ಇಸಾಮ್‌ಬಾರ್ಡ್ ಕಿಂಗ್‌ಡಮ್ ಬ್ರುನೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಸಾಮ್‌ಬಾರ್ಡ್ ಕಿಂಗ್‌ಡಮ್ ಬ್ರುನೆಲ್
Robert Howlett (Isambard Kingdom Brunel Standing Before the Launching Chains of the Great Eastern), The Metropolitan Museum of Art.jpg
ಇಸಾಮ್‌ಬಾರ್ಡ್ ಕಿಂಗ್‌ಡಮ್ ಬ್ರುನೆಲ್
ಜನನ
ಇಸಾಮ್‌ಬಾರ್ಡ್ ಕಿಂಗ್‌ಡಮ್ ಬ್ರುನೆಲ್

೧೮೦೬ ಏಪ್ರಿಲ್ ೯
ಬ್ರಿಟನ್ನ್
ರಾಷ್ಟ್ರೀಯತೆಬ್ರಿಟನ್ನ್

ಬ್ರಿಟನ್ನಿನ ವಾಸ್ತುಶಿಲ್ಪಿಯಾಗಿದ್ದ (civil engineer) ಇಸಾಮ್‌ಬಾರ್ಡ್ ಕಿಂಗ್‌ಡಮ್ ಬ್ರುನೆಲ್‌ರವರು ೧೮೦೬ರ ಏಪ್ರಿಲ್ ೯ರಂದು ಇಂಗ್ಲೆಂಡಿನ ಪೋರ್ಟ್ಸ್‌ಮೌತ್ ನಲ್ಲಿ ಜನಿಸಿದರು. ಬ್ರುನೆಲ್‌ರವರು ತಮ್ಮ ತಂದೆಯವರಾದ ಮಾರ್ಕ್ ಇಸಾಮ್‌ಬಾರ್ಡ್ ಬ್ರುನೆಲ್‌ರವರ (೧೭೬೯-೧೮೪೯) ಬೃಹತ್ ಕೆಲಸವಾದ ’ಥೇಮ್ಸ್ ಸುರಂಗ’ದ (Thames tunnel) ನಿರ್ಮಾಣದ ಕೆಲಸದಲ್ಲಿ ಭಾಗಿಯಾಗಿದ್ದರು. ಹಾಗೆ ಕೆಲಸ ಮಾಡುವಾಗ ಅವರಿಗೆ ಗಂಭೀರವಾದ ಗಾಯಗಳಾಗಿ ಮೊದಲ ಸ್ಥಿತಿಗೆ ಬರಲು ಆರು ತಿಂಗಳ ಕಾಲ ಬೇಕಾಯಿತು. ಬ್ರುನೆಲ್‌ರವರು ಮುಂದೆ ಅನೇಕ ಸೇತುವೆಗಳು, ಉಗಿ-ಹಡಗುಗಳ ನಿರ್ಮಾಣಕ್ಕೆ ತಮ್ಮನ್ನು ತೊಡಗಿಸಿಕೊಂಡರು. ಬ್ರಿಸ್ಟಲ್‌ನಲ್ಲಿ ಏವನ್ ನದಿಯ ಮೇಲೆ ಅವರ ಮೇಲ್ವಿಚಾರಿಕೆಯಲ್ಲಿ ನಿರ್ಮಿಸಲಾದ ’ಕ್ಲಿಫ್ಟನ್ ಸಸ್ಪೆಂಶನ್ ಬ್ರಿಡ್ಜ್’ ಅವರ ಅತ್ಯಂತ ಅಮೂಲ್ಯವಾದ ಕೆಲಸವಾಗಿದೆ. ಬ್ರುನೆಲ್‌ರವರನ್ನು ಗ್ರೇಟ್ ವೆಸ್ಟ್ರನ್ ರೈಲ್ವೆಯಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇರಿಸಿಕೊಳ್ಳಲಾಯಿತು. ರೈಲ್ವೆ ಪ್ರಯಾಣಕ್ಕೆ ಅನುಕೂಲವಾದ ಅನೇಕ ಸುಧಾರಣೆಗಳನ್ನು ಅವರು ಮಾಡಿದರು. ೧೮೩೫ರಲ್ಲಿ ಬ್ರುನೆಲ್‌ರವರು ಬ್ರಿಸ್ಟಲ್‌ನಿಂದ ಅಮೇರಿಕಕ್ಕೆ (ಅಟ್ಲಾಂಟಿಕ್ ಸಾಗರದ ಮೂಲಕ) ಪ್ರಯಾಣಿಸಲು ಅನುಕೂಲವಾಗುವ ಸೌಕರ್ಯವನ್ನು ಕಲ್ಪಿಸುವ ಉದ್ದೇಶ ಹೊಂದಿದ್ದರು.[೧] ಅದರಂತೆ ’ಗ್ರೇಟ್ ವೆಸ್ಟ್ರನ್ ಸ್ಟೀಮ್‌ಷಿಪ್ ಕಂಪೆನಿ’ ಆರಂಭವಾಯಿತು. ಹಾಗಾಗಿ ಬ್ರುನೆಲ್‌ರವರು ವಿಶ್ವದಲ್ಲಿಯೇ ಅತ್ಯಂತ ಉದ್ದವಾಗಿದ್ದ ಅಂದರೆ ೨೩೬-ಅಡಿ ಉದ್ದವಿದ್ದ ಉಗಿ-ಹಡಗನ್ನು (steam ship) ನಿರ್ಮಿಸಿದರು. ೧೮೩೮ರಿಂದ ೧೮೪೬ರವರೆಗೆ ಬ್ರಿಸ್ಟಲ್‌ನಿಂದ ನ್ಯೂಯಾರ್ಕಿಗೆ (ಆ ಅಂತರ-ಅಟ್ಲಾಂಟಿಕ್ ಉಗಿ-ಹಡಗಿನ ಮೂಲಕ) ಪ್ರಯಾಣದ ಮತ್ತು ಸರಕು ಸಾಗಾಣಿಕೆಯ ಕಾರ್ಯ ನಡೆಯಿತು. ಮುಂದೆ ಬ್ರುನೆಲ್‌ರವರು ’ಗ್ರೇಟ್ ಬ್ರಿಟನ್’ ಮತ್ತು ’ಗ್ರೇಟ್ ಈಸ್ಟ್ರನ್’ ಉಗಿ-ಹಡಗುಗಳನ್ನು ನಿರ್ಮಿಸಿದರು. ೧೮೫೪ರಲ್ಲಿ ಬ್ರಿಟನ್ ’ಕ್ರಿಮಿಯನ್ ಸಮರ’ ನಡೆಸುತ್ತಿತ್ತು. ಆಗ ಗಾಯಾಳುಗಳಿಗೆ ಅನುಕೂಲವಾಗುವಂತಹ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣದ ಮೇಲ್ವಿಚಾರಣೆಯನ್ನೂ ಅವರು ವಹಿಸಿಕೊಂಡಿದ್ದರು. ಬ್ರುನೆಲ್‌ರವರು ೧೮೫೯ರ ಸೆಪ್ಟೆಂಬರ್ ೧೫ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]