ಆರ್ಥಿಕ ಸಂಘಟನೆ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಕಾಣಬರುವ ಅನೇಕಾನೇಕ ಆರ್ಥಿಕ ಸಮಸ್ಯೆಗಳನ್ನು, ವಿಷಯಗಳನ್ನು ಕಾರ್ಯವ್ಯವಸ್ಥೆಗಳನ್ನು ಸುಸಂಬದ್ಧವೂ ಏಕಮುಖವೂ ಸರ್ವಜನೋಪಯೋಗಿಯೂ ಆಗುವ ರೀತಿಯಲ್ಲಿ ಒಂದುಗೂಡಿಸುವಿಕೆ ಎಂದು ಅರ್ಥ (ಎಕನಾಮಿಕ್ ಇಂಟಿಗ್ರೆಷನ್). ಒಂದು ದೇಶದ ಆರ್ಥಿಕತೆಯ ವಿವಿಧ ಘಟಕಗಳೊಳಗೆ ತಾರತಮ್ಯಕ್ಕೆ ಎಡೆಕೊಡದೆ ಸಮಾನಾವಕಾಶಗಳ ಧ್ಯೇಯದ ಆಧಾರದ ಮೇಲೆ ಎಲ್ಲ ಭಾಗ ಹಾಗೂ ಉಪಭಾಗಗಳು ಪರಸ್ಪರವಾಗಿ ಹೊಂದಿಕೊಂಡಿರುವಂತೆ ಆರ್ಥಿಕಚಟುವಟಿಕೆಗಳು ನಡೆಯುವಂತಿದ್ದಲ್ಲಿ ಅಂಥ ಪರಿಸ್ಥಿತಿಯನ್ನು ಸಂಘಟಿತ ರಾಷ್ಟ್ರೀಯ ಆರ್ಥಿಕತೆಯೆಂದು ಹೇಳಬಹುದು. ಇದೇ ರೀತಿ ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳಿಗೆ ರಾಜಕೀಯ ಪ್ರತ್ಯೇಕತೆಯಿಂದ ಪ್ರಾಪ್ತವಾಗುವ ಅಡಚಣೆಗಳನ್ನು (ಆಮದು ಹಾಗೂ ರಫ್ತು ಸುಂಕ ಪ್ರತ್ಯೇಕ ಹಣ ಮತ್ತು ವಿದೇಶೀ ವಿನಿಮಯ ಬಂಡವಾಳ ಮತ್ತು ಜನರ ಓಡಾಟಕ್ಕೆ ಇರುವ ಕಟ್ಟುಪಾಡುಗಳು ಇತ್ಯಾದಿ) ತೊಡೆದುಹಾಕಿ ವಿವಿಧ ರಾಷ್ಟ್ರಗಳು ಪರಸ್ಪರ ಸಮಾನಾವಕಾಶವಿರುವಂತೆ ಆರ್ಥಿಕ ಸಂಬಂಧಗಳನ್ನು ಬೆಳೆಸಿಕೊಂಡು ಬರುವ ಪರಿಸ್ಥಿತಿಯನ್ನು ಸಂಘಟಿತ ಅಂತಾರಾಷ್ಟ್ರೀಯ ಆರ್ಥಿಕತೆಯೆಂದು ಹೇಳಬಹುದು.
ರಾಷ್ಟ್ರೀಯ ಆರ್ಥಿಕ ಸಂಘಟನೆ
[ಬದಲಾಯಿಸಿ]ಆರ್ಥಿಕವಾಗಿ ಮುಂದುವರಿದಿರುವ ರಾಷ್ಟ್ರಗಳಲ್ಲಿ ಆರ್ಥಿಕ ಸಂಘಟನೆ ಹೆಚ್ಚಿನ ಅಂಶದಲ್ಲಿ ಇರುವುದೂ ಹಿಂದುಳಿದಿರುವ ರಾಷ್ಟ್ರಗಳಲ್ಲಿ ಆರ್ಥಿಕ ಸಂಘಟನೆ ದುರ್ಬಲವಾಗಿರುವುದೂ ಎಲ್ಲೆಲ್ಲೂ ಕಂಡುಬರುವ ವಿಷಯ. ಅಂದಮೇಲೆ, ಆರ್ಥಿಕಾಭಿವೃದ್ಧಿಗೂ ರಾಷ್ಟ್ರೀಯ ಆರ್ಥಿಕ ಸಂಘಟನೆಗೂ ನಿಕಟಸಂಬಂಧವಿದೆ ಎಂದು ಹೇಳಬಹುದು. ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ನೀಡಿಕೆ ಬೇಡಿಕೆ ಶಕ್ತಿಗಳು ರಾಷ್ಟ್ರಾದ್ಯಂತವೂ ವ್ಯಾಪಕವಾಗಿ ವರ್ತಿಸುವುದಿಲ್ಲ. ಹಳ್ಳಿಗಳೂ, ಪಟ್ಟಣಗಳೂ ಹೆಚ್ಚು ಸ್ಥಳೀಯ ಆರ್ಥಿಕ ಸ್ವಸಂಪೂರ್ಣತೆ ಹೊಂದಿರುವ ಬಿಡಿ ಭಾಗಗಳು. ಆರ್ಥಿಕಾಭಿವೃದ್ಧಿಯ ಸಾಗಣೆಯಲ್ಲಿ ಇಂಥ ಬಿಡಿಭಾಗಗಳೊಳಗೆ ಆರ್ಥಿಕತೆಯ ಸುಸಂಬದ್ಧ ಭಾಗಗಳಾಗುವುವು. ಇವುಗಳ ಆರ್ಥಿಕ ಆಗುಹೋಗುಗಳು ವಿಶಾಲವಾದ ಆರ್ಥಿಕಶಕ್ತಿಗಳ ಪ್ರಭಾವಕ್ಕೆ ಒಳಗಾಗುವುವು. ಅಲ್ಲದೆ ಪರಸ್ಪರ ಅವಲಂಬನೆಗಳು ನಿಕಟವಾಗುವುವು. ಹೀಗೆ, ಆರ್ಥಿಕಾಭಿವೃದ್ಧಿಯಾದಂತೆ ರಾಷ್ಟ್ರದ ಆರ್ಥಿಕ ಸಂಘಟನೆಯೂ ಸ್ಪಷ್ಟ ಸ್ವರೂಪ ತಾಳುವುದು. ಇನ್ನೊಂದು ದೃಷ್ಟಿಯಿಂದ ನೋಡಿದರೆ ಆರ್ಥಿಕ ಸಂಘಟನೆಯ ಸಾಧನೆಗೆ ಕೈಗೊಳ್ಳುವ ಕ್ರಮಗಳು ರಾಷ್ಟ್ರದ ಆರ್ಥಿಕಾಭಿವೃದ್ಧಿಗೆ ಕಾರಣವಾಗುವುವು. ರಾಷ್ಟ್ರೀಯ ಆರ್ಥಿಕ ಯೋಜನೆಗಳನ್ನು ಅನುಸರಿಸುತ್ತಿರುವ ಅನೇಕ ರಾಷ್ಟ್ರಗಳು ರಾಷ್ಟ್ರೀಯ ಸಂಘಟನೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆರ್ಥಿಕ ಸಂಘಟನೆ ಹೆಚ್ಚು ವಿಶಾಲವಾದ ಜನಾಂಗಸಂಘಟನೆಯ ಕೇವಲ ಒಂದು ಮುಖವಾದುದರಿಂದ ಸಂಘಟನೆಯ ಕ್ರಮಗಳೂ ಅವಶ್ಯವಾಗಿಯೇ ಹೆಚ್ಚು ವ್ಯಾಪಕವಾಗಿರುವುವು. ಉದಾಹರಣೆಗೆ, ಭಾರತ ಸರ್ಕಾರ ರಾಷ್ಟ್ರೀಯ ಸಂಘಟನೆಗೆ ಪ್ರಾಮುಖ್ಯ ನೀಡಿದೆ. ರಾಷ್ಟ್ರದಲ್ಲಿ ಭಾಷೆ, ಪ್ರಾಂತ್ಯ, ಮತ ಇತ್ಯಾದಿ ಸಂಕುಚಿತ ಭಾವನೆಗಳನ್ನೇ ಪ್ರಧಾನವಾಗಿ ಇಟ್ಟುಕೊಳ್ಳುವುದರಿಂದ ಉದ್ಭವಿಸುವ ರಾಷ್ಟ್ರೀಯ ಸಮಸ್ಯೆಗಳನ್ನು ನಿವಾರಿಸಿ ರಾಷ್ಟ್ರದ ಜನರಲ್ಲಿ ಏಕತಾಭಾವನೆ ಮೂಡಿಸುವುದು ಭಾರತ ಸರ್ಕಾರದ ನೀತಿಯ ಒಂದು ಮುಖ್ಯ ಅಂಶವಾಗಿದೆ. ಇಂಥ ಭಾವನೆ ಆರ್ಥಿಕೋದ್ಯಮಗಳ ಪೋಷಣೆಗೆ ಸಹಾಯಕವಾಗಿ ದೇಶದ ಆರ್ಥಿಕಾಭಿವೃದ್ಧಿಗೆ ಕಾರಣವಾಗುವುದು. ಪ್ರಾದೇಶಿಕ ಆರ್ಥಿಕ ಸಮಾನತೆ ಹೆಚ್ಚಾಗಿಲ್ಲದಿರುವುದು ಆರ್ಥಿಕ ಸಂಘಟನೆಯ ಇನ್ನೊಂದು ಚಿಹ್ನೆ. ಬಂಡವಾಳ, ಶ್ರಮಬಲ, ಉದ್ಯಮಶೀಲತೆಗಳಂಥ ಉತ್ಪಾದನಾಂಗಗಳು ಪ್ರಾದೇಶಿಕ ಪ್ರಕೃತಿಸಂಪತ್ತಿಗೆ ಅನುಗುಣವಾಗಿಯೂ ಇತರ ಆರ್ಥಿಕ ಶಕ್ತಿಗಳ ಪ್ರೇರಣಾನುಸಾರ ವಾಗಿಯೂ ಚಲಿಸುವುದರ ಪರಿಣಾಮವಾಗಿ ಸಂಘಟಿತ ಆರ್ಥಿಕತೆಯಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗಿ ಇರಲು ಅವಕಾಶವಿರುವುದಿಲ್ಲ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ಸಮತೋಲನವೂ ಆರ್ಥಿಕಪ್ರಗತಿಯ ಪ್ರಯೋಜನಗಳ ಹಂಚಿಕೆಯಲ್ಲಿ ಅಂತರಪ್ರದೇಶ ಸಮಾನತೆಯೂ ಯೋಜನಾಮಾರ್ಗ ಹಿಡಿದಿರುವ ರಾಷ್ಟ್ರಗಳ ಯೋಜನೆಗಳ ಮುಖ್ಯ ಉದ್ದೇಶಗಳಲ್ಲಿ ಸೇರಿವೆ. ಈ ಉದ್ದೇಶಗಳಿಗೆ ಅನುಸಾರವಾಗಿ ಯುಕ್ತಕ್ರಮಗಳನ್ನು ಯೋಜನೆಗಳು ಒಳಗೊಳ್ಳುವುವು. ಹೀಗೆ ರಾಷ್ಟ್ರದ ವಿವಿಧಪ್ರದೇಶಗಳ ಪ್ರಾಕೃತಿಕ ಹಾಗೂ ಇತರ ಸಾಧನಗಳ ಅನುಕೂಲತೆಗೂ ಜನರ ಆವಶ್ಯಕತೆಗಳಿಗೂ ಅನುಸಾರವಾಗಿ ಸಮಾನಾವಕಾಶಗಳನ್ನು ಕಲ್ಪಿಸುವುದರ ಮೂಲಕ ಆರ್ಥಿಕಸಂಘಟನೆ ಸಾಧಿಸುವುದು ಅಭಿವೃದ್ಧಿಪಥದಲ್ಲಿರುವ ಎಲ್ಲ ರಾಷ್ಟ್ರಗಳ ಗುರಿ.
ಅಂತಾರಾಷ್ಟ್ರೀಯ ಆರ್ಥಿಕ ಸಂಘಟನೆ
[ಬದಲಾಯಿಸಿ]೧೯೧೪ಕ್ಕೆ ಮುನ್ನ ಅಂತಾರಾಷ್ಟ್ರೀಯ ರಂಗದಲ್ಲಿ ಸ್ವರ್ಣ ಪ್ರಮಿತಿ, ನಿರಾತಂಕ ವ್ಯಾಪಾರ ನೀತಿ, ಬಂಡವಾಳ ಚಲನೆ ಹಾಗೂ ಜನರ ವಲಸೆ ಇವು ವಿವಿಧ ರಾಷ್ಟ್ರಗಳ ಆರ್ಥಿಕಸ್ಥಿತಿಯಲ್ಲಿ ಒಂದು ರೀತಿಯ ಸಂಘಟನೆಯನ್ನು ಉಂಟುಮಾಡಿದ್ದುವು. ಆದರೆ ವಸಾಹತುಶಾಹಿ ಹಾಗೂ ಸಾರ್ವಭೌಮತ್ವಯುಗವಾದ ಅಂದಿನ ಪ್ರಪಂಚದಲ್ಲಿ ಅನೇಕ ಜನಾಂಗಗಳಿಗೆ ಸಮಾನಾವಕಾಶಕ್ಕೆ ಮಾರ್ಗವಿರಲಿಲ್ಲ. ಎರಡನೇ ಮಹಾಯುದ್ಧದ ತರುವಾಯ ಪ್ರಪಂಚದಲ್ಲಿ ವಸಾಹತುಗಳು ಮಾಯವಾಗಿ ಎಲ್ಲ ಜನಾಂಗಗಳಿಗೂ ರಾಜಕೀಯ ಸ್ವಾತಂತ್ರ್ಯ ಲಭಿಸಿದೆ. ಈ ಹೊಸ ವಾತಾವರಣದಲ್ಲಿ ಅಂತಾರಾಷ್ಟ್ರೀಯ ಆರ್ಥಿಕ ಸಂಘಟನೆ ಅನೇಕ ರೂಪಗಳನ್ನು ತಾಳಿ ಮುಂದುವರಿಯುತ್ತಿದೆ. ಇವುಗಳಲ್ಲಿ ಮುಖ್ಯವಾಗಿ ಐದು ಪ್ರಭೇದಗಳನ್ನು ಗುರುತಿಸಬಹುದು:
- ಐರೋಪ್ಯ ನಿರಾತಂಕವ್ಯಾಪಾರಕ್ಷೇತ್ರ (ಯುರೋಪಿಯನ್ ಫ್ರೀ ಟ್ರೇಡ್ ಏರಿಯ) ಒಂದು ಮಾದರಿ. ಇದರಲ್ಲಿ ಸದಸ್ಯ ರಾಷ್ಟ್ರಗಳು ಸುಂಕ ಮತ್ತು ಪ್ರಮಾಣಬದ್ಧ ವ್ಯಾಪಾರ ನಿರ್ಬಂಧಗಳಿಲ್ಲದೆ ಪರಸ್ಪರ ವ್ಯಾಪಾರವನ್ನು ನಡೆಸುವುವು. ಆದರೆ ಸದಸ್ಯೇತರ ರಾಷ್ಟ್ರಗಳೊಡನೆ ನಡೆಸುವ ವ್ಯಾಪಾರದ ಬಗ್ಗೆ ಒಂದೊಂದು ರಾಷ್ಟ್ರವೂ ತನ್ನದೇ ಆದ ಸುಂಕನೀತಿಯನ್ನು ಹೊಂದಿರ ಬಹುದು.
- ಕಸ್ಟಮ್ಸ್ ಒಕ್ಕೂಟ ಮಾದರಿಯ ಸಂಘಟನೆಯಲ್ಲಿ ಸದಸ್ಯರಾಷ್ಟ್ರಗಳು ಒಕ್ಕೂಟದೊಳಗೆ ವ್ಯಾಪಾರದ ಬಗ್ಗೆ ಇರುವ ತಾರತಮ್ಯಗಳನ್ನು ತೊಡೆದುಹಾಕುವುದರ ಜೊತೆಗೆ ಹೊರ ರಾಷ್ಟ್ರಗಳೊಡನೆ ನಡೆಸುವ ವ್ಯಾಪಾರದ ಬಗ್ಗೆ ಏಕರೂಪದ ವಾಣಿಜ್ಯನೀತಿ ಯನ್ನು ಹೊಂದಿರುವುವು.
- ಸಾಮಾನ್ಯ ಮಾರುಕಟ್ಟೆಯೋಜನೆ ಇನ್ನೂ ಒಂದು ಹೆಜ್ಜೆ ಮುಂದಿನ ಸಂಘಟನೆ. ಈ ಏರ್ಪಾಡಿನಲ್ಲಿ ಒಕ್ಕೂಟದ ಒಳಗಡೆ ಬಂಡವಾಳ, ಕಾರ್ಮಿಕ ಬಲ-ಇಂಥ ಉತ್ಪಾದನಾಂಗಗಳ ಚಲನೆಗೆ ಯಾವ ನಿರ್ಬಂಧವೂ ಇರುವುದಿಲ್ಲ.
- ಆರ್ಥಿಕ ಒಕ್ಕೂಟ ಮಾದರಿ ಸಂಘಟನೆಯಲ್ಲಿ ಸರಕು ಹಾಗೂ ಉತ್ಪಾದನಾಂಗಗಳ ಚಲನೆಗೆ ಆಂತರಿಕ ನಿರ್ಬಂಧಗಳಿಲ್ಲದಿರುವಷ್ಟೇ ಅಲ್ಲದೆ ಸದಸ್ಯರಾಷ್ಟ್ರಗಳ ವಿವಿಧ ಆರ್ಥಿಕ ನೀತಿಗಳಲ್ಲೂ ಸ್ವಲ್ಪಮಟ್ಟಿನ ಸಮನ್ವಯವನ್ನೇರ್ಪಡಿಸುವ ಪ್ರಯತ್ನವಿರುವುದು.
- ಸಂಪೂರ್ಣ ಆರ್ಥಿಕಸಂಘಟನೆಯಲ್ಲಿ ಸದಸ್ಯರಾಷ್ಟ್ರಗಳ ಆರ್ಥಿಕ ಹಾಗೂ ಸಾಮಾಜಿಕ ನೀತಿಗಳ ಬಗ್ಗೆ ಹೆಚ್ಚಿನ ಏಕರೂಪತೆ ಏರ್ಪಾಡಾಗಬೇಕಾಗುವುದು. ಅಲ್ಲದೆ ಸಾಮಾಜಿಕ ಹಾಗೂ ರಾಜಕೀಯ ಸಂಘಟನೆಗಳಿಲ್ಲದೆ ಈ ಹಂತದ ಆರ್ಥಿಕ ಸಂಘಟನೆ ಸಾಧ್ಯವಾಗಲಾರದು.
ಇಂದಿನ ಪ್ರಪಂಚದಲ್ಲಿ ಅಂತಾರಾಷ್ಟ್ರೀಯ ಆರ್ಥಿಕಸಂಘಟನೆ ಬೆಳೆಯುತ್ತಿರುವುದಕ್ಕೆ ಕೆಲವು ಮುಖ್ಯ ಕಾರಣಗಳಿವೆ. ರಾಜಕೀಯವಾಗಿ, ಪ್ರಪಂಚ ಕಮ್ಯೂನಿಸಂ ಮತ್ತು ಕಮ್ಯೂನಿಸಂ ವಿರೋಧಿ ಎಂಬ ಎರಡು ಪಂಗಡಗಳಾಗಿ ಪ್ರತ್ಯೇಕಿಸಲ್ಪಟ್ಟಿದೆ. ಈ ಎರಡು ಧ್ಯೇಯಗಳ ಸ್ಪರ್ಧೆಯ ಪರಿಣಾಮವಾಗಿ ಒಂದೊಂದು ಗುಂಪಿನ ರಾಷ್ಟ್ರಗಳಲ್ಲೂ ತಮ್ಮಗಳೊಳಗೆ ಹೆಚ್ಚು ನಿಕಟಬಾಂಧವ್ಯ ಬೆಳೆಸುವ ಒಲವು ಕಾಣಬರುತ್ತಿದೆ. ಜೊತೆಗೆ ಎರಡು ಗುಂಪಿನವರೂ ಪರಸ್ಪರ ಒಳ್ಳೆಯ ವಿಧಾನಗಳನ್ನು ರೂಢಿಗೆ ತರಲು ಯತ್ನಿಸುತ್ತಿವೆ. ಉದಾಹರಣೆಗೆ, ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ ಅಮೆರಿಕ, ಕೆನಡ ಮತ್ತು ಹನ್ನೊಂದು ಪಾಶ್ಚಾತ್ಯ ಯುರೋಪ್ ರಾಷ್ಟ್ರಗಳನ್ನು ಪರಸ್ಪರವಾಗಿ ಸೈನಿಕದೃಷ್ಟಿಯಿಂದ ಸಂಘಟಿಸಿರುವುದೇ ಅಲ್ಲದೆ ಸದಸ್ಯ ರಾಷ್ಟ್ರಗಳ ಆರ್ಥಿಕಸಂಬಂಧಗಳ ಬೆಳೆವಣಿಗೆಗೆ ಅಡ್ಡಿಬರುವ ಕಟ್ಟುಪಾಡುಗಳನ್ನು ತೆಗೆದುಹಾಕಬೇಕೆಂದೂ ಸದಸ್ಯರಾಷ್ಟ್ರಗಳಿಗೆ ಆದೇಶ ನೀಡಿದೆ. ಹೀಗೆಯೇ ಸೋವಿಯತ್ ರಷ್ಯ ಮತ್ತು ಪೂರ್ವ ಯುರೋಪಿನ ರಾಷ್ಟ್ರಗಳು ಅವುಗಳ ಆರ್ಥಿಕತೆಗಳನ್ನು ಸಂಘಟಿಸುವ ಕ್ರಮಗಳನ್ನು ಕೈಗೊಂಡಿದೆ. ಹೀಗೆ ಮೂಲಭೂತ ಧ್ಯೇಯಗಳ ವ್ಯತ್ಯಾಸ ಪ್ರಪಂಚದಲ್ಲಿ ಎರಡು ಪಂಗಡದ ರಾಷ್ಟ್ರಗಳೊಳಗೆ ಆರ್ಥಿಕಸಂಘಟನೆ ಬೆಳೆಸಲು ಮುಖ್ಯ ಪ್ರೇರಕಶಕ್ತಿಯಾಗಿ ಪರಿಣಮಿಸಿದೆ. ಆರ್ಥಿಕ ವ್ಯವಸ್ಥಾಕ್ಷೇತ್ರ ವಿಸ್ತರಣೆಯ ಲಾಭ ರಾಷ್ಟ್ರ-ರಾಷ್ಟ್ರಗಳ ಆರ್ಥಿಕ ಸಂಘಟನೆಗೆ ಇನ್ನೊಂದು ಮುಖ್ಯ ಪ್ರೇರಕಶಕ್ತಿ. ಆಧುನಿಕ ತಂತ್ರಜ್ಞಾನದ ಹೆಚ್ಚಿನ ಪ್ರಯೋಜನ ಪಡೆಯಬೇಕಾ ದರೆ ಉತ್ಪಾದನಾ ಘಟಕಗಳು ಸಾಕಷ್ಟು ದೊಡ್ಡಪ್ರಮಾಣ ಹೊಂದಿರಬೇಕು. ಸಣ್ಣಪುಟ್ಟ ರಾಷ್ಟ್ರಗಳು ತಮ್ಮ ತಮ್ಮ ರಾಷ್ಟ್ರದ ಉತ್ಪನ್ನಸಾಧನೆ ಮತ್ತು ಆಂತರಿಕ ಮಾರುಕಟ್ಟೆಗಳಿಗೆ ಅನುಗುಣವಾಗಿ ಕೈಗಾರಿಕಾವ್ಯವಸ್ಥೆ ಮಾಡುವುದಾದರೆ ಉದ್ಯಮಘಟನೆ ದೊಡ್ಡದಾಗಲು ಸಾಧ್ಯವಿಲ್ಲ. ಇಂಥ ಸಂದರ್ಭಗಳಲ್ಲಿ ಕೆಲವು ರಾಷ್ಟ್ರಗಳು ಒಂದುಗೂಡುವುದರಿಂದ ಕೈಗಾರಿಕೆಯ ಪ್ರಮಾಣ, ವಿಸ್ತರಣೆಗಳಿಗೆ ಅವಕಾಶವಾಗುವುದು. ಇದರಿಂದ ಶ್ರಮ ವಿಭಜನೆ, ಆಂತರಿಕ ಹಾಗೂ ಬಾಹ್ಯ ಆರ್ಥಿಕ ಲಾಭಗಳ ಅವಕಾಶ ಹೆಚ್ಚಿಸಿದಂತಾಗುವುದು. ಫ್ರಾನ್ಸ್, ಪಶ್ಚಿಮ ಜರ್ಮನಿ ಇತ್ಯಾದಿ ರಾಷ್ಟ್ರಗಳು ಮುಖ್ಯವಾಗಿ ಕಲ್ಲಿದ್ದಲು ಮತ್ತು ಉಕ್ಕಿನ ಕೈಗಾರಿಕೆಗಳನ್ನು ಈಚಿನ ಯುದ್ಧೋತ್ತರ ಕಾಲದಲ್ಲಿ ಒಕ್ಕೂಟ ಕ್ಷೇತ್ರದ ವಿಸ್ತೃತ ಚೌಕಟ್ಟಿಗೆ ಅನುಗುಣವಾಗಿ ಪುನರ್ವ್ಯವಸ್ಥೆಗೊಳಿಸಿದುದರ ಗಣನೀಯಲಾಭ ಇಂಥ ಸಂಘಟನೆಯ ಪ್ರಯೋಜನಕ್ಕೆ ಒಂದು ಉತ್ತಮನಿದರ್ಶನ. ಉತ್ಪಾದನಾಂಗಗಳ ಚಲನೆ, ತಾಂತ್ರಿಕ ಬೆಳೆವಣಿಗೆಯ ಗತಿಯನ್ನು ಚುರುಕುಗೊಳಿಸುವಿಕೆ ಇತ್ಯಾದಿ ಅಂಶಗಳ ಮೂಲಕ ಆರ್ಥಿಕಸಂಘಟನೆ ಆರ್ಥಿಕಾಭಿವೃದ್ಧಿಗೂ ಆರ್ಥಿಕ ಏರಿಳಿತಗಳ ಹೊಡೆತವನ್ನು ಕಡಿಮೆ ಮಾಡುವುದಕ್ಕೂ ಸಹಾಯವಾಗುವುದು. ಇತ್ತೀಚಿನ ಅಂತಾರಾಷ್ಟ್ರೀಯ ಆರ್ಥಿಕಸಂಘಟನೆಗೆ ಕೆಲವು ಐತಿಹಾಸಿಕ ಸಂದರ್ಭಗಳು ವಿಶೇಷವಾದ ಪ್ರೇರಕಶಕ್ತಿಗಳಾಗಿವೆ. ಎರಡನೆಯ ಮಹಾಯುದ್ಧದ ತರುವಾಯ ಐರೋಪ್ಯ ರಾಷ್ಟ್ರಗಳ ಆರ್ಥಿಕಭದ್ರತೆ ಮುರಿದುಬಿದ್ದ ದುಃಸ್ಥಿತಿಯಲ್ಲಿ ಅವುಗಳ ಹಿತಚಿಂತನೆಗಳು ಏಕರೂಪ ಹೊಂದಿದ್ದು ಅವುಗಳೊಳಗೆ ಪರಸ್ಪರ ನಿಕಟ ಬಾಂಧವ್ಯದ ಆವಶ್ಯಕತೆ ಎಂದಿಗಿಂತಲೂ ಹೆಚ್ಚಾಗಿತ್ತು. ಪುನರ್ವ್ಯವಸ್ಥೆಗೆ ಮಾರ್ಷಲ್ ಯೋಜನೆಯ ಮೂಲಕ ಉದಾರವಾಗಿ ಸಹಾಯ ನೀಡಿದ ಅಮೆರಿಕ ಐರೋಪ್ಯ ಆರ್ಥಿಕಸಂಘಟನೆಗೆ ಉತ್ತೇಜನ ನೀಡಿದುದು ಸಂಘಟನೆ ಶೀಘ್ರವಾಗಿ ಮುಂದುವರಿಯಲು ಅವಕಾಶಕೊಟ್ಟಿತು. ರೋಮ್ ಒಪ್ಪಂದದ ಪ್ರಕಾರ (೧೯೫೭) ಆರು (ಬೆಲ್ಜಿಯಂ, ಫ್ರಾನ್ಸ್, ಪಶ್ಚಿಮ ಜರ್ಮನಿ, ಇಟಲಿ, ಲಕ್ಸಂಬರ್ಗ್ ಮತ್ತು ನೆದರ್ಲೆಂಡ್ಸ್) ಪಾಶ್ಚಾತ್ಯ ಯುರೋಪು ರಾಷ್ಟ್ರಗಳು ಐಕ್ಯಮಾರುಕಟ್ಟೆಯನ್ನೂ ಸ್ಟಾಕ್ಹೋಮ್ ಒಪ್ಪಂದದ (೧೯೫೯) ಪ್ರಕಾರ ಏಳು (ಬ್ರಿಟನ್, ಡೆನ್ಮಾರ್ಕ್, ಸ್ವೀಡನ್, ನಾರ್ವೆ, ಆಸ್ಟ್ರಿಯ, ಸ್ವಿಟ್ಜರ್ಲೆಂಡ್ ಮತ್ತು ಪೋರ್ಚುಗಲ್) ಪಾಶ್ಚಾತ್ಯ ಯುರೋಪು ರಾಷ್ಟ್ರಗಳು ನಿರಾತಂಕ ವ್ಯಾಪಾರ ಸಂಘವನ್ನೂ ಸ್ಥಾಪಿಸಿಕೊಂಡವು. ಈ ಒಪ್ಪಂದಗಳ ತಳಹದಿಯಮೇಲೆ ಐರೋಪ್ಯ ಆರ್ಥಿಕಸಂಘಟನೆ ಮುಂದುವರಿಯುತ್ತಿದೆ. ಪ್ರಪಂಚದ ಇತರ ಭಾಗಗಳಲ್ಲೂ ಕೆಲ ಹಲವು ರಾಷ್ಟ್ರಗಳು ಕೂಡಿಕೊಂಡು ಒಂದಲ್ಲ ಒಂದು ರೀತಿಯ ಆರ್ಥಿಕಸಂಘಟನೆಯನ್ನು ಏರ್ಪಡಿಸಿಕೊಳ್ಳುತ್ತಿರುವುದು ಭವಿಷ್ಯ ಪ್ರಪಂಚದ ಆರ್ಥಿಕತೆಗೆ ಅತ್ಯಂತ ಗಮನಾರ್ಹವಾದ ವಿಷಯವಾಗಿದೆ. ನಾರ್ಡಿಕ್ ಐಕ್ಯಮಾರುಕಟ್ಟೆ, ಕೇಂದ್ರ ಅಮೆರಿಕ ನಿರಾತಂಕ ವ್ಯಾಪಾರಕ್ಷೇತ್ರ, ಲ್ಯಾಟಿನ್ ಅಮೆರಿಕ ನಿರಾತಂಕ ವ್ಯಾಪಾರಕ್ಷೇತ್ರ, ಪಶ್ಚಿಮ ಆಫ್ರಿಕ ಸಂಘ, ಆಫ್ರಿಕ ಮಾರುಕಟ್ಟೆ, ವೆಸ್ಟ್ ಇಂಡೀಸ್ ಫೆಡರೇಷನ್ನಿನ ಕಸ್ಟಮ್ಸ್ ಸಂಘ, ಅರಬ್ಬೀ ಐಕ್ಯಮಾರುಕಟ್ಟೆಗಳು ಉದ್ಭವಿಸಿವೆ. ಈ ಯೋಜನೆಗಳು ವಿವಿಧ ಹಂತಗಳಲ್ಲಿವೆ. ಒಟ್ಟಿನಲ್ಲಿ ಹೇಳುವುದಾದರೆ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಅನೇಕ ಪ್ರಾದೇಶಿಕ ಆರ್ಥಿಕ ಸಂಘಟನಾ ಯೋಜನೆಗಳು ಹುಟ್ಟಿಕೊಂಡಿವೆ. ವಿಶಾಲವಾದ ಅಂತಾರಾಷ್ಟ್ರೀಯ ಆರ್ಥಿಕಸಂಘಟನೆಗೆ ಈ ಮೇಲೆ ಹೇಳಿರುವ ಪ್ರಾದೇಶಿಕ ಸಂಘಟನಾ ಯೋಜನೆಗಳು ಮಾರ್ಗ ನೀಡುತ್ತಿವೆಯೇ ಎಂಬುದು ಮುಖ್ಯವಾದ ಪ್ರಶ್ನೆ. ಅಂತಾರಾಷ್ಟ್ರೀಯ ನಿರ್ದೇಶನಾಯಂತ್ರಗಳಲ್ಲಿ ಮುಖ್ಯವಾದ ಸುಂಕಗಳ ಹಾಗೂ ವ್ಯಾಪಾರದ ಸಾರ್ವತ್ರಿಕ ಒಪ್ಪಂದ (ಗ್ಯಾಟ್ ಅಥವಾ ಜನರಲ್ ಅಗ್ರಿಮೆಂಟ್ ಆನ್ ಟ್ಯಾರಿಫ್ಸ್ ಅಂಡ್ ಟ್ರೇಡ್). ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳನ್ನು ಸುಸೂತ್ರವಾಗಿ ನಡೆಸುವುದಕ್ಕಾಗಿ ಏರ್ಪಾಡಾಗಿರುವ ಅಂತಾರಾಷ್ಟ್ರೀಯ ದ್ರವ್ಯನಿಧಿ (ಐ.ಎಂ.ಎಫ್. ಅಥವಾ ಇಂಟರ್ನ್ಯಾಷನಲ್ ಮಾನಿಟರಿ ಫಂಡ್), ವಿಶ್ವಬ್ಯಾಂಕು ಇತ್ಯಾದಿ ಸಂಸ್ಥೆಗಳ ವಿಧಾಯಕ ಚೌಕಟ್ಟಿನೊಳಗೆ ಪ್ರಾದೇಶಿಕ ಸಂಘಟನಾ ಯೋಜನೆಗಳು ವಿಕಾಸವಾಗುತ್ತಿರುವುದರಿಂದ ಇವು ಸಹಜವಾಗಿಯೂ ವಿಶಾಲ ವ್ಯಾಪ್ತಿಯ ಅಂತಾರಾಷ್ಟ್ರೀಯ ಸಂಘಟನೆಗೆ ಮಾರ್ಗ ಮಾಡಿಕೊಡುವುದೆಂದು ಆಶಿಸಬಹುದು.