ಈಜಿಪ್ಟಿನ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಮಾರು ಅರುವತ್ತು ಶತಮಾನಗಳ ಹಿಂದೆ ವಿಶಿಷ್ಟ ಸಂಸ್ಕøತಿಯೊಂದನ್ನು ಕಟ್ಟಿ ಬೆಳೆಸಿ, ಹಲ ಎಡರುತೊಡರುಗಳನ್ನು ದಾಟಿ ನಡೆದು ಏರಿಳಿದು ಉಳಿದಿರುವ ಈಜಿಪ್ಟಿನ ಇತಿಹಾಸ ವರ್ಣಮಯವಾದದ್ದು. ಈ ದೀರ್ಘಕಾಲದ ಮೊದಲ ನಾಲ್ಕು ಸಾವಿರ ವರ್ಷದಲ್ಲಿ ನೈಲ್ ನದಿಯ ದಂಡೆಯ ಮೇಲೆ ಮಾನವನ ನಾಗರಿಕತೆ ಬೆಳೆಯಿತೆನ್ನಬಹುದು. ಪರ್ಷಿಯನ್ನರಾಗಮನದಿಂದ (ಕ್ರಿ. ಪೂ. 525) ಮುಂದೆ ಇಪ್ಪತ್ತು ಶತಮಾನ ಕಾಲ ಇದನ್ನು ಪರಕೀಯರಾಳಿದರು. ಅನಂತರ ಕ್ರಮವಾಗಿ ಗ್ರೀಕ್, ರೋಮನ್, ಅರಬ್, ತುರ್ಕಿ, ಫ್ರೆಂಚ್, ಬ್ರಿಟಿಷ್ ಜನರು ಈ ದೇಶವನ್ನಾಳಿದರು. ಆಮೇಲೆ ಪರಕೀಯರ ನೊಗ ಕಳಚಿಕೊಂಡರೂ 1955ರ ಅನಂತರವೇ ಈ ದೇಶ ಹೊಸ ಹಾದಿಯಲ್ಲಿ ಹೆಜ್ಜೆ ಹಾಕಲಾರಂಭಿಸಿದ್ದು.

ರಾಜವಂಶ ಪೂರ್ವಕಾಲ[ಬದಲಾಯಿಸಿ]

ಕ್ರಿಸ್ತಪೂರ್ವ ಮೂವತ್ತೊಂದನೆಯ ಶತಮಾನಕ್ಕಿಂತ ಹಿಂದಿನ ಕಾಲವನ್ನು ರಾಜವಂಶಪೂರ್ವ (ಪ್ರೀಡೈನಾಸ್ಟಿಕ್) ಕಾಲವೆಂದು ಕರೆಯುವ ರೂಢಿ. ಈ ಅವಧಿಯಲ್ಲಿ ತ್ವರಿತ ಪ್ರಗತಿಯಾಯಿತು. ಕ್ರಿ. ಪೂ. 6000ದ ಕಾಲಕ್ಕೇ ಇಲ್ಲಿನ ಜನ ಯವೆ (ಬಾರ್ಲಿ) ಧಾನ್ಯ ಬೆಳೆಯುತ್ತಿದ್ದರು; ಕ್ರಿ.ಪೂ. ನಲವತ್ತನೆಯ ಶತಮಾನದಲ್ಲಿ ತಾಮ್ರ ಬಳಸುತ್ತಿದ್ದರು. ನಯಗೊಳಿಸಿದ ಕಪ್ಪು ಮತ್ತು ಕೆಂಪು ಮೃತ್ಪಾತ್ರೆಗಳ ತಯಾರಿಕೆಯಲ್ಲಿ ಇವರು ನಿಪುಣರು. ವ್ಯಾಪಕ ನೀರಾವರಿ ವ್ಯವಸ್ಥೆ ಆಗ ಇದ್ದದ್ದು ಗಮನಾರ್ಹ. ಜಂಬುಕಾಗದ (ಪಪೈರಸ್), ಶಾಯಿ, ಮುಂತಾದ ಬರೆವಣಿಗೆಯ ಸಾಧನಗಳನ್ನು ಇವರು ಬಲ್ಲವರಾಗಿದ್ದರು. ವ್ಯಾಪಕ ನೀರಾವರಿಯೇ ಮುಂತಾದ ಕಾರ್ಯಗಳು ನಡೆಯಬೇಕಾದರೆ ಇಡೀ ದೇಶ ಒಂದು ಆಡಳಿತಕ್ಕೊಳಪಟ್ಟಿರಬೇಕಾದ್ದು ಅಗತ್ಯವಾಗಿತ್ತು. ಆದ್ದರಿಂದ ಹಿಂದಿನಿಂದಲೂ ಬಂದಿದ್ದ ಸಣ್ಣ ರಾಜ್ಯಗಳೆಲ್ಲ ಒಟ್ಟುಗೂಡಿ ಉತ್ತರ ಈಜಿಪ್ಟ್, ದಕ್ಷಿಣ ಈಜಿಪ್ಟ್ ಎಂಬ ಎರಡು ದೊಡ್ಡ ರಾಜ್ಯಗಳಾದುವು. ಕ್ರಿ. ಪೂ. ಸುಮಾರು 3100ರಲ್ಲಿ ಮೀನೀಸ್ ಎಂಬ ದಕ್ಷಿಣ ಈಜಿಪ್ಟ್ ದೊರೆ ಈ ಇರಡು ರಾಜ್ಯಗಳಿಗೂ ರಾಜನಾದ. ಆಗಲೇ ಇಡೀ ಈಜಿಪ್ಟಿನ ರಾಜ ಮನೆತನದ ಪ್ರಾರಂಭ. ಮೆಂಫಿಸ್ ಆಗಿನ ರಾಜಧಾನಿ.ಆ ಕಾಲದಲ್ಲಿ ನಾಗರಿಕತೆ ಬೆಳೆಯಿತು. ಹಗಲು ರಾತ್ರಿಗಳ ಬೆಳಕು ಕತ್ತಲೆಯಾಟವನ್ನೂ ನೈಲ್ ನದಿಯ ಉಬ್ಬರವಿಳಿತವನ್ನೂ ಮಾನವನ ಹುಟ್ಟು ಸಾವುಗಳನ್ನೂ ಗಮನಿಸಿದ ಈಜಿಪ್ಷಿಯನ್ನರು ಜೀವನರಹಸ್ಯದ ಕಡೆಗೆ ಚಿಂತೆ ಹರಿಸಿದರು. ಸಾವಿನಿಂದ ಮಾನವನಿಗೆ ನಾಶವಿಲ್ಲ. ಅವನು ಎಂದಾದರೂ ಎದ್ದು ಬಂದಾನು ಎಂದು ಅವರ ಭಯ, ನಂಬಿಕೆ. ಸತ್ತಮೇಲೂ ಅವನ ಜೀವನ ಮುಂದುವರಿಯುವುದಕ್ಕೆ ಆವಶ್ಯಕವಾದ ಸಾಧನ ಸಲಕರಣೆಗಳನ್ನೆಲ್ಲ ಅವನ ಸಮಾಧಿಯಲ್ಲೇ ಒದಗಿಸಲು ಏರ್ಪಾಡಾಯಿತು. ಇವನ್ನೆಲ್ಲ ಒಳಗೊಂಡ ದೊಡ್ಡ ಗೋರಿಗಳ ನಿರ್ಮಾಣ ಆರಂಭವಾದದ್ದು ಹೀಗೆ. ದೊರೆಗಳು ಸತ್ತಾಗಲಂತೂ ಅವರ ಇಹವೈಭವ ಮುಂದುವರಿಯುವುದಕ್ಕೆ ಬೇಕಾದ್ದೆಲ್ಲ ಅವರಿಗೆ ಆ ಸಮಾಧಿಯಲ್ಲೇ ಸಿದ್ಧ, ಸಜ್ಜು. ಹೀಗೆ ಅಪಾರ ಸಂಪತ್ತನ್ನು ನೆಲದೊಳಗೆ ಹುದುಗಿದಾಗ ಕಳ್ಳಕಾಕರಿಂದ ಅವನ್ನು ರಕ್ಷಿಸುವುದಕ್ಕೆ ಬೃಹದಾಕಾರದ ಪಿರಮಿಡ್ಡುಗಳೆಂಬ ಕಟ್ಟಡಗಳೆದ್ದುವು. ಚಿತ್ರಲಿಪಿಯನ್ನೂ ಇವರು ಕಂಡುಹಿಡಿದರು. ಈ ಪಿರಮಿಡ್ಡುಗಳಲ್ಲಿ ದೊರಕಿದ ವಸ್ತುಗಳಿಂದಲೂ ಈ ಚಿತ್ರಲಿಪಿಯಿಂದಲೂ ಐದಾರು ಸಾವಿರ ವರ್ಷಗಳ ಹಿಂದಿನ ಚರಿತ್ರೆಯನ್ನರಿಯುವುದು ಸಾಧ್ಯ. ಅವರ ಕಲಾಪ್ರೌಢಿಮೆ ಎಷ್ಟು ಉನ್ನತಮಟ್ಟದ್ದೆಂಬುದನ್ನು ತಿಳಿಯಲು ಇವೆಲ್ಲವೂ ಸಹಾಯಕ. ಕಲ್ಲಿನ ಬೋಗುಣಿ, ಕುಡಿಯುವ ಪಾತ್ರೆ. ಕುರ್ಚಿಯೇ ಮೊದಲಾದ ಪೀಠೋಪಕರಣ, ದಂತದಲ್ಲಿ ತಯಾರಿಸಿದ ಪದಾರ್ಥ- ಇವುಗಳಲ್ಲೆಲ್ಲ ಕಂಡುಬರುವ ಕಲಾಪ್ರೌಢಿಮೆಯ ಮಟ್ಟ ಬಲು ಉನ್ನತ. ಕಳ್ಳಕಾಕರ ಕಣ್ಣಿಗೆ ಬೀಳದೆ ಅಚ್ಚಳಿಯದಿದ್ದ ಸಮಾಧಿಯೊಂದು 1922ರಲ್ಲಿ ಸಂಶೋಧಕರ ಕಣ್ಣಿಗೆ ಬಿತ್ತು. ಅದು ಟೂಟಂಕ್ ಅಮೆಲಿನ್ ಎಂಬ ಅಪ್ರಸಿದ್ಧ ರಾಜನ ಸಮಾಧಿ. ಅಲ್ಲಿ ಆತನ ಪರಲೋಕದ ಭೋಗಕ್ಕಾಗಿ ಶೇಖರವಾದ ನಿಧಿಯನ್ನು ಯಾರೂ ಕನಸಿನಲ್ಲೂ ಕಂಡಿರಲಾರರು ಎಂಬುದು ಈ ಬಗ್ಗೆ ಒಬ್ಬರ ವರ್ಣನೆ. ಒಂದರೊಳಗೊಂದರಂತೆ ಏಳೂ ಸಂಪುಟಗಳೊಳಗೆ ಕೊಂಚವೂ ಕೆಡದಂತೆ ರಾಸಾಯನಿಕ ವಸ್ತುಗಳಿಂದ ರಕ್ಷಿಸಿಟ್ಟ ಒಳಸಂಪುಟಕ್ಕೆ ಕಾಲು ಅಂಗುಲ ಗಾತ್ರದ ಚಿನ್ನದ ತಗಡು. ಭೋಗಸಾಮಗ್ರಿಗಳ ಶಿಲ್ಪಕಲೆಯಲ್ಲೂ ಅವರು ಬಹುಮಟ್ಟಿಗೆ ಮುಂದುವರಿದಿದ್ದರೆಂಬುದನ್ನು, 160' ಉದ್ದ 70' ಎತ್ತರದ ಸಿಂಹಶರೀರ ಮತ್ತು ಮನುಷ್ಯ ರುಂಡ ಹೊಂದಿರುವ ಸ್ಫಿಂಕ್ಸ್ ಎಂಬ ಬೃಹತ್ಪ್ರತಿಮೆಗಳಲ್ಲೂ ಇತರ ಶಿಲಾ ಮತ್ತು ಲೋಹಪ್ರತಿಮೆಗಳಲ್ಲೂ ಕಾಣಬಹುದು. ಓಬೆಲಿಸ್ಕ್ ಎಂಬ ನಿಲುಗಂಬಗಳ ಎತ್ತರ 60'-70'. ಇವುಗಳ ಮೇಲೆ ಅಂದವಾಗಿ ಕೆತ್ತಿದ ಲೇಖನಗಳಿವೆ. ಇವುಗಳ ತುದಿಗೆ ಚಿನ್ನದ ಮುಲಾಮು. ಇದಕ್ಕೆಂದೇ ನಾನು ಚಿನ್ನವನ್ನು ಧಾನ್ಯದಂತೆ ಅಳೆದಳೆದು ಸುರಿದಿದ್ದೇನೆ-ಎಂದು ಹೇಳುವ ಹಾಟ್ಷೆಪ್ಸನ್ ರಾಸಿಯ ಶಿಲಾಶಾಸನವೊಂದು ಇಲ್ಲುಂಟು.[೧]

ಪ್ರಾಚೀನ ಚರಿತ್ರಕಾಲ[ಬದಲಾಯಿಸಿ]

ಕ್ರಿ. ಪೂ. ಸುಮಾರು 3100-2200ರ ವರೆಗೆ ಪ್ರಾಚೀನ ಚರಿತ್ರಕಾಲ. ಈ ಕಾಲದಲ್ಲಿ ಈಜಿಪ್ಟಿನ ಸಾಂಸ್ಕøತಿಕ ಪ್ರಗತಿ ಅವ್ಯಾಹತ. ಸುಮಾರು 21ನೆಯ ಶತಮಾನದಿಂದ 15ನೆಯ ಶತಮಾನದವರೆಗೆ ಮಧ್ಯಮಕಾಲ. ಕಾಲಕ್ಕೆ ಮುಂಚೆಯೇ ರಾಜ್ಯದ ಅವನತಿ ಪ್ರಾರಂಭವಾಗಿತ್ತು. ಪ್ರಾಂತ್ಯಾಧಿಪತಿಗಳು ಸ್ವತಂತ್ರರಾಗತೊಡಗಿದ್ದರು. ಅವರವರಲ್ಲಿ ಜಗಳ ಹುಟ್ಟಿಕೊಂಡುವು. ಈ ಪರಿಸ್ಥಿತಿಯಲ್ಲಿ ಥೀಬ್ಸ್ ರಾಜ್ಯದ ದೊರೆ ಸಮಗ್ರ ರಾಜ್ಯವನ್ನು ವಶಪಡಿಸಿಕೊಂಡು ಅಖಂಡ ಈಜಿಪ್ಟಿನ ರಾಜನಾದ. ಥೀಬ್ಸ್ ನಗರ ರಾಜಧಾನಿಯಾಯಿತು. ದಕ್ಷಿಣಕ್ಕೂ ಪೂರ್ವಕ್ಕೂ ರಾಜ್ಯ ವಿಸ್ತರಿಸುವ ಪ್ರಯತ್ನ ನಡೆಯಿತು. ಸಿರಿಯ, ಪ್ಯಾಲಿಸ್ಟೈನ್, ಕ್ರೀಟ್, ಸೈಪ್ರಸ್ ಮುಂತಾದ ದೇಶಗಳೊಡನೆ ವ್ಯಾಪಾರ ಸಂಪರ್ಕ ಬೆಳೆಯಿತು. ಈಜಿಪ್ಷಿಯನ್ ಕಲೆಯ ಸೂತ್ರಗಳೂ ವಿಧಿನಿಯಮಗಳೂ ಖಚಿತಗೊಂಡು ಅಭಿಜಾತ ಈಜಿಪ್ಷಿಯನ್ ಕಲೆ ರೂಪುತಾಳಿತು. ಕೃಷಿರಂಗದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು ಈ ಕಾಲದಲ್ಲೇ.ಕ್ರಿ. ಪೂ. ಸುಮಾರು 18ನೆಯ ಶತಮಾನದಲ್ಲಿ ಹಿಕ್ಯಾಸ್ ಎಂಬ ಜನ ಈಜಿಪ್ಟಿಗೆ ನುಗ್ಗಿ ದೇಶ ಸ್ವಾಧೀನಪಡಿಸಿಕೊಂಡರು. ಅವರು ನುರಿತ ಯೋಧರು. ಯುದ್ಧದಲ್ಲಿ ರಥಗಳನ್ನೂ ಕುದುರೆಗಳನ್ನೂ ಉಪಯೋಗಿಸುತ್ತಿದ್ದರು. ಅವರು ಬಂದ ಸ್ವಲ್ಪ ಕಾಲದ ಮೇಲೆ ಅವರನ್ನು ಹೊಡೆದಟ್ಟುವುದಕ್ಕೆ ಚಳವಳಿ ಪ್ರಾರಂಭವಾಯಿತು. ಕೊನೆಗೂ ಅವರನ್ನು ಹೊರಗೋಡಿಸಲು ಸಾಧ್ಯವಾದದ್ದು ಕ್ರಿ. ಪೂ. ಹದಿನೈದನೆಯ ಶತಮಾನದಲ್ಲಿ ಈಜಿಪ್ಟಿನ ಹದಿನೆಂಟನೆಯ ರಾಜಸಂತತಿಯ ಆಳ್ವಿಕೆ ಆಗ ಪ್ರಾರಂಭ. ಈಜಿಪ್ಟ್ ಸಾಮ್ರಾಜ್ಯವಾಗಿ ಬೆಳೆಯಿತು.[೨]

ಸುವರ್ಣಯುಗ[ಬದಲಾಯಿಸಿ]

ಹೊಸ ರಾಜ್ಯಗಳನ್ನು ಗೆದ್ದು ಈಜಿಪ್ಟ್ ದೊರೆಗಳು (ಫೇರೋಗಳು) ಸಾಮ್ರಾಜ್ಯ ಸ್ಥಾಪಿಸಿದ್ದು ಕ್ರಿ. ಪೂ. ಹದಿನಾಲ್ಕನೆಯ ಶತಮಾನದ ಪೂರ್ವಾರ್ಧದಲ್ಲಿ ಆಳಿದ ಮೂರನೆಯ ಟಿಟ್‍ಮೋಸನ ಕಾಲದಲ್ಲಿ. ಇವನ ಹಿಂದಿನ ದೊರೆಗಳೂ ಆ ಪ್ರಯತ್ನ ನಡೆಸಿದ್ದರು. ಆದರೆ ಅದು ಫಲಕಾರಿಯಾಗಿರಲಿಲ್ಲ. ಈತ 20 ವರ್ಷ ಕಾಲ ಯುದ್ಧ ಮಾಡಿ ಕೊನೆಗೆ ಸಿರಿಯ ರಾಜ್ಯ ವಶಪಡಿಸಿಕೊಂಡ. ದೂರದೇಶಗಳಿಗೂ ಇವನ ಖ್ಯಾತಿ ಹಬ್ಬಿತು. ಏಷ್ಯಮೈನರಿನ ಹಿಟ್ಟೈಟರು ಈತನ ಸ್ನೇಹಕ್ಕೆ ಕಾತರರಾಗಿದ್ದರು. ಟಿಟ್‍ಮೋಸನ ಆಡಳಿತವ್ಯವಸ್ಥೆ ಉಚ್ಚಮಟ್ಟದ್ದು. ಈ ದೊರೆಗಳ ಪ್ರಭಾವ ನಾನಾ ದೇಶಗಳಿಗೆ ಹರಡಿತು; ಅದು ಕ್ರಿ. ಪೂ. 1411-1375ರ ವರೆಗೆ ಆಳಿದ ಮೂರನೆಯ ಅಮೆನ್‍ಹೋತೆಪ್‍ನ ಕಾಲದಲ್ಲಿ ಉಚ್ಚಮಟ್ಟಕ್ಕೇರಿತು. ಈತನ ಉತ್ತಮ ಆಡಳಿತ ವ್ಯವಸ್ಥೆಯ ಪರಿಣಾಮವಾಗಿ ಸಾಮ್ರಾಜ್ಯದಲ್ಲಿ ಶಾಂತಿಸಂತೃಪ್ತಿಗಳು ನೆಲೆಸಿದವು. ಈಜಿಪ್ಟಿನ ಇತಿಹಾಸದಲ್ಲಿ ಈತನ ಆಳ್ವಿಕೆಯ ಕಾಲವೇ ಸುವರ್ಣಯುಗ. ಈಜಿಪ್ಟಿನ ಸಾಮ್ರಾಟ ಆಗಿನ ಪ್ರಪಂಚಕ್ಕೇ ಹಿರಿಯ ವ್ಯಕ್ತಿಯಾಗಿದ್ದ. ರಾಜಧಾನಿಯಾದ ಥೀಬ್ಸ್ ನಗರಕ್ಕೆ ಕಪ್ಪಕಾಣಿಕೆಗಳು ಪ್ರವಾಹದಂತೆ ಬರುತ್ತಿದ್ದುವು. ದೇವಸ್ಥಾನಗಳು ಅನಘ್ರ್ಯ ರತ್ನಾಭರಣಗಳಿಂದ ಪ್ರಜ್ವಲಿಸುತ್ತಿದ್ದುವು, ಕಂಚಿನ ಬಾಗಿಲುಗಳ ಹಿಂದೆ ಚಿನ್ನದ ರಾಶಿ. ಬ್ಯಾಬಿಲಾನ್, ಅಸ್ಸೀರಿಯ, ಮಿಟಾನಿಗಳನ್ನೊಳಗೊಂಡ ಆಗಿನ ನಾಗರಿಕ ಪ್ರಪಂಚವೆಲ್ಲ ಮೂರನೆಯ ಅಮೆನ್‍ಹೋತೆಪ್‍ನ ಅನುಗ್ರಹಕ್ಕಾಗಿ ಕಾದಿರುತ್ತಿತ್ತು. ಈತನ ಸಮರನೌಕೆಗಳು ಮೆಡಿಟರೇನಿಯನ್ ಸಮುದ್ರದಲ್ಲಿ ಶಾಂತಿರಕ್ಷಣೆ ಮಾಡುತ್ತಿದ್ದುವು; ವಾಣಿಜ್ಯ ನೌಕೆಗಳು ಥೀಬ್ಸ್ ನಗರದ ಅರಮನೆಗಳಿಗೆ, ದೇವಾಲಯಗಳಿಗೆ ಕಲಾಪೂರ್ಣ ವಸ್ತುಗಳನ್ನು ಸಂಗ್ರಹಿಸುವುದಕ್ಕಾಗಿ ನಾನಾ ಕಡೆ ತಿರುಗುತ್ತಿದ್ದುವು. ಇದು ಡಾಸ್ಮೆ ಎಂಬ ಇತಿಹಾಸಕಾರನ ವರ್ಣನೆ.

ಇತಿಹಾಸ[ಬದಲಾಯಿಸಿ]

ಅಮೆನ್‍ಹೋತೆಪ್‍ನ ಮರಣಾನಂತರ ಈಜಿಪ್ಟಿನ ವೈಭವ ಬಹುಕಾಲ ನಿಲ್ಲಲಿಲ್ಲ. ಆತನ ಮಗ ನಾಲ್ಕನೆಯ ಆಮೆನ್ ಹೋತೆಪ್ ಸಾಮ್ರಾಜ್ಯದ ರಕ್ಷಣೆಯನ್ನು ಕಡೆಗಣಿಸಿ ಮತ ವಿಷಯಗಳಲ್ಲಿ ಆಸಕ್ತಿ ವಹಿಸಿದ; ಹಿಂದಿನ ಧರ್ಮ ಸಂಪ್ರದಾಯಗಳನ್ನು ಬುಡಮೇಲು ಮಾಡಲೆತ್ನಿಸಿದ. ಎಲ್ಲರೂ ಸೂರ್ಯಾರಾಧನೆ ಮಾಡಬೇಕು; ಇತರ ದೇವತೆಗಳ ಪೂಜೆ ತ್ಯಜಿಸಬೇಕು-ಎಂದು ಆತನ ಆಜ್ಞೆ. ಆತ ತನ್ನ ಹೆಸರನ್ನೇ ಬದಲಾಯಿಸಿಕೊಂಡು ಆಕ್ನಾಟನ್ ಎಂಬ ಹೆಸರು ಧರಿಸಿದ. ರಾಜಧಾನಿಯನ್ನು ಥೀಬ್ಸ್‍ನಿಂದ ಅಮನಾನ್ ಬಳಿಯಲ್ಲಿ ಹೊಸದಾಗಿ ಕಟ್ಟಿಸಿದ ನಗರಕ್ಕೆ ಬದಲಿಸಿದ.ಅಕ್ಬರನ ದೀನ್ ಇಲಾಹಿ ಮತಕ್ಕಾದ ಗತಿಯೇ ಈತನ ಹೊಸ ಧರ್ಮಕ್ಕೂ ಉಂಟಾಯಿತು. ದೊರೆ ಇಂಥ ಸುಧಾರಣೆಗಳ ಪ್ರಯೋಗ ನಡೆಸುತ್ತಿದ್ದಾಗ ಹಿಟ್ಟೈಟರು ಉತ್ತರ ಪ್ರಾಂತ್ಯಗಳ ಮೇಲೆ ದಾಳಿ ನಡೆಸಿದರು. ಈತನಿಂದಾಗಲಿ ಈತನ ತರುವಾಯ ಆಳಿದ ದೊರೆಗಳಿಂದಾಗಲಿ ಹಿಟ್ಟೈಟರನ್ನು ತಡೆಗಟ್ಟುವುದು ಸಾಧ್ಯವಾಗಲಿಲ್ಲ. ವೈಭವದಿಂದ ದರ್ಪದಿಂದ ಮೆರೆದ ಸಾಮ್ರಾಜ್ಯ ಬಲಗುಂದಿತು. ಕ್ರಿ. ಪೂ. 1292ರಿಂದ 1225ರ ವರೆಗೆ ಆಳಿದ ಎರಡನೆಯ ರ್ಯಾಮ್ಸೆಸ್ ಸಿರಿಯದ ಉತ್ತರ ಪ್ರಾಂತ್ಯಗಳನ್ನು ಹಿಟ್ಟೈಟರಿಗೆ ಬಿಟ್ಟುಕೊಡಬೇಕಾಯಿತು. ಹದಿಮೂರನೆಯ ಶತಮಾನದ ಅಂತ್ಯಕಾಲಕ್ಕೆ ಉತ್ತರದಿಂದ ಫಿಲಿಸ್ಟೈನರು ಸಾಮ್ರಾಜ್ಯದೊಳಕ್ಕೆ ನುಗ್ಗತೊಡಗಿದರು; ಪಶ್ಚಿಮದಿಂದ ಲಿಬಿಯನ್ನರ ಹಾವಳಿ ಪ್ರಾರಂಭವಾಯಿತು ಈ ದಾಳಿಗಳನ್ನೆದುರಿಸಲು ಅಪಾರ ಹಣ ಖರ್ಚಾಗಿ, ಹನ್ನೆರಡನೆಯ ಶತಮಾನ ಮುಗಿಯುವ ಕಾಲಕ್ಕೆ ರಾಜ್ಯದ ಆರ್ಥಿಕಸ್ಥಿತಿ ಪೂರ್ತಿ ಹದಗೆಟ್ಟಿದ್ದು ಆಶ್ಚರ್ಯವಲ್ಲ. ಮುಂದೆ ನಾಲ್ಕು ಶತಮಾನಕಾಲ ಅಸ್ಸೀರಿಯ, ನ್ಯೂಬಿಯ, ಲಿಬಿಯ ದೊರೆಗಳ ಆಧಿಪತ್ಯವನ್ನೂ ಅನುಭವಿಸಬೇಕಾಯಿತು. ಈ ಇಳಿಗತಿಯನ್ನು ತಡೆಗಟ್ಟಿ ರಾಜ್ಯವನ್ನು ಪುನರುಜ್ಜೀವನಗೊಳಿಸಲು ಎರಡನೆಯ ಅಹಮೋಸಸ್ (ಕ್ರಿ. ಪೂ. 569-525) ಮುಂತಾದ ಕೆಲವು ದೊರೆಗಳು ಮಾಡಿದ ಪ್ರಯತ್ನಗಳೂ ಫಲಿಸಲಿಲ್ಲ.

ಪರಕೀಯರ ಸಾಮ್ರಾಜ್ಯ[ಬದಲಾಯಿಸಿ]

ಈ ಮಧ್ಯೆ ಪೂರ್ವದಲ್ಲಿ ಪರ್ಷಿಯ ಸಾಮ್ರಾಜ್ಯ ಪ್ರಬಲಿಸಿತ್ತು. ಅದು ಬ್ಯಾಬಿಲೋನಿಯ, ಲಿಡಿಯ, ಮೀಡಿಯ ರಾಜ್ಯಗಳನ್ನು ಗೆದ್ದು ಕ್ರಿ. ಪೂ. 525ರಲ್ಲಿ ಈಜಿಪ್ಟನ್ನೂ ವಶಪಡಿಸಿಕೊಂಡಿತು. ನೈಲ್ ನದೀ ಬಯಲು ಪರ್ಷಿಯ ಚಕ್ರಾಧಿಪತ್ಯದ ಒಂದು ಪ್ರಾಂತ್ಯವಾಗಿ (ಸತ್ರಪಿ), ಮಂಡಲಾಧಿಪತಿಯ (ಸತ್ರಪ್) ಆಳ್ವಿಕೆಗೊಳಪಟ್ಟು. ಪರ್ಷಿಯನ್ ಸೈನ್ಯ ತುಕಡಿಗಳು ಇಲ್ಲಿ ಬಂದು ಕುಳಿತಾಗ ಇಲ್ಲಿನ ಜನ ಮುಳಿದು ಆಗಿಂದಾಗ್ಗೆ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಇದ್ದರು. ಆದರೆ ಕ್ರಿ. ಪೂ. 332ರಲ್ಲಿ ಅಲೆಕ್ಸಾಂಡರ್ ದೇಶವನ್ನು ಸ್ವಾಧೀನಪಡಿಸಿಕೊಳ್ಳುವವರೆಗೂ ಇವರಿಗೆ ಪರ್ಷಿಯನ್ನರ ಆಳ್ವಿಕೆ ತಪ್ಪಲಿಲ್ಲ.ಅಲೆಕ್ಸಾಂಡರ್ ಕ್ರಿ.ಪೂ. 323ರಲ್ಲಿ ಕಾಲವಾದ. ಆತನ ಚಕ್ರಾಧಿಪತ್ಯದ ಬೇರೆ ಬೇರೆ ಭಾಗಗಳನ್ನು ಅವನ ಸೇನಾಧಿಪತಿಗಳು ಆಕ್ರಮಿಸಿಕೊಂಡು ಸ್ವತಂತ್ರರಾಗಿ ಆಳತೊಡಗಿದರು. ಈಜಿಪ್ಟ್ ಟಾಲಮಿಯೆಂಬ ದಂಡನಾಯಕನ ಸ್ವಾಧೀನಕ್ಕೆ ಬಂತು. ಕ್ರಿ.ಪೂ. ಸುಮಾರು 306ರಲ್ಲಿ ಈತ ಸ್ವತಂತ್ರ ದೊರೆಯೆಂದು ಸಾರಿಕೊಂಡ. ಕ್ರಿ.ಪೂ. 30ರಲ್ಲಿ ಕ್ಲಿಯೊಪಾತ್ರ ಮರಣ ಹೊಂದುವವರೆಗೂ ಈತನ ಸಂತತಿಯವರು ಈಜಿಪ್ಟನ್ನಾಳಿದರು. ಇವರೆಲ್ಲರಿಗೂ ಟಾಲಮಿ ದೊರೆಗಳೆಂದು ಹೆಸರು. ಈ ಕಾಲದಲ್ಲಿ ಇಡೀ ದೇಶವೇ ಒಂದು ನೆಡುತೋಟವಾಗಿ ಇದು ಕೃಷಿಯಲ್ಲಿ ಮುಂದರಿಯಿತು. ಮರುವರ್ಷದ ಸ್ಥಿತಿಗತಿ ಆವಶ್ಯಕತೆಗಳನ್ನೆಲ್ಲ ಪೂರ್ವಭಾವಿಯಾಗಿ ಯೋಚಿಸಿ ಬೆಳೆ ನಿರ್ಣಯ ಮಾಡುವ ವ್ಯವಸ್ಥೆಯಿದ್ದದ್ದರಿಂದ, ಮರುವರ್ಷದ ಉತ್ಪನ್ನವೂ ಕಂದಾಯವೂ ಎಷ್ಟೆಂಬುದು ಮೊದಲೇ ಗೊತ್ತಿರುತ್ತಿತ್ತು. ಕೃಷಿವಿಷಯದಲ್ಲಿ ಮಾತ್ರವಲ್ಲದೆ ಬಟ್ಟೆ, ಎಣ್ಣೆ, ಗಣಿ, ಬ್ಯಾಂಕು-ಎಲ್ಲದರ ಮೇಲೂ ಸರ್ಕಾರದ್ದೇ ಏಕಸ್ವಾಮ್ಯ. ನೈಲ್ ನದೀಮುಖದಲ್ಲಿ ಅಲೆಕ್ಸಾಂಡರ್ ಕಟ್ಟಿಸಿದ ಅಲೆಕ್ಸಾಂಡ್ರಿಯ ಈಜಿಪ್ಟಿನ ರಾಜಧಾನಿಯಾಯಿತಲ್ಲದೆ ಗ್ರೀಕರ ಸಾಹಿತ್ಯ, ಕಲೆ ಮತ್ತು ವಿe್ಞÁನಗಳಿಗೆ ಸಂಬಂಧಿಸಿದ ಚಟುವಟಿಕೆಗಳ ಪ್ರಭಾವ ಕೇಂದ್ರವೂ ಆಯಿತು. ಅಲ್ಲಿನ ಸುಪ್ರಸಿದ್ಧ್ದ ಪುಸ್ತಕ ಭಂಡಾರದಲ್ಲೂ ವಸ್ತುಸಂಗ್ರಹಶಾಲೆಯಲ್ಲೂ ಯೂಕ್ಲಿಡ್, ಇರಾಟೋ ಸ್ತನೀಸ್, ಅರಿಸ್ಟಾರ್ಕಸ್ ಮುಂತಾದ ಪ್ರಖ್ಯಾತ ಗ್ರೀಕ್ ವಿದ್ವಾಂಸರು ಟಾಲಮಿಗಳ ಆಶ್ರಯದಲ್ಲಿ ಕೆಲಸಮಾಡಿದರು. ಸರ್ಕಾರದ ವ್ಯವಹಾರವೆಲ್ಲ ನಡೆಯುತ್ತಿದ್ದದ್ದು ಗ್ರೀಕ್ ಭಾಷೆಯಲ್ಲಿ; ಸ್ಥಳೀಯ ಭಾಷೆಯ ಬೆಳೆವಣಿಗೆಗೂ ಅವಕಾಶವಿತ್ತು. ಈಜಿಪ್ಟಿನ ಪುರಾತನ ಸಂಸ್ಕøತಿಯ ಮೇಲೆ ಗ್ರೀಕ್ ಸಂಸ್ಕøತಿ ಬೀರಿದ ಪ್ರಭಾವ ಅಪಾರ.

ರೋಮನ್ನರ ಸ್ವಾಧೀನ[ಬದಲಾಯಿಸಿ]

ಕ್ರಿ.ಪೂ. 30ರಲ್ಲಿ ಕೊನೆಯ ಟಾಲಮಿ ರಾಣಿ ಕ್ಲಿಯೊಪಾತ್ರಳ ಕಾಲಾನಂತರ ಈಜಿಪ್ಟ್ ರೋಮನ್ನರ ಸ್ವಾಧೀನಕ್ಕೆ ಬಂತು. ಇಡೀ ದೇಶವೇ ರೋಮನ್ ಸಾಮ್ರಾಟನ ಖಾಸಗಿ ಸ್ವತ್ತಾಗಿ ಆತ ನೇಮಿಸಿದ ಸೈನ್ಯಾಧಿಕಾರಿಯ ಆಡಳಿತ ಏರ್ಪಟ್ಟಿತು. ಗ್ರೀಕರ ಕಾಲದ ಕೇಂದ್ರೀಕೃತ ಆಡಳಿತವ್ಯವಸ್ಥೆಯೇ ಈ ಕಾಲದಲ್ಲೂ ಮುಂದುವರಿಯಿತಾದರೂ ರೋಮನರ ನಿರಂಕುಶಾಧಿಪತ್ಯದಿಂದ ಈಜಿಪ್ಟಿನ ಸಂಪತ್ತು ಹೆಚ್ಚಾಗಿ ರೋಮಿನ ಕಡೆ ಹರಿಯತೊಡಗಿತು. ರೋಮನರು ನಡೆಸಿದ ಈ ಶೋಷಣೆಯ ಪರಿಣಾಮವಾಗಿ ಜನರ ಆರ್ಥಿಕ ಪರಿಸ್ಥಿತಿ ಕ್ಷೀಣಿಸಿತು. ಉತ್ಪನ್ನ ಕುಗ್ಗಿತು: ಕೃಷಿಕರು ತಮ್ಮ ಹಿಡುವಳಿಗಳನ್ನು ಬಿಟ್ಟು ಇತರ ಪ್ರಾಂತ್ಯಗಳಿಗೆ ವಲಸೆ ಹೋದರು. ಅಲ್ಲಲ್ಲೇ ಎದ್ದ ದಂಗೆಗಳನ್ನು ಕ್ರೌರ್ಯದಿಂದ ಅಡಗಿಸಲಾಯಿತು. ಕ್ರೈಸ್ತಧರ್ಮ ಈಜಿಪ್ಟಿನಲ್ಲಿ ಹರಡಿದ್ದು ಇದೇ ಕಾಲದಲ್ಲಿ. ಮೊದಲು ಈ ಧರ್ಮವನ್ನು ಅಡಗಿಸುವ ಪ್ರಯತ್ನಗಳು ನಡೆದು ದೇಶದಲ್ಲಿ ಕ್ಷೋಭೆಯುಂಟಾಯಿತು. ಕೊನೆಗೆ ರೋಮನ್ ಚಕ್ರವರ್ತಿ ಕಾನ್‍ಸ್ಟಂಟೀನ್ (ಕ್ರಿ. ಶ. 427-337) ಕ್ರೈಸ್ತಧರ್ಮಕ್ಕೂ ಮಾನ್ಯತೆ ಕೊಟ್ಟ. ಈಜಿಪ್ಟಿನಲ್ಲಿ ಕ್ರೈಸ್ತ ಧರ್ಮಕ್ಕೆ ಅಲೆಕ್ಸಾಂಡ್ರಿಯ ಕೇಂದ್ರವಾಯಿತು.

ಬೈಜಾಂಟಿನ್ ಆಥವಾ ಪೂರ್ವ ರೋಮನ್ ಸಾಮ್ರಾಜ್ಯ ಅಸ್ತಿತ್ವ[ಬದಲಾಯಿಸಿ]

ಬೈಜಾಂಟಿನ್ ಆಥವಾ ಪೂರ್ವ ರೋಮನ್ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಕ್ರಿ. ಶ. 395ರಲ್ಲಿ. ಈ ಸಾಮ್ರಾಜ್ಯದ ರಾಜಧಾನಿ ಕಾನ್‍ಸ್ಟಾಂಟಿನೋಪಲ್ ಈಜಿಪ್ಟನ್ನಾಳುತ್ತಿದ್ದದ್ದು ಅಲ್ಲಿಂದಲೇ. ಕ್ರಮೇಣ ಈ ಹತೋಟಿ ಸಡಿಲವಾಗುತ್ತ ಬಂದು, ಏಳನೆಯ ಶತಮಾನದ ಮೊದಲ ದಶಕಗಳಲ್ಲಿ ಪರ್ಷಿಯದ ಸೈನ್ಯ ಈಜಿಪ್ಟಿನವರೆಗೂ ನುಗ್ಗಿಬಂತು; ಅದನ್ನು ಕಷ್ಟದಿಂದ ಹಿಮ್ಮೆಟ್ಟಿಸಬೇಕಾಯಿತು.

ಇಸ್ಲಾಂ ಪ್ರಭಾವ[ಬದಲಾಯಿಸಿ]

ಇಸ್ಲಾಂ ಧರ್ಮಸ್ಥಾಪನೆಯಾದದ್ದು ಇದೇ ಕಾಲದಲ್ಲಿ. ಅರೇಬಿಯಾದಲ್ಲಿ ಹುಟ್ಟಿದ ಈ ಧರ್ಮ ಬಹುಬೇಗ ಸುತ್ತಮುತ್ತಣ ದೇಶಗಳಿಗೆ ಹರಡಿ ಹೊಸ ಹುರುಪಿನಿಂದ ಕೂಡಿದ್ದ ಮುಸ್ಲಿಂ ರಾಜ್ಯವೊಂದು ಹುಟ್ಟಿಕೊಂಡಾಗ 642ರ ಕಾಲಕ್ಕೆ ಈಜಿಪ್ಟು ಈ ಮುಸ್ಲಿಂ ರಾಜ್ಯಕ್ಕೆ ಸೇರಿಹೋಗಿ ಮುಸ್ಲಿಂ ರಾಜ್ಯಪಾಲರ ಆಡಳಿತವನ್ನು ಕಟ್ಟಿದರು. ಹತ್ತನೆಯ ಶತಮಾನ ಕಳೆಯುವವರೆಗೂ ಈಜಿಪ್ಟಿನ ಆಡಳಿತ ಸುಗಮವಾಗಿತ್ತು. ಆದರೆ ಮುಂದೆ ಸೆಲ್ಜುಕ್ಕರ ಹಾವಳಿ, ಕ್ರೈಸ್ತ ಧಾರ್ಮಿಕ ಯುದ್ಧಗಳು (ಕ್ರುಸೇಡ್ಸ್) ಇವುಗಳ ಪರಿಣಾಮವಾಗಿ ಈಜಿಪ್ಟ್ ಕ್ಷೋಭೆಗೀಡಾಯಿತು. ಈಜಿಪ್ಟ್ ಕೆಲಕಾಲ ಸೆಲ್ಜುಕ್ ಸುಲ್ತಾನರ ಆಳ್ವಿಕೆಯಲ್ಲಿದ್ದು ಮುಂದೆ ಅಯೂಬಿದ್ ವಂಶದ ಸುಲ್ತಾನ್ ಸಲಾವುದ್ದೀನ್ ಅಥವಾ ಸ್ಯಾಲಡಿನ್ನನ (1174-93) ವಶಕ್ಕೆ ಬಂತು. ಆತನ ವಂಶದವರು 1250ರ ವರೆಗೂ ಈಜಿಪ್ಟನ್ನಾಳಿದರು. ಅವರ ಗುಲಾಮರಾಗಿದ್ದು ಬಿಡುಗಡೆ ಹೊಂದಿ ಆಡಳಿತವರ್ಗದಲ್ಲೂ ಸೈನ್ಯದಲ್ಲೂ ಉಚ್ಚಸ್ಥಾನ ಪಡೆದಿದ್ದ ಮ್ಯಾಮಲೂಕರು ಆ ವರ್ಷ ಸ್ವತಃ ಸುಲ್ತಾನರಾದರು. ಇವರ ಆಳ್ವಿಕೆ ನಡೆದದ್ದು 1517ರ ವರೆಗೆ. ಈ ಕಾಲದಲ್ಲಿ ರಾಜ್ಯದಲ್ಲೆಲ್ಲ ಯುದ್ಧ, ದಂಗೆ, ಅಧಿಕಾರಕ್ಕಾಗಿ ಹೋರಾಟ. ಈಜಿಪ್ಟ್ ಶಾಂತಿಯನ್ನೇ ಕಾಣಲಿಲ್ಲ. ಈ ಮಧ್ಯೆ 1517ರಲ್ಲಿ ಆಟೊಮನ್ ಸುಲ್ತಾನರು ಈಜಿಪ್ಟ್‍ನ್ನು ವಶಪಡಿಸಿಕೊಂಡರು. ಮುಂದೆ ಸುಮಾರು ನಾಲ್ಕು ಶತಮಾನ ಕಾಲ ಈಜಿಪ್ಟ್ ನಾಮಮಾತ್ರಕ್ಕಾದರೂ ಆಟೊಮನ್ ರಾಜ್ಯದ ಒಂದು ಭಾಗವಾಗುಳಿಯಿತು. ಆ ಸುಲ್ತಾನರಿಗೆ ಅರೇಬಿಯ ಸಿರಿಯ ಮುಂತಾದ ದಕ್ಷಿಣದ ಪ್ರಾಂತ್ಯಗಳನ್ನು ಹತೋಟಿಯಲ್ಲಿಡಲು ಈಜಿಪ್ಟ್ ಸಹಾಯಕವಾಗಿತ್ತು. ಮ್ಯಾಮಲೂಕರು ಆಟೋಮನ್ ಸುಲ್ತಾನರಿಗೆ ಕಪ್ಪಕೊಟ್ಟು ಆಡಳಿತ ನಡೆಸುತ್ತಿದ್ದರು.

ಪಾಶ್ಚಾತ್ಯರ ಹತೋಟಿ[ಬದಲಾಯಿಸಿ]

1798 ರಿಂದ 1801ರವರೆಗೆ ಈಜಿಪ್ಟನ್ನು ನೆಪೋಲಿಯನ್ ಸ್ವಾಧೀನಪಡಿಸಿಕೊಂಡ. ತತ್ಪಲವಾಗಿ ಈಜಿಪ್ಟಿನ ರಾಜಕೀಯ ಪರಿಸ್ಥಿತಿ ಹದಗೆಟ್ಟಿತು. ಆಂತರಿಕ ಪಕ್ಷಗಳಲ್ಲಿ ಕದನ ಪ್ರಾರಂಭವಾಗಿ 1811ರಲ್ಲಿ ಮೆಹಮೆಟ್ ಆಲಿ ಈಜಿಪ್ಟಿನ ಸುಲ್ತಾನನಾದ. ಮುಂದೆ ಈಜಿಪ್ಟಿನ ಮೇಲೆ ಆಟೊಮನ್ ಸುಲ್ತಾನರ ಸಾರ್ವಭೌಮತ್ವ ನಾಮಮಾತ್ರ ಉಳಿಯಿತು. ಮೆಹಮೆಟ್ ಆಲಿಯ ಕಾಲದಲ್ಲಿ ಈಜಿಪ್ಟಿನ ಪ್ರಗತಿ ಸರ್ವತೋಮುಖವಾಗಿ ಸಾಗಿತು.ಆದರೆ ಈಜಿಪ್ಟಿನ ಈ ಪ್ರಗತಿಯೇ ಪ್ರಬಲರಾಷ್ಟ್ರಗಳ ಕಣ್ಣ ಮುಳ್ಳಾಯಿತು. ಇಂಗ್ಲೆಂಡ್-ಭಾರತಗಳ ನಡುವೆ ಸೂಯೆeóï ಇದ್ದದ್ದೇ ಇದಕ್ಕೆ ಕಾರಣ. ಆದ್ದರಿಂದ ಇಂಗ್ಲೆಂಡ್ ಆಟೊಮನ್ನರೊಂದಿಗೆ ಕೂಡಿ ಮೊಹಮದ್ ಆಲಿಯ ಪ್ರಾಬಲ್ಯವನ್ನು ಕುಗ್ಗಿಸಿತು. 1849ರಲ್ಲಿ ಆತ ಕಾಲವಾದ. ಹಿಂದಿನ ಒಪ್ಪಂದದ ಪ್ರಕಾರ ಆತನ ಸಂತತಿಯವರಲ್ಲೇ ಈಜಿಪ್ಟಿನ ಆಳ್ವಿಕೆ ಮುಂದುವರಿಯಿತು. ಸೂಯೆeóï ಕಾಲುವೆಯ ನಿರ್ಮಾಣ ಪ್ರಾರಂಭವಾದದ್ದು ಆತನ ಮಗನಾದ ಸೈಯದ್ ಪಾಷಾನ ಕಾಲದಲ್ಲಿ. 1863ರಲ್ಲಿ ಸೈಯ್ಯದ್ ಪಾಷಾನ ಮಗ ಇಸ್ಮಾಯಿಲ್ ಪಾಷಾ ಸುಲ್ತಾನನಾದ. ಈತ ರಾಜ್ಯದ ಆರ್ಥಿಕಾಭಿವೃದ್ಧಿಗಾಗಿ ಅನೇಕ ಕ್ರಮಕೈಗೊಂಡ; ರೈಲು ಮಾರ್ಗ ನಿರ್ಮಿಸಿದ. ಬಂದರುಗಳ ನಿರ್ಮಾಣವಾಯಿತು. ಜನವಿದ್ಯಾಭ್ಯಾಸಕ್ಕಾಗಿ ಅನೇಕ ಕಾರ್ಯಕ್ರಮಗಳು ಜಾರಿಗೆ ಬಂದುವು. ಈತ ದಕ್ಷಿಣದಲ್ಲಿ ಸುಡಾನಿನ ಕೆಲವು ಪ್ರಾಂತ್ಯಗಳನ್ನು ವಶಪಡಿಸಿಕೊಂಡ. ಆದರೆ ಹಣದ ವೆಚ್ಚದ ಮೇಲೆ ಹತೋಟಿಯಿಲ್ಲದ್ದರಿಂದ ಈತನ ಖಜಾನೆ ಬೇಗ ಬರಿದಾಯಿತು. ವ್ಯಾಪಾರ ಸೌಕರ್ಯಕ್ಕಾಗಿ ಸೂಯೆeóï ಕಾಲುವೆಯ ಮೇಲೆ ಹತೋಟಿ ಪಡೆಯಬೇಕೆಂದಿದ್ದ ಬ್ರಿಟಿಷರಿಗೆ ಆಗ ಅನುಕೂಲ ಸಂದರ್ಭವೊದಗಿತು. ಅವರು ಇಸ್ಮಾಯಿಲ್‍ಗೆ 40ಲಕ್ಷ ಪೌಂಡು ಕೊಟ್ಟು ಸೂಯೆeóï ಕಾಲುವೆಯ ಷೇರುಗಳನ್ನು ಕೊಂಡರು. ಮುಂದೆ ಈತನಿಗೆ ಯಾರೂ ಸಾಲ ಕೊಡಲಿಲ್ಲ. ದೇಶದ ಆಗಿನ ಆರ್ಥಿಕಸ್ಥಿತಿಯಂತೂ ಶೋಚನೀಯ. ಈಜಿಪ್ಟ್ ಸರ್ಕಾರದ ಆದಾಯ ವೆಚ್ಚಗಳ ಮೇಲೆ ಬ್ರಿಟಿಷ್ ಮತ್ತು ಫ್ರೆಂಚ್ ಸರ್ಕಾರಗಳ ಹತೋಟಿ ಬೆಳೆಯಿತು. 1878ರಲ್ಲಿ, ಸಂವಿಧಾನಬದ್ಧ ಸರ್ಕಾರ ಸ್ಥಾಪನೆಗೆ ಆತ ಒಪ್ಪಲೇಬೇಕಾಯಿತು. ಈ ಸರ್ಕಾರದಲ್ಲಿ ಪರಕೀಯರೂ ಇದ್ದರು. ಈ ಕೈವಾಡವನ್ನು ಆತ ಸಹಿಸಲಿಲ್ಲ. ಕೊನೆಗೆ ಆತ ತನ್ನ ಮಂತ್ರಿ ಸಂಪುಟವನ್ನೇ ವಿಸರ್ಜಿಸಿದ. ಆಗ ಇಂಗ್ಲಿಷ್ ಮತ್ತು ಫ್ರೆಂಚ್ ಸರ್ಕಾರಗಳು ಹೆಸರಿಗೆ ಮಾತ್ರವಾದರೂ ಇಸ್ಮಾಯಿಲ್‍ನ ಅಧಿರಾಜನಾಗಿದ್ದ ತುರ್ಕಿ ಸುಲ್ತಾನನಿಗೆ ಮೊರೆಯಿಟ್ಟುವು. ಆತನ ನಿರೂಪಕ್ಕನುಸಾರವಾಗಿ ಇಸ್ಮಾಯಿಲ್ ಪದಚ್ಯುತನಾಗಿ ಅವನ ಮಗ ಟ್ಯೂಫಿಕ್ ಪಾಷಾ ಪಟ್ಟಕ್ಕೆ ಬಂದ.

ಟ್ಯೂಫಿಕ್ ಪಾಷಾ[ಬದಲಾಯಿಸಿ]

ಟ್ಯೂಫಿಕ್ ಪಾಷಾ ಹೆಸರಿಗೆ ಮಾತ್ರ ದೊರೆ; ಆಡಳಿತವೆಲ್ಲ ಬ್ರಿಟಿಷ್ ಮತ್ತು ಫ್ರೆಂಚ್ ಕೈವಶ. ಪರಿಣಾಮವಾಗಿ ಜನರಲ್ಲಿ ಮೂಡಿದ ಆತೃಪ್ತಿ ಹೆಚ್ಚಿ ದೇಶದ ಸ್ವಾತಂತ್ರ್ಯಕ್ಕಾಗಿ 1882ರಲ್ಲಿ ಜನ ದಂಗೆಯೆದ್ದರು.ಬ್ರಿಟಿಷರು ಈ ದಂಗೆಯನ್ನಡಗಿಸಿದರು. ಮುಂದೆ ಅರ್ಧಶತಮಾನ ಕಾಲ ಈಜಿಪ್ಟ್ ಸಂಪೂರ್ಣವಾಗಿ ಬ್ರಿಟಿಷರ ಹತೋಟಿಗೊಳಪಟ್ಟಿತು. ಅದರ ಸೈನ್ಯದ ಮೇಲೆ ಬ್ರಿಟಿಷರ ಹಿಡಿತ ಏರ್ಪಟ್ಟಿತಲ್ಲದೆ ಅವರ ಸೈನ್ಯವೂ ಅಲ್ಲಿ ಠಾಣೆ ಹೂಡಿತು. ದೇಶದ ಹಣಕಾಸು ವ್ಯವಸ್ಥೆಯೂ ಬ್ರಿಟಿಷರ ವಶವಾಯಿತು.ಪರಾಂಕುಶ ನಿವಾರಣೆಗಾಗಿ ಈಜಿಪ್ಟಿನಲ್ಲಿ ಹೋರಾಟವಂತೂ ಸಾಗಿಯೇ ಇತ್ತು. ಅಹಮದ್ ಅರಬಿ ಎಂಬ ಉಚ್ಚ ಸೇನಾಪತಿಯೇ ಈ ಚಳವಳಿಯ ಮೊದಲ ಮುಖಂಡ. ಟೆಲ್-ಎಲ್-ಕಬೀರ್ ಕಾಳಗದಲ್ಲಿ ಆತ ಬ್ರಿಟಿಷರಿಂದ ಸೋತು, ದೇಶ ಭ್ರಷ್ಟನಾದ. ದೇಶದ ಅಭಿವೃದ್ಧಿಗಾಗಿ ಬ್ರಿಟಿಷರು ನಾನಾ ಸುಧಾರಣೆಗಳನ್ನು ಜಾರಿಗೆ ತಂದರು. ದಕ್ಷಿಣದ ಸೂಡಾನಿನಲ್ಲಿ ನಡೆದ ದಂಗೆ ಬಲು ಭೀಕರವಾಗಿತ್ತು. ಬ್ರಿಟಿಷ್ ಸೈನ್ಯಕ್ಕೆ ಕಷ್ಟನಷ್ಟ ಸಂಭವಿಸಿದ ನಷ್ಟವಂತೂ ಆಗಾಧ.ಈಜಿಪ್ಟಿನ ಈ ಪ್ರತಿಭಟನೆ 1900ರ ವರೆಗೂ ಮುಂದುವರಿದು ಆ ವರ್ಷ ನಿಂತಿತು. ಇಂಥ ಪರಿಸ್ಥಿತಿಯಲ್ಲೂ ಬ್ರಿಟಿಷರ ಸಮರ್ಥ ಆಡಳಿತದ ಪರಿಣಾಮವಾಗಿ ದೇಶದ ಆರ್ಥಿಕ ಪ್ರಗತಿ ತಕ್ಕಮಟ್ಟಿಗೆ ಉತ್ತಮಗೊಂಡಿತೆನ್ನಬಹುದು. ಈಜಿಪ್ಷಿಯನ್ ಮಂತ್ರಿಗಳ ಹಾಗೂ ಮೇಲ್ದರ್ಜೆ ನೌಕರರ ಅಧಿಕಾರ ಕುಗ್ಗಿತು.

ಸ್ವತಂತ್ರ ಈಜಿಪ್ಟ್[ಬದಲಾಯಿಸಿ]

ಒಂದನೆಯ ಮಹಾಯುದ್ಧದಲ್ಲಿ ತುರ್ಕಿ ಬ್ರಿಟಿಷರಿಗೆ ವಿರೋಧವಾಗಿ ನಿಂತದ್ದರಿಂದ ಈಜಿಪ್ಟನ್ನು ಬ್ರಿಟಿಷ್ ರಕ್ಷಿತ ರಾಜ್ಯವೆಂದು ಘೋಷಿಸಲಾಯಿತು. ಆಗ ಈಜಿಪ್ಟಿನ ಮೇಲೆ ಬ್ರಿಟನ್ನಿಗೆ ಸಂಪೂರ್ಣ ಹತೋಟಿ ದೊರಕಿತು. ಆದರೆ ಈಜಿಪ್ಟಿನ ಜನತೆ ತೆಪ್ಪಗಿರಲಿಲ್ಲ. 1919ರಲ್ಲಿ ಸಾಅದ್ ಸಗ್ಲೂಲ್ ಪಾಷಾ ಮುಖಂಡತ್ವದಲ್ಲಿ ಭಾರೀ ಸ್ವಾತಂತ್ರ್ಯ ಚಳವಳಿ ಪ್ರಾರಂಭವಾಯಿತು. ತಾತ್ಕಾಲಿಕವಾಗಿ ಇದನ್ನು ಅಡಗಿಸಲು ಸಾಧ್ಯವಾಯಿತಾದರೂ ಈಜಿಪ್ಟಿನ ಜನರ ಬೇಡಿಕೆಯ ನಿರಾಕರಣೆ ಸಾಧ್ಯವಿಲ್ಲವೆಂಬುದನ್ನು ಮನಗಂಡ ಬ್ರಿಟಿಷ್ ಸರ್ಕಾರ 1922ರಲ್ಲಿ ಈಜಿಪ್ಟ್‍ನ್ನು ಸ್ವತಂತ್ರರಾಜ್ಯವೆಂಬುದನ್ನು ಘೋಷಿಸಿತು. ಆದರೆ ನಾಲ್ಕು ವಿಷಯಗಳ ತೀರ್ಮಾನವನ್ನು ಮಾತ್ರ ಮುಂದಕ್ಕೆ ತಳ್ಳಲಾಯಿತು. ಬ್ರಿಟಿಷ್ ಚಕ್ರಾಧಿಪತ್ಯದ ನಾನಾಭಾಗಗಳ ಸಂಪರ್ಕವ್ಯವಸ್ಥೆ, ಹೊರರಾಷ್ಟ್ರಗಳು ಯುದ್ಧ ಹೂಡಿದಾಗ ಅನುಸರಿಸಬೇಕಾದ ರೀತಿ ನೀತಿ, ಈಜಿಪ್ಟಿನಲ್ಲಿದ್ದ ಐರೋಪ್ಯರ ಆಸ್ತಿಪಾಸ್ತಿ ರಕ್ಷಣೆ, ಸೂಡಾನಿನ ಪ್ರಶ್ನೆ-ಇವೇ ಆ ನಾಲ್ಕು. 1923ರಲ್ಲಿ ಈಜಿಪ್ಟಿನಲ್ಲಿ ಸಂವಿಧಾನಬದ್ಧ ರಾಜಪ್ರಭುತ್ವ ಸ್ಥಾಪನೆಯಾಯಿತು. ಮೊದಲನೆಯ ಫೌದ್ ಸುಲ್ತಾನನಾದ. ಆದರೂ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಜನತೆಯ ಹೋರಾಟ ನಿಲ್ಲಲಿಲ್ಲ. ಆನೇಕ ಬ್ರಿಟಿಷ್ ಅಧಿಕಾರಿಗಳು ಕೊಲೆಯಾದರು. ಕೊನೆಗೆ 1936ರಲ್ಲಿ ಇಂಗ್ಲೆಂಡ್ ಈಜಿಪ್ಟಗಳ ನಡುವೆ ಒಪ್ಪಂದವಾಗಿ, ಇಪ್ಪತ್ತು ವರ್ಷಕಾಲ ಬ್ರಿಟಿಷ್ ಸೈನ್ಯ ಈಜಿಪ್ಟಿನಲ್ಲಿರತಕ್ಕದ್ದೆಂದೂ ಇಂಗ್ಲೆಂಡಿನ ವ್ಯಾಪಾರಕ್ಕೆ ಅತ್ಯಾವಶ್ಯಕವಾದ ಸೂಯೆeóï ಕಾಲುವೆಯ ವಿಷಯದಲ್ಲಿ ಕೆಲವು ವಿಶಿಷ್ಟ ಸೌಕರ್ಯಗಳನ್ನು ಇಂಗ್ಲೆಂಡ್ ಹೊಂದಿರಬೇಕೆಂದೂ ತೀರ್ಮಾನವಾಯಿತು. ಎರಡನೆಯ ಮಹಾಯುದ್ಧದ ಪ್ರತಿಕೂಲ ಪರಿಸ್ಥಿತಿಯಲ್ಲೂ ಈಜಿಪ್ಟ್ ಸರ್ಕಾರ ಈ ಒಪ್ಪಂದವನ್ನು ಮುರಿಯಲಿಲ್ಲ.

ಎರಡನೆಯ ಮಹಾಯುದ್ಧ[ಬದಲಾಯಿಸಿ]

ಎರಡನೆಯ ಮಹಾಯುದ್ಧ ಕೊನೆಗೊಂಡಾಗ (1945) ಈಜಿಪ್ಟಿನ ಜನತೆಯಲ್ಲಿ ಮತ್ತೆ ರಾಷ್ಟ್ರೀಯತಾಭಾವನೆ ಉಕ್ಕೇರಿತು. ಬೇರೆ ಗತ್ಯಂತರವಿಲ್ಲದ್ದರಿಂದ 1936ರ ಈ ಒಪ್ಪಂದದ ರದ್ದಿಗಾಗಿ ಇಂಗ್ಲೆಂಡ್ ಸರ್ಕಾರಕ್ಕೆ ಈಜಿಪ್ಟ್ ಸೂಚಿಸಿತು. ಭಾರತದಲ್ಲಿ ಉಗ್ರವಾಗಿದ್ದ ಸ್ವಾತಂತ್ರ್ಯ ಚಳವಳಿಯನ್ನಡಗಿಸುವ ಸಲುವಾಗಿ ಸೂಯೆeóï ಮಾರ್ಗದ ಮೇಲೆ ಇಂಗ್ಲೆಂಡಿನ ಹತೋಟಿ ಆಗ ಅತ್ಯಂತ ಅವಶ್ಯವಾಗಿದ್ದುದರಿಂದ ಸೂಯೆeóï ಒಪ್ಪಂದವನ್ನು ಕೊನೆಗೊಳಿಸಬೇಕೆಂಬ ಈಜಿಪ್ಟಿನ ಎಲ್ಲೆಲ್ಲೂ ದಂಗೆಗಳಾದುವು. 1947ರ ಜನವರಿಯಲ್ಲಿ ಈಜಿಪ್ಟ್ ಸರ್ಕಾರ ಇಂಗ್ಲೆಂಡಿನೊಂದಿಗೆ ಸಂಧಾನ ನಡೆಸುವುದನ್ನು ನಿಲ್ಲಿಸಿ ವಿಶ್ವಸಂಸ್ಥೆಯ ಭದ್ರತಾಸಮಿತಿಯ ನೆರವು ಕೋರಿತು. ಆದರೆ ಕೊಂಚ ಕಾಲದಲ್ಲೇ ಬ್ರಿಟಿಷ್ ಸರ್ಕಾರ ಕೈರೋ ಅಲೆಕ್ಸಾಂಡ್ರಿಯಗಳಲ್ಲಿದ್ದ ತನ್ನ ಸೈನ್ಯಗಳನ್ನು ಹಿಂತೆಗೆದುಕೊಂಡಿತು.ಈ ಮಧ್ಯೆ 1947ರಲ್ಲಿ ವಿಶ್ವಸಂಸ್ಥೆ ಪ್ಯಾಲಿಸ್ಟೈನಿನ ಸುತ್ತಮುತ್ತಣ ಪ್ರದೇಶಗಳನ್ನೊಳಗೊಂಡ ಇಸ್ರೇಲ್ ರಾಜ್ಯನಿರ್ಮಾಣಕ್ಕೆ ಒಪ್ಪಿಗೆಯಿತ್ತಾಗ ಈಜಿಪ್ಟೂ ಇತರ ಅರಬ್ ರಾಜ್ಯಗಳೂ ಇದನ್ನು ತೀವ್ರವಾಗಿ ವಿರೋಧಿಸಿದುವು. ಇಸ್ರೇಲಿಗೂ ಮುಸ್ಲಿಂ ರಾಜ್ಯಗಳಿಗೂ ನಡುವೆ ಕದನ ಪ್ರಾರಂಭವಾದದ್ದು ಆಗ.

ಈಜಿಪ್ಟಿನಲ್ಲಿ ರಾಜಪ್ರಭುತ್ವ[ಬದಲಾಯಿಸಿ]

ಈಜಿಪ್ಟಿನಲ್ಲಿ ರಾಜಪ್ರಭುತ್ವವನ್ನೇ ತೊಡೆದು ಹಾಕಿಸಬೇಕೆಂಬ ರಾಷ್ಟ್ರೀಯ ಪಕ್ಷದ ಚಳವಳಿ ಉಗ್ರವಾಯಿತು. 1953 ರಲ್ಲಿ ದೊರೆ ಪದಚ್ಯುತನಾದ. ಗಣರಾಜ್ಯ ಸ್ಥಾಪಿತವಾಯಿತು. ಈ ರಾಷ್ಟ್ರೀಯಪಕ್ಷದ ಉಗ್ರಗಾಮಿಗಳು ಪ್ರಬಲರಾದರು. 1956ರ ಮಾರ್ಚ್ ತಿಂಗಳಲ್ಲಿ ಇವರ ನಾಯಕನಾದ ಗಮೆಲ್ ಅಬ್ದುಲ್ ನಾಸೆರ್ ಮುಖ್ಯಮಂತ್ರಿಯಾದರು. ಇವರೇ ಮುಂದೆ ರಾಷ್ಟ್ರಧ್ಯಕ್ಷರಾದರು. 1955ರಲ್ಲಿ ಆಸ್ವಾನ್ ಕಟ್ಟೆಯ ನಿರ್ಮಾಣಕ್ಕಾಗಿ ಧನ ಮತ್ತು ಯಾಂತ್ರಿಕ ಸಹಾಯ ನೀಡುವುದಾಗಿ ಭರವಸೆಯಿತ್ತಿದ್ದ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಬ್ರಿಟಿಷ್ ಸರ್ಕಾರಗಳು ಮರುವರ್ಷವೇ ತಮ್ಮ ನೀಡಿಕೆಯನ್ನು ನಿರಾಕರಿಸಿದುವು. ನಾಸೆರ್ ಸೋವಿಯತ್ ಸಹಾಯ ಪಡೆದು ಪಾಶ್ಚಾತ್ಯ ರಾಷ್ಟ್ರಗಳ ವೈರ ಸಂಪಾದಿಸುವ ಸಂದರ್ಭ ಬಂತು. ನಾಸೆರರ ಪ್ರತಿಕ್ರಿಯೆಯೂ ಉಗ್ರವಾಗಿಯೇ ಇತ್ತು: ಸೂಯೆeóï ಕಾಲುವೆಯ ರಾಷ್ಟ್ರೀಕರಣವಾದದ್ದು ಆಗ. ಈ ಮಧ್ಯೆ ಈಜಿಪ್ಟ್-ಇಸ್ರೇಲ್ ಯುದ್ಧವೂ ಪ್ರಾರಂಭವಾಯಿತು. ಪಾಶ್ಚಾತ್ಯ ರಾಷ್ಟ್ರಗಳ ವಿರೋಧವನ್ನು ಧೈರ್ಯವಾಗಿ ಎದುರಿಸಿ ನಿಂತ ನಾಸೆರರ ಬಗ್ಗೆ ಅರಬ್ ರಾಜ್ಯಗಳಲ್ಲಿ ಗೌರವ ಹೆಚ್ಚಿತು. 1958ರಲ್ಲಿ ಸಂಯುಕ್ತ ಅರಬ್ ಗಣರಾಜ್ಯ ಅಸ್ತಿತ್ವಕ್ಕೆ ಬಂತು. ಆದರೆ ಎಲ್ಲ ಅರಬ್ ರಾಜ್ಯಗಳ ಒಕ್ಕೂಟ ಸ್ಥಾಪಿಸಬೇಕೆಂಬ ನಾಸೆರ್ ಕನಸು ನನಸಾಗುವ ಮುಂಚೆಯೇ ಮುರಿದುಬಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2021-10-27. Retrieved 2016-10-24.
  2. "ಆರ್ಕೈವ್ ನಕಲು". Archived from the original on 2016-11-13. Retrieved 2016-10-24.