ಆರ್ಮಡ (ಸ್ಪೇನಿನ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಗ್ಲೆಂಡನ್ನು ಸದೆಬಡಿಯಲು (೧೫೮೮) ಸ್ಪೇನ್ ಸಿದ್ಧಗೊಳಿಸಿದ ಪ್ರಸಿದ್ಧ ನೌಕಾಪಡೆ (ದಿ ಇನ್ವಿನ್ಸಿಬಲ್ ಆರ್ಮಡ).

ಹಿನ್ನೆಲೆ[ಬದಲಾಯಿಸಿ]

ಹದಿನಾರನೆಯ ಶತಮಾನದಲ್ಲಿ ಸ್ಪೇನಿನ ದೊಡ್ಡ ಚಕ್ರಾಧಿಪತ್ಯಕ್ಕೆ ಚಕ್ರವರ್ತಿಯಾಗಿದ್ದ ಫಿಲಿಪ್ನಿಗೂ ಇಂಗ್ಲೆಂಡಿನ ಪ್ರಾಟೆಸ್ಟಂಟ್ ರಾಣಿ ಎಲಿಜಬೆತ್ಗೂ ಬದ್ಧದ್ವೇಷವಿದ್ದು ಅದು ಪ್ರಕೋಪಗೊಳ್ಳುವ ಒಂದು ಸನ್ನಿವೇಶ ಒದಗಿತು. ಇಂಗ್ಲೆಂಡಿನ ಪ್ರಸಿದ್ಧ ನಾವಿಕನಾದ ಫ್ರಾನ್ಸಿಸ್ ಡ್ರೇಕ್ ೧೫೮೫-೮೬ರಲ್ಲಿ ಸ್ಪೇನ್ ಸಾಮ್ರಾಜ್ಯಕ್ಕೆ ಒಳಪಟ್ಟ ಅಮೆರಿಕದ ಅಧೀನ ರಾಜ್ಯಗಳ ಮೇಲೆ ದಂಡೆತ್ತಿ ಹೋದುದೂ ಈತನ ದಾಳಿಗಳಿಗೆ ಎಲಿಜಬೆತ್ ರಾಣಿ ಉತ್ತೇಜನ ಕೊಡುತ್ತಿದ್ದುದೂ ಫಿಲಿಪ್ನ ಆಗ್ರಹವನ್ನು ಹೆಚ್ಚಿಸಿದುವು. ಯುರೋಪ್ ಖಂಡದ ಇತರ ರೋಮನ್ ಕೆಥೊಲಿಕ್ ಜನರನ್ನೂ ತನ್ನ ಕಡೆಗೆ ಸೆಳೆದು ಇಂಗ್ಲೆಂಡಿನ ಮೇಲೆ ಯುದ್ಧ ಮಾಡಲು ಆರ್ಮಡ ಪಡೆ ಸಿದ್ಧವಾಯಿತು.

ಮೊಟ್ಟಮೊದಲು ಈ ಪಡೆಯಲ್ಲಿ ೨೪ ಯುದ್ಧದ ಹಡಗುಗಳು ಮಾತ್ರ ಇದ್ದವು. ಕೊನೆಗೆ ಒಟ್ಟು ೧೩೦ ಹಡಗುಗಳೂ ೨,೫೦೦ ಫಿರಂಗಿಗಳೂ ೮,೦೦೦ ನಾವಿಕರೂ ೨೦,೦೦೦ ಯೋಧರೂ ಕೂಡಿದರು. ಡೋವರ್ ಜಲಸಂಧಿಯಲ್ಲಿದ್ದ ಇಂಗ್ಲಿಷ್ ನೌಕೆಯನ್ನು ಹೊಡೆದಟ್ಟಿ ಸ್ಪೇನ್ ಸೈನ್ಯ ದಾಟಿ ಹೋಗಲು ದಾರಿ ಮಾಡಬೇಕೆಂಬುದು ಮೊದಲನೆಯ ಉದ್ದೇಶ. ಪಡೆಯ ಮೊದಲ ನಾಯಕ ಸಾಂತಾಕ್ರೂಜ್. ಈತ ಯುದ್ಧದ ಆರಂಭದಲ್ಲೇ ಮೃತಪಟ್ಟ (೧೫೮೮). ಆಮೇಲೆ ಪಡೆಯ ನಾಯಕತ್ವವನ್ನು ಮೆಡೀನ ಸಿಡೋನಿ ವಹಿಸಿಕೊಂಡ.

ನೌಕಾದಾಳಿ[ಬದಲಾಯಿಸಿ]

೨೯ ಜುಲೈ ೧೫೮೮ ರಂದು ನೌಕಾದಾಳಿ ಆರಂಭವಾಯಿತು. ಒಂದು ವಾರದೊಳಗೆ ಪ್ಲೀಮತ್, ಪೋರ್್ಟಲೆಂಡ್ ಮತ್ತು ವೈಟ್ ದ್ವೀಪಗಳಲ್ಲಿ ಕದನ ನಡೆಯಿತು. ಆದರೆ ಯಾವ ಕದನದಲ್ಲೂ ಸ್ಪೇನಿಗೆ ಖಚಿತವಾದ ಜಯ ದೊರೆಯಲಿಲ್ಲ. ಕೊನೆಗೆ ಆಗಸ್ಟ್ 6ರಂದು ಡೋವರ್ ತಲುಪಿ ಸ್ಪೇನ್ ಪಡೆ ಕೆಲೆ ಹತ್ತಿರ ಬೀಡು ಬಿಟ್ಟಿತು.

ಇಂಗ್ಲೆಂಡಿನ ಕೆಥೊಲಿಕ್ ಪಂಗಡ ದಂಗೆಯೆದ್ದಲ್ಲಿ ತನಗೆ ಸಹಾಯವಾದೀತೆಂದು ಫಿಲಿಪ್ ನಂಬಿದ್ದ. ಆದರೆ ಅವರು ತಾಯಿನಾಡಿಗೆ ವಿರೋಧವಾಗಿ ನಡೆದುಕೊಳ್ಳಲಿಲ್ಲ. ಅಲ್ಲದೆ ಫ್ರಾನ್ಸಿಸ್ ಡ್ರೇಕ್, ಹಾಕಿನ್ಸ್ ಮತ್ತು ಫ್ರಾಬಿಷರ್ ಎಲ್ಲರೂ ಒಟ್ಟುಗೂಡಿ ಬಿರುಸಾಗಿ ಕಾದಿದರು. ಮೂರನೆಯದಾಗಿ ಆಗಸ್ಟ್ ೭ ಮತ್ತು ೮ ರಂದು ಪಡೆಗೆ ವಿರೋಧವಾಗಿ ಸಮುದ್ರದಲ್ಲಿ ಬಿರುಗಾಳಿ ಎದ್ದಿತು. ಪಡೆಯ ನಾವಿಕರಲ್ಲನೇಕರಿಗೆ ಕಾಯಿಲೆ ಬಂತು. ಆಹಾರ ಮತ್ತು ನೀರಿನ ಸರಬರಾಜು ಕುಗ್ಗಿಹೋಯಿತು. ಇಂಥ ದುಃಸ್ಥಿತಿ ಒದಗಿದ್ದುದರಿಂದ ಪಡೆಯ ಹೆಚ್ಚು ಭಾಗ ತಿರುಗಿ ಸ್ಪೇನನ್ನು ಮುಟ್ಟಲೂ ಆಗಲಿಲ್ಲ.

ಫಲಿತಾಂಶ[ಬದಲಾಯಿಸಿ]

ಇಂಗ್ಲೆಂಡು ಬದುಕಿತು. ದಿಗ್ವಿಜಯದ ಉತ್ಸಾಹದಲ್ಲಿ ರಾಣಿ ಎಲಿಜಬೆತ್ ದೇವರು ಬೀಸಿದ, ಅವು ಚದರಿಹೋದುವು ಎಂಬ ಅರ್ಥ ಬರುವ ಫಲಕವೊಂದನ್ನು ಮಾಡಿಸಿ ಹಾಕಿಸಿದಳು. ಸಮುದ್ರದ ಮೇಲೆ ತನ್ನ ಪ್ರಾಬಲ್ಯವನ್ನು ಬೆಳೆಸಿಕೊಂಡ ಹೊರತು ಸ್ವಾತಂತ್ರ್ಯಕ್ಕೆ ಉಳಿಗಾಲವಿಲ್ಲ ಎಂಬ ಪಾಠವನ್ನು ಇಂಗ್ಲೆಂಡ್ ಕಲಿತಿತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: