ಆಲ್ಬಿಯಸ್ ಟಿಬ್ಯುಲಸ್
ಆಲ್ಬಿಯಸ್ ಟಿಬ್ಯುಲಸ್ -ಸುಮಾರು ಕ್ರಿ.ಪೂ. 19ರಲ್ಲಿ ಜೀವಿಸಿದ್ದ ರೋಮನ್ ಕವಿ. ಲ್ಯಾಟಿನ್ ಶೋಕಗೀತೆಗಳ ರಚನೆಯಲ್ಲಿ ಸಿದ್ಧಹಸ್ತ.
ಪ್ರಾಚೀನ ರೋಮನ್ ಅಶ್ವಾರೋಹಿ ವೀರರ ಮನೆತನಕ್ಕೆ ಸೇರಿದ ಈತನ ತೋಟಗಳು ಟೈಬರ್ ಮತ್ತು ಪ್ರಯೋನಸ್ಟೇಗಳ ನಡುವಿನ ಪೇಡಂ ಎಂಬ ಸ್ಥಳದಲ್ಲಿ ಇದ್ದುವು. ಮಸೆಲ್ಲ ಎಂಬಾತನ ಆಶ್ರಯದಲ್ಲಿದ್ದ ಕವಿಗೋಷ್ಠಿಯ ಸದಸ್ಯರಲ್ಲಿ ಈತನೂ ಒಬ್ಬನಾಗಿದ್ದ. ಕ್ರಿ.ಪೂ. 31ರಲ್ಲಿ ಅಕ್ವಿಟಾನಿಯನ್ನರ ವಿರುದ್ಧ ಮಸೆಲ್ಲ ಕೈಗೊಂಡ ದಂಡ ಯಾತ್ರೆಯಲ್ಲಿ ಈತನೂ ಭಾಗವಹಿಸಿದ್ದ. ಅಲ್ಲದೆ ಪೂರ್ವದೇಶಗಳಿಗೆ ನಿಯೋಗಿಯಾಗಿ ಕೂಡ ಹೋಗಿದ್ದ. ಆದರೆ ಕಾರ್ಸೈರದಲ್ಲಿ ಈತ ಕಾಯಿಲೆ ಬಿದ್ದದ್ದರಿಂದ ರೋಮಿಗೆ ಹಿಂದಿರುಗಿ ಬರಬೇಕಾಯಿತು.
ಈತನ ಶೋಕಗೀತೆಗಳನ್ನು ಎರಡು ಗ್ರಂಥಗಳಲ್ಲಿ ಸಂಗ್ರಹಿಸಲಾಗಿದೆ. ಮುಖ್ಯವಾಗಿ ಅವು ಈತನ ಪ್ರಣಯಿನಿಯರಾದ ಡೀಲ್ಯ ಮತ್ತು ನೆಮಿಸಿಸ್ ಎಂಬವರನ್ನು ಕುರಿತವು. ಡೀಲ್ಯ ಸಂಸ್ಥೆಯೊಂದರೆ ಮೇಲ್ವಿಚಾರಕಳಾಗಿದ್ದಳೆಂದೂ ನೆಮಿಸಿಸ್ ವೇಶ್ಯೆಯಾಗಿದ್ದಳೆಂದೂ ತಿಳಿದುಬರುತ್ತದೆ. ಕಟಲಸನ ಶೋಕಗೀತೆಗಳಲ್ಲಿ ಕಂಡು ಬರುವ ಭಾವೋದ್ದೀಪನೆಗಳು ಈತನ ಪ್ರೇಮಗೀತೆಗಳಲ್ಲಿ ಕಂಡುಬರುವುದಿಲ್ಲ. ಆದರೂ ಅವು ಮನೋಹರವಾಗಿವೆ; ಸರಳವಾಗಿವೆ. ಈತನ ಕವನಗಳ ಇಂಗ್ಲಿಷ್ ಭಾಷಾಂತರಗಳನ್ನು ಜೆ.ಪಿ. ಪೋಸ್ಟ್ ಗೇಟ್ ನೀಡಿದ್ದಾನೆ.