ವಿಷಯಕ್ಕೆ ಹೋಗು

ಆರ್.ಎ.ಜಹಗೀರ್ದಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಹಗೀರ್‍ದಾರ್, ಆರ್ ಎ (1889-1963). ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳು.

ಮುಂಬಯಿ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರಾಗಿದ್ದು ನಿವೃತ್ತರಾದ ಮೇಲೆ ಈ ಹುದ್ದೆಗೆ ಮುಂಬಯಿ ಸರಕಾರದಿಂದ ನೇಮಿಸಲ್ಪಟ್ಟರು. ನಿಷ್ಪಕ್ಷಪಾತಿ ಹಾಗೂ ನ್ಯಾಯನಿಷ್ಠ ನ್ಯಾಯಾಧೀಶರೆಂಬ ಖ್ಯಾತಿ ಇವರದಾಗಿತ್ತು. ನ್ಯಾಯಾಧೀಶರಾಗುವ ಮೊದಲು ಕೂಡ ಪ್ರಖ್ಯಾತ ವಕೀಲರೆಂದು ಹೆಸರಾಗಿದ್ದರು. ಉತ್ಕಟ ದೇಶಾಭಿಮಾನಿಗಳಾದ ಇವರು ಅಪ್ಪಟ ಗಾಂಧೀಭಕ್ತರೂ ಆಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ, ಕಾರ್ಯಕರ್ತರಿಗೆ ಇವರು ಸದಾ ಎಲ್ಲ ರೀತಿಯ ಸಹಾಯವನ್ನೂ ಒದಗಿಸಿದರು.

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಇವರ ಕೊಡುಗೆ

[ಬದಲಾಯಿಸಿ]

ಆಗಸ್ಟ್ 1949ರಲ್ಲಿ ಮುಂಬಯಿ ಶಾಸನ ಸಭೆ ಕರ್ನಾಟಕದ ವಿಶ್ವವಿದ್ಯಾಲಯ ಮಸೂದೆಯನ್ನು ಒಪ್ಪಿದ ತರುವಾಯ ಕೆಲವೇಕಾಲದಲ್ಲಿ ಇವರು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ನೇಮಕವಾಗಿ 1951ರ ಜುಲೈವರೆಗೆ ಅದೇ ಹುದ್ದೆಯಲ್ಲಿದ್ದುಕೊಂಡು ಅದರ ಸ್ಥಾಪನೆ, ಬೆಳವಣಿಗೆಗಳಿಗೆ ಅಪಾರವಾಗಿ ದುಡಿದರು.

1949ರ ಅಕ್ಟೋಬರ್ ಪ್ರಥಮ ವಾರದಲ್ಲಿ ಧಾರವಾಡದ ಗಂಡು ಮಕ್ಕಳ ತರಬೇತಿ ಕಾಲೇಜಿನ ಮೂರು ಕೋಣೆಗಳ ಸಂಕೋಚದಲ್ಲಿ ಪ್ರಾರಂಭವಾದ ವಿಶ್ವವಿದ್ಯಾಲಯಕ್ಕೆ ಛೋಟ ಮಹಾಬಲೇಶ್ವರದ ವಿಶಾಲ ನೆಲ ದೊರೆತದ್ದು ಇವರ ಕಾಲದಲ್ಲಿಯೇ. 1950ರಲ್ಲಿ ಕುಲಸಚಿವರಾಗಿ ನೇಮಕಗೊಂಡ ಎಸ್.ಎಸ್.ಒಡೆಯರ್ ಹಾಗೂ ಇವರು ಒಂದಾಗಿ ಕರ್ನಾಟಕ ವಿಶ್ವವಿದ್ಯಾಲಯದ ಮುಂದಿನ ಅದ್ಭುತ ಪ್ರಗತಿಗೆ ಬಹಳಷ್ಟು ದುಡಿದರು.

ವಿಶ್ವವಿದ್ಯಾಲಯದ ಕಾನೂನು, ಕಟ್ಟಳೆ ಮತ್ತು ನಿಬಂಧನೆಗಳನ್ನು ರಚಿಸುವಲ್ಲಿ ಹಾಗೂ ಅದು ಕೆಲಸ ಪ್ರಾರಂಭಿಸಿದ ಮೊದಲ ವರ್ಷಗಳಲ್ಲಿ ಅವನ್ನು ಅರ್ಥೈಸುವಲ್ಲಿ ಜಹಗೀರದಾರರ ಕುಶಾಗ್ರ ಬುದ್ಧಿ, ಕಾಯದೆ ಜ್ಞಾನ, ಪ್ರಜಾಪ್ರಭುತ್ವವಾದೀ ಧೋರಣೆ-ಇವು ಬಹಳಷ್ಟು ಸಹಾಯಕಾರಿಯಾದವು.

ವಿಶ್ವವಿದ್ಯಾಲಯದ ಹೊಸ ನಿವೇಶನದಲ್ಲಿ ಕಾರ್ಯಸೌಧದ ಅಡಿಗಲ್ಲನ್ನಿಡುವ ಸಮಾರಂಭ ಆಗಿನ ರಾಷ್ಟ್ರಪತಿಗಳಾಗಿದ್ದ ಬಾಬು ರಾಜೇಂದ್ರ ಪ್ರಸಾದರಿಂದ 1951ರ ಮಾರ್ಚ್ 30ರಂದು ನೆರವೇರಿತು. ಅದಕ್ಕೂ ಕಾರಣಕರ್ತರಾದವರಲ್ಲಿ ಜಹಗೀರದಾರರು ಮುಖ್ಯರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: