ಆಸ್ಕ್ವಿತ್, ಹರ್ಬರ್ಟ್ ಹೆನ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

1852-1928. ಪ್ರಸಿದ್ಧ ಬ್ರಿಟಿಷ್ ರಾಜಕಾರಣಿ.

ಬದುಕು ಮತ್ತು ರಾಜಕಾರಣ[ಬದಲಾಯಿಸಿ]

ಯಾರ್ಕ್ಷೈರಿನ ಮಾರ್ಲೆಯಲ್ಲಿ ಜನಿಸಿದ. ಲೀಡ್ಸ್ ನಗರ ಸಮೀಪವಿರುವ ಹಡರ್ಸ ಪೀಲ್ಡ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, 1863ರಲ್ಲಿ ಲಂಡನ್ ಶಾಲೆಯಲ್ಲಿ ಓದಿ, 1870ರಲ್ಲಿ ಆಕ್ಸ್ಫ಼ರ್ಡ್ ಸೇರಿ ಉಚ್ಚಶಿಕ್ಷಣ ಪಡೆದ. ಆಕ್ಸ್ಫ಼ರ್ಡ್ ಯೂನಿಯನ್ನಿನ ಅಧ್ಯಕ್ಷನಾಗಿದ್ದ ಸಮಯವಂತೂ ಸ್ಮರಣೀಯವಾದುದು. ಅಲ್ಲಿ ಪ್ರತಿಭೆ ವಿಕಾಸಗೊಂಡಿತು. 1876ರಲ್ಲಿ ವಕೀಲಿವೃತ್ತಿ ಆರಂಭಿಸಿದ. 1877ರಲ್ಲಿ ಹೆಲನ್ ಕೆಲ್ಸಾಲ್ ಮೆಲಾಂದಳನ್ನು ಮದುವೆಯಾದ.

ಮೊದಲಿಗೆ ಎಕಾನಮಿಸ್ಟ್ ಮತ್ತು ಸ್ಪೆಕ್ಟೇಟರ್ ಪತ್ರಿಕೆಗಳ ಮೂಲಕ ತನ್ನ ವಿಚಾರಗಳನ್ನು ಪ್ರಕಟಿಸಿದ. ಬಿಡುವಿನ ವೇಳೆಯನ್ನೆಲ್ಲ ರಾಜಕೀಯ ಚಟುವಟಿಕೆಗಳಿಗೆ ಮೀಸಲಿರಿಸಿದ. ಗ್ಲಾಡ್ಸ್ಟನ್ನ ಉದಾರವಾದಿಪಂಥಕ್ಕೆ ಸೇರಿ 1886ರಲ್ಲಿ ಪಾರ್ಲಿಮೆಂಟ್ ಸದಸ್ಯನಾದ. ಬಹು ಬೇಗ ಪಕ್ಷದ ಅತ್ಯಂತ ಸಮರ್ಥ ಸದಸ್ಯನಾಗಿ ಪ್ರಭಾವ ಬೀರಿ ಕಾಮನ್ಸ್ ಸಭೆಯ ಗಣ್ಯವ್ಯಕ್ತಿಯಾದ. 1890ರಲ್ಲಿ ರಾಣಿಯ ಆಪ್ತಸಲಹೆಗಾರನಾಗಿ, ಗ್ಲಾಡ್ಸ್ಟನ್ ಮಂತ್ರಿಮಂಡಲದಲ್ಲಿ ಗೃಹಸಚಿವನಾದ. ಮೊದಲಪತ್ನಿ ಕಾಲವಾದ್ದರಿಂದ 1894ರಲ್ಲಿ ಎಮ್ಮಾ ಆಲೇಸಿ ಮಾರ್ಗರೆಟ್ಳನ್ನು ಮದುವೆಯಾದ.

ಲಿಬರಲ್ ಪಕ್ಷದಲ್ಲಿ ಒಡಕುಂಟಾದ ಕಾರಣದಿಂದಾಗಿ 1895-1905ರವರೆಗೆ ಅಧಿಕಾರದಿಂದ ದೂರವಾಗಿ, ಪಕ್ಷದಲ್ಲಿದ್ದ ಬಿರುಕನ್ನು ಮುಚ್ಚಲು ಶ್ರಮಿಸಿದ. ಅನಂತರ ಕ್ಯಾಂಪ್ಬೆಲ್ ಮಂತ್ರಿಮಂಡಲದಲ್ಲಿ ಅರ್ಥಸಚಿವನಾದ. ಅದೇ ಸಮಯದಲ್ಲಿ ವೃದ್ಧಾಪ್ಯ ನಿವೃತ್ತಿವೇತನ (ಓಲ್ಡ್ ಏಜ್ ಪೆನ್ಷನ್) ಮಸೂದೆಯನ್ನು ಜಾರಿಗೆ ತಂದ. ಅನಾರೋಗ್ಯದ ನಿಮಿತ್ತ ಕ್ಯಾಂಪ್ಬೆಲ್ ನಿವೃತ್ತನಾದ ತರುವಾಯ ತಾನೇ ಪ್ರಧಾನಿಯಾಗಿ ಅನೇಕ ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದ. ಆಸ್ಕ್ವಿತ್ ಮಾಡಿದ ಸುಧಾರಣೆಗಳನ್ನು ಶ್ರೀಮಂತಸಭೆ ಒಂದೇಸಮನೆ ವಿರೋಧಿಸಿದ್ದರಿಂದ ಆ ಸಭೆಯ ಅಧಿಕಾರವನ್ನು ಮೊಟಕು ಮಾಡಲು 1911ರಲ್ಲಿ ಪಾರ್ಲಿಮೆಂಟ್ ಆ್ಯಕ್ಟ್ ನ್ನೂ ಐರ್ಲೆಂಡಿಗಾಗಿ ಹೋಮ್ ರೂಲ್ ಮಸೂದೆಯನ್ನೂ ಜಾರಿಗೆ ತಂದ. ಅಷ್ಟರಲ್ಲೇ ಒಂದನೆಯ ಮಹಾಯುದ್ಧ ಪ್ರಾರಂಭವಾದ್ದರಿಂದ 1915ರಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಿ ಅನೇಕ ಕಾರಣಗಳಿಂದಾಗಿ 1916ರಲ್ಲಿ ಪ್ರಧಾನಿ ಪದವಿಗೆ ರಾಜೀನಾಮೆ ಸಲ್ಲಿಸಿದ. ಮುಂದೆ ನಡೆದ ಮಧ್ಯಕಾಲೀನ ಚುನಾವಣೆಯಲ್ಲಿ ಮತ್ತೆ ಜಯಗಳಿಸಿ ಪಾರ್ಲಿಮೆಂಟ್ ಸದಸ್ಯನಾದ.

ಸ್ತ್ರೀಯರು ರಾಜಕೀಯಕ್ಕೆ ಪ್ರವೇಶಿಸುವುದನ್ನು ಆಸ್ಕ್ವಿತ್ ಪ್ರಾರಂಭದಿಂದ ಪ್ರಬಲವಾಗಿ ವಿರೋಧಿಸುತ್ತ ಬಂದಿದ್ದರೂ ಯುದ್ಧಕಾಲದಲ್ಲಿ ಅವರು ಸಲ್ಲಿಸಿದ ಅನುಪಮ ಸೇವಾ ಮನೋಭಾವವನ್ನು ಮೆಚ್ಚಿ, ಅವರಿಗೂ ರಾಜಕೀಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ತಾನೇ ಮುಂದಾದ. 1924ರಲ್ಲಿ ರಾಜಕೀಯ ಜೀವನದಿಂದ ನಿವೃತ್ತನಾದ.

ಗೌರವಗಳು[ಬದಲಾಯಿಸಿ]

1925ರಲ್ಲಿ ಆಸ್ಕ್ವಿತ್ನ ಸೇವೆಯನ್ನು ಪ್ರಶಂಸಿಸಿ ಅರ್ಲ್ ಆಫ್ ಆಕ್ಸ್ಫ಼ರ್ಡ್ ಎಂಬ ಬಿರುದು ನೀಡಿ ಗೌರವಿಸಲಾಯಿತು.

ಕೃತಿಗಳು[ಬದಲಾಯಿಸಿ]

1926ರಲ್ಲಿ ಮೆಮಾಯರ್ಸ್ ಮತ್ತು ರಿಫ್ಲೆಕ್ಷನ್ ಎಂಬ ಇವನ ಕೃತಿಗಳು ಇವನ ಜೀವನದ ಮತ್ತು ಅಂದಿನ ಜನಜೀವನದ ಉತ್ತಮ ಚಿತ್ರಗಳನ್ನು ಒದಗಿಸುತ್ತವೆ.