ವಿಷಯಕ್ಕೆ ಹೋಗು

ಆಸ್ಟೆರಾಯ್ಡಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಕ್ಷತ್ರಮೀನು

ಅಕಶೇರುಕಪ್ರಾಣಿಗಳ ಗುಂಪಿನ ಕಂಟಕಚರ್ಮಿ (ಎಕಿನೊಡರ್ಮ) ವಂಶದ ಐದು ವರ್ಗಗಳಲ್ಲೊಂದು. ಎಲ್ಲ ಕಂಟಕ ಚರ್ಮಿಗಳೂ ಸಮುದ್ರವಾಸಿಗಳು. ಆಸ್ಟೆರಾಯ್ಡಿಯ ಪ್ರಾಣಿಗಳ ಶರೀರ ನಕ್ಷತ್ರಗಳನ್ನೇ ಹೋಲುವುದರಿಂದ ಇವುಗಳಿಗೆ ನಕ್ಷತ್ರಮೀನುಗಳು (ಸ್ಟಾರ್ ಫಿಷ್), ಕಡಲ ನಕ್ಷತ್ರಗಳು ಎಂಬ ರೂಢಿನಾಮಗಳು ಇವೆ. ಚರ್ಮ ಸುಣ್ಣಮಿಶ್ರಿತ ತಟ್ಟೆಗಳಂಥ ರಚನೆಗಳಿಂದ ಆವೃತವಾಗಿ ಗಟ್ಟಿಯಾಗಿದೆ. ಇದರ ಮಧ್ಯಭಾಗದಲ್ಲಿ ಪಂಚಭುಜಾಕೃತಿಯ ತಟ್ಟೆ ಇದೆ. ಇದಕ್ಕೆ ಹೊಂದಿಕೊಂಡು ಐದು ತೋಳುಗಳಿವೆ. ಆಸ್ಟೀರಿಯಸ್ನಲ್ಲಿ ತೋಳುಗಳು ಶರೀರದ ಮಧ್ಯದ ತಟ್ಟೆಯಿಂದ ಬೆಳೆದುಬಂದಿರುವ ಗುರುತು ಸ್ಫುಟವಾಗಿ ಕಾಣುವುದಿಲ್ಲ. ಶರೀರದ ತಳಭಾಗದಲ್ಲಿ ಬಾಯಿ. ಅದರ ಸುತ್ತಲೂ ಅತ್ಯಂತ ಚಿಕ್ಕ ಚಿಕ್ಕ ಮುಳ್ಳಿನೋಪಾದಿಯ ರಚನೆಗಳು. ಜಠರ ಚೀಲದಂತೆ, ಅದು ತಟ್ಟೆಯಂತಿರುವ ಶರೀರದ ಬಹುಭಾಗವನ್ನು ಆಕ್ರಮಿಸಿದೆ. ಬಾಯಿಯಿಂದ ಪ್ರತಿತೋಳಿನ ತುದಿಯವರೆಗೂ ಒಂದು ಕಾಲುವೆ ಯಂಥ ರಚನೆ ಇದೆ. ಇದು ಸರಿ ಯಾಗಿ ಬಾಹುಗಳ ಮಧ್ಯದಲ್ಲಿ ಹಾದು ಹೋಗಿದೆ. ಇವನ್ನು ಆಂಬುಲ್ಯಾಕರಲ್ ಕಾಲುವೆಗಳೆನ್ನುತ್ತೇವೆ. ಇವುಗಳ ಇಕ್ಕೆಲಗಳಲ್ಲೂ ನಳಿಕೆಯಂಥ ಅತ್ಯಂತ ಚಿಕ್ಕ ಚಿಕ್ಕ ರಚನೆಗಳು ಇವೆ. ಇವನ್ನು ನಳಿಕೆ ಪಾದಗಳು ಎನ್ನುತ್ತಾರೆ. ಇವು ಜೊತೆ ಜೊತೆಯಲ್ಲಿವೆ. ಪ್ರತಿಯೊಂದು ನಳಿಕೆ ಪಾದದ ತುದಿಯಲ್ಲೂ ಒಂದೊಂದು ಅಂಟುಸಿಂಬಿಯಿದೆ. ಇವು ಗಟ್ಟಿ ಪದಾರ್ಥಕ್ಕೆ ಅಂಟಿಕೊಳ್ಳ ಬಲ್ಲುವು. ಈ ಪ್ರಾಣಿ ತನ್ನ ಪಾದಗಳನ್ನು ಹೊರಚಾಚಬಲ್ಲುದು ಮತ್ತು ಒಳಗೆಳೆದುಕೊಳ್ಳಬಲ್ಲುದು. ನಕ್ಷತ್ರಮೀನಿನ ಚಲನೆ ನಳಿಕೆಪಾದಗಳ ಸಹಾಯದಿಂದ. ಇವುಗಳ ಈ ಕ್ರಿಯೆ ಬಲು ಸಂಕೀರ್ಣ. ಆಂಬುಲ್ಯಾಕರಲ್ ಕಾಲುವೆಯಲ್ಲಿ ನೀರು ತುಂಬಿಕೊಂಡಿರುವ ನಾಳ ಪ್ರಾಣಿಯ ತಳಭಾಗದಲ್ಲಿ ಬಾಯಿಯ ಸುತ್ತಲೂ ಉಂಗುರದಂತಿರುವ ನಾಳವನ್ನು ಸೇರುತ್ತದೆ: ಉಂಗುರನಾಳಕ್ಕೆ ನೀರು ತುಂಬಿಕೊಂಡಿರುವ ಚೀಲದಂಥ ರಚನೆಗಳು ಅಂಟಿಕೊಂಡಿವೆ. ಉಂಗುರನಾಳಕ್ಕೂ ಪ್ರಾಣಿಯ ಹೊರ ಭಾಗಕ್ಕೂ ಸಂಪರ್ಕ ಕಲ್ಲುಗಾಲುವೆಯೆಂಬ ಮತ್ತೊಂದು ನಾಳದಿಂದ. ಪ್ರಾಣಿಯ ಮೇಲುಭಾಗದಲ್ಲಿ ಅಂದರೆ ಬಾಯಿಯಿರುವ ಭಾಗಕ್ಕೆ ವಿರುದ್ಧಭಾಗದಲ್ಲಿ ಕಲ್ಲುಗಾಲುವೆಯ ಬಾಯಿ ಇದೆ. ಇದರ ಹೆಸರು ಮ್ಯಾಡ್ರಿಪೊರೈಟ್. ಇದರಲ್ಲಿ ಜಲ್ಲಡಿಯಂಥ ರಚನೆಯಿದೆ. ಸಮುದ್ರದ ನೀರು ಮ್ಯಾಡ್ರಿಪೊರೈಟನ್ನು ಪ್ರವೇಶಿಸಿ ಕಲ್ಲುಗಾಲುವೆಯ ಮೂಲಕ ಉಂಗುರಗಾಲುವೆಯನ್ನು ತಲುಪುತ್ತದೆ. ಇದು ಉಂಗುರಗಾಲುವೆ ಮತ್ತು ಅದಕ್ಕಂಟಿಕೊಂಡಿರುವ ಚೀಲಗಳಿಗೆ ತುಂಬಿಕೊಂಡು ಉಂಗುರಗಾಲುವೆಯಿಂದ ಪ್ರತಿ ತೋಳಿನಲ್ಲಿರುವ ಕಾಲುವೆಗಳಿಗೆ ಪ್ರವಹಿಸುವುದು. ಇಲ್ಲಿರುವ ಕಾಲುವೆಯ ಇಕ್ಕೆಲದ ನಳಿಕೆಪಾದಗಳೊಳಗೆ ನೀರು ಹರಿಯುತ್ತದೆ. ನಳಿಕೆಪಾದದ ಬುರುಡೆಯಾಕಾರದ ಅಂಪುಲ್ಲ ನೀರಿನಿಂದ ತುಂಬಿಕೊಂಡಿರುವುದು. ಇವು ಸಂಕುಚಿಸುತ್ತವೆ. ಇದರಿಂದ ನೀರು ಅಂಪುಲ್ಲದ ಮುಂಭಾಗದ ನಳಿಕೆಗೆ ನುಗ್ಗಿ ಹಿಗ್ಗಿ ಉದ್ದವಾಗಿ ಅವು ಪ್ರಾಣಿಯ ಶರೀರದಿಂದ ಹೊರಚಾಚಿಕೊಳ್ಳುತ್ತವೆೆ. ನಳಿಕೆಪಾದದೊಳಗಿರುವ ನೀರು ಅಂಟುಸಿಂಬಿಯೊಳಗಿರುವ ರಂಧ್ರದ ಮೂಲಕ ಹೊರಹೋಗುತ್ತದೆ. ತೋಳಿನ ತುದಿಯಲ್ಲಿ ಒಂದು ಸಂಕುಚಿಸಲಾರದ ನಳಿಕೆಪಾದವಿದೆ. ಇದೊಂದು ಸ್ಪರ್ಶಾಂಗದಂತೆ ಕಾರ್ಯ ನಿರ್ವಹಿಸುತ್ತದೆ. ಇದರ ಮೇಲುಭಾಗದಲ್ಲಿ ಕೆಂಪನೆಯ ಕಾಳಿನಂಥ ರಚನೆಯಿದೆ. ಇದು ದ್ಯುತಿಗ್ರಾಹಕ. ಇದನ್ನು ಕಣ್ಣಿಗೆ ಹೋಲಿಸಬಹುದು. ನಕ್ಷತ್ರಮೀನಿನ ಮೇಲುಭಾಗದಲ್ಲಿ ಒತ್ತೊತ್ತಾಗಿ ಹೆಣೆದುಕೊಂಡಿರುವ ಚಿಕ್ಕ ಚಿಕ್ಕ ತಟ್ಟೆಗಳ ಜಾಲವೇ ಇದೆ. ತಟ್ಟೆಗಳ ಜೋಡಣೆ ಒಂದರಪಕ್ಕದಲ್ಲೊಂದರಂತೆ ನಿರ್ದಿಷ್ಟ ರೀತಿಯಲ್ಲಿದೆ. ಎರಡು ತಟ್ಟೆಗಳ ಮಧ್ಯೆ ಚರ್ಮದಿಂದ ಚಿಕ್ಕ ಚಿಕ್ಕ ಗುಳ್ಳೆಗಳಂಥ ಚೀಲಗಳು ಹೊರಬಂದಿವೆ. ಇವಕ್ಕೆ ಪಾಪಿಲೇ ಎಂದು ಹೆಸರು. ಇವು ಪ್ರಾಣಿಗಳ ಉಸಿರಾಟದಲ್ಲಿ ಸಹಕರಿಸುತ್ತವೆ. ಶರೀರದ ಮೇಲಿರುವ ತಟ್ಟೆಗಳ ಮೇಲೆ ಚೂಪಾದ ಮುಳ್ಳಿನಂಥ ರಚನೆಗಳು ಇವೆ. ಸೂಕ್ಷ್ಮದರ್ಶಕದ ಸಹಾಯದಿಂದ ಇವನ್ನು ಪರೀಕ್ಷಿಸಿದರೆ ಇವುಗಳಲ್ಲಿ ಕೆಲವು ಸೂಕ್ಷ್ಮ ಚಿಮುಟಗಳಂತೆ ಕಾಣುವುವು. ಇವಕ್ಕೆ ಪೆಡಿಸಲೇರಿಯೇ ಎಂದು ಹೆಸರು. ಇವು ಪ್ರಾಣಿಯ ರಕ್ಷಣಾಂಗಗಳು. ಪೆಡಿಸಲೇರಿಯೇ ಬಾಹುಗಳ ಒಳಭಾಗದಲ್ಲಿ ಚೂಪಾದ ಹಲ್ಲುಗಳಂಥ ರಚನೆಗಳಿವೆ. ಇವುಗಳ ಬುಡದಲ್ಲಿ ಹಿಡಿಗಳೂ ಇವೆ. ಒಂದು ಸಾರಿ ಈ ಪೆಡಿಸಲೇರಿಯೇ ಹಿಡಿತಕ್ಕೆ ಸಿಕ್ಕಿದ ಜೀವಿ ಬಿಡಿಸಿಕೊಳ್ಳುವುದು ಕಷ್ಟ. ಅವುಗಳ ಬಾಹುಗಳ ಚಲನೆಗಾಗಿಯೇ ವಿಶಿಷ್ಟ ಸ್ನಾಯುಗಳಿವೆ. ಕೆಲವು ನಕ್ಷತ್ರಮೀನುಗಳಲ್ಲಿ ಶರೀರದ ಮೇಲುಭಾಗದಲ್ಲಿ ಮಧ್ಯಕ್ಕೆ ಸ್ವಲ್ಪ ಮಗ್ಗುಲಾಗಿ ಗುದದ್ವಾರ ಇದೆ. ಮತ್ತೆ ಕೆಲವಕ್ಕೆ ಗುದದ್ವಾರವಿಲ್ಲ. ನಕ್ಷತ್ರಮೀನುಗಳಲ್ಲಿ ಲಿಂಗಭೇದ ಉಂಟು. ಹೆಣ್ಣುಗಳಲ್ಲಿ ಅಂಡಾಶಯವೂ ಗಂಡಿನಲ್ಲಿ ವೃಷಣವೂ ಇದೆ. ಅಂಡಾಶಯ ಮತ್ತು ವೃಷಣಗಳಿಗೆ ಗರಿಗಳಂಥ ರಚನೆ ಇದೆ. ಇವುಗಳಲ್ಲಿ ಉತ್ಪತ್ತಿಯಾದ ಲಿಂಗಾಣುಗಳು ಪ್ರಾಣಿಯ ಮೇಲುಭಾಗದಲ್ಲಿ ಎರಡು ಬಾಹುಗಳಿಗೂ ಮಧ್ಯೆ ಇರುವ ರಂಧ್ರಗಳ ಮೂಲಕ ಹೊರ ಹಾಕಲ್ಪಡುತ್ತವೆ. ಗರ್ಭಧಾರಣೆ ಸಮುದ್ರದ ನೀರಿನಲ್ಲಿ ನಡೆಯುತ್ತದೆ. ಮೊಟ್ಟೆಗಳು ಬೆಳೆದು ಡಿಂಬಗಳು ಹೊರಬರುತ್ತವೆ. ಆಸ್ಟೆರಾಯ್ಡಿಯಗಳ ಡಿಂಬಕ್ಕೆ (ಲಾರ್ವ) ಬೈಪಿನ್ನೇರಿಯ ಡಿಂಬವೆಂದು ಹೆಸರು. ಡಿಂಬಗಳು ಸ್ವತಂತ್ರವಾಗಿ ಈಸಿಕೊಂಡಿದ್ದು ಆರು ವಾರಗಳಲ್ಲಿ ರೂಪಾಂತರ ಹೊಂದಿ ಚಿಕ್ಕ ಚಿಕ್ಕ ನಕ್ಷತ್ರಮೀನುಗಳಾಗು ತ್ತವೆ. ನಕ್ಷತ್ರಮೀನು ಸಾವಿರ ಮೊಟ್ಟೆಗಳನ್ನು ಇಡುತ್ತದೆ. ಈ ಮೊಟ್ಟೆಗಳಿಂದ ಸಾವಿರ ಡಿಂಬಗಳು ಹೊರಬರುತ್ತವೆ. ಆದರೆ ಬದುಕಿ ಉಳಿದು ನಕ್ಷತ್ರಮೀನುಗಳಾಗುವುದು ಕೆಲವು ಮಾತ್ರ. ಮಿಕ್ಕವು ಮೀನುಗಳಿಗೆ ಆಹಾರವಾಗಿಬಿಡುತ್ತವೆ. ನಕ್ಷತ್ರಮೀನುಗಳಲ್ಲಿ ವರ್ಣವೈವಿಧ್ಯವುಂಟು. ಕೆಲವು ಕೆಂಪು, ಕೆಲವು ಹಳದಿ : ಮತ್ತೆ ಕೆಲವು ಇತರ ವರ್ಣಗಳನ್ನು ಅಥವಾ ಅವುಗಳ ಮಿಶ್ರಣವನ್ನು ಹೊಂದಿರುವುದುಂಟು. ನಕ್ಷತ್ರಮೀನುಗಳಿಗೆ ಆಯಿಸ್ಟಗಳೆಂದರೆ ಅತ್ಯಂತ ಪ್ರಿಯ. ತನ್ನ ಪಂಚಬಾಹುಗಳನ್ನು ಬಗ್ಗಿಸಿ ನಳಿಕೆಪಾದಗಳ ಸಹಾಯದಿಂದ ಕಪ್ಪೆಚಿಪ್ಪನ್ನು ಅಗಲವಾಗಿ ಬಿಡಿಸಿ ಅದರೊಳಗಿರುವ ಪ್ರಾಣಿಯನ್ನು ನುಂಗುವುದೇ ನಕ್ಷತ್ರಮೀನಿಗೆ ಆನಂದ. ಆಹಾರ ಸೇವನೆಯ ಕಾಲದಲ್ಲಿ ಜಠರದ ಒಳಭಾಗ ಸಂರ್ಪುಣವಾಗಿ ಹೊರಬಂದು ಆಹಾರವನ್ನು ಸುತ್ತಿಕೊಳ್ಳುತ್ತದೆ. ಆಹಾರ ಜೀರ್ಣವಾದ ಮೇಲೆ ಜಠರ ಒಳಸೇರುತ್ತದೆ. ಬೆಲೆಬಾಳುವ ಮುತ್ತುಗಳನ್ನು ಕೊಡುವ ಆಯಿಸ್ಟರ್ಗಳನ್ನು ನಕ್ಷತ್ರಮೀನು ತಿಂದು ನಾಶಪಡಿಸುತ್ತದೆ. ನಕ್ಷತ್ರಮೀನು ಮುತ್ತಿನ ಕೈಗಾರಿಕೆಯ ಕಂಟಕ. ಬಲೆಗೆ ಬಿದ್ದಮೇಲೂ ಮೀನುಗಳನ್ನು ಇವು ತಿಂದು ನಾಶ ಮಾಡುವುದುಂಟು. ಪ್ರಪಂಚದ ಕೆಲವು ಭಾಗಗಳಲ್ಲಿ ಇವನ್ನು ಭೂತದ ಬೆರಳುಗಳು ಎಂದು ಭಾವಿಸುವರು. ಮೇಲೆ ಹೇಳಿದ ನಕ್ಷತ್ರಮೀನುಗಳಲ್ಲದೆ ಇನ್ನೂ ವಿವಿಧ ರೀತಿಯವಿವೆ. ಆಸ್ಟೆರೈನ್ ಗಿಬೋಸ ಅತ್ಯಂತ ಚಿಕ್ಕ ನಕ್ಷತ್ರಮೀನು. 1.5 ಸೆಂಮೀ ಮಾತ್ರ ಅಗಲವಿದೆ. ಪಾಲ್ಮಿಪೆಸ್ ಪ್ಲಾಸೆಂಟ ಪಂಚಭುಜಾಕೃತಿಯನ್ನು ಹೊಂದಿದ್ದು ಬಿಸ್ಕತ್ತಿನಂತಿದೆ. ಮಿಥ್ರೊಡಿಯಕ್ಕೆ ಅತಿ ದೊಡ್ಡ ದೊಡ್ಡ ಮುಳ್ಳುಗಳಿವೆ. ಸೋಲಾಸ್ಟೆರ್ ಎನ್ನುವ ಇದಕ್ಕೆ ಬಹಳ ಬಾಹುಗಳಿವೆ. ಸೂರ್ಯನಂತೆ ಕಾಣುತ್ತದೆ. ಛತ್ರಿಯಾಕಾರದ ಟಿರಾಸ್ಟರ್ ಎಂಬ ನಕ್ಷತ್ರಮೀನು ಸಮುದ್ರದಲ್ಲಿ ಆಳವಾದ ನೀರಿನಲ್ಲಿ ವಾಸಿಸುತ್ತದೆ. ಲೂಡಿಯ ಮತ್ತು ಲಿಂಕಿಯಾಗಳಿಗೆ ನೀಳವಾದ ತೋಳುಗಳಿವೆ. ಇನ್ನೂ ನಾನಾ ವಿಧವಾದ ಜೀವಿಗಳು ಈ ವರ್ಗದಲ್ಲುಂಟು.