inventor".
"https://kn.wikipedia.org/w/index.php?title=ಉಗಿಬಂಡಿ&oldid=1050578" ಇಂದ ಪಡೆಯಲ್ಪಟ್ಟಿದೆ