ವಿಷಯಕ್ಕೆ ಹೋಗು

ಆಶ್ಲೇಷಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಗೋಳಶಾಸ್ತ್ರದಲ್ಲಿ ಚಂದ್ರನ 27 ಮನೆಗಳಲ್ಲಿ (ನಿತ್ಯನಕ್ಷತ್ರಗಳಲ್ಲಿ) ಒಂದು. ಹೈಡ್ರಾ (ವಾಟರ್ ಸ್ನೇಕ್ ಅಂದರೆ ನೀರಹಾವು ಎಂದರ್ಥ) ನಕ್ಷತ್ರ ಪುಂಜದ ಪ್ರಥಮ ನಕ್ಷತ್ರ. ಆದ್ದರಿಂದ ಇದರ ಶಾಸ್ತ್ರನಾಮ ∝-ಹೈಡ್ರಾ. ಆಲ್ಫಾರ್ಡ್ ಪರ್ಯಾಯನಾಮ. ಇದರ ದೃಗ್ಗೋಚರ (ಅಪೇರೆಂಟ್) ಕಾಂತಿ 2.2, ರೋಹಿತ ಏ2, ದೂರ 190 ಜ್ಯೋತಿರ್ವರ್ಷಗಳು. ಆಶ್ಲೇಷಾ ಕರ್ಕಾಟಕ ರಾಶಿಯಲ್ಲಿರುವ ಒಂದು ನಕ್ಷತ್ರ. ಸಿಂಹರಾಶಿಯ ಮಖಾ ನಕ್ಷತ್ರ ಶೃಂಗವಾಗಿರುವಂತೆ ಪೂರ್ವ-ದಕ್ಷಿಣದೆಡೆಗೆ ಒಂದು ಸಮದ್ವಿಭುಜ, ತ್ರಿಭುಜ ರಚಿಸಿದರೆ ಅದರ ಪಾದಶೃಂಗಗಳಲ್ಲಿ ದಕ್ಷಿಣ ದಿಕ್ಕಿನದು ಆಶ್ಲೇಷಾ (ಹೈಡ್ರ).

ಪುರಾಣಗಳಲ್ಲಿ

[ಬದಲಾಯಿಸಿ]

ದಕ್ಷನ ಮಗಳೆಂದೂ ಚಂದ್ರನ ಹೆಂಡತಿಯೆಂದೂ ಪುರಾಣ ಪ್ರಸಿದ್ಧವಾಗಿರುವ ಈ ನಕ್ಷತ್ರ ಸರ್ಪಸಂಬಂಧಿಯಾದುದು. ಇದು ರಾಕ್ಷಸಗಣಕ್ಕೆ, ಮಾರ್ಜಾಲಯೋನಿಗೆ ಸೇರಿದುದು ಎಂದೂ ಕ್ರೂರ ಸ್ವಭಾವದ್ದು ಎಂದೂ ಜ್ಯೋತಿಷದ ವಿವರಣೆ. ಪ್ರಯಾಣಕ್ಕೆ ಇದು ನಿಷಿದ್ಧ. ಈ ನಕ್ಷತ್ರದಲ್ಲಿ ರೋಗ ಬಂದರೆ ಒಂದು ತಿಂಗಳ ಕಾಲ ಪೀಡಿಸುತ್ತದೆ ಎನ್ನುವ ನಂಬಿಕೆಯಿದೆ. ಮದುವೆಯನ್ನು ನಿಶ್ಚಯಿಸುವಾಗ ಆಶ್ಲೇಷಾ ನಕ್ಷತ್ರದ ಹುಡುಗಿಗೆ ಅತ್ತೆಯಿಲ್ಲದ ಮನೆಯನ್ನು ನೋಡುವ ಪದ್ಧತಿಯುಂಟು; ಇಲ್ಲವಾದರೆ ಅತ್ತೆ ತೀರಿಕೊಳ್ಳುತ್ತಾ ಳೆಂದು ಹೇಳುತ್ತಾರೆ. ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರಿಗೆ ಬುಧ ಮಹಾದಶೆಯೆಂದೂ ಈ ದಶೆ ಹದಿನೇಳು ವರ್ಷಗಳು ನಡೆಯುವುದೆಂದೂ ನಂಬಿಕೆ. ಈ ನಕ್ಷತ್ರಕ್ಕೆ ಸರ್ಪದೇವತೆ ಅಧಿದೇವತೆಯೆಂದು ವ್ಯವಹರಿಸಿ ಅದನ್ನು ಸರ್ಪವೆಂದೇ ಕರೆಯುವ ವಾಡಿಕೆಯುಂಟು. (ನಿದರ್ಶನ-ಮೂಲಜಾಶ್ವಶುರಂ ಹಂತಿ ಸರ್ಪಜಾತು ತದಂಗನಾಂ). ಈ ಕಾರಣದಿಂದಲೇ ಗ್ರಹಗತಿ ದಾರುಣವಾದುದೆಂದು ಕಲ್ಪನೆ. (ಆಶ್ಲೇಷಾ ನಕ್ಷತ್ರಂ ಸರ್ಪಾದೇವತಾ-ತೈತ್ತಿರೀಯ ಸಂಹಿತೆ).

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಆಶ್ಲೇಷಾ&oldid=829345" ಇಂದ ಪಡೆಯಲ್ಪಟ್ಟಿದೆ