ಆಲ್ಫ್ರೆಡ್ ಡ ಮ್ಯುಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲ್ಫ್ರೆಡ್ ಡ ಮ್ಯುಸೆ (೧೮೧೦-೧೮೫೭) ಫ್ರೆಂಚ್ ಕವಿ, ನಾಟಕಕಾರ ಮತ್ತು ಕಾದಂಬರಿಕಾರ.

ಬದುಕು ಮತ್ತು ಬರಹ[ಬದಲಾಯಿಸಿ]

ಈತನ ತಂದೆ ವಿಕ್ಟರ್ ಡ ಮ್ಯುಸೆ ತನ್ನ ಮನೆತನ ೧೧೪೦ರಷ್ಟು ಹಿಂದಿನದೆಂದೆ ಹೆಮ್ಮೆ ಪಡುತ್ತಿದ್ದ. ಅಲ್ಲದೆ ಹಲವು ಸಚಿವ ಜವಾಬ್ದಾರಿಯ ಹುದ್ದೆಗಳಲ್ಲಿ ಅಧಿಕಾರ ನಡೆಸಿದ್ದನಾಗಿ ಉಚ್ಚವರ್ಗದವನೆಂಬ ಆತ್ಮಪ್ರತ್ಯಯ ಅವನಲ್ಲಿತ್ತು. ಅಂಥ ಗರ್ವ ಅವನ ಮಕ್ಕಳಿಗೂ ಇಳಿದು ಬಂತು. ಆಲ್‍ಫ್ರೆಡ್‍ಗೆ ಚಿಕ್ಕಂದಿನಲ್ಲಿ ಅಣ್ಣ ಪಾಲ್‍ನೊಂದಿಗೆ ಅಚ್ಚರಿ ಕಥೆಗಳನ್ನು (ರೊಮಾನ್ಸ್) ಓದುವುದೂ ಅಲ್ಲಿನ ಪಾತ್ರಗಳಂತೆ ನಟಿಸುವುದೂ ವಾಡಿಕೆಯಾಗಿತ್ತು. ಪರಿಣಾಮವಾಗಿ ವಿಭಾವನಾಶಕ್ತಿ ಕುದುರಿತು, ಭಾವಾವೇಶ ಬೆಳೆಯಿತು. ನಾಟಕಾಸ ಕ್ತಿ ಅಂಕುರಿಸಿತು. ೧೬ನೆಯ ವರ್ಷದವರೆಗೂ ಮುಂದಿನ ಜೀವನದಲ್ಲಿ ಹೆಗ್ಗುರುತಾದ ಬುದ್ಧಿಬಲದ ಸೂಚನೆಯೊಂದೂ ಕಂಡುಬರಲಿಲ್ಲ. ೧೮೨೮ರಂದು ಸ್ಕೈಟ್, ಮೆಲೆಸ್ವಿಯ, ಬ್ರೇಜಿಯರ್ ಎಂಬ ಸಾಹಿತಿಗಳ ಪರಿಚಯ ದೊರಕಿತು. ಆಗ ಒಂದು ಪದ್ಯ ಬರೆದ. ಅದೇನೂ ಮೇಲ್ತರಹದ್ದಲ್ಲದಿದ್ದರೂ ಅದರಿಂದ ಶ್ರೇಷ್ಠ ಕವಿ ವಿಕ್ಟರ್ ಹ್ಯೂಗೋವಿನ ಮನೆಗೆ ಹೋಗಿಬರುವ ಅವಕಾಶ ಇವನದಾಯಿತು. ಅಲ್ಲಿ ಪ್ರಖ್ಯಾತ ಸಾಹಿತಿಗಳಾದ ಡ ವೀನಿ, ಮೆರಿಮೆ, ಸೇಂತ್ ಬವ್‍ರ ಸಹವಾಸ ಲಭಿಸಿತು. ಹ್ಯೂಗೋವಿನ ಪ್ರಚೋದನೆಯಿಂದ ಒಂದು ನಾಟಕ ರಚಿಸಿದ. ಪದ್ಯಕ್ಕಿಂತ ನಾಟಕ ಹೆಚ್ಚು ಲಕ್ಷ್ಯಾರ್ಹವಾಗಿತ್ತು.

ನ್ಯಾಯ, ವೈದ್ಯ ಎರಡರಲ್ಲೂ ಪ್ರಾವೀಣ್ಯಕ್ಕಾಗಿ ಶ್ರಮಿಸಿ ಜಯಶೀಲನಾಗದೆ ಸಾಹಿತ್ಯವೇ ತನ್ನ ವೃತ್ತಿಯೆಂದು ನಿರ್ಧರಿಸಿಕೊಂಡ ಡ ಮ್ಯುಸೆ ೧೮೨೮ ರಂದು ಡಿ ಕ್ವಿನ್ಸಿಯ ಕನ್ಫೆಷನ್ಸ್ ಆಫ್ ಎನ್ ಇಂಗ್ಲಿಷ್ ಓಪಿಯಮ್ ಈಟರ್ ಎಂಬ ಗದ್ಯಕೃತಿಯನ್ನು ಫ್ರೆಂಚಿಗೆ ಅನುವಾದ ಮಾಡಿದ್ದಲ್ಲದೆ ಅದಕ್ಕೆ ತನ್ನದನ್ನೂ ಕೊಂಚ ಸೇರಿಸಿದ. ಅದು ವಿಮರ್ಶಕರ ಗಮನವನ್ನು ಸೆಳೆಯಲಿಲ್ಲ. ತನ್ನ ಕೆಲವು ಪದ್ಯಗಳನ್ನು ಸೇಂತ್ ಬವ್‍ನ ಮುಂದೆ ಓದಿ ಅವನ ಪ್ರಶಂಸೆಯನ್ನು ಗಳಿಸಿದ. ಡ ಮ್ಯುಸೆಯ ಇಟಲಿ ಮತ್ತು ಸ್ಪೇನಿನ ಕಥೆಗಳು ಎಂಬುದು ಘನವಿಜಯವನ್ನು ಸಂಪಾದಿಸಿತು ಹಾಗೂ ವಿರೋಧಿಗಳಿಗೆ ಆಗ್ರಹವನ್ನು ಉಂಟುಮಾಡಿತು. ಅಂಥದ್ವಂದ್ವಕ್ಕೆ ಕಾರಣ ಆಗ ಉಲ್ಬಣವಾಗುತ್ತಿದ್ದ ಎರಡು ತೀಕ್ಷ್ಣ ಸಾಹಿತ್ಯ ಪಂಥಗಳ ತಿಕ್ಕಾಟ; ಶಿಷ್ಟತೆ (ಕ್ಲ್ಯಾಸಿಸಿಸಂ) ಮತ್ತು ರೊಮ್ಯಾಂಟಿಕತೆಗಳು ಮುಷ್ಟಾಮುಷ್ಟಿಗೆ ಬಂದು ವಿಷಮ ಸಂಗ್ರಾಮ ನಡೆಸುತ್ತಿದ್ದುವು. ಡ ಮ್ಯುಸೆಯ ಪ್ರಕಟನೆಯಲ್ಲಿ ಬೈರನ್ ಮಾದರಿಯ ಕಥನ ಕಾವ್ಯಗಳೂ ಚಂದ್ರನನ್ನು ಕುರಿತ ಒಂದು ಲಾವಣಿಯೂ ಇದ್ದುವು. ಲಾವಣಿಯಲ್ಲಿ ಚಂದ್ರನನ್ನು i ಎಂಬ ಅಕ್ಷರದ ನೆತ್ತಿಯ ಬಿಂದುವಿಗೆ ಹೋಲಿಸಲಾಗಿತ್ತು. ಶಿಷ್ಟತೆಯ ಗುಂಪಿಗೆ ಅದು ಅತೀವ ಅಸಹ್ಯವನ್ನೂ ಸಿಟ್ಟನ್ನೂ ತಂದುಕೊಟ್ಟಿತು. ಸಾಹಿತ್ಯಕ್ಷೇತ್ರದಲ್ಲಿ ಜರುಗುವ ಅನೇಕ ಯುದ್ಧಗಳಿಗೆ ಇಂಥ ಕ್ಷುದ್ರವಿವರಗಳೇ ಪ್ರೇರಕ. ಡ ಮ್ಯುಸೆಯಂತೂ ತಾತ್ಕಾಲಿಕವಾಗಿ ರೊಮ್ಯಾಂಟಿಕ್ ಕವಿಯಾದ. ಆದರೆ ಶೀಘ್ರವಾಗಿ ರೊಮ್ಯಾಂಟಿಕತೆಯ ಉಗ್ರವಿಕಾರಗಳಿಂದ ಪಾರಾಗಿ ಶಿಷ್ಟತೆಯ ಸದ್ಗುಣವನ್ನು ಮೆಚ್ಚಿ ಎರಡಕ್ಕೂ ಸಮನ್ವಯ ಏರ್ಪಡಿಸುವ ಹಿತಕಾರ್ಯದಲ್ಲಿ ಉದ್ಯುಕ್ತನಾದ. 1830ರಲ್ಲೇ ರಾಗಾವಿಷ್ಟತೆ ಹಾಗೂ ಆಲೋಚನಾಪರತೆಗಳ ನಡುವೆ ಅವನ ಮನಸ್ಸಿನಲ್ಲಿ ಹೊಡೆದಾಟ ನಡೆಯುತ್ತಿತ್ತು. ೧೮೩೦ ರಂದು ಇವನ ವೆನಿಸ್ಸಿನಲ್ಲಿ ರಾತ್ರಿ ಎಂಬ ನಾಟಕ ಪ್ರದರ್ಶಿತವಾಯಿತು. ಏನೊ ಕಾರಣದಿಂದ ಇದನ್ನು ಪ್ರೇಕ್ಷಕರು ಛೀಗುಟ್ಟಿದರು. ಬಹುಶಃ ವೈರಿಗಳು ಹೆಚ್ಚಾಗಿ ನೆರೆದು ಆ ಹೀನಕೆಲಸ ಮಾಡಿರಬೇಕು. ಅಪಜನ ಡ ಮ್ಯುಸೆಗೆ ವಿಪರೀತ ನೋವನ್ನು ಕೊಟ್ಟಿತು. ಬಹುಕಾಲ ರಂಗಪ್ರದರ್ಶನದ ಗೋಜಿಗೆ ಅವನು ಹೋಗದೆ ಮಾಸಿಕವೊ ತ್ರೈಮಾಸಿಕವೊ ಆದ ಖ್ಯಾತ ಪತ್ರಿಕೆಗಳಿಗೆ ನಾಟಕ ಬರೆದುಕೊಟ್ಟು ಸುಮ್ಮನಿರತೊಡಗಿದ. ಇದರಿಂದ ಡ ಮ್ಯುಸೆಗಾದ ನಷ್ಟ ಸ್ವಲ್ಪ, ಫ್ರೆಂಚ್ ನಾಟಕಾಲಯಕ್ಕೆ ಆದ ನಷ್ಟ ಬಲು ಹೆಚ್ಚು. ಶಿಷ್ಟತೆ ರೊಮ್ಯಾಂಟಿಕತೆಗಳನ್ನು ಯುಕ್ತಪ್ರಮಾಣದಲ್ಲಿ ಮಿಶ್ರಮಾಡಿ ಒಟ್ಟಿನ ವ್ಯವಸ್ಥೆಯೂ ಪರಿಣಾಮವೂ ನೆರ್ಪಾಗುವಂತೆ ನಿಯಂತ್ರಿಸ ಬಲ್ಲ ಚತುರತೆ ಡ ಮ್ಯುಸೆಗೆ ಇದ್ದಂತೆ ಆಗಿನ ಬೇರಾವ ಕವಿಗೂ ಇರಲಿಲ್ಲ. ಸಮನ್ವಯದ ಅಗತ್ಯವನ್ನೂ ಅದರ ಗುಟ್ಟನ್ನೂ ಈತ ಚೆನ್ನಾಗಿ ಗ್ರಹಿಸಿದ್ದ. ಅದರಂತೆ ಮುಂದೆ ಓದುನಾಟಕಗಳನ್ನೂ ಬರೆದ. ನಾಟಕಾಲಯವಾದರೋ ರೊಮ್ಯಾಂಟಿಕ್ ಶೈಲಿಯ ರಭಸ ಶಿಷ್ಟ ಶೈಲಿಯ ಸಪ್ಪೆತನಗಳಿಗೆ ಪಕ್ಕಾಗಿ ಬೇಗ ಬೇಗ ಸವೆದುಹೋಯಿತು. ವಿಕ್ಟರ್ ಹ್ಯೂಗೊ ಮಹಾಕವಿ; ಆದರೆ ಅವನ ರೂಪಕವನ್ನು ಈಗ ಓದುವವರಾರು?

ತನ್ನ ಸಂಕಲ್ಪದಂತೆ ಡ ಮ್ಯುಸೆ 'ಕೈ ಕುರ್ಚಿಯಿಂದ ವೀಕ್ಷಿಸಬರುವ ದೃಶ್ಯ' ಎಂಬ ಅಂಕಿತವನ್ನಿಟ್ಟು ನಾಟಕೀಯ ಕವನ, ಹರ್ಷನಾಟಕ ಗಾದೆಪದಗಳನ್ನು ಬರೆದು ೧೮೩೩-೩೪ ರಲ್ಲಿ ಪ್ರಕಟಿಸಿದ. ಅವುಗಳಲ್ಲಿ ಒಂದು ನಾಮೌನ. ಅದನ್ನು ಪ್ರಕಟಕಾರನ ಬಿನ್ನಪದಂತೆ ಖಾಲಿ ಜಾಗವನ್ನು ಭರ್ತಿಮಾಡುವುದಕ್ಕೆ ಡ ಮ್ಯುಸೆ ಬರೆದುಕೊಟ್ಟನಂತೆ. ಹೀಗೆ ಅನ್ಯಪ್ರೇರಣೆಯಿಂದ ಕಾವ್ಯ ಕಟ್ಟುವುದು ಯಾವಾಗಲೂ ಹೊಲ್ಲ; ಸ್ವಂತ ಆಂತರ್ಯದ ಕರೆ ಬಂದಲ್ಲದೆ ಆತ ಬರೆಯುತ್ತಿರಲಿಲ್ಲ. ಪ್ರಕಟನೆ ಅಷ್ಟೇನೂ ಮೆಚ್ಚಿಕೆಗಳಿಸದಿದ್ದರೂ 'ಎರಡುಪ್ರಪಂಚದ ಅವಲೋಕನ' ಎಂಬ ಪತ್ರಿಕೆಗೆ ಲೇಖನ ಒದಗಿಸತೊಡಗಿದ. ೧೮೩೩ ರ ಏಪ್ರಿಲ್‍ನಲ್ಲಿ ಒಂದು ಬರೆಹ ಕಳುಹಿಸಿದ. ಕೇವಲ ಆರು ವಾರಗಳಲ್ಲಿಯೇ ಮರಿಯಾನ್ನಳ ಚಾಂಚಲ್ಯ ಎಂಬ ಉತ್ಕøಷ್ಟ ನಾಟಕಗಳನ್ನು ರಚಿಸಿ ಹೊರತಂದ. ಅದರ ಮಹತ್ತ್ವ ಅಪರೂಪವೂ ಘನವೂ ಆದದ್ದು; ಅವನ ಸಮನ್ವಯತತ್ತ್ವ ಅದರಲ್ಲಿ ಪ್ರಶಸ್ತವಾಗಿ ರೂಪುಗೊಂಡಿದೆಯಲ್ಲದೆ ಶಿಷ್ಟಸಂಪ್ರದಾಯದ ಏಕತೆಗಳು ವಿದ್ಯುಕ್ತವಾಗಿ ಬಂದಿದ್ದರೂ ರೊಮ್ಯಾಂಟಿಕ್ ಸ್ವಾರಸ್ಯಕ್ಕೂ ಕಾಂತಿಗೂ ಆಘಾತವಾಗಿಲ್ಲ. ಟ್ರಾಜೆಡಿಯ ಗಾಂಭೀರ್ಯ ಕಾಮೆಡಿಯ ಉಲ್ಲಾಸಗಳೊಂದಿಗೆ ವಿಕಟತ್ವವೂ ಹೆಚ್ಚು ಕಡಿಮೆ ಷೇಕ್ಸ್‍ಪಿಯರನ ತೆರದಲ್ಲಿ, ಕೂಡಿಕೊಂಡಿದೆ. ಮರಿಯಾನ್ನಳ ಗಂಡ ಕ್ಲಾಡಿಯೊ ಅವನ ಆಳು ಟೆಬಿಯೊ ಇಬ್ಬರಲ್ಲೂ ಭೀಕರತೆಯುಂಟು, ಹಾಗೂ ವಿಕಟತ್ವವೂ ಉಂಟು. ಮರಿಯಾನ್ನಳ ಚಪಲ ವರ್ತನೆ ಒಮ್ಮೆ ನಗು ಬರಿಸಿದರೆ ಮತ್ತೊಮ್ಮೆ ಹೊಣೆಯುಳ್ಳದ್ದೆಂದು ತೋರುತ್ತದೆ. ಸೇಲಿಯೊ ಹಾಗೂ ಆಕ್ಟೇವ್ ಎರಡು ವಿರುದ್ಧ ಸ್ವಭಾವಗಳ ಪ್ರತೀಕಗಳು: ಒಬ್ಬ ಸಿನಿಕತೆಯ ಲೌಕಿಕನಾದರೆ ಇನ್ನೊಬ್ಬ ಭಾವವೇಶಿ ಕಲ್ಪನಾಪ್ರಪಂಚ ವಿಹಾರಿ. ಡ ಮ್ಯುಸೆಯ ಈ ನಾಟಕಕ್ಕೆ ಈಗಲೂ ಪ್ಯಾರಿಸಿನ ಮುಖ್ಯ ನಾಟಕಾಲಯದಲ್ಲಿ ಪ್ರದರ್ಶನಾವಕಾಶ ಉಂಟು. ಸಂವಾದದ ಚಕಮುಕಿ ಕಾರ್ಯಾವಳಿಯ ಓಟ, ಪಾತ್ರಗಳ ಋಜುತ್ವ, ಯಾವುದೊ ಘೋರ ಆಕಸ್ಮಿಕ ಕಾದಿದೆಯೆಂಬ ಭಯದ ಸುಳಿವು-ಇವುಗಳಿಂದ ನಾಟಕ ಅಮರವಾಗಿದೆ.

ಡ ಮ್ಯುಸೆಯ ಬಾಳಿನಲ್ಲಿ ೧೮೩೩ ಬಹಳ ಮುಖ್ಯ ವರ್ಷ. ಆಗ ಸಾಹಿತ್ಯಾಕಾಶದಲ್ಲಿ ಲ್ಯೂಸಿಲಿ-ಅರೋರ ಡ್ಯೂಪಿನ್ ಎಂಬ ಭೀಷಣ ರಂಜಕತೆಯ ಮಹಿಳೆ ದುರ್ಭರ ನಕ್ಷತ್ರದಂತೆ ಹೊಳೆಯುತ್ತಿದ್ದಳು. ಕಣ್ಮನ ಸೆಳೆಯುತ್ತಿದ್ದಳು ಗಂಡಸರನ್ನು ನುಂಗಿ ನೀರು ಕುಡಿಯುವ ಪರಮ ಗಂಡುಬೀರಿ ಆಕೆ. ಪುರುಷ ಪೋಷಾಕನ್ನು ಧರಿಸುತ್ತ ಜಾರ್ಜ್ ಸಾಂಡ್ ಎಂಬ ಪುರಷನಾಮಧೇಯವನ್ನು ಕಾವ್ಯನಾಮವಾಗಿ ಇಟ್ಟುಕೊಂಡು. ಪದ್ಯ ಗದ್ಯ ಬರೆಯುತ್ತ ವಿಹರಿಸುತ್ತಿದ್ದಳು. ತನಗಿಂತ ಆರು ವರ್ಷ ದೊಡ್ಡವಳಾದ ಅವಳನ್ನು ಕಂಡ ತಕ್ಷಣ ಡ ಮ್ಯುಸೆ ಹುಚ್ಚು ಪ್ರೇಮಕ್ಕೆ ವಶನಾದ. ಅವಳೊಂದಿಗೆ ಇಟಲಿಯ ಪ್ರವಾಸ ಕೈಗೊಂಡ. ಜಿನೋವದಲ್ಲಿ ಆಕೆ ಕಾಯಿಲೆ ಬಿದ್ದಳು. ಅವಳ ಶುಶ್ರೂಷೆಯಲ್ಲಿ ಬೇಸರಗೊಂಡ ಮ್ಯುಸೆ ಇತರ ಹೆಂಗಸರ ಸ್ನೇಹ ಬಯಸತೊಡಗಿದ. ವೆನಿಸ್ಸಿಗೆ ನಡೆದಾಗಿ ಮ್ಯುಸೆಗೆ ಕಾಯಿಲೆ ಬಂತು. ಜಾರ್ಜ್ ಸಾಂಡ್ ತರುಣ ವೈದ್ಯ ಪಿಯೆತ್ರೊ ಪಾಗೆಲೊವನ್ನು ಆಹ್ವಾನಿಸಿ ಅವನ ಔಷಧ ಹಾಗೂ ತನ್ನ ಶುಶ್ರೂಷೆಗಳಿಂದ ಪ್ರಿಯನನ್ನು ಆರೋಗ್ಯಕ್ಕೆ ತಂದಳು. ಆ ಮಧ್ಯೆ ಅವಳು ಪಾಗೆಲೊವಿನ ಉಪ ಪತ್ನಿಯಾದಳು. ಡ ಮ್ಯುಸೆಯ ಶರೀರಸ್ಥಿತಿ ಪೂರ್ತಿ ನೆಟ್ಟಗಿರಲಿಲ್ಲ. ಜಾರ್ಜ್ ಸಾಂಡಳ ದ್ರೋಹದಿಂದ ಹೆಚ್ಚು ದುರ್ಬಲನಾದ. ವ್ಯಸನಾಕ್ರಾಂತನಾಗಿ ೧೮೩೪ರ ಮಾರ್ಚಿಯಲ್ಲಿ ಪ್ಯಾರಿಸಿಗೆ ಹಿಂದಿರುಗಿದ. ಕೆಲವು ತಿಂಗಳಲ್ಲೇ ಜಾರ್ಜ್ ಸಾಂಡ್ ಪಾಗೆಲೊವಿನೊಡನೆ ಪ್ಯಾರಿಸ್ಸಿಗೆ ಬಂದಳು. ಹಳೆಯ ಗಂಡನ ಮೇಲೆ ಮನಸ್ಸಾಯಿತಾಗಿ ಪಾಗೆಲೋವನ್ನು ಸೆಪ್ಟೆಂಬರಿನಲ್ಲಿ ವೆನಿಸ್ಸಿಗೆ ಬೀಳ್ಕೊಟ್ಟು ಮತ್ತೆ ಡ ಮ್ಯುಸೆಯ ಸಮೀಪವರ್ತಿಯಾದಳು. ಆದರೆ ಮೊದಲಿನ ಸಾಮರಸ್ಯ ಮತ್ತೆ ಏರ್ಪಡಲಿಲ್ಲ. ಜಗಳವಾಡುತ್ತ ದಿನ ನೂಕಿ ಕೊನೆಗೆ ೧೮೩೫ರ ಮಾರ್ಚಿಯಲ್ಲಿ ಮತ್ತೆ ವಿಚ್ಛೇದ ಮಾಡಿಕೊಂಡಳು. ಡ ಮ್ಯುಸೆ ಸತ್ತು ಎರಡು ವರ್ಷ ಕಳೆದ ಮೇಲೆ ೧೮೫೯ರಲ್ಲಿ ಜಾರ್ಜ್ ಸಾಂಡ್ 'ಅವಳು ಮತ್ತು ಅವನು' ಎಂಬ ಹೆಸರಿಟ್ಟು ತನ್ನ ಪರವಾದ ಕಥೆಯನ್ನು ಪ್ರಕಟಿಸಿದಳು, ಅದಕ್ಕೆ ಜವಾಬಾಗಿ ಡ ಮ್ಯುಸೆಯ ಅಣ್ಣ ಪಾಲ್ 'ಅವನು ಮತ್ತು ಅವಳು' ಎಂಬ ತಮ್ಮನ ಪರವಾದ ಕಥೆಯನ್ನು ಹೊರತಂದ.

೧೮೩೫ರಲ್ಲಿ ಮ್ಯುಸೆಯ ಸಾಹಿತ್ಯಕೃಷಿ ಸಮರ್ಪಕವಾಗಿ ನಡೆಯಿತು. ಏಳೆಂಟು ಕಾವ್ಯಗಳು ಪ್ರಕಟಗೊಂಡವು. ಅವುಗಳಲ್ಲಿ 'ಈ ಅವಧಿಯ ಕೂಸಿನ ನಿವೇದನೆ' ಅರ್ಥವತ್ತಾದದ್ದು, ಕುತೂಹಲಜನಕವಾದದ್ದು. ಅವನ ಮನಸ್ಸು ಹೇಗೆ ನೆಪೋಲಿಯನ್ ಬೋನಪಾರ್ಟೆಯ ಹೊಗಳಿಕೆಯಿಂದ ತೆಗಳಿಕೆಗೆ ತಿರುಗಿತೆಂಬುದನ್ನು ತೋರಿಸುತ್ತದೆ. ಒಬ್ಬ ವ್ಯಕ್ತಿಯ ಉಸಿರಿನ ನಿಃಶ್ವಾಸದಿಂದ ಇಡೀ ಯೂರೋಪು ಮಲಿನವಾದುದನ್ನು ಆ ಕಾವ್ಯ ಚಿತ್ರಿಸುತ್ತದೆ. ಇಡೀ ಗ್ರಂಥ ಅತ್ಯುತ್ಕøಷ್ಟ ಕಾವ್ಯ ಲಕ್ಷಣದಿಂದ ತುಂಬಿದೆ. ಅಹಿತವಾದ್ದನ್ನೂ ಕ್ಲಿಷ್ಟವಾದ್ದನ್ನೂ ಡ ಮ್ಯುಸೆ ಹೇಗೆ ನೋಡಲಾರದೆ ಪರಾಙ್ಮುಖನಾಗುತ್ತಿದ್ದ ಎಂಬುದೂ ಎದ್ದು ಕಾಣುತ್ತದೆ.

೧೮೩೬ರಲ್ಲಿ ಅತ್ಯುತ್ತಮ ನಾಟಕವೊಂದನ್ನು ಬರೆದು, ಡುಪೂಯಿ ಕಾಟೊನೆ ಕುಶಲಪತ್ರಗಳು ಎಂಬ ಅಂಕಿತದಿಂದ, ಅಪೂರ್ವವೂ ಸ್ವಾರಸ್ಯವೂ ಆದ ಲಘು ವಿಮರ್ಶೆಯೊಡನೆ ಹೊರಗೆಡವಿದ. ಶಿಷ್ಟತೆ ರೊಮ್ಯಾಂಟಿಕತೆಗಳ ಪರಸ್ಪರ ಗುದ್ದಾಟ ಅನ್ಯಾಯವೂ ಅನುಪಯುಕ್ತವೂ ಆದ ಬರಿ ಗಾಳಿ ಗುದ್ದಾಟವೆಂದು ಅವನ ದೃಢನಂಬಿಕೆ ಅದನ್ನು ಪರಿಹಾಸದ ಮೂಲಕ ಬೋಧಿಸಿದ. ಡುಪೂಯಿ ಕಾಟೊನೆ ಇಬ್ಬರೂ ಕಛೇರಿಯ ಕಾರಕೂನರು. ರಸಿಕರು, ಸಾಹಿತ್ಯವಿಲಾಸಿಗಳು. ಕ್ಲ್ಯಾಸಿಸಿಸಂ ಹಾಗೂ ರೊಮ್ಯಾಂಟಿಸಿಸಂಗಳ ನಿರ್ದುಷ್ಟಜ್ಞಾನ ಅವರಿಗೆ ಬೇಕಾಗಿದೆ. ಪುಸ್ತಕಗಳನ್ನೂ ಲೇಖನಗಳನ್ನೂ ಓದಿ ಓದಿ ಅವರ ಮನಸ್ಸು ಸಂಶಯ ಪ್ರಶ್ನೆ ಭ್ರಾಂತಿಗಳಿಂದ ಗೊಂದಲಮಯವಾಗಿದೆ. ಉದ್ದಾಮ ವಿದ್ವಾಂಸರ ಬಳಿಗೆ ಧಾವಿಸಿ ಅರಿವನ್ನು ಬೇಡಿಕೊಳ್ಳುತ್ತಾರೆ. ಒಬ್ಬೊಬ್ಬನಿಂದ ಒಂದೊಂದು ವಿವರಣೆ ಬರುತ್ತದೆ: ಮೂರು ಏಕತೆಗಳಿದ್ದರೆ ಕ್ಲ್ಯಾಸಿಸಿಸಂ. ಅವಕ್ಕೆ ಭಂಗವಾಗಿದ್ದರೆ ರೊಮ್ಯಾಂಟಿಸಿಸಂ. ಅಮಿಶ್ರ ಗಾಂಭೀರ್ಯವಿದ್ದರೆ ಅದು, ವಿನೋದ ಮಿಶ್ರವಾಗಿದ್ದರೆ ಇದು; ಕಡಿಮೆ ಪಾತ್ರಗಳು ಬಂದೆ ಅದು, ಹೆಚ್ಚು ಬಂದರೆ ಇದು; ಬರುಮಾನವರ ಕಥೆಯೇ ಆದರೆ ಅದು, ಮಾನವಾತೀತರೂ ಬಂದು ಸೇರಿಕೊಂಡರೆ ಇದು; ಭಾಷಾಲಂಕಾರ ರಹಿತವಾದರೆ ಅದು, ಸಹಿತವಾದರೆ ಇದು; ಇತ್ಯಾದಿ ಇತ್ಯಾದಿ. ಆಗ ಬಡ ಕಾರಕೂನರ ಕಿವಿಯನ್ನು ರೊಮ್ಯಾಂಟಿಕ್ ಪ್ರಸಂಗ, ರೊಮ್ಯಾಂಟಿಕ್ ಪಲಾಯನ ಮುಂತಾದ ಶಬ್ಧಗುಚ್ಛ ಕೊರೆಯುತ್ತವೆ. ಅಷ್ಟೇ ಅಲ್ಲದೆ ರೊಮ್ಯಾಂಟಿಕ್ ಸನ್ನಿವೇಶ ರೊಮ್ಯಾಂಟಿಕ್ ಕಣಿವೆ ಮುಂತಾದುವೂ ಕೇಳಿ ಬರುತ್ತವೆ. ದಿಙ್ಮೂಢರಾದ ಕಾರಕೂನರಿಗೆ ವಿಪರೀತ ಆತಂಕ. ಕೊನೆಗೆ ಬಲು ಬುದ್ಧಿವಂತನೆಂದು ಹೆಸರಾಂತವನ ಬಳಿಗೆ ಓಡಿ ವಿಚಾರಿಸುತ್ತಾರೆ. ಅವನು ಸಾದೃಶ್ಯಗಳ ಸುರಿಮಳೆ ಸುರಿಸುತ್ತಾನೆ. ಹೀಗೆ: ರೊಮ್ಯಾಂಟಿಕ್ ಎಂಬುದು ಮೋಡದ ಅಂಚಿನ ಕಣ, ದುಂಬಿಯ ಝೇಂಕಾರದ ದನಿ, ಗರಿಕೆಯ ಮೇಲಿನ ಮಂಜಿನ ತೇವ, ಕಿರುಹಕ್ಕಿಯ ರೆಕ್ಕೆಯ ನೆಳಲು, ಒಳ ಆಲೋಚನೆಯ ಆಕೃತಿ-ಇತ್ಯಾದಿ. ದಂಗುಬಡೆದ ಕಾರಕೂನರಿಗೆ ಆತನ ಭಾಷಣ ಮುಗಿಯುವ ಮುನ್ನವೇ ಮತಿವಿಕಲ್ಪವುಂಟಾಗುತ್ತದೆ. ಶುಷ್ಕಸಾಹಿತ್ಯ ಚರ್ಚೆಗಳ ಅವಹೇಳನ ಇಷ್ಟೊಂದು ರಸಮಯವಾಗಿ ಚಿತ್ರಿತವಾಗಿರುವುದು ವಿರಳ.

೧೮೩೯ರಲ್ಲಿ ಅವನ ನಾಟಕ 'ಚಾಪಲ್ಯ' ರಷ್ಯನ್‍ಗೆ ತರ್ಜುಮೆಯಾಯಿತು. ಅದರ ಪರಿಚಯ ಮಾಡಿಕೊಂಡ ನಟಿ ಮದಾಂ ಆಲನ್ ಬಲವಂತದಿಂದ ಮೂಲ ನಾಟಕ ಪ್ಯಾರಿಸ್ಸಿನ ನಾಟಕರಂಗಕ್ಕೆ ಪ್ರವೇಶಿಸುವಂತೆ ಮಾಡಿದಳು. ಮ್ಯುಸೆ ೧೮೪೫ ರವರೆಗೂ ಕಥೆ ಕಾದಂಬರಿ ನಾಟಕಗಳನ್ನು ಬರೆದ. ರಾಗಾವೇಶಪೂರಿವಾದ ಕೆಲವು ಪ್ರಬಂಧಗಳನ್ನೂ ಹೊರತಂದ; ಅವುಗಳಲ್ಲಿ ಹುದುಗಿದ್ದ ಅಪೂರ್ವ ಪ್ರತಿಭೆಯನ್ನೂ ಕಾವ್ಯ ಗುಣವನ್ನೂ ಅನೇಕರು ಆಗ ಗುರುತಿಸಲಿಲ್ಲ. ಜರ್ಮನಿಯ ಬೆಕ್ಕರನ ಕಾವ್ಯಕ್ಕೆ ಉತ್ತರವಾಗಿ ಅವನು ಬರೆದ ಸಮರಗೀತೆ ವಿಶೇಷ ರಂಪ ಎಬ್ಬಿಸಿತು: ಹಲವು ಮರ್ನನ್ ಸೈನ್ಯಾಧಿಕಾರಿಗಳು ಕವಿಗೆ ದ್ವಂದ್ವಯುದ್ಧದ ಸವಾಲನ್ನು ಕಳಿಸಿದರಂತೆ. ಕೊನೆಯ ಮೂರು ವರ್ಷ ಹೃದಯರೋಗದಿಂದ ನರಳಿ ಡ ಮ್ಯುಸೆ ೧೮೫೭ ರ ಮೇ ತಿಂಗಳಿನಲ್ಲಿ ತೀರಿಕೊಂಡ. ಡ ಮ್ಯುಸೆ ಪ್ರಥಮ ದರ್ಜೆಯ ಕವಿಗಳಲ್ಲಿ ಒಬ್ಬನೆಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಎಲ್ಲ ಕವಿಗಳಿಗೂ ಭಾವತೀವ್ರತೆ ಅತ್ಯಾವಶ್ಯಕ. ಭಾವಶೂನ್ಯ ಬರೆವಣಿಗೆ ಬರಿ ವ್ಯಾವಹಾರಿಕ ವರದಿ, ಎಂದಿಗೂ ಕಾವ್ಯವಲ್ಲ. ಭಾವಶಬಲತೆಯೂ ಕಾವ್ಯಕ್ಕೆ ಸಲ್ಲದು. ಆದರೆ ಭಾವಾಧಿಕ್ಯ ಅತಿ ಹೆಚ್ಚಾಗಿ ವಿಪರೀತವಾದರೆ ಅದರಿಂದ ಅತಿರೇಕ ಉಂಟಾಗುತ್ತದೆ, ಅಥವಾ ಕವನ ಹೊರಹೊರಡುವುದೇ ಇಲ್ಲ. ವಸ್ತು ಆಲೋಚನೆ ವಿಷಯಗಳ ಅಂಶ ದೃಢವಾದ ತಳಹದಿಯಾಗಿ ಅದರ ಮೇಲೆ ಕಟ್ಟಡ ನಿಲ್ಲಬೇಕು; ಎಂದರೆ ವಿವೇಚನೆ ಬುದ್ಧಿ ವಿವೇಕ ಕವಿಗೆ ಅಷ್ಟೇ ಆವಶ್ಯಕ. ಡ ಮ್ಯುಸೆ ಹಲವೊಮ್ಮೆ ಭಾವದ ಬೆನ್ನೇರಿ ಹಾರಾಟ ನಡೆಸುವುದರಿಂದ ಅವನ ಕವಿತ್ವ ಅಸಮರ್ಪಕವಾಗುತ್ತದೆ. ತನ್ನ ಲೋಪದೋಷವನ್ನು ಅವನು ಚೆನ್ನಾಗಿ ಅರಿತಿದ್ದ. ಆದ್ದರಿಂದ ಸದಾ ಮಹಾಕವಿಯಾಗಿರಲು ಅವನಿಗೆ ಅಸಾಧ್ಯವಾಯಿತು. ಪ್ರಾಯಶಃ ಆ ಕಾರಣದಿಂದ ಫ್ರೆಂಚ್ ಅಕಾಡೆಮಿಯ ಸದಸ್ಯತ್ವ ಅವನಿಗೆ ಸಿಕ್ಕಿದ್ದು ಅವನ ಕಡೆಯ ವರ್ಷಗಳಲ್ಲಿ, ಅದೂ ಬಹಳ ಕಷ್ಟದಿಂದ. ಅದೆಂತಾದರೂ ಇರಲು, ಅವನಂಥ ಬಹುಮುಖದ ಬಲಿಷ್ಠ ಕವಿ ಅವನಾದ ಮೇಲೆ ಫ್ರಾನ್ಸಿನಲ್ಲಿ ಹುಟ್ಟಿಬರಲಿಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: