ಇ.ಎಂ.ಆರ್ನೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ernst Moritz Arndt
Monument in front of the University of Greifswald depicting of Ernst Moritz Arndt

ಇ.ಎಂ.ಆರ್ನೆಟ್ (26 ಡಿಸೆಂಬರ್ 1769 – 29 ಜನವರಿ 1860) ಜರ್ಮನಿಯ ಕ್ರಾಂತಿಕಾರಕ ಕವಿ. ವೃತ್ತಿಯಿಂದ ಇತಿಹಾಸ ಪ್ರಾಧ್ಯಾಪಕ. ತನ್ನ ಇಪ್ಪತ್ತೆಂಟನೆಯ ವಯಸ್ಸಿನಲ್ಲಿ, ವ್ಯಾಪಕವಾಗಿ ದೇಶಾಟನೆ ನಡೆಸುತ್ತಿದ್ದಾಗ, ರೈನ್ ನದಿಯ ದಂಡೆಯುದ್ದಕ್ಕೂ ಫ್ರೆಂಚರು ಜರ್ಮನಿಯ ಮೇಲೆ ನಡೆಸಿದ ದಾಳಿಯ ಫಲವಾಗಿ ಕಾಣಿಸಿದ ಭಗ್ನಾವಶೇಷಗಳು-ಕೋಟೆಕೊತ್ತಲಗಳು, ಹರಕುಮುರುಕು ಅರಮನೆಗಳು - ಇವೆಲ್ಲ ಫ್ರೆಂಚರ ವಿರುದ್ಧ ಕೆರಳಿಸಿದುವು. ನೆಪೋಲಿಯನ್ನ ವಿರುದ್ಧವಾಗಿ ಪ್ರಬಲವಾದ ಹೋರಾಟ ಪ್ರಾರಂಭಿಸಲು ಸಂಕಲ್ಪಮಾಡಿದ. ತನ್ನ ಈ ಪರ್ಯಟನದ ಅನುಭವಗಳನ್ನು ಹಲವಾರು ಕವನಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ. ಹಲವು ಕಾಲ ಬಾನ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಪ್ರಾಧ್ಯಾಪಕನಾಗಿದ್ದು ತನ್ನ ಕ್ರಾಂತಿಕಾರಕ ಹಾಗೂ ಪ್ರಗತಿಪರ ಮನೋಭಾವದಿಂದ ವಿಶೇಷ ಜನಾದರಣೆ ಗಳಿಸಿದ. ಆದರೆ ಆ ಕಾರಣಗಳಿಂದಲೇ ಜರ್ಮನ್ ಸರ್ಕಾರದ ಆಗ್ರಹಕ್ಕೂ ಗುರಿಯಾಗಬೇಕಾಯಿತು. ಅಧಿಕಾರದಿಂದ ನಿವೃತ್ತನಾಗಿ ಇಪ್ಪತ್ತು ವರ್ಷ ಏಕಾಂತವಾಸ ಅನುಭವಿಸಬೇಕಾಗಿ ಬಂತು. ಆ ಕಾಲದಲ್ಲಿ ಬರೆದ ಹಲವು ಕವನಗಳಲ್ಲಿ ಅವನ ದೇಶಪ್ರೇಮ ಹಾಗೂ ಪ್ರಗತಿಪ್ರಜ್ಞೆ ಉಕ್ಕಿ ಹರಿಯುವುದನ್ನು ಗಮನಿಸಬಹುದು. ಫ್ರಾನ್ಸಿನ ವಿರುದ್ಧ ನಡೆದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ ಈತನನ್ನು ಇವನ ದೇಶದ ಜನ ಎಲ್ಲ ಜರ್ಮನರನ್ನೂ ಮೀರಿಸಿದ ಪ್ರಚಂಡ ಎಂದು ಕರೆದುದು ಆಶ್ಚರ್ಯವಲ್ಲ. ರಾಜಕೀಯಕ್ಕೆ ಸಂಬಂಧಿಸಿದ ವಸ್ತುವನ್ನಲ್ಲದೆ ಹಲವು ತಾತ್ತ್ವಿಕ ವಿಚಾರಗಳನ್ನು ಕುರಿತು ಬರೆದ ಇವನ ಕವನಗಳಲ್ಲಿ ಸೊಗಸಾದ ಅಭಿವ್ಯಕ್ತಿಯ ಚೆಲುವನ್ನು ಗುರುತಿಸಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]