ಇಗುವಾಸ್ಸು ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರೆಜಿಲ್‌ನಿಂದ ಇಗುವಾಸ್ಸು ಜಲಪಾತದ ನೋಟ

ಇಗುವಾಸ್ಸು ಜಲಪಾತ ( ಇಗುವಾಸು ಮತ್ತು ಇಗುವಾಝು ಇತರ ಹೆಸರುಗಳು) ದಕ್ಷಿಣ ಅಮೇರಿಕದ ಬ್ರೆಜಿಲ್ (20%) ಮತ್ತು ಅರ್ಜೆಂಟೀನಾ (80%)ದೇಶಗಳ ಗಡಿಗೆ ಹೊಂದಿ ಹರಿಯುವ ಇಗುವಾಸ್ಸು ನದಿಯ ಒತ್ತಾಗಿರುವ ಹಲವು ಜಲಪಾತಗಳ ಸರಣಿ. ವಿಶ್ವದ ನೈಸರ್ಗಿಕ ಅದ್ಭುತಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಈ ಜಲಪಾತಗಳು ನದಿಯನ್ನು ಮೇಲಣ ಇಗುವಾಸ್ಸು ಮತ್ತು ಕೆಳಗಣ ಇಗುವಾಸ್ಸು ನದಿಗಳಾಗಿ ವಿಭಾಗಿಸುತ್ತದೆ. ಹೊರಗಣ ಜಗತ್ತಿಗೆ ಈ ಜಲಪಾತವನ್ನು ಪರಿಚಯಿಸಿದ ಕೀರ್ತಿ ಬೋಸೆಲ್ಲಿ ಎಂಬ ಯುರೋಪಿಯನ್ನನಿಗೆ ಸಲ್ಲುತ್ತದೆ. ೧೯ನೆಯ ಶತಮಾನದಲ್ಲಿ ಇದರ ಇರವನ್ನು ಸಾರಿದ ಈತನ ಹೆಸರನ್ನು ಇಗುವಾಸ್ಸು ಜಲಪಾತಗಳಲ್ಲಿ ಒಂದಕ್ಕೆ ಇಡಲಾಗಿದೆ. ಇಗುವಾಸ್ಸು ಜಲಪಾತ ಸಮೂಹದಲ್ಲಿ ಒಟ್ಟು ೨೭೫ ಜಲಪಾತಗಳಿದ್ದು ಇವು ಇಗುವಾಸ್ಸು ನದಿಯುದ್ದಕ್ಕೆ ೨.೭ ಕಿ.ಮೀ. ಪಾತ್ರದಲ್ಲಿ ಹರಡೀವೆ. ಇವುಗಳಲ್ಲಿ ಕೆಲವು ೮೨ ಮೀ.( ೨೬೯ ಅಡಿಗಳು) ಎತ್ತರದಿಂದ ಧುಮುಕಿದರೆ ಹೆಚ್ಚಿನ ತಡಸಲುಗಳ ಎತ್ತರ ೬೪ ಮೀ.(೨೧೦ ಅಡಿಗಳು). ಜಲಪಾತಗಳ ಮೂರನೆಯ ಎರಡು ಭಾಗ ಅರ್ಜೆಂಟೀನಾದಲ್ಲಿದ್ದರೆ ಉಳಿದವು ಬ್ರೆಜಿಲ್‌ನಲ್ಲಿವೆ. ಇಗುವಾಸ್ಸು ಜಲಪಾತಗಳ ಪ್ರದೇಶವು ಅರ್ಜೆಂಟೀನಾ ಮತ್ತು ಬ್ರೆಜಿಲ್ ರಾಷ್ಟ್ರಗಳ ಅದೇ ಹೆಸರಿನ ಎರಡು ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯಲ್ಲಿದೆ. ಈ ರಾಷ್ಟ್ರೀಯ ಉದ್ಯಾನಗಳನ್ನು ಯುನೆಸ್ಕೋ ಕ್ರಮವಾಗಿ ೧೯೮೪ ಮತ್ತು ೧೯೮೬ರಲ್ಲಿ ವಿಶ್ವ ಪರಂಪರೆಯ ತಾಣಗಳನ್ನಾಗಿ ಘೋಷಿಸಿದೆ. ಇಗುವಾಸ್ಸು ಜಲಪಾತಗಳ ವೀಕ್ಷಣೆಗೆ ಅನುವಾಗಲು ಎರದೂ ರಾಷ್ಟ್ರಗಳು ಅನೇಕಾ ಕಾಲುದಾರಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿರ್ಮಿಸಿವೆ. ಈ ಜಲಪಾತಗಳಲ್ಲಿ ಜಲಕ್ರೀಡೆಗಳು ಮತ್ತು ಬಂಡೆ ಏರುವಿಕೆಯಂತಹ ಸಾಹಸಕ್ರೀಡೆಗಳಿಗೆ ಅನುಕೂಲವಿದೆ. ಇಗುವಾಸ್ಸು ಜಲಪಾತವು ನಯಾಗರಾ ಜಲಪಾತವನ್ನು ಹೋಲುತ್ತದೆ. ಅಲ್ಲದೆ ವಿಕ್ಟೋರಿಯಾ ಜಲಪಾತದೊಂದಿಗೆ ಸಹ ಇದರ ತುಲನೆ ನಡೆದಿದೆ. ಇಗುವಾಸ್ಸು ಜಲಪಾತವು ಜಗತ್ತಿನ ಅತ್ಯಂತ ಅಗಲವಾಗಿರುವ ಜಲಪಾತವಾಗಿದೆ. ಆದರೆ ಇವು ೨೭೦ ಭಿನ್ನ ಧಾರೆಗಳಾಗಿ ಧುಮುಕುತ್ತವೆಯಾದ್ದರಿಂದ ನಿಜವಾಗಿ ಈ ಕೀರ್ತಿಯು ೧೬೦೦ ಮೀಟರ್ ಅಗಲದ ಒಂದೇ ಧಾರೆಯಾಗಿ ಧುಮುಕುವ ವಿಕ್ಟೋರಿಯಾ ಜಲಪಾತಕ್ಕೆ ಸಲ್ಲಬೇಕೆಂಬುವುದೊಂದು ವಾದವು ಸಹ ಇದೆ. ಇಗುವಾಸ್ಸು ಜಲಪಾತವು ವಿಶ್ವದಲ್ಲಿ ಅತಿ ಹೆಚ್ಚಿನ ವಾರ್ಷಿಕ ನೀರಿನ ಹರಿವನ್ನು ಹೊಂದಿರುವಜಲಪಾತವು ಸಹ ಆಗಿದೆ. ನೀರಿನ ಸರಾಸರಿ ಹರಿವು ಪ್ರತಿ ಸೆಕೆಂಡಿಗೆ ೧೩೦೦ ರಿಂದ ೧೫೫೦ ಘನ ಮೀಟರ್‌ಗಳಷ್ಟು. ತನ್ನ ವಿಶಿಷ್ಟ 'U' ಆಕಾರದಿಂದಾಗಿ ಇಗುವಾಸ್ಸು ಜಲಪಾತವು ನೋಡುಗರಿಗೆ ಅತಿ ವಿಶಾಲ ಮತ್ತು ಅದ್ಭುತ ನೋಟ ನೀಡುತ್ತದೆ.

ಜಲಪಾತದ ಇನ್ನೊಂದು ನೋಟ

ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]