ವಿಷಯಕ್ಕೆ ಹೋಗು

ಈಸ್ಕಿಲಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಸ್ಕಿಲಸ್ : - (ಕ್ರಿ. ಪೂ. 525-456) : ಪ್ರಾಚೀನ ಗ್ರೀಸಿನ ನಾಟಕ ಸಾಹಿತ್ಯ ಕರ್ತೃತ್ರಯ ಶಿಖಾಮಣಿಗಳಲ್ಲಿ ಒಬ್ಬ. ಈತ ಹುಟ್ಟಿದ್ದು ಅಥೆನ್ಸಿನ ಹತ್ತಿರದಲ್ಲಿದ್ದ ಎಲ್ಯೂಸಿಸ್ ಗ್ರಾಮದಲ್ಲಿ ದೊಡ್ಡ ವಂಶಕ್ಕೆ ಸೇರಿದವ. ಪರ್ಷಿಯಾದೊಡನೆ ಕ್ರಿ. ಪೂ. 400ರಲ್ಲೂ ನಡೆದ ಯುದ್ಧಗಳಲ್ಲಿ ಭಾಗವಹಿಸಿದ್ದ. ತನಗಾಗಿ ಅವನೇ ಬರೆದುಕೊಂಡ ಒಂದು ಸಮಾಧಿಲೇಖವಿದೆ. ಅದರಲ್ಲಿ ತನ್ನ ಕಲಿತನವನ್ನು ಹೊಗಳಿಕೊಂಡಿದ್ದಾನೆಯೇ ಹೊರತು ಕವಿತೆಗಳನ್ನು ಪ್ರಸ್ತಾಪಿಸಿಯೇ ಇಲ್ಲ. ಸರ್ವಾಧಿಕಾರಿ ಹೈರಾನನ ಆಹ್ವಾನದ ಮೇಲೆ ಕೆಲವು ಬಾರಿ ಸೈರಕ್ಯೂಸಿಗೆ ಹೋಗಿಬಂದ. ಸಿಸಿಲಿ ದ್ವೀಪದ ಗೆಲ ಎಂಬ ಕಡೆ ಅವನಿಗೆ ಮರಣ ಪ್ರಾಪ್ತಿಸಿತು. ದಂತಕಥೆಯೊಂದು ಹೇಳುವಂತೆ, ಹೊರಗಡೆ ಕುಳಿತುಕೊಂಡಿದ್ದಾಗ ಮೇಲೆ ಹಾರುತ್ತಿದ್ದ ಹದ್ದು ಅವನ ಪಟ್ಟು ಹಿಡಿದ ತಲೆಯನ್ನು ಬಂಡೆಯೆಂದು ಬಗೆದು ತಾನು ಹಿಡಿದು ತಂದಿದ್ದ ಆಮೆಯನ್ನು ಅವನ ನೆತ್ತಿಗೆ ಬೀಳಿಸಿತಂತೆ! ಪ್ರಾಯಶಃ ಈಸ್ಕಿಲಸ್ ಪೂಜಾರಿಗಳ ಮನೆತನಕ್ಕೆ ಸೇರಿದವನಿರಬೇಕು. ಒಮ್ಮೆ ಆರಾಧನಾ ರಹಸ್ಯವನ್ನು ರಟ್ಟು ಮಾಡಿದನೆಂಬ ಅಪಾದನೆಯನ್ನು ಹೊರಿಸಿ ಅವನನ್ನು ನ್ಯಾಯಸ್ಥಾನಕ್ಕೆ ಎಳೆದಿದ್ದರಂತೆ, ಆ ಅಪರಾಧ ತನ್ನಿಂದ ಆಗಿಲ್ಲವೆಂದು ಆತ ರುಜುವಾತು ಕೊಟ್ಟು ಬಿಡುಗಡೆ ಹೊಂದಿದನಂತೆ.

ಪ್ರಾಚೀನರ ಅಭಿಮತದಂತೆ, ಈಸ್ಕಿಲಸ್ ರುದ್ರನಾಟಕದ (ಟ್ರ್ಯಾಜೆಡಿ; ಗಂಭೀರ ನಾಟಕ) ಎರಡನೆಯ ಸಂಸ್ಥಾಪಕ, ಥೆಸ್ಪಸ್ ಮೊದಲನೆಯವ. ಆದರೆ ಥಸ್ಪಿಸ್ ಕಂಡುಹಿಡಿದು ಪ್ರಯೋಗಕ್ಕೆ ತಂದ ಕಲಾಕೃತಿ ಯಥಾರ್ಥವಾಗಿ ಹೀತ-ನಾಟ್ಯ, ನಿಜವಾದ ಅರ್ಥದಲ್ಲಿ ರುದ್ರನಾಟಕವಲ್ಲ. ತರುವಾಯ ಬಂದ ಫ್ರೀನಿಕಸ್ಸನ ಕೈಯಲ್ಲೂ ಕೃತಿ ಮುಖ್ಯಾಗಿ ಗೀತ-ನಾಟ್ಯವಾಗಿಯೇ ಉಳಿದಿತ್ತು. ವಸ್ತುಸಂವಿಧಾನ, ಪಾತ್ರಕಲ್ಪನೆ, ಭಾವಾರ್ಥ, ಪ್ರದರ್ಶನ ಕ್ರಮವೆಲ್ಲದರಲ್ಲೂ ಬಹಳ ಬದಲಾವಣೆಯನ್ನು ಕೂಡಿಸಿಕೊಟ್ಟು, ಖಚಿತವಾದ ಅರ್ಥದಲ್ಲಿ ರುದ್ರ ನಾಟಕವನ್ನು ಸೃಷ್ಟಿಸಿದಾತ ಈಸ್ಕಿಲಸ್. ಅವನೂ ಪ್ರಾರಂಭದಲ್ಲಿ ತನ್ನ ಹಿಂದಿನವರ ಹೆಜ್ಜೆಯನ್ನೇ ಅನುಸರಿಸಿದ. ಬರಬರುತ್ತ ನಾಟಕದ ಸ್ವಾರಸ್ಯ ಇರುವುದು ನೇಪಥ್ಯದ ಮೇಲೆ ಜರುಗುವ ಸಂವಾದದಲ್ಲಿ; ನಾಟಕಾಲಯದ ಅಂಗಳದಲ್ಲಿ ನಡೆಯುವ ಸಂಗೀತ ನೃತ್ಯಗಳಲ್ಲಿ ಅಲ್ಲ—ಎಂಬುದನ್ನು ಆತ ಚೆನ್ನಾಗಿ ಮನಗಂಡ. ಅವನಿಂದ 90 ನಾಟಕಗಳು ರಚಿತವಾದುವಂತೆ; ಅವುಗಳಲ್ಲಿ ಏಳು ಉಳಿದು ಬಂದಿವೆ. ಈ ಏಳರ ಮೂಲಕವೇ ಅವನ ಬೆಳೆವಣಿಗೆಯನ್ನು ನಾವು ಗ್ರಹಿಸಬಹುದು. ಅವನ ಪ್ರಥಮ ವಿರಚನಿಗಳಲ್ಲಿ ಒಂದಾದ ದಿ ಸಪ್ಲಿಯಾಂಟ್ಸ್ (ಆಶ್ರಮ ಯಾಚಕಿಯರು) ಎಂಬ ರೂಪಕದಲ್ಲಿ ಸಂಗೀತ ಭಾಗ ಐದನೆಯ ಮೂರರಷ್ಟು. ಮಧ್ಯದ ಕೃತಿಗಳಲ್ಲಿ ಒಂದಾದ ದಿ ಪರ್ಷಿಯನ್ಸ್ (ಪರ್ಷಿಯನ್ನರು) ಎಂಬುದರಲ್ಲಿ ಅರ್ದದಷ್ಟು; ಕಡೆಯ ಕವಿತೆಯಲ್ಲಿ ಒಂದಾದ ಮಂಗಳ ದೇವಿಯರು ಎಂಬುದರಲ್ಲಿ ಐದನೆಯ ಎರಡರಷ್ಟು, ಕೋರಸ್ ಎಂಬ ನೃತ್ಯ-ಮೇಳವನ್ನು ಸಂಪೂರ್ಣವಾಗಿ ತೆಗೆದು ಹಾಕಿ ನಾಟಕವನ್ನು ನಾಟಕವಾಗಿಯೇ ನಿರ್ಮಿಸುವ ಧೈರ್ಯ ಯಾವ ಕವಿಗೂ ಬರಲಿಲ್ಲ. ಏತಕ್ಕೆಂದರೆ ನಾಟಕ ಎದ್ದು ಬಂದದ್ದು ನೃತ್ಯಮೇಳದಿಂದ. ನೃತ್ಯಮೇಳ ಡಯೊನೀರಸ್ ದೇವತೆಯ ಆರಾಧನೆಯ ಅಂಗವಾಗಿತ್ತು. ವಿಶೇಷ ಎದೆಗಾರಿಕೆ ಯೂರಿಪಿಡಿಸ್ ಕೂಡ ತನ್ನ ರುದ್ರನಾಟಕದಲ್ಲಿ ಸಂಗೀತ-ನಾಟ್ಯಕ್ಕೆ ಹತ್ತನೆಯ ಒಂದರಷ್ಟು ಜಾಗ ಕೊಟ್ಟಿದ್ದಾನೆ.

ಈಸ್ಕಿಲಸ್ ಬರುವವರೆಗೂ ಒಬ್ಬನೇ ನಟ ಇರುತ್ತಿದ್ದ. ನೃತ್ಯಕೂಟದೊಡನೆಯೇ ನಟನ ಸಂಭಾಷಣೆ ಆಗಬೇಕಾಗಿತ್ತು. ಪ್ರೇಕ್ಷಕರ ಲಕ್ಷ್ಯ ನೃತ್ತವರ್ತುಲ ಮತ್ತು ನೇಪಥ್ಯ ಎರಡರ ಮೇಲೂ ಜೊತೆ ಜೊತೆಯಾಗಿ ಹಾಯಬೇಕಾಗಿತ್ತು. ಎರಡನೆಯ ನಟನನ್ನು ಉಪಯೋಗಿಸಿಕೊಳ್ಳಲಾರಂಭಿಸಿದ. ನಾಟಕದ ಘಟನಾವಳಿಯನ್ನು ಅರುಹುವ ಮತ್ತು ಮುಂದುವರಿಸುವ ಸಂವಾದ ಆ ಎರಡು ಪಾತ್ರಗಳಿಂದಲೇ ಆಗುವ ಅವಕಾಶ ಒದಗಿ ಬಂತು. ನೋಟಕರ ಗಮನವೂ ಹೆಚ್ಚು ಹೆಚ್ಚಾಗಿ ಅವರಿಬ್ಬರ ಕಡೆಗೆ ತಿರುಗಹತ್ತಿದವು. ನಾಟ್ಯರಂಗಕ್ಕಿಂತ ನಾಟಕರಂಗಕ್ಕೆ ಪ್ರಾಧಾನ್ಯ ಅಧಿಕವಾಯ್ತು. ಇನ್ನೊಂದು ಸುಂದರ ಬದಲಾವಣೆಯೂ ಈಸ್ಕಿಲಸ್ಸನಿಂದ ಏರ್ಪಾಟಾಯಿತು. ನೃತ್ಯಮೇಳದ ಸಂಖ್ಯೆಯನ್ನು ಐವತ್ತರಿಂದ ಹನ್ನೆರಡಕ್ಕೆ ಈತ ಇಳಿಸಿದ. ಕಲಾತ್ಮಕವಾದ ಪ್ರಗತಿಯನ್ನು ಸಾಧಿಸುತ್ತ ಹೋಗುವುದೇ ಅವನ ಹೆಬ್ಬಯಕೆಯಾಗಿತ್ತೆಂದು ತೋರುತ್ತದೆ. ಮೊದಮೊದಲು ಅನೇಕ ಯಂತ್ರ ಸೌಕರ್ಯಗಳನ್ನು ತಯಾರಿಸಿಕೊಂಡು ಅವುಗಳ ಸಹಾಯದಿಂದ ಅನುಕಾರ್ಯರನ್ನು ಆಕಾಶದಿಂದ ಕೆಳಕ್ಕೆ ಇಳಿಸುವುದು, ನೃತ್ಯಕೂಟ ನೆಲದಿಂದ ಮೇಲಕ್ಕೆದ್ದು ಈ ಕಡೆಯಿಂದ ಆ ಕಡೆಗೆ ಹಾರಿ ಹೋಗುವಂತೆ ಎಸಗುವುದು. ಗುಡ್ಡದ ಒಂದು ಭಾಗ ಇದ್ದಕ್ಕಿದ್ದಂತೆ ಪಾತಾಳಕ್ಕೆ ಉರುಳಿ ಬೇಳುವಂತೆ ತೋರಿಸುವುದು. ಇತ್ಯಾದಿ ಅದ್ಭುತಗಳನ್ನು ಪ್ರದರ್ಶಿಸಿದರೆ ರುದ್ರನಾಟಕ ಕಳೆಯೇರುವುದೆಂದು ಅವನ ಭಾವನೆ. ಕ್ರಮೇಣ ಅಂಥ ವ್ಯಾಪಾರವೆಲ್ಲ ನಾಟಕಕ್ಕೆ ಕೇವಲ ಬಾಹ್ಯಾಂಶ, ಅಮುಖ್ಯ ಎಂಬ ಸತ್ಯ ಅವನ ಮನಸ್ಸಿಗೆ ಅಂಟಲಾರಂಭಿಸಿತು. ನಾಟಕದ ಅಂತಃಸತ್ತ್ವ ಇರುವುದು ಪಾತ್ರಗಳಲ್ಲಿ, ಘಟನೆಗಳಲ್ಲಿ—ಎಂದು ಅವನು ನಿಶ್ಚಯಿಸಿಕೊಂಡ. ಅಗಾಧ ಸಾಮಥ್ರ್ಯದ ಪ್ರಚಂಡ ವ್ಯಕ್ತಿಗಳನ್ನು ಕಡೆದು ನಿಲ್ಲಿಸಿದ. ಮಾನವ ಜೀವನದ ಹಾಸು ಹೊಕ್ಕಾಗಿರುವ ಹೋರಾಟ, ಅಪಘಾತಭೀತಿ, ದುಃಖ, ದೈವಬಲ-ಪರುಷಪ್ರಯತ್ನಗಳ ರುದ್ರತೋರ್ಕೆಗಳನ್ನು ಎದೆಯಲ್ಲಿ ನಾಟುವಂತೆ ನಿರೂಪಣೆಗೈದ. ಧೈರ್ಯಸ್ಥೈರ್ಯದ ಆಶಾವಾದಿತ್ವವನ್ನು ಬೋಧಿಸುವ ಒಂದು ಘನಗಾಂಭೀರ್ಯವನ್ನು ಪ್ರಚುರಗೊಳಿಸಿದ. ಹೀಗೆ ರುದ್ರನಾಟಕವನ್ನು ಮಹೋನ್ನತಿಗೆ ಏರಿಸಿ, ಆಗ ಜನರಂಜಕವಾಗಿದ್ದ ಭವ್ಯಕಾವ್ಯದೊಂದಿಗೆ (ಎಪಿಕ್ ಪೊಯಟ್ರಿ) ಅದು ಸ್ಪರ್ಧೆ ನಿಲ್ಲುವಂತೆ ಚೈತನ್ಯ ತುಂಬಿಕೊಟ್ಟ.. ಸರ್ವಾಧಿಕಾರಿ ಪೈಸಿಸ್ಟ್ರ್ಯಾಟಸನ ಒತ್ತಾಯದಿಂದಲೂ ಪರಿಪೋಷಣೆಯಿಂದಲೂ ಅಥೆನ್ಸಿನಲ್ಲಿ ಸಾಂಸ್ಕøತಿಕ ಪುನರುಜ್ಜೀವನ ಉಂಟಾಯಿತು. ಪುರಾತನ ಮಹಾಕವಿಗಳಾದ ಹೋಮರ್ (ಕ್ರಿ.ಪೂ. 8ನೆಯ ಶತಮಾನ) ಮತ್ತು ಹಿಸಿಯಡ್ (ಕ್ರಿ. ಪೂ. 7ನೆಯ ಶತಮಾನ) ಬಿಟ್ಟುಹೋದ ಕಾವ್ಯಗಳನ್ನು ಗಮಕಿಗಳು ವಾಚನ ಮಾಡತೊಡಗಿದರು. ಜನರು ಉಲ್ಲಾಸದಿಂದ ಕೇಳತೊಡಗಿದರು. ಆದಿಕಾಲದ ಗ್ರೀಕರ ಪುರಾಣ ಕಥಾವಳಿಗಳ ಪರಿಚಯ ಎಲ್ಲರಿಗೂ ಸಿಕ್ಕಿತು. ಆದರೆ ಆ ಕಥಾಸಮೂಹದಲ್ಲಿ ದೇವತೆಗಳ ನಡೆವಳಿಕೆಯಾಗಲಿ ಮನುಷ್ಯರ ವರ್ತನೆಯಾಗಲಿ ದೋಷರಹಿತವಾಗಿರಲಿಲ್ಲ. ದೇವತೆಗಳೂ ವಿಷಯತೃಷ್ಣೆಗಳ ದಾಸರೇ. ಮನುಷ್ಯರಂತೂ ಸ್ವಾರ್ಥ, ಸ್ವೇಚ್ಛೆ, ದುರಂಹಕಾರ, ದುರ್ಬುದ್ದಿಗಳಿಂದ ಕೂಡಿದವರು. ನರರನ್ನು ಕಾಡಿ ಪೀಡಿಸುತ್ತ ಅವರ ನರಳಾಟವನ್ನು ನೋಡುತ್ತ ನಗುವುದೇ ದೇವತೆಗಳ ಕೆಲಸ. ನರರನ್ನು ಕಂಡು ಅವರಿಗೆ ಅಸೂಯೆ. ನರರು ಎಲ್ಲಿ ಸೌಖ್ಯದಲ್ಲಿದ್ದುಬಿಟ್ಟಾರೊ ಎಂದು ಮತ್ಸರಿಸಿ, ಅವರಿಗೆಮದಾಂಧತೆಯನ್ನು ಕೊಟ್ಟು, ಅವರು ದುರ್ಧೈರ್ಯದಿಂದ, ಏನೊಂದನ್ನೂ ಲೆಕ್ಕಿಸದೆ ಅನ್ಯಾಯಗಳನ್ನು ಹೊಡುವಂತೆ ಮಾಡಿ, ಅವರ ಆಕಸ್ಮಿಕ ಪತನಕ್ಕೆ ಕಾರಣರಾಗುತ್ತಾರೆ—ದೇವತೆಗಳು. ಭೂಮಿಯಲ್ಲಿ ಹುಟ್ಟಿ ಬಂದವನಿಗೆ ಕುಗ್ಗದ ಸಂಕಟವೇ ಜೋಡಿ. ಇಂಥ ಅನೇಕ ಮೂಢನಂಬಿಕೆಗಳು ಗ್ರೀಕ್ ಜನತೆಯಲ್ಲಿ ಬೇರೂರಿದ್ದವು. ಕವಿಗಳಿಲ್ಲರೂ ಪುರಾತನ ಕಥೆಗಳನ್ನೇ ಆಧಾರವಾಗಿ ಬಳಸಿಕೊಳ್ಳಬೇಕಾಗಿತ್ತು. ವಾಸ್ತವಿಕವೂ ಸಮಕಾಲೀನವೋ ಆದ ಸಂಗತಿಗಳನ್ನು ಕುರಿತು ರೂಪಕ ರಚಿಸುವುದು ಗ್ರೀಕರಿಗೆ ಹೆಡಿಸುತ್ತಿರಲಿಲ್ಲ. ಆದರೂ ಕವಿಗೆ ಬೇರೊಂದು ವಿಧದಲ್ಲಿ ಅಪಾರ ಸ್ವಾತಂತ್ರ್ಯ ಇರುತ್ತಿತ್ತು. ಅರಿಸಿಕೊಂಡ ಘಟನಾವಳಿಯಲ್ಲಿ ಪ್ರಧಾನ ಅಂಶಗಳಲ್ಲಿ ಪಲ್ಲಟಗೊಳಿಸದೇ ಇಟ್ಟುಕೊಂಡರೆ ಸಾಕು. ವಿವರಗಳಲ್ಲೂ ಅಥಾಸರಣಿಯ ವ್ಯವಸ್ಥೆಯಲ್ಲೂ ಸೂಚಿತವಾಗುವ ಸಿದ್ಧಾಂತದಲ್ಲೂ ತನ್ನ ಇಚ್ಚೆಗೆ ಅನುಗುಣವಾಗಿ ಕವಿ ವ್ಯತ್ಯಾಸ ಮಾಡಿಕೊಳ್ಳಬಹುದಾಗಿತ್ತು. ಹಾಗೆ ತನ್ನ ಪಾಲಿಗೆ ಬಂದ ಸ್ವಾತಂತ್ರ್ಯವನ್ನು ಈಸ್ಕಿಲಸ್ ಜವಾಬ್ದಾರಿಯಿಂದ ರೂಢಿಸಿಕೊಂಡ. ಹೇಗೆ ಹೇಗೋ ಹೋಗಿದ್ದ ಉಪಾಖ್ಯಾನಗಳನ್ನು ಕಾರ್ಯಕಾರಣಸಂಬಂಧ ಕೆಡದಂಥ ವಿನ್ಯಾಸಕ್ಕೆ ಅಚ್ಚುಕಟ್ಟಾಗಿ ಹೊಂದಿಸಿ, ಕಟುಕ ಕೃತ್ಯಗಳ ರೌದ್ರತೆಯನ್ನು ಮುಸುಳಿಸಿ ಗಹನ ಗಂಭೀರ ವಿದ್ಯಮಾನಗಳ ಬಣ್ಣವನ್ನು ಅವಕ್ಕೆ ಲೇಪಿಸಿ, ದೇವತೆಗಳು ನಿಷ್ಕಳಂಕಿಗಳೆಂಬ ಮತವನ್ನು ಉಚ್ಚರಿಸುತ್ತ, ದುಗುಡ, ಹತಾಶೆಗಳ ಬದಲು ಹರ್ಷ, ಆಸಿಗಳನ್ನುಮನುಷ್ಯ ತಾಳುವಂತೆ ಹುರಿದುಂಬಿಸಿದ ದಾರಿ ತೋರಿಕೊಟ್ಟ..

ಜನಪದಕ್ಕೆ ಪರಿಚಿತವಾಗಿದ್ದ ಈ ಕಥಾವಳಿಯನ್ನು ಭಾವಿಸಿ, ದೇವತೆಗಳನ್ನು ಪರಿಕ್ಷಿಸುವ ದುರ್ಬಯಕೆಯಿಂದ ಟ್ಯಾಂಟಲಸ್ ಅವರನ್ನು ಊಟಕ್ಕೆ ಕರೆದು, ಮಗ ಪೀಲಾಪ್ಸನ ಮಾಂಸವನ್ನು ಬೇಯಿಸಿ ಅವರ ಮುಂದಿಟ್ಟ; ಪಾಪದ ಫಲವನ್ನು ನರಕದಲ್ಲಿ ಉಂಡ. ಪೀಲಾಪ್ಸ್ ತನ್ನ ಪ್ರತಿಸ್ಪರ್ದಿಯ ಸಾರಥಿಯ ಸಹಾಯದಿಂದ ರಾಜಪುತ್ರಿಯನ್ನು ಮದುವೆಯಾಗಿ, ಆ ಸಾರಥಿಗೆ ವಾಗ್ದಾನವಿತ್ತಿದ್ದ ಅರ್ದ ರಾಜ್ಯವನ್ನು ಕೊಡದೆ, ಅವನನ್ನು ಸಮುದ್ರಕ್ಕೆ ತಳ್ಳಿ ಸಾಯಿಸಿದ; ತಾನೂ ಅಧೋಗತಿಯನ್ನು ಪಡೆದ. ಪೀಲಾಪ್ಸನೆಗೆ ಇಬ್ಬರು ಕುಮಾರರು: ಅಟ್ರಿಯಸ್, ಥಯೇಸ್ಟೀಸ್. ಆರ್ಗಾಸಿನ ಸಿಂಹಾಸನದ ವಿಚಾರವಾಗಿ ಅವರಿಬ್ಬರ ಮಧ್ಯೆ ಇದ್ದ ಘೋರಮನಸ್ಥಾಪ ಉಲ್ಬಣವಾಯ್ತು. ಅತ್ತಿಗೆಯಾದ ಈರೋಪೆಯನ್ನು ಥಯೆಸ್ಟೀಸ್ ಕೆಡಿಸಿದ. ಆಟ್ರಿಯಸ್ ಅವನನ್ನು ದೇಶದಿಂದ ಹೊರಕ್ಕೋಡಿಸಿ ಈರೋಪೆಯನ್ನು ಕಡಲಿನಲ್ಲಿ ಮುಳುಗಿಸಿದ. ಕಣಿವಾಕ್ಯಕ್ಕೆ ತಲೆಬಾಗಿದಂತೆ ನಟಿಸುತ್ತ, ತಮ್ಮನನ್ನು ತನ್ನಲ್ಲಿಗೆ ಕರೆಸಿಕೊಂಡು, ಅವನ ಎರಡು ಕೂಸುಗಳನ್ನು ವಧಿಸಿ, ಆ ಮಾಂಸವನ್ನು ನಿರ್ಭಾಗ್ಯ ಥಯೆಸ್ಟೀಸನಿಗೆ ತಿನ್ನಿಸಿದ. ಥಯೆಸ್ಟೀಸ್ ಪಲಾಯನ ಗೈದು, ಅಟ್ರಿಯಸ್ಸನ ಮಗ ಪ್ಲಿಸ್ತಿನೀಸನ್ನು ತಂದೆಯ ಮೇಲೆ ಎರಗುವಂತೆ ಪ್ರೇರೇಪಿಸಿದ; ಆದರೆ ಆಟ್ರಿಯಸ್ ವೇಷ ಬದಲಾಯಿಸಿ ಕೊಂಡಿದ್ದ ಪ್ಲೀಸ್ತಿನೀಸನ್ನು ಸುತನೆಂದು ತಿಳಿಯದೆ ಕತ್ತಿಗೆ ಅಹುತಿ ಮಾಡಿದ. ಪಾತಕಗಳನ್ನು ನೆನೆಯುತ್ತ, ಎಸಗುತ್ತ ಇಬ್ಬರೂ ಸತ್ತರು. ಆಟ್ರಿಯಸ್ಸನ ತನುಜರೇ ಆಗಮೆಮ್ನಾನ್ ಮತ್ತು ಮೆನಿಲಾಸ್. ಥಯೆಸ್ಟೀಸನ ತನುಜ ಈಜಿಸ್ತಸ್. ಪ್ರಪಂಚದಲ್ಲೆಲ್ಲ ಅತ್ಯಂತ ತೂಪವತಿಯಾಗಿದ್ದ ಹೆಲನ್ ಮಡನಿಲಾಸನ ಹೆಂಡತಿಯಾದಳು. ಅತಿಥಿಯಾಗಿ ಬಂದ ರಾಜಕುಮಾರ ಪ್ಯಾರಿಸ್ ಅವಳನ್ನು ಒಲಿಸಿಕೊಂಡು ಅವಳೊಡನೆ ತನ್ನ ತಂದೆಯ ರಾಜಧಾನಿ ಟ್ರಾಯ್‍ಗೆ ಹಿಂತಿರುಗಿದ. ಗ್ರೀಸಿನ ಯೋಧರು ಒಟ್ಟುಗೂಡಿ, ಟ್ರಾಯ್‍ಗೆ ಮುತ್ತಿಗೆ ಹಾಕಿ, ಹತ್ತು ವರ್ಷ ಒಂದೇಸಮನೆ ಕಾದಾಡಿ. ಕೊನೆಗೆ ಟ್ರೋಜನರನ್ನೂ ಅವರ ಚಕ್ರಾಧಿಪತ್ಯವನ್ನೂ ಹಾಳು ಮಾಡಿದರು. ಗ್ರೀಕರ ಮಹಾದಂಡ ನಾಯಕ ಅಗಮೆಮ್ನಾನ್, ಈ ಮಧ್ಯೆ ಈಜಿಸ್ತಸ್ ಸೇಡಿಗಾಗಿ ಸಮಯ ಹೊಂಚುತ್ತಿದ್ದು, ಆರ್ಗಾಸಿಗೆ ಬಂದು, ಅಗಮೆಮ್ನಾನನ ಪತ್ನಿ ಕ್ಲೈಟಮ್ನೆಸ್ಟ್ರಳಿಗೆ ಉಪಪತಿಯಾದ. ಗಂಡನ ಮೇಲೆ ಕ್ಲೈಟಮ್ನೆಸಟ್ಪ್ರಳಿಗೂ ರೋಷವಿತ್ತು. ಅವಳಿಗೆ ಸುಳ್ಳು ಹೇಳಿ ಮಗಳಾದ ಇಫಿಜೀನಿಯಳನ್ನು ಬರಮಾಡಿಕೊಂಡು ದೇವತೆಯ ಸಿಟ್ಟನ್ನು ಶಮನಗೈಯಲೋಸುಗ ತಾಯ ಕಣ್ಣೆದುರಿಗೇ ಅವಳನ್ನು ಬಲೆಕೊಟ್ಟಿದ್ದ. ಜಗಜ್ಜೇತನಾಗಿ ಅಗಮೆಮ್ನಾನ್ ಹಿಂತಿರುಗಿದ ಕೋಡಲೇ ಅವನ ಭಾರ್ಯೆಯೂ ಅವಳ ನಲ್ಲನೂ ಅವನನ್ನೂ ಸ್ನಾನಗೃಹದಲ್ಲಿ ಉಡುಪಿನಾಕಾರದ ಬಲೆಯಲ್ಲಿ ಸಿಕ್ಕಿಸಿಕೊಂಡು, ಖಡ್ಗದಿಂದ ಇರಿದುಕೊಂದರು. ಅನೇಕ ಸಂವತ್ಸರಗಳ ತರುವಾಯ ಅಗಮೆಮ್ನಾನನ ಸುತನಾದ ಒರೆಸ್ಟೀಸ್ ಸ್ವದೇಶಕ್ಕೆ ಹಿಂತಿರುಗಿ, ಅಕ್ಕಳಾದ ಎಲೆಕ್ಟ್ರಳ ನೆರವಿನಿಂದ ತಾಯಿಯನ್ನೂ ಅವಳ ಜಾರನನ್ನೂ ಹತ್ಯೆಗೈದ. ಮಾತೃವಧೆಯ ದುಷ್ಕøತ್ಯಕ್ಕಾಗಿ ಅವನು ಎಷ್ಟೋಕಾಲ ದೇಶಭ್ರಷ್ಟನಾಗಿ ಅಲೆದು, ನರಳಿ, ಕೊನೆಗೆ ಅಥೀನ ದೇವಿಯ ಕೃಪೆಯಿಂದ ಪಾಪಲೇಪನವನ್ನು ಕಳೆದುಕೊಂಡು, ಆರ್ಗಾಸಿಗೆ ಅರಸಾಗಿ ಬಹುಕಾಲ ಬಾಳಿದ.

ವಂಚನೆ, ವಚನಭಂಗ, ದೈವದ್ರೋಹ, ಮತ್ತಗರ್ವ, ವ್ಯಭಿಚಾರ, ಅಕ್ರಮಕೂಟ, ಕ್ರೌರ್ಯ, ಕಗ್ಗೊಲೆ — ಈ ಕುಲದವರಿಗೆ ಇದನ್ನು ಮಾಡಬೇಕು. ಇದನ್ನು ಮಾಡಕೂಡದು ಎಂಬ ಭೇಧವೇ ಇಲ್ಲ. ಇದೊಂದು ಪಾಪಿಷ್ಠ ವಂಶ: ಬಾನಿನವರ ಉಗ್ರಶಾಪ ಇವರ ಹೆಡತಲೆಯ ಮೇಲೆ ಕುಳಿತಿರುತ್ತಿತ್ತು. ಹೆಣ್ಣು ಗಂಡುಗಳೆಲ್ಲರೂ ದೌರ್ಜನ್ಯ ಎಸಗಲೇ ಬೇಕು, ದುರ್ಮರಣವನ್ನು ಉಣ್ಣಲೇ ಬೇಕು. ದುರ್ಗತಿಗೆ ಇಳಿಯಲೇ ಬೇಕು.

ಇಂಥ ಮೈನವಿರೇಳಿಸುವ ವೃತ್ತಾಂತವನ್ನು ತೆಗೆದುಕೊಂಡು ಈಸ್ಕಿಲಸ್ ಇಡೀ ಜಗತ್ತಿನ ರಸಜ್ಞರು ಮೆಚ್ಚಿ ತಲೆದೂಗುವಂಥ ರೂಪಕತ್ರಯವನ್ನು (ಟ್ರಿಲೊಜಿ) ನಿರ್ಮಿಸಿದ. ಅದೇ ಒರೆಸ್ಟಿಯ ಎಂಬ ಶಾಶ್ವತ ಸಾಹಿತ್ಯ. ಅಂದಚಂದದ ಮೂಲಕ ಚತುರ ಕಥೆಯನ್ನು ಹೇಳಿ, ಚಿತ್ತಾಹ್ಲಾದ ಕೊಡುವುದೊಂದೇ ಆಗಿರಲಿಲ್ಲ, ಕವಿಯ ಅಭೀಷ್ಟ. ದೇವತೆಗಳಾರು, ಮಾನವನ ಕರ್ತವ್ಯವೇನು, ಕೇಡು ತಟ್ಟುವುದು ವ್ಯಕ್ತಿಯ ಕೆಟ್ಟ ನಡತೆಯಿಂದಲ್ಲವೆ, ಮಿತವನ್ನು ಅರಿತವ ಸುಖದಲ್ಲಿರಲಾರನೆ-ಇತ್ಯಾದಿ ಧಾರ್ಮಿಕ ಮತ್ತು ನೈತಿಕ ತತ್ತ್ವಗಳನ್ನು ಕಾವ್ಯಸಮ್ಮಿತಿಯಿಂದ ಘೋಷಿಸುವುದೇ ಅವನ ಗಾಢಾಪೇಕ್ಷೆ, ಪೀಲಾಪ್ಸರವರಗೆ ಹೋಗುವುದು ಬೇಕಾಗಲಿಲ್ಲ-ಈಸ್ಕಿಲಸ್ಸಿಗೆ. ಅಟ್ರಿಯಸ್ ಥಯೆಸ್ಟೀಸನಿಗೆ ಉಣ್ಣಿಸಿದ ಭಯಂಕರ ಭೋಜನದಿಂದಲೇ ಅವನ ನೋಟಕ್ಕೆ ರುಧಿರೇತಹಾಸದ ಪ್ರಾರಂಭ. ಅಟ್ರಿಯಸ್ಸನ ರಕ್ಕಸತನದ ಫಲವಾಗಿ ಅವನ ಔರಸಪುತ್ರ ಅಗಮೆಮ್ನಾನನ ಆಂತರ್ಯದಲ್ಲಿ ಅನುವಂಶಿಕವಾದ ಪಾಪಬೀಜ ನೆಟ್ಟಿತು, ನಿಜ. ಸಮರದಿಂದ ಹಿಂತಿರುಗಿದ ಕೂಡಲೆ ಓಡಿನಲ್ಲಿ ಹೆಂಡತಿಯ ಕೈಯಿಂದ ಅಸಹ್ಯ ಪೆಟ್ಟನ್ನು ಅವನು ಪಡೆಯುವುದೇತಕ್ಕೆ ? ತಂದೆ ಹೊತ್ತ ಸಾಲವನ್ನು ಮಗ ತೀರಸಬೇಕಾದ್ದರಿಂದಲೇ ಈಸ್ಕಿಲಸ್ ಹಾಗಲ್ಲ ಎನ್ನುತ್ತಾನೆ, ಅವನ ಹೇಳಿಕೆ ಈ ರೀತಿ ತಂದೆ ತಾಯಿಗಳಿಂದ ಮಕ್ಕಳಿಗೆ ಇಳಿದು ಬರುವುದು ದುರಾಚಾರದ ಪ್ರಚೋದನೆ, ದುರಾಚಾರವಲ್ಲ. ಆ ಪ್ರಚೋದನೆಯನ್ನು ಅವರು ಬೆಳೆಸಿಕೊಂಡು ತಾವೂ ದುರಾಚಾರಿಗಳಾಗಬಹುದು ಅಥವಾ ಅದನ್ನು ವಿರೋಧಿಸಿ ಗೆದ್ದು ಸದಾಚಾರವನ್ನು ಹಿಡಿಯಬಹುದು. ಶಾಪವಿದೆ ನಿಶ್ಚಯ, ಆದರೆ ವ್ಯಕ್ತಿಯ ಸ್ವಂತಸಂಕಲ್ಪವೂ ಅನುಗೂಡದಿದ್ದರೆ ಶಾಪ ಏನನ್ನೂ ಮಾಡಲಾರದು. ಎಂಥ ಪಾತಕ ಕುಲದಲ್ಲಿ ಜನಿಸಿ ಬಂದಿರಲಿ ವ್ಯಕ್ತಿಮನಸ್ಸು ಮಾಡಿದರೆ ಪಾಪಾಚರಣೆಯ ಸರಪಣಿಯನ್ನು ತುಂಡರಿಸುವುದು ಸಾಧ್ಯ. ಆಗಮೆಮ್ನಾನ್ ಕೈ ಹಿಡಿದ ಹೆಂಡತಿಯೇ ಸಟೆ ಹೇಳಿದ, ಮೋಸ ಮಾಡಿದ, ಅಕಿಲೀಸನಿಗೆ ಪಾಣಿಗ್ರಹಣ ಮಾಡಿಸುತ್ತೇನೆಂದು ಭರವಸೆ ಕಳಿಸಿದ, ಸತಿಯೂ ಸುತೆಯೂ ಬಂದೊಡನೆ ಅರ್ಟೆಮಿಸ್ ದೇವತೆಗೆ ಕೊಡಗೂಸನ್ನು ಬಲೆಯಿತ್ತ. ಏತಕ್ಕೆ ? ಟ್ರಾಯಿನ ಮೇಲೆ ಯುದ್ಧ ನಡೆಸಬೇಕು. ಮನೆ ಮಠಗಳನ್ನೂ ಮಗು ವೃದ್ಧ ಹೆಂಗಸು ಎನ್ನದೆ ಮಂದಿಯೆಲ್ಲರನ್ನೂ ನಾಶಮಾಡಬೇಕು. ರಿಪುಧ್ವಂಸಿಯೆಂಬ ಕೀರ್ತಿಯನ್ನು ಮರೆಯಬೇಕು—ಇದೇ ಅವನ ಹಂಬಲಿಕೆ. ಮಗಳ ರಕ್ತವನ್ನು ಚೆಲ್ಲಿದ ಮೇಲೆ ಅಗಮೆಮ್ನಾನನಿಗೆ ರಕ್ತದಾಹ ಉಂಟಾಯಿತು. ಮನುಷ್ಯನ ಶ್ರೇಷ್ಟಧರ್ಮವಾದ ಕನಿಕರವನ್ನು ಕಿತ್ತೊಗೆದ. ಟ್ರಾಯಿಗೆ ನಡೆದು ನೆತ್ತರಿನ ಕಾಲುವೆಗಳನ್ನು ಹರಿಯಿಸಿದ. ಗುಡಿಗೋಪುರಗಳನ್ನು ಈಡಾಡಿ, ವಿಗ್ರಹ ಬಲಿಪೀಠಗಳನ್ನು ನುಚ್ಚುನೂರಾಗಿಸಿ, ದೇವತೆಗಳ ಮುಡಿಪನ್ನು ದರೋಡೆಗೈದು ದೈವಭೀತಿಯೆಂಬುದನ್ನೇ ಕಾಣದಾದ. ಮನೆಗೆ ಹಿಂತಿರುಗಿದಾಗಲೂ ಕೇವಲ ದೇವತೆಗೆ ಮಾತ್ರ ಸಲ್ಲತಕ್ಕ ಊರು ಕಿಂಕಾಪು ಬಟ್ಟೆಯ ನಡೆಮುಡಿಯನ್ನು ಕಾಲಿನಿಂದ ತುಳಿಯುತ್ತ ವಿಜೃಂಭಿಸಿದ. ಮರಗಳಿಗೆಯಲ್ಲೆ ದುಡಿದು ಬಿದ್ದ. ಎಂದಮೇಲೆ, ಅಗಮೆಮ್ನಾನನ ಪತನಕ್ಕೆ ಅಪ್ಪನಿಂದ ಇಳಿದು ಬಂದ ಕೆಟ್ಟ ಚಟವಲ್ಲ. ಕಾರಣ, ಅವನ ಸ್ವಕೀಯ ಮದಾಂಧತೆ. ಇದೇ ಈಸ್ಕಿಲಸ್ ಬಹುವಾಗಿ ಬಣ್ಣಿಸಿ ಹಳಿದು ಮುಂದೊಡ್ಡುವ ಗಂಡಗರ್ವ (ಹ್ಯೂಬ್ರಿಸ್). ಗರ್ವಿಷ್ಠ ತಾನು ಮಾಡಿದ್ದನ್ನು ತಾನೇ ಉಣ್ಣುತ್ತಾನೆ.

ಒರೆಸ್ಟಿಯದ ಎರಡನೆಯ ಭಾಗದಲ್ಲಿ ಕ್ಲೈಟಮ್ನೆಸ್ಟ್ರ ಈಜಿಸ್ತಸ್ಸರ ಸಂಹಾರ ಆಗುತ್ತದೆ. ಅಗಮೆಮ್ನಾನನ ಸಂಹಾರಕ್ಕೆ ಅದೊಂದು ಪ್ರತಿಕಾರ. ಹೌದು, ಆದರೆ ತಾತ್ಪರ್ಯ ಅಷ್ಟಕ್ಕೆ ಮುಗಿಯುವುದಿಲ್ಲ. ಕ್ಲೈಟಮ್ನೆಸ್ಟ್ರ ಈಜಿಸ್ತಸ್ ಇಬ್ಬರೂ ಕಾಮಲಂಪಟರು, ಮರುಕಹೀನರು, ಕಪಟಿಗಳು, ದೈವ ವಿರೋಧಿಗಳು, ಅವರನ್ನು ಕೊನೆಗಾಣಿಸಬೇಕೆಂದು ದೇವ ದೇವನಾದ ಜ್ಯೂಸನಿಂದ ಒರೆಸ್ಟೀಸನಿಗೆ ಅಪೊಲೊವಿನ ಮೂಲಕ ಸಂದೇಶ ಬರುತ್ತದೆ. ಆ ಕಾರ್ಯ ಕೊಲೆಯಲ್ಲ, ದೇವತೆಗಳನ್ನು ಮೆಚ್ಚಿಸುವ ಯಜ್ಞ—ಎಂಬ ಅವರಣವನ್ನು ಈಸ್ಕಿಲಸ್ ಸೃಜಿಸಿದ್ದಾನೆ, ಎರಡನೆಯ ರೂಪಕದಲ್ಲಿ. ಹಾಗೂ, ಮನುಷ್ಯ ಸ್ವಭಾವವನ್ನೂ ಮನುಷ್ಯನ ಒಳಗಣ ಚಲನವಲನಗಳನ್ನೂ ಬಲ್ಲಾತನೆಗೆ ಸೂಕ್ಷ್ಮವಾದ ಅಂಶಗಳನ್ನು ಗ್ರಹಿಸುವುದು ಕಷ್ಟವಾಗಲಿಲ್ಲ. ಎಷ್ಟೇ ಆದರೂ ಕ್ಲೈಟಮ್ನೆಸ್ಟ್ರ ಒರೆಸ್ಟೀಸನನ್ನು ಹೆತ್ತವಳಲ್ಲವೆ ? ಒರೆಸ್ಟೀಸ್ ಪಾಪಾತ್ಮರ ತನೂಭವವಾದರೂ ಹಿಂಸಪ್ರವೃತ್ತಿಯನ್ನು ಯೋಚಿಸಲಾರ, ಸಹಿಸಲಾರ. ದೈವನಿರ್ಬಂಧಕ್ಕೆ ಶಿರಬಾಗಿ ಮಾತೆಯ ಎದೆಯನ್ನು ಕಠಾರಿಯಿಂದ ಚುಚ್ಚಿದ್ದಾಯಿತು. ಆದರೆ ತನ್ನ ಹೃದಯದ ಕುದಿಯನ್ನು ತಪ್ಪಿಸುವುದೆಂತು ? ತಳಮಳದಲ್ಲಿ ಬಿದ್ದು ಪ್ರಲಾಪಿಸುತ್ತ ಹೋಗುತ್ತಾನೆ, ನಾಟಕದ ಅಂತ್ಯದಲ್ಲಿ. ಮೂರನೆಯ ಭಾಗವಾದ ಮಂಗಳದೇವಿಯರು ವಿಶೇಷ ಅರ್ಥಮತ್ತಾದ ಮಹೋನ್ನತ ಸಾಹಿತ್ಯ. ಕಥಾವಸ್ತು ಒರೆಸ್ಟೀಸನ ಸಂಕಟ, ಅವನ ಕೃತ್ಯದ ತನಿಖೆ, ಅವನ ವಿಮೋಚನೆ, ಮೃತಳಾದ ಕ್ಲೈಟಮ್ನೆಸ್ಟ್ರಳ ಪ್ರಾರ್ಥನೆಯಂತೆ ಉಗ್ರಪೀಡೆಗಳು (ಫ್ಯೂರೀಸ್) ಎದ್ದು ಬಂದು, ಒರೆಸ್ಟೀಸನನ್ನು ದಿಗಿಲುಗೊಳಿಸಿ ಕಾಡುತ್ತವೆ. ತಾಯಿಯನ್ನು ಕೊಲ್ಲು ಎಂದು ತನಗೆ ನಿರೂಪವಿತ್ತ ಅಪೊಲೊ ದೇವನೇ ಅವನಿಗೀಗ ಶರಣು. ಹಂತಕ, ಆದ್ದರಿಂದ ಅವನು ನಮ್ಮ ಪಶು ಎನ್ನುತ್ತವೆ, ಫ್ಯೂರಿಗಳು. ಆದದ್ದು ದೇವನಾಜ್ಞೆ; ಒರೆಸ್ಟೀಸ್ ನಿರಪರಾಧಿ-ಎನ್ನುತ್ತಾನೆ ಅಪೊಲೊ. ವ್ಯಾಜ್ಯವನ್ನು ಇತ್ಯರ್ಥಹೊಳಿಸುವುದಕ್ಕಾಗಿ ದೇವಿ ಅಥೀನ ಅಥೆನ್ಸಿನ ಹನ್ನೆರಡು ಮಂದಿ ಜ್ಞಾನವೃದ್ದರನ್ನು ಜೊತೆಗೂಡಿಸಿ, ನ್ಯಾಯಾಸ್ಥಾನವನ್ನು ರಚಿಸುತ್ತಾಳೆ. ಆ ಸಮಿತಿಗೆ ಆಕೆಯೇ ಅಧ್ಯಕ್ಷಿಣ; ವಿಚಾರಣೆ ನಡೆಯುತ್ತದೆ. ಕಡೆಯಲ್ಲಿ ನ್ಯಾಯಮೂರ್ತಿಗಳು ತೀರ್ಪು ಕೊಡುತ್ತಾರೆ. ಅರ್ದಮಂದಿ ಒರೆಸ್ಟೀಸ್ ಅಪರಾಧಿ ಎನ್ನುತ್ತಾರೆ. ಮಿಕ್ಕರ್ಧ ಅವನು ನಿರಪರಾಧಿ ಎನ್ನುತ್ತಾರೆ. ಅಥೀನ ಮೊದಲೇ ಅವನಲ್ಲಿ ಅಪರಾಧವಿಲ್ಲವಿಂದು ಘೋಷಿಸಿರುತ್ತಾಳೆ. ಆದ್ದರಿಂದ ಒರೆಸ್ಟೀಸನಿಗೆ ಬಿಡುಗಡೆ ಆಗುತ್ತದೆ. ಅಷ್ಟರಿಂದಲೇ ತೃಪ್ತನಾಗುವುದಿಲ್ಲ, ಕವಿ. ಉಗ್ರಪೀಡೆಗಳೂ ದೇವತೆಗಳೇ. ಬುನಾದಿಪೃಥಿವಿಯ ಮೂಲಶಕ್ತಿಗಳು. ಅವುಗಳದ್ದು ಕಣ್ಣು ಕಿತ್ತವನ ಕಣ್ಣನ್ನು ಕೀಳು, ಹಲ್ಲು ಮುರಿದವನ ಹಲ್ಲನ್ನು ಮುರಿ, ಎಂಬ ಹಳೆಯ ನ್ಯಾಯ. ಅಂಥ ಬೆದರಿಕೆ ಇಲ್ಲದಿದ್ದರೆ ಪ್ರಲೋಭನೆಗಳಿಗೆ ಈಡಾಗಿರುವ ಮನುಜಧರ್ಮ ನೀತಿ ಧರ್ಮವನ್ನು ಪರಿಪಾಲಿಸೀತೆ? ಆದರೆ ಹೊಸ ದೇವತೆಗಳಾದ ಒಲಿಂಪಿಯ ವರ್ಗ ಬರಿ ಕಾರ್ಯವನ್ನೇ ಬಗೆಯುವುದಿಲ್ಲ; ಕಾರ್ಯಕರ್ತನ ಮನೋಗತ ಸಮಯ ಸನ್ನಿವೇಶಗಳಿಗೂ ಗಮನವೀಯುತ್ತಾರೆ. ಆದ್ದರಿಂದಲೇ ಒರೆಸ್ಟೀಸ್ ವಧಕಾರಲ್ಲವೆಂದು ಅವರ ತೀರ್ಮಾನ. ಅಥೀನೆಗೆ ಶಾಂತಿ ಸ್ನೇಹಗಳು ಅಗತ್ಯ. ಉಗ್ರಪೀಡೆಗಳನ್ನು ಒಲಿಸಿಕೊಂಡು ಅಥೆನ್ಸಿನ ಪೌರರು ಅವನ್ನೂ ಪೂಜಿಸಿ ಹರಕೆಯೊಪ್ಪಿಸಿ ಕಂಡು ನಡೆದುಕೊಳ್ಳಬೇಕೆಂದು ಶಾಸನ ವಿಧಿಸುತ್ತಾಳೆ. ಕರಾಳಶಕ್ತಿಗಳು ಹೀಗೆ ಎರಿನೀಸ್ ಎಂಬ ಹೆಸರನ್ನು ಕಳೆದುಕೊಂಡು. ಯೂಮೆನೈಡೀಸ್ (ಮಂಗಳದೇವಿಯರು) ಆಗುತ್ತಾರೆ.

ಪ್ರಾಮಿತಿಯಸ್ ಎಂಬ ಅರ್ಧದೇವತೆಯ ದಾರುಣ ವೃತ್ತಾಂತವನ್ನು ಕುರಿತ ಇನ್ನೊಂದು ರೂಪಕತ್ರಯವನ್ನು ಈಸ್ಟಿಲಸ್ ರಚಿಸಿದ. ಅದರ ಮೊದಲನೆಯ ಭಾಗವಾದ ಪ್ರಾಮಿತಿಯಸ್ ಬೌಂಡ್ (ಸೆರೆ ಸಿಕ್ಕಿದ ಪ್ರಮಿತಿಯಸ್) ಮಾತ್ರ ಉಳಿದುಬಂದಿದೆ. ಪೌರಾಣಿಕ ಮೂಲಕಥೆಯಂತೆ, ಹೋರಿಯನ್ನು ಜ್ಯೂಸನಿಗೆ ಬಲಿ ಕೊಡಬೇಕಾದಾಗ ಮನುಷ್ಯರು ಪ್ರಾಮಿತಿಯಸ್ಸನ ಸಲಹೆಯನ್ನು ಪಡೆದು ದೇವ ದೇವನಿಗೆ ಮೋಸ ಮಾಡಿದರು. ಕೃದ್ಧನಾದ ಜ್ಯೂಸ್ ಮನುಜರಿಗೆ ಬೆಂಕಿ ಹೊತ್ತಿಸುವುದನ್ನು ಹೇಳಿಕೊಡದೆ, ಪಶುಗಳಂತೆ ಅವರು ಬಾಳುವುದಕ್ಕೆ ಬಿಟ್ಟುಬಿಟ್ಟ. ಅವರ ಸ್ಥಿತಿಯನ್ನು ಕಂಡು ಪ್ರಾಮಿತಿಯಸ್ಸಿಗೆ ಮರುಕ ಉಂಟಾಯಿತು. ಒಂದು ದಿವಸ ಗುಟ್ಟಾಗಿ ಕೆಂಡವನ್ನು ಕದ್ದು ಭೂಮಿಗೆ ತಂದುಕೊಟ್ಟು ನರರನ್ನು ಉದ್ಧಾರಮಾಡಿದ. ರೋಷಗೊಂಡ ಜ್ಯೂಸ್ ಪ್ರಮಿತಿಯಸ್ಸನ್ನು ಹೆಡಿತರಿಸಿ, ಕೌಕಸಸ್ ಪರ್ವತದ ಮೇಲೆ ಬಂಧಿಸಿ, ಪ್ರತಿ ಹಗಲೂ ಅವನ ಯಕೃತ್ತನ್ನು ಒಂದು ರಣಹದ್ದು ಕಿತ್ತು ತಿನ್ನುವಂತೆಯೂ ರಾತ್ರಿ ಅದು ಪುನಃ ಬೆಳೆದು ಮಾರನೆಯ ದಿನದ ಭಕ್ಷಣೆಗೆ ಸಜ್ಜಾಗುವಂತೆಯೂ ವಿಧಾಯಕಮಾಡಿದ. ಶತಮಾನಗಳ ಆನಂತರ ವೀರವರ ಹೆರಾಕ್ಲೀಸ್ ಅಲ್ಲಿಗೆ ಬಂದು, ಅಂಬನ್ನು ಬಿಟ್ಟು ರಣಹದ್ದನ್ನು ಕೊಂದುಹಾಕಿ, ಪ್ರಾಮಿತಿಯಸ್ಸನ್ನು ಸಂರಕ್ಷಿಸಿದ. ಪ್ರಾಮಿತಿಯಸ್ ಜ್ಯೂಸರ ಕಲಹ ಅರ್ಥನಾಗರಿಕತೆಯ ಅವಧಿಯಲ್ಲಿ ದೇವತೆಯಾದವನಿಗೂ ದೇವತೆಯಾಗಲಿರುವವನಿಗೂ ನಡೆದಿರಬಹುದಾದ ಒರಟು ಮೇಲಾಟ. ಈಸ್ಕಿಲಸ್ಸನ ವಿರಚನೆಯಂತೆ ಅದು ಬಲದಲ್ಲಿ ಕಡಿಮೆಯಾದ ಮನುಜಪ್ರೇಮಿಗೂ ಬಲದಲ್ಲಿ ಅಧಿಕನಾದ ಮನುಜವಿರೋಧಿಗೂ ಆಗುವ ಜಗಳ. ಪ್ರಾಮಿತಿಯಸ್ಸನ ಸಂಕಟವನ್ನು ಹೃದಯವಿದ್ರಾವಕವಾಗುವಂತೆ ಕವಿ ವರ್ಣಿಸಿದ್ದಾನೆ. ಭೂಮಂಡಲದ ಮನುಷ್ಯರು ಹಾಗಿರಲಿ, ಸಾಗರ, ಬೆಟ್ಟ, ನೀಲಾಕಾಶ, ಎಲ್ಲವೂ ಅವನೊಡನೆ ಕೊರಗುತ್ತವೆ, ಕಂಬನಿ ಸುರಿಸುತ್ತವೆ. ವಿಶ್ವವೇ ಅಪಾರ ಸಹಯಾತನೆಯಿಂದ (ಸಿಂಪಥಿಯಾ) ನರಳುತ್ತದೆ. ಅದೊಂದು ಸಮಾಧಾನ, ಹತಭಾಗ್ಯ ಪ್ರಾಮಿತಿಯಸ್ಸಿಗೆ, ಇನ್ನೆರಡು ಸಮಾಧಾನಗಳೂ ಅವನಲ್ಲಿದ್ದಕೊಂಡು ಸಹಿಷ್ಣುತೆಗೆ ಉಪಷ್ಟಂಭಕವಾಗುತ್ತವೆ. ಚಿರಂಜೀವಿಯಾದುದರಿಂದ ಪ್ರಾಮಿತಿಯಸ್ಸಿಗೆ ಸಾವಿಲ್ಲ. ಮತ್ತು ಜ್ಯೂಸನಿಗೆ ಸಂಬಂಧಿಸಿದ ರಹಸ್ಯವೊಂದು ಪ್ರಾಮಿತಿಯಸ್ಸಿಗೆ ಮಾತ್ರ ಗೊತ್ತು. ಜ್ಯೂಸ್ ಏನಾದರೂ ಥೆಟಿಸಳನ್ನು ಮದುವೆಯಾದರೆ ಆ ಜಲಕನ್ನಿಕೆಯ ಮಗ ಮುಂದೆ ಜ್ಯೂಸನಿಂದ ದೇವರಾಜತ್ವವನ್ನು ಕಿತ್ತುಕೊಳ್ಳುತ್ತಾನೆ. ವಜ್ರಮನಸ್ಸಿನಿಂದ ಪ್ರಾಮಿತಿಯಸ್ ನಿಲ್ಲುತ್ತಾನೆ. ಜ್ಯೂಸನ ದಬ್ಬಾಳಿಕೆಯನ್ನು ಕಣ್ಣಿಗೆ ಕಟ್ಟಿ ತೋರಿಸಲೋಸುಗ ಕವಿ ಅವನಿಂದ ಬಲು ತೊಂದರೆಗೆ ಸಿಕ್ಕಿ ಕಾಡು ಪಾಲಾಗಿ ಅಲೆಯುತ್ತಿರುವ ಇಯೊ ಎಂಬ ಹೆಂಗಸನ್ನೂ ತರುತ್ತಾನೆ. ದೇವಧೂತ ಹರ್ಮಿಸ್ ಬಂದು ಜ್ಯೂಸನಿಗೆ ವಿಧೇಯನಾಗು ಎಂದು ಬುದ್ಧಿವಾದ ಹೇಳುತ್ತಾನೆ. ಆಲಿಸದೆ ಪ್ರಾಮಿತಿಯಸ್ ಬರಲಿರುವ ವೇದನಿಗೆ ಸಿದ್ಧನಾಗುತ್ತಾನೆ.

ಮುಂದಣ ನಾಟಕಗಳೆರಡೂ ನಷ್ಟವಾಗಿವೆ. ಬಹುಶಃ ಜ್ಯೂಸನ ಅಜ್ಜಿಯ ಮಧ್ಯಸ್ತಿಕೆಯಿಂದ ಇಬ್ಬರಿಗೂ ಒಡಂಬಡಿಕೆ ಏರ್ಪಡುತ್ತದೆ. ಎರಡನೆಯ ನಾಟಕದಲ್ಲಿ. ರಣಹದ್ದಿನ ಹತ್ಯವಾಗಿ ಪ್ರಾಮಿತಿಯಸ್ಸನ ವಿಜಯೋತ್ಸವ ಮೂರನೆಯ ನಾಟಕದಲ್ಲಿ ನಡೆಯುತ್ತದೆ. ಈಸ್ಕಿಲಸ್ಸಿಗೆ ವೈರ ವೈಮನಸ್ಯಗಳು ಸೇರುತ್ತಿರಲಿಲ್ಲ. ಸ್ನೇಹ ಒಪ್ಪಂದಗಳ ಕಡೆಗೇ ಅವನ ಒಲವು. ಹಾಗೂ ಸಂಕಟ ಮನುಷ್ಯನಿಗೆ ಬುದ್ಧಿ ಕಲಿಸುತ್ತದೆ ಎಂಬುದನ್ನೂ ಆತ ಬಲ್ಲ. ಪ್ರಾಮಿತಿಯಸ್ ರೂಪಕದಲ್ಲಿ ಚಿತ್ರಿವಾಗಿರುವ ಜ್ಯೂಸ್ ಇನ್ನೂ ಯುವಕ, ಅನುಭವಸ್ಥನಲ್ಲ. ತನಗಾಗಿ ಬಂದ ಕಷ್ಟನಷ್ಟಗಳು ಅವನ ಚಿತ್ತವನ್ನು ಇನ್ನೂ ಪರಿವರ್ತನಗೊಳಿಸಿಲ್ಲ. ಪರ್ಷಿಯನ್ನರು ಎಂಬ ನಾಟಕ ವಿಚಿತ್ರಬಗೆಯ ಕೃತಿ. ಅದರಲ್ಲಿ ಕಥೆ ಕಿರಿದು. ಪಾತ್ರಶಿಲ್ಪಕ್ಕೆ ಅವಕಾಶ ಕಡಿಮೆ. ಆದರೂ ಮಹತ್ವವನ್ನು ತಂದು ಕೂಡಿಸಿದ್ದಾನೆ. ಅದಕ್ಕೆ, ಮೇಲಾಗಿ ಗೆದ್ದ ಗ್ರೀಕರ ಸಾಹಸವನ್ನು ಪ್ರಶಂಸಿಸುವ ಬದಲು ಕವಿ ಸೋತ ಪರ್ಷಿಯನ್ನರ ಸಂತಾಪವನ್ನು ಹೃದಯಂಗಮವಾಗಿ ವರ್ಣಿಸುತ್ತಾನೆ. ಎಂದರೆ, ತನ್ನ ಜನರಿಗೆ ಈ ಎಚ್ಚರಿಕೆ ಈಯುತ್ತಾನೆ: ಜೋಕೆ, ಅಹಂಕಾರದಿಂದ ಹಿಗ್ಗಬೇಡಿ; ನಮ್ರರಾಗಿರಿ. ಜಂಭ ಕೊಚ್ಚಿ ದೈವಾಪರಾಧಮಾಡಿದ ಪರ್ಷಿಯನ್ನರು ಈಗ ಏನಾಗಿದ್ದಾರೆ ನೋಡಿ !


ಥೀಬ್ಸ್‍ಗೆದುರಾಗಿ ಏಳು ಮಂದಿ (ಸೆವೆನ್ ಎಗೇನ್ಸ್ಟ್ ಥೀಬ್ಸ್) — ಎಂಬ ರೂಪಕದಲ್ಲಿ ಶತ್ರುಗಳಿಂದ ಥೀಬ್ಸ್ ನಗರದ ಚಿತ್ರಣ ಚೆಲುವಾಗಿದೆ. ಆದರೆ ದೊರೆ ಇಟಿಯೊಕ್ಲೀಸನ ಧೈರ್ಯ, ದೃಢÀಭಾವ, ಸ್ವಾರ್ಥತ್ಯಾಗಗಳು ಮನೋಹರವಾಗಿವೆ. ಆದರೇನು ? ಶಾಪಗ್ರಸ್ತ ವಂಶಕ್ಕೆ ಸೇರಿದವನಾದ್ದರಿಂದ ಆತ ಅಣ್ಣನೊಡನೆ ಕಾದಿ ಕದನ ರಂಗದಲ್ಲಿ ಮಡಿಯಬೇಕು. ಜೊತೆಗೆ ಎರಡು ನಾಟಕಗಳು ನಷ್ಟವಾಗಿರುವುದರಿಂದ ಈಸ್ಕಿಲಸ್ಸನ ಆಶಯವನ್ನು ಗುರುತಿಸುವುದು ಅಸಾಧ್ಯ. ಯಾವ ತಾತ್ಪರ್ಯವನ್ನು ಇಟ್ಟಿದ್ದನೊ ಹೇಳಲಾಗದು.

ಆಶ್ರಯ ಯಾಚಕಿಯರು ಈಸ್ಕಿಲಸ್ಸನ ಕಲಿಕೆಸಮಯದ ಕೃತಿ. ಅದರದ್ದೇ ಆದ ಸತ್ತ್ವ, ಸ್ವಾರಸ್ಯಗಳು ಅದರಲ್ಲಿ ಕಡಿಮೆ. ಈಸ್ಕಿಲಸ್ಸಿಗಿಂತ ಮುಂಚೆ ಗಂಭೀರ ನಾಟಕಕ್ಕೆ ಇದ್ದ ಸ್ವರೂಪವನ್ನು ಅರಿತುಕೊಳ್ಳುವುದಕ್ಕೆ ಅದರಿಂದ ಹೇರಳ ಸಹಾಯವುಂಟು. ಮಹಾಘನತೆ: ವಿಭಾವನೆಯ ವೈಭವ. ಭಾವಗಳ ಗಂಭೀರತೆ, ಭಾಷೆಯ ವಿಜೃಂಭಣೆ, ಛಂದಸ್ಸಿನ ಘೋಷ—ಈ ಯಾವ ದೃಷ್ಟಿಯಿಂದ ಅವಲೋಕಿಸಿದರೂ ಈಸ್ಕಿಲಸ್ಸನ ಎತ್ತರ ದೊಡ್ಡದು. ಅವನು ರುದ್ರನಾಟಕಗಳು ಉದಾತ್ತಧ್ಯೇಯಗಳನ್ನು ಎತ್ತಿ ಹಿಡಿಯುತ್ತ. ಇಲ್ಲದ ಸಲ್ಲದ ಭಯಗಳನ್ನು ನಿವಾರಿಸುತ್ತ, ದುರ್ಜನರಿಗೆ ದಂಡನೆ. ಸಜ್ಜನರಿಗೆ ಸೌಖ್ಯ ಎಂಬ ಸಿದ್ಧಾಂತವನ್ನು ಬೋಧಿಸುತ್ತ, ಸಮಾಜ ಪೋಷಣೆಗೆ ಉತ್ತಮ ಉಪಕರಣಗಳಾದವು. ನೈತಿಕಸೂತ್ರಗಳಿಗಾಗಿಯೂ ಜೀವನ ಯೋಜನೆಗಾಗಿಯೂ ಹಾತೊರೆಯುತ್ತಿತ್ತು. ಅಥೆನ್ಸಿನ ಪ್ರಜಾಪ್ರಭುತ್ವ. ದಾರ್ಶನಿಕರ ಕಾಲ ಇನ್ನೂ ಬಂದಿರಲಿಲ್ಲವಾದ್ದರಿಂದ ರುದ್ರನಾಟಕದ ಕವಿಗಳೇ ಉಪದೇಶಕರಾಗಬೇಕಾಯಿತು. ಈಸ್ಕಿಲಸ್ ತಕ್ಕವನಾಗಿದ್ದ, ಆ ಹೊಣೆಗಾರಿಕೆಯ ಗದ್ದುಗೆಗೆ, ಅವನು ಸಾರಿ ಹೇಳಿದ್ದು ಇಷ್ಟೆ. ಮನುಷ್ಯಜೀವನ ಅಸಡ್ಡೆಯಿಂದ ಕಳೆಯಬಹುದಾದ ಲಘುವಿಚಾರವಲ್ಲ. ಗಹನವೂ ಜಟಿಲವೂ ಆದ ಪ್ರಶ್ನೆ ಅದು. ಇದನ್ನು ಮನಗಾಣಬೇಕು, ಮೊದಲು. ಎರಡನೆಯದಾಗಿ, ಬಾಳಿನ ಒಳಗಡೆ ಇದ್ದುಕೊಂಡು ಕೆಲಸ ಮಾಡುತ್ತಿರುವ ಧಾರ್ಮಿಕ ತತ್ತ್ವಗಳನ್ನು ತಪ್ಪೆಸಗದೆ ಅರಿತುಕೊಳ್ಳಬೇಕು. ತನ್ನ ಮಿತಿಯನ್ನು ತಿಳಿದುಕೊಂಡು ಗರ್ವಪಡದೆ ಕರ್ತವ್ಯ ತತ್ಪರನಾಗಿದ್ದರೆ ಮನಿಷ್ಯನಿಗೆ ಕ್ಷೇಮ. ಅಂಥವನಿಗೆ ಜ್ಯೂಸನ ನ್ಯಾಯ ಹೂವಿನ ಹಾರದಂತೆ ಹಗುರವಾಗಿ ಸುವಾಸನೆ ಕೊಡುತ್ತ ಸಂತಸಕರವಾಗುತ್ತದೆ. ಮನುಷ್ಯನೇನಾದರೂ ಮನಸ್ವಿ ಬೀಗಿ ಪ್ರಬಲವಾದ ನೀತಿವ್ಯವಸ್ಥೆಯನ್ನು ಎದುರಿಸುವುದಕ್ಕೆ ಹೊರಟರೆ ಅಪಾಯ ಖಂಡಿತ.

ಈಸ್ಕಿಲಸ್ಸನ ಹಿರಿಮೆಯನ್ನು ಸಮರ್ಪಕವಾಗಿ ಬಣ್ಣಿಸುವ ವಾಣಿ ಇಲ್ಲವೆಂದು ಸ್ತುತಿಸಿದ್ದಾರೆ ವಿಮರ್ಶಕರೆಲ್ಲ. ಈಸ್ಕಿಲಸ್ ಸಾಮಾನ್ಯಾರ್ಥದ ಕವಿಯಲ್ಲ, ಲೇಖನಿ ಹಿಡಿದ ಅರ್ಧದೇವತೆ. ಪ್ರಾಮಿತಿಯಸ್ ರೂಪಕವನ್ನು ಪ್ರಾಮಿತಿಯಸ್ಸೇ ಬರೆದನೊ ಏನೊ!—ಇಂಥ ಪ್ರಶಂಸೆಯ ವಾಕ್ಯಗಳು ಹೇರಳವಾಗಿವೆ. ದಿಟವಾಗಿಯೂ ಕವಿಯ ವಿಭಾವನೆಗಳೂ ಕಲ್ಪನೆಗಳೂ ಪದಗುಚ್ಛಗಳೂ ಮನುಷ್ಯಮಾತ್ರನಾದವನಿಗೆ ಸಾಧ್ಯವೇ ಎಂಬ ಅಚ್ಚರಿಯನ್ನು ಕೆರಳಿಸುತ್ತವೆ.(ಎಸ್.ವಿ.ಆರ್.)[]

ಉಲ್ಲೇಖ

[ಬದಲಾಯಿಸಿ]