ಉಂಡಿಗನಾಳು
ಉಂಡಿಗನಾಳು- ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ ಕಸಬೆಯಿಂದ ಸು.19ಕಿಮೀ ನೈಋತ್ಯಕ್ಕಿರುವ ಗ್ರಾಮ. ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ಜಟ್ಟಿ ಕುಲದವರು ಗುಜರಾತಿನೆಡೆಯಿಂದ ಬಂದು ಮೊದಲು ಇಲ್ಲಿ ನೆಲೆಸಿದರೆಂದು ಕೆಲವು ಐತಿಹಾಸಿಕ ಆಧಾರಗಳಿಂದ ಊಹಿಸಲಾಗಿದೆ. ಜೆಟ್ಟಿ ಕುಲದವರು ಈ ಗ್ರಾಮ ಮತ್ತು ಸುತ್ತಣ ಪ್ರದೇಶವನ್ನು ಹೊಯ್ಸಳ ಸಾಮಂತರಾಗಿ ಆಳುತ್ತಿದ್ದರೆಂಬುದಕ್ಕೆ ಶಾಸನಾಧಾರಗಳಿವೆ. ಕೆಲವು ಶಾಸನಗಳಲ್ಲಿ ಜಟ್ಟಿಗಳ ಕುಲದೇವರಾದ ನಿಂಬಜಾದೇವಿಯ ಪ್ರಸ್ತಾಪ ಸಹ ಇದೆ. ಇಲ್ಲಿರುವ ಚಾಮುಂಡೇಶ್ವರಿ ದೇವಾಲಯ ಮೂಲತಃ ಹೊಯ್ಸಳರ ಕಾಲದ್ದು. ಕ್ರಿ.ಶ. 1140ರ ರಚನೆ. ಆದರೆ ಈಗ ಅದರಲ್ಲಿ ಅನೇಕ ಅನಂತರಕಾಲದ ಸೇರ್ಪಡೆಗಳಿವೆ. ದೇವಾಲಯ ತ್ರಿಕೂಟಾಚಲ, ಮೂರು ಗರ್ಭಗುಡಿಗಳು, ಒಂದು ಸುಕನಾಸಿ, ಒಂದು ನವರಂಗ ಮತ್ತು ಒಂದು ಮುಖ ಮಂಟಪ ಇವೆ. ಬಾಗಿಲಿನ ನೇರ ಎದುರಿನ ಗರ್ಭಗುಡಿಯಲ್ಲಿ ಲಿಂಗ, ಉತ್ತರದ ಗರ್ಭಗುಡಿಯಲ್ಲಿ ಕೇಶವ ಮತ್ತು ದಕ್ಷಿಣದ ಗರ್ಭಗುಡಿಯಲ್ಲಿ ಮಹಿಷಾಸುರ ಮರ್ದಿನಿ ವಿಗ್ರಹಗಳಿವೆ. ನವರಂಗದಲ್ಲಿರುವ ಕಂಬಗಳು ಹೊಯ್ಸಳ ರೀತಿಯವು. ಇತರ ಭಾಗಗಳು ಬಹುಮಟ್ಟಿಗೆ ಈಚಿನವು. ಒಂದು ಮದನಿಕೆ ವಿಗ್ರಹ ಮುಂತಾದ ಹೊಯ್ಸಳರ ಕಾಲದ ಬಿಡಿಶಿಲ್ಪಗಳು ಇಲ್ಲಿವೆ. ದೇವಾಲಯದ ದಕ್ಷಿಣ ಭಾಗಗಳಲ್ಲಿ ಒಂದು ದೊಡ್ಡ ಉಯ್ಯಾಲೆ ಕಂಬವೂ ಅದರ ಎದುರು ಮೂರು ಅಂಕಣಗಳುಳ್ಳ ಒಂದು ಮಂಟಪವೂ ಇವೆ. ಮಂಟಪದಲ್ಲಿ ಹೊಯ್ಸಳ ಶೈಲಿಯ ಕಂಬಗಳಿವೆ. ಈ ಮಂಟಪದ ಹಿಂಭಾಗದಲ್ಲಿರುವ ಚಿಕ್ಕ ಗರ್ಭಗುಡಿಯಲ್ಲಿ ಅಕ್ಷಮಾಲೆ ತ್ರಿಶೂಲ ಚಕ್ರ ಶಂಖ ಡಮರು ಕುಂಭಗಳನ್ನು ಹಿಡಿದ, ನವಿಲಿನ ಮೇಲೆ ನಿಂತಿರುವ ಜೆಟ್ಟಿಗಳ ಕುಲದೇವಿಯಾದ ಶ್ರೀ ನಿಂಬಜಾದೇವಿ ಶಿಲ್ಪವಿದೆ. ಈ ಗುಡಿಯ ಎರಡು ಪಕ್ಕಗಳಲ್ಲಿ ಮತ್ತು ಕಂಬಗಳ ಮೇಲೆ ಜಟ್ಟಿಗಳ ಶಿಲ್ಪಗಳಿವೆ.