ಆರ್.ವಿ.ಜಾಗೀರದಾರ
ಆದ್ಯ ರಂಗಾಚಾರ್ಯ ( ಶ್ರೀರಂಗ ) - ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ. ಇವರ "'ಕಾಳಿದಾಸ"' ಎಂಬ ಕೃತಿಗೆ ೧೯೭೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆದ್ಯ ರಂಗಾಚಾರ್ಯರ ಮೂಲ ಹೆಸರು ಆರ್.ವಿ.ಜಾಗೀರದಾರ.ಇವರು ೨೬ ಸಪ್ಟಂಬರ ೧೯೦೪ ರಂದು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡದಲ್ಲಿ ಜನಿಸಿದರು. ಲಂಡನ್ನಿನಲ್ಲಿ oftudiesಎಮ್.ಎ. ಪದವಿಯನ್ನು ಪಡೆದ ಬಳಿಕ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಹಾಗು ೨೦ ವರ್ಷಗಳ ಕಾಲ ದುಡಿದರು.
ಸಾಹಿತ್ಯ
[ಬದಲಾಯಿಸಿ]ಶ್ರೀರಂಗರ ಸಾಹಿತ್ಯ ಅಪಾರ ಹಾಗು ವೈವಿಧ್ಯಮಯ. ಇವರು ೩೪ ದೊಡ್ಡ ನಾಟಕಗಳನ್ನು, ೫೦ ಏಕಾಂಕಗಳನ್ನು, ೧೦ ಕಾದಂಬರಿಗಳನ್ನು, ೧೨೦ ಹಾಸ್ಯ ಪ್ರಬಂಧಗಳನ್ನು ಹಾಗು ೯ ಗಂಭೀರ ಗ್ರಂಥಗಳನ್ನು ರಚಿಸಿದ್ದಾರೆ. ಧಾರವಾಡದ ಪ್ರಸಿದ್ಧ ನಿಯತಕಾಲಿಕ "'ಜಯಂತಿ"'ಗೆ ಸತತ ೩ ವರ್ಷಗಳವರೆಗೆ ಅಂಕಣ ಬರೆದಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ೫೦ಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ದಾರೆ. ಭರತನ ನಾಟ್ಯಶಾಸ್ತ್ರ ಇವರ ಪ್ರಸಿಧ್ಧ ಕೃತಿ.
ನಾಟಕಗಳು
[ಬದಲಾಯಿಸಿ]ಇವರ ಕೆಲವು ನಾಟಕಗಳು:
- ಸ್ವಾರ್ಥತ್ಯಾಗ
- ಧರ್ಮವಿಜಯ
- ಉದರ ವೈರಾಗ್ಯ
- ಹರಿಜನ್ವಾರ
- ಸಂಸಾರಿಗ ಕಂಸ
- ಪ್ರಪಂಚ ಪಾಣಿಪತ್ತು
- ಜರಾಸಂಧಿ
- ವೈದ್ಯರಾಜ
- ದರಿದ್ರನಾರಾಯಣ
- ನರಕದಲ್ಲಿ ನರಸಿಂಹ
- ಗೆಳೆಯ ನೀನು ಹಳೆಯ ನಾನು
- ಶೋಕಚಕ್ರ
- ಪುರುಷಾರ್ಥ
- ಜೀವನ ಜೋಕಾಲಿ
- ಅಧಿಕ ಮಾಸ
- ಮುಕ್ಕಣ್ಣ ವಿರಾಟಪುರುಷ
- ಇದೇ ಸಂಸಾರ
- ಸಂಧ್ಯಾಕಾಲ
- ಕತ್ತಲೆ ಬೆಳಕು
- ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೋ?
- ಗುಮ್ಮನೆಲ್ಲಿಹ ತೋರಮ್ಮ
ಇವು ೧೯೫೯ನೆಯ ಇಸವಿಗಿಂತ ಮೊದಲು ಶ್ರೀರಂಗರು ಬರೆದ ನಾಟಕಗಳು. " ಕತ್ತಲೆ ಬೆಳಕು" ನಾಟಕದ ನಂತರ ಅವರ ಬರವಣಿಗೆಯಲ್ಲಿ ಹೊಸ ಬದಲಾವಣೆ ಬಂದಿತು.
- ಕೇಳು ಜನಮೇಜಯ
- ಹುಟ್ಟಿದ್ದು ಹೊಲೆಯೂರು
- ಸಿರಿಪುರಂದರ
- ಸಂಜೀವನಿ
- ಸಾವಿತ್ರಿ
- ತೇಲಿಸೊ ರಂಗ,ಇಲ್ಲ ಮುಳುಗಿಸೊ
- ದಾರಿ ಯಾವುದಯ್ಯಾ ವೈಕುಂಠಕೆ?
- ರಂಗಭಾರತ
- ಸ್ವರ್ಗಕ್ಕೆ ಮೂರೆ ಬಾಗಿಲು
ಇವು ೧೯೫೯ರ ನಂತರದ ಅವರ ಶ್ರೇಷ್ಠ ನಾಟಕಗಳು.ಅವರ ನಾಟಕಗಳನ್ನು ಹೆಚ್ಚಾಗಿ ಕಲಾವಿಲಾಸಿ ನಾಟಕಕಾರರು ಆಡುತ್ತಲಿದ್ದಾರೆ.(ಅವರೇ ಸ್ವತಃ ೧೯೩೩ರಲ್ಲಿ ’ಕಲಾವಿಲಾಸಿ ನಾಟ್ಯಸಂಘ’ವೆನ್ನುವ ಸಂಸ್ಥೆಯನ್ನು ಧಾರವಾಡದಲ್ಲಿ ಸ್ಥಾಪಿಸಿದರು.) " ದಾರಿ ಯಾವುದಯ್ಯಾ ವೈಕುಂಠಕೆ?" ನಾಟಕವು ಬಿ.ವಿ. ಕಾರಂತರಿಂದ ರಂಗದ ಮೇಲೆ ತರಲ್ಪಟ್ಟಿದೆ. ನಾಟಕಗಳನ್ನಲ್ಲದೆ ಶ್ರೀರಂಗರು ಹರಟೆಗಳನ್ನು ಹಾಗು ಕಾದಂಬರಿಗಳನ್ನು ಸಹ ಬರೆದಿದ್ದಾರೆ.ಇವರ ಕಾದಂಬರಿಗಳಲ್ಲಿ ಬರುವ ಪ್ರಜ್ಞಾಪ್ರವಾಹ ತಂತ್ರವು ಕನ್ನಡ ಕಾದಂಬರಿಗಳಲ್ಲಿ ವಿಶಿಷ್ಟವಾದದ್ದಾಗಿದೆ.ಭರಮಪ್ಪನ ಭೂತ,ವಿಶ್ವಾಮಿತ್ರನ ಸೃಷ್ಟಿ, ಕುಮಾರ ಸಂಭವ, ಅನಾದಿ, ಪ್ರಕೃತಿ (ಪ್ರಕೃತಿ ಪುಸ್ತಕದ ವಿಮರ್ಶೆ) ಮೊದಲಾದವು ಶ್ರೀರಂಗರ ಕಾದಂಬರಿಗಳು."ಗೀತಾ ಗಾಂಭೀರ್ಯ", "ಭಾರತೀಯ ರಂಗಭೂಮಿ", "ಕಾಳಿದಾಸ" ಮೊದಲಾದವು ಇವರ ಗಂಭೀರ ಗ್ರಂಥಗಳು. ಅಲ್ಲದೆ ಕಮಾಲ್ ಪಾಶಾ ಹಾಗು ಜವಾಹರಲಾಲ ನೆಹರೂರವರ[೧] ಚರಿತ್ರೆಯನ್ನು ಸಹ ಶ್ರೀರಂಗರು ಬರೆದಿದ್ದಾರೆ. ಇವರು " ಆಹ್ವಾನ" ಎನ್ನುವ ಕವನ ಸಂಕಲನವನ್ನೂ ಸಹ ರಚಿಸಿದ್ದಾರೆ.
ರಾಜಕೀಯ ಜೀವನ
[ಬದಲಾಯಿಸಿ]ಶ್ರೀರಂಗರು ಪ್ರತ್ಯಕ್ಷವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ಇವರ ಅಪ್ರತ್ಯಕ್ಷ ನೆರವು ಸದಾ ಸಿದ್ಧವಿರುತ್ತಿತ್ತು. ಕೆಲವು ಭೂಗತ ಹೋರಾಟಗಾರರು ಇವರ ಮನೆಯಲ್ಲಿ ಆಶ್ರಯ ಹಾಗು ವೈದ್ಯಕೀಯ ನೆರವು ಪಡೆದಿದ್ದಾರೆ. ಚಳವಳಿ ಮುಂದುವರೆಸಲು ಧನಸಹಾಯ ಪಡೆದಿದ್ದಾರೆ. ಸ್ವತಃ ಶ್ರೀರಂಗರು ಕರ್ಮವೀರ ವಾರಪತ್ರಿಕೆಯಲ್ಲಿ ರಾಜಕೀಯ ಅಗ್ರಲೇಖನಗಳನ್ನು ಬರೆದಿದ್ದಾರೆ. ತಮ್ಮ ಮನೆಯಿಂದಲೇ ‘ಬುಲೆಟಿನ್’ ಸೈಕ್ಲೊಸ್ಟೈಲ್ ಮಾಡಿಸಿ ಕಳುಹಿಸಿ ಕೊಟ್ಟಿದ್ದಾರೆ.
ಕರ್ನಾಟಕ ಏಕೀಕರಣ
[ಬದಲಾಯಿಸಿ]ಕರ್ನಾಟಕ ಏಕೀಕರಣದಲ್ಲಿ ಶ್ರೀರಂಗರು ಅತ್ಯಂತ ಮಹತ್ವದ ಪಾತ್ರವನ್ನು ಆಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘವು ೧೯೦೬ರಲ್ಲಿಯೇ ಕರ್ನಾಟಕ ಏಕೀಕರಣದ ಗೊತ್ತುವಳಿಯನ್ನು ಸ್ವೀಕರಿಸಿತ್ತು. ೧೯೪೪ರಲ್ಲಿ ಕೆಲವು ಗೆಳೆಯರ ಜೊತೆಗೆ ಕೂಡಿಕೊಂಡು, ಶ್ರೀರಂಗರು ಅಖಿಲ ಕರ್ನಾಟಕ ಏಕೀಕರಣ ಸಮಿತಿಯೊಂದನ್ನು ಸ್ಥಾಪಿಸಿದರು. ಈ ಸಮಿತಿಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಪ್ರತಿನಿಧಿಗಳನ್ನು ಆಯೋಜಿಸಲಾಗಿತ್ತು. ೧೯೪೬ರ ಡಿಸೆಂಬರದಲ್ಲಿ ಶ್ರೀರಂಗರು ಪ್ರಧಾನ ಮಂತ್ರಿ ಜವಾಹರಲಾಲ ನೆಹರೂ[೨]ರನ್ನು ಭೆಟ್ಟಿಯಾಗಿ ಭಾಷಾವಾರು ಪ್ರಾಂತಗಳ ರಚನೆಗಾಗಿ ಉಪಸಮಿತಿಯ ರಚನೆ ಹಾಗು ಅದರಲ್ಲಿ ಕರ್ನಾಟಕ ಏಕೀಕರಣದ ವಿಷಯವು ಒಳಗೊಳ್ಳುವ ನಿರ್ಣಯದಲ್ಲಿ ಮಹತ್ವದ ಪಾತ್ರವಾಡಿದರು. ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ೧೯೪೭ ಸೆಪ್ಟೆಂಬರದಲ್ಲಿ ರಾಜಕೀಯ ವ್ಯಕ್ತಿಗಳ ಬೇರೊಂದು ಸಮಿತಿಯು ಅಸ್ತಿತ್ವಕ್ಕೆ ಬಂದಿತು. ಅಲ್ಲದೆ, ಶ್ರೀರಂಗರನ್ನು ಧಾರವಾಡದಿಂದಲೇ ಹೊರಗೋಡಿಸುವ ಪ್ರಯತ್ನಗಳು ನಡೆದವು. ಆತ್ಮಾಭಿಮಾನಿ ಶ್ರೀರಂಗರು ೧೯೪೮ರಲ್ಲಿ ನೌಕರಿಗೆ ರಾಜೀನಾಮೆ ನೀಡಿದರು.
ಗೌರವ
[ಬದಲಾಯಿಸಿ]೧೯೫೪ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶ್ರೀರಂಗರು ಅಧ್ಯಕ್ಷರಾಗಿದ್ದರು.
- ೧೯೬೩ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ Playwright Award
- ೧೯೬೮ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್
- ೧೯೭೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ
- ೧೯೭೨ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ
- ೧೯೭೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ
- ಕರ್ನಾಟಕ ವಿಶ್ವವಿದ್ಯಾಲಯ ನೀಡಿದ ಗೌರವ ಡಿ.ಲಿಟ್
- ಮೈಸೂರು ವಿಶ್ವವಿದ್ಯಾಲಯ ನೀಡಿದ ಗೌರವ ಡಿ.ಲಿಟ್
ಹೆಸರಾಂತ ಭಾರತೀಯ ಆಂಗ್ಲ ಲೇಖಕಿ ಶಶಿ ದೇಶಪಾಂಡೆ ಶ್ರೀರಂಗರ ಮಗಳು.[೩] ೧೯೮೪ರಲ್ಲಿ ಶ್ರೀರಂಗರು ಬೆಂಗಳೂರಿನಲ್ಲಿ ನಿಧನರಾದರು.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಜರಾಸಂಧಿ[ಶಾಶ್ವತವಾಗಿ ಮಡಿದ ಕೊಂಡಿ] ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಲಭ್ಯ ಇರುವ , ಶ್ರೀರಂಗರ ನಾಟಕ