ವಿಷಯಕ್ಕೆ ಹೋಗು

ಆಶುಕವಿತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬರೆವಣಿಗೆಯ ಸಾಧನವಿಲ್ಲದೆ, ಯಾವ ಪುರ್ವಸಿದ್ಧತೆಯೂ ಇಲ್ಲದೆ ಸದ್ಯಃಸ್ಫೂರ್ತಿಯಿಂದ ಹೊರಹೊಮ್ಮುವ ವಾಚಿಕ (ಓರಲ್) ಕವಿತೆ.

ಬರೆವಣಿಗೆಯಿಲ್ಲದಿದ್ದ ಪ್ರಾಚೀನ ಕಾಲದಲ್ಲಿ ಆಶುಕವಿತ್ವವೇ ಪ್ರಧಾನವಾಗಿದ್ದುದು ಸಹಜ. ವಿಕಾಸಶೀಲ ಮಹಾಕಾವ್ಯ (ಎಪಿಕ್ ಆಫ್ ಗ್ರೋತ್) ಎಂದು ಕರೆಯಲ್ಪಡುವ ಮಹಾಕಾವ್ಯಪ್ರಕಾರ ರೂಪುಗೊಂಡದ್ದು ಆಶುಕವಿತ್ವಪ್ರಧಾನವಾದ ವಾಚಿಕ ಪರಂಪರೆಯಿಂದ ಎನ್ನುವುದು ಪ್ರಸಿದ್ಧವಾದ ಸಂಗತಿ. ಓದುಬರೆಹಗಳನ್ನು ಆಶ್ರಯಿಸದ ಜನಪದ ಕಾವ್ಯವೆಲ್ಲ-ಗಾದೆಗಳು ಮತ್ತು ಒಗಟುಗಳನ್ನೂ ಸೇರಿಸಿಕೊಂಡು-ಆಶುಕವಿತೆಯೇ. ಬರೆವಣಿಗೆಯನ್ನು ಕಂಡುಹಿಡಿದ ಮೇಲೂ ಆಶುಕವಿತೆಯ ಪದ್ಧತಿ ಉಳಿದುಕೊಂಡು ಬಂತು. ರಾಜಾಸ್ತಾನಗಳಲ್ಲಿ ಪಂಡಿತಕವಿಗಳ ಮಟ್ಟದಲ್ಲಿ ನಡೆಯುತ್ತಿದ್ದ ವಿದ್ವತ್ ಸ್ಪರ್ಧೆಗಳಲ್ಲಿ ಆಶುಕವಿತ್ವಕ್ಕೆ ಅವಕಾಶಗಳು ಹೇರಳವಾಗಿದ್ದುವು. ಕನ್ನಡದಲ್ಲಿ ಉಪಲಬ್ಧವಿರುವ ಕಂತಿ-ಹಂಪನ ಸಮಸ್ಯೆಗಳು ಎಂಬ ಕೃತಿ ಇಂಥ ಆಸ್ಥಾನಕವಿತೆಗೆ ಮಾದರಿಯಾಗಬಹುದು ಕಂತಿ. ಸಂಸ್ಕೃತದ ಭೋಜಪ್ರಬಂಧ ಮುಂತಾದ ಕೃತಿಗಳಲ್ಲಿ ಕಂಡುಬರುವ ಪ್ರಹೇಳಿಕೆಗಳು ಮತ್ತು ಅವುಗಳ ಪರಿಹಾರದಲ್ಲಿ ಆಶುಕವಿತ್ವದ ಮಾದರಿಗಳಿವೆ. ಓದುಬರೆಹಗಳ ಜೊತೆಗೆ ಮುದ್ರಣಸೌಲಭ್ಯ ವಿಪುಲವಾಗಿರುವ ಮತ್ತು ವಿರಾಮಶೀಲವಲ್ಲದ ಆಧುನಿಕ ಕಾಲದಲ್ಲಿ ಆಶುಕವಿತೆಗೆ ಅವಕಾಶ ಹೆಚ್ಚಾಗಿಲ್ಲದಿರುವುದು ಸಹಜವೇ. ಕುತೂಹಲಕ್ಕಾಗಿ ಅಲ್ಲೊಂದು ಇಲ್ಲೊಂದು ಆಶುಕವಿತಾ ಸ್ಪರ್ಧೆಯನ್ನು ಏರ್ಪಡಿಸಿದರೂ ಅದು ಯಶಸ್ವಿಯಾಗುವುದು ವಿರಳ. ಜಾನ್ ಆಫ್ ಲಂಡನ್ಸ್ ವೀಕ್ಲಿ, ಟೈಮ್ಸ್ ಲಿಟರರಿ ಸಪ್ಲಿಮೆಂಟ್ನಂಥ ಕೆಲವು ಪತ್ರಿಕೆಗಳು ಇಂಥ ಅನೇಕ ಸ್ಪರ್ಧೆಗಳನ್ನು ನಡೆಸುತ್ತಿವೆ. ಹಾಗೆಯೇ ತೆಲುಗಿನಲ್ಲಿ ಬಹಳ ಪ್ರಚುರವಾಗಿರುವ ಅಷ್ಟಾವಧಾನ, ಶತಾವಧಾನ ಮೊದಲಾದ ಅವಧಾನ ಸಂಪ್ರದಾಯದಲ್ಲಿ ಆಶುಕವಿತ್ವದ ರೀತಿಯನ್ನು ಇಂದಿಗೂ ಕಾಣಬಹುದಾಗಿದೆ. ಅಂತೂ ಆಶುಕವಿತೆಯ ಭವಿಷ್ಯ ಉಜ್ಜ್ವಲವಾಗಿಲ್ಲವೆಂದೇ ಹೇಳಬೇಕು; ಮುಂದೆ ಅದು ನಾಮಾವಶೇಷವಾದರೆ ಆಶ್ಚರ್ಯಪಡಬೇಕಾಗಿಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: