ಈಸ್ಟರ್ ದ್ವೀಪ
ಈಸ್ಟರ್ ದ್ವೀಪ ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ದಕ್ಷಿಣ ಸಾಗರದಲ್ಲಿ ದಕ್ಷಿಣ ಅಕ್ಷಾಂಶ 27ಲಿ 10 ಹಾಗೂ ಪಶ್ಚಿಮ ರೇಖಾಂಶ 109ಲಿ 20 ರಲ್ಲಿರುವ ಒಂದು ಪುಟ್ಟ ಒಂಟಿದ್ವೀಪ. ಇದರ ಒಡೆತನ ಹೊಂದಿರುವ ಚಿಲಿ ರಾಜ್ಯಕ್ಕೂ ಇದಕ್ಕೂ 2,000 ಮೈ. ದೂರ. ಇದಕ್ಕೆ ಅತ್ಯಂತ ಹತ್ತಿರವಿರುವ ಜನವಸತಿಯ ಪ್ರದೇಶವೆಂದರೆ 1,100 ಮೈ. ದೂರದಲ್ಲಿರುವ ಪಿಟ್‍ಕೇರ್ನ ದ್ವೀಪ. ಟಿರೆವಾಕ, ರಾನೊಕಾವೊ ಮತ್ತ ಪೊಯಿಕೆ ಎಂಬ ಮೂರು ನಂದಿಹೋದ ಜ್ವಾಲಾಮುಖಿಗಳು ಕೂಡಿ ಈ ದ್ವೀಪ ಸಂಭವಿಸಿರುವುದರಿಂದ ಇದರದು ತ್ರಿಭುಜಾಕಾರ. ಪರಮಾವಧಿ ಎತ್ತರ 1.765; 11 ಮೈಲಿ ಉದ್ದ: 15 ಮೈಲಿ ಅಗಲ: 46 ಚ.ಮೈ.ವಿಸ್ತೀರ್ಣ. ಬೂದಿ ನೆಲದ ಒಡಲ ಮೇಲೆ ಜ್ವಾಲಾಮುಖಿಜನ್ಯವಾದ ಸಾವಿರ ಕಣ್ಣು. ಎಲ್ಲೆಲ್ಲೂ ಜ್ವಾಲಾಮುಖಿ ಶಿಲೆಗಳಿಂದಾದ ಸಣ್ಣ ಸಣ್ಣ ಕೊಳ್ಳಗಳು. ವಾತಾವರಣ ಹಿತಕರ. ಬಿದ್ದ ಮಳೆಯ ನೀರನ್ನು ಒತ್ತುಕಾಗದದ ಗುಣ ಹೊಂದಿರುವ ಬಂಡೆಗಳು ಹೀರಿಕೊಳ್ಳುತ್ತವೆ. ಆದ್ದರಿಂದ ಝರಿಗಳು ವಿರಳ, ಊಟೆ, ಬಾವಿ, ಜ್ವಾಲಾಮುಖಿಯ ಹಳ್ಳಗಳಿಂದಾದ ಸರೋವರಗಳು-ಇವೇ ನೀರಿನ ಮೂಲ. ದ್ವೀಪಕ್ಕೆ ತೊಡಿಸಿದಂತಿರುವ ಹುಲ್ಲಿನ ಕವಚ ನೋಡಲು ರಮ್ಯ. ಅಲ್ಲಲ್ಲಿರುವ ಹಳ್ಳಿಗಳ ಸುತ್ತಮುತ್ತ ಇರುವ ಮರಗಳನ್ನು ಬಿಟ್ಟರೆ ಅವೂ ವಿರಳ.
ಶೋಧನೆ
[ಬದಲಾಯಿಸಿ]ಡಚ್ ಅಡ್ಮಿರಲ್ ಜೇಕಬ್ ರಾಗೆವೀನ್ 1722ರಲ್ಲಿ ಈಸ್ಟರ್ ಭಾನುವಾರದಂದು ಈ ದ್ವೀಪವನ್ನು ಕಂಡುಹಿಡಿದದ್ದರಿಂದ ಇದಕ್ಕೆ ಈ ಹೆಸರು ಬಂತು. ಅದಕ್ಕೆ ಮುಂಚೆ ಈ ದೀಪದ ಜನಸಂಖ್ಯೆ ಎಷ್ಟಿತ್ತೆಂಬುದು ಗೊತ್ತಿಲ್ಲ. ಆದರೆ ಎಂದೂ ಇದು 4,000 ಕ್ಕಿಂತ ಹೆಚ್ಚಾಗಿರಲಿಲ್ಲ. ಹೊರಗಿನವರು ತಂದ ವ್ಯಾಧಿಗಳಿಂದಲೂ ಗುಲಾಮ ವ್ಯಾಪಾರಿಗಳ ಕೈಗೆ ಇಲ್ಲಿನ ಜನರು ಸಿಕ್ಕಿದ್ದರಿಂದಲೂ ತಂತಮ್ಮಲ್ಲೇ ಇವರು ಹೋರಾಡುತ್ತಿದ್ದದ್ದರಿಂದಲೂ ಇವರೆಲ್ಲನೇಕರು ಬೇರೆ ಕಡೆಗೆ ವಲಸೆ ಹೋದದ್ದರಿಂದಲೂ ಈ ದ್ವೀಪದ ಜನಸಂಖ್ಯೆ 1872ರ ವೇಳೆಗೆ 175ಕ್ಕೆ ಇಳಿಯಿತು. ಇಲ್ಲಿನ ಕೃಷೀವಲರ ಮೂಲ ಸಂಸ್ಕøತಿ ಬಹುತೇಕ ನಾಶಗೊಂಡಿತು. 1864ರಲ್ಲಿ ಇಲ್ಲಿಗೆ ಬಂದ ಕ್ರೈಸ್ತ ಪಾದ್ರಿಗಳು ಈ ಜನರನ್ನು ತಮ್ಮ ಮತಕ್ಕೆ ಪರಿವರ್ತಿಸಿದರು. 1888ರಲ್ಲಿ ಇದು ಚಿಲಿಗೆ ಸೇರಿತು. ಚಿಲಿಯನರ ಆಡಳಿತದಲ್ಲಿ ಇಲ್ಲಿನ ಸ್ಥಳೀಯ ಜನರೆಲ್ಲ ದ್ವೀಪದ ಪಶ್ಚಿಮ ಭಾಗದಲ್ಲಿರುವ ಹಂಗ-ರೋವ ಹಳ್ಳಿಯಲ್ಲಿ ನೆಲೆಸಿದರು. ಇವರ ಬೇಸಾಯಕ್ಕಾಗಿ ಮೀಸಲು ಮಾಡಿ ಉಳಿದ ನೆಲವನ್ನು ಕುರಿ ದನಗಳ ಮೇವಿಗಾಗಿ ದೊಡ್ಡ ಕಂಪನಿಯೊಂದಕ್ಕೆ ಗುತ್ತಿಗೆಗೆ ಕೊಟ್ಟಿದೆ. 1889ರಿಂದ ಈ ದ್ವೀಪದಲ್ಲಿ ಸ್ಥಳಿಕವಾಗಿ ಕುಷ್ಠರೋಗವಿದೆಯಾದರೂ ಒಟ್ಟಿನಲ್ಲಿ ಇಲ್ಲಿನವರ ಆರೋಗ್ಯ ಚೆನ್ನಾಗಿದೆ.[೧]
ಆದಿವಾಸಿದಳು
[ಬದಲಾಯಿಸಿ]ಈ ದ್ವೀಪದಲ್ಲಿ ಆದ್ಯ ನೆಲೆಸಿಗರು ಯಾರೆಂಬುದು ಖಚಿತವಾಗಿಲ್ಲ. ಇಲ್ಲಿನವರ ಮೂಲ ಪುರುಷರು ಹೋಟುಮಾಟುವ ಎಂಬವನ ನಾಯಕತ್ವದಲ್ಲಿ ಪಶ್ಚಿಮದಿಂದ ಎರಡು ದೋಣಿಗಳಲ್ಲಿ ಬಂದರೆಂದು ಪ್ರತೀತಿ ಇದೆ. ಆದರೆ ಅದಕ್ಕೆ ಮುಂಚೆ ಇಲ್ಲಿದ್ದವರು ಯಾರು, ಅನಂತರ ಬಂದವರು ಯಾರು-ಎಂಬುದೇನೂ ಗೊತ್ತಿಲ್ಲ. ಮೋಟುಕಿವಿಗರಿಗೂ ಲಂಬಕರ್ಣೀಯರಿಗೂ ನಡುವೆ ನಡೆದ ಯುದ್ಧವೊಂದರ ಕತೆ ಇಲ್ಲಿನವರಲ್ಲಿ ಕರ್ಣಾಕರ್ಣಿಕೆಯಾಗಿ ಬೆಳೆದಿದೆ. ಮುಂಚೆ ಬಂದು ಇಲ್ಲಿ ನೆಲೆಸಿದವರಿಗೂ ಅನಂತರ ಇಲ್ಲಿಗೆ ಬಂದ ವಲಸೆಗಾರರಿಗೂ ನಡುವೆ ನಡೆದ ಕಾಳಗದ ಕಥೆ ಇದಾಗಿರಬಹುದು. ಲಂಬಕರ್ಣಿಗಳ ನಾಶಕ್ಕೆ ಕಾರಣವಾಯಿತೆಂಬ ಮಣ್ಣಿನ ಒಲೆ ವಾಸ್ತವವಾಗಿ ರಕ್ಷಣಾ ಕಂಬಕವಾಗಿತ್ತೆಂದು 1956-57ರಲ್ಲಿ ನಡೆಸಿದ ಶೋಧನೆಗಳಿಂದ ವ್ಯಕ್ತವಾಗಿದೆ.[೨]
ಬುಡಕಟ್ಟುಗಳು
[ಬದಲಾಯಿಸಿ]ಭಾಷೆ ಬುಡಕಟ್ಟುಗಳ ದೃಷ್ಟಿಯಿಂದ ಈ ದ್ವೀಪವಾಸಿಗಳು ಪಾಲಿನೀಜûನರು. ಆದರೆ ಇವರ ತಲೆ ಹೆಚ್ಚು ಉದ್ದ. ಮೆಲನೀಜûನರ ಮಿಶ್ರಣದ ಫಲವೇ ಈ ವ್ಯತ್ಯಾಸ. ಇತರ ಪಾಲಿನೀಜûನ್ ದ್ವೀಪಗಳಲ್ಲಿರುವವರಿಗಿಂತ ಇಲ್ಲಿನವರಲ್ಲಿ ನೀಗ್ರೋ ಮಾದರಿಯ ಲಕ್ಷಣಗಳು ಕಡಿಮೆ. ಪಾಲಿನೀಜûನ್ ರಕ್ತಗುಣವೇ ಜಾಸ್ತಿ. ಈಚೀಚೆಗೆ ಇಲ್ಲಿ ಕಲಬೆರೆಕೆಯಾಗಿದೆ. ಮೂಲನಿವಾಸಿಗಳ ಸಂಸ್ಕøತಿಯ ಪಳೆಯುಳಿಕೆಗಳಾಗಿ ಭೂತಾಕಾರದ ನೂರಾರು ಶಿಲಾಪ್ರತಿಮೆಗಳೂ ಕಲ್ಲಿನ ಮನೆಗಳೂ ಬಂಡೆಗಳ ಮೇಲೆ ಕೊರೆದಿರುವ ಚಿತ್ರಗಳೂ ಮರದ ವಿಗ್ರಹಗಳೂ ಇನ್ನೂ ಓದಲು ಸಾಧ್ಯವಾಗದಿರುವ ಲಿಪಿಯುಕ್ತ ಮರದ ಹಲಗೆಗಳೂ ಕಾಣಸಿಗುತ್ತವೆ. ಈ ಲಿಪಿಗಳು ಮನುಷ್ಯರ ಹಾಗೂ ಹಕ್ಕಿ, ಮೀನು, ಗಿಡವೇ ಮುಂತಾದವುಗಳ ಪ್ರತೀಕ. ಎಲ್ಲವೂ ಒಂದೇ ಎತ್ತರ. ಹಲಗೆಗಳ ಎರಡು ಬದಿಯಲ್ಲೂ ಕೆತ್ತಿರುವ ಈ ಲಿಪಿಗಳ ಒಂದೊಂದು ಸಾಲು ಮುಗಿದ ಮೇಲೂ ಅದರ ಮುಂದಿನ ಸಾಲು ಆ ಕೊನೆಯಿಂದ ಹಿಂದಕ್ಕೆ ಸಾಗುತ್ತದೆ. ಆದ್ದರಿಂದ ಒಂದು ಸಾಲು ಮುಗಿದ ಮೇಲೆ ಮುಂದಿನ ಸಾಲನ್ನು ಸರಿಯಾಗಿ ಅನುಸರಿಸಬೇಕಾದರೆ ಹಲಗೆಯನ್ನು ಸಂಪೂರ್ಣವಾಗಿ ತಿರುಗಿಸಬೇಕು. ಈ ಹಲಗೆಗಳಲ್ಲಿರುವ ಹಾಡುಗಳನ್ನೂ ಕತೆಗಳನ್ನೂ ಅಲ್ಲಿನ ಮೂಲವಾಸಿಗಳು ಹೇಳುತ್ತಾರೆ. ಆದರೆ ಅವುಗಳ ನೆರವಿನಿಂದ ಈ ಲಿಪಿಗಳನ್ನು ಅರ್ಥೈಸುವುದು ಇದುವರೆಗೂ ಅಸಾಧ್ಯವಾಗಿದೆ. ಇವು ಕೇವಲ ನೆನಪಿನ ಗುರುತುಗಳಾಗಿರಬಹುದು. ಆದರೆ ಇದು ಒಂದು ಸುಸಂಬದ್ಧ ಲಿಪಿ ವ್ಯವಸ್ಥೆಯೆಂದು ಕೆಲವು ವಿದ್ವಾಂಸರ ಅಭಿಪ್ರಾಯ. [೩]
ಪುರಾತತ್ವ
[ಬದಲಾಯಿಸಿ]ಈಸ್ಟರ್ ದ್ವೀಪದಲ್ಲಿ ಲೋಹವಸ್ತುಗಳೂ ಮಡಕೆ ಕುಡಿಕೆಗಳೂ ಇಲ್ಲವೇ ಇಲ್ಲ. ಜ್ವಾಲಾಮುಖಿಯ ಗುಂಡಿಗಳಲ್ಲಿ ಮಡಕೆಯ ಮಣ್ಣೇನೋ ಧಾರಾಳವಾಗಿದೆ. ಮನೆ, ಜಗಲಿ, ಅರೆಪಿರಮಿಡ್ಡಿನಾಕೃತಿ, ದುಂಡುಗೋಪುರ, ವಿಗ್ರಹ, ಈಟಿಮೊನೆ, ಮೀನುಗಾಳ ಮುಂತಾದ ಶಿಲಾವಸ್ತುಗಳ ಪಳೆಯುಳಿಕೆಗಳಿವೆ. ಚಿಪ್ಪು ಮೂಳೆಗಳಲ್ಲಿ ಕೊರೆದ ಕೆಲ ಚಿಕ್ಕ ವಸ್ತುಗಳೂ ದೊರಕಿವೆ. ಗೋರಿಗಳಲ್ಲಿ ಸಿಕ್ಕಿರುವ ತಲೆಬುರುಡೆಗಳು ಪುರಾತನವೇನೂ ಅಲ್ಲ. ವಿಗ್ರಹಗಳು ಬಳಸಿ ನಿಂತಿರುವ ಗೋರಿ ಜಗಲಿಗಳು ಇಲ್ಲಿನ ವಿಶೇಷ. ಕರಾವಳಿಯ ಉದ್ದಕ್ಕೂ ಸುಮಾರು 260 ಇಂಥ ಜಗಲಿಗಳು ದೊರಕಿವೆ. ಕೆಲವು ಒಳನಾಡಿನಲ್ಲೂ ಇವೆ. ಅಹು ಎಂದು ಕರೆಯಲಾಗಿರುವ ಈ ವೇದಿಕೆಗಳ ವಿಗ್ರಹಗಳನ್ನೆಲ್ಲ ಉರುಳಿಸಲಾಗಿದೆ. ಇವುಗಳಲ್ಲಿ ಎಷ್ಟೋ ಒಡೆದುಹೋಗಿವೆ. ಈ ವಿಗ್ರಹಗಳೆಲ್ಲ ಹೆಚ್ಚು ಕಡಿಮೆ ಒಂದೇ ಮಾದರಿಯವು. ಈ ವಿಗ್ರಹಗಳಲ್ಲಿ ಮನುಷ್ಯ ದೇಹದ ಮೇಲ್ಭಾಗವನ್ನು ಮಾತ್ರ ಕೊರೆಯಲಾಗಿದೆ. ವಿಗ್ರಹಗಳ ಸಾಮಾನ್ಯ ಎತ್ತರ 12-20 ಅಡಿ. ಕೆಲವು ಭಾರಿ ಆಕಾರದವು. ಒಂದು ಅಪೂರ್ವ ವಿಗ್ರಹವಂತೂ 62 ಅಡಿ ಎತ್ತರವಿದೆ. ಲೋಹಗಳ ಉಪಯೋಗವೇ ತಿಳಿಯದಿದ್ದ ಜನ ಎಷ್ಟು ದೊಡ್ಡ ವಿಗ್ರಹಗಳನ್ನು ಕೆತ್ತಿ, ದೂರ ದೂರಕ್ಕೆ ಸಾಗಿಸಿ, ಕಟ್ಟೆಗಳ ಮೇಲೆ ಸ್ಥಾಪಿಸಿರುವುದು ಆಶ್ಚರ್ಯಕರವಾಗಿದೆ.