ಇಫ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಫ್ರಿಕದ ಮೊರಾಕೊ[೧] ದೇಶದ ಅಟ್ಲಾಂಟಿಕ್ ತೀರದಲ್ಲಿ ಸ್ಪೇನಿಗೆ ಸೇರಿದ ಸಣ್ಣ ದೇಶ. ವಿಸ್ತಾರ 57.9 ಚ.ಮೈ.; ಜನಸಂಖ್ಯೆ 47,582 (1960). ನಿವಾಸಿಗಳು ಬರ್ಬರರು; ಸೂಡಾನಿನ ನೀಗ್ರೊ ವೈಲಕ್ಷಣ್ಯಗಳನ್ನೂ ಹೊಂದಿದ್ದಾರೆ. ಎಲ್ಲರೂ ಇಸ್ಲಾಂ ಧರ್ಮೀಯರು. ಯೂರೋಪಿಯನ್ನರ ಸಂಖ್ಯೆ ಅತ್ಯಲ್ಪ. ಮೊರಾಕೊ ದೇಶದ ದಕ್ಷಿಣ ಭಾಗದಲ್ಲಿರುವಂತೆ ಇಲ್ಲೂ ಸೆಕೆ ಹೆಚ್ಚು. ಮಳೆ ಕಡಿಮೆ 80 ಕಿ.ಮೀ. ಸಮುದ್ರತೀರವನ್ನು ಹೊಂದಿದೆ. ಇಡೀ ದೇಶ ಮರಗಿಡಗಳೇನೂ ಬೆಳೆಯದ ಹುಲ್ಲುಗಾವಲು ಪ್ರದೇಶ. ಕೆಲ ಭಾಗದಲ್ಲಿ ಆಹಾರಕ್ಕಾಗಿ ಕಾಳುಗಳನ್ನು ಬೆಳೆಯುತ್ತಾರೆ. ಕೆಲವು ಕಡೆ ಆಲಿವ್ ಮರಗಳು ಬೆಳೆಯುತ್ತವೆ. ಕುರಿ ಸಾಕುತ್ತಾರೆ; ಮೀನು ಹಿಡಿಯುವುದು ಮುಖ್ಯ ಕಸುಬು. ಹತ್ತಿರ ಇರುವ ಕ್ಯಾನರಿ ದ್ವೀಪಗಳಲ್ಲಿ ತಮ್ಮ ಸ್ವಾಸ್ಥ್ಯಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ೧೪೭೬ರಲ್ಲಿ ಈ ಪ್ರದೇಶವನ್ನು ಸ್ಪೇನಿನವರು ವಶಪಡಿಸಿಕೊಂಡು ಒಂದು ರೇವು ಪಟ್ಟಣವನ್ನು ಸ್ಥಾಪಿಸಿದರು. ಆದರೆ ೧೫೨೪ರಲ್ಲಿ ಮೂರರು ಇದನ್ನು ನಾಶಪಡಿಸಿದರು. ಮುಂದೆ ೧೮೬೦ರವರೆಗೂ ಈ ಪ್ರದೇಶದಲ್ಲಿ ಸ್ಪೇನಿನ ಅಧಿಕಾರವಿರಲಿಲ್ಲ. ಸ್ಪೇನಿಗೂ ಮೊರಾಕೊಗೂ ಯುದ್ಧ ನಡೆದು ಕೊನೆಗೊಂಡ ಮೇಲೆ, ರೇವುಪಟ್ಟಣವಿದ್ದ ಪ್ರದೇಶವನ್ನು ಸ್ಪೇನಿಗೆ ಬಿಟ್ಟುಕೊಡಲು ಮೊರಾಕೊ ಸರ್ಕಾರ ಒಪ್ಪಿಕೊಂಡಿತು. ಆದರೂ ಈ ಪ್ರದೇಶ ಸಂಪೂರ್ಣವಾಗಿ ಸ್ಪೇನಿನ ವಶಕ್ಕೆ ಬಂದದ್ದು 1934ರಲ್ಲಿ, ಫ್ರೆಂಚ್ ಸರ್ಕಾರ ನಡೆಸಿದ ಮಧ್ಯಸ್ತಿಕೆಯ ಪರಿಣಾಮವಾಗಿ. ಆದರೂ ಮೊರಾಕೊ ರಾಷ್ಟ್ರೀಯ ಚಳವಳಿಗಾರರ ಪ್ರತಿಭಟನೆ ಇದ್ದೇ ಇತ್ತು. ಕೊನೆಗೆ ೧೯೫೮ರಲ್ಲಿ ಈ ಪ್ರದೇಶವನ್ನು ಸ್ಪೇನಿನ ಒಂದು ಪ್ರಾಂತ್ಯವನ್ನಾಗಿ ಮಾಡಿ ಒಬ್ಬ ಗವರ್ನರ್ ಜನರಲ್ ನನ್ನು ನಿಯಮಿಸಿದ ಮೇಲೆ ಇಫ್ನಿ ಒಂದು ಸ್ಥಿಮಿತಸ್ಥಿತಿಗೆ ಬಂದಿತು.

ಸಿಡೀಇಫ್ನಿ[ಬದಲಾಯಿಸಿ]

ಸಿಡೀಇಫ್ನಿ ಈ ಪ್ರಾಂತ್ಯದ ರಾಜಧಾನಿ. ಜನಸಂಖ್ಯೆ ೯೩೩೨ (೧೯೫೪). ಹಡಗುಗಳಿಗೆ ಕೊಂಚ ರಕ್ಷಣೆ ಕೊಡುವ ಕೊಲ್ಲಿಯಿಲ್ಲಿದೆ. ಕ್ಯಾನರಿ ದ್ವೀಪಗಳು, ಸ್ಪ್ಯಾನಿಷ್ ಸಹರ ಮತ್ತು ಮೊರಾಕೊ ದೇಶಗಳ ವ್ಯಾಪಾರ ಈ ರೇವಿನ ಮೂಲಕ ನಡೆಯುತ್ತದೆ. ಹೊರದೇಶದವರ ವಿರುದ್ಧ ಮೊರಾಕೊ ರಾಷ್ಟ್ರೀಯ ಚಳವಳಿ ಮಾತ್ರ ಇನ್ನೂ ನಿಂತೇ ಇಲ್ಲ.

ಉಲ್ಲೇಖ[ಬದಲಾಯಿಸಿ]

  1. http://www.encyclopedia.com/places/africa/morocco-political-geography/morocco-kingdom
"https://kn.wikipedia.org/w/index.php?title=ಇಫ್ನಿ&oldid=907963" ಇಂದ ಪಡೆಯಲ್ಪಟ್ಟಿದೆ