ವಿಷಯಕ್ಕೆ ಹೋಗು

ಉಂಗುರಮಾಪಕಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಂಗುರಮಾಪಕಗಳು- ಎಂಜಿನಿಯರಿಂಗಿನಲ್ಲಿ ಅಲ್ಪ ವ್ಯಾಸದ ಕಂಬ ಅಥವಾ ಉರುಳೆಯ ವ್ಯಾಸ ನಿಯಮಿತ ಮಿತಿಗಳ ನಡುವೆ ಇದೆಯೇ ಇಲ್ಲವೇ ಎಂದು ಪರೀಕ್ಷಿಸಲು ಬಳಸುವ ಹತ್ಯಾರುಗಳು (ರಿಂಗ್ ಗೇಜಸ್). ಒಂದು ಕಂಬದ ವ್ಯಾಸ 1 ಸೆಂಮೀ ಇರಬೇಕಾಗಿದೆ ಎಂದು ಭಾವಿಸೋಣ. ಅದರ ಉದ್ದಕ್ಕೂ ವ್ಯಾಸ ನಿಷ್ಕೃಷ್ಟವಾಗಿ ಅಷ್ಟೇ ಇರುವುದು ಸಾಮಾನ್ಯ ಕೈಗಾರಿಕೆಗಳಲ್ಲಿ ಪ್ರಾಯೋಗಿಕವಾಗಿ ಸಾಧ್ಯವೆನಿಸುವುದಿಲ್ಲ. ಆವಶ್ಯಕವೂ ಇಲ್ಲ. ಇಂಥಲ್ಲಿ ಕೆಲಸಗಾರನಿಗೆ ಪ್ರಾಯೋಗಿಕ ವಿಚಲನೆ (ಡೀವಿಯೇಷನ್) ಎಂದು ಒಂದಿಷ್ಟು ರಿಯಾಯಿತಿ ನೀಡುವುದಿದೆ. ಎಂದರೆ, ಕಂಬದ ಉದ್ದಕ್ಕೂ ಅಳತೆಮಾಡಿದಾಗ ಅದರ ವ್ಯಾಸ 1 ಸೆಂಮೀಗಿಂತ ಅತ್ಯಲ್ಪ ಪ್ರಮಾಣ ಹೆಚ್ಚು ಇರಬಹುದು, ಕಡಿಮೆ ಇರಬಹುದು. ವಿಚಲನೆಯ ಮಿತಿಗಳು ಮೊದಲೇ ಗೊತ್ತುಮಾಡಿರುವ ಬೆಲೆಗಳ (ಇವು ಎರಡು-ಒಂದು ಗರಿಷ್ಠ ಮಿತಿ ಮತ್ತೊಂದು ಕನಿಷ್ಠ ಮಿತಿ) ಅಂತರದಲ್ಲಿ ಇದ್ದರೆ ಇಂಥ ರಚನೆ ಸ್ವೀಕಾರಾರ್ಹವೆನ್ನಿಸುವುದು. ಆದ್ದರಿಂದ ಕಂಬದ ನಿಷ್ಕೃಷ್ಟ ವ್ಯಾಸವನ್ನು ಅಳೆಯುವುದರ ಬದಲು ಎರಡು ಉಂಗುರಮಾಪಕಗಳನ್ನು ರಚಿಸುತ್ತಾರೆ. ಒಂದರ ವ್ಯಾಸ ಗರಿಷ್ಠ ಮಿತಿ, ಇನ್ನೊಂದರ ವ್ಯಾಸ ಕನಿಷ್ಠಮಿತಿ. ಮೊದಲಿನದು ಇಡೀ ಕಂಬದ ಹೊರಗೆ ಸರಕ್ಕನೆ ಸರಿದರೆ ಕಂಬದ ವ್ಯಾಸ ಈ ಮಿತಿಗಿಂತ ಎಲ್ಲೂ ಹೆಚ್ಚಾಗಿಲ್ಲವೆಂದು ಸಿದ್ಧವಾಗುತ್ತದೆ. ಈ ಮಾಪಕದ ಹೆಸರು ಹೋಗು (ಗೋ) ಮಾಪಕ. ಎರಡನೆಯ ಕಂಬದ ಹೊರಗೆ ಸರಿಯದಿದ್ದರೆ ಕಂಬದ ವ್ಯಾಸ ಕನಿಷ್ಠ ಮಿತಿಗಿಂತ ಕಡಿಮೆಯಾಗಿಲ್ಲವೆಂದು ಹೇಳಬಹುದು. ಈ ಮಾಪಕದ ಹೆಸರು ಹೋಗದಿರು (ನಾಟ್ ಗೋ) ಮಾಪಕ. ಆಯಾ ಮಾಪಕದ ಮೇಲೆ ಆಯಾ ಹೆಸರನ್ನು ಕೆತ್ತಿರುತ್ತಾರೆ. ಪರಿಶೀಲನೆಗೆ ಆರಿಸಿದ ಕಂಬ ಹೋಗುಮಾಪಕದ ಒಳಗೆ ಸರಿದು, ಹೋಗದಿರುಮಾಪಕದ ಒಳಗೆ ಸರಿಯದಿದ್ದಾಗ ಅದು ಸ್ವೀಕೃತವಾಗುವುದು; ಮಿಕ್ಕ ಎಲ್ಲ ಸಂದರ್ಭಗಳಲ್ಲೂ ಅದು ತಿರಸ್ಕೃತವಾಗುವುದು. (ಎಂ.ಎನ್.ಸಿ.)