ಆವರ್ತದರ್ಶಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆವರ್ತದರ್ಶಕ ಆವರ್ತಿಸುತ್ತಿರುವ ಅಥವಾ ಕಂಪಿಸುತ್ತಿರುವ ಕಾಯಗಳನ್ನು ಅವು ನಿಶ್ಚಲಸ್ಥಿತಿಯಲ್ಲಿರುವಾಗಿನಷ್ಟೇ ವಿವರವಾಗಿ ವೀಕ್ಷಿಸಲು ಅನುಕೂಲಿಸುವಂತೆ ಆವರ್ತನೀಯ, ಅಂತರಾಯಿಕ (ಪೀರಿಯಾಡಿಕ್, ಇಂಟರ್‍ಮಿಟೆಂಟ್) ಬೆಳಕನ್ನು ಬೀರುವ ಉಪಕರಣ (ಸ್ಟ್ರೋಬೊಸ್ಕೋಪ್).

ಶೋಧನೆ[ಬದಲಾಯಿಸಿ]

ಸೈಮನ್ ಆರ್, ವಾಸ್ಟ್ಯಾಂಫರ್ ಇದರ ಸಂಶೋಧಕ (1832). ಸ್ಟ್ರೋಬೊಸ್ಕೋಪ್ ಎಂಬ ಹೆಸರಿತ್ತವನೂ ಅವನೇ. ಆವರ್ತಿಸುತ್ತಿರುವ ಕಾಯ ಅಥವಾ ದೃಶ್ಯ ನೋಡಲು ಅಸ್ಪಷ್ಟ. ಆವರ್ತನ ವೇಗ ಏರಿದಂತೆ ಅಸ್ಪಷ್ಟತೆ ಏರಿ ವಿವರ ಮಸಕಾಗುವುದು. ಅಪಾರಕ ಫಲಕಗಳಿರುವ ವಿದ್ಯುದ್ಬೀಸಣಿಗೆ ವೇಗವಾಗಿ ಆವರ್ತಿಸುವಾಗ ಪಾರಕವೋ ಎಂಬ ಭ್ರಮೆ ಮೂಡುವುದು ಈ ಕಾರಣದಿಂದ. ಇಂಥ ವಸ್ತುಗಳ ವಿವರ ಸೆರೆಹಿಡಿಯಲು ಆವರ್ತದರ್ಶಕ ಸಹಾಯಕಾರಿ. ಒಂದೇ ವಸ್ತು ಅಂತರಾಯಿಕವಾಗಿ ಪುನಃ ಪುನಃ ತೋರಿ ಮಾಯವಾಗುತ್ತಿರಲಿ. ಆ ಘಟನೆಯ ವೇಗ ಏರಿದಂತೆ ವಸ್ತು ನಿಶ್ಚಲವಾಗಿಯೇ ಇದೆ ಎಂಬ ಭಾವ ಮನಸ್ಸಿಗೆ ಮೂಡುವುದು ; ಆದ್ದರಿಂದ ಅದರ ವಿವರಗಳು ಸ್ಪಷ್ಟವಾಗುವುವು. ಕಣ್ಣಿನ ಒಟ್ಟುಗೂಡಿಸುವ ಶಕ್ತಿ ಇದರ ಕಾರಣ. ಇದರ ಭೌತಕಾರಣ ಇಷ್ಟು. ಒಂದು ದೃಶ್ಯ ಬೆಳಗಿದಾಗ ನೇತ್ರಪಟಲದ ಮೇಲೆ ಅದರ ಪ್ರತಿಬಿಂಬ ಬಿದ್ದು ಬೆಳಕು ಆರಿಹೋದ ಮೇಲೆಯೂ ಅದು ಸ್ವಲ್ಪ ಕಾಲ ಉಳಿಯುತ್ತದೆ. ಹೀಗೆ ಪ್ರತಿಬಿಂಬ ಉಳಿದಿರುವಾಗಲೇ ಪುನಃ ಅದೇ ದೃಶ್ಯ ಬೆಳಗಲ್ಪಟ್ಟರೆ ಮಧ್ಯೆ ಬೆಳಕು ತುಂಡಾದುದು ಕಣ್ಣಿನ ಗಮನಕ್ಕೆ ಬರುವುದಿಲ್ಲ ; ಬದಲು ದೃಶ್ಯ ಅವಿಚ್ಛಿನ್ನವಾಗಿ ಬೆಳಗುತ್ತಿದೆ ಎಂದು ಭಾಸವಾಗುವುದು. ಕಣ್ಣಿನ ಈ ಗುಣವನ್ನು ಉಪಯೋಗಿಸಿಕೊಂಡು ಆವರ್ತದರ್ಶಕದ ರಚನೆ ಇದೆ. ಇದರ ಭೌತನಿಯಮ-ಬೆಳಗಿಸಲ್ಪಡುವ ವಸ್ತು ಬದಲಾಗಬಾರದು ಮತ್ತು ಕಾಣುವುದು, ಕಾಣದಿರುವುದು ಇವುಗಳ ನಡುವಿನ ಕಾಲಾಂತರ ಆದಷ್ಟು ಕಡಿಮೆಯಾಗಿರಬೇಕು.[೧]

ವಿಧಾನ[ಬದಲಾಯಿಸಿ]

ಆವರ್ತದರ್ಶಕ ಬೀರುವ ಅಂತರಾಯಿಕ ಬೆಳಕಿನ ಕಂಬಿ, ವಸ್ತುವಿನ ಆವರ್ತವೇಗ ಇವುಗಳ ನಡುವೆ ಸ್ಪಷ್ಟ ಹೊಂದಾಣಿಕೆ ಅವಶ್ಯ. ಹೀಗಿದ್ದಲ್ಲಿ ನಾವು ನೋಡುವ ವಸ್ತು ನಿಯತಸ್ಥಾನಕ್ಕೆ ಬರುವಾಗ ಬೆಳಕಿನ ಕಂಬಿ ಅದರ ಮೇಲೆ ಬಿದ್ದು ಆ ವಸ್ತು ಬೆಳಗುವುದು. ಆದ್ದರಿಂದ ವಸ್ತುವಿನ ಆವರ್ತನಾವಧಿಯೂ ಬೆಳಕಿನ ಕಂಬಿಯ ಅಂತರಾಯಿಕತೆಯ ಅವಧಿಯೂ ಸಮಾನವಾಗಿವೆ. ಸೆಕೆಂಡಿಗೆ ಇಪ್ಪತ್ತೈದು (ಅಥವಾ ಹೆಚ್ಚು) ಸಲ ಬೆಳಗಲ್ಪಟ್ಟ ಆವರ್ತನ ವಸ್ತುವಿನ ಪ್ರತಿಬಿಂಬ ನೇತ್ರಪಟಲದ ಮೇಲೆ ನಿಶ್ಚಲವಾಗಿರುತ್ತದೆ.

ಇಂದಿನ ಆವರ್ತದರ್ಶಕಗಳಲ್ಲಿ ಉಪಯೋಗಿಸುವ ವಿಧಾನವನ್ನು 1836ರಲ್ಲಿ ಜೋಸೆಫ್ ಆಂಟನಿ ಫರ್ಡಿನ್ಯಾಂಡ್ ಪ್ಲೇಟೊ ಮೊಟ್ಟ ಮೊದಲು ಬಳಸಿದನೆಂದು ಹೇಳುತ್ತಾರೆ. ಫ್ಯಾರಡೆ ಸಹ ಸ್ವಲ್ಪ ಹೆಚ್ಚು ಕಡಿಮೆ ಇದೇ ರೀತಿಯ ಉಪಕರಣವನ್ನು ವರ್ಣಿಸಿದ್ದಾನೆ. 1866ರಲ್ಲಿ ಆಗಸ್ಟ್ ಟಾಪ್ಲರ್ ಈ ಆವರ್ತದರ್ಶಕದ ಜೋಡಣೆ ಮತ್ತು ಉಪಯೋಗಗಳನ್ನು ವಿಮರ್ಶಿಸಿ ಮೊದಲ ಬಾರಿಗೆ ವಿಜ್ಞಾನಿಗಳ ಗಮನವನ್ನು ಸೆಳೆದ. ಅವನ ಕಾಲದಿಂದ ವೈಜ್ಞಾನಿಕ ಅನ್ವೇಷಣೆಗಳಲ್ಲಿ ಮತ್ತು ಕೈಗಾರಿಕೋದ್ಯಮಗಳಲ್ಲಿ ಆವರ್ತದರ್ಶಕಗಳ ಉಪಯೋಗ ಪ್ರಾರಂಭವಾಯಿತು.

ಮೊದ ಮೊದಲಿನ ಆವರ್ತದರ್ಶಕಗಳಲ್ಲಿ ಅವ್ಯಾಹತ ವೀಕ್ಷಣೆ (ಕಂಟಿನ್ಯುಯಸ್ ಅಬ್ಸರ್ವೇಷನ್) ಮತ್ತು ಅನವ್ಯಾಹತ ಬೆಳಕಿನಲ್ಲಿ ವೀಕ್ಷಣೆ ಎಂಬ ಎರಡು ಪದ್ಧತಿಗಳು ರೂಢಿಯಲ್ಲಿದ್ದುವು. ವಸ್ತುಕಂಪನದಿಂದ ಶಬ್ದೋತ್ಪತ್ತಿಯಾಗುವ ವಿಷಯದ ಮೇಲೆ ಅನ್ವೇಷಣೆ ನಡೆಯುತ್ತಿದ್ದಾಗ ಆವರ್ತದರ್ಶಕದ ಉಪಯೋಗ ಮೊದಲಬಾರಿಗೆ ಆಯಿತು. ಮುಂದೆ ವಸ್ತುಕಂಪನವನ್ನು ಉಪಯೋಗಿಸಿಕೊಂಡ ಆವರ್ತದರ್ಶಕಗಳನ್ನು ಚಲನೆಯಲ್ಲಿರುವ ಯಂತ್ರಭಾಗಗಳ ಪರಿಶೀಲನೆಯಲ್ಲಿಯೂ ಕೈಗಾರಿಕೋದ್ಯಮಗಳಲ್ಲಿ ತಯಾರಾಗುವ ವಸ್ತುಗಳನ್ನು ತಯಾರಿಕೆ ನಡೆಯುತ್ತಿದ್ದಾಗಲೇ ಪರೀಕ್ಷಿಸಲೂ ಬಳಸಿದರು.[೨]

ಚಲಿಸುತ್ತಿರುವ ಬಲು ಚಿಕ್ಕ ಯಂತ್ರಭಾಗಗಳನ್ನು ಆವರ್ತದರ್ಶಕಗಳ ಸಹಾಯದಿಂದ ಸೆರೆಹಿಡಿದು ಪ್ರತಿಬಿಂಬವನ್ನು ಎಷ್ಟು ಬೇಕಾದರಷ್ಟು ವರ್ಧಿಸಿ ಪ್ರತಿಯೊಂದು ಬಿಂದುಗಳ ಸ್ಥಿತಿಯನ್ನು ಪರಿಶೀಲಿಸಬಹುದು.

ಆವರ್ತದರ್ಶಕ ವೀಕ್ಷಣೆಗಳಿಂದ ಕಾರ್ಯದಲ್ಲಿರುವ ಯಂತ್ರಭಾಗಗಳ ಸ್ಥಿತಿ ನಿಷ್ಕ್ರಿಯಸ್ಥಿತಿಗಿಂತ ಭಿನ್ನವಾಗಿರುವುದು ತಿಳಿದು ಬಂದಿರುವುದಲ್ಲದೆ, ಸನ್ನಿವೇಶಕ್ಕೆ ತಕ್ಕಂತೆ ಅವುಗಳಲ್ಲಿ ಆಗುವ ವ್ಯತ್ಯಾಸಗಳು, ಒತ್ತಡವನ್ನು ತೀವ್ರವಾಗಿ ಅನುಭವಿಸುವ ಭಾಗಗಳು ಒತ್ತಡವನ್ನು ಸ್ವಲ್ಪವೂ ಅನುಭವಿಸದೆ ಇರುವ ಭಾಗಗಳು ಇತ್ಯಾದಿಗಳ ವಿವರಗಳು ತಿಳಿದುಬರುತ್ತವೆ. ಇದರಿಂದ ವೈಜ್ಞಾನಿಕ ಕುತೂಹಲ ತೃಪ್ತಿಗೆ ಹೆಚ್ಚು ಅನ್ವೇಷಣೆಗಳು ನಡೆಯುವುದಕ್ಕೆ ಅವಕಾಶವಾಗುವುದರ ಜೊತೆಗೆ ಕೈಗಾರಿಕೆಯಲ್ಲಿ ಹೆಚ್ಚು ದಿನ ಬಾಳಿಕೆ ಬರುವ ಮತ್ತು ದಾಢ್ರ್ಯ ಮತ್ತು ದಕ್ಷತೆಗೆ ಬೇಕಾದ ಬಿಡಿಭಾಗಗಳಿರುವ ಯಂತ್ರಗಳನ್ನು ತಯಾರಿಸಲು ಸಾಧ್ಯವಾಗುವುದು.

ಆವರ್ತದರ್ಶಕ ಕೆಲಸ[ಬದಲಾಯಿಸಿ]

ಆವರ್ತದರ್ಶಕದ ಸಮರ್ಥಕ್ರಿಯೆಗೆ, ಅದರ ಪ್ರತಿಯೊಂದು ಬಿಡಿಭಾಗದ ಕಾರ್ಯ ಪ್ರತ್ಯೇಕವಾಗಿಯೂ ಸಾಮೂಹಿಕವಾಗಿಯೂ ಅತ್ಯಂತ ಪರಿಷ್ಕಾರವಾಗಿರಬೇಕು. ಇಂಥ ಹೊಂದಾಣಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ದೃಶ್ಯ ನಿಶ್ಚಲವಾಗಿ ಕಾಣುವ ಬದಲು ನಿಧಾನವಾಗಿ ಚಲಿಸುವಂತೆ ಕಾಣುತ್ತದೆ. ಅನವ್ಯಾಹತ ದೀಪಗಳನ್ನು ಉಪಯೋಗಿಸುವ ಆವರ್ತದರ್ಶಕದಿಂದ ಒಂದು ಆವರ್ತಿಸುವ ವಸ್ತುವನ್ನು ನೋಡುತ್ತಿರುವಾಗ ದೀಪ ಹೊತ್ತಿ ಆರುವ ಕಾಲಾವಕಾಶವನ್ನು ವ್ಯತ್ಯಾಸ ಮಾಡುತ್ತಿದ್ದರೆ ಆ ವಸ್ತು ಬೇರೆ ಬೇರೆ ಮಂದ ವೇಗಗಳಿಂದ ಚಲಿಸುತ್ತಿರುವಂತೆ ಕಾಣುತ್ತದೆ. ಈ ವೇಗಗಳೆಲ್ಲವೂ ವಸ್ತುವಿನ ನಿಜವೇಗಕ್ಕಿಂತ ಕಡಿಮೆಯೇ ಇದ್ದರೂ ಪರಿಶೀಲನೆಗೆ ಅಡಚಣೆ ತರುತ್ತವೆ.[೩]

ಚಲನಚಿತ್ರಗಳಲ್ಲಿ ಈ ಮೇಲೆ ಹೇಳಿದಂತೆ ಹೊಂದಾವಣೆ ಬೇಕಾದಂತೆ ವ್ಯತ್ಯಾಸಮಾಡಿ ವಿಸ್ಮಯಕರ ಹಾಗೂ ತಮಾಷೆಯ ಸನ್ನಿವೇಶಗಳು ಕಾಣುವಂತೆ ಮಾಡುತ್ತಾರೆ. ಉದಾಹರಣೆಗೆ, ಅಕ್ಷದಮೇಲೆ ತಿರುಗುತ್ತಲಿರುವ ಮೋಟಾರ್ ಗಾಡಿಯೊಂದರ ಚಕ್ರವನ್ನು ಬೇಕು ಬೇಕಾದ ವೇಗಗಳಲ್ಲಿ ಹಿಂದಕ್ಕೆ ಅಥವಾ ಮುಂದಕ್ಕೆ (ಮೇಲಕ್ಕೆ ಮತ್ತು ಕೆಳಕ್ಕೆ ಸಹ ಯಾವ ದಿಕ್ಕಿನಲ್ಲಿ ಬೇಕಾದರಲ್ಲಿ) ಚಲಿಸುವಂತೆ ತೆರೆಯಮೇಲೆ ಚಿತ್ರಪ್ರದರ್ಶನ ಮಾಡಲು ಸಹಾಯವಾಗುವಂತೆ ಛಾಯಾಗ್ರಹಣ ಮಾಡಬಹುದು. ಚಕ್ರದ ಭ್ರಮಣಸಂಖ್ಯೆ ಛಾಯಾಗ್ರಾಹಿಯ ಕವಾಟ ಮುಚ್ಚಿ, ತೆರೆಯುವ ಆವರ್ತ ಸಂಖ್ಯೆಗೆ ಸಮನಾದರೆ ಚಕ್ರ ನಿಶ್ಚಲವಾಗಿದ್ದಂತೆ ತೆರೆಯ ಮೇಲೆ ಚಿತ್ರ ಬೀಳುವುದು. ಭ್ರಮಣಸಂಖ್ಯೆ ಹೆಚ್ಚಾದರೆ ಚಕ್ರ ಮುಂದೋಡುವಂತೆ, ಕಡಿಮೆಯಾದರೆ ಹಿಂದೋಡುವಂತೆ ಚಿತ್ರದಲ್ಲಿ ಕಾಣುವುದು (ಇವೆರಡು ಸಂಖ್ಯೆಗಳೂ ಸೆಕೆಂಡಿಗೆ 25ಕ್ಕೆ ಕಡಿಮೆ ಇರಕೂಡದು ಅಷ್ಟೆ). ಇದಕ್ಕೆ ಸರಿಯಾಗಿ ಅನವ್ಯಾಹತವಾಗುವ ದೀಪವೂ ಇದ್ದರೆ, ಕವಾಟ ಮುಚ್ಚಿ, ತೆರೆಯುವುದರಲ್ಲಿ ಬಂದ ತಪ್ಪುಗಳು ಸರಿಹೋಗುವುವು.

ಇದರಿಂದ ಚಲನಭಾಗ ಪರೀಕ್ಷೆಗಾಗಲಿ ಸಿನಿಮಾ ಛಾಯಾಗ್ರಹಣ ಉಪಯೋಗಕ್ಕಾಗಲಿ, ಚಳಕ ಪ್ರದರ್ಶನಕ್ಕಾಗಲಿ ಹೊಂದಾಣಿಕೆ ನಿಯಂತ್ರಣ ಮಾಡಲು ಸಾಧ್ಯವಾಗುವ ಮತ್ತು ಉಜ್ಜ್ವಲ ಪ್ರಕಾಶ ಬೀರುವ ದೀಪಗಳು ಬೇಕು. ಮೊದಲು ಉಪಯೋಗಿಸುತ್ತಿದ್ದ ಆವರ್ತದರ್ಶಕಗಳಲ್ಲಿನಂತೆ ಈಗಿನ ಸಂದರ್ಭಗಳಲ್ಲಿ ಯಾಂತ್ರಿಕವಾಗಿ ದೀಪದರ್ಶನ ಸಂಖ್ಯೆಯನ್ನು ನಿಯಂತ್ರಿಸಿದರೂ ದೊರೆಯುವ ಪ್ರತಿಫಲ ಅಷ್ಟು ಸಮರ್ಪಕವಾಗಿರುವುದಿಲ್ಲ. ಹೆಚ್ಚು ವಿಭವಾಂತರ ವಿದ್ಯುತ್ಪ್ರವಾಹದ ಅಂತರ ಕಡಿಮೆಯಿದ್ದಾಗ ಎರಡು ವಿದ್ಯುದ್ಧ್ರುವಗಳ ನಡುವೆ ತೇಜೋಮಯವಾದ ವಿದ್ಯುತ್ ಕಿಡಿಗಳು ಉಂಟಾಗುತ್ತವೆಯಾದರೂ ಕಿಡಿಗಿಂಡಿಗೆ ಇರುವ ಕಾಲಾವಧಿಯನ್ನು ನಿಯಂತ್ರಿಸುವುದು ಬಲುಕಷ್ಟ. ಜೊತೆಗೆ ಕಿಡಿಯಿಂದ ವಿವಿಧ ಅನಿಲೋತ್ಪತ್ತಿಯಾಗುವುದರಿಂದ ಅದರ ಬೆಳಕನ್ನು ಪಾರದರ್ಶಕಗಳ ಮೂಲಕ ಉಪಯೋಗಿಸಬೇಕಾಗುತ್ತದೆ. ಇವು ಪ್ರಾರಂಭದಲ್ಲಿ ಸರಿಯಾಗಿದ್ದರೂ ಬಹುಬೇಗ ಅನಿಲದ ಹೊಗೆಯಿಂದ ಮಸಕಾಗುವುದರಿಂದ ಪುನಃ ಪುನಃ ಮಧ್ಯೆ ಮಧ್ಯೆ ಶುಚಿಪಡಿಸುವ ಕೆಲಸ ಬೇರೆ ಆಗಬೇಕಾಗುತ್ತದೆ. ಈ ತೊಂದರೆಗಳಿಂದ ಪಾರಾಗಲು ವಿದ್ಯುದ್ವಿಸರ್ಜಕ ಕೊಳವೆಗಳನ್ನು (ಎಲೆಕ್ಟ್ರಿಕ್ ಡಿಸ್‍ಚಾರ್ಜ್ ಟ್ಯೂಬ್ಸ್) ಉಪಯೋಗಿಸುತ್ತಾರೆ. ಕಾಲಕಾಲಕ್ಕೆ ಸರಿಯಾಗಿ ಇವುಗಳ ಧ್ರುವಗಳಲ್ಲಿ ಅತಿ ಹೆಚ್ಚಿನ ವಿಭವಾಂತರ ಉಂಟಾಗಿ ಉಜ್ಜ್ವಲ ಕಾಂತಿಯಿಂದ ವಿದ್ಯುದ್ವಿಸರ್ಜನೆಯಾಗುವಂತೆ, ನಿಯಂತ್ರಿಸುವ ಒಂದು ವಿದ್ಯುನ್ಮಂಡಲವನ್ನು ಜೊತೆಗೆ ಉಪಯೋಗಿಸುತ್ತಾರೆ. ಈ ಮಂಡಲಸಹಿತವಾದ ದೀಪವನ್ನು ಆವರ್ತದರ್ಶಕ ದೀಪಗಳೆಂದು ಕರೆಯಲಾಗಿದೆ.

ಆವರ್ತದರ್ಶಕದ ಅಂತರಂಗ[ಬದಲಾಯಿಸಿ]

ಇದರ ಮಂಡಲದಲ್ಲಿನ ವಿಸರ್ಜಕ ಕೊಳವೆಯಲ್ಲಿ ನಾಲ್ಕು ವಿದ್ಯುನ್ನಾಳಗಳಿದ್ದು (ಎಲೆಕ್ಟ್ರೋಡ್ಸ್) ಆವರಣದಲ್ಲಿ ನಿಯಾನ್ ಅನಿಲವಿದೆ. ಇದನ್ನು ನಿಯಾನ್ ಥೈರಾಟ್ರಾನ್ ಎಂದು ಕರೆಯುತ್ತಾರೆ. ಇದರ ವಿದ್ಯುದ್ವಿಸರ್ಜಕ ಸಂಖ್ಯೆ ಮಿನಿಟಿಗೆ 600-14,140; ಇದನ್ನು ಬೇಕಾದಂತೆ ನಿಯಂತ್ರಿಸಬಹುದು. ಈ ದೀಪ ಬೆಳಗುವ ಕಾಲ 40ಘಿ10-3 ಸೆಕೆಂಡ್. ಇದರಲ್ಲಿ ಅ1 ಮೊದಲಾಗಿ 6 ಸಾಂದ್ರಕಗಳು (ಕಂಡೆನ್ಸರ್ಸ್) ನಿಯಂತ್ರಣ ಸಾಧನಗಳು. ಆವರ್ತದರ್ಶಕ ದೀಪಗಳು ಚಲನಚಿತ್ರ ಛಾಯಾಗ್ರಹಣದಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದಿವೆ. ಮೊದಲಲ್ಲಿ ಈ ದೀಪ ಮಿನುಗುವಿಕೆ ಮತ್ತು ಛಾಯಾಗ್ರಾಹಿಯ ಕವಾಟ ತೆರೆಯುವಿಕೆ ಎರಡೂ ಒಟ್ಟಿಗೆ ನಡೆಯುವಂತೆ ಕಾಲ ಹೊಂದಾಣಿಕೆ ಅಗತ್ಯವಾಗಿದ್ದರಿಂದ ಕಷ್ಟ ಕೊಡುತ್ತಿತ್ತು. ಈ ಚಲನಚಿತ್ರಗ್ರಹಣದಲ್ಲಿ ಅಭಿನಯದ ದೃಶ್ಯ ನಡೆಯುವಾಗ ಅದರ ಚಿತ್ರಗಳನ್ನು ಸೆಕೆಂಡಿಗೆ ಸುಮಾರು 25 ಚಿತ್ರಗಳನ್ನು ಸಮವೇಗದಲ್ಲಿ ತೆಗೆದುಕೊಂಡು, ಪುನಃ ಅದೇ ವೇಗದಲ್ಲಿ ಚಿತ್ರಗಳನ್ನು ತೆರೆಯಮೇಲೆ ಪ್ರದರ್ಶಿಸಿದರೆ, ಆಗ ಆ ಅಭಿನಯ ತೆರೆಯಮೇಲೆ ಪ್ರದರ್ಶಿತವಾಗುತ್ತದೆ. ಇದಕ್ಕಾಗಿ ಚಿತ್ರಗ್ರಹಣ ಮಾಡುವಾಗ ಛಾಯಾಗ್ರಾಹಿ ತಟ್ಟೆಯನ್ನು ಒಂದಾದ ಮೇಲೊಂದು ದೃಶ್ಯಕ್ಕೆ ಎದುರಾಗಿ ಬರಬೇಕಲ್ಲದೆ ಒಂದು ತಟ್ಟೆ ಚಿತ್ರ ಚೌಕಟ್ಟು ಸಂಪೂರ್ಣವಾಗಿ ಅಲ್ಲಿಂದ ಸರಿದು ಮತ್ತೊಂದು ಅದರ ಜಾಗವನ್ನು ಆಕ್ರಮಿಸಿಕೊಂಡ ಮೇಲೆ ಛಾಯಾಗ್ರಾಹಿಯ ಕವಾಟ ತೆರೆಯಲ್ಪಟ್ಟು ದೃಶ್ಯದ ಚಿತ್ರ ಗ್ರಹಣವಾಗುತ್ತದೆ. ಆವರ್ತದರ್ಶಕ ದೀಪಗಳ ನಿರ್ಮಾಣ ಮಾಡುವ ಮೊದಲು ಈ ಕಾರ್ಯಗಳು ಸಂಪೂರ್ಣ ಹೊಂದಾಣಿಕೆಯಲ್ಲಿ ನಡೆಯುವುದು ಅಸಾಧ್ಯವಾಗಿ, ಚಲನಚಿತ್ರ ಪ್ರದರ್ಶಿತವಾದಾಗ ಮಧ್ಯೆ ಮಧ್ಯೆ ದೃಶ್ಯಗಳು ಮಸಕಾಗುವುದು ಅಸಂಬದ್ಧವಾಗಿ ಕಾಣುವುದು ಮತ್ತು ಅಸಮಂಜಸವಾಗುವುದು ಇವು ಸಾಧಾರಣವಾಗಿದ್ದುವು. ಆವರ್ತದರ್ಶಕ ದೀಪಗಳು ಬಂದಮೇಲೆ, ಅದೂ ಹತ್ತು ವರ್ಷಗಳಿಂದ ಈಚೆಗೆ ಚಲನಚಿತ್ರ ಛಾಯಾಗ್ರಾಹಿಯ ಪ್ರವೇಶದ್ವಾರದ ಕವಾಟವನ್ನೇ ತ್ಯಜಿಸಲಾಗಿದೆ. ಇದಕ್ಕೆ ಬದಲಾಗಿ ಛಾಯಾಗ್ರಾಹಿಯ ಒಂದು ಚೌಕಟ್ಟು ಸರಿದು ಇನ್ನೊಂದು ಅದರ ಜಾಗಕ್ಕೆ ಸರಿಯಾಗಿ ಬಂದೊಡನೆ ಮಿಂಚುವಂತೆ ಆವರ್ತದರ್ಶಕ ದೀಪವನ್ನು ನಿಯಂತ್ರಿಸಬಹುದು. ಇತ್ತೀಚೆಗೆ ಈ ಛಾಯಾಗ್ರಾಹಿ ಚೌಕಟ್ಟುಗಳನ್ನು ಸರಿಸುವ ಮತ್ತು ದೀಪವನ್ನು ಮಿಂಚಿಸುವ ಕಾರ್ಯಗಳೆರಡೂ ಒಂದೇ ವಿದ್ಯುನ್ಮಂಡಲದಿಂದ ಕಾಲ ಹೊಂದಾಣಿಕೆಯಲ್ಲಿ ನಡೆಯಿಸಲ್ಪಡುತ್ತಿವೆ. ಇದರಿಂದ ಪ್ರದರ್ಶಿತ ಚಲನಚಿತ್ರಗಳಲ್ಲಿ ಹೊಂದಾಣಿಕೆಯ ನ್ಯೂನತೆಗಳಿಂದ ಆಗುತ್ತಿದ್ದ ಆಭಾಸಗಳು ಕಾಣುವುದಿಲ್ಲ.

ಉಪಯೋಗ[ಬದಲಾಯಿಸಿ]

ವ್ಯವಹಾರಸೌಲಭ್ಯಕ್ಕಾಗಿ ಮಸಾಚುಸೆಟ್ಸ್‍ನಲ್ಲಿಯ ವೈಜ್ಞಾನಿಕ ಕಾರ್ಯಾಲಯದ ಹೆರಾಲ್ಡ್ ಎಡ್ಗರ್‍ಟನ್ ಮತ್ತು ಅವರ ಸಂಗಡಿಗರು ಅನೇಕ ಸರಳ ವಿದ್ಯುನ್ಮಂಡಲಗಳಿಂದ ನಿಯಮಿತವಾದ ಆವರ್ತದರ್ಶಕ ದೀಪಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಒಂದೇ ಬಾರಿ ಮಿಂಚಿ ಉರಿದು ಹೋಗುವ, ಛಾಯಾಚಿತ್ರಗ್ರಹಣಕ್ಕೆ ಉಪಯುಕ್ತವಾದ ಅತಿ ಪ್ರಕಾಶದ ದೀಪಗಳಿಂದ ಹಿಡಿದು ಮೇಲೆ ಹೇಳಿದ ಚಲನಚಿತ್ರಗ್ರಹಣ ಮತ್ತು ಪ್ರದರ್ಶನಗಳಿಗೆ ಉಪಯುಕ್ತವಾಗುವ ಸೆಕೆಂಡಿಗೆ 1,500 ಬಾರಿ ಮಿಂಚುವ ದೀಪಗಳವರೆಗೆ, ನಾನಾ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುವ ವಿವಿಧ ಆವರ್ತದರ್ಶಕ ದೀಪಗಳಿವೆ. ಇವುಗಳಲ್ಲಿ ಅತಿ ವೇಗ ಚಲನೆಯಲ್ಲಿರುವ ವಸ್ತುಗಳ ಚಲನ ಛಾಯಾಗ್ರಹಣವನ್ನು ಮಾಡಿ, ಮಂದವೇಗದಲ್ಲಿ ಅದರ ಚಿತ್ರವನ್ನು ತೆರೆಯಮೇಲೆ ಪ್ರದರ್ಶಿಸಿ, ಚಲನೆಯ ವಿವಿಧ ಸ್ಥಿತಿಯಲ್ಲಿನ ವಿವರಗಳನ್ನು ಪರೀಕ್ಷಿಸಲು ಸಹಾಯ ಮಾಡುವ ವಿವಿಧ ದೀಪಗಳಿವೆ. ಹೀಗೆಯೇ ಹಾರುತ್ತಿರುವ ಗುಂಡು, ಜೆಟ್ ವಿಮಾನ ಮುಂತಾದುವುಗಳ ಚಲನೆಯ ಪರಿಶೀಲನೆಗೆ 10-3 ಸೆಕೆಂಡಿಗೊಮ್ಮೆ ಮಿಂಚುವ ದೀಪಗಳು, ಶಬ್ದವೇಗ ಮತ್ತು ಕ್ಷಿಪಣಿ ವೇಗಗಳ ಅಧ್ಯಯನಕ್ಕೆ 10-7 ಸೆಕೆಂಡಿಗೊಮ್ಮೆ ಮಿಂಚುವ ದೀಪಗಳು ಉಪಯೋಗಕ್ಕೆ ಒದಗಿವೆ. ಕ್ಷಣಿಕವಾದರೂ ಸೂರ್ಯನಷ್ಟು ಬೆಳಕನ್ನು ಚೆಲ್ಲಿ ಆರುವ ಆವರ್ತದರ್ಶಕ ದೀಪಗಳು ಕೂಡ ಈಗ ನಿರ್ಮಿತವಾಗಿವೆ. ಇವುಗಳ ಉಪಯೋಗ ವಿಜ್ಞಾನ ಮತ್ತು ಕೈಗಾರಿಕೆಗಳಲ್ಲಿ ಹೆಚ್ಚುತ್ತಲೂ ಇವೆ. (ವೈ.ವಿ.ಐ.)

ಯಂತ್ರಗಳ ವೇಗ ಅಳೆಯುವ ಉಪಕರಣದ ಹೆಸರು ವೇಗಮಾಪಕ (ಟ್ಯಕೋ ಮೀಟರ್). [೪]ಇದನ್ನು ಯಂತ್ರಕ್ಕೆ ಜೋಡಿಸಿರುವುದರಿಂದ ಯಂತ್ರ ಇದರ ಭಾರವನ್ನು ಹೊತ್ತಿರುವುದು. ದೊಡ್ಡ ಯಂತ್ರಗಳಿಗೆ ಈ ಭಾರ ಹೆಚ್ಚೇನೂ ಅಲ್ಲ; ಪರಿಣಾಮಕಾರಿಯೂ ಅಲ್ಲ. ಆದರೆ ಒಂದು ಅಶ್ವಸಾಮಥ್ರ್ಯಕ್ಕಿಂತ ಕಡಿಮೆ ಸಾಮಥ್ರ್ಯದ ಯಂತ್ರದ ವೇಗ ಅಳೆಯಲು ವೇಗಮಾಪಕವನ್ನು ಅದರ ಮೇಲೆ ಹೇರಿದರೆ ಯಂತ್ರದ ಕೆಲಸವೇ ಬದಲಾಗಬಹುದು. ಇಂಥಲ್ಲಿ ಯಂತ್ರದ ಮೇಲೆ ಅವಲಂಬಿಸದ ಆದರೂ ಅದರ ವೇಗವನ್ನು ನಿಷ್ಕ್ರಷ್ಟವಾಗಿ ಅಳೆಯುವ ಒಂದು ಹೊಸ ವೇಗಮಾಪಕ ಬೇಕು. ಅಂಥ ಉಪಕರಣದ ಹೆಸರು ಆವರ್ತಕದರ್ಶಕ ವೇಗಮಾಪಕ (ಸ್ಟ್ರೊಬೋಸ್ಕೋಪಿಕ್ ಟ್ಯಕೋಮೀಟರ್). ಇದು ಯಂತ್ರವನ್ನು ಯಾವ ವಿಧವಾಗಿಯೂ-ಯಾಂತ್ರಿಕವಾಗಿಯಾಗಲೀ ವಿದ್ಯುಚ್ಛಕ್ತಿಗಾಗಲೀ-ಹೊಂದಿಕೊಂಡಿಲ್ಲ. ಆದ್ದರಿಂದ ಯಂತ್ರದ ವೇಗವನ್ನು ಎಂಥ ಸನ್ನಿವೇಶದಲ್ಲಿಯೂ ಈ ಉಪಕರಣದ ಸಹಾಯದಿಂದ ಅಳೆಯಬಹುದು.


ಉಲ್ಲೇಖಗಳು[ಬದಲಾಯಿಸಿ]

  1. http://centrale-histoire.centraliens.net/stories/rev49.pdf
  2. http://edgerton-digital-collections.org/docs-life/studies-at-mit
  3. https://web.archive.org/web/20041222172258/http://easyweb.easynet.co.uk/~s-herbert/ottomar_anschutz.htm
  4. https://www.merriam-webster.com/dictionary/tachometer