ವಿಷಯಕ್ಕೆ ಹೋಗು

ಇನ್ಕ್ವಿಸಿಷನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A 19th-century depiction of Galileo before the Holy Office, by Joseph-Nicolas Robert-Fleury

ಇನ್‍ಕ್ವಿಸಿಷನ್ ರೋಮನ್ ಕೆಥೋಲಿಕ್ ಧರ್ಮಕ್ಕೆ ವಿರೋಧವಾದ ಪಾಷಂಡ ಮತಗಳನ್ನಡಗಿಸುವುದಕ್ಕಾಗಿ ಹದಿಮೂರನೆಯ ಶತಮಾನದಲ್ಲಿ ಯೂರೋಪಿನಲ್ಲಿ ಸ್ಥಾಪಿತವಾದ ನ್ಯಾಯಾಲಯಗಳು. ಆಲ್ಟಿಜನ್ಸೀಸ್ ಎಂಬ ಪಾಷಂಡ ಧರ್ಮೀಯರ ವಿಷಯದಲ್ಲಿ ತನಿಖೆ ನಡೆಸಲು ಒಬ್ಬ ಬಿಷಪ್‍ನನ್ನು ಪೋಪನೇ ಕಳುಹಿಸಿದಾಗ ಈ ಇನ್‍ಕ್ವಿಸಿಷನ್ ಪ್ರಾರಂಭವಾಯಿತೆನ್ನಬಹುದು. ಏಕೆಂದರೆ ಪಾಷಂಡಿಗಳನ್ನು ಪತ್ತೆ ಹಚ್ಚುವುದು. ದಂಡಿಸುವುದು ಮುಂತಾದ ಕೆಲಸವೆಲ್ಲ ಅಲ್ಲಿನ ತನಕ ಸ್ಥಳೀಯ ಬಿಷಪನಿಗೆ ಸೇರಿತ್ತು; ಇನ್ನು ಮುಂದೆ ಅದಕ್ಕಾಗಿ ವ್ಯಾಪಕವಾದ ವ್ಯವಸ್ಥೆ ಏರ್ಪಾಡಾಗಿ ಎಲ್ಲವೂ ಪೋಪನ ನೇತೃತ್ವದಲ್ಲಿ ನಡೆಯುವಂತಾಯಿತು.

ವಿಧಾನ

[ಬದಲಾಯಿಸಿ]

ಇನ್ಕ್ವಿಸಿಷನ್ ವಿಧಾನ ಹೀಗಿದೆ: ಇದಕ್ಕಾಗಿ ನಿಯಮಿತರಾದ ವಿಚಾರಣಾಧಿಕಾರಿಗಳು ಒಂದು ಸ್ಥಳಕ್ಕೆ ಬಂದಕೂಡಲೆ ಸ್ಥಳೀಯ ಮುಖಂಡರನ್ನು ಕರೆಸಿ ಅವರೆದುರಿಗೆ ವಿಚಾರಣೆ ನಡೆಸುತ್ತಿದ್ದರು. ಆದರೆ ಎಲ್ಲವೂ ಗೋಪ್ಯವಾಗಿರುತ್ತಿತ್ತು. ಆಪಾದಿತರಿಗೆ ಮತ್ತು ಅವರ ಸಾಕ್ಷಿಗಳಿಗೆ ಯಾವ ವಿಧವಾದ ಚಿತ್ರಹಿಂಸೆಯನ್ನೂ ಕೊಡಕೂಡದೆಂದು ಪೋಪನ ನಿರ್ದೇಶವಿದ್ದರೂ ಅದು ನಡೆಯುತ್ತಲೇ ಇತ್ತು. ಆಪಾದಿತ ಅಪರಾಧಿಯೆಂದು ತೀರ್ಪುಕೊಟ್ಟು ದಂಡನೆ ವಿಧಿಸಿದ ಮೇಲೆ ಅದನ್ನು ಕಾರ್ಯಗತಗೊಳಿಸುವುದು ಅಲ್ಲಿನ ದೊರೆಯ ಕೆಲಸ. ಮೊದಲು ಅಪರಾಧಿಗಳನ್ನು ಸಜೀವ ಸುಡುವುದು ಅಪೂರ್ವವಾಗಿತ್ತು; ಕಾರಾಗೃಹವಾಸ, ಆಸ್ತಿ ಮುಟ್ಟುಗೋಲುಗಳು ಸಾಮಾನ್ಯ ದಂಡನೆಗಳಾಗಿದ್ದುವು. ಮುಟ್ಟುಗೋಲು ಹಾಕಿದ ಆಸ್ತಿ ಯಾರಿಗೆ ಸೇರಬೇಕೆಂಬ ವಿಷಯದಲ್ಲಿ ಭಿನ್ನಾಭಿಪ್ರಾಯವುಂಟಾಯಿತಲ್ಲದೆ ಅನೇಕವೇಳೆ ಅಕ್ರಮ ಸಂಪಾದನೆ, ಮಠವೃತ್ತಿಗಳ ವ್ಯಾಪಾರ ಮುಂತಾದ ಅಕ್ರಮ ವ್ಯವಹಾರಗಳಿಗೆ ಎಡೆಕೊಟ್ಟಿತು. ವಾಸ್ತವವಾಗಿ ಯೂರೋಪಿನ ಮಧ್ಯಯುಗದಲ್ಲಿ (ಸು. 14ನೆಯ ಶತಮಾನದವರೆಗೆ) ಪೋಪರಾಗಲಿ ಇತರ ಧರ್ಮಾಧಿಕಾರಿಗಳಾಗಲಿ ಪಾಷಂಡ ಧರ್ಮೀಯರ ವಿಷಯದಲ್ಲಿ ಅಷ್ಟೊಂದು ಉಗ್ರ ಮನೋಭಾವವನ್ನು ಹೊಂದಿರಲಿಲ್ಲ. ಅದರ ದಂಡನೆ, ದಮನ ನಡೆಯುತ್ತಿದ್ದುದು ದೊರೆಗಳಿಂದ ಮತ್ತು ಲೌಕಿಕಾಧಿಕಾರಿಗಳಿಂದ. ಇವನ ಕೈಗೆ ಸಿಕ್ಕ ಆಪಾದಿತರು ಅಪರಾಧಿಗಳೆಂದೇ ತೀರ್ಮಾನವಾಗುತ್ತಿತ್ತು; ದಂಡನೆಯೂ ಹಿಂಸಾತ್ಮಕ, ಅನೇಕ ವೇಳೆ ಉಗ್ರ. ಆ ಕಾಲದಲ್ಲಿ ಇನ್‍ಕ್ವಿಸಿಷನ್ ಹೆಚ್ಚಾಗಿ ಕೆಲಸ ಮಾಡಿದ್ದು ದಕ್ಷಿಣ ಫ್ರಾನ್ಸ್, ಉತ್ತರ ಇಟಲಿ, ಜರ್ಮನಿ ಮತ್ತು ಪೋಪರ ನೇರ ಆಡಳಿತಕ್ಕೆ ಸೇರಿದ ರಾಜ್ಯಗಳಲ್ಲಿ.

ಸ್ಪೇನ್ ವಿಧಾನ

[ಬದಲಾಯಿಸಿ]
Emblem of the Spanish Inquisition (1571). The olive branch symbolizes grace and the sword symbolizes punishment. The inscription in Latin means: "Arise, Lord, and judge your cause"

ಹೆಚ್ಚುಕಡಿಮೆ ಪೋಪರ ನೇರ ನಿಯಂತ್ರಣಕ್ಕೊಳಪಟ್ಟ ಇಂಥ ಇನ್‍ಕ್ವಿಸಿಷನ್ ಅಲ್ಲದೆ ಸ್ಪೇನ್ ದೇಶದಲ್ಲಿ ಇನ್ನೊಂದು ರೀತಿಯ ಇನ್‍ಕ್ವಿಸಿಷನ್ ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿ ಹುಟ್ಟುಕೊಂಡಿತು. ಸ್ಪೇನಿನ ದೊರೆ ಫರ್ಡಿನೆಂಡ್ ಮತ್ತು ರಾಣಿ ಇಸಬೆಲ್ ಕೆಥೋಲಿಕ್ ಸಮ್ರಾಟರೆಂದು ಪ್ರಸಿದ್ಧರಾಗಿದ್ದಾರೆ. ಅವರು ೧೪೭೮ ರಲ್ಲಿ ಕೆಥೋಲಿಕ್ ಮತವಿರೋಧಿಗಳಿಗಾಗಿ ಒಂದು ಇನ್‍ಕ್ವಿಸಿಷನ್ ಸ್ಥಾಪಿಸಿದರು. ಇದರ ಮೇಲೆ ಪೋಪರ ಹತೋಟಿ ಅತ್ಯಲ್ಪ. ಇದರ ನೇತಾರ ತಾಮಸ್ ದ ಟಾರ್ಕೆಮಾಧ. ಈ ಸ್ವತಂತ್ರ ಸಂಸ್ಥೆಗೆ ಪೋಪರ ವಿರೋಧ ಕೊನೆಯವರೆಗೂ ಇದ್ದೇ ಇತ್ತು. ಅದರ ವ್ಯವಸ್ಥೆ ಆಡಳಿತ. ತುಂಬಾ ಬಿಗಿಯಾಗಿತ್ತು; ಮರಣದಂಡನೆ ಹೆಚ್ಚಾಗಿತ್ತು; ಅಪರಾಧಿಗಳ ವಿಷಯದಲ್ಲಿ ಅದು ಅತ್ಯಂತ ಕ್ರೂರ, ನಿಷ್ಠುರವಾಗಿತ್ತು. ಟಾರ್ಕೆಮಾಧನೊಬ್ಬನೇ ಕನಿಷ್ಠ ಪಕ್ಷ ಎರಡು ಸಾವಿರ ಪಾಷಂಡಿಗಳನ್ನು ಮರಣದಂಡನೆಗೆ (ಸಜೀವದಹನ) ಗುರಿಮಾಡಿದನೆಂದು ಹೇಳುತ್ತಾರೆ. ಈ ಇನ್‍ಕ್ವಿಸಿಷನ್ ಸ್ಥಾಪಿಸಿದುದರ ಮುಖ್ಯ ಉದ್ದೇಶ. ತೋರಿಕೆಗೆ ಮಾತ್ರ ರೋಮನ್ ಕೆಥೋಲಿಕರಾಗಿ, ಮತಾಂತರಹೊಂದಿದ ಯೆಹೂದ್ಯರನ್ನು ಮತ್ತು ಮುಸ್ಲಿಮರನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೊಳಪಡಿಸುವುದು. ಆದರೆ ಸಂದೇಹ ಬಂದವರೆಲ್ಲರನ್ನೂ ವಿಚಾರಣೆಗೊಳಪಡಿಸಿ ಮರಣದಂಡನೆಗೊಳಪಡಿಸುತ್ತಿದ್ದರು. ಸಾವಿರಾರು ಮಂದಿ ಕ್ರೈಸ್ತರೂ ಹೀಗೆ ಸಂಶಯಕ್ಕೊಳಗಾಗಿ ದಂಡಿಸಲ್ಪಟ್ಟರು. ಸಂತ ಇಗ್ನೇಷಿಯಸ್, ಆವಿಲದ ಸಂತ ತೆರೀಸಾ ಮುಂತಾದವರೇ ವಿಚಾರಣೆಯನ್ನೆದುರಿಸಬೇಕಾಯಿತು. ಅನೇಕ ಸಂದರ್ಭಗಳಲ್ಲಿ ಸುಲಭವಾಗಿ ದೊರೆತ ಪದವಿಯ ದುರುಪಯೋಗ ನಡೆಯಿತು. ಈ ಇನ್‍ಕ್ವಿಸಿಷನ್ ಪೋರ್ಚುಗೀಸರೊಂದಿಗೆ ಭಾರತಕ್ಕೂ ಬಂದು ಕೆಲಕಾಲ ನಡೆಯಿತು. ಸ್ಪೇನಿನಲ್ಲಿ ಇದು ೧೮೨೦ರಲ್ಲಿ ರದ್ದಾಯಿತು.

ಆಧುನಿಕ ಸಮಯದಲ್ಲಿ

[ಬದಲಾಯಿಸಿ]

ಮುಂದೆ 16ನೆಯ ಶತಮಾನದಲ್ಲಿ, ಶೀಘ್ರವಾಗಿ ಬೆಳೆಯತೊಡಗಿದ ಪ್ರಾಟೆಸ್ಟಂಟ್ ಧರ್ಮವನ್ನಡಗಿಸುವುದಕ್ಕಾಗಿ ರೋಮನ್ ಕೆಥೊಲಿಕ್ ಪ್ರತಿಸುಧಾರಣಾ (ಕೌಂಟರ್ ರಿಫಾರ್ಮೇಷನ್) ಚಳವಳಿ ಪೋಪರ ನೇತೃತ್ವದಲ್ಲೇ ಪ್ರಾರಂಭವಾದಾಗ ಅದರ ಅಂಗವಾಗಿ ಇನ್‍ಕ್ವಿಸಿಷನ್ ಕೂಡ ಪ್ರಯೋಗಕ್ಕೆ ಬಂತು. ಇಂಗ್ಲೆಂಡಿನ ಕೆಥೋಲಿಕ್ ರಾಣಿ ಮೇರಿ ಟ್ಯೂಡರ್ (1553-58) ಪ್ರಾಟೆಸ್ಟಂಟರನ್ನಡಗಿಸುವುದಕ್ಕೆ ಅದನ್ನು ಉಪಯೋಗಿಸಿದಳು. ಅವಳ ತರುವಾಯ ಸಿಂಹಾಸನಕ್ಕೆ ಬಂದ ಪ್ರಾಟೆಸ್ಟಂಟ್ ಎಲಿಜûಬೆತ್ ರಾಣಿ ರೋಮನ್ ಕೆಥೋಲಿಕರ ಮೇಲೆಯೇ ಅದನ್ನು ಪ್ರಯೋಗಿಸಿದಳು. ಜರ್ಮನಿಯಲ್ಲಿ ಅದನ್ನು ಮಾಟಗಾತಿಯರೆಂದು ಆಪಾದಿಸಲ್ಟಟ್ಟವರ ಮೇಲೆ ಪ್ರಯೋಗಿಸಲಾಯಿತು. ಈ ರೋಮನ್ ಇನ್‍ಕ್ವಿಸಿಷನ್ ವ್ಯವಸ್ಥೆ ಪೋಪನ ಆಡಳಿತ ವ್ಯವಸ್ಥೆಯ ಒಂದು ಅಂಗವಾಗಿ ಇಟಲಿಯಲ್ಲಿ ಹೆಚ್ಚಾಗಿ ಪ್ರಯೋಗದಲ್ಲಿತ್ತು. ಆದರೂ ಮತವಿರೋಧಿಗಳನ್ನಡಗಿಸುವುದಕ್ಕಾಗಿ ನಿರ್ಮಿತವಾಗಿದ್ದ ಈ ವ್ಯವಸ್ಥೆ. ಆಧುನಿಕ ಯುಗ ಮುಂದುವರಿದು ಉದಾರಾಭಿಪ್ರಾಯಗಳು ಬೆಳೆದಂತೆ, ಜನವಿರೋಧವನ್ನೆದುರಿಸಬೇಕಾಗಿ ಬಂದು ಕ್ರಮೇಣ ಅಳಿಸಿಹೋಯಿತು.

ಉಲ್ಲೇಖಗಳು

[ಬದಲಾಯಿಸಿ]