ವಿಷಯಕ್ಕೆ ಹೋಗು

ಇಟಾಲಿಯನ್ ಸಾಹಿತ್ಯವಿಮರ್ಶೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದರ ಪರಂಪರೆಯ ಮೂಲವನ್ನು ಮಧ್ಯಯುಗದ ಮಹಾಕವಿಯೂ ಇಟಲಿ ಸಾಹಿತ್ಯದ ಕಾರಣಪುರುಷನೂ ಆದ ಡಾಂಟೆ ಬರೆದ ಎರಡು ಅಪೂರ್ಣ, ಆದರೆ ಅಪೂರ್ವವಾದ ಗದ್ಯಗ್ರಂಥಗಳಲ್ಲಿ ಗುರುತಿಸಬಹುದು. ಡಾಂಟೆಗಿಂತ ಮುಂಚೆ ಇಟಲಿ ಸಾಹಿತ್ಯ ಇತಿಹಾಸದಲ್ಲಿ ವಿಮರ್ಶಾಸೂತ್ರಗಳನ್ನು ಕುರಿತು ಚಿಂತಿಸಿದವರು, ವಿವೇಚಿಸಿದವರು ತೀರಾ ವಿರಳ. ಮತ ಧರ್ಮಗಳು ಜನಜೀವನದ ಮೇಲೆ ವಿಶೇಷ ಅಧಿಕಾರ, ಪ್ರಭಾವ ಬೀರಿದ ಮಧ್ಯಯುಗದ ಕಾಲದಲ್ಲಿ ಕ್ರೈಸ್ತಮಠಗಳ ಸಂನ್ಯಾಸಿಗಳೇ ಸಾಹಿತ್ಯದ ತಪ್ಪು ಒಪ್ಪುಗಳನ್ನು ನಿರ್ಣಯಿಸುತ್ತಿದ್ದರು. ಕ್ರೈಸ್ತಲೋಕದಲ್ಲಿ ಪುರಾತನ ಗ್ರೀಕ್, ಲ್ಯಾಟಿನ್ ಲೌಕಿಕ ಸಾಹಿತ್ಯದ ಎಷ್ಟು ಭಾಗವನ್ನುಳಿಸಿಕೊಳ್ಳಬೇಕೆಂದು ನಿರ್ಧರಿಸಿದವರೂ ಮಠಾಧಿಪತಿಗಳೇ. ಇವರಲ್ಲಿ ಮಾನವೀಯ ಮೌಲ್ಯಗಳನ್ನರಿತು ವ್ಯಕ್ತಿಸ್ವಾತಂತ್ರ್ಯವನ್ನು ಗುರುತಿಸಿದವರೂ ಟರ್‍ಷುಲಿಯನ್‍ರಂಥ ಮತಾಂಧರೂ ಸೇರಿರುತ್ತಿದ್ದರು. ಆ ಕಾಲದಲ್ಲಿ ಸಾಹಿತ್ಯಸೂತ್ರಗಳನ್ನು ಲೌಕಿಕದೃಷ್ಟಿಯಿಂದ ನೋಡಿದವರಲ್ಲಿ ಡಾಂಟೆಯೇ ಮೊದಲಿಗ. ಇಟಾಲಿಯನ್ ಗದ್ಯದಲ್ಲಿ ಬರೆದ ಡಾಂಟೆಯ ಇಲ್ ಕನ್‍ವೀವಿಯ ಅಥವಾ ಔತಣಕೂಟ ಮುಖ್ಯವಾಗಿ ರಾಜ್ಯಶಾಸ್ತ್ರ, ದರ್ಶನ, ಬೈಬಲ್ ಹಾಗೂ ಆತ್ಮಕಥೆಯ ಪ್ರಸ್ತಾಪಗಳನ್ನೊಳಗೊಂಡ ಗಹನ ವಿದಗ್ಧ ಗ್ರಂಥ. ಎರಡನೆಯ ಗ್ರಂಥವಾದ ಡಿ ವಲ್ಗರಿ ಎಲಕ್ವೆಂಷಿಯ ಅಥವಾ ದೇಶಭಾಷೆಯ ಬಳಕೆ ಯೂರೋಪಿನ ಸಾಹಿತ್ಯ ವಿಮರ್ಶೆಯ ಆಕರ ಗ್ರಂಥ. ಡಾಂಟೆ, ತಾನು ಕಾವ್ಯ ಮಾಧ್ಯಮವಾಗಿ ಬಳಸಲು ನಿರ್ಧರಿಸಿದ, ಆಮೇಲೆ ಕೈಬಿಟ್ಟ, ಇಟಲಿಯ ದೇಶಭಾಷೆಯ ವೈವಿಧ್ಯ, ಔಚಿತ್ಯಗಳನ್ನು ಸ್ವಾರಸ್ಯವಾಗಿ ವಿವೇಚಿಸಿದ್ದಾನೆ. ಹೊಸದಾಗಿ ಕಾವ್ಯ ನಿರ್ಮಿಸಲು ಹೊರಟ ಯಾವ ಕವಿಯೂ ಎದುರಿಸಬೇಕಾದ ಅಭಿವ್ಯಕ್ತಿಯ ಸಮಸ್ಯೆಯನ್ನು ಇಲ್ಲಿ ಚರ್ಚಿಸಿದ್ದಾನೆ.

ಇಟಾಲಿಯನ್ ಕವಿಗಳು

[ಬದಲಾಯಿಸಿ]

ಹೊಸ ಹುಟ್ಟಿನ ಕಾಲದಲ್ಲಿ ಪಂಡಿತರು ಅನುಸರಿಸಿದ ವಿಮರ್ಶೆಯ ಸೂತ್ರಗಳಲ್ಲಿ ಯಾವ ತೆರನಾದ ಸಂಕೀರ್ಣತೆಯೂ ಇರಲಿಲ್ಲ. ಹೋಮರ್, ವರ್ಜಿಲ್, ಅರಿಸ್ಟಾಟಲರಂಥ ಪುರಾತನ ಸಾಹಿತಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ಅವರ ಕೃತಿಗಳ ಮಾದರಿಯನ್ನನುಸರಿಸದೆ ಬರೆದುದೆಲ್ಲ ದೋಷಪೂರ್ಣ ಸಾಹಿತ್ಯ. ಇದು ಅಂದಿನ ಸಾಹಿತಿಗಳ ಧೋರಣೆ. ಕೇವಲ ಪುರಾತನರ ಸಾಹಿತ್ಯಪ್ರಕಾರಗಳನ್ನಲ್ಲದೆ ಅವರು ಉಪಯೋಗಿಸಿದ ಭಾಷೆಯನ್ನೂ ಮಾದರಿಯಾಗಿ ಅನುಸರಿಸಬೇಕೆಂದು ೧೫೨೭ರಲ್ಲಿ ಮಾರ್ಕೊ ಜಿರೊಲಾಮೋ ವಿಡ ವಾದಿಸಿದ. ವಿಮರ್ಶಾಸೂತ್ರಗಳನ್ನು ಪದ್ಯರೂಪದಲ್ಲಿ ಹೆಣೆಯುವ ಸಂಪ್ರದಾಯ ಪ್ರಾರಂಭವಾದುದೂ ಆಗಲೇ. ವಿಡ ಲ್ಯಾಟಿನ್‍ನಲ್ಲಿ ಬರೆದ ಕಾವ್ಯಕಲೆ ನೂರಾರು ವರ್ಷಗಳ ಅನಂತರ ಫ್ರಾನ್ಸಿನ ಬೋಲೊ ಆಮೇಲೆ ಇಂಗ್ಲೆಂಡಿನ ಅಲೆಕ್ಸಾಂಡರ್ ಪೋಪ್ ಮುಂತಾದವರ ಮೇಲೆ ಪ್ರಭಾವ ಬೀರಿತು.ಆ ಕಾಲದಲ್ಲಿ ಹೋಮರ್, ಪ್ಲೇಟೊ, ಅರಿಸ್ಟಾಟಲ್‍ರ ಲೋಕೋತ್ತರ ಗ್ರಂಥಗಳನ್ನು ಭಾಷಾಂತರ ಮಾಡಿ ಅಡಕವಾಗಿ ಸಂಗ್ರಹಿಸಿ, ಸಂಪಾದಿಸಿ ಅವುಗಳನ್ನು ಜನಪ್ರಿಯಗೊಳಿಸಿದರೂ ಪುರಾತನ ವಿಮರ್ಶಾಸೂತ್ರ್ರಗಳನ್ನು ಕುರಿತ ಸಮಂಜಸ ತಿಳಿವಳಿಕೆ ಪಂಡಿತರಲ್ಲಿ ಮೂಡಲು ಬಹುಕಾಲ ಹಿಡಿಯಿತು. ಆ ಕಾಲದಲ್ಲೂ ಎಲ್ಲರೂ ಪುರಾತನ ಸೂತ್ರಗಳನ್ನು ಕುರುಡು ಕುರುಡಾಗಿ ಅನುಕರಿಸಲಿಲ್ಲ. ಪುರಾತನ ಅಭಿಜಾತ ಸಂಪ್ರದಾಯವನ್ನು ವಿರೋಧಿಸುವ ಅಭಿಪ್ರಾಯ ವ್ಯಕ್ತಪಡಿಸಿದವರಲ್ಲಿ ಸಿಂಥಿಯೋ, ಟ್ಯಾಸೋ, ಮ್ಯಾಟ್ಜಿನಿ, ಗುಆರಿನಿ, ಕ್ಯಾಸಲ್ ಪೆಟ್ರೋ ಮುಂತಾದವರ ಹೆಸರು ಹೇಳಬಹುದು. ತಾವು ರಚಿಸಿದ ರಮ್ಯ ಕಲ್ಪನೆಯ ಕೃತಿಗಳಲ್ಲಿ ಅನುಸರಿಸಿದ ವಿಭಿನ್ನ ಮಾರ್ಗ, ನೂತನ ಶೈಲಿ, ಅಳವಡಿಸಿಕೊಂಡು ಹೊಸ ಪ್ರಕಾರಗಳನ್ನವರು ಸಮರ್ಥಿಸಿಕೊಂಡರು. ಕ್ಲಾಸಿಕಲ್ ಸಂಪ್ರದಾಯದೊಳಗೇ ತದ್ವಿರುದ್ಧವಾದ ನವ್ಯ, ರಮ್ಯ ಸಂಪ್ರದಾಯವೂ ಹುಟ್ಟಿ ಬಂದುದು ಸರ್ವವಿದಿತ. ಛಂದಶಾಸ್ತ್ರ, ಪ್ರಾಸ ಮುಂತಾದ ವಿಷಯಗಳಲ್ಲಿ ಜಿಜ್ಞಾಸೆ ಪ್ರಾರಂಭವಾದುದೂ ಈ ಕಾಲದಲ್ಲೇ. ಪುರಾತನರ ಸಾಹಿತ್ಯಮಾರ್ಗವನ್ನೂ ವಿಮರ್ಶಾಸೂತ್ರಗಳನ್ನು ಸ್ವಂತವಾಗಿ ಗ್ರಹಿಸಿ ತಮ್ಮ ಕಾಲದ ರೀತಿನೀತಿ, ಅಭಿರುಚಿಗಳಿಗೆ ಒಪ್ಪವಾಗುವಂತೆ ಅಳವಡಿಸಿಕೊಂಡು ಪೆಟ್ರಾರ್ಕ್, ಬೊಕ್ಯಾಚಿಯೊ ಮುಂತಾದ ಶ್ರೇಷ್ಠ ಸಾಹಿತಿಗಳು ತಮ್ಮ ಸೋಪಜ್ಞತೆಯನ್ನು ಮೆರೆದರು. ವಾದವಿವಾದಗಳಲ್ಲಿ ಸೇರಿದ ಪಂಡಿತರ ಒಂದು ಪಂಗಡ ವಿವೇಚನೆ ಮರೆತು ದುರಭಿಮಾನ ತಳೆದು ಗ್ರೀಸಿನ ಹೋಮರನಿಗಿಂತ ತಮ್ಮ ದೇಶದ ವರ್ಜಿಲನೇ ಉತ್ತಮೋತ್ತಮ ಕವಿಯೆಂದು ವಾದಿಸಿ ವರ್ಜಿಲ್ ಪೂಜೆಯ ಹೊಸ ಪಂಥವನ್ನೇ ಕಟ್ಟಲೆತ್ನಿಸಿದರು. ಹದಿನಾರನೆಯ ಶತಮಾನದ ಇಟಲಿ ವಿಮರ್ಶೆಯಲ್ಲಿ ಹೊರಹೊಮ್ಮಿದ ಒಂದು ಪ್ರವೃತ್ತಿಯಂತೂ ಗಮನಾರ್ಹ. ಕಾವ್ಯವನ್ನು ಕುರಿತ ಉತ್ಕರ್ಷೆ, ಕಾವ್ಯದ ಹಿರಿಮೆಯನ್ನು ಕುರಿತ ಕಳಕಳಿ ಹೊಸ ಹುಟ್ಟಿನ ಕಾಲದ ಮಾನವತಾವಾದಿಗಳ ಗ್ರಂಥಗಳಲ್ಲಿ ನಿಚ್ಚಳವಾಗಿ ಪಡಿಮೂಡಿದ ಗುಣಾಂಶ.

ಇತಿಹಾಸ

[ಬದಲಾಯಿಸಿ]

ಹದಿನೇಳು ಹಾಗೂ ಹದಿನೆಂಟನೆಯ ಶತಮಾನದ ಉದ್ದಕ್ಕೂ ಪ್ರಭಾವ ಬೀರಿದ ನಿಯೋಕ್ಲಾಸಿಕಲ್ ಸಂಪ್ರದಾಯ ಗ್ರಾವಿನ, ಮುರತೋರಿ ಹಾಗೂ ವಿಕೋ ಮುಂತಾದ ವಿಮರ್ಶಕರನ್ನು ಸೃಜಿಸಿತು. ವಿಕೋ ಪ್ರತಿಪಾದಿಸಿದ ಇತಿಹಾಸವಾದ ಪ್ರಪಂಚ ಸಾಹಿತ್ಯ ಚರಿತ್ರೆಯಲ್ಲೇ ತೀರಾ ವಿನೂತನ ಕಲ್ಪನೆ. ಬಹುಕಾಲ ಅಜ್ಞಾತವಾಗಿದ್ದ ವಿಕೋನ ಸೋಪಜ್ಞತೆಯನ್ನು ಯೂರೋಪಿಗೆ ಪರಿಚಯ ಮಾಡಿಸಿದವರು ಇಂಗ್ಲೆಂಡಿನ ಕೋಲ್‍ರಿಜ್ ಹಾಗೂ ಇಟಲಿಯ ಪ್ರತಿಭಾವಂತ ವಿಮರ್ಶಕ ಕ್ರೋಚೆ.ಹದಿನೆಂಟನೆಯ ಶತಮಾನದ ಇಟಲಿಯ ವಿಮರ್ಶಕರಲ್ಲಿ ಪ್ರಸಿದ್ಧರಾದ ಇಬ್ಬರ ಹೆಸರು ಉಲ್ಲೇಖನಾರ್ಹ. ಸೀಸರಟ್ಟಿ ಇಂಗ್ಲಿಷ್ ಕವಿ ಮ್ಯಾಕ್‍ಫರ್‍ಸನ್ನನ ಓಸಿಯನ್ ಕಾವ್ಯವನ್ನೂ ಅರಿಸ್ಟಾಟಲ್‍ನ ರುದ್ರನಾಟಕ ಸೂತ್ರಗಳನ್ನೂ ಕುರಿತ ವಿಶ್ಲೇಷಣಾ ಪ್ರಬಂಧಗಳನ್ನು ಬರೆದ. ಇಂಗ್ಲಿಷ್ ಸಾಹಿತ್ಯಾಭ್ಯಾಸಿಗಳಿಗೆಲ್ಲ ಪರಿಚಿತನಾದ ಇನ್ನೊಬ್ಬ ವಿಮರ್ಶಕ-ಬ್ಯಾರಟ್ಟಿ, ಡಾ. ಜಾನ್‍ಸನ್ನನ ಆಪ್ತ ಒಡನಾಡಿಯೆಂದು ಪ್ರಸಿದ್ಧನಾದ ಬ್ಯಾರಟ್ಟಿಗೆ ಆತ ಮೂರು ವರ್ಷ ನಡೆಸಿದ ನಿಯತಕಾಲಿಕ ಪತ್ರಿಕೆಯೇ ಕುಂದಿಲ್ಲದ ಕೀರ್ತಿ ಗೌರವಗಳನ್ನು ದೊರಕಿಸಿದೆ. ಇಂಗ್ಲೆಂಡಿನ ಸ್ಟೀಲ್, ಅಡಿಸನ್ ಗೋಲ್ಡ್ ಸ್ಮಿತ್ ಮುಂತಾದವರ ಪ್ರಭಾವಗಳನ್ನು ಬ್ಯಾರಟ್ಟಿಯ ಲೇಖನಗಳಲ್ಲಿ ಗುರುತಿಸಬಹುದು. ಅವನ ಹರಿತವಾದ ಶೈಲಿ, ಚಾಟಿಯಿಂದ ಹೊಡೆದೆಬ್ಬಿಸುವಂಥ ವಿಚಾರಧಾರೆ, ದಿಟ್ಟತನ, ಸೂಕ್ಷ್ಮ ಸಂವೇದನೆ-ಈ ಶತಮಾನದ ಓದುಗರ ಅಭಿರುಚಿಯನ್ನೂ ಕೆರಳಿಸುವಂಥದು. ತನ್ನ ಕಾಲದ ಇಟಲಿ ಸಾಹಿತ್ಯವನ್ನು ಕುರಿತು ಅವನ ನಂಜುನುಡಿಗಳು ಒಮ್ಮೊಮ್ಮೆ ಔಚಿತ್ಯರಹಿತವೆನಿಸಿದರೂ ಅವು ಅವನ ವಸ್ತು ನಿಷ್ಠೆಯನ್ನೂ ಆದರ್ಶಪ್ರಿಯತೆಯನ್ನೂ ಪ್ರತಿರೂಪಿಸುತ್ತವೆ.[]

ಯೂರೋಪ್ ನ ಪ್ರಭಾವ

[ಬದಲಾಯಿಸಿ]

ಹತ್ತೊಂಬತ್ತನೆಯ ಶತಮಾನದಲ್ಲಿ ಯೂರೋಪ್ ನಲ್ಲಿ ಬೀಸಿ ಬಂದ ಹೊಸ ಹುಟ್ಟಿನ ಬಿರುಗಾಳಿ ಇಟಲಿಯನ್ನೂ ತಟ್ಟಿತಷ್ಟೆ. ಅಲ್ಲಿ ಅದರ ಪ್ರವರ್ತಕರಲ್ಲಿ ಬ್ರೀಮೆ, ಪೆಲ್ಲಿಕೊ, ವೈಕಾಂಟಿ, ಮ್ಯನ್‍ಜೋನಿ ಅತ್ಯಂತ ಪ್ರಭಾವಶಾಲಿ ವಿಮರ್ಶಕರು. ಇಟಲಿಯಲ್ಲಿ ಹೊಸಹುಟ್ಟಿನ ಪಂಥ ಎತ್ತಿಹಿಡಿಯುವುದರಲ್ಲಿ ಮ್ಯನ್‍ಜೋನಿ ಉಜ್ಜ್ವಲ ಪಾತ್ರವಹಿಸಿದ. ತಾನು ರಚಿಸಿದ ಐತಿಹಾಸಿಕ ವಸ್ತುವುಳ್ಳ ದುರಂತನಾಟಕ ಮತ್ತು ಕಾದಂಬರಿಗಳಲ್ಲಿ ಪುರಾತನ ಸಾಹಿತ್ಯವಸ್ತುವನ್ನು ತ್ಯಜಿಸಿ, ಅರಿಸ್ಟಾಟಲ್ ಹೇಳಿದ ಮೂರು ಏಕತೆಗಳನ್ನುಲ್ಲಂಘಿಸಿ, ದೀರ್ಘ ವಿವಾದವೆಬ್ಬಿಸಿದ, ಹೊಸಹುಟ್ಟಿನ ಸಾಹಿತ್ಯವೆಂದರೆ ಮಾಯ ಮಾಟದ ದೆವ್ವಪಿಶಾಚಿಗಳ ರೋಮಾಂಚಕ ಕಥೆಯಲ್ಲವೆಂದು ಸಾಧಿಸಲು ಚರಿತ್ರೆಯ ಘಟನೆ ಪಾತ್ರಗಳನ್ನೇ ತನ್ನ ಕೃತಿಗಳಲ್ಲಿ ಅಳವಡಿಸಿಕೊಂಡ. ಚರಿತ್ರೆಯನ್ನು ಕುರಿತ ಕಟ್ಟುಕಥೆ, ಕಾಲ್ಪನಿಕ ಪಾತ್ರಸೃಷ್ಟಿ ಅಸಾಧ್ಯವೆಂದು ವಾದಿಸುವ ಇವನ ಅಭಿಪ್ರಾಯಗಳನ್ನು ಗಯಟೆ ಎದುರಿಸಿ, ಸಮಂಜಸ ವ್ಯಾಖ್ಯಾನ ನೀಡಿದ್ದಾನೆ. ಮ್ಯನ್‍ಜೋನಿಯ ತತ್ತ್ವಗಳು ಪರೋಕ್ಷವಾಗಿ ಇಟಲಿಯ ಹೊಸಹುಟ್ಟಿನ ಪಂಥವನ್ನೇ ನಿರಾಕರಿಸುವುದೇನೊ ಎಂದು ತೋರುತ್ತದೆ. ಆ ತತ್ತ್ವಗಳನ್ನು ವಿರೋಧಿಸಿದರೂ ಉಗೋ ಫೊಸ್ಕೋಲ ಹಾಗೂ ಲಿಯೋಪಾರ್ದಿ ತಮಗರಿಯದಂತೆ ಇಟಲಿಯ ರೊಮ್ಯಾಂಟಿಕ್ ಪಂಥದ ನೇತಾರರೂ ಆದುದೊಂದು ವಿರೋಧಾಭಾಸ. ಅಸಾಧಾರಣ ಪಂಡಿತನಾದರು ಸಹೃದಯನಿಗಿರಬೇಕಾದ ತಾಳ್ಮೆ, ಕುತೂಹಲ, ಉತ್ಸಾಹಗಳಿಲ್ಲದಿರುವುದರಿಂದ ಲಿಯೋಪಾರ್ದಿಯ ಟೀಕೆ ಟಿಪ್ಪಣಿಗಳು ತಮ್ಮ ಅರ್ಥ-ಮೌಲ್ಯಗಳನ್ನು ಕಳೆದುಕೊಂಡಿವೆ. ಒಟ್ಟಿನಲ್ಲಿ ನಾಲ್ಕು ಕಾಲ ನಿಲ್ಲಬಲ್ಲ ಸತ್ತ್ವಶಾಲಿ ವಿಮರ್ಶಾಪಂಥ ಇಟಲಿಯಲ್ಲಿ ನಿರ್ಮಾಣವಾಗಲು ಬಹುಕಾಲ ಬೇಕಾಯಿತು.[]

ಡಿ ಸಾಂಕ್ಟಿಸ್ ಅಗ್ರಗಣ್ಯ

[ಬದಲಾಯಿಸಿ]

ಇಂಥ ಹೊಸ ನಿರ್ಮಿತಿಯನ್ನು ಸಾಧಿಸಹೊರಟವರಲ್ಲಿ ಡಿ ಸಾಂಕ್ಟಿಸ್ ಅಗ್ರಗಣ್ಯ; ಈತ ಹತ್ತೊಂಬತ್ತನೆಯ ಶತಮಾನದ ಪ್ರಭಾವಶಾಲಿ ವಿಮರ್ಶಕ. ಈತ ಬರೆದ ಇಟಲಿ ಸಾಹಿತ್ಯದ ಕಥೆ ಹೊಸತೊಂದು ಸೌಂದರ್ಯಪಂಥವನ್ನೇ ನಿರ್ಮಿಸಿತೆನ್ನುತ್ತಾರೆ.ಆದರೆ ಇಟಲಿಯ ಹೆಸರನ್ನು ಪ್ರಪಂಚದ ಸಾಹಿತ್ಯ ಇತಿಹಾಸದಲ್ಲಿ ಚಿರಸ್ಥಾಯಿಗೊಳಿಸಿದವನು ಈ ಶತಮಾನದ ಬೆನೆಡೆಟೊ ಕ್ರೋಚೆ. ಈತ ಸುಮಾರು 600 ವರ್ಷಗಳ, ಇಟಲಿ ವಿಮರ್ಶಾ ಪರಂಪರೆಯ ಸಾರ ಸರ್ವಸ್ವವನ್ನು ಮೈಗೂಡಿಸಿಕೊಂಡ ಮೇಧಾವಿ. ಸಾಹಿತ್ಯದ ಹೊರ ರೂಪು, ಅಂತರಂಗಗಳು ವಿಭಿನ್ನವಲ್ಲವೆನ್ನುವುದು ಕ್ರೋಚೆಯ ವಾದ. (ನೋಡಿ- ಕ್ರೋಚೆ,-ಬೆನೆಡೆಟೋ). ಈ ಯುಗದ ಪ್ರಸಿದ್ಧ ವಿಮರ್ಶಕರೂ ಸೌಂದರ್ಯಶಾಸ್ತ್ರಜ್ಞರು ಎನಿಸಿಕೊಂಡು ಜೆಂಟೈಲ್ ಮುಂತಾದವರು ಯಾರೊಬ್ಬರೂ ಕ್ರೋಚೆಯ ಪ್ರಭಾವವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲವೆನ್ನುವುದೇ ಅವನ ಅನನ್ಯ ಪ್ರತಿಭೆಗೆ ಸಾಕ್ಷಿ. ಇಟಲಿಯ ವಿಮರ್ಶಾ ಸಂಪ್ರದಾಯಕ್ಕೆ ಮೂರ್ತಸ್ವರೂಪವಿತ್ತ ಕೀರ್ತಿ ಕ್ರೋಚೆಗೇ ಸಲ್ಲಬೇಕು. (ಎಚ್.ಕೆ.ಆರ್.)[]ಇತ್ತೀಚಿನ ವಿಮರ್ಶೆ ಪತ್ರಿಕೆ, ನಿಯತಕಾಲಿಕೆಗಳಲ್ಲಿನ ಚರ್ಚೆಗಳಿಂದ ಪುಷ್ಟಿಗೊಂಡಿದೆ. ಕ್ರೋಚೆ ಹೇಳಿದಂತೆ "ಚರಿತ್ರೆ, ಹಿಂದೆ ನಡೆದ ಕೆಲವು ಪ್ರಕರಣಗಳಲ್ಲ; ಈಗಿನ ನಮ್ಮ ಪ್ರಜ್ಞೆಯಲ್ಲಿ ಆ ಆಗುಹೋಗುಗಳ ಪುನರುತ್ಥಾನವೇ ಚರಿತ್ರೆ. ಈ ಆದರ್ಶದಿಂದ ಸಾಹಿತ್ಯದ ಅಧ್ಯಯನ ಅದರ ಕಲಾರೂಪದಲ್ಲಿ ಹೆಚ್ಚು ತೀವ್ರವಾಗಿ ನಡೆಯಿತು.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-10-25. Retrieved 2016-10-20.
  2. http://www.ranker.com/list/famous-poets-from-italy/reference?utm_expid=16418821-253.BAWaw7_5T3qAVTf7EdWDtA.0&utm_referrer=https%3A%2F%2Fwww.google.co.in%2F
  3. http://poetsofmodernity.xyz/POMBR/Italian/FiveItalianPoets.htm