ವಿಷಯಕ್ಕೆ ಹೋಗು

ಉಂಡವಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಂಡವಳ್ಳಿ -ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಒಂದು ಊರು. ಕಲ್ಲಿನಿಂದ ಕೊರೆದ ಇಲ್ಲಿನ ಗುಹಾಂತರ್ದೇವಾಲಯ ಅನಂತಶಯನ ವಿಷ್ಣುವಿನದು. ಈ ದೇವಸ್ಥಾನ ವಿಷ್ಣುಕುಂಡಿನ್ ರಾಜರ ಕಾಲಕ್ಕೆ ಸೇರಿದ್ದೆಂಬ ಭಾವನೆಯಿತ್ತು. ಆದರೆ ಇದು ಪಲ್ಲವ ರಾಜನಾದ ಮೊದಲ ಮಹೇಂದ್ರವರ್ಮನ (600-630) ಕಾಲಕ್ಕೆ ಸೇರಿದ್ದೆಂದು ಈಗ ಚರಿತ್ರಕಾರರು ನಿರ್ಧರಿಸಿದ್ದಾರೆ. ಇದು ಇಲ್ಲಿಯ ಬೌದ್ಧ ವಿಹಾರವನ್ನು ಬಹುವಾಗಿ ಹೋಲುತ್ತದೆ. ಇಲ್ಲಿ ಕಂಬಗಳಿಂದ ಕೂಡಿದ ನಾಲ್ಕು ಅಂತಸ್ತಿನ ಮಂಟಪವಿದೆ. 27.4 ಮೀ. ಅಗಲ 15.2 ಮೀ. ಎತ್ತರವಿರುವ ಈ ಗುಹಾದೇವಾಲಯದಲ್ಲಿ ಮೇಲಿನ ಮತ್ತು ಕೆಳಗಿನ ಅಂತಸ್ತಿನ ಮಂಟಪ ಅಪೂರ್ಣ. ಎರಡನೆಯ ಅಂತಸ್ತಿನ ಚೌಕವಾದ ಹಜಾರದಲ್ಲಿ ದಪ್ಪನೆಯ ಚೌಕಕಂಬಗಳೂ ವಿಷ್ಣುವಿನ ವಿವಿಧ ಅವತಾರಗಳನ್ನು ತೋರಿಸುವ ಶಿಲಾಕೃತಿಗಳೂ ಇವೆ. ಮೂರನೆಯ ಅಂತಸ್ತಿನ ಹಜಾರದಲ್ಲಿ ಅನಂತಶಾಯಿ ವಿಷ್ಣುವಿನ ಬೃಹತ್ ಶಿಲ್ಪವಿದೆ. ಇಲ್ಲಿಯ ಕಂಬಗಳ ಕೆಳಭಾಗಗಳು ಸಿಂಹದ ಶಿಲ್ಪಗಳಿಂದ ಅಲಂಕೃತವಾಗಿವೆ. ಆಂಧ್ರ ಪ್ರದೇಶದಲ್ಲಿರುವ ಪ್ರಾಚೀನ ಕಾಲದ ಗುಹಾದೇವಾಲಯಗಳ ಶಿಲ್ಪಶೈಲಿಯ ದೃಷ್ಟಿಯಿಂದ ಉಂಡವಳ್ಳಿ ಮುಖ್ಯವಾದದ್ದು. (ಎ.ವಿ.ಎನ್.)