ಉಕ್ಕಿನ ಆಧಾರ
ಉಕ್ಕಿನ ಆಧಾರ: ಸುರಂಗ, ನೆಲದಡಿ ರಚನೆ, ಕಟ್ಟಡ, ಸೇತುವೆ ಮುಂತಾದ ಸಕಲ ರಚನೆಗಳಲ್ಲೂ ಭದ್ರತೆಕೋಸ್ಕರ ಅಳವಡಿಸಿರುವ ಚೌಕಟ್ಟು (ಸ್ಟೀಲ್ ಸಪೋರ್ಟ್: ಸ್ಟೀಲ್ ಗರ್ಡರ್). ಉಕ್ಕಿನ ದೂಲ ಪ್ರಯೋಗವೂ ರೂಢಿಯಲ್ಲಿದೆ. ಇಂಥ ಆಧಾರಗಳು ಕಟ್ಟಡದ ಮೇಲ್ಚಾವಣಿ, ರಸ್ತೆಸೇತುವೆ ಇತ್ಯಾದಿಗಳ ತೂಕಗಳನ್ನು ಹೊರುತ್ತವೆ. ಇವನ್ನು ಅಡ್ಡಲಾಗಿಟ್ಟು ಮೇಲೆ ತೀರುಗಳನ್ನು ನಿಲ್ಲಿಸಿ ಮುಂದಿನ ರಚನೆಗೆ ತೊಡಗುತ್ತಾರೆ. ಉಕ್ಕಿನ ಆಧಾರಗಳ ರಚನೆಗಳು ಅವುಗಳ ಮೇಲೆ ಓಡಾಡುವ ಜನಗಳ ಮತ್ತು ವಾಹನಗಳ ತೂಕ. ಒತ್ತಡಗಳನ್ನು ಸಹ ತಡೆಯುತ್ತವೆ. ತಾಂತ್ರಿಕ ಸಮಸ್ಯೆಯನ್ನು ಅನುಸರಿಸಿ ಉಕ್ಕಿನ ಆಧಾರದ ಆಲೇಖ್ಯ ಸಿದ್ಧಪಡಿಸಬೇಕು. ಇಂಥ ಆಧಾರಗಳ ಅಡ್ಡಕೊಯ್ತಗಳು (O,I,T,A) ಮುಂತಾದ ಆಕಾರಗಳಲ್ಲಿರುತ್ತವೆ. ಕೋಲಾರದ ಚಿನ್ನದ ಗಣಿಗಳಲ್ಲಿ (U) ಆಕಾರದ ಆಧಾರಗಳನ್ನು ನೋಡಬಹುದು. ಉಕ್ಕಿನ ಆಧಾರಗಳನ್ನು ಮರದ ಆಧಾರಕ್ಕೆ ಹೋಲಿಸಿದಾಗ ಇರುವ ಅನುಕೂಲತೆಗಳು: 1. ಆಗಾಗ್ಗೆ ಬಣ್ಣವನ್ನು ಬಳಿಯುತ್ತಿದ್ದರೆ ಬಹುಕಾಲದವರೆಗೆ ಬಳಸಬಹುದು; 2. ಬಲು ಹಗುರ 3. ಆಗಾಧ ಗಾತ್ರವಿಲ್ಲ 4. ಆಧಾರಗಳನ್ನು ಕಳಚಿ ಬೇರೆ ಬೇರೆ ಸುರಂಗಮಾರ್ಗಗಳ ರಕ್ಷಣೆಗೆ ಬಳಸಬಹುದು. (ಜಿ.ಟಿ.ಜಿ.)