ಆಶೌಚ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಶುಚಿ ಎಂದು ಸೂಚಿಸುವ ಒಂದು ಬಗೆಯ ಪಾಪ (ಮೈಲಿಗೆ). ಅದೇ ಅರ್ಥದಲ್ಲಿ ಈಗ ಸೂತಕ ಪದ ಬಳಕೆಯಲ್ಲಿದೆ. ಕಾರಣಾನುಗುಣವಾಗಿ ಗೊತ್ತಾದ ಕಾಲದವರೆಗೆ ಮಾತ್ರ ಇರುತ್ತದೆ. ಆಶೌಚ (ಶಾವ) ಇರುವ ಕಾಲದಲ್ಲಿ ಪಿಂಡದಾನ, ಉದಕದಾನ ಮಾಡುತ್ತಾರೆ. ಆದರೆ ವೇದಾಧ್ಯಯನ ಮತ್ತು ಶ್ರೌತಸ್ಮಾರ್ತಕರ್ಮಗಳನ್ನು ಮಾಡಲು ಅರ್ಹತೆ ಇರುವುದಿಲ್ಲ. ಆಶೌಚ ಇರುವವರಿಗೆ ಸಂಬಂಧಪಟ್ಟ ಪದಾರ್ಥಗಳಿಗೂ ಶುದ್ಧಿ ಇರುವುದಿಲ್ಲ. ಆಶೌಚ ಕಣ್ಣಿಗೆ ಕಾಣುವುದಿಲ್ಲ. ಆದರೂ ಕರ್ಮಾನರ್ಹತೆಯನ್ನುಂಟುಮಾಡುವ, ಜನಸಾಮಾನ್ಯರಲ್ಲೂ ಗೊತ್ತಾದ ಕಾಲದವರೆಗಿರುವ, ಶರೀರಗತವಾದ ಒಂದು ವಿಧದ ಮಾಲಿನ್ಯ. ಗೊತ್ತಾದ ಕಾಲ ಕಳೆದ ಮೇಲೆ ಸ್ನಾನಾದಿಗಳಿಂದ ಮಾಲಿನ್ಯ ಕಳೆದು ಕರ್ಮಾರ್ಹತೆ ಉಂಟಾಗುತ್ತದೆ. ಆಶೌಚದ ಕೊನೆಯಲ್ಲಿ ಶುದ್ಧಿಯಾಗಲು ಕೆಲವರಿಗೆ ಕ್ಷೌರವೂ ವಿಹಿತವಾಗಿದೆ. ಆಶೌಚದಲ್ಲಿ ಜನನ, ಮರಣ, ಆರ್ತವ, ಸಾಂಸರ್ಗಿಕ, ಸನ್ನಿಪಾತ-ಎಂದಿವೇ ಮೊದಲಾಗಿ ಅನೇಕ ಭೇದಗಳಿವೆ.

ಮಕ್ಕಳು ಹುಟ್ಟಿದರೆ ಬರುವುದು ಜನನಾಶೌಚ (ಸೂತಿಕಾಶೌಚ). ಇದಕ್ಕೆ ಪುರುಡು, ವೃದ್ಧಿ ಎಂಬ ಪದಗಳೂ ಬಳಕೆಯಲ್ಲಿವೆ. ಸಾವಿನಿಂದ ಬರುವುದು ಮರಣಾಶೌಚ (ಶಾವಾಶೌಚ). ಇದನ್ನೀಗ ಬಳಕೆಯಲ್ಲಿ ಕ್ಷಯ ಎನ್ನುತ್ತಾರೆ. ಈ ಎರಡು ವಿಧಗಳಲ್ಲೂ ಏಳು ತಲೆಮಾರಿನವರೆಗಿನ ದಾಯಾದಿಗಳಲ್ಲಿ ಬ್ರಾಹ್ಮಣರಿಗೆ ಹತ್ತು ದಿನಗಳು, ಕ್ಷತ್ರಿಯರಿಗೆ ಹನ್ನೆರಡು ದಿನಗಳು, ವೈಶ್ಯರಿಗೆ ಹದಿನೈದು ದಿನಗಳು, ಚತುರ್ಥವರ್ಣದವರಿಗೆ ಒಂದು ತಿಂಗಳು ಆಶೌಚಕಾಲವೆಂದು ಶಾಸ್ತ್ರದಲ್ಲಿ ಹೇಳಿದೆ. ಇದು ಆಶೌಚದ ಪರಮಾವಧಿ. ಜನನಾಶೌಚದಲ್ಲಿ ಗರ್ಭಸ್ರಾವನಿಮಿತ್ತ ಗರ್ಭಮಾಸಾನುಗುಣವಾಗಿ 4, 5, 6 ದಿನಗಳು ಆಶೌಚವೂ ಉಂಟು.

ಇದಕ್ಕಿಂತ ಕಡಿಮೆಯಾದುದು ಮೂರು ದಿನಗಳ ಆಶೌಚ. ಇದರಂತೆಯೇ ಪಕ್ಷಿಣೇ (ಒಂದೂವರೆ ದಿನಗಳು) ಮತ್ತು ಒಂದು ದಿನದ ಆಶೌಚವೂ ಇವೆ. ಅವೆರಡೂ ಶಾವಾಶೌಚ ದಲ್ಲಿ ಮಾತ್ರ. ಈ ನಿಯತಕಾಲಿಕವಲ್ಲದೆ ಕೇವಲ ಸ್ನಾನ ನಿಮಿತ್ತಕವಾದ ಆಶೌಚವೂ ಉಂಟು. ಇದರಲ್ಲಿ ಸ್ನಾನಮಾತ್ರದಿಂದ ಶುದ್ಧಿ. ಬಾಂಧವ್ಯ ದೂರವಾದಂತೆಲ್ಲ ಆಶೌಚಕಾಲ ಕಡಿಮೆಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ತ್ರೀ ಪುರುಷ ಭೇದದಿಂದಲೂ ಆಶೌಚಕಾಲ ಭಿನ್ನವಾಗುತ್ತದೆ. ಹಲ್ಲು ಹುಟ್ಟುವುದಕ್ಕಿಂತ ಮೊದಲು ಮಗು ಸತ್ತರೆ ತಂದೆತಾಯಿಗಳಿಗೆ ಪುರ್ಣಕಾಲದ ಆಶೌಚ. ದಾಯಾದಿಗಳಿಗೆ ಸ್ನಾನದಿಂದ ಕೂಡಲೇ ಶುದ್ಧಿ. ಚೌಲಕಾಲದೊಳಗೆ ಮೃತನಾದರೆ ಒಂದು ದಿನದ ಆಶೌಚ. ಉಪನಯನದವರೆಗೆ ಮೂರು ದಿನಗಳ ಆಶೌಚ. ಅಲ್ಲಿಂದ ಮುಂದೆ ಹತ್ತುದಿನಗಳ ಆಶೌಚ. ಮರಣಾಶೌಚದಲ್ಲಿ ಇದರಂತೆಯೇ ಇನ್ನೂ ಹಲವು ಪ್ರಭೇದಗಳಿವೆ. ಗಂಡನಿಗೆ ಬಂದ ಆಶೌಚ ಹೆಂಡತಿಗೂ ಉಂಟು. ಆದರೆ ಹೆಂಡತಿಗೆ ಬಂದ ಆಶೌಚ ನಿಯತವಾಗಿ ಗಂಡನಿಗೆ ಬರುವುದಿಲ್ಲ. ಸ್ತ್ರೀಯರಿಗೆ ವಿವಾಹಾನಂತರ ತಂದೆ ಕಡೆಯ ಬಂಧುಗಳ ಆಶೌಚ ಕಡಿಮೆಯಾಗುತ್ತದೆ. ಗಂಡನ ಬಂಧುಗಳ ಆಶೌಚ ಪುರ್ಣವಾಗಿರುತ್ತದೆ.

ಜನನ ಅಥವಾ ಮರಣದ ಅರಿವು ಉಂಟಾಗುವವರೆಗೂ ಆಶೌಚ ಬರುವುದಿಲ್ಲ. ಜನನಾಶೌಚ ವಿಷಯ ಕಾಲ ಕಳೆದ ಮೇಲೆ ತಿಳಿದರೂ ಆಶೌಚ ಇರುವುದಿಲ್ಲ. ಮರಣಾಶೌಚದಲ್ಲಿ ಕಾಲ ಕಳೆದ ಮೇಲೂ ಆಶೌಚ ಉಂಟು, ಆದರೆ ಅವಧಿ ಕಡಿಮೆಯಾಗುತ್ತದೆ. ಹತ್ತು ದಿನಗಳ ಆಶೌಚದ ವಿಷಯವನ್ನು ಆ ಕಾಲ ಕಳೆದ ಮೇಲೆ ಮೂರು ತಿಂಗಳೊಳಗೆ ಕೇಳಿದರೆ ಮೂರು ದಿನಗಳೂ ಆರು ತಿಂಗಳೊಳಗೆ ಪಕ್ಷಿಣಿಯೂ, ವರ್ಷದೊಳಗೆ ಒಂದು ದಿನವೂ ಆಶೌಚ ಇರಬೇಕು. ವರ್ಷಾನಂತರ ಮರಣ ವಿಷಯ ತಿಳಿದರೆ ಸ್ನಾನಮಾತ್ರದಿಂದ ಶುದ್ಧಿ. ಮಗನನ್ನು ಬಿಟ್ಟು ಉಳಿದ ಸಪಿಂಡ ಬಂಧುಗಳಿಗೆ ಈ ಕ್ರಮ.

ಮೂರು ದಿನಗಳ ಆಶೌಚದಲ್ಲಿ ಆ ಕಾಲ ಕಳೆದ ಮೇಲೆ ಹತ್ತು ದಿವಸಗಳೊಳಗೆ ವಿಷಯ ತಿಳಿದರೆ ಒಂದು ದಿನವೂ ಪಕ್ಷಿಣಿಯಲ್ಲಿ ಒಂದು ಕಾಲವೂ ಆಶೌಚ. ಹತ್ತು ದಿವಸಗಳು ಕಳೆದ ಬಳಿಕ ಕೇವಲ ಸ್ನಾನ ಮಾತ್ರ. ದಿನಾಶೌಚದಲ್ಲಿಯೂ ನಿಯತ ಕಾಲಾನಂತರ ತಿಳಿದ ಆಶೌಚಕ್ಕೆ ಸ್ನಾನದಿಂದ ಶುದ್ಧಿ.

ಒಂದು ಜನನಾಶೌಚ ಮಧ್ಯದಲ್ಲಿ ಇನ್ನೊಂದು ಜನನಾಶೌಚ ಬಂದರೆ ಎರಡನೆಯ ಜನನನಿಮಿತ್ತ ಪ್ರತ್ಯೇಕವಾಗಿ ಆಶೌಚ ಇರಬೇಕಾಗಿಲ್ಲ. ಮೊದಲನೆಯ ಆಶೌಚದಿಂದ ಅದೂ ಹೋಗುತ್ತದೆ. ಜನನಾಶೌಚ ಮಧ್ಯದಲ್ಲಿ ಶಾವಾಶೌಚ ಬಂದರೂ ಶಾವಾಶೌಚ ಮಧ್ಯದಲ್ಲಿ ಜನನಾಶೌಚ ಬಂದರೂ ಶಾವಾಶೌಚ ಕಾಲದಿಂದಲೇ ಶುದ್ದಿ. ಶಾವಾಶೌಚ ಮಧ್ಯದಲ್ಲಿ ಸಮಾನ ಕಾಲದ ಮತ್ತೊಂದು ಶಾವಾಶೌಚ ಬಂದರೆ ಆಗ ಮೊದಲಿನ ಶಾವಾಶೌಚ ಕಾಲದಿಂದಲೇ ಶುದ್ಧಿ. ಅಧಿಕಕಾಲದ ಆಶೌಚದ ಮಧ್ಯದಲ್ಲಿ ಅಲ್ಪಕಾಲದ ಆಶೌಚ ಬಂದರೆ ಅಧಿಕ ಕಾಲದ ಆಶೌಚದೊಡನೆಯೇ ಮತ್ತೊಂದು ಆಶೌಚ ಕಳೆದು ಹೋಗುತ್ತದೆ. ತಂದೆ-ತಾಯಿ ನಿಮಿತ್ತಕವಾದ ಆಶೌಚದಲ್ಲಿ ಈ ನಿಯಮ ಕೂಡುವುದಿಲ್ಲ.

ಆಶೌಚಾಂತ್ಯಸ್ನಾನವನ್ನು ಸಂಗಮಕಾಲದಲ್ಲಿ ಎಂದರೆ, ಸೂರ್ಯೋದಯ ಕಾಲಕ್ಕೆ 2 ಗಂ 24 ನಿ. ಮೇಲೆ 4 ಗಂ 48 ನಿ. ಒಳಗೆ ಮಾಡಬೇಕು.

ಆಶೌಚಿ ದೇವಾಲಯಕ್ಕೆ ಹೋಗಕೂಡದು; ಆತ ನಮಸ್ಕಾರಕ್ಕೆ ಅನರ್ಹ. ಪುಜೋಪಯುಕ್ತ ಪುಷ್ಪ ಮೊದಲಾದುವನ್ನೂ ಮನೆಯಲ್ಲಿ ಉಪಯೋಗಿಸುತ್ತಿರುವ ಮಣ್ಣಿನ ಪಾತ್ರೆಗಳನ್ನೂ ಮುಟ್ಟಕೂಡದು. ಅಭ್ಯಂಗಸ್ನಾನ ಕೂಡದು. ತಾಂಬೂಲ, ಗಂಧ ಮೊದಲಾದುವನ್ನು ಉಪಯೋಗಿಸಬಾರದು.

ವೈಯಕ್ತಿಕ ಆಶೌಚಕಾಲದ ಬಗ್ಗೆ ಧರ್ಮಶಾಸ್ತ್ರದಲ್ಲಿ ವಿವರವಾಗಿ ಉಕ್ತವಾಗಿದೆ.

ರಾತ್ರಿಕಾಲದಲ್ಲಿ ಜನನ ಮರಣಗಳು ಸಂಭವಿಸಿದರೆ ಸಾಮಾನ್ಯವಾಗಿ 12 ಗಂ. ಒಳಪಟ್ಟು ಅದೇ ದಿವಸದಿಂದ, 2 ಗಂ. 30 ನಿ. ಮೇಲ್ಪಟ್ಟು ಮಾರನೆಯ ದಿನದಿಂದ ಆಶೌಚ ದಿನಸಂಖ್ಯೆಯನ್ನು ಗಣಿಸಲು ಪ್ರಾರಂಭಿಸಬೇಕು. ಈ ಎರಡು ಕಾಲಗಳ ಮಧ್ಯದಲ್ಲಿ ಸಂಭವಿಸುವುದರ ದಿನಗಣನೆಯನ್ನು ಲೆಕ್ಕದಿಂದ ಗೊತ್ತುಪಡಿಸಬೇಕು. ಆ ಗೊತ್ತಾದ ದಿನದ ಹಗಲಿನ ಕಾಲ ಪ್ರಮಾಣವನ್ನು 24 ಗಂಟೆಗಳಲ್ಲಿ ಕಳೆದುಳಿದುದು ರಾತ್ರಿ ಪ್ರಮಾಣ. ಈ ಕಾಲದಲ್ಲಿ ಮೂರು ಗಂಟೆ ಕಾಲವನ್ನು ಕಳೆದು ಉಳಿದುದರ ಮೂರನೆಯ ಎರಡು ಭಾಗಕ್ಕೆ 11/2 ಗಂಟೆ ಕಾಲವನ್ನೂ ಹಗಲಿನ ಕಾಲಪ್ರಮಾಣವನ್ನೂ ಕೂಡಿಸಿ ಬರುವ ಕಾಲದಿಂದ ಮುಂದಿನದು ಮಾರನೆಯ ದಿನದ ಗಣನೆಗೆ ಸೇರುತ್ತದೆ. ಈ ಕಾಲಗಣನೆಯಂತೆ ಅರ್ಧ ರಾತ್ರಿಯಲ್ಲಿ ಸಂಭವಿಸುವ ಜನನ ಮರಣಗಳ ದಿನವನ್ನು ನಿಷ್ಕರ್ಷಿಸಬೇಕು. ರಜಸ್ವಲಾಶೌಚ : ಹೆಂಗಸರು ಮುಟ್ಟಾದ ದಿನದಿಂದ ಮೂರು ದಿನಗಳ ಕಾಲ ಇರುವ ಮೈಲಿಗೆ. ಮುಟ್ಟಾದ ದಿನದಿಂದ 18ನೆಯ ದಿನ ಮತ್ತೆ ಮುಟ್ಟಾದರೆ 1 ದಿನವೂ 19ನೆಯ ದಿನ ಆದರೆ 2 ದಿನಗಳೂ ಅಲ್ಲಿಂದ ಮುಂದೆ 3 ದಿನಗಳೂ ಆಶೌಚ ಇರುತ್ತದೆ. ಆ ಕಾಲ ಕಳೆದ ಮೇಲೆ ಸ್ನಾನದಿಂದ ಶುದ್ಧಿ.

ಅನ್ಯ ಸಂಪರ್ಕದಿಂದ ಬರುವ ಆಶೌಚ ಸಾಂಸರ್ಗಿಕ. ಆಶೌಚ ಮಧ್ಯದಲ್ಲಿ ಮತ್ತೊಂದು ಆಶೌಚ ಬರುವುದು ಸನ್ನಿಪಾತ.

ಪುರುಷನಿಗೆ ಸಂಸರ್ಗಾಶೌಚ ಬಂದರೆ ಅದು ಅವನಿಗೆ ಮಾತ್ರ. ಅವನ ಹೆಂಡತಿಗಾಗಲೀ ಸಂಬಂಧಪಟ್ಟ ಪದಾರ್ಥಗಳಿಗಾಗಲೀ ಆಶೌಚ ಇಲ್ಲ. ಹೆಂಡತಿಗೆ ವಿಷಯ ತಿಳಿದು ಆಶೌಚ ಕಳೆದ ಮೇಲೆ ಕಾಲಾನಂತರದಲ್ಲಿ ಗಂಡನಿಗೆ ಅದೇ ವಿಷಯ ತಿಳಿದು ಆಶೌಚವಿರುವ ಸನ್ನಿವೇಶದಲ್ಲಿ ಮತ್ತೆ ಆಕೆಯೂ ಆಶೌಚ ಇರಬೇಕಾಗಿಲ್ಲ.

"https://kn.wikipedia.org/w/index.php?title=ಆಶೌಚ&oldid=912919" ಇಂದ ಪಡೆಯಲ್ಪಟ್ಟಿದೆ