ಆಲಿ ಸಹೋದರರು

ವಿಕಿಪೀಡಿಯ ಇಂದ
Jump to navigation Jump to search

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ ಸಹೋದರರು: ಮಹಮ್ಮದ್ ಆಲಿ ಮತ್ತು ಷೌಕತ್ ಆಲಿ. 19ನೆಯ ಶತಮಾನದ 8ನೆಯ ದಶಕದಲ್ಲಿ ಜನಿಸಿದರು. ತಂದೆ ರಾಮಪುರ ರಾಜ್ಯದ ಉನ್ನತಾಧಿಕಾರಿಯಾಗಿದ್ದ. ವಿದ್ಯಾಭ್ಯಾಸ ರಾಮಪುರದಲ್ಲಿ, ಅನಂತರ ಇಂಗ್ಲೆಂಡಿನಲ್ಲಿ ಆಯಿತು. ಇವರಿಬ್ಬರಲ್ಲಿ ಮಹಮ್ಮದಾಲೀಯೇ ಹೆಚ್ಚು ಕ್ರಿಯಾಸಕ್ತ. ತಾರುಣ್ಯದಲ್ಲೇ ಇವರು ಸಾರ್ವಜನಿಕ ಕಾರ್ಯಗಳಲ್ಲಿ ಭಾಗವಹಿಸತೊಡಗಿದರು. ಮುಸ್ಲಿಂ ಲೀಗನ್ನು ಸ್ಥಾಪಿಸುವ ಕಾರ್ಯದಲ್ಲಿ ದುಡಿದರು. ಮಹಮ್ಮದಾಲಿ ಭಾಷಣ ಮಾಡುವುದರಲ್ಲಿ ಒಳ್ಳೆಯ ಹೆಸರು ಪಡೆದ. ಕಾಮ್ರೇಡ್ ಎಂಬ ಪತ್ರಿಕೆಯನ್ನು ಸ್ಥಾಪಿಸಿ (1919) ಜನತೆಗೆ ತಮ್ಮ ಶೋಚನೀಯ ಪರಿಸ್ಥಿತಿಯ ಅರಿವು ಮಾಡಿಕೊಟ್ಟ. ಆಲೀಗಢ ಕಾಲೇಜನ್ನು ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ಸಹೋದರರಿಬ್ಬರೂ ತುಂಬ ಶ್ರಮಿಸಿದರು. 1912ರಲ್ಲಿ ದೆಹಲಿ ರಾಜಧಾನಿಯಾದ ಮೇಲೆ ಅಲ್ಲಿ ಬಂದು ನೆಲೆಸಿದರು. ಹಮ್ದರ್ದ್ ಎಂಬ ಉರ್ದು ಪತ್ರಿಕೆಯನ್ನು ಪ್ರಾರಂಭಿಸಿದರು. ಮೊದಲ ಮಹಾಯುದ್ಧ ಪ್ರಾರಂಭವಾದಾಗ ತುರ್ಕಿ ಜರ್ಮನಿಯ ಕಡೆ ಸೇರಿತು. ಇವರು ತಮ್ಮ ಪತ್ರಿಕೆಗಳಲ್ಲಿ ತುರ್ಕಿಯ ಪರ ಲೇಖನಗಳನ್ನು ಬರೆಯತೊಡಗಿದರು. ಇದರಿಂದ ಜೈಲುವಾ ಸವನ್ನನುಭವಿಸಬೇಕಾಯಿತು. ಈ ಕಾಲಕ್ಕೆ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದರು. ಖಿಲಾಫತ್ ಚಳವಳಿ ಆಗ ಉಗ್ರರೂಪ ತಾಳಿತ್ತು. ಆ ಪ್ರಶ್ನೆಯನ್ನು ಬಗೆಹರಿಸುವು ದಕ್ಕಾಗಿ ಮಹಮ್ಮದಾಲೀ ಖಿಲಾಫತ್ ನಿಯೋಗದೊಂದಿಗೆ ಇಂಗ್ಲೆಂಡಿಗೆ ತೆರಳಿದ. ಅಲ್ಲಿ ಅವನ ಪ್ರಯತ್ನ ಫಲಿಸಲಿಲ್ಲ. ಹಿಂತಿರುಗುವಾಗ ಪಶ್ಚಿಮ ಏಷ್ಯದ ಮುಸ್ಲಿಂ ರಾಜ್ಯಗಳಿಗೂ ಭೇಟಿಯಿತ್ತ. ಅಲ್ಲಿಯೂ ಖಿಲಾಫತ್ ವಿಷಯದಲ್ಲಿ ಆಸಕ್ತಿ ಕಡಿಮೆಯೆಂದು ಗೊತ್ತಾಯಿತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಹೊರತು ಅದಕ್ಕೆ ಹೊರದೇಶಗಳಲ್ಲಿ ಮನ್ನಣೆ ದೊರೆಯದು ಎಂಬುದು ಅನುಭವವೇದ್ಯವಾಯಿತು. ಭಾರತಕ್ಕೆ ಹಿಂತಿರುಗಿದ ಕೂಡಲೇ ಸಹೋದರರಿಬ್ಬರೂ ಅಸಹಕಾರ ಚಳವಳಿಯಲ್ಲಿ ದುಮುಕಿದರು. ಕಾಂಗ್ರೆಸ್ಸಿನ ಸಂದೇಶವನ್ನು ದೇಶದ ನಾನಾಕಡೆ ಹರಡಿದರು. 1912ರಲ್ಲಿ ಕರಾಚಿಯಲ್ಲಿ ನಡೆದ ಖಿಲಾಫತ್ ಸಮ್ಮೇಳನದಲ್ಲಿ, ಮುಸ್ಲಿಂ ಸೈನಿಕರು ತಮ್ಮ ವೃತ್ತಿಯನ್ನು ತ್ಯಜಿಸಿ ಹೊರಬರಲು ಕರೆಕೊಟ್ಟರು. ಇದರಿಂದ ಪುನಃ ಸೆರೆಮನೆವಾಸವನ್ನನುಭವಿಸ ಬೇಕಾಯಿತು. ಆಮೇಲೆ 1923ರಲ್ಲಿ ಬಿಡುಗಡೆಯಾಯಿತು. ಆ ವರ್ಷದ ಕಾಂಗ್ರೆಸ್ಸಿಗೆ ಮಹಮ್ಮದಾಲೀಯನ್ನೇ ಅಧ್ಯಕ್ಷನನ್ನಾಗಿ ಆರಿಸಲಾಯಿತು. ಅಧ್ಯಕ್ಷಭಾಷಣದಲ್ಲಿ ಹಿಂದೂ ಮುಸ್ಲಿಂ ಐಕ್ಯವೇ ಪ್ರಧಾನ ಅಂಶವಾಗಿತ್ತು. ಮುಂದೆ ಕೌನ್ಸಿಲ್ ಪ್ರದೇಶದ ಪರವಾಗಿ ನಿಲುವು ಹೊಂದಿದ್ದ ಕಾಂಗ್ರೆಸ್ಸಿಗರನ್ನು ವಿರೋಧಿಸಲಿಲ್ಲವಾದರೂ ಕೌನ್ಸಿಲ್ನಿಂದ ದೂರವಾಗಿಯೇ ಉಳಿದುದಲ್ಲದೆ 1927ರಲ್ಲಿ ಗಾಂಧೀಜಿಯೊಡನೆ ಭಿನ್ನಾಭಿಪ್ರಾಯವುಂಟಾಗಿ ಕಾಂಗ್ರೆಸ್ ನಿಂದ ದೂರಸರಿದ. ಮುಂದೆ ಹಿಂದೂ ಮುಸ್ಲಿಂ ಗಲಭೆಗಳು ಪ್ರಾರಂಭವಾದವು. ಇದನ್ನು ಕಂಡು ಆಲೀ ಸಹೋದರರು ಬಹಳ ನೊಂದರು. ಈ ಗಲಭೆಗಳ ವಿರುದ್ಧ ಗಾಂಧೀಜಿ ನಡೆಸಿದ ಉಪವಾಸವ್ರತ ಮಹಮ್ಮದಾಲೀಯ ಮನೆಯಲ್ಲೇ ನಡೆಯಿತು. ಈ ಸಹೋದರರ ಶ್ರಮದಿಂದಲೇ ಹಿಂದೂ ಮುಸ್ಲಿಂ ಏಕತಾಸಮ್ಮೇಳನ ಫಲಕಾರಿಯಾಯಿತು. 1930ರಲ್ಲಿ ಮಹಮ್ಮದಾಲೀ ಲಂಡನ್ನಿನಲ್ಲಿ ಜರುಗಿದ ದುಂಡುಮೇಜು ಪರಿಷತ್ತಿಗೆ ಹೋಗಿ, ಸ್ವಾತಂತ್ರ್ಯ ದೊರಕುವವರೆಗೂ ತಾಯ್ನಾಡಿಗೆ ಹಿಂತಿರುಗುವುದಿಲ್ಲವೆಂದು ನೊಂದ ಹೃದಯದಿಂದ ಆ ಸಭೆಯಲ್ಲಿ ಹೇಳಿದ. ವಿಧಿವಿಲಾಸ ವೆಂಬಂತೆ ಅಲ್ಲೇ ಕಾಲವಾದ. ಕೊನೆಯುಸಿರಿನಲ್ಲೂ ಹಿಂದೂಗಳು ಮುಸ್ಲಿಮರು ಮತಭೇದವನ್ನು ಮರೆತು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಉಪದೇಶಿಸಿದ.