ಆರ್. ಕೆ. ಪದ್ಮನಾಭ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:P1010125.JPG
ವಿದ್ವಾನ್ ಆರ್. ಕೆ.ಪದ್ಮನಾಭ

ಪರಮಗುರು, ವಾದಿರಾಜಗುರುವರೇಣ್ಯರ ಶಿಷ್ಯರಾಗಿ ತಮ್ಮ ಬದುಕಿನ ಸಂಗೀತ ಸಾಧನೆಯ ಸಂಪೂರ್ಣ ಶ್ರೇಯಸ್ಸನ್ನು ತಮ್ಮ ಗುರುಗಳ ಆಶೀರ್ವಾದವೆಂದು ಭಾವಿಸಿರುವ ಆರ್. ಕೆ. ಪದ್ಮನಾಭ, [೧] ಒಬ್ಬ ಯಶಸ್ವೀ ಸಂಗೀತಕಾರ ಮತ್ತು ಸಮರ್ಥ 'ವಾಗ್ಗೇಯಕಾರ' ರೆಂದು ಹೆಸರು ಮಾಡಿದ್ದಾರೆ. ಆರ್.ಕೆ.ಪಿ ಅವರು ಬಹುಮುಖ ಪ್ರತಿಭಾ ವ್ಯಕ್ತಿತ್ವವುಳ್ಳವರು: ಶ್ರೇಷ್ಠಮಟ್ಟದ ಸಂಘಟಕರು, ಕಾರ್ಯಕರ್ತರು, ಗಂಟೆಗಟ್ಟಲೆ ಕಛೇರಿಗಳನ್ನು ನಡೆಸುವ ಶಾರೀರವನ್ನು ಹೊಂದಿದವರು, ಶ್ರೇಷ್ಠ ಕ್ರೀಡಾಪಟುಗಳು, ಈಜುಗಾರರು, ಮಲ್ಲವಿದ್ಯೆಯಲ್ಲಿ ನಿಪುಣರು, ಪುಸ್ತಕ ಪ್ರಕಟಣೆಯಲ್ಲಿ ಸಿದ್ಧಹಸ್ತರು, ಶ್ರೇಷ್ಠ ರಂಗಭೂಮಿಯ ನಟರು, ಅತ್ಯುತ್ತಮ ವಾಗ್ಮಿ. ಒಳ್ಳೆಯ ಆಕರ್ಷಕ ವ್ಯಕ್ತಿತ್ವ ಹೊಂದಿದವರು. ಕೇವಲ ಸಂಗೀತಜ್ಞರಲ್ಲದೆ, ಸಂಗೀತಾಲಯಗಳನ್ನು ಸ್ಥಾಪಿಸಿ, ಅಲ್ಲಿ ನೂರಾರು ಸಂಗೀತರಸಸ್ವಾದಕರನ್ನು ತಯಾರುಮಾಡಿ, ಅವರಲ್ಲಿನ ದೈತ್ಯ ಪ್ರತಿಭೆಗಳನ್ನು ಗುರುತಿಸಿ, ಸಮಾಜಕ್ಕೆ ಕೊಡುವ ಕೊಡುವ ಕಾರ್ಯವನ್ನು ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ವಿದ್ವಾನ್ ಆರ್. ಕೆ.ಪದ್ಮನಾಭ
ವಿದ್ವಾನ್ ಆರ್. ಕೆ.ಪದ್ಮನಾಭ

'ಸಂಗೀತಕೃಷಿ'[ಬದಲಾಯಿಸಿ]

'ಅರ್.ಕೆ.ಪಿ.ಯವರ ಯಶಸ್ವೀ ಸಂಗೀತದ ಹಿರಿಮೆ ಗರಿಮೆಗಳು, ಶೃತಿನಾದ ಸೌಖ್ಯ, ಭೂವೋತ್ಪೂರ್ಣ ಸ್ಪಷ್ಟೋಚ್ಚಾರ, ಕ್ಲಿಷ್ಟ ಗಮಕಗಳ ಸುಲಲಿತ ಸಂಚಾರ, ಲಯದ ಮೇಲಿನ ಪ್ರಭುತ್ವ, ನವೀನ ಪ್ರಯೋಗಶೀಲತೆ, ಆಕರ್ಷಕ ಶೈಲಿ, ಶೈಕ್ಷಣಿಕ ಮೌಲ್ಯವುಳ್ಳಂತಹ ಸಂಗೀತ, ಎಲ್ಲಕ್ಕಿಂತ ಮಿಗಿಲಾದದ್ದು, ವಿದ್ವದ್ಜನರಲ್ಲದೆ ಜನ-ಸಾಮಾನ್ಯರೆಲ್ಲರನ್ನೂ ಆಕರ್ಷಿಸುವ ಮನೋರಂಜನ ಶೈಲಿ. ಹೃದಯ ವೈಶಾಲ್ಯತೆಯನ್ನು ಹೊಂದಿದ ವ್ಯಕ್ತಿತ್ವ. ಹೀಗಾಗಿ, ಪಂ. ಆರ್.ಕೆ.ಪಿ. ಯವರು ಪ್ರಸಿದ್ದರಾಗಿದ್ದಾರೆ.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಹಾಸನ ಜಿಲ್ಲೆಯ 'ರುದ್ರಪಟ್ಟಣ' ದಲ್ಲಿನ, ಒಂದು ಸಂಗೀತ ಪ್ರಧಾನವಾದ ಪರಿವಾರದಲ್ಲಿ ಜನನ. ತಂದೆಯವರು ಒಬ್ಬ ಹೆಸರುವಾಸಿಯಾಗಿದ್ದ, ಯಜುರ್ವೇದ ಪಂಡಿತರು. ಮಹಾಸಾಧ್ವಿ ಶಾರದಮ್ಮನವರು, ಪದ್ಮನಾಭರ ತಾಯಿಯವರು. 'ವಿದ್ವಾನ್ ನಂಜುಂಡಸ್ವಾಮಿ' ಹಾಗೂ ' ವಿದ್ವಾನ್ ಸೀತಾರಾಮಶಾಸ್ತ್ರಿ,' ಅವರಿಂದ ಸಂಗೀತದ ಪ್ರಾರಂಭಿಕ ಶಿಕ್ಷಣ, ಮುಂದೆ 'ವಿಜಯ ಸಂಗೀತ ವಿದ್ಯಾಲಯ' ದ 'ಪ್ರೊ.ಹೆಚ್.ವಿ. ಕೃಷ್ಣಮೂರ್ತಿ' ಅವರಿಂದ ಉನ್ನತ ಮಾರ್ಗದರ್ಶನಗಳನ್ನು ಪಡೆದರು. ಬಿ. ಎಸ್ಸಿ. ಆನರ್ಸ್ [ಭೌತಶಾಸ್ತ್ರ] ಬೆಂಗಳೂರಿನ ವಿಶ್ವವಿದ್ಯಾಲಯದಿಂದ.

ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ದೈತ್ಯಸಾಧನೆ[ಬದಲಾಯಿಸಿ]

ಪ್ರತಿಷ್ಠಿತ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ' ದಲ್ಲಿ ೩೦ ವರ್ಷಗಳ ಸೇವೆಯ ನಂತರ ನಿವೃತ್ತರಾದರು. ಅವರ ಸಂಗೀತದ ಗೀಳು ೨೫ ನೇ ವಯಸ್ಸಿನಲ್ಲಿಯೇ ಎಂಬುದು, ಅವರನ್ನು ಹತ್ತಿರದಿಂದ ಬಲ್ಲರಿಗೆ ಗೊತ್ತು. ಆದರೆ ಅವರಿಗೆ ಸ್ವಜನರಿಂದಲೇ ಮುಖಭಂಗವಾಯಿತು. ಪ್ರೋತ್ಸಾಹ ಸಿಕ್ಕಲಿಲ್ಲ. ಸುಮಾರು ೧೫ ವರ್ಷಗಳ ಕಾಲ ಅಂಥಹ ವಾತಾವರಣದಲ್ಲೇ ವಾದಿರಾಜರ ಆಶ್ರಯದಲ್ಲಿ ಎಡೆಬಿಡದೆ ಸಂಗೀತಾಭ್ಯಾಸ ಮಾಡಿ ತಮ್ಮ ಸಂಗೀತದ ಭವಿಷ್ಯವನ್ನು ತಾವೇ ರೂಪಿಸಿಕೊಂಡರು. ಹಾಗೆಯೇ ಕಠಿಣ ಪರಿಶ್ರಮದಿಂದ ಹಂತ-ಹಂತವಾಗಿ ಮೇಲೇರಿ, ತಮ್ಮದೇ ಆದ ಒಂದು ವಿಶಿಷ್ಠ ಛಾಪನ್ನು ಸಂಗೀತ ಕ್ಷೇತ್ರದಲ್ಲಿ ಮೂಡಿಸಿದರು. ಮೈಸೂರು ರಾಜ್ಯದ ಶ್ರೇಷ್ಟಮಟ್ಟದ ಸಂಗೀತ ವಿದ್ವಾಂಸರಾಗಿ, ತಮ್ಮ ಪ್ರಭುತ್ವವನ್ನು ಸ್ಥಾಪಿಸಿಕೊಂಡರು.

ಪ್ರಶಸ್ತಿ/ಪುರಸ್ಕಾರಗಳು[ಬದಲಾಯಿಸಿ]

ಹೀಗೆ ಹಲವಾರು ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಇದಲ್ಲದೇ ಬೆಂಗಳೂರಿನ ಕೆ.ಎಸ್.ಆರ್.ಟಿ.ಸಿ ಲೇಹೌಟ್ ನಲ್ಲಿ ಒಂದು ರಸ್ತೆಗೆ ಇವರ ಹೆಸರಿಡಲಾಗಿದೆ [೨].

'ಶಾರದಾ ಕಲಾಕೇಂದ್ರದ ಸ್ಥಾಪನೆ '[ಬದಲಾಯಿಸಿ]

ನವೆಂಬರ್, ೧೯೯೦ ರಲ್ಲಿ, 'ಶಾರದಾ ಕಲಾಕೇಂದ್ರ ಸಂಗೀತ ಸಂಸ್ಥೆಯನ್ನು ಹುಟ್ಟುಹಾಕಿ ನಿರಂತರ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ 'ಗಾನಚಕ್ರ', ವೆಂಬ ಸಂಗೀತ ಪ್ರವಾಸ ಕಾರ್ಯಕ್ರಮಗಳು ಆಗಿಂದಾಗ್ಯೆ ನಡೆಯುತಲೇ ಇರುತ್ತವೆ. ಸಂಗೀತಾಸಕ್ತರ ಈ ಪ್ರವಾಸದಲ್ಲಿ ಶಿಷ್ಯರು ತಮ್ಮ ಜ್ಞಾನಾರ್ಜನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಸಂಗೀತ ಪ್ರದರ್ಶನಗಳನ್ನು ಕೊಟ್ಟು, ಕೇಳಿ, ಉತ್ತಮ ಕಲಾವಿದರು, ಶ್ರೋತೃಗಳೂ, ಸಂಘಟಕರೂ, ಗುಣಮಟ್ಟದ ನಾಯಕರೂ ಆಗಬೇಕೆನ್ನುವ ಮನೋಭಾವದಿಂದ ಮಾಡಲಾಗುತ್ತಿದೆ. ಇಂಗ್ಲೆಂಡ್ ನಲ್ಲೂ ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟು ತಮ್ಮ ಕಲಾಪ್ರವಾಸವನ್ನು ವಿದೇಶಗಳಿಗೂ ಹರಿಸಿದ್ದಾರೆ, ಸುಮಾರು ೨ ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಿನ 'ಹುಳಿಮಾವು' ಎಂಬ ಪರಿಸರದಲ್ಲಿ ನಿರ್ಮಿತವಾಗಿರುವ, ಹರಿದಾಸರಾದ 'ವಾದಿರಾಜ ಕಲಾ ಭವನ,' ಸಂಗೀತಕ್ಕಾಗಿಯೇ ಮುಡುಪಾಗಿಟ್ಟ ಏಕೈಕ ಭವನ. ೧೯೯೯ ರಲ್ಲಿ 'ಶ್ರೀ ಮಧ್ವಾಧಿರಾಜ ಆರಾಧನಾ ಟ್ರಸ್ಟ್' ಮೂಲಕ ಉದ್ಘಾಟನೆಗೊಂಡು ಈಗ ಬೆಂಗಳೂರಿನ ಪ್ರಮುಖ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಹಾಗೆಯೇ ಇಲ್ಲಿನ 'ಗಾನ ಮಂದಿರ' ಸುಂದರವಾಗಿದೆ. ಅತ್ಯುತ್ತಮ ಧ್ವನಿ ವ್ಯವಸ್ಥೆಯನ್ನೊಳಗೊಂಡ ಆದರ್ಶ ಸಂಗೀತ ಸಭಾಂಗಣವೆಂದು ಹೆಸರು ಮಾಡಿದೆ. ಇಂತಹ ದೈವೀಕ ಪರಿಸರದಲ್ಲಿ ಅನೇಕ ವಾಗ್ಗೇಯಕಾರರ ಆರಾಧನಾದಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಕರ್ನಾಟಕದಾದ್ಯಂತ ಶ್ರೋತೃಗಳು ಬಂದು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ.

ಮನೆ ಮನೆಗಳಲ್ಲಿ ಸಂಗೀತ ಕಾರ್ಯಕ್ರಮಗಳ ಆಯೋಜನೆ[ಬದಲಾಯಿಸಿ]

ವಿದ್ಯಾರ್ಥಿಗಳು, ಸಂಗೀತಾಸಕ್ತರು, ಒಂದೆಡೆ ಕಲೆತು ಅವಿರತ ಸಂಗೀತ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿದ್ದಾರೆ. ಶ್ರೀಯುತರು, 'ವಾದಿರಾಜ ಬಡಾವಣೆ' ಯ ಸಂಸ್ಥಾಪಕರೂ ಹೌದು. 'ರುದ್ರಪಟ್ಟಣ' ದಲ್ಲಿನ 'ನಾದಲೋಕ' ವೆಂಬ ವಿನೂತನ ಬಡಾವಣೆ ನಿರ್ಮಿತವಾಗಿದ್ದು, 'ಸರಸ್ವತಿ', 'ಸುಪ್ರದೀಪ', 'ಬಿಂದುಮಾಲಿನಿ', ಮುಂತಾದ ರಾಗಗಳ ಪ್ಲಾಟ್ ಗಳು ಎದ್ದು ನಿಂತಿವೆ. ಮುಖ್ಯರಸ್ತೆಯಲ್ಲಿ 'ಮೇಳ ಮಾಲಾವೃತ್ತ' ರಚನೆಯಾಗಿ ಅದರಲ್ಲಿ ೧೨ ಚಕ್ರಗಳನ್ನು ಇರಿಸಲಾಗಿದೆ. (ಶ್ರೀಮಂತವಾದ ಕರ್ನಾಟಕ ಸಂಗೀತದಲ್ಲಿ ಮುಖ್ಯರಾಗಗಳು ಅಂದರೆ, ಥಾಟ್ಸ್ ಮೇಳ ಕರ್ತಗಳು)ಗಳೇ ೭೨ ಸಂಖ್ಯೆಯಲ್ಲಿದ್ದು ಮುಖ್ಯವಾಗಿ ಅವನ್ನು (೩೬-೩೬) ಶುದ್ಧಮಧ್ಯಮ, ಪ್ರತಿಮಧ್ಯಮ ರಾಗಗಳೆಂದು ವಿಂಗಡಿಸಿ, ಪ್ರತಿ-೬ ರಾಗಗಳು ಒಂದೊಂದು ಚಿತ್ರದಲ್ಲಿದ್ದು ಒಟ್ಟು ಆ ೧೨ ಚಿತ್ರಗಳನ್ನು ಕ್ರಮವಾಗಿ ಇಂದು, ನೇತ್ರ, ಅಗ್ನಿ, ವೇದ, ಬಾಣ, ಋತು, ಋಷಿ, ವಸು, ಬ್ರಹ್ಮ, ದಿಕ್ಕು, ರುದ್ರ, ಮತ್ತು ಆದಿತ್ಯವೆಂದು ಅವುಗಳ ಸಂಖ್ಯೆಗನುಗುಣವಾಗಿ, ಹೆಸರಿಸಲಾಗಿದೆ. ಇವರು ಹುಟ್ಟು ಹಾಕಿದ, 'ನಾದಾಲಯ' ವೂ ಸಂಗೀತ ಮತ್ತು ಲಲಿತಕಲೆಗಳ ಕೇಂದ್ರವಾಗಿದ್ದು ಸಂಪರ್ಕ ತರಗತಿಗಳನ್ನು ನಡೆಸುತ್ತಿದೆ. ಆರ್.ಕೆ.ಪದ್ಮನಾಭರೇ ಸ್ವತಃ ವಾಗ್ಗೇಯಕಾರರಾದವರು, ಪುರುಂದರದಾಸ, ವಿಜಯದಾಸ, ಗೋಪಾಲದಾಸ ಹೀಗೆ ಹಲವಾರು ದಾಸವರೇಣ್ಯರ ಏಕವ್ಯಕ್ತಿ ವಾಗ್ಗೇಯಕಾರರ ಕೃತಿಗಳನ್ನಾಧರಿಸಿ, ಸಂಪೂರ್ಣ ಕಛೇರಿಗಳನ್ನು ತಾವೂ ನಡೆಸಿಕೊಟ್ಟು, ಶಿಷ್ಯರಿಂದಲೂ ನಡೆಸಿದ್ದಾರೆ. 'ಪದ್ಮನಾಭ ದಾಸ' ನೆಂಬ ಮುದ್ರೆಯಿಂದ ಸುಮಾರು ೮೦ ಕ್ಕೂ ಹೆಚ್ಚು ಕೃತಿಗಳನ್ನು ವಾದಿರಾಜರು, ಈಶ್ವರ, ಗುರು, ಶಂಕರಾಚಾರ್ಯರು, ದೇವಿ ಸರಸ್ವತಿ, ಆಂಜನೇಯ ಮುಂತಾದ ದೇವಾನುದೇವತೆಗಳನ್ನು ಸ್ತುತಿಸಿ ರಚಿಸಿದ್ದು ಸಂಗೀತಾತ್ಮಕ ವಿವರಣೆಗಳೊಂದಿಗೆ ಶೈಕ್ಷಣಿಕ ಮೌಲ್ಯ ಉಳ್ಳದ್ದಾಗಿದೆ. 'ವಕುಳಾಬರಣ ರಾಗ ' ದಲ್ಲಿ ೧೧೨ ನಾಮಾವಳಿಗಳಿರುವ 'ಗುರುವಾದಿರಾಜ ನಾಮಾವಳಿ' ವಿಶೇಷ ರಚನೆಯಾಗಿದ್ದು, 'ಭಾವೀಸಮೀರ ಗುರುಸೇವಾ ಪುರುಂದರ'ಪ್ರಶಸ್ತಿ,' ಗೆ ಶ್ರೀಯುತರರು ಭಾಜನರಾಗಿದ್ದಾರೆ.

'ಹೊಸ ರಾಗಗಳ ಸಂಯೋಜನೆ[ಬದಲಾಯಿಸಿ]

'ಹಯಾಸ್ಯೇ', 'ಮಾನಸೋಲ್ಲಾಸಿನೀ', 'ಪ್ರಭಾಮಣಿ', 'ರಾಮಸುಧ', ಎಂಬ ಹೊಸರಾಗಗಳನ್ನು ಸೃಷ್ಟಿಸಿ ಕರ್ನಾಟಕ ಸಂಗೀತಕ್ಕೆ ವಿಶೇಷ ಕೊಡುಗೆಯನ್ನು ಸಲ್ಲಿಸಿದ್ದಾರೆ. 'ರಾಗಪ್ರಯೋಗ ಚಕ್ರವರ್ತಿ',ಎಂಬ ಬಿರುದಿಗೆ ಅರ್ಹರಾಗಿದ್ದಾರೆ. ಪ್ರಕೃತಿಮಾತೆಯನ್ನು ಉದ್ದೇಶಿಸಿ, 'ಏತಕೀ ಮುನಿಸು ಪ್ರಕೃತಿಮಾತೆ' ಎಂಬ ವಿಶೇಷ ರಚನೆ, ಗೇಯ ಪ್ರಪಂಚದಲ್ಲಿ ಹೊಸ ಸವಾಲನ್ನು ಹೊಸ ಆಯಾಮವನ್ನೂ ಸೃಷ್ಟಿಸಿದೆ. 'ವರ್ತಮಾನದ ಶಬ್ದರಚನಾ ಮಾಲಿಕೆಯ ವಾಗ್ಗೇಯಕಾರ' ರೆಂದು 'ಸಂಗೀತ ಪ್ರೇಮಿಗಳು,' ವಿಮರ್ಶಕರು, ಅವರನ್ನು ಗುರುತಿಸುತ್ತಾರೆ. ಪ್ರತಿವರ್ಷವೂ ವಾದಿ ರಾಜ ಕಲಾಭವನದಲ್ಲಿ, ೪ ದಿನಗಳು ಉಚಿತ ಶಿಬಿರವನ್ನು ಆರಂಭಿಕ ಹಂತದ ವಿದ್ಯಾರ್ಥಿಗಳಿಗೆ ಹಾಶ್ಗೂ ಉದಯೋನ್ಮುಖ ಕಲಾವಿದರಿಗಾಗಿ ಆಯೋಜಿಸುತ್ತಾ ಬಂದಿದ್ದಾರೆ. ರುದ್ರಪಟ್ಟಣ, ಹಾಗೂರಾಜ್ಯದ ಅನೇಕಕಡೆಗಳಲ್ಲಿ ನಿರಂತರ ಸಂಗೀತ ಶಿಕ್ಷಣ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದಾರೆ.

ಗೋಷ್ಟಿಗಾನವನ್ನು ಜನಪ್ರಿಯಗೊಳಿಸಿದವರು[ಬದಲಾಯಿಸಿ]

ಅಂದರೆ ಸಾಮೂಹಿಕವಾಗಿ ಹಾಡುವ ಕಲೆ, 'ಅದ್ವರ್ಯು' ಗೋಷ್ಟಿಯಲ್ಲಿ, ನೂರಾರು ಕೃತಿಗಳನ್ನು ಬೋಧಿಸಿ, ಸಹಸ್ರ ಕಂಠಗಳಲ್ಲಿ ಹಾಡಿಸಿದ್ದಾರೆ.'ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು,ನವಗ್ರಹ ಕೃತಿಗಳು,ಚತುರ್ದಶ ರಾಗಮಾಲಿಕಾ,ತ್ಯಾಗರಾಜರ ಘನ ಪಂಚರತ್ನ ಕೀರ್ತನಗಳು ಶ್ರೀ ವಾದಿರಾಜ ಸ್ವಾಮಿಗಳ ಲಕ್ಷ್ಮೀ ಶೋಭಾನೆ, ಶ್ರೀ ಪುರಂದರ ದಾಸರ ನವರತ್ನ ಕೀರ್ತನಗಳು, ಶ್ಯಾಮಾಶಾಸ್ತ್ರಿಗಳ ಸ್ವರಜತಿಗಳು, ಮುಂತಾದ ಕ್ಲಿಷ್ಟ ಪಾಠಗಳನ್ನು ಸಾವಿರಾರು ಕಂಠಗಳು ಹಾಡುವಂತೆ ಮಾಡಿ ಪೂಜನೀಯರಾಗಿದ್ದಾರೆ. ಕರ್ನಾಟಕದ ಗೋಷ್ಠಿಗಾನದಲ್ಲಿ ಸಾವಿರಕ್ಕೂ ಹೆಚ್ಚು ಶಿಷ್ಯವೃಂದವನ್ನು ಹೊಂದಿದ ಗುರುಗಳು ಪದ್ಮನಾಭರೊಬ್ಬರೆ.

ಶ್ರೀ ವಾಸುದೇವಾಚಾರ್ಯರ ಸಮಗ್ರ ಕೃತಿಗಳ ದ್ವನಿಸುರುಳಿ[ಬದಲಾಯಿಸಿ]

ಶ್ರೀ ವಾಸುದೇವಾಚಾರ್ಯರ ಸಮಗ್ರ ಕೃತಿ, ವರ್ಣ, ತಿಲ್ಲಾನ, ಚಾವಳಿಗಳನ್ನೊಳಗೊಂಡ ೨೧ ಸಂಪುಟಗಳ ದ್ವನಿಸುರುಳಿಗಳನ್ನು ಆಚಾರ್ಯರ ಮೊಮ್ಮಗ, ಕರ್ನಾಟಕ ಕಲಾ ಶ್ರೀ ಬಿರುದಾಂಕಿತ ಶ್ರೀಯುತ 'ಎಸ್. ಕೃಷ್ಣಮೂರ್ತಿ' ಯವರ ನೆರವಿನೊಂದಿಗೆ ೨೪ ಪುಸ್ತಕಗಳನ್ನೂ ಹೊರತಂದು ಆಚಾರ್ಯ ಸಮಗ್ರ ಕೊಡುಗೆ ಕಲಾವಿದರಿಗೆ ತಲುಪುವಂತೆ ಮಾಡಿದ್ದಾರೆ. ಕರ್ನಾಟಕದ ಪ್ರಸಿದ್ಧ ವಿದ್ವಾಂಸರುಗಳಲ್ಲಿ ಅನೇಕರು ದ್ವನಿಸುರುಳಿಗಳಲ್ಲಿ ಹಾಡಿದ್ದಾರೆ.

ಕೃತಿಗಳು[ಬದಲಾಯಿಸಿ]

ಶ್ರೀ ವಾಸುದೇವಾಚಾರ್ಯರ ಸಮಗ್ರ ಕೃತಿ, ವರ್ಣ, ತಿಲ್ಲಾನ, ಜಾವಳಿಗಳನ್ನೊಳಗೊಂಡ ೨೧ ಸಂಪುಟಗಳ ಧ್ವನಿಸುರುಳಿಗಳನ್ನು ಆಚಾರ್ಯರ ಮೊಮ್ಮಗ, ಕರ್ನಾಟಕ ಕಲಾ ಶ್ರೀ ಬಿರುದಾಂಕಿತ ಶ್ರೀಯುತ ಎಸ್. ಕೃಷ್ಣಮೂರ್ತಿಯವರ ನೆರವಿನೊಂದಿಗೆ ೨೧ ಪುಸ್ತಕಗಳನ್ನು ಹೊರತಂದು ಆಚಾರ್ಯರ ಸಮಗ್ರ ಕೊಡುಗೆ ಕಲಾವಿದರಿಗೆ ತಲುಪುವಂತೆ ಮಾಡಿದ್ದಾರೆ. ಕರ್ನಾಟಕದ ಸುಪ್ರಸಿದ್ಧ ವಿದ್ವಾಂಸರುಗಳಲ್ಲಿ ಅನೇಕರು ಆ ಧ್ವನಿಸುರಳಿಗಳಲ್ಲಿ ಹಾಡಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ೭೨ ಮೇಳಕರ್ತ ರಾಗಗಳಲ್ಲಿಯೂ ಕನ್ನಡದಲ್ಲಿ ಕೃತಿ ಗಳನ್ನು ರಚಿಸಿದ ಸಂಗೀತಕಾರರು ಆರ್.ಕೆ.ಪದ್ಮನಾಭರವರು. ಈ ಕೃತಿಗಳನ್ನು ಮೇಳಮಾಲಾ ಎಂಬ ಪುಸ್ತಕದ ಅಡಿಯಲ್ಲಿ ಬಿಡುಗಡೆ ಮಾಡಿಸಿದ್ದಾರೆ. ಇವರು ತಮ್ಮ ಕೃತಿಗಳನ್ನು ಪದ್ಮನಾಭದಾಸಎಂಬ ಅಂಕಿತದೊಂದಿಗೆ ರಚಿಸುತ್ತಾರೆ. ಅವರ ಕೃತಿಗಳ ಸಂಕ್ಷಿಪ್ತ ವಿವರಣೆ

 • ೭ ಸಂಪುಟಗಳನ್ನು ಹೊಂದಿರುವ ವಾದಿರಾಜ ಕೃತಿಗಳು,
 • ದೀಕ್ಷಿತರ ನವಗ್ರಹ ಕೃತಿಗಳು,
 • ೨ ಸಂಪುಟಗಳ ದೀಕ್ಷಿತರ ಕೃತಿಗಳಾಧಾರಿತ ಗುರುವಂದನ,
 • ತ್ಯಾಗರಾಜರ ಪಂಚರತ್ನ ಕೃತಿಗಳು,
 • ದೀಕ್ಷಿತರ ನವಾರಣ ಕೃತಿಗಳು,
 • ಪುರಂದರ ಕೃತಿಮಾಲ ಪುರುಂದರ ನವರತ್ನ,
 • ತ್ಯಾಗರಾಜ ಸಂಕೀರ್ತನಾಮಾಲಾ,
 • ಕನಕ ಸಂಕೀರ್ತನೆ ಮಾಲಾ,
 • ಪರಿಮಳ',
 • ವಿಜಯದಾಸರ ಕೃತಿಗಳು,
 • ಶ್ರೀಕೃಷ್ಣ ಭಜಮಾನಸ,
 • ಮೂರು ಸಂಪುಟಗಳ ಪರಂಪರಾ,
 • ಸಾಮಾನ್ಯರಿಗೂ ವಿವಿಧ ರಾಗಗಳನ್ನು ಪರಿಚಯಿಸುವ ಸದೃಷ್ಟಿಯಿಂದ ರಾಗದ ಆರೋಹಣ, ಅವರೋಹಣ , ಸೂಕ್ಷ್ಮರಾಗ ಪರಿಚಯದೊಂದಿಗೆ ಬೋಧಪ್ರದ ಸಂಯೋಜನೆಗಳ ೯ ಪುಟಗಳಿರುವ ಸಮರ್ಪಣ, ಶಿವನಾಮರಾಗಗಳ ಸಮರ್ಪಣ-೨
 • ಸ್ವರಚಿತ ಕೃತಿಗಳ ಸಮರ್ಪಣ-೩,
 • 'ವಾದಿರಾಜ ಕೃತಿಗಳ ನೇರ ಕಛೇರಿ ಪ್ರಸ್ತುತಿಯ ೬ ಸಂಪುಟಗಳು'
 • ಶ್ರೀ ಮುತ್ತುಸ್ವಾಮಿ ದೀಕ್ಷಿತರ ಚತುರ್ದಶ ರಾಗಮಾಲಿಕೆ,
 • ಶ್ರೀ ವಿಶ್ವನಾಥಂ ಭಜೇಹರಿ,
 • ವಾದಿರಾಜರ ಲಕ್ಷ್ಮೀಶೋಭಾನೆ,
 • ಶ್ರೀ ಪಾದರಾಜರ ಕೃತಿಗಳು,
 • ದೇವಿ ದರ್ಶನ,
 • ಮೇಳ ಮಾಲಾ.

ಅಸಂಖ್ಯ ಧ್ವನಿಸುರಳಿಗಳ ಕರ್ತೃ[ಬದಲಾಯಿಸಿ]

ಹೀಗೆ ಅಸಂಖ್ಯಾತ ದ್ವನಿ-ಸುರಳಿಗಳನ್ನು ಶ್ರೀಯುತರು ಹೊಂದಿದ್ದು ಸಂಗೀತ ಪ್ರಪಂಚದಲ್ಲಿ ದಾಖಲೆಯನ್ನೇ ಮಾಡಿದ್ದಾರೆ. ಈ ಧ್ವನಿಸುರಳಿಗೆ ಅವರೇ ಹಾಡಿರುವುದಲ್ಲದೆ, ಅವರ ಶಿಷ್ಯಂದಿರು ಹಾಗೂ ಖ್ಯಾತ 'ವಿದುಷಿಯರಾದ, ಡಾ. ಸುಕನ್ಯಾ ಪ್ರಭಾಕರ್', 'ವಿದೂಷಿ ಎಂ. ಎಸ್. ಲೀಲ', ಮೊದಲಾದವರು ದ್ವನಿ ನೀಡಿದ್ದಾರೆ. ಇವೆಲ್ಲಾ ಅವರ ಹವ್ಯಾಸಗಳಲ್ಲಿ ಪ್ರಿಯವಾದುವು. ಇವುಗಳ ಉದ್ದೇಶ ಧನಾರ್ಜನೆಯಲ್ಲ. ಕಲಾಸೇವಾ ಮನೋಭಾವ ಅವರನ್ನು ಪ್ರೇರೇಪಿಸಿದೆ. [೩]

'ಕರ್ನಾಟಕ ಗಾನಕಲಾ ಪರಿಷತ್ತಿನ ಅಧ್ಯಕ್ಷ'ರಾಗಿ ಸೇವೆ[ಬದಲಾಯಿಸಿ]

ಪ್ರಸ್ತುತದಲ್ಲಿ ಆರ್.ಕೆ.ಪಿಯವರು,'ಕರ್ನಾಟಕ ಗಾನಕಲಾ ಪರಿಷತ್ತಿನ ಅಧ್ಯಕ್ಷ'ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಕರ್ನಾಟಕದ ಸಂಗೀತ-ನೃತ್ಯ-ನಾಟಕ ಅಕಾಡೆಮಿ' ಯ ಸದಸ್ಯ. ರುದ್ರಪಟ್ಟಣ ರಾಮನಾಥಪುರ, ನಂಜನಗೂಡು, ಮುಂತಾದ ಪುಟ್ಟ ಗ್ರಾಮಗಳಲ್ಲಿ ಯಶಸ್ವಿಯಾಗಿ ಸಂಗೀತೋತ್ಸವಗಳನ್ನು ನಡೆಸುತ್ತಾ ಗ್ರಾಮೀಣ ಜನತೆಗೆ ಸಂಗೀತದ ಒಲವನ್ನು ಉಣಬಡಿಸಿದರು.

ಅತ್ಯುತ್ತಮ ಕ್ರೀಡಾ-ಪಟು[ಬದಲಾಯಿಸಿ]

ಶಾಲಾ-ಕಾಲೇಜುಗಳಲ್ಲಿ, ವಾಲೀಬಾಲ್, ಖೊಖೊ, ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗಳನ್ನು ಆಡುತ್ತಿದ್ದರು. ಬಿ.ಎಸ್ಸಿ ಪದವಿಯ ಸಮಯದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಿ, ಸರ್ವೋತ್ಕೃಷ್ಟ ಕ್ರೀಡಾಪಟುವೆಂಬ ಪದವಿ ಪಡೆದರು. ಉತ್ತಮ ಈಜುಗಾರ, ಮಲ್ಲರೂ ಹೌದು. ಒಬ್ಬ ಪ್ರತಿಭಾನ್ವಿತ ರಂಗನಟರು, ಅತ್ಯುತ್ತಮ ಕ್ರೀಡಾಪಟು, ನಾಟಕಗಳಲ್ಲಿ ಪ್ರಧ್ನ ಭೂಮಿಕೆಯನ್ನು ನಿರ್ಮಿಸಿದ್ದಾರೆ. 'ದಾಸ ಪುರುಂದರ, 'ನಾದಜ್ಯೋತಿ, ಮುತ್ತುಸ್ವಾಮಿ ದೀಕ್ಷಿತರು ದೇವೀ ಉಪಾಸಕ, ಶಾಮಾಶಾಸ್ತ್ರಿ, ಸದ್ಗುರು ತ್ಯಾಗರಾಜ, 'ಶ್ರೀಮಧ್ವಾದಿರಾಜ ದರ್ಶನ' ಮೊದಲಾದ ನಾಟಕಗಳ ಪ್ರಧಾನ ಭೂಮಿಕೆಗಳನ್ನು ನಿರ್ವಹಿಸಿದ್ದಾರೆ. ಶ್ರೀ ತ್ಯಾಗರಾಜರ 'ಪ್ರಹ್ಲಾದ ಭಕ್ತವಿಜಯ' ಗೇಯ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ, ರಂಗರೂಪ ನೀಡಿ, ನಿರ್ದೇಶಿಸಿ, ಸ್ವತಃ ತಾವೇ ತ್ಯಾಗರಾಜರ ಪಾತ್ರವನ್ನು ನಿರ್ವಹಿಸಿ ವಿಮರ್ಶಕರ ಪ್ರಶಂಸೆಗೆ ಭಾಜನ ರಾಗಿದ್ದಾರೆ. ಪ್ರಸ್ತುತದಲ್ಲೂ ರಂಗ ಭೂಮಿಯ ಕಲಾವಿದರಾಗಿದ್ದಾರೆ.

ಕಾರ್ಯಯೋಜನೆಗಳು[ಬದಲಾಯಿಸಿ]

 • ೨೦೦೪ ರಲ್ಲಿ ನಡೆದ ರುದ್ರಪಟ್ಟಣದಲ್ಲಿ, ಸಂಗೀತ ನೃತ್ಯನಾಟಕದ ಆಯೋಜನೆ.
 • ೨೦೦೭ ರಲ್ಲಿ ಶ್ರೀ ಮಧ್ವಾಧಿರಾಜ ಗಾನ -ಜ್ಞಾನಯಜ್ಞ, ಅಖಂಡ ನಾದ-ಸೇವಾಕರ್ಯಕ್ರಮ.
 • ೨೦೦೬ ರ 'ಮಹಾರುದ್ರ ಹೋಮ',

ಇತ್ತೀಚೆಗೆ ತಂಬೂರಿಯಾಕಾರದ ಸಪ್ತ ಸ್ವರ ದೇವತಾ ಧ್ಯಾನಮಂದಿರ ,ದ ನಿರ್ಮಾಣವಾಯಿತು. ಇವರ ಇನ್ನೊಂದು ದಾಖಲೆ, ಅವಿರತವಾಗಿ ೨೪ ಗಂಟೆಗಳ ಕಾಲ, ಕಛೇರಿ ಕಾರ್ಯಕ್ರಮಗಳಲ್ಲಂದು ಕೊನೆಯ ಕಛೇರಿ ಪರರು. ವಿಶೇಷ-ತಾನಗಾನದಲ್ಲಿ ಅಸಾಮಾನ್ಯ ರೀತಿಯಲ್ಲಿ ತಮ್ಮದೆ ಆದ ವಿಶೇಷ ಭಿನ್ನ ಶೈಲಿಯನ್ನು ಪ್ರದರ್ಶಿಸಿ ವಿಶಿಷ್ಟ ಏಕೈಕ ಗಾಯಕನೆಂಬ ಛಾಪನ್ನು ಮೂಡಿಸಿದ್ದಾರೆ. ಘಂಟಾತಾನ, ಅಶ್ವತಾನಾ, ನಾಭಿತಾನ, ಶಂಖತಾನ, ಮಯೂರ ತಾನ, ಮೇಘತಾನ, ಹೀಗೆ ಹಲವಾರು ಗಾನಪ್ರಕಾರಗಳನ್ನು ಶ್ರೋತೃಗಳು ಅನುಭವಿಸುವಂತೆ ಹಾಡುವ ಸಾಮರ್ಥ್ಯ ಅವರದು. ಹಿಂದೂಸ್ತಾನಿ ಸಂಗೀತ ಕಛೇರಿಗಳಲ್ಲೂ ತಮ್ಮ ವಿಶಿಶ್ಥಪ್ರತಿಭೆಯಿಂದ ಕರ್ನಾಟಕಸಂಗೀತ ಹಾಗೂ ಹಿಂದೂಸ್ತಾನಿಗಳ ಅನುಪಮ ಮೆರುಗನ್ನೂ ಒದಗಿಸಿದರು.

ವಾದಿರಾಜ ಕಲಾಭವನದ ಕಾರ್ಯಕಲಾಪಗಳು[ಬದಲಾಯಿಸಿ]

ಪಂಡಿತ.ಪುಟ್ಟರಾಜ ಗವಾಯಿಗಳ ಒಂದು ವಾರದ ಗಾನ ಸಂಗೀತೋತ್ಸವ ಗದುಗಿನಲ್ಲಿ. ಕರ್ನಾಟಕದ ಸಂಗೀತ ಪ್ರತಿನಿಧಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅವರು ಸ್ಥಾಪಿಸಿರುವ ವಾದಿರಾಜ ಕಲಾಭವನ ದ ಬಳಿ, ಭೂಮಾಲೀಕರನ್ನು ಪ್ರೆರೇಪಿಸಿ ಅಲ್ಲಿ ೯೦ ರಿಂದ ೧೦೦ ಸೈಟ್ ಗಳನ್ನು ರಚಿಸಿ, ಅವನ್ನು ಸಂಗೀತಾಸಕ್ತರೆಲ್ಲಾ ಕೊಳ್ಳುವಂತೆ ಮಾಡಿದ್ದಾರೆ. ಈಗ ಅಕ್ಷಯನಗರದ ವಾದಿರಾಜ ಬದಾವಣೆಯಲ್ಲಿ, ಪ್ರತಿರಸ್ತೆಗಳ ಹೆಸರೂ ಒಂದು ರಾಗದಿಂದ ಪ್ರಾರಂಭ. 'ರಂಜಿನಿ', 'ಶ್ರೀರಂಜಿನಿ', 'ಮೇಘರಂಜಿನಿ', ರುದ್ರಪಟ್ಟಣದಲ್ಲೂ 'ನಾದಲೋಕ' ವೆಂಬ ಒಂದು ಹೊಸ ಬಡಾವಣೆ ತಲೆಯೆತ್ತಿದೆ. 'ಸರಸ್ವತಿ', 'ಸುಪ್ರದೀಪ', 'ಬಿಂದುಮಾಲಿನಿ', ರಾಗಗಳ ಹೆಸರಿನ ಪ್ಲಾಟ್ ಗಳಿವೆ.

ವಾದಿರಾಜರ ಪದತಳದಲ್ಲಿ[ಬದಲಾಯಿಸಿ]

ತಮ್ಮ ಇಷ್ಟದೇವರಾದ, ವಾದಿರಾಜರ ಪದತಳದಲ್ಲಿ ತಮ್ಮ ಕೃತಿಗಳನ್ನೆಲ್ಲಾ ಭಕ್ತಿಯಿಂದ ಸಮರ್ಪಿಸಿದ್ದಾರೆ.

 • 'ಹಂಗಿಪರೋ ಎನ್ನ ಹಾದಿ ಹಾದಿಯಲ್ಲೂ',
 • 'ಭಾವಾಲಯದ ಕದವ ತೆರೆಸಿ',
 • 'ತೋರೋ ನಾದಾತ್ಮನ' ಸ್ವರಾಕ್ಷರಗಳನ್ನಾಧರಿಸಿ ಬರೆದ,
 • 'ಸರಿಗೆ ಮಾ ಪಾಡೆ ನೀ ಸಾಧಿಸಬಹುದು ಸಾಕ್ಷಾತ್ಕಾರ'.

ಮುಂತಾದ ಅವರ ಸ್ವ-ಕೃತಿಗಳಲ್ಲಿ ಭಕ್ತಿಯಲ್ಲದೆ ಸಂಗೀತ ಸಾಧಕನ ಸಾಧನಾ ಮಾರ್ಗದ ದರ್ಶನವಿದೆ.

 • 'ಶೃತಿಮಾತೆಯಾದರೆ ಲಯಪಿತನಾದಾನು'
 • 'ಶೃತಿಲಯ ಸಂಗಮ ಶಿವಶಕ್ತಿದರ್ಶನ'
 • 'ಈ ನಾದಾನುಭವ ಬ್ರಹ್ಮಾನಂದ'
 • 'ಪದ್ಮನಾಭದಾಸನಿಗಿದು ನಂದದಾನಂದ'

ಈ ಎಲ್ಲ ಸಮಗ್ರ ಕೃತಿಗಳನ್ನು' ನಿನ್ನ ಪದತಳದಲ್ಲಿ ಇಟ್ಟಿಹೇ ನಾನು, ಈ ನನ್ನ ಕೃತಿ ಸುಧಾಮಾಲೆಯನು'ಎಂದು ಶ್ರೀವಾದಿರಾಜರಿಗೆ ಅರ್ಪಿಸಿ ಸುಖಿಸಿದ್ದಾರೆ.

'ಸಪ್ತಸ್ವರ ದೇವತಾ ಧ್ಯಾನ ಮಂದಿರ',[ಬದಲಾಯಿಸಿ]

ರುದ್ರ ಪಟ್ಟಣ ದಲ್ಲಿ ಸಂಗೀತ ಪ್ರೇಮಿಗಳು ನೋಡಲೇ ಬೇಕಾದ ಅದ್ಭುತವಾದ ಸಂಗೀತ ತಾಣ. 'ಸಪ್ತಸ್ವರ ದೇವತಾ ಧ್ಯಾನ ಮಂದಿರ', ಇದರ ವೈಶಿಷ್ಠ್ಯತೆಯೆಂದರೆ, ಸಂಗೀತದೇವತೆ ಸರಸ್ವತಿಯೊಂದಿಗೆ, ೬ ವಾಗ್ಗೇಯಕಾರರ ವಿಗ್ರಹಗಳನ್ನೊಳಗೊಂಡ ಆಧುನಿಕ ವಿಶಿಷ್ಠ ತಾಂತ್ರಿಕ ವ್ಯವಸ್ಥೆಯಿರುವ ತಂಬೂರಿ ಆಕಾರದ ೬೦ ಅಡಿ ಎತ್ತರದ ದೇಗುಲವೊಂದನ್ನು ಪ್ರತಿಷ್ಠಾಪಿಸಿದ್ದಾರೆ. ೪-೫ ದಿನಗಳ ಈ ಸಂಗೀತೋತ್ಸವದ ಅಂತ್ಯದಲ್ಲಿ ಶ್ರೀಯುತರು ಆಗಷ್ಟೇ ರಚಿಸಿ ತಾವೇ ಹಾಡಿದ, " 'ಮತ್ತೊಂದು ಜನ್ಮದಲ್ಲೂ ಹೀಗೇ ಸಂಗೀತ ದೇವಾಲಯವನ್ನು ನಿರ್ಮಿಸಿ, ಕಲಾ ಸೇವೆಗೈಯುವ ಭಾಗ್ಯ ಪ್ರಾಪ್ತವಾಗಲಿ,' ಎಂಬ ಭಾವದ ರಚನೆಯನ್ನು ಆಲಿಸಿದ ಶ್ರೋತೃವೃಂದ, ಬಹಳ ಸಂತೋಷಪಟ್ಟರು.

ಉಲ್ಲೇಖಗಳು[ಬದಲಾಯಿಸಿ]