ಇರಿನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಟ್ಟು,ಜೀವನ,ಮರಣ[ಬದಲಾಯಿಸಿ]

(ಕ್ರಿ.ಪೂ.ಸು. ೪ನೆಯ ಶತಮಾನ). ಒಬ್ಬ ಗ್ರೀಕ್ ಕವಿಯತ್ರಿ. ಬರೆದಿರುವುದು ಗಾತ್ರದಲ್ಲಿ ಕಿರಿದಾದರೂ ಗುಣದಲ್ಲಿ ಕಳಪೆಯದೇನಲ್ಲ. ಕ್ರಿ.ಪೂ. ಆರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಗ್ರೀಕ್ ಕವಯತ್ರಿ ಸ್ಯಾಪೋಳ ಗೆಳತಿಯಾಗಿದ್ದಳು ಎಂದು ಒಂದು ಪ್ರತೀತಿ. ಆದರೆ ಅವಳ ಕಾಲ ನಿರ್ದಿಷ್ಟವಾಗಿ ಗೊತ್ತಾಗಿಲ್ಲ. ಕ್ರಿ.ಶ. ಮೂರನೆಯ ಶತಮಾನದಲ್ಲಿದ್ದ ಯುಸೆಬಿಯಸ್ ಎಂಬ ಚರಿತ್ರಕಾರನ ಪ್ರಕಾರ ಅವಳ ಕಾಲ ಕ್ರಿ.ಪೂ. ನಾಲ್ಕನೆಯ ಶತಮಾನದ ಮಧ್ಯ. ಈಗಿನ ಕೆಲವು ವಿದ್ವಾಂಸರು ಅವಳ ಕಾಲ ಕ್ರಿ.ಪೂ. ಮೂರನೆಯ ಶತಮಾನವಿದ್ದಿರಬೇಕೆಂದು ಅಭಿಪ್ರಾಯಪಡುತ್ತಾರೆ. ಹುಟ್ಟಿದ್ದು ಏಷ್ಯಮೈನರ್‍ನ ಕ್ನಿಡುಸ್ ಎಂಬ ಗ್ರೀಕ್ ಪಟ್ಟಣಕ್ಕೆ ಸಮೀಪದ ಟಿಲಾಸ್ ಎಂಬ ದ್ವೀಪದಲ್ಲಿ. ಕೇವಲ ೧೯ನೆಯ ವಯಸ್ಸಿನಲ್ಲೇ ನಿಧನಳಾದಳು ಅವಳ ಜೀವನದ ಅತಿ ಮುಖ್ಯಸಂಗತಿಯೆಂದರೆ ಬಾಕಿಸ್ ಎಂಬ ಹುಡುಗಿಯೊಡನೆ ಅವಳಿಗಿದ್ದ ಗೆಳೆತನ. ಮದುವೆಯಾಗಿ ಸ್ವಲ್ಪ ಕಾಲದಲ್ಲಿಯೇ ತೀರಿಕೊಂಡಳು. ಇರಿನ್ನ ಅವಳ ಚರಮಗೀತೆಯನ್ನು ರಚಿಸಿದಳು. ಅದು ಮತ್ತು ಅವಳ ಕೆಲವು ನಾಡುನುಡಿಗಳು ಈಗಲೂ ದೊರೆಯುತ್ತವೆ.

ಇರಿನ್ನಯವರ ಕವನಗಳು[ಬದಲಾಯಿಸಿ]

ಅವಳ ಕವನಗಳು ಅವಳ ಜೀವಿತಕಾಲದಲ್ಲಿ ತುಂಬಾ ಜನಪ್ರಿಯವಾಗಿದ್ದವೆಂದು ತಿಳಿಯಬರುತ್ತದೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ದಿ ಡಿಸ್ಟಾಫ್. ಅದು ಹೆಕ್ಸಾಮೀಟರ್‍ನಲ್ಲಿ ಬರೆಯಲ್ಪಟ್ಟಿದೆ. ಮುನ್ನೂರು ಸಾಲುಗಳ ಆ ಕವನದಲ್ಲಿ ಈಗ ದೊರೆತಿರುವುದು ಕೇವಲ ಕೆಲವು ಸಾಲುಗಳು ಮಾತ್ರ. ಬಾಕಿಸ್ ಸಂಗಡ ತಾನು ಆಡಿದ ಆಟಗಳು ಮತ್ತು ಮಾಡಿದ ಕೆಲಸಗಳನ್ನು ಇರಿನ್ನ ಈ ಕವನದಲ್ಲಿ ಹೇಳಿದ್ದಾಳೆ.ನಮಗೆ ದೊರೆತಿರುವ ಸಾಲುಗಳನ್ನು ಸೂಕ್ಷ್ಮವಾಗಿ ನೋಡಿದರೆ ಇರಿನ್ನ ಸ್ಯಾಪೋಳ ಕವನಗಳನ್ನು ಓದಿದ್ದಳು ಮತ್ತು ಅವಳಿಂದ ಪ್ರಭಾವಿತಳಾಗಿದ್ದಳು ಎಂಬುದು ತಿಳಿದುಬರುತ್ತದೆ. ಇರಿನ್ನಳ ಸ್ವಂತ ಭಾಷೆ ಡೋರಿಕ್ ಆದರೂ ಅವಳ ಕವನಗಳಲ್ಲಿ ಈಯೊಲಿಕ್ ಮತ್ತು ಡೋರಿಕ್ ಉಪಭಾಷೆಗಳ ಮಿಶ್ರಣ ಕಂಡುಬರುತ್ತದೆ.

"https://kn.wikipedia.org/w/index.php?title=ಇರಿನ್ನ&oldid=1149490" ಇಂದ ಪಡೆಯಲ್ಪಟ್ಟಿದೆ