ವಿಷಯಕ್ಕೆ ಹೋಗು

ಇರ್ವಿಂಗ್ ಲಾಂಗ್‌ಮುಯಿರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇರ್ವಿಂಗ್ ಲಾಂಗ್‌ಮುಯಿರ್
ಇರ್ವಿಂಗ್ ಲಾಂಗ್‌ಮುಯಿರ್
ಜನನ
ಇರ್ವಿಂಗ್ ಲಾಂಗ್‌ಮುಯಿರ್

೧೮೮೧ ಜನವರಿ ೩೧
ಅಮೇರಿಕ
ರಾಷ್ಟ್ರೀಯತೆಅಮೇರಿಕ

ಅಮೇರಿಕದ ಭೌತರಸಾಯನವಿಜ್ಞಾನಿಯಾಗಿದ್ದ ಇರ್ವಿಂಗ್ ಲಾಂಗ್‌ಮುಯಿರ್ರವರು ೧೮೮೧ರ ಜನವರಿ ೩೧ರಂದು ನ್ಯೂಯಾರ್ಕಿನ ಬ್ರೂಕ್‌ಲಿನ್‌ನಲ್ಲಿ ಜನಿಸಿದರು. ಲಾಂಗ್‌ಮುಯಿರ್ರವರು ಜನರಲ್ ಎಲೆಕ್ಟ್ರಿಕ್ ಕಂಪೆನಿಯಲ್ಲಿದ್ದಾಗ (ಬಿಸಿಯಾದ) ಟಂಗ್‌ಸ್ಟನ್ ತಂತುಗಳ ಸುತ್ತಲೂ ಅನಿಲಗಳ ಉಷ್ಣ ವಹನ (conduction) ಮತ್ತು ಸಂವಹನದ (convection) ಬಗ್ಗೆ ಅಧ್ಯಯನ ನಡೆಸಿದರು. ನಿರ್ವಾತ ವಿದ್ಯುತ್ ಬುರುಡೆಯ ಒಳಗಿನ ಗಾಜಿನ ಗೋಡೆಗಳ ಮೇಲೆ ಕಪ್ಪುಮಸಿಯಂತಹ ಕಲೆಯಾಗುವುದಕ್ಕೆ ಟಂಗ್‌ಸ್ಟನ್‌ನ ಬಾಷ್ಪೀಕರಣವೇ ಕಾರಣವಾಗಿದೆ ಎಂಬುದಾಗಿ ಅವರು ತೋರಿಸಿಕೊಟ್ಟರು. ಮುಂದೆ ಗಾಜಿನ ಬುರುಡೆಯೊಳಗೆ ನೈಟ್ರೋಜನ್ ಅನಿಲವನ್ನು ತುಂಬಿದ್ದರಿಂದ ಟಂಗ್‌ಸ್ಟನ್‌ನ ಬಾಷ್ಪೀಕರಣ ಮತ್ತು ಕಪ್ಪುಮಸಿಯಾಗುವುದು ತಪ್ಪಿತಾದರೂ, ಉಷ್ಣದ ಪ್ರಮಾಣದಲ್ಲಿ ನಷ್ಟ ಆಗುತ್ತಿರುವುದು ಕಂಡುಬಂದಿತು. ಆ ನಷ್ಟವನ್ನು ಪರಿಹರಿಸಲು ಟಂಗ್‌ಸ್ಟನ್ ತಂತುಗಳನ್ನು ಸುರುಳಿಯಲ್ಲಿ ಸುರುಳಿಯಾಕಾರದಲ್ಲಿ (coiled coil) ತಯಾರಿಸಲಾಯಿತು. ನಿರ್ವಾತದಲ್ಲಿನ ಯಾವುದೇ ಆಕಾರದ ಇಲೆಕ್ಟ್ರೋಡ್‌ಗಳ ನಡುವಿನ ವಿದ್ಯುತ್ಪ್ರವಾಹ ಆ ಇಲೆಕ್ಟ್ರೋಡ್‌ಗಳ ನಡುವಿನ ವಿಭವಾಂತರಗಳ ೩/೨ರ ಘಾತಕ್ಕೆ ಅನುಪಾತವಾಗಿರುತ್ತದೆ ಎಂಬುದಾಗಿ ಚೈಲ್ಡ್ ಮತ್ತು ಲಾಂಗ್‌ಮುಯಿರ್ರವರು ಪ್ರತಿಪಾದಿಸಿದರು. ಅದಕ್ಕೆ ‘ಚೈಲ್ಡ್-ಲಾಂಗ್ ಮುಯಿರ್ ಅವಕಾಶ-ಆವೇಶ ಪರಿಣಾಮ’ (Child-Langmuir space-charge effect) ಎಂಬುದಾಗಿ ಕರೆಯಲಾಗಿದೆ. (ಅಂದರೆ I=GV3/2 ಎಂದಾಗುತ್ತದೆ. I ಅಂದರೆ ವಿದ್ಯುತ್ಪ್ರವಾಹ, V ಅಂದರೆ ವೋಲ್ಟೇಜ್ ಮತ್ತು G ಎಂದರೆ ಇಲೆಕ್ಟ್ರೋಡ್‌ಗಳ ಭೌತಿಕರೂಪದ ಮೇಲೆ ಅವಲಂಬಿತವಾಗಿರುವ ನಿಯತಾಂಕ.) ೧೯೩೪ರಲ್ಲಿ ಲಾಂಗ್‌ಮುಯಿರ್ರವರು ‘ಅಟಾಮಿಕ್ ವೆಲ್ಡಿಂಗ್ ಟಾರ್ಚ್’ನನ್ನು ಸಂಶೋಧಿಸಿ, ಅದರ ಪೇಟೆಂಟ್ ಪಡೆದರು. ಆ ಟಾರ್ಚ್‌ನಲ್ಲಿ ಇಲೆಕ್ಟ್ರೋಡ್‌ಗಳ ನಡುವೆ ಉಂಟಾಗುತ್ತಿದ್ದ ಕಿಡಿಯ ಉಷ್ಣತೆ ಸುಮಾರು ೬೦೦೦ಡಿಗ್ರಿ ಸೆಂ.ಯಷ್ಟಿತ್ತು. ಅವರು ಘನ ಕಾರ್ಬನ್ ಡೈಆಕ್ಸೈಡ್ ಮತ್ತು ಸಿಲ್ವರ್ ಐಯೋಡೈಡ್ ಕಣಗಳನ್ನು ವಿಮಾನದಿಂದ ಆಕಾಶದಲ್ಲಿ ಚದುರಿಸಿ ಮೋಡಗಳ ರಚನೆಯಾಗುವಂತೆ ಮಾಡುವ ಪ್ರಯೋಗವನ್ನು ಮಾಡಿದರು. ಅದರಿಂದ ಮಳೆ ಬರಿಸುವ ಪ್ರಯತ್ನವನ್ನು ಅವರು ನಡೆಸಿದ್ದರು. ಲಾಂಗ್‌ಮುಯಿರ್ರವರ ಉಷ್ಣವಿದ್ಯುತ್ವಾಹಿ ವಿಸರ್ಜನೆಯ (thermionic emission) ಬಗೆಗಿನ ಉಪಯುಕ್ತ ಪ್ರಯೋಗಗಳಿಗೆ ೧೯೩೨ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[] ಲಾಂಗ್‌ಮುಯಿರ್ರವರು ೧೯೫೭ರ ಆಗಸ್ಟ್ ೧೬ರಂದು ಮೆಸಾಚುಸೆಟ್ಸ್‌ನ ಫಾಲ್‌ಮೌತ್‌ನಲ್ಲಿ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]