ಆರ್ನೆ, ಆಂಟಿ

ವಿಕಿಪೀಡಿಯ ಇಂದ
Jump to navigation Jump to search

೧೮೬೭-೧೯೨೫. ಜಾನಪದ ಸಂಶೋಧನೆಯಲ್ಲಿ ಬಹು ಗಣನೀಯ ಸ್ಥಾನವನ್ನು ಪಡೆದಿರುವ ಫಿನ್ಲೆಂಡ್ನ ಶ್ರೇಷ್ಠ ಜಾನಪದ ವಿದ್ವಾಂಸರ ಸಾಲಿನಲ್ಲಿ ಅಗ್ರಗಣ್ಯ. ಅಲ್ಲಿನ ಜಾನಪದ ವಿದ್ವತ್ತಿಗೆ ಚೈತನ್ಯವನ್ನು ತುಂಬಿದವರಲ್ಲಿ ಪ್ರಮುಖ. ಆಧುನಿಕ ಜಾನಪದ ಚಳವಳಿಯ ನೇತಾರ. ಈತನ ವಿದ್ವತ್ತು ಕೇವಲ ಫಿನ್ಲೆಂಡ್ನ ಜಾನಪದ ಕ್ಷೇತ್ರಕ್ಕೇ ಮೀಸಲಾಗದೆ ಇಡೀ ವಿಶ್ವದ ಜಾನಪದ ಸಂಶೋಧನೆಗೆ ಮಾರ್ಗದರ್ಶಕವಾಯಿತು. ಜನಪದ ಕಥೆಗಳ ವರ್ಗೀಕರಣದಲ್ಲಿ ಈತನ ಪಾತ್ರ ದೊಡ್ಡದು. ೧೯೧೩ರಲ್ಲಿ ಚಾರಿತ್ರಿಕ ಭೌಗೋಳಿಕ ಮಾರ್ಗದ ಮಹತ್ತ್ವವನ್ನು ಕುರಿತು ಬರೆದ ಮೇಲೆ ಜನಪದ ಕಥೆಗಳ ಒಂದೊಂದರ ಮೂಲವನ್ನೂ ಶೋಧಿಸತೊಡಗಿದ. ಇದರ ವಿವರವಾದ ಅಭ್ಯಾಸಕ್ಕಾಗಿ ದೇಶವಿದೇಶಗಳನ್ನು ಸುತ್ತಿ ಸಾಮಗ್ರಿಯನ್ನು ಕಲೆಹಾಕಿದ. ಯುರೋಪಿನ ಸಂಪ್ರದಾಯಕ್ಕೆ ಒಳಪಡುವ ಎಲ್ಲ ಕಥೆಗಳ ಅಭ್ಯಾಸವನ್ನೂ ನಡೆಸಿ ಪ್ರತಿಯೊಂದಕ್ಕೂ ನಿರ್ದಿಷ್ಟ ಸಂಖ್ಯೆಯೊಂದನ್ನು ಗೊತ್ತುಪಡಿಸಿದ. ಈ ವರ್ಗಸೂಚಿ (ಟೈಪ್ ಇಂಡೆಕ್ಸ್) ಸಂಶೋಧನಾ ರಂಗದಲ್ಲಿ ತುಂಬ ಉಪಯುಕ್ತವಾಯಿತು. ಸುಪ್ರಸಿದ್ಧ ಜಾನಪದ ವಿದ್ವಾಂಸ ಸ್ಟಿತ್ಥಾಮ್ಸನ್ ಈತನೊಡನೆ ಕಲೆತು ಈ ಕ್ರಮವನ್ನು ಇನ್ನೂ ಬೆಳೆಸಿದ. ಒಂದೊಂದು ಕಥೆಗೂ ತನ್ನದೇ ಆದ ಆತ್ಮಕಥೆಯಿದೆ, ತಂತ್ರವಿದೆ ಎಂದು ಗುರುತಿಸಿದ ಮೊದಲ ವ್ಯಕ್ತಿ ಆರ್ನೆ. ಜನಪದ ಕಥೆಗಳ ಮೂಲವನ್ನು ವಿಶೇಷವಾಗಿ ಭಾರತಕ್ಕೆ ಅನ್ವಯಿಸಿದ ಚಿಹ್ನೆಯ ಸಿದ್ಧಾಂತವನ್ನು ಈತ ಅನುಮೋದಿಸಿ ಕೆಲವು ಕಥೆಗಳು ಮಧ್ಯಯುಗದ ಪಶ್ಚಿಮ ಯುರೋಪಿನ ಸೃಷ್ಟಿ ಎನ್ನುವುದನ್ನೂ ಸ್ಪಷ್ಟಪಡಿಸಿದ. ಐತಿಹ್ಯ ಹಾಗೂ ಒಗಟುಗಳಿಗೂ ಚಾರಿತ್ರಿಕ ಭೌಗೋಳಿಕ ಮಾರ್ಗವನ್ನು ಅನ್ವಯಿಸಿ ಯಶಸ್ವಿಯಾದ. ಆರ್ನೆಯ ಆರೋಗ್ಯ ಅಷ್ಟೇನೂ ಉತ್ತಮಸ್ಥಿತಿಯಲ್ಲಿರಲಿಲ್ಲ. ಮೊದಮೊದಲು ತುಂಬ ತೊಂದರೆಯನ್ನೇ ಅನುಭವಿಸಿದ. ಪ್ರಾಧ್ಯಾಪಕ ಪದವಿಯನ್ನು ಪಡೆಯುವ ಮುನ್ನ ಶಾಲೆಗಳಲ್ಲಿ ಪಾಠ ಹೇಳುತ್ತ ಬಡತನವನ್ನು ಕಂಡ ವ್ಯಕ್ತಿ. ತನ್ನೆಲ್ಲ ಕಷ್ಟಗಳ ನಡುವೆಯೂ ಜಾನಪದ ಸಂಶೋಧನೆಯನ್ನು ನಡೆಸಿ ಮುಂದಿನ ಅನೇಕ ವಿದ್ವಾಂಸರಿಗೆ ಮಾರ್ಗದರ್ಶನ ಮಾಡಿದ ಕೀರ್ತಿ ಈತನದು.