ವಿಷಯಕ್ಕೆ ಹೋಗು

ಇಂಗ್ಲಿಷ್ ಕಡಲ್ಗಾಲುವೆಯ ಸುರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಇಂಗ್ಲಿಷ್ ಕಡಲ್ಗಾಲುವೆಯ ಕೆಳಗೆ ನಿರ್ಮಿಸಿರುವ ವಾಹನಗಳ ಓಡಾಟಕ್ಕಾದ ಸುರಂಗ. ಇದನ್ನು ಯುರೋಪಿಯನ್ ಚಾನಲ್ ಎಂದೂ ಕರೆಯುವರು. ೫೧ ಕಿಮೀ ಉದ್ದದ ಸುರಂಗವು ಮೂರು ಸುರಂಗಗಳ ಒಂದು ಸಂಕೀರ್ಣ. ಇದರ ೩೮ ಕಿಮೀ ಉದ್ದವು ಸಾಗರದಡಿಯಲ್ಲಿದೆ. ಈ ಉದ್ದ ಸಾಗರದಡಿಯ ಭಾಗದ ರೈಲುಸುರಂಗಕ್ಕೆ ವಿಶ್ವದಾಖಲೆಯಾಗಿದೆ.

ತಾಂತ್ರಿಕ ಮಾಹಿತಿ

[ಬದಲಾಯಿಸಿ]

ಈ ಸಂಕೀರ್ಣದಲ್ಲಿ ೭.೬೦ ಮೀ. ವ್ಯಾಸದ ಎರಡು ಸುರಂಗಗಳ ನಡುವೆ ೪.೮೦ ಮೀ ವ್ಯಾಸದ ಒಂದು ಸುರಂಗವಿದೆ. ಅಗಲ ಸುರಂಗಗಳಲ್ಲಿ ಒಂದೊಂದು ರೈಲು ಮಾರ್ಗವಿದೆ. ಇವುಗಳಲ್ಲಿ ರೈಲುಗಳು ಒಂದು ದಿಕ್ಕಿನಲ್ಲಿ ಸಾಗುತ್ತವೆ, ಅಂದರೆ ಒಂದರಲ್ಲಿ ಬ್ರಿಟನ್ನಿನ ಕಡೆಗೂ, ಇನ್ನೊಂದರಲ್ಲಿ ಫ್ರಾನ್ಸಿನ ಕಡೆಗೂ ಸಾಗುತ್ತವೆ. ಸುರಂಗಗಳ ರೈಲು ಮಾರ್ಗದ ಗೇಜು ೧.೪೩೫ ಮೀ. ಇದನ್ನು ಸ್ಟ್ಯಾಂಡರ್ಡ್ ಗೇಜು ಎನ್ನುವರು. ರೈಲು ಮಾರ್ಗಗಳಲ್ಲಿ ಗಂಟೆಗೆ ೨೦೦ ಕಿಮೀ ವೇಗದಲ್ಲಿ ರೈಲುಗಳು ಚಲಿಸುವಂತೆ ರೂಪಿಸಲಾಗಿದೆ. ಇವುಗಳ ನಡುವೆ ಇರುವ ಕಿರು ಸುರಂಗದ ಹೆಸರು ಸೇವಾ ಸುರಂಗ. ಇದರ ಮೂಲಕ ರೈಲು ಸುರಂಗಗಳಿಗೆ ತಾಜಾ ಗಾಳಿಯನ್ನು ಒದಗಿಸುವರು. ಸುರಂಗಗಳಲ್ಲಿ ಶೇಖರವಾಗಬಹುದಾದ ನೀರನ್ನು ಹೊರ ಹಾಕಲು ಪೈಪು ಮಾರ್ಗಗಳು ಇದರ ಮೂಲಕ ಹಾಯುತ್ತವೆ. ಈ ಸುರಂಗದ ಉದ್ದಕ್ಕೂ ಎರಡು ಬದಿಗಳಲ್ಲೂ ಗವಿಗಳಿದ್ದು ಅವುಗಳಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರುಗಳನ್ನೂ, ಸ್ವಿಚ್ಗೇರ್ಗಳನ್ನೂ ಸಿಗ್ನಲ್ ಉಪಕರಣಗಳನ್ನೂ ನೀರನ್ನು ಹೊರಹಾಕಲು ಬೃಹತ್ ಪಂಪುಗಳನ್ನೂ ವಾತಾಯನ ಯಂತ್ರಗಳನ್ನೂ ಸ್ಥಾಪಿಸಿದ್ದಾರೆ.

ಸೇವಾ ಸುರಂಗದಿಂದ ರೈಲು ಸುರಂಗಗಳನ್ನು ಪ್ರವೇಶಿಸಲು, ಪ್ರತಿ ೩೭೫ ಮೀ ಅಂತರದಲ್ಲಿ ಅಡ್ಡ ಸುರಂಗಗಳಿವೆ. ಈ ಅಡ್ಡ ಸುರಂಗಗಳ ತುದಿಗಳಲ್ಲಿ ಅಗ್ನಿನಿರೋಧಕ ಬಾಗಿಲುಗಳಿವೆ. ಎಂತಹ ಪರಿಸ್ಥಿತಿಯಲ್ಲೂ ಅವು ತೆರದು ಮುಚ್ಚುವಂತಿವೆ. ರೈಲು ಸುರಂಗದಲ್ಲಿ ನಿಂತು ಹೋದರೆ, ಅಥವಾ ಅಪಾಯಕ್ಕೀಡಾದರೆ, ಸೇವಾ ಸುರಂಗದ ಮೂಲಕ ೯೦ ನಿಮಿಷಗಳಲ್ಲಿ ಪಯಣಿಗರನ್ನು ಪಾರು ಮಾಡಬಹುದು. ಸೇವಾ ಸುರಂಗದಲ್ಲಿ ವೈರು ಗಾಲಿಗಳಿರುವ ದೂರ ನಿರ್ದೇಶಿತ ಸಾರಿಗೆ ವ್ಯವಸ್ಥೆ ಇದೆ.

ರೈಲು ಸುರಂಗಗಳು ಸಮಾಂತರವಾಗಿದ್ದು ೩೦ ಮೀ ಅಂತರದಲ್ಲಿದೆ. ಇವು ಎರಡು ಸ್ಥಳಗಳಲ್ಲಿ ಒಂದುಗೂಡುತ್ತವೆ. ಈ ಸ್ಥಳಗಳಲ್ಲಿ ರೈಲುಮಾರ್ಗಗಳು ಒಂದುಗೂಡಿ ದಾಟುತ್ತವೆ. ಇದರ ಉದ್ದೇಶ ರೈಲನ್ನು ಒಂದು ಮಾರ್ಗದಿಂದ ಇನ್ನೊಂದು ಮಾರ್ಗಕ್ಕೆ ಬದಲಿಸಬಹುದು. ಮಾರ್ಗ ದುರಸ್ತಿಗೆ, ರೈಲು ಕೆಟ್ಟು ನಿಂತಾಗ, ಅಪಘಾತಗಳು ನಡೆದಾಗ, ಈ ರೀತಿಯ ಮಾರ್ಗ ಬದಲಾವಣೆಗಳು ಅನಿವಾರ್ಯವಾಗುತ್ತವೆ.

ಚಾನಲ್ ಸುರಂಗವು ಫ್ರಾನ್ಸಿನ ಸಾಂಗೇಟ್ ಬಳಿ ಭೂಪ್ರದೇಶ ಪ್ರವೇಶಿಸಿ ಕಡಲ ತೀರದಲ್ಲಿ ೪೦ ಕಿಮೀ. ಆಳದಲ್ಲಿರುವಂತೆ ಇಳಿಜಾರಾಗಿ ಇಂಗ್ಲಿಷ್ ಕಡಲ್ಗಾಲುವೆಯ ತಳದ ಆಕಾರಕ್ಕೆ ಅನುಗುಣವಾಗಿ ಇಳಿಯುತ್ತಾ ಏರುತ್ತಾ ಎಡಕ್ಕೆ ಬಲಕ್ಕೆ ತಿರುಗುತ್ತಾ, ಬ್ರಿಟನ್ನಿನ ತೀರದಲ್ಲಿ ೪೦ ಮೀ. ಆಳದಲ್ಲಿಳಿದು, ನಂತರ ೮ ಕಿಮೀ. ಏರುತ್ತಾ ಒಟ್ಟು ೫೧ ಕಿಮೀ. ಕ್ರಮಿಸಿ, ಷೇಕ್ಸ್ಪಿಯರ್ ಕ್ಲಿಫ್ನಲ್ಲಿ ಮೇಲ್ಗಡೆ ಬರುವುದು. ಸುರಂಗಗಳು ಕಡಲ ತಳದಿಂದ ೪೦ ಕಿಮೀ. ಆಳದಲ್ಲಿವೆ. ಈ ಸುರಂಗಗಳನ್ನು ತೋಡುವ ಕಾರ್ಯವು ಒಂದು ಬೃಹತ್ ಯೋಜನೆಯಾಗಿತ್ತು. ಇದನ್ನು ಸಕಾಲದಲ್ಲಿ ಮುಗಿಸಲು ವಿಶೇಷವಾಗಿ ರೂಪಿಸಿದ ಬೃಹತ್ ಸುರಂಗ ಕೊರೆಯುವ ಯಂತ್ರಗಳನ್ನು ಬಳಸಿದರು. ರೈಲು ಸುರಂಗಗಳನ್ನು ಕೊರೆಯಲು ಒಂದೊಂದೂ ೧೩೫೦ ಟನ್ ತೂಗುವ ೮.೩೬ ಮೀ. ವ್ಯಾಸದ, ಹಾಗೂ ಸೇವಾ ಸುರಂಗವನ್ನು ಕೊರೆಯಲು ೬೨೫ ಟನ್ ತೂಗುವ ೫.೭೬ ಮೀ. ವ್ಯಾಸದ ಯಂತ್ರಗಳನ್ನು ಬಳಸಿದ್ದಾರೆ. ಈ ಸುರಂಗಗಳನ್ನು ಎರಡು ತುದಿಗಳ ಕಡೆಯಿಂದ ಕೊರೆದರು. ಅವು ಮಧ್ಯೆ ಸಂಧಿಸಿದಾಗ ಅವುಗಳ ಅಲೈನ್ಮೆಂಟಿನಲ್ಲಿ ವ್ಯತ್ಯಾಸ ಕೇವಲ ೩೫.೮ ಸೆಂಮೀ. ಇಷ್ಟು ನಿಖರತೆಯನ್ನು ಸಾಧಿಸಲು ಸಾಧ್ಯವಾದುದು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ, ಅತಿ ಸೂಕ್ಷ್ಮ ಥಿಯೋರೋ ಲೈಟುಗಳು ನಿಖರವಾದ ಎಲೆಕ್ಟ್ರಾನಿಕ್ ದೂರಮಾಪಿಗಳು, ಲೇಸರು ಮಾರ್ಗದರ್ಶನ ಮುಂತಾದ ಆಧುನಿಕ ವೈಜ್ಞಾನಿಕ ಸಾಧನಗಳಿಂದ. ಯುರೋಪಿನಲ್ಲಿನ ಕಾರ್ಯಾಚರಣೆ: ಯುರೋಪಿನಲ್ಲಿನ ದೈನಂದಿನ ಕಾರ್ಯಾಚರಣೆ ಎರಡು ವಿಧವಾಗಿದೆ. ಒಂದು - ಫ್ರಾನ್ಸ್ ಮತ್ತು ಬ್ರಿಟನ್ನ ರೈಲು ಮಾರ್ಗಗಳ ನಡುವೆ ಸಂಪರ್ಕ ಕಲ್ಪಿಸುವುದು. ಎರಡು- ಎರಡು ರಾಷ್ಟ್ರಗಳ ನಡುವೆ ರಸ್ತೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು. ಎರಡು ರಾಷ್ಟ್ರಗಳ ನಡುವೆ ಓಡುವ ರೈಲುಗಳಿಗೆ ಯೂರೋಸ್ಟಾರ್ ಎನ್ನುವರು. ಇವು ಯುರೋಪಿಗೂ ಇಂಗ್ಲೆಂಡಿಗೂ ನಡುವೆ ನೇರ ಸಂಪರ್ಕ ಕಲ್ಪಿಸುವುವು. ರಸ್ತೆಯ ವಾಹನಗಳ ಸಂಚಾರ ಬಹಳ ವಿಚಿತ್ರವಾದುದು. ಯುರೋಪಿನಲ್ಲಿನ ತುದಿಗಳಲ್ಲಿರುವ ರೈಲು ನಿಲ್ದಾಣಗಳಲ್ಲಿ ಕಾರು, ಬಸ್ಸು, ಸರಕು ವಾಹನಗಳನ್ನು ವಿಶಿಷ್ಟವಾಗಿ ರಚಿಸಿದ ರೈಲು ಬೋಗಿಗಳಿಗೆ ಏರಿಸಿ ಒಂದು ತುದಿಯಿಂದ ಇನ್ನೊಂದು ತುದಿಗೆ ಸಾಗಿಸುವರು. ಅಲ್ಲಿಂದ ಮುಂದೆ ರಸ್ತೆಯ ಮೇಲೆ ಪ್ರಯಾಣ ಮುಂದುವರಿಯುವುದು. ವಾಹನ ಚಾಲಕರೂ ಪಯಣಿಗರೂ ತಮ್ಮ ವಾಹನಗಳಲ್ಲೇ ಕುಳಿತಿರಬಹುದು. ಇಲ್ಲವೇ ಬೋಗಿಗಳಿಗೆ ಅಡ್ಡಾಡಿಕೊಂಡಿರಬಹುದು. ಸುರಂಗದೊಳಗೆ ಕ್ರಮಿಸುವ ಅವಧಿ ೩೫ ನಿಮಿಷಗಳು. ಯುರೋಪಿಯನ್ನರ ಈ ಯೋಜನೆಯು ೧೯೮೬ ಆಗಸ್ಟ್ ೧೩ ರಂದು ಪ್ರಾರಂಭವಾಗಿ ೧೯೯೪ ಮೇ ೬ ರಂದು ವಿಧ್ಯುಕ್ತವಾಗಿ ವಾಹನ ಸಂಚಾರವು ಪ್ರಾರಂಭವಾಯಿತು.

೨೦ ನೆಯ ಶತಮಾನದ ತಾಂತ್ರಿಕ ಸಾಧನೆಗಳಲ್ಲಿ ಇದೇ ಅತ್ಯದ್ಭುತವಾದುದು.

ಇತಿಹಾಸ

[ಬದಲಾಯಿಸಿ]

ಇಂಗ್ಲೆಂಡಿಗೂ ಫ್ರಾನ್ಸಿಗೂ ನಡುವೆ ಇರುವ ಉತ್ತರಸಮುದ್ರದಲ್ಲಿ ಡೋವರಿಗೂ ಕೆಲೆಗೂ ಮಧ್ಯೆ ಇಂಗ್ಲಿಷ್ ಕಡಲ್ಗಾಲುವೆ ಇದೆ. ಅದರ ಅಗಲ ೩೪ ಕಿ.ಮೀ. ಆಳ ಹೆಚ್ಚಾಗಿಲ್ಲ. ಸಮುದ್ರದ ತಳದಲ್ಲಿ ಒಂದು ಸುರಂಗವನ್ನು ಕೊರೆದು ಎರಡು ದೇಶಗಳ ನಡುವೆ ಭೂಸಂಚಾರವನ್ನು ಏರ್ಪಡಿಸುವ ಯೋಜನೆಯೊಂದನ್ನು ಫ್ರಾನ್ಸಿನ ಇಂಜಿನಿಯರ್ ಮಾಥ್ಯೂ ಫೆವಿಯರ್ ೧೮೦೨ ರಲ್ಲಿ ನೆಪೋಲಿಯನ್ನನಿಗೆ ಒಪ್ಪಸಿದ. ಅದಾದ ಕೆಲವೇ ವರ್ಷಗಳಲ್ಲಿ ಇಂಗ್ಲೆಂಡಿಗೂ ಫ್ರಾನ್ಸಿಗೂ ಯುದ್ಧ ಪ್ರಾರಂಭವಾದ್ದರಿಂದ ಆ ಯೋಜನೆ ಮೂಲೆಗೆ ಬಿತ್ತು.

ಅನಂತರ ಸಮುದ್ರದ ತಳದ ಮೇಲೆ ಒಂದು ಉಕ್ಕಿನ ಕೊಳಾಯಿಗಳನ್ನಿಡುವ ಸೂಚನೆಯೂ ಒಂದು ಸೇತುವೆಯನ್ನು ಕಟ್ಟುವ ಸೂಚನೆಯೂ ಬಂದುವು. ಕೊನೆಗೆ ಸೂಯೆeóïನಾಲೆಯಲ್ಲಿ ಲೆಸೆಪ್ಸ್ನ್ ಜೊತೆಯಲ್ಲಿ ಅನುಭವವನ್ನು ಪಡೆದಿದ್ದ ಗ್ಯಾಮೆಂಡ್ ಮತ್ತೊಂದು ಸುರಂಗದ ಯೋಜನೆಯನ್ನು ತಯಾರಿಸಿ ಇಂಗ್ಲೆಂಡಿನ ಮಿತ್ರನಾಗಿದ್ದ ಚಕ್ರವರ್ತಿ ಮೂರನೆಯ ನೆಪೋಲಿಯನ್ನಿಗೆ ಒಪ್ಪಿಸಿದ. “ಈಗಲೇ ಎರಡು ರಾಷ್ಟ್ರಗಳಿಗೂ ಅಂತರ ಕಡಮೆ. ಅದನ್ನು ಇನ್ನೂ ಕಡಿಮೆ ಮಾಡುವುದೇ ?” ಎಂದು ಬ್ರಿಟನ್ನಿನ ಅಂದಿನ ಪ್ರಧಾನಿ ಪಾಮರ್ಸ್ಟನ್ ಕೇಳಿದ. ಆದರೆ ಗ್ಲ್ಯಾಡ್ಸ್ಟನ್ ಪ್ರಧಾನಿಯಾದ ಮೇಲೆ ಈ ಯೋಜನೆಗೆ ಬೆಂಬಲ ದೊರಕಿತು. ೧೮೬೮ ರಲ್ಲಿ ಆ್ಯಂಗ್ಲೊ ಫ್ರೆಂಚ್ ಸುರಂಗಸಮಿತಿ ಸ್ಥಾಪಿತವಾಯಿತು. ಅದರಲ್ಲಿ ಪ್ರಖ್ಯಾತ ಇಂಜಿನಿಯರುಗಳು ರಾಬರ್ಟ್ ಸ್ಟೀವನ್ಸನ್ ಮತ್ತು ಬ್ರುಸೆಲ್ ಇದ್ದರು. ಎರಡು ಕಡೆಗಳಿಂದಲೂ ಕೆಲಸವನ್ನು ಆರಂಭಿಸಲು ಸಿದ್ಧತೆಗಳಾದವು. ವಿಕ್ಟೋರಿಯ ರಾಣಿ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಗ್ಯಾಮಂಡ್ನನ್ನು ಆದರಿಸಿದಳು. ಈ ಕಡೆ ಫ್ರಾನ್ಸಿನ ದೊರೆ ಸುರುಂಗದ ಸಮಿತಿಗೆ ಔತಣವನ್ನು ಮಾಡಿಸಿದ. ಏತನ್ಮಧ್ಯೆ ೧೮೭೦ ರಲ್ಲಿ ಪ್ರಾರಂಭವಾದ ಫ್ಯಾಂಕೋ-ಪ್ರಷ್ಯನ್ ಯುದ್ಧ ಬೇಗ ಮುಗಿದರೂ ನೆಪೋಲಿಯನ್ ಸಿಂಹಾಸನವನ್ನು ಕಳೆದುಕೊಂಡ. ಫ್ರಾನ್ಸ್ ಪ್ರಜಾರಾಜ್ಯವಾಯಿತು. ೧೮೭೫ ರಲ್ಲಿ ವಿಕ್ಟೋರಿಯ ರಾಣಿಗೂ ಫ್ರಾನ್ಸಿನ ಗಣರಾಜ್ಯಕ್ಕೂ ಒಪ್ಪಂದವಾಗಿ ಸುರಂಗದ ಸಮಸ್ಯೆಗಳನ್ನು ಕಟ್ಟುವ ಕಾಲದಲ್ಲಿ ಪರಿಹರಿಸಬಹುದೆಂದು ಒಪ್ಪಲಾಯಿತು. ೧೮೭೭ ರಲ್ಲಿ ತಯಾರಾದ ಯೋಜನೆಯಲ್ಲಿ ವರ್ತುಲಾಕಾರದ ೬.೦೭ ಮೀ ವ್ಯಾಸದ ಎರಡು ಸುರಂಗಗಳನ್ನು ರಚಿಸಿ ೧೦೬ ಮೀ ಅಂತರದಲ್ಲಿ ಎರಡಕ್ಕೂ ಸಂಬಂಧ ಕಲ್ಪಿಸಲಾಗಿತ್ತು. ಒಂದೊಂದು ಕಡೆಯೂ ೬ ಕಿಮೀ ಉದ್ದದ ತೋಡುದಾರಿಯಿತ್ತು. ಬ್ರಿಟನ್ನಿನ ಕಡೆ ಡೋವರ್ ಬೆಟ್ಟಗಳ ಹಿಂದಿನಿಂದ ಹೊರಟು ಸಮುದ್ರ ಮಟ್ಟಕ್ಕೆ ೭೬ ಮೀ ತಗ್ಗಿಗೆ ಸುರಂಗ ಮುಟ್ಟಿ ಅಲ್ಲಿಂದ ನಿಧಾನವಾಗಿ ಇಳಿದು ಆಚೆಯ ದಡದಿಂದ ೮ ಕಿಮೀ ದೂರದಲ್ಲಿ ಸಮುದ್ರಮಟ್ಟಕ್ಕೆ ೬೧ಮೀ ಕೆಳಕ್ಕೆ ಇಳಿದು ಕೆಲೆಗೂ ಬೋಲಾನಿಗೂ ನಡುವೆ ಮಾಕೆರ್ವ್ ಪಟ್ಟಣದ ಹತ್ತಿರ ಮುಗಿದಿತ್ತು. ಇಂಗ್ಲೆಂಡಿನ ಕಡೆ ೧೮೮೦ ರಲ್ಲಿ ಎರಡು ಬಾವಿಗಳನ್ನು ತೋಡಿ ಕೆಲಸವನ್ನು ಆರಂಭಿಸಿದರು. ಮೊದಲು ಕೊರೆದ ೧೯೭೨ ಮೀ ಉದ್ದದ ಪರೀಕ್ಷಾ ಸುರಂಗಗಳೊಳಗೆ ವಿದ್ಯುದ್ದೀಪದ ಬೆಳಕಿನಲ್ಲಿ ಟ್ರಾಲಿಗಳ ಮೇಲೆ ಕುಳಿತು ರಾಣಿ ವಿಕ್ಟೋರಿಯ, ಎಡ್್ವರ್ಡ್ ರಾಜಕುಮಾರ ಗ್ಲ್ಯಾಡ್ಸ್ಟನ್, ಡಿಸ್ರೇಲಿ-ಇವರು ಭೇಟಿಕೊಟ್ಟರು. ಕೆಲಸ ಏಳೆಂಟು ವರ್ಷಗಳಲ್ಲಿ ಮುಗಿಯುವ ನಿರೀಕ್ಷೆಯಿತ್ತು. ಆದರೆ ಬ್ರ್ರಿಟನ್ನಿನ ಸೇನಾನಾಯಕ ಲಾರ್ಡ್ ವುಲ್ಸ್ನಿ ಈ ಸುರಂಗದಿಂದ ಇಂಗ್ಲೆಂಡಿನ ಭದ್ರತೆಗೆ ಊನವೆಂದು ವಾದಿಸಿದ (೧೮೮೨). ಇಂಗ್ಲೆಂಡಿನ ಜನತೆಗೆ ಸುರಂಗ ಬೇಕಾಗಿತ್ತು. ಆದರೆ ನೈನ್ಟೀನ್ತ್ ಸೆಂಚುರಿ ಮತ್ತು ಟೈಮ್ಸ್ ಪತ್ರಿಕೆಗಳ ಮೂಲಕ ಪ್ರತಿಭಟನೆ ವ್ಯಕ್ತಪಟ್ಟಿತು. ಇಂಗ್ಲೆಂಡಿನ ಮೇಲಿನ ಆಕ್ರಮಣವನ್ನು ಸುರಂಗವಿದ್ದಾಗ ಹೇಗೆ ತಪ್ಪಿಸಬಹುದೆಂದೂ ನೋಡಿದ್ದಾಯಿತು. ಆದರೂ ಸೇನಾನಾಯಕರು ಹಟ ಹಿಡಿದರು. ೧೮೮೪ ರಲ್ಲಿ ಬ್ರಿಟನ್ನಿನ ಕಡೆಯ ಕೆಲಸ ನಿಂತಿತು. ಅನಂತರ ಫ್ರೆಂಚರೂ ನಿಲ್ಲಿಸಬೇಕಾಯಿತು.

೧೯೦೯ ರಲ್ಲಿ ಫ್ರಾನ್ಸಿನ ಬ್ಲೀರಿಯವ್ ಇಂಗ್ಲಿಷ್ ಕಡಲ್ಗಾಲುವೆಯ ಮೇಲೆ ಹಾರಿದಾಗ ಇಂಗ್ಲೆಂಡ್ ದ್ವೀಪವಾಗಿ ಉಳಿಯಲಿಲ್ಲ. ೧೯೧೩ ರಲ್ಲಿ ಇನ್ನೂ ಆಳವಾದ, ಉದ್ದವಾದ ಸುರಂಗವನ್ನು ಕೊರೆಯುವುದಕ್ಕೆ ಕಾಮನ್ನರ ಸಭೆ ಒಪ್ಪಿತು. ಪ್ರಧಾನಿ ಆಸ್ಕ್ವಿತ್ ಒಪ್ಪಲಿಲ್ಲ. ಆದರೆ ಒಂದನೆಯ ಮಹಾಯುದ್ಧ ಪ್ರಾರಂಭವಾದಾಗ ಹಿಂದೆ ಸುರಂಗವನ್ನು ವಿರೋಧಿಸಿದ್ದು ತಪ್ಪು - ಎಂದು ಎಲ್ಲರಿಗೂ ತಿಳಿಯಿತು. ಜರ್ಮನಿಯ ಜೆ಼ಪ್ಲಿನ್ನುಗಳಿಂದ ಲಂಡನ್ನಿನ ಮೇಲೆ ಬಾಂಬುಗಳು ಉದುರಿದವು. ಯುದ್ಧ ಮುಗಿದ ಮೇಲಾದರೂ ಅದನ್ನು ಪ್ರಾರಂಭಿಸಬೇಕೆಂಬ ಬುದ್ಧಿ ಬಂತು. ಏತನ್ಮಧ್ಯೆ ಎಂಜಿನಿಯರುಗಳು ಇನ್ನು ಕೆಲವು ಭದ್ರತೆಯ ದಾರಿಗಳನ್ನು ಸೂಚಿಸಿದರು. ಫ್ರೆಂಚರು ಒಪ್ಪಿದರು. ಆದರೆ ಯುದ್ಧ ಮುಗಿದ ಮೇಲೆ ೧೯೨೦ ರಲ್ಲಿ ಒಂದು ಸಾರಿ ೧೯೨೪ ರಲ್ಲಿ ಇನ್ನೊಂದು ಸಾರಿ, ಬ್ರಿಟಿಷ್ ಸರ್ಕಾರ ಸುರಂಗ ನಿರ್ಮಾಣಕ್ಕೆ ಒಪ್ಪಲಿಲ್ಲ; ಮತ್ತೆ ರ್ಯಾಮ್ಸೆ ಮ್ಯಾಕ್ಡೋನಾಲ್ಡನ ಕಾಲದಲ್ಲೂ ವಿರೋಧ ವ್ಯಕ್ತಪಟ್ಟಿತು. ತಿರುಗಿ ಬಾಲ್ಡ್ವಿನ್ ಸುರಂಗ ಬೇಕು ಎಂದಾಗ ಯುದ್ಧ ಕಚೇರಿ ಪ್ರತಿಭಟಿಸಿತು. ಬೇಡ ಎನ್ನುವುದು ಮುಖ್ಯವಾಯಿತು; ಕಾರಣಗಳು ಗೌಣವಾದುವು. ಸುರಂಗವಿದ್ದರೆ ಇಂಗ್ಲೆಂಡಿನಲ್ಲಿ ವಿಮಾನಸಂಚಾರಕ್ಕೆ ಧಕ್ಕೆ ತಗಲುತ್ತದೆಯೆಂಬ ವಾದವೂ ಹುಟ್ಟಿತು.

ಅಷ್ಟರಲ್ಲಿ ಎರಡನೆಯ ಮಹಾಯುದ್ಧ ಆರಂಭವಾಯಿತು. ೧೯೩೯ ನೆಯ ಡಿಸೆಂಬರಿನಲ್ಲಿ ಯುದ್ಧಸಮಿತಿ ಸುರಂಗ ತೋಡಲು ಎಷ್ಟು ಕಾಲ ಹಿಡಿದೀತು ಎಂದು ಅವಸರವಸರವಾಗಿ ಪ್ರಶ್ನಿಸಿತು. ಮೊದಲ ಪ್ರಶ್ನೆಗೆ ಉತ್ತರವನ್ನು ಹೇಳುವುದು ಎಂಜಿನಿಯರುಗಳಿಗೆ ಅಷ್ಟು ಸುಲಭವಾಗಿರಲಿಲ್ಲ. ತಗಲುವ ವೆಚ್ಚದ ಅಂದಾಜು ೬ ಕೋಟಿ ಪೌಂಡು ಎಂದು ಹೇಳಿದರು. ಇಂಗ್ಲೆಂಡ್ ಮತ್ತು ಫ್ರಾನ್ಸ್ ಆಗ ದಿನಕ್ಕೆ ೬ ಲಕ್ಷ ಪೌಂಡುಗಳನ್ನು ಯುದ್ಧಕ್ಕಾಗಿ ಖರ್ಚು ಮಾಡುತ್ತ್ತಿದ್ದುದರಿಂದ ಆ ಹಣವನ್ನು ಒದಗಿಸುವುದು ಕಷ್ಟವಾಗಿರಲಿಲ್ಲ. ಅಷ್ಟರಲ್ಲಿ ಡಂಕರ್ಕ್ ಪಲಾಯನವಾಯಿತು. ೧೯೫೫ ರಲ್ಲಿ ಪುನಃ ಕೆಲಸ ಪ್ರಾರಂಭವಾಗಿ ಬ್ರಿಟನ್ನಿನ ನಿರುತ್ಸಾಹದಿಂದ ನಿಂತಿತು. ೧೯೮೦ ರಲ್ಲಿ ಈ ಯೋಜನೆಗೆ ಪುನಃ ಜೀವ ಬಂದಿತು. ೧೯೮೫ ರಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಈಗ ಮುಗಿಸಿದ ಅಂತಿಮ ರೂಪು ನಿರ್ಧಾರವಾಯಿತು.