ಉಕ್ಕಿನ ತೆರೆ

ವಿಕಿಪೀಡಿಯ ಇಂದ
Jump to navigation Jump to search

ಉಕ್ಕಿನ ತೆರೆ- ಎರಡನೆಯ ಮಹಾಯುದ್ಧ ಕಾಲದಲ್ಲಿ ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನ ಮುಂತಾದವುಗಳ ಮಿತ್ರ ರಾಷ್ಟ್ರವಾಗಿ ಹಿಟ್ಲರ್ , ಮುಸ್ಸೋಲಿನಿಯರ ವಿರುದ್ಧ ಹೋರಾಡಿದ ಸೋವಿಯತ್ ಒಕ್ಕೂಟ ಆ ಯುದ್ಧಾನಂತರ ಕಾಲದಲ್ಲಿ ತನಗೂ ತನ್ನ ಅಧೀನದ ಪೂರ್ವ, ಪಶ್ಚಿಮ ಐರೋಪ್ಯ ಮತ್ತು ಇತರ ಕಮ್ಯೂನಿಸ್ಟೇತರ ರಾಷ್ಟ್ರಗಳಿಗೂ ನಡುವಣ ಸಾಮಾನ್ಯ ಸಂಪರ್ಕಗಳನ್ನೆಲ್ಲ ಕಡಿದುಕೊಂಡು, ತನ್ನ ವಲಯದ ಸುತ್ತಲೂ ಭೇದಿಸಲಶಕ್ಯವಾದ ದಿಗ್ಬಂದನ ನಿರ್ಮಿಸಿಕೊಂಡಾಗ ಈ ಪರಿಸ್ಥಿತಿಯನ್ನು ವಿವರಿಸಲು ಪ್ರಚಾರಕ್ಕೆ ಬಂದ ಆಲಂಕಾರಿಕ ಪ್ರಯೋಗವಾದ ಐರನ್ ಕರ್ಟನ್ ಎಂಬುದಕ್ಕೆ ಕನ್ನಡದ ಪರ್ಯಾಯಪದ. ಅಲ್ಲಿ ಕಬ್ಬಿಣ ಪರದೆಯಾದದ್ದು ಕನ್ನಡದಲ್ಲಿ ಉಕ್ಕಿನ ತೆರೆ. 1946 ಮಾರ್ಚ್ 5 ರಂದು ಬ್ರಿಟನ್ನಿನ ಯುದ್ಧಕಾಲದ ಪ್ರಧಾನಿಯಾಗಿದ್ದ ವಿನ್ಸ್‌ಟನ್ ಚರ್ಚಿಲ್ ಭಾಷಣಮಾಡುತ್ತ, ಪೂರ್ವ ಯುರೋಪಿಗೆ ಅಡ್ಡಲಾಗಿ ಸೋವಿಯತ್ ಒಕ್ಕೂಟ ಕಬ್ಬಿಣದ ಪರದೆಯೊಂದನ್ನು ಇಳಿಯಬಿಟ್ಟಿದೆಯೆಂದು ವರ್ಣಿಸಿದರು. ಮುಂದೆ ಪೂರ್ವಪಶ್ಚಿಮ ರಾಷ್ಟ್ರಗಳು ಪರಸ್ಪರವಾಗಿ ಸೆಟೆದು ಪ್ರತ್ಯೇಕವಾದಾಗ ಚರ್ಚಿಲರ ಈ ಪ್ರಯೋಗ ಹೆಚ್ಚು ಬಳಕೆಗೆ ಬಂತು.

ಮುಂದೆ 1949ರಲ್ಲಿ ಕಮ್ಯೂನಿಸ್ಟ್‌ ಚೀನವೂ ಇದೇ ಬಗೆಯ ಪ್ರತ್ಯೇಕತಾ ಧೋರಣೆ ತಳೆದಾಗ ಇದರ ನೀತಿ ವಿವರಿಸಲು ಬಿದಿರು ತೆರೆ (ಬ್ಯಾಂಬೂ ಕರ್ಟನ್) ಎಂಬ ಪದ ಜನಸಾಮಾನ್ಯವಾಯಿತು. ಚೀನ, ಸೋವಿಯತ್ ರಾಷ್ಟ್ರಗಳಲ್ಲಿನ ವ್ಯವಹಾರಗಳು ಸುಲಭವೇದ್ಯವಲ್ಲವೆಂಬುದನ್ನು ಸೂಚಿಸಲು ಈ ಎರಡೂ ಪದಗಳು ಈಗಲೂ ಬಳಕೆಯಲ್ಲಿವೆ.