ಆರ್ಥಿಕ ಸಂಖ್ಯಾಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಥವಿಜ್ಞಾನವೇ ಮೊದಲಾದ ಸಮಾಜಶಾಸ್ತ್ರಗಳ ಕೆಲವು ಕ್ಲಿಷ್ಟ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಹೊಸದಾದ ಫಲಗಳನ್ನು ತರ್ಕದ ರೀತಿಯಲ್ಲಿ ಸಿದ್ಧಗೊಳಿಸಲು ಸಂಖ್ಯಾಶಾಸ್ತ್ರದ ನೆರವಿನಿಂದ ಮಾಡುವ ಅಭ್ಯಾಸ (ಎಕನಾಮಿಕ್ ಸ್ಟ್ಯಾಟಿಸ್ಸ್ಟಿಕ್ಸ್). ಸಂಖ್ಯಾಶಾಸ್ತ್ರದ ಸಿದ್ಧಾಂತಗಳನ್ನೂ ಶೋಧನಾ ಕ್ರಮಗಳನ್ನೂ ಪ್ರಯೋಗ ಮಾಡಿ ಇತರ ಶಾಸ್ತ್ರಗಳ ಬೆಳೆವಣಿಗೆಯನ್ನು ತೀವ್ರಗೊಳಿಸಬಹುದು. ಅಂಥ ಪ್ರಯೋಗಗಳು ಅರ್ಥವಿಜ್ಞಾನಕ್ಕೆ ಯಾವ ರೀತಿ ಅನ್ವಯಿಸುವುವು ಮತ್ತು ಯಾವ ಫಲವನ್ನು ದೊರಕಿಸಿ ಕೊಡಬಹುದು ಎಂಬುದನ್ನು ಇಲ್ಲಿ ಪರಿಶೀಲಿಸಲಾಗಿದೆ. ರಾಜ್ಯಾಡಳಿತದಲ್ಲಿ ಆನುಷಂಗಿಕವಾಗಿ ಆರ್ಥಿಕ ಮತ್ತು ಸಾಮಾಜಿಕ, ಔದ್ಯೋಗಿಕ ಮತ್ತು ವಾಣಿಜ್ಯ ಮುಂತಾದ ಕ್ಷೇತ್ರಗಳಿಗೆ ಸಂಬಂಧಪಟ್ಟ ಅಂಕಿಅಂಶಗಳು ಹೇರಳವಾಗಿ ಶೇಖರಣೆಯಾಗುತ್ತವೆ. ಕೃಷಿ ಮತ್ತು ಹೈನುಗಳಿಂದ ಉತ್ಪತ್ತಿ, ಖನಿಜ ಪದಾರ್ಥಗಳ ಎತ್ತುವಳಿ, ಕಾರ್ಖಾನೆಗಳ ಹುಟ್ಟುವಳಿ, ವ್ಯಾಪಾರ ಮತ್ತು ಸಂಚಾರ ಸಾರಿಗೆಗಳ ಮಾಹಿತಿ, ತೆರಿಗೆಗಳು ಮತ್ತು ಸುಂಕಗಳ ವಸೂಲಿ, ಹೊರನಾಡುಗಳೊಡನೆ ನಡೆಸುವ ವ್ಯಾಪಾರದ ಮೊಬಲಗು, ನಿರುದ್ಯೋಗಿಗಳ ಸಂಖ್ಯೆ ಮುಂತಾದ ಅನೇಕ ತರಹದ ಸಂಖ್ಯಾತ್ಮಕ ವಿವರಗಳು ಆಡಳಿತದ ಉಪಫಲವಾಗಿ (ಬೈಪ್ರಾಡಕ್ಟ್) ದೊರೆಯುತ್ತವೆ. ಹಲಕೆಲವು ವಿಶಿಷ್ಟ ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ನಡೆಸುವ ತಪಾಸಣೆಗಳಿಂದಲೂ (ಇನ್ಕ್ವೈರಿ) ಅಂಕಿಸಂಖ್ಯೆಗಳು ದೊರೆಯುತ್ತವೆ. ಜನಗಣತಿ, ಜಾನುವಾರು ಗಣತಿ, ಔದ್ಯೋಗಿಕ ಹುಟ್ಟುವಳಿಯ ಗಣತಿ ಮೊದಲಾದುವು ಈ ವರ್ಗಕ್ಕೆ ಸೇರಿದವು. ಭಾರತದ ಕೇಂದ್ರ ಸರ್ಕಾರದ ಕೇಂದ್ರೀಯ ಸಾಂಖ್ಯಕೀಯ ಸಂಸ್ಥೆ, ಆರ್ಥಿಕ ಮತ್ತು ಇತರ ಅಂಕಿಅಂಶಗಳನ್ನು ಶೇಖರಿಸಿ, ಅವುಗಳನ್ನು ವರ್ಗೀಕರಿಸಿ ಭಾರತದ ಸಾಂಖ್ಯಕೀಯ ಗೋಷ್ವಾರೆ (ಸ್ಟ್ಯಾಟಿಸ್ಟಿಕಲ್ ಅಬ್ಸ್ಟ್ರಾಕ್ಟ್ ಆಫ್ ಇಂಡಿಯ) ಎಂಬ ಅಭಿಧಾನದ ಪ್ರಕಟಣೆಯನ್ನು ವರ್ಷಂಪ್ರತಿ ಮಾಡುತ್ತಲಿದೆ. ಈ ಪ್ರಕಟಣೆಯ ಮೂಲಕ ದೇಶದ ಆರ್ಥಿಕ ಯೋಜನೆಗೆ ಬೇಕಾದ ಮೂಲಸಾಮಗ್ರಿಗಳು ಕಾಲಕಾಲಕ್ಕೆ ದೊರೆಯುವಂತಾಗುತ್ತದೆ. ಅರ್ಥಶಾಸ್ತ್ರಜ್ಞರಿಗೂ ಇತರ ಸಂಶೋಧಕರಿಗೂ ಇವು ಬಹಳ ಅಗತ್ಯ. ಆರ್ಥಿಕನೀತಿ ಮತ್ತು ಯೋಜನೆಗಳ ಸಫಲತೆ ಮೊದಲಾದುವುಗಳನ್ನು ನಿರ್ಧರಿಸಲು ಇದು ಬಹಳ ಉಪಯೋಗವಾಗುವುದು. ಆರ್ಥಿಕಕ್ಷೇತ್ರಕ್ಕೆ ಸಂಬಂಧಿಸಿದ ಯಾವ ಗೋಷ್ವಾರೆಗಳು ಹೊರಬೀಳುತ್ತವೆ ಮತ್ತು ಅವುಗಳನ್ನು ಹೇಗೆ ಬಳಸಬಹುದು ಎಂಬುದನ್ನು ಕುರಿತು ಸಂಕ್ಷಿಪ್ತವಾಗಿ ಇಲ್ಲಿ ವಿಮರ್ಶಿಸಲಾಗಿದೆ.

ದೇಶದ ವಿಸ್ತೀರ್ಣ ಮತ್ತು ಜನಸಂಖ್ಯೆ[ಬದಲಾಯಿಸಿ]

ಇದು ಎಲ್ಲ ವಿಧವಾದ ಯೋಜನೆಗಳಿಗೂ ತಳಹದಿಯಂಥ ಅಂಶ. ಗ್ರಾಮಾಂತರಗಳಲ್ಲೂ ಪಟ್ಟಣವಾಸಗಳಲ್ಲೂ ಯಾವ ಪ್ರಮಾಣದ ಜನತೆ ಹೆಚ್ಚಿದೆ, ಜನನಿಬಿಡವಾದ ಪ್ರದೇಶಗಳಾವುವು, ದೇಶದ ಜನಸಂಖ್ಯೆ ಯಾವ ಪ್ರಮಾಣದಲ್ಲಿ ಹೆಚ್ಚುತ್ತಲಿದೆ, ಯಾವ ರಾಜ್ಯಗಳಲ್ಲಿ ಜನವೃದ್ಧಿಯ ಪ್ರಮಾಣ ಆತಂಕಕಾರಿಯಾಗಿ ಏರುತ್ತಿದೆ ಇವೇ ಮುಂತಾದ ವಿಷಯಗಳನ್ನು ಈ ಅಂಕಿಸಂಖ್ಯೆಗಳಿಂದ ತಿಳಿಯಬಹುದಾಗಿದೆ. ಭಾರತದ ವಿಸ್ತೀರ್ಣ 32.76 ಲಕ್ಷ ಚದರ ಕಿಲೋಮಿಟರುಗಳು (12.6 ಲಕ್ಷ ಮೈಲಿಗಳು) ಇರುವುದು, ಮತ್ತು ಮೇ 11, 2000ರಲ್ಲಿ ಭಾರತದ ಜನಸಂಖ್ಯೆ 1 ಬಿಲಿಯನ್ ತಲುಪಿತು. ವಿಸ್ತೀರ್ಣದಲ್ಲಿ ಎಲ್ಲಕ್ಕಿಂತ ದೊಡ್ಡ ರಾಜ್ಯವೆಂದರೆ ರಾಜಸ್ತಾನ (342,236 ಚ ಕಿ.ಮೀ) ಅನಂತರ ಮಧ್ಯಪ್ರದೇಶ 308,144 ಚದರ ಕಿಲೋಮೀಟರುಗಳು). ಎಲ್ಲಕ್ಕಿಂತ ಕಡಿಮೆ ವಿಸ್ತೀರ್ಣದ ಎರಡು ರಾಜ್ಯಗಳೆಂದರೆ, ಕೇರಳ (863ಚದರ ಕಿಲೋಮೀಟರುಗಳು), ಮತ್ತು ಪಶ್ಚಿಮ ಬಂಗಾಲ (88,752 ಚದರ ಕಿಲೋಮೀಟರುಗಳು), ಕರ್ನಾಟಕ ರಾಜ್ಯದ ವಿಸ್ತೀರ್ಣ 197,791 ಚದರ ಕಿಲೋಮೀಟರುಗಳು. ಜನಸಂಖ್ಯೆಯಲ್ಲಿ ಎಲ್ಲಕ್ಕಿಂತ ದೊಡ್ಡ ರಾಜ್ಯ ಉತ್ತರಪ್ರದೇಶ (166,19800) ಎರಡನೆಯದು ಮಹಾರಾಷ್ಟ್ರ (96,87900 ಲಕ್ಷ), ಮೂರನೆಯದು ಬಿಹಾರ (82,999000 ಲಕ್ಷ), ಮತ್ತು ನಾಲ್ಕನೆಯದು ಪಶ್ಚಿಮ ಬಂಗಾಲ (80,76000 ಲಕ್ಷ).

ಜನವೃದ್ಧಿಯ ದರ[ಬದಲಾಯಿಸಿ]

ಹಿಂದಿನ ಜನಗಣತಿಯ ಅಂಕಿಸಂಖ್ಯೆಗಳ ಆಧಾರದ ಮೇಲೆ ಯಾವ ದರದಲ್ಲಿ ಜನವೃದ್ಧಿ ಆಗುತ್ತಲಿದೆ ಎಂದು ತಿಳಿಯುವುದು ಮತ್ತೊಂದು ಮುಖ್ಯ ವಿಷಯ. ರಾಷ್ಟ್ರದ ಜನಬಲ ಹೇಗೆ ಉಳಿಯುತ್ತಿದೆ, ವಾಂಛನೀಯ ದರಕ್ಕಿಂತ ಹೆಚ್ಚೇ ಕಡಿಮೆಯೇ, ಇದಕ್ಕನುಸಾರವಾಗಿ ಆರ್ಥಿಕ ಯೋಜನೆಗಳಲ್ಲಿ ಏನೇನು ಮಾರ್ಪಾಡುಗಳನ್ನು ಮಾಡಬೇಕು ಎನ್ನುವುದನ್ನೆಲ್ಲ ವಿಮರ್ಶಿಸಬೇಕಾಗುವುದು. 1941-51ರ ದಶಕದಲ್ಲಿ ಭಾರತದ ಜನಸಂಖ್ಯೆ 31.9 ಕೋಟಿಯಿಂದ 36.1 ಕೋಟಿ ಹೆಚ್ಚಿತು. ಅಂದರೆ ಶೇ.13.3 ವೃದ್ಧಿಹೊಂದಿತು. ಮುಂದಿನ ದಶಕದಲ್ಲಿ 36.1 ಕೋಟಿಯಿಂದ 43.8 ಕೋಟಿಗೆ ಹೆಚ್ಚಿತು ಮತ್ತು ಹೆಚ್ಚಿಗೆಯ ದರ ದಶಕದಲ್ಲಿ ಶೇ.21.5 ಏರಿತು. ಹೆಚ್ಚಿನ ದರದಲ್ಲಿ ಜನಸಂಖ್ಯೆ ಬೆಳೆದಿರುವ ರಾಜ್ಯಗಳೆಂದರೆ ಅಸ್ಸಾಂ ಶೇ.34.5, ಪಶ್ಚಿಮ ಬಂಗಾಲ ಶೇ.32.8, ಗುಜರಾತ್ ಶೇ.26.9 ಮತ್ತು ರಾಜಸ್ಥಾನ ಶೇ.26.2. ಕರ್ನಾಟಕ ರಾಜ್ಯದ ಜನಸಂಖ್ಯೆ ಶೇ.21.6 ಬೆಳೆದಿದೆ. ಬಹುಶಃ ಇದೇ ದರದಲ್ಲಿ ಮುಂದೆಯೂ ದೇಶದ ಜನಸಂಖ್ಯೆ ಹೆಚ್ಚುತ್ತಲಿದೆ ಎನ್ನಬಹುದು. 2011ರಲ್ಲಿ 1,193,458,000ರಷ್ಟು ಆಗುವುದೆಂದು ಅಂದಾಜು ಮಾಡಿದ್ದಾರೆ. ಇಷ್ಟು ಜನಕ್ಕೂ ಆಹಾರ ಪದಾರ್ಥಗಳನ್ನೂ ಸುಖದ ಬಾಳುವೆಗೆ ಬೇಕಾದ ಇತರ ಸಾಮಗ್ರಿಗಳನ್ನೂ ಸೌಲಭ್ಯಗಳನ್ನೂ ಒದಗಿಸಲು ನಾಡಿನಲ್ಲಿ ಯೋಜನೆಗಳನ್ನು ಅಳವಡಿಸ ಬೇಕಾಗುವುದು. ಅಲ್ಲದೆ ಜನಸಂಖ್ಯೆಯನ್ನು ಹತೋಟಿಗೆ ತರಲು ಮಿತ ಸಂತಾನ, ಕುಟುಂಬ ಯೋಜನಾಕ್ರಮ ಮೊದಲಾದವುಗಳಿಂದ ಜನಸಂಖ್ಯಾ ನಿಯಂತ್ರಣ ಮಾಡಬೇಕಾಗುವುದು.

ಪುರುಷ-ಸ್ತ್ರೀ ನಿಷ್ಪತ್ತಿ[ಬದಲಾಯಿಸಿ]

ಜನಸಂಖ್ಯೆಯ ವೃದ್ಧಿ ತರುಣಸ್ತ್ರೀಯರ ಸಂಖ್ಯೆಯನ್ನು ಅವಲಂಬಿಸಿರುವುದರಿಂದ ಜನತೆಯಲ್ಲಿ ಪುರುಷ-ಸ್ತ್ರೀಯರ ಪ್ರಮಾಣವನ್ನು ಪರಿಶೀಲಿಸಬೇಕಾಗುವುದು. 1961ರ ಜನಗಣತಿಯ ಅಂಕಿಅಂಶಗಳ ಮೇರೆಗೆ ಭಾರತ ದೇಶದಲ್ಲಿ 1000 ಪುರುಷರಿಗೆ 941 ಸ್ತ್ರೀಯರು ಇದ್ದರು. 2001ರಲ್ಲಿ 1000 ಪುರುಷರಿಗೆ 933 ಸ್ತ್ರೀಯರಿದ್ದರು. ಒಟ್ಟಿನಲ್ಲಿ ಹೇಳುವುದಾದರೆ, 1000 ಗಂಡಸರಿದ್ದರೆ 943 ಹೆಂಗಸರಿರುವರು. ಈ ಪ್ರಮಾಣಕ್ಕೆ ಪುರುಷ-ಸ್ತ್ರೀಯರ ನಿಷ್ಪತ್ತಿ ಎಂದು ಹೆಸರು. ಕರ್ನಾಟಕ ರಾಜ್ಯದಲ್ಲಿ ಈಗ ಪುರುಷ-ಸ್ತ್ರೀಯರ ಪ್ರಮಾಣ 1000ಕ್ಕೆ 964 ಇರುವುದು. ಅಭಿವೃದ್ಧಿ ಹೊಂದಿದ ಪಾಶ್ಚಾತ್ಯ ದೇಶಗಳಲ್ಲಿ ಪುರುಷ-ಸ್ತ್ರೀಯರ ಪ್ರಮಾಣ 1000ಕ್ಕಿಂತ ಹೆಚ್ಚಿರುವುದು. ಆದರೆ ಭಾರತದಲ್ಲೂ ಮತ್ತು ಇತರ ಕೆಲವು ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲೂ ಇದು ಕಡಿಮೆಯಾಗಿರುವುದು. ಭಾರತ ದೇಶದಲ್ಲಿ 1941ರಲ್ಲಿ ನಡೆದ ಜನಗಣತಿಯ ಪ್ರಕಾರ ಈ ಪುರುಷ-ಸ್ತ್ರೀ ಪ್ರಮಾಣ 945 ಆಗಿದ್ದು 1951ರಲ್ಲಿ 946 ಆಯಿತು. 1961ರಲ್ಲಿ ಮತ್ತೆ ಸ್ವಲ್ಪ ಇಳಿಮುಖವಾಗಿ 941ಕ್ಕೆ ಬದಲಾಯಿಸಿತು. 2001ರಲ್ಲಿ 933 ಆಗಿದೆ. ಈ ವಿಧದ ಬದಲಾವಣೆಗೆ ಖಚಿತವಾದ ಕಾರಣಗಳಾವುದೂ ತಿಳಿದುಬಂದಿಲ್ಲ.

ವಯೋನಿಷ್ಪತ್ತಿ[ಬದಲಾಯಿಸಿ]

ರಾಷ್ಟ್ರದ ಜನಸಮೂಹದಲ್ಲಿ ವವಯೋಮಿತಿಮಾನದ ವಿತರಣೆ ಹೇಗಿದೆ ಎಂದು ತಿಳಿಯುವುದೂ ಅಗತ್ಯ. ವಯೋಮಾನಕ್ಕನುಸಾರವಾಗಿ ಜನರನ್ನು ನಾಲ್ಕು ಸ್ಥೂಲ ಸಮೂಹಗಳನ್ನಾಗಿ ವಿಭಾಗಿಸಬಹುದು. ಹೇಗೆಂದರೆ: 0-14 ವರ್ಷ, 15-34 ವರ್ಷ, 35-54 ವರ್ಷ ಮತ್ತು ಅಧಿಕ ವಯಸ್ಸಿನವರು. ವಯೋಮಾನ ವಿತರಣೆಯನ್ನು ಶತಕಾಂಶ ಪ್ರಮಾಣದಲ್ಲಿ ಕೆಳಕಂಡಂತೆ ಕೋಷ್ಟಕ ರೂಪದಲ್ಲಿ ಪ್ರದರ್ಶಿಸಬಹುದು. ತುಲನಾತ್ಮಕ ವಿಮರ್ಶೆಗಾಗಿ ಇತರ ಕೆಲವು ದೇಶಗಳ ಅಂಕಿ ಸಂಖ್ಯೆಗಳನ್ನೂ ಕೊಟ್ಟಿದೆ. ಶತಾಂಶ ವಯೋಮಾನ ವಿತರಣೆ ವಯೋಮಿತ

ದೇಶ 0-14 15-29 30-54 55+
ಭಾರತ 1961 50.9 29.2 15.0 4.9
ಭಾರತ 1951 39.3 33 20.4 8.3
ಕರ್ನಾಟಕ ರಾಜ್ಯ 1951 39.0 35.7 19.0 6.3
ಅಮೆರಿಕ ಸಂಯುಕ್ತ ಸಂಸ್ಥಾನ 27.1 30.4 25.6 16.9

ಮುಂದುವರಿದ ದೇಶಗಳಲ್ಲಿ ವವಯೋಮಿತಿವೃದ್ಧರು ಹೆಚ್ಚು ಪ್ರಮಾಣದಲ್ಲಿರುವರು. ಅಲ್ಲಿಯ ಜನರು ದೃಢಕಾಯರಾಗಿ ದೀರ್ಘಜೀವಿಗಳಾಗಿರುವುದೇ ಇದಕ್ಕೆ ಕಾರಣ. ಚಿಕ್ಕ ವಯಸ್ಸಿನವರ (0-14 ವಯಸ್ಸಿನವರ) ಪ್ರಮಾಣವೂ ಅವರಲ್ಲಿ ಕಡಿಮೆ. ನಮ್ಮಲ್ಲಿ ಇದಕ್ಕೆ ನೇರೆದುರಾಗಿ ಚಿಕ್ಕ ವಯಸ್ಸಿನವರ ಪ್ರಮಾಣ ಹೆಚ್ಚಾಗಿಯೂ ವೃದ್ಧರ ಪ್ರಮಾಣ ಕಡಿಮೆಯಾಗಿಯೂ ಇರುವುದು.

ಜನತೆಯ ಆರ್ಥಿಕ ವರ್ಗೀಕರಣ[ಬದಲಾಯಿಸಿ]

ರಾಷ್ಟ್ರದ ಸಂಪದಭಿವೃದ್ಧಿಯನ್ನು ಪರಿಶೀಲಿಸ ಬೇಕಾದರೆ, ದೇಶಾದ್ಯಂತ ಅರ್ಥ ಸಂಪಾದನೆಯಲ್ಲಿ ತೊಡಗಿರುವವರು ಎಷ್ಟು ಜನ, ಕಸಬು ಮತ್ತು ಇತರ ವೃತ್ತಿಗಳಿಂದ ಸಂಪಾದನೆ ಇಲ್ಲದಿರುವವರು ಎಷ್ಟು ಜನ ಎಂದು ತಿಳಿಯಬೇಕು. ಇದಕ್ಕೆ ಸಂಬಂಧಪಟ್ಟ ಅಂಕಿಅಂಶಗಳನ್ನು ಜನಗಣತಿಯ ಸಮಯದಲ್ಲಿ ಶೇಖರಿಸಲಾಗುವುದು. ಆರ್ಥಿಕ ಪ್ರಗತಿಯನ್ನು ಒರೆಹಚ್ಚಬೇಕಾದರೆ,ರಾಷ್ಟ್ರದ ಜನರು ಶೇಕಡಾವಾರು ಯಾವ ಪ್ರಮಾಣದಲ್ಲಿ ವಿವಿಧ ಉದ್ಯೋಗಗಳಲ್ಲೂ ಕಸುಬುಗಳಲ್ಲೂ ವೃತ್ತಿಗಳಲ್ಲೂ ತೊಡಗಿರುವರು ಎಂಬುದನ್ನು ಈ ಅಂಕಿ ಸಂಖ್ಯೆಗಳು ತಿಳಿಸುತ್ತವೆ. ಈ ದೃಷ್ಟಿಯಿಂದ ಅಧ್ಯಯನ ಮಾಡಲು ಅನುಕೂಲಿಸುವಂತೆ ವೃತ್ತಿ ಆಥವಾ ಉದ್ಯೋಗದ ಮೇರೆಗೆ ಜನಸಂಖ್ಯೆಯ ವಿತರಣೆಯನ್ನು ಜನಗಣತಿಯ ವರದಿಯಲ್ಲಿ ಕೊಡಲಾಗುತ್ತದೆ. ಮುಖ್ಯವಾದ ಆರ್ಥಿಕ ಸಂಪಾದನೆಯ ವೃತ್ತಿಗಳನ್ನು ಹೀಗೆ ವಿಂಗಡಿಸಿರುವರು:

  1. ಸಾಗುವಳಿದಾರರು
  2. ವ್ಯವಸಾಯ ಕಾರ್ಮಿಕರು
  3. ಖನಿಜಗಳ ಕೆಲಸ, ಕಾಡುಗಳಲ್ಲಿ ಬೇಟೆಯಾಡುವುದು, ಮರಗಳನ್ನು ಕಡಿಯುವುದು, ಪ್ಲಾಂಟೇಷನ್ ಕೆಲಸ, ದನಕರುಗಳ ವ್ಯಾಪಾರ, ಹೈನು ವ್ಯಾಪಾರ, ಮೀನುಗಾರಿಕೆ
  4. ಕುಟುಂಬ ಕೈಗಾರಿಕೆಯಲ್ಲಿ ಕೆಲಸ
  5. ಸರಕು ತಯಾರು ಮಾಡುವ ಇತರ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದು
  6. ಕಟ್ಟಡಗಳ ನಿರ್ಮಾಣ
  7. ವಾಣಿಜ್ಯ ಮತ್ತು ವ್ಯಾಪಾರ
  8. ಸಾರಿಗೆ ಸಂಚಾರ ಮತ್ತು ವಾಹನ, ವಹಿವಾಟು ಮತ್ತು
  9. ಇತರ ನೌಕರಿ ಮತ್ತು ಸೇವೆಗಳು.

ರಾಷ್ಟ್ರಾದಾಯ[ಬದಲಾಯಿಸಿ]

ಭಾರತದ ಕೇಂದ್ರೀಯ ಸಾಂಖ್ಯಕೀಯ ಸಂಸ್ಥೆ ರಾಷ್ಟ್ರಾದಾಯವನ್ನೂ ವರ್ಷವರ್ಷಕ್ಕೂ ಇದರಲ್ಲಾಗುವ ಬದಲಾವಣೆಯನ್ನೂ ಲೆಕ್ಕಾಚಾರ ಮಾಡಿ ಅಂಕಿಸಂಖ್ಯೆಗ ಳನ್ನು ಪ್ರಕಟಿಸುತ್ತದೆ. ರಾಷ್ಟ್ರಾದಾಯವನ್ನು ಉಗಮಸ್ಥಾನಕ್ಕೆ ಅನುಸಾರವಾಗಿ ವಿಂಗಡಿಸಿ ಗಣನೆ ಮಾಡುವುದು ರೂಢಿ. ಮುಖ್ಯವಾದ ಉಗಮಸ್ಥಾನಗಳೆಂದರೆ

  1. ಒಕ್ಕಲುತನ : ಇದರಲ್ಲಿ ಸಾಗುವಳಿ, ದನಕರುಗಳು ಕುರಿ ಕೋಳಿ ಮುಂತಾದವುಗಳ ಸಾಕಣೆ, ಕಾಡಾಡಿ ಕಸುಬುಗಳು, ಪ್ಲಾಂಟೇಷನ್ ಕೆಲಸ ಮತ್ತು ಮೀನುಗಾರಿಕೆ ಇವೆಲ್ಲ ಸೇರಿವೆ.
  2. ಖನಿಜಗಳ ಕೆಲಸ, ಸಿದ್ಧವಸ್ತು ತಯಾರಿಕೆ, ಗಿರಣಿ ಮತ್ತು ಸಣ್ಣ ಕೈಗಾರಿಕೆಗಳು,
  3. ವ್ಯಾಪಾರ, ವಾಣಿಜ್ಯ, ಮಾರಾಟ, ಸಾರಿಗೆ ಸಂಚಾರ, ಸಾಗಾಣಿಕೆ ರೈಲು, ತಂತಿ ಟಪಾಲು,
  4. ಸೇವೆ ಮತ್ತು ಕಲಾಕೃತಿಗಳು, ಸರಕಾರಿ ಉದ್ಯೋಗ, ಮನೆ ಊಳಿಗ, ಮನೆಮಠಗಳಿಂದ ಬರುವ ವರಮಾನ. ಹೀಗೆ ವಿಂಗಡಿಸಿದ ತರುವಾಯ ಚಾಲ್ತಿಯ ಧಾರಣೆಯ ಮೇರೆಗೆ ಇವುಗಳ ಒಟ್ಟು ಬೆಲೆಯನ್ನು ಲೆಕ್ಕ ಹಾಕಿ ರಾಷ್ಟ್ರಾದಾಯವನ್ನು ಪಡೆಯುತ್ತೇವೆ. ಇದರ ಜೊತೆಗೆ ಹೊರದೇಶಗಳಿಂದ ಬರತಕ್ಕ ವರಮಾನ ಅಥವಾ ಆದಾಯಗಳು ಏನಾದರೂ ಇದ್ದರೆ ಅದನ್ನೂ ಸೇರಿಸಿಕೊಳ್ಳಬೇಕು.

ವ್ಯಕ್ತಿವರಮಾನದ ವಿತರಣೆ[ಬದಲಾಯಿಸಿ]

ರಾಷ್ಟ್ರಾದಾಯವನ್ನು ಕುರಿತು ಮೇಲೆ ಹೇಳಿದ್ದೇವೆ. ಇದು ರಾಷ್ಟ್ರಕ್ಕೆ ಸಮಷ್ಟಿಯಲ್ಲಿ ದೊರೆಯುವ ಆದಾಯವಾಗುವುದು. ಕೆಲಸಗಾರರಿಗೆ, ದುಡಿಯುವವರಿಗೆ ಇದರ ಯಾವ ಅಂಶ ಸಿಗುವುದು, ಅದರಲ್ಲಿ ಪ್ರತಿಯೊಬ್ಬರ ವರಮಾನವೂ ಎಷ್ಟು, ಲಕ್ಷಗಟ್ಟಲೆ ಸಂಪಾದಿಸುವವರು ಎಷ್ಟು ಮಂದಿ ಎಂದು ವಿಚಾರ ಮಾಡಬೇಕಾದ ಸಂದರ್ಭಗಳು ಒದಗುತ್ತವೆ. ಇದಕ್ಕೆ ವ್ಯಕ್ತಿವರಮಾನ ಎನ್ನಬಹುದು. ಸಮಾಜವಾದವನ್ನು ಗುರಿಯಾಗಿಟ್ಟುಕೊಂಡಿರುವ ರಾಷ್ಟ್ರದಲ್ಲಿ ವ್ಯಕ್ತಿವರಮಾನ ಆದಷ್ಟು ಸಮಾನವಾಗಿರಬೇಕು. ಅಂದರೆ ವ್ಯಕ್ತಿವರಮಾನ ಹಂಚಿಕೆ ಅಥವಾ ವಿತರಣೆಯಲ್ಲಿ ಹೆಚ್ಚಿನ ಏರುಪೇರುಗಳು ಇರಕೂಡದು. ಅಸಮತೆ ಆದಷ್ಟು ಕಡಿಮೆ ಇರಬೇಕು. ವ್ಯಕ್ತಿವರಮಾನವನ್ನು ಕುರಿತು ಪೆರೇಟೊ ತಕ್ಕ ಮಾಹಿತಿಗಳನ್ನು ಶೇಖರಿಸಿ, ಪರಿಶೀಲಿಸಿ ದ್ದಾನೆ. ಅದರ ಫಲವಾಗಿ ಒಂದು ನಿಯಮವನ್ನು ನಿರೂಪಿಸಿದ್ದಾನೆ. ಇದಕ್ಕೆ ಪೆರೇಟೊ ನಿಯಮ ಎಂದು ಹೆಸರು. ಆದಾಯ X ಗಿಂತ ಹೆಚ್ಚು ಇರುವ ವ್ಯಕ್ತಿಗಳ ಸಂಖ್ಯೆಯು N ಆದರೆ, ಇವೆರಡಕ್ಕೂ ನಿರ್ದಿಷ್ಟವಾದ ಒಂದು ಸಂಬಂಧವಿರುವುದು. ಎಂದು N ನ್ನು X ನ ಬೀಜಗಣಿತ ಉತ್ಪನ್ನವನ್ನಾಗಿ ನಿರೂಪಿಸಬಹುದು ಎಂಬುದೇ ಪೆರೇಟೊ ನಿಯಮ. ಇಲ್ಲಿ c ಮತ್ತು a ಪ್ರಾಚಲಗಳು; ಇವು ದೇಶ ಮತ್ತು ಕಾಲಕ್ಕೆ ಅನುಸಾರವಾಗಿ ಬೇರೆ ಬೇರೆ ಬೆಲೆಗಳನ್ನು ತಾಳುವುವು. a ಹೆಚ್ಚಾದರೆ ವ್ಯಕ್ತಿ ವರಮಾನದ ವಿತರಣೆಯ ಅಸಮತೆ ಕಡಿಮೆಯಾಗುವುದು. ಆದಾಯ ತೆರಿಗೆ ಮಾಹಿತಿಗಳ ಆಧಾರದ ಮೇಲೆ c ಮತ್ತು a ಇವುಗಳ ಬೆಲೆಗಳನ್ನು ಕಂಡುಹಿಡಿಯಬಹುದು.

ನೆಲಹೊಲಗಳ ಉಪಯೋಗ[ಬದಲಾಯಿಸಿ]

ಸಾಗುವಳಿಗೆ ತಕ್ಕುದಾದ ಭೂಮಿಯನ್ನು ಪುರ್ಣ ವಾಗಿ ಉಪಯೋಗಿಸಿ ಧಾನ್ಯ ಮತ್ತು ಇತರ ಪೈರುಗಳನ್ನು ಬೆಳೆದರೆ ದೇಶದಲ್ಲಿ ಸಮೃದ್ಧಿ ನೆಲೆಸುವುದು ಮತ್ತು ಸಂಪದಭಿವೃದ್ಧಿಗೆ ದಾರಿಯಾಗುವುದು. ನಮಗೆ ಬೇಕಾಗುವ ದವಸಧಾನ್ಯ ಗಳನ್ನು ನಾವೇ ಬೆಳೆಸಿಕೊಂಡು ನಮ್ಮ ರಾಷ್ಟ್ರದ ಜನರಿಗೆ ಸಾಕಷ್ಟು ಹಂಚಬಹುದು. ಆದರೆ, ಕಾರಣಾಂತರಗಳಿಂದ ಕೆಲವು ಕಡೆ ಜಮೀನುಗಳು ಸಾಗುವಳಿಯಾಗದೆ ಪಾಳುಬಿದ್ದಿರು ತ್ತವೆ. ಜಮೀನಿನ ಉಪಯೋಗದ ವಿವರಗಳನ್ನು ಗ್ರಾಮದ ಶಾನುಭೋಗರ ಲೆಕ್ಕಗಳ ಆಧಾರದ ಮೇಲೆ ಆಹಾರ ಮತ್ತು ಕೃಷಿ ಮಂತ್ರಾಲಯದ ಆರ್ಥಿಕ ಮತ್ತು ಸಾಂಖ್ಯಕೀಯ ಶಾಖೆಯಿಂದ ಶೇಖರಿಸಲಾಗುತ್ತದೆ. ಈ ಅಂಕಿಸಂಖ್ಯೆಗಳನ್ನು ಸಂಕಲಿಸಿ ಈ ಶಾಖೆಯವರು ಪ್ರಕಟಗೊಳಿಸುತ್ತಾರೆ.ಭಾರತ ದೇಶದ ಒಟ್ಟು ಜಮೀನಿನ ವಿಸ್ತೀರ್ಣ 32.63 ಕೋಟಿ ಹೆಕ್ಟೇರುಗಳು (80.67 ಕೋಟಿ ಎಕರೆಗಳು). ಇದರ ಪೈಕಿ ಗ್ರಾಮಗಳ ಲೆಕ್ಕಪತ್ರದ ಪ್ರಕಾರ ಸಾಗುವಳಿ ಜಮೀನು 29.83 ಕೋಟಿ ಹೆಕ್ಟೇರುಗಳು: ಕಾಡುಗಳು 5,88 ಕೋಟಿ ಹೆಕ್ಟೇರುಗಳು; ಬಂಜರುಭೂಮಿ (ಖರಾಬು) 4.87 ಕೋಟಿ ಹೆಕ್ಟೇರುಗಳು; ಪಡಬಿದ್ದ ಜಮೀನು 2.12 ಕೋಟಿ ಹೆಕ್ಟೇರುಗಳು; ಸಾಗುವಳಿ ಮಾಡದ ಇತರ ಜಮೀನು 3.77 ಕೋಟಿ ಹೆಕ್ಟೇರುಗಳು. ಇದರ ಪೈಕಿ 13.52 ಕೋಟಿ ಹೆಕ್ಟೇರುಗಳು ಸಾಗುವಳಿಯಾಗಿರುತ್ತವೆ.ಆಹಾರಧಾನ್ಯಗಳಿಗೆ 11.58 ಕೋಟಿ ಹೆಕ್ಟೇರುಗಳೂ ಎಣ್ಣೆಬೀಜಗಳಿಗೆ 1.45 ಕೋಟಿ ಹೆಕ್ಟೇರುಗಳೂ ಹತ್ತಿ, ಕಬ್ಬು, ಸೆಣಬು, ಮೆಣಸಿನಕಾಯಿ, ಹೊಗೆಸೊಪ್ಪು ಮೊದಲಾದವಕ್ಕೆ ಉಳಿದ ಜಮೀನು ಬಿತ್ತನೆಯಾಗಿರುವುದು. 1963-64ರಲ್ಲಿ ಆಹಾರಧಾನ್ಯಗಳ ಉತ್ಪತ್ತಿ 79 ಲಕ್ಷ (ಮೆಟ್ರಿಕ್) ಟನ್ನುಗಳೂ ಎಣ್ಣೆ ಬೀಜಗಳು 71 ಲಕ್ಷ ಟನ್ನುಗಳು ಇದ್ದುವು. ಆಹಾರಧಾನ್ಯಗಳ ಈ ಉತ್ಪತ್ತಿ ಸುಮಾರು 40 ಕೋಟಿ ಜನರಿಗೆ ಸಾಕಾಗುವುದು. ಉಳಿದ ಸುಮಾರು 10 ಕೋಟಿ ಜನರಿಗೆ ಹೊರದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಬೇಕಾದ ನಿರ್ಬಂಧವೊದಗಿರುವುದು.

ಉತ್ಪತ್ತಿಯ ತೋರಂಕ[ಬದಲಾಯಿಸಿ]

ಆಹಾರಧಾನ್ಯಗಳು ಮತ್ತು ವ್ಯವಸಾಯದ ಇತರ ಉತ್ಪತ್ತಿ ವರ್ಷ ವರ್ಷಕ್ಕೆ ಹೇಗೆ ಹೆಚ್ಚುತ್ತಿರುವುದು, ಕೈಗಾರಿಕೆಯ ಸಿದ್ಧವಸ್ತುಗಳ ಮತ್ತು ಗಿರಣಿಗಳಲ್ಲಿ ತಯಾರಾದ ಸರಕುಗಳ ಪ್ರಮಾಣ ಹೇಗೆ ಬದಲಾವಣೆಯಾಗುತ್ತಿದೆ ಎಂಬುದನ್ನು ಪರಿಶೀಲನೆ ಮಾಡಿದ ಹೊರತು ಸಮರ್ಪಕವಾಗಿ ಆರ್ಥಿಕ ಯೋಜನೆಗಳನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ. ಹಲವಾರು ವಸ್ತುಗಳ ಉತ್ಪತ್ತಿ ಪ್ರಮಾಣದ ಏರಿಳಿತಗಳನ್ನು ತಿಳಿದು ಅರ್ಥ ಮಾಡಿಕೊಳ್ಳುವುದು ಕಷ್ಟತರವಾದ ಕೆಲಸವೇ ಹೌದು. ಬದಲಾವಣೆಗಳೆಲ್ಲವನ್ನೂ ಒಮ್ಮೆಲೆ ಗ್ರಹಿಸುವುದು ಮನಸ್ಸಿಗೆ ಆಗದ ಕೆಲಸ. ಆದ್ದರಿಂದ ಇದನ್ನು ಸರಳೀಕರಿಸಲು ಸೂಚ್ಯಂಕ ಅಥವಾ ತೋರಂಕಗಳನ್ನು ಬಳಸುತ್ತೇವೆ. ಯಾವುದಾದರೂ ಒಂದು ವರ್ಷವನ್ನು ಮೂಲವರ್ಷವೆಂದು ಆರಿಸಿಕೊಂಡು ಆ ವರ್ಷದಲ್ಲಿನ ಉತ್ಪತ್ತಿಯ ಮಾನವನ್ನು 100 ಎಂದಿಟ್ಟುಕೊಂಡು ಪ್ರಸ್ತುತ ವರ್ಷದ ಉತ್ಪತ್ತಿ ಎಷ್ಟೆಂದು ಸೂಚಿಸುವ ಸಂಖ್ಯೆಗೆ ತೋರಂಕ ಎಂದು ಹೆಸರು.ಭಾರತವು 2010ರಲ್ಲಿ 151.2 ಮಿಲಿಯನ್ ಟನ್ನುಗಳಷ್ಟು ಸಿಮೆಂಟ್ ಉತ್ಪಾದನೆಯ ಸಾಮಥರ್ಯ್ ಹೊಂದಿದ್ದು ವಿಶ್ವದಲ್ಲೇ ಎರಡನೆಯ ಸ್ಥಾನ ಪಡೆದಿದೆ. ಇದು 2011ರಲ್ಲಿ 236.16 ಮಿಲಿಯನ್ ಟನ್ಗಳಾಗುವ ನಿರೀಕ್ಷೆ ಇದೆ. ಇದೇ ರೀತಿಯಾಗಿ ಇತರ ಸಾಮಾನುಗಳ ಉತ್ಪತ್ತಿಯ ತೋರಂಕಗಳನ್ನು ಲೆಕ್ಕ ಮಾಡಬಹುದು. ಅವುಗಳಿಂದ ಒಂದು ಸರಕಿನ ತಯಾರಿಕೆ ಯಾವ ವರ್ಷದಲ್ಲಿ ಹೆಚ್ಚು ಪ್ರಗತಿ ಹೊಂದುವುದು ಎನ್ನುವುದನ್ನು ತಿಳಿಯಬಹುದು ಮತ್ತು ಹಲವಾರು ಸರಕುಗಳ ಸಾಪೇಕ್ಷ ಪ್ರಗತಿಗಳನ್ನು ತುಲನೆ ಮಾಡಲು ಅನುಕೂಲವಾಗುವುದು. ಉದಾಹರಣೆಗೆ 1963ರಲ್ಲಿ ಇತರ ಕೆಲವು ತೋರಂಕಗಳು ಈ ಪ್ರಕಾರ ಇದ್ದವು: ಜವಳಿ: 129, ಕಬ್ಬಿಣ ಮತ್ತು ಉಕ್ಕು: 269, ಯಂತ್ರೋಪಕರಣಗಳು: 363, ಮೋಟಾರು ವಾಹನಗಳು: 162. ಮೇಲಿನ ತೋರಂಕಗಳನ್ನು ಪರಿಶೀಲಿಸಿದರೆ, 1963ರಲ್ಲಿ ಯಂತ್ರೋಪಕರಣಗಳ ತಯಾರಿಕೆ ಬಹಳ ಪ್ರಗತಿಪರವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಅಂಕಿಸಂಖ್ಯೆಗಳನ್ನು ಕೇಂದ್ರ ಸಾಂಖ್ಯಕೀಯ ಸಂಸ್ಥೆ ಶೇಖರಿಸಿ, ತೋರಂಕಗಳನ್ನು ಲೆಕ್ಕ ಹಾಕಿ ಪ್ರಕಟಿಸುತ್ತದೆ. ಧಾರಣೆವಾಸಿಗಳ ವಿಷಯದಲ್ಲೂ ಇಂಥ ತೋರಂಕಗಳನ್ನು ಬಳಸಿ ಬೆಲೆಗಳ ಏರಿಳಿತವನ್ನು ಸೂಚಿಸಬಹುದು. ಅಂದಿನ ಮೈಸೂರು ರಾಜ್ಯದ ಸಾಂಖ್ಯಕೀಯ ವಿಭಾಗ ಸಿದ್ಧಪಡಿಸಿದ್ದ ಕೆಲವು ವಸ್ತುಗಳ ಠೋಕುಧಾರಣೆಯ (ಹೋಲ್ಸೇಲ್ ಪ್ರೈಸ್) ತೋರಂಕಗಳನ್ನು ಇಲ್ಲಿ ನಿದರ್ಶನವಾಗಿ ಕೊಟ್ಟಿದೆ- ಮೂಲವರ್ಷ : 1952 ಏಪ್ರಿಲ್—1953 ಮಾರ್ಚ್ವರೆಗೆ = 100.

ವಸ್ತು 1956 1957 1958 1959 1960
ಅಕ್ಕಿ(ಸಣ್ಣಕ್ಕಿ) 103 110 113 125 129
ಗೋದಿ 170 175 172 182 169
ರಾಗಿ 127 149 146 166 192

ಈ ಗೋಷ್ವಾರೆಯನ್ನು ಗಮನಿಸಿ ನೋಡಿದರೆ ಗೋದಿಯ ಧಾರಣೆಯಲ್ಲಿ ಏರಿಳಿತಗಳು ಕಡಿಮೆಯಾಗಿರುವುದೆಂದೂ ರಾಗಿಯ ಧಾರಣೆ ಈ ಐದು ವರ್ಷಗಳ ಅವಧಿಯಲ್ಲಿ ಒಂದೇ ಸಮನೆ ಏರುತ್ತಹೋಗಿದೆ ಎಂದೂ ಅಕ್ಕಿಯ ಧಾರಣೆಯಲ್ಲಿ ಅಷ್ಟು ಏರಿಕೆ ಇರುವುದಿಲ್ಲವೆಂದೂ ತಿಳಿಯಬಹುದು.ಕೂಲಿಗಾರರ, ಕಾರ್ಮಿಕರ, ಸಂಸಾರ ನಿರ್ವಹಣೆಯ ಖರ್ಚಿನ ಏರಿಳಿತವನ್ನು ಇದೇ ರೀತಿಯಾಗಿ ತೋರಂಕಗಳ ಮೂಲಕ ನಿರೂಪಿಸಬಹುದು. ನಡುತರದ ಒಬ್ಬ ಕಾರ್ಮಿಕ ತನ್ನ ಸಂಸಾರವನ್ನು ನಡೆಸಲು ಏನೇನು ಸಾಮಾನುಗಳನ್ನು ಎಷ್ಟೆಷ್ಟು ಕೊಳ್ಳುತ್ತಾನೆ ಎಂಬು ದನ್ನು ಒಂದು ಸರ್ವೇಕ್ಷಣೆಯಿಂದ ಮೊದಲು ನಿರ್ಧರಿಸಿಕೊಳ್ಳುತ್ತೇವೆ. ಆಯಾ ಸಾಮಾನುಗಳ ಧಾರಣೆಗಳಲ್ಲಿ ತಿಂಗಳು ತಿಂಗಳಿಗೆ ಏನು ಬದಲಾವಣೆಯಾಗುತ್ತದೆ ಎಂಬುದನ್ನು ವಿಚಾರಿಸಿ ತಿಳಿದು ಈ ಏರಿಕೆಯಿಂದ ಕಾರ್ಮಿಕನ ಸಂಸಾರ ನಿರ್ವಹಣೆಯ ಖರ್ಚು ಹೇಗೆ ಬದಲಾಗುತ್ತದೆಂದು ಲೆಕ್ಕ ಹಾಕುತ್ತೇವೆ. ಮೂಲವರ್ಷದಲ್ಲಿ ಮಾಹೆಯಾನ ಖರ್ಚನ್ನು 100 ಎಂದಿಟ್ಟುಕೊಂಡು ಪ್ರಸ್ತುತ ತಿಂಗಳ ಖರ್ಚನ್ನು ನಿರ್ಧರಿಸುತ್ತೇವೆ. ಇದಕ್ಕೆ, ಕಾರ್ಮಿಕ ಬದುಕಿನ ವೆಚ್ಚದ ತೋರಂಕ (ಲಿವಿಂಗ್ ಇಂಡೆಕ್ಸ್) ಎಂದು ಹೆಸರು. ಈ ತೋರಂಕಗಳ ಆಧಾರದ ಮೇಲೆ ಕಾರ್ಮಿಕರಿಗೆ ಕೊಡಲಾಗುವ ತುಟ್ಟಿಭತ್ಯವನ್ನು ಹೆಚ್ಚಿಸಬೇಕಾಗುವುದು. ಕಾರ್ಮಿಕ ಶಾಖೆಯವರು ಈ ತೋರಂಕಗಳನ್ನು ಪ್ರತಿಯೊಂದು ಮುಖ್ಯ ಪಟ್ಟಣಕ್ಕೂ ಅನ್ವಯಿಸುವಂತೆ ಬೇರೆ ಬೇರೆಯಾಗಿ ಲೆಕ್ಕ ಮಾಡಿ ಪ್ರತಿ ತಿಂಗಳೂ ಪ್ರಕಟಿಸುವರು.

ಕಾಲಸರಣಿ[ಬದಲಾಯಿಸಿ]

ಕಾಲಕಾಲಕ್ಕೆ ಪ್ರಾಪ್ತವಾಗುವ ಅವೇಕ್ಷಣೆಗಳಿಗೆ ಕಾಲಸರಣಿ ಎಂದು ಹೆಸರು. ಒಂದು ರಾಜ್ಯದ ಜನಸಂಖ್ಯೆ ರೇಷ್ಮೆದಾರದ ಉತ್ಪತ್ತಿ, ಆಹಾರ ಧಾನ್ಯಗಳ ಹುಟ್ಟುವಳಿ, ಆಮದು ರಫ್ತು, ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಸಂಖ್ಯೆ, ವಿಶ್ವವಿದ್ಯಾನಿಲಯಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ, ಸರಕುಗಳ ಧಾರಣೆ ಮುಂತಾದುವು ಕಾಲಸರಣಿಗೆ ಉದಾಹರಣೆಗಳು. ಭಾರತದಲ್ಲಿ ಚಹದ ಎಲೆಯ ಉತ್ಪತ್ತಿಯ ಅಂಕಿಸಂಖ್ಯೆಗಳನ್ನು ತೆಗೆದು ಕೊಂಡರೆ ಅವುಗಳಲ್ಲಾಗುತ್ತಿರುವ ಬದಲಾವಣೆಗಳನ್ನು ರೇಖಾಚಿತ್ರದಿಂದ ಪ್ರದರ್ಶಿಸಬಹುದು. ಸಗಟಿನಲ್ಲಿ ವರ್ಷ ವರ್ಷಕ್ಕೆ ಉತ್ಪತ್ತಿ ಹೇಗೆ ಹೆಚ್ಚುತ್ತಿದೆ ಎಂಬುದನ್ನು ಲೆಕ್ಕ ಹಾಕಿ ತಿಳಿಯಲೂಬಹುದು. ವರ್ಷಂಪ್ರತಿ ಆಗತಕ್ಕ ಈ ಬದಲಾವಣೆಗೆ ದೀರ್ಘಕಾಲ ಪ್ರವೃತ್ತಿ (ಸೆಕ್ಯುಲರ್ ಟ್ರೆಂಡ್) ಎಂದು ಹೆಸರು.ದತ್ತ ಅವೇಕ್ಷಣೆಗಳ ಆಧಾರದ ಮೇಲೆ ದೀರ್ಘಕಾಲ ಪ್ರವೃತ್ತಿಯನ್ನು ಕಂಡುಹಿಡಿಯಲು ಮೂರು ವಿಧಾನಗಳಿವೆ. ಅವನ್ನು ಈ ಕೆಳಗೆ ವಿವರಿಸಲಾಗಿದೆ.

ಆರ್ಥಿಕ ಸಂಖ್ಯಾಶಾಸ್ತ್ರ
  • ರೇಖಾಚಿತ್ರ ವಿಧಾನ : ಕಾಲವನ್ನು x ಅಕ್ಷದ ಕಡೆಯೂ ಅವೇಕ್ಷಣೆಯನ್ನು y ಅಕ್ಷದ ಕಡೆಯೂ ತೆಗೆದುಕೊಂಡು ಚುಕ್ಕೆಗಳನ್ನು ಗುರುತಿಸಿ. ಈ ಚುಕ್ಕೆಗಳ ಮೂಲಕ ಹಾಯ್ದು ಹೋಗುವ ಸರಳರೇಖೆಯ ಅಂದಾಜಿನ ಮೇಲೆ ಕೈಯಿಂದ ಎಳೆಯಬಹುದು. ಈ ರೇಖೆಗೆ ದೀರ್ಘಕಾಲ ಪ್ರವೃತ್ತಿರೇಖೆ ಎಂದು ಹೆಸರು. ಈ ರೇಖೆಯ (ಸ್ಲೋಪ್) ಪ್ರವಣತೆಯನ್ನು ಕಂಡುಹಿಡಿದರೆ, ಅದೇ ದೀರ್ಘಕಾಲ ಪ್ರವೃತ್ತಿಯಾಗಬಹುದು. ಇದು ಸುಲಭವಾದ ಕ್ರಮ: ಆದರೆ ಕೇವಲ ಸ್ಥೂಲವಾದ ಫಲವನ್ನೇ ಇದರಿಂದ ಪಡೆಯಬಹುದು. (ಚಿತ್ರ ನೋಡಿ).
  • ಸಂಚಾರಿ ಸರಾಸರಿ ಕ್ರಮ: ಮತ್ತೊಂದು ರೀತಿಯಲ್ಲಿ ದೀರ್ಘಕಾಲ ಪ್ರವೃತ್ತಿಯನ್ನು ಸಾಧಿಸಬಹುದು. ಅನುಕ್ರಮವಾಗಿ ಮೂರು ಮೂರು ಬೆಲೆಗಳನ್ನು ತೆಗೆದುಕೊಂಡು ಅವುಗಳ ಸರಾಸರಿಯನ್ನು ಕಂಡುಹಿಡಿಯಿರಿ. ಪ್ರತ್ಯೇಕ ಬೆಲೆಯ ಏರಿಳಿತಗಳು ಇದರಿಂದ ಕಡಿಮೆಯಾಗುವುದು. ಇದಕ್ಕೆ ಸಂಚಾರಿ ಸರಾಸರಿ ಕ್ರಮ ಎಂದು ಹೆಸರು. ಮುಮ್ಮಡಿ ಮೊತ್ತವನ್ನು 3ನೆಯ ಸ್ತಂಭದಲ್ಲಿ ತೋರಿಸಿದೆ. ಇದನ್ನು 3 ರಿಂದ ಭಾಗಿಸಿದರೆ ಬರುವ ಲಬ್ಧ ಮಧ್ಯವರ್ತಿ ಪ್ರವೃತ್ತಿಯಾಗುವುದು. ಇದನ್ನು 4ನೆಯ ಸ್ತಂಭದಲ್ಲಿ ಕೊಟ್ಟಿದೆ. ಈ ಬೆಲೆಗಳನ್ನು ಚೌಕಳಿ ಕಾಗದದ ಮೇಲೆ ಗುರುತಿಸಿ ಅವುಗಳನ್ನು ಸೇರಿಸಿದರೆ ಪ್ರವೃತ್ತಿ ರೇಖೆ ದೊರೆಯುವುದು. ಒಟ್ಟು 11 ಅವೇಕ್ಷಣೆ.
ವರ್ಷ ಉತ್ಪತ್ತಿ ಮುಮ್ಮಡಿಮೊತ್ತ ಮಧ್ಯವರ್ತಿ ಪ್ರವೃತ್ತಿ ನಾಲ್ಮಡಿಮೊತ್ತ ಮಗದಿಮ್ಮಡಿಮೊತ್ತ ಮಧ್ಯವರ್ತಿ ಪ್ರವೃತ್ತಿ
1 2 3 4 5 6 7
1952 61.4 - - - - -
1953 61.5 188.1 62.7 255.9 518.5 64.8
1954 65.2 194.5 64.8 562.6 532.2 66.5
1955 67.8 201.1 67.0 269.6 545.7 68.2
1956 68.1 204.4 68.1 276.1 - -
1957 68.5 208.3 69.4 280.2 556.3 69.5
1958 71.7 212.2 70.4 282.9 563.1 70.4
1959 71.9 214.4 71.5 292.3 575.2 71.9
1960 70.8 220.6 73.5 296.3 589.6 73.6
1961 77.9 224.4 74.8 - - -
1962 75.7 - - - - -

ವಾರ್ಷಿಕ ಬೆಲೆಗಳಲ್ಲಿನ ಓರೆಕೋರೆಗಳನ್ನು ಬಿಡಿಸಿ ಮತ್ತಷ್ಟು ನುಣುಪು ಮಾಡಬೇಕಾದರೆ, ನಾಲ್ಕು ನಾಲ್ಕರಂತೆ ಅನುಕ್ರಮ ಬೆಲೆಗಳನ್ನು ತೆಗೆದುಕೊಂಡು ಸಂಚಾರಿ ಸರಾಸರಿ ಕ್ರಮವನ್ನು ಕೈಗೊಳ್ಳಬೇಕು. ನಾಲ್ಕರ ಮಧ್ಯವರ್ತಿಕಾಲ ಎರಡು ವರ್ಷಗಳ ಸಂಧಿ ಕಾಲದಲ್ಲಿ ಬರುವುದು. ಆದುದರಿಂದ ಮತ್ತೊಮ್ಮೆ ಎರಡೆರಡು ಸಾಲುಗಳನ್ನು ತೆಗೆದುಕೊಂಡು ಸಂಚಾರಿ ಸರಾಸರಿ ಯನ್ನು ಕಂಡುಹಿಡಿದರೆ ಆಯಾ ವರ್ಷಕ್ಕೆ ಸರಿಯಾದ ಬೆಲೆಗಳು ದೊರೆಯುವುವು. ನಾಲ್ಮಡಿ ಮೊತ್ತವನ್ನು 5ನೆಯ ಸ್ತಂಭದಲ್ಲೂ ಮಗದಿಮ್ಮಡಿ 6ನೆಯ ಸ್ತಂಭದಲ್ಲೂ ಕೊಟ್ಟಿದೆ. ಇದನ್ನು 8 ರಿಂದ ಭಾಗಿಸಿದರೆ ದೊರೆವ ಭಾಗಲಬ್ಧ ಮಧ್ಯವರ್ತಿ ಪ್ರವೃತ್ತಿಯಾಗುವುದು. ಇದನ್ನು 7ನೆಯ ಸ್ತಂಭದಲ್ಲಿ ಕೊಟ್ಟಿದೆ. ಹೀಗೆ ನಾಲ್ಮಡಿ ಮೊತ್ತವನ್ನು ಗುಣಿಸಿ ಮಧ್ಯ ಪ್ರವೃತ್ತಿಯನ್ನು ಕಾಣುವಾಗ ಮೊದಲನೆಯ ಎರಡು ವರ್ಷಗಳಿಗೆ ಮತ್ತು ಕಡೆಯ ಎರಡು ವರ್ಷಗಳಿಗೆ ಸಂವಾದಿಯಾದ ಬೆಲೆಗಳು ದೊರೆಯುವುದಿಲ್ಲ. ಕೇವಲ ನಡುವಿನ 7 ವರ್ಷಗಳ ಬೆಲೆಗಳು ಮಾತ್ರ ದೊರೆಯುವುವು. ಇವನ್ನುಪಯೋಗಿಸಿ ರೇಖಾಚಿತ್ರವನ್ನು ಬರೆಯಬಹುದು.

  • ಬೀಜಗಣಿತ ಕ್ರಮ: ಮೇಲೆ ಹೇಳಿದ ಕ್ರಮಗಳಿಗಿಂತಲೂ ಇನ್ನೂ ಖಚಿತವಾಗಿ ಪ್ರವೃತ್ತಿರೇಖೆಯನ್ನು ನಿರ್ಧರಿಸಬೇಕೆಂದರೆ ಬೀಜಗಣಿತ ಕ್ರಮವನ್ನು ಬಳಸಬೇಕು. ಉಪಯುಕ್ತವಾದ ರೇಖೆಯನ್ನು ದತ್ತ ಅವೇಕ್ಷಣೆಗಳಿಗೆ ಹಾಳತವಾಗಿ ಹೊಂದಿಸಲು ಕನಿಷ್ಠತಮ ವರ್ಗ (ಲೀಸ್್ಟ ಸ್ಕ್ವೇರ್ಸ್) ಸಿದ್ಧಾಂತವನ್ನು ಪ್ರಯೋಗಿಸುತ್ತೇವೆ.ಕಾಲಮಾನವನ್ನು x ಎಂದು ಸೂಚಿಸಿ, 1957ನೆಯ ಇಸವಿಯನ್ನು ಇದರ ಮೂಲಬಿಂದು ಎಂದಿಟ್ಟುಕೊಳ್ಳೋಣ. ಉತ್ಪತ್ತಿಯನ್ನು y ಎಂದಿಟ್ಟುಕೊಂಡರೆ ಪ್ರವೃತ್ತರೇಖೆಯ ಸಮೀಕರಣ ವನ್ನು y=a+bx ಎಂದು ಬರೆಯಬಹುದು. ಕನಿಷ್ಠತಮ ವರ್ಗಸಿದ್ಧಾಂತದ ಮೇರೆಗೆ a,b ಅಚರಗಳನ್ನು ಕಂಡುಹಿಡಿಯಲು ಈ ಸಮೀಕರಣಗಳು ಉಪಲಬ್ಧವಾಗುವುವು.

∑y=∑a+∑bx ∑xy=∑ax+∑b ಗೋಷ್ವಾರೆಯನ್ನೂ ನ್ಯಾಸವನ್ನೂ ಬದಿಯಲ್ಲಿ ತೋರಿಸಿದೆ. ಮೇಲ್ಕಂಡ ಸಮೀಕರಣಗಳಲ್ಲಿ ∑y,∑ax ಮುಂತಾದುವುಗಳ ಬೆಲೆಗಳನ್ನು ಆದೇಶಿಸಲು

ವರ್ಷ x y xy
1952 -5 61.4 -317.0
1953 -4 61.5 -246.0
1954 -3 65.2 -195.6
1955 -2 67.8 -185.6
1956 -1 68.1 -68.1
1957 0 68.5 0
1958 1 71.7 71.7
1959 2 71.9 143.8
1960 3 70.8 212.4
1961 4 77.9 311.6
1962 5 75.7 378.5
ಮೊತ್ತ 0 760.5 165.7

760.5 = 11 a

165.71 = 10 b ಆದ್ದರಿಂದ, a=64.1, b=1.506 ಹಾಳತವಾಗಿ ಪೊರ್ದಿದ ರೇಖೆ y=64.1+1.506x

ಕಾಲಶ್ರೇಣಿಯ ಘಟಕಗಳು[ಬದಲಾಯಿಸಿ]

ಆರ್ಥಿಕ ಮಾಹಿತಿಗಳು ಕಾಲಸರಣಿಯ ನಾಲ್ಕು ಘಟಕಾಂಶಗಳನ್ನು ಒಳಗೊಂಡಿರುತ್ತದೆ. ಆರ್ಥಿಕ ಮಾಹಿತಿಗಳು ಕಾಲಸರಣಿಯ ನಾಲ್ಕು ಘಟಕಾಂಶಗಳನ್ನು ಒಳಗೊಂಡಿರುತ್ತದೆ.

  1. ದೀರ್ಘಕಾಲ ಪ್ರವೃತ್ತಿ (ಸೆಕ್ಯುಲರ್ ಟ್ರೆಂಡ್), T
  2. ಪರ್ವಕಾಲದ ಬದಲಾವಣೆಗಳು ಅಥವಾ ಪಾರ್ವಣ ಚಲನೆಗಳು (ಸೀಸನಲ್ ವೇರಿಯೇಷನ್ಸ್), S
  3. ಚಕ್ರೀಯ ಚಲನೆಗಳು ಅಥವಾ ಚಕ್ರೀಯ ಏರುಪೇರು (ಸೈಕ್ಲಿಕಲ್ ಫ್ಲಕ್ಚುಯೇಷನ್ಸ್),C
  4. ಕ್ರಮರಹಿತ ಪಲ್ಲಟಗಳು (ಇರೆಗ್ಯುಲರ್ ವೇರಿಯೇಷನ್ಸ್), I

ಈ ಸಂಕೇತಗಳನ್ನು ಕಲ್ಪಿಸಿಕೊಂಡು, ಕಾಲಸರಣಿಯ ಒಟ್ಟು ಪರಿಣಾಮವನ್ನು TxSxCxI ಎಂದು ಘಟಕ ಸಂಯೋಜನ ರೂಪದಲ್ಲಿ ನಿರೂಪಿಸಬಹುದು. ಘಟಕಗಳ ಫಲಗಳ ಕೂಡಿಕೆಯಾಗಿ ನಿರೂಪಿಸುವ ಬದಲು ಹೀಗೆ ಗುಣನಫಲವಾಗಿ ನಿರೂಪಿಸುವುದರಲ್ಲಿ ಕೆಲವು ಸೌಲಭ್ಯಗಳಿವೆ. ಮೇಲಿನ ಪ್ರಕರಣದಲ್ಲಿ ಹೇಳಿರುವ ಪ್ರಕಾರ ದೀರ್ಘಕಾಲಿಕ ಪ್ರವೃತ್ತಿಯನ್ನು ಕಂಡುಹಿಡಿದು ಅದರಿಂದ ಕಾಲಶ್ರೇಣಿಯ ಸಂವಾದಿ ಬೆಲೆಗಳನ್ನು ಭಾಗಿಸಿದರೆ ಬರುವ ಭಾಗಲಬ್ಧ SxCxI ಇದಕ್ಕೆ ಸಮಾನವಿರುವುದು. ಈಗ S ಘಟಕಾಂಶವನ್ನೂ C ಘಟಕಾಂಶವನ್ನೂ ಬೇರೆ ಬೇರೆ ಕಂಡುಹಿಡಿದು, ಅನಂತರ, ಉಳಿಕೆಯ ಘಟಕವಾದ I ನ್ನೂ ಸಹ ಕಾಣಬಹುದು. ಪಾರ್ವಣ ಚಲನೆಗಳನ್ನು ಪ್ರತ್ಯೇಕಿಸಿ ಇಳಿಸುವ ಕ್ರಮವನ್ನು ಈಗ ನೋಡೋಣ.

ಪಾರ್ವಣ ಚಲನೆಗಳು[ಬದಲಾಯಿಸಿ]

ಕೆಲವು ಸಂದರ್ಭಗಳಲ್ಲಿ ಕಾಲಸರಣಿಯ ಬೆಲೆಗಳು ತಿಂಗಳು ತಿಂಗಳಿಗೆ ಬದಲಾವಣೆಯಾಗುವುವು. ಮತ್ತು ಕ್ಲುಪ್ತವಾದ ಕೆಲವು ತಿಂಗಳಲ್ಲಿ ಹೆಚ್ಚೂ ಮತ್ತೆ ಕೆಲವು ತಿಂಗಳಲ್ಲಿ ಕಡಿಮೆಯೂ ಇರುವುವು. ಹೀಗೆ ಋತುಗಳಿಗನುಸಾರವಾಗಿ ಸಂಭವಿಸುವ ಏರಿಳಿತಕ್ಕೆ ಪರ್ವಕಾಲದ ಚಲನೆ ಅಥವಾ ಪಾರ್ವಣಚಲನೆ ಎಂದು ಹೆಸರು. ಕಾಲಸರಣಿಯ ಅಂಕಿಸಂಖ್ಯೆಗಳಿಂದ ಪಾರ್ವಣ ಚಲನೆಗಳನ್ನು ಕಂಡುಹಿಡಿದರೆ ಭವಿಷ್ಯದ ಬೆಲೆಗಳ ಮುನ್ಸೂಚನೆಯನ್ನು ಒದಗಿಸಲು ಸಾಧ್ಯವಾದೀತು. ಉದಾಹರಣೆಗೆ, ದವಸಧಾನ್ಯಗಳ ಬೆಲೆ ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಹೆಚ್ಚಾಗುವುದೆಂದು ತಿಳಿದಿದೆ. ಅದಕ್ಕೆ ತಕ್ಕಂತೆ ಪುರ್ವಭಾವಿಯಾಗಿ ದವಸವನ್ನು ಕೊಳ್ಳಬಹುದು. ಮಾರುವುದಾದರೆ, ಅಲ್ಲಿಯವರೆಗೆ ಕಾದಿದ್ದು ಮಾರಾಟ ಮಾಡಿದರೆ ಹೆಚ್ಚು ಲಾಭ ಸಿಗುವುದು.

ಪಾರ್ವಣ ಚಲನೆಗಳನ್ನು ಕಂಡುಹಿಡಿಯಲು ಕರಣ ಪದ್ಧತಿ[ಬದಲಾಯಿಸಿ]

ಒಂದು ರಾಜ್ಯದ ಆದಾಯ ಖರ್ಚನ್ನು ಕೆಳಗಿನ ಕೋಷ್ಟಕದಲ್ಲಿ ಕೊಟ್ಟಿದೆ. 1965-66ರಿಂದ 1968-69ನೆಯ ವರ್ಷದವರೆಗೆ ಪ್ರತಿ ಮೂರು ತಿಂಗಳಿಗೂ ವೆಚ್ಚವಾದ ಮೊಬಲಗನ್ನು 1, 2ನೆಯ ಕಾಲಂಗಳಲ್ಲಿ ತೋರಿಸಿದೆ. ಈ ಅಂಕಿಸಂಖ್ಯೆಗಳ ಆಧಾರದ ಮೇಲೆ ಪಾರ್ವಣ ಚಲನೆಯ ತೋರಂಕಗಳನ್ನು ಕಂಡುಹಿಡಿಯುವ ವಿಧಾನವನ್ನು ಇಲ್ಲಿ ವಿವರಿಸಿದೆ.ಮೊದಲು ನಾಲ್ಕು ಪದಗಳ ಸಂಚಾರಿ ಮೊತ್ತವನ್ನು ಕಂಡುಹಿಡಿದು 3ನೆಯ ಕಾಲಂನಲ್ಲಿ ಕೊಟ್ಟಿದೆ. ಮುಂದಿನ ಕಾಲಂನಲ್ಲಿ ಇದರ ಇಮ್ಮಡಿ ಸಂಚಾರಿ ಮೊತ್ತವನ್ನು ಕೊಟ್ಟಿದೆ. ಇದನ್ನು 8ರಿಂದ ಭಾಗಿಸಿ ಬಂದದ್ದೇ ಪ್ರವೃತ್ತಬೆಲೆಯಾಗುವುದು (5ನೇ ಕಾಲಂ). ಮೊದಲನೆಯ ಮತ್ತು ಎರಡನೆಯ ಸಾಲಿನಲ್ಲೂ ಮತ್ತು ಕೊನೆಯ ಎರಡು ಸಾಲಿನಲ್ಲೂ ಈ ಕಾಲಂನ ಸ್ಥಾನಗಳು ರಿಕ್ತವಾಗಿರುವುದನ್ನು ಗಮನಿಸಬೇಕು. 2ನೆಯ ಕಾಲಂನ ಬೆಲೆಯನ್ನು ಅದಕ್ಕೆ ಸಂವಾದಿಯಾದ 5ನೆಯ ಕಾಲಂನ ಬೆಲೆಯಿಂದ ಭಾಗಿಸಿದರೆ ಪ್ರವೃತ್ತ ನಿಷ್ಪತ್ತಿ (ಟ್ರೆಂಡ್ ರೇಷಿಓ) ದೊರೆಯುವುದು. ಇದನ್ನು 100 ರಿಂದ ಗುಣಿಸಿ 6ನೆಯ ಕಾಲಂನಲ್ಲಿ ನಮೂದಿಸಿದೆ. ಮೊದಲನೆಯ ಕಾಲುವರ್ಷದ ಪ್ರವೃತ್ತ ನಿಷ್ಪತ್ತಿಯ 3 ಬೆಲೆಗಳು ದೊರೆಯುತ್ತವೆ. ಇವುಗಳ ಸರಾಸರಿಯನ್ನು ಕಂಡುಹಿಡಿದು ಬೇರೆಯಾಗಿ ಕೆಳಕಂಡ ಪಟ್ಟಿಯಲ್ಲಿ ನಮೂದಿಸಿದೆ. ಇದರಂತೆಯೇ 2ನೆಯ 3ನೆಯ ಮತ್ತು 4ನೆಯ ಕಾಲು ವರ್ಷಗಳ ಸರಾಸರಿ ಪ್ರವೃತ್ತ ಬೆಲೆಗಳನ್ನು ಬರೆದಿದ್ದೇವೆ. ಒಂದು ರಾಜ್ಯದ ಆದಾಯ ಖರ್ಚು - (ಕೋಟಿ ರೂಪಾಯಿಗಳು)

ಕಾಲಾವಧಿ ಇಸ್ಪಿಕಾಲಂ ವರ್ಷ ಆದಾಯ ಖರ್ಚು ಕೋಟಿರು 4ರ ಸಂಚಾರಿ ಮೊತ್ತ 2ರ ಸಂಚಾರಿ ಮೊತ್ತ ಪ್ರವೃತ್ತಿ ಬೆಲೆ ಪ್ರವೃತ್ತಿ ನಿಷ್ಪತ್ತಿ ಕುಣಿಕೆ ಬಂದಧ
1 1965-66 47 - - - - -
2 53 261 - - - 112.8
3 58 262 523 65.4 92.2 109.4
4 104 275 537 67.1 155.0 179.4
1 1966-67 47 267 542 67.8 69.3 45.2
2 56 293 560 70.0 80.0 119.1
3 60 301 594 74.2 80.9 107.2
4 130 314 615 76.9 169.0 216.6
1 1967-68 55 332 646 80.7 68.2 42.3
2 69 399 731 91.4 75.5 125.4
3 78 409 808 101.0 77.2 113.1
4 197 448 857 107.1 183.4 252.4
1 1968-69 65 461 909 113.6 57.2 33.0
2 98 519 980 122.5 80.0 150.8
3 101 - - - - 103.0
4 255 - - - - 252.4

ಪಾರ್ವಣ ಚಲನೆಗಳಿಲ್ಲದಿದ್ದರೆ 4 ಕಾಲು ವರ್ಷಗಳಲ್ಲೂ ಸುಸಮವಾದ ಬೆಲೆ ದೊರೆಯಬೇಕು. ಪ್ರತಿಯೊಂದು ನಿಷ್ಪತ್ತಿಯ ಬೆಲೆಯೂ 100 ಇರುವುದು.

ಎಷ್ಟನೆಯ ಕಾಲುವರ್ಷ ಸರಾಸರಿ ಬೆಲೆ ತಿದ್ದಿದ ಬೆಲೆ
1 64.9 65.5
2 78.5 79.3
3 83.4 84.3
4 169.1 170.9
ಮೊತ್ತ 395.9 400.00

ಪಾರ್ವಣ ಚಲನೆಯ ಕಾರಣವಾಗಿ ವ್ಯತ್ಯಾಸಗಳು ಕಂಡುಬರುತ್ತವೆ. ಇವುಗಳ ಮೊತ್ತ 395.9 ಆಗುತ್ತದೆ. ಪ್ರತಿಯೊಂದು ಸರಾಸರಿ ಬೆಲೆಯನ್ನು 400:395.9 ಪ್ರಮಾಣದಲ್ಲಿ ಪರಿವರ್ತಿಸಿ ಮುಂದಿನ ಕಾಲಂನಲ್ಲಿ ನಮೂದಿಸಲಾಗಿದೆ. ಈಗ ಅವುಗಳ ಮೊತ್ತ 400 ಇರುವುದು. ಕೊನೆಯ ಕಾಲಂನ ತಿದ್ದಿದ ಬೆಲೆಗಳೇ ನಮಗೆ ಬೇಕಾದ ಪಾರ್ವಣ ಚಲನೆಗಳ ತೋರಂಕಗಳು. ಮೊದಲನೆಯ ಮೂರು ಕಾಲು ವರ್ಷಗಳಲ್ಲಾಗುವ ಸರಾಸರಿ ಖರ್ಚಿನ ಎರಡರಷ್ಟು ಖರ್ಚು ವರ್ಷದ ಕೊನೆಯ ಕಾಲು ವರ್ಷದಲ್ಲಿ ಆಗುತ್ತಿರುವುದೆಂಬುದು ಈ ಪಾರ್ವಣ ಚಲನೆಗಳ ತೋರಂಕಗಳಿಂದ ಸ್ಪಷ್ಟವಾಗಿ ಕಾಣುವುದು.

ಕುಣಿಕೆ ಬಂಧಕ್ರಮ[ಬದಲಾಯಿಸಿ]

ಪಾರ್ವಣ ಚಲನೆಗಳನ್ನು ಮತ್ತೊಂದು ರೀತಿಯಲ್ಲಿ ಕಂಡುಹಿಡಿಯಲು ಕುಣಿಕೆ ಬಂಧಗಳನ್ನು ಬಳಸಬಹುದು. ಪ್ರತಿಯೊಂದು ಬೆಲೆಯನ್ನು ಅದರ ಹಿಂದಿನ ವರ್ಷದ ಬೆಲೆಯಿಂದ ಭಾಗಿಸಿ 100ರಿಂದ ಗುಣಿಸಿದರೆ ಬರುವ ಸಂಖ್ಯೆಗೆ ಕುಣಿಕೆ ಬಂಧ (ಲಿಂಕ್ ರಿಲೆಟಿವ್) ಎಂದು ಹೆಸರು. ಕುಣಿಕೆ ಬಂಧ ಪಾರ್ವಣ ಚಲನೆಯ ತೋರಂಕಗಳ ನಿಷ್ಪತ್ತಿಗಳಾಗಿರುವುದು.ಮೇಲೆ ಕೊಟ್ಟಿರುವ ಕೋಷ್ಟಕದ 7ನೆಯ ಕಾಲಂನಲ್ಲಿ ಕುಣಿಕೆ ಬಂಧದ ಬೆಲೆಗಳನ್ನು ತೋರಿಸಿದ್ದೇವೆ. ಇದರ ಫಲವಾಗಿ 1ನೆಯ ಕಾಲು ವರ್ಷದ ಕುಣಿಕೆ ಬಂಧಗಳು 3 ಇದ್ದು, ಉಳಿದ ಪ್ರತಿ ಕಾಲು ವರ್ಷದ ಕುಣಿಕೆ ಬಂಧಗಳು 4 ಇರುವುವು. ಇವುಗಳ ಸರಾಸರಿಯನ್ನು m1, m2, m3, ಮತ್ತು m4 ಎಂದಿಟ್ಟುಕೊಳ್ಳಿ. ಮೊದಲನೆಯ ಕಾಲು ವರ್ಷದ ಪಾರ್ವಣ ಚಲನೆಯ ತೋರಂಕವನ್ನು 100 ಎಂದಿಟ್ಟುಕೊಂಡು, ಉಳಿದವುಗಳನ್ನು ಕೆಳಗಿನ ಸರಪಳಿ ಸಂಬಂಧಗಳಿಂದ ಕಂಡುಹಿಡಿಯತಕ್ಕದ್ದು. c2m3/100, c3m4/100 ಮತ್ತು c4m1/100, ಇವುಗಳ ಗುಣಲಬ್ಧ 100ಕ್ಕೆ ಸಮವಿರಬೇಕು. ಹಾಗಿಲ್ಲದಿದ್ದರೆ ಪ್ರತಿ ಒಂದರ ಬೆಲೆಯನ್ನು ಗುಣೋತ್ತರ ನಿಷ್ಪತ್ತಿಯಲ್ಲಿ ಬದಲಾಯಿಸಿ, ಈ ಸಾಮ್ಯ ಸರಿಹೋಗುವಂತೆ ಮಾಡಬೇಕು. ಕೆಳಗಿನ ಕೋಷ್ಟಕದಲ್ಲಿ m1, m2, m3, m4 ಮತ್ತು c1, c2, c3, c4ಗಳ ಬೆಲೆಯನ್ನು ಕಾಣಿಸಿದ್ದೇವೆ. ಈಗ c4xm1/100 ಇದರ ಬೆಲೆ 123.2 ಆಗುತ್ತದೆ. 100ಕ್ಕೆ ಸಮವಿರಬೇಕೆಂದು ತಾತ್ವಿಕ ಆಧಾರದ ಮೇರೆಗೆ ಮೇಲೆ ಹೇಳಲಾಗಿದೆ. 100/123.2=r ಎಂಬ ಗುಣೋತ್ತರ ನಿಷ್ಪತ್ತಿಯನ್ನು ಗಣನೆ ಮಾಡಿ, c2, c3 ಮತ್ತು c4ನ್ನು ಕ್ರಮವಾಗಿ r, r2 ಮತ್ತು r3 ಇಂದ ಗುಣಿಸಿ ಬಂದ ಫಲಗಳೇ ತಿದ್ದಿದ ಸರಪಳಿ ಬಂಧಗಳು. ಇವುಗಳನ್ನು 4ನೆಯ ಕಾಲಂನಲ್ಲಿ ತೋರಿಸಿದ್ದೇವೆ.

ಕಾಲು ವರ್ಷ ಸರಾಸರಿ ಕುಣಿಕೆ ಸಂಬಂಧ ಸರಪಳಿ ಸಂಬಂಧ ತಿದ್ದಿದ ಸರಪಳಿ ಸಂಬಂಧ ತಿದ್ದಿದ ಪಾರ್ವಣ ತೋರಂಕ
1 M1 40.2 C1 100.01 100 66.1
2 M2 127.0 C2 127.0 120.5 79.5
3 M3 108.2 C3 136.5 122.8 81.1
4 M4 225.2 C4 307.2 262.2 173.3
500.6 C1 123.2 605.5 400.0

ಇವುಗಳ ಮೊತ್ತ 400 ಬರಬೇಕು. ಹಾಗಿಲ್ಲದಿದ್ದರೆ 13ನೆಯ ಪ್ರಕರಣದಲ್ಲಿ ಹೇಳಿರು ವಂತೆ, ಸಂಸ್ಕಾರಮಾಡಿ ಒಟ್ಟು 400 ಬರುವಂತೆ ಮಾಡಬೇಕು. 4ನೆಯ ಕಾಲಂನ ಮೊತ್ತ 605.5 ಇರುವುದು. ಆದುದರಿಂದ ಈ ಕಾಲಂನ ಪ್ರತಿ ಬೆಲೆಯನ್ನು 400/65.5 ಇಂದ ಗುಣಿಸಿ ಸಂಸ್ಕರಿಸಬೇಕು. ಫಲಿತಗಳನ್ನು 5ನೆಯ ಕಾಲಂನಲ್ಲಿ ಕಾಣಿಸಿದ್ದೇವೆ. ಇವೇ ಬೇಕಾದ ಪಾರ್ವಣ ತೋರಂಕಗಳು. ಮೇಲೆ ಹೇಳಿದ ಎರಡು ಕ್ರಮಗಳಿಂದ ದೊರೆತ ಪಾರ್ವಣ ಚಲನೆಯ ಸೂಚಿಗಳು ಒಂದೇಯಾಗಿಲ್ಲದಿದ್ದರೂ ಅವುಗಳಲ್ಲಿ ಹೆಚ್ಚು ವ್ಯತ್ಯಾಸ ಕಾಣುವುದಿಲ್ಲ.

ಚಕ್ರೀಯ ಏರಿಳಿತಗಳು[ಬದಲಾಯಿಸಿ]

ಕಾಲಸರಣಿಯ ಅವೇಕ್ಷಣೆಗಳನ್ನು ನಾಲ್ಕು ಘಟಕಾಂಶಗ ಳಿಂದ ಕೂಡಿದೆ ಎಂದು ಹಿಂದೆಯೇ ಹೇಳಿದ್ದೇವೆ. ಅಂದರೆ, y= TxSxCxI ಎಂದು ನಿರೂಪಿಸಬಹುದು. ಇಲ್ಲಿ T ಮತ್ತು S ದೀರ್ಘಕಾಲ ಪ್ರವೃತ್ತಿ ಮತ್ತು ಪಾರ್ವಣ ಚಲನೆಗಳು-ಇವುಗಳ ಬೆಲೆಗಳನ್ನು ಮೇಲೆ ಹೇಳಿದ ರೀತಿಯಲ್ಲಿ ಕಂಡುಹಿಡಿದು yನ್ನು T, S ಗಳಿಂದ ಅನುಕ್ರಮವಾಗಿ ಭಾಗಿಸಿದರೆ CxI ಅಂಶ ಉಳಿಯುವುದು. ಈ ಬೆಲೆಗಳ ಸರಣಿಯನ್ನು ಯಾವುದಾದರೊಂದು ವಿಧಾನದಲ್ಲಿ ಸುಸಮ ಮಾಡಿದರೆ I ಅಂಶವನ್ನು ವಿಸರ್ಜಿಸಬಹುದು. ಉಳಿಯುವುದು ಚಕ್ರೀಯ ಏರುಪೇರಿನ ಅಂಶವೆಂದು ತಿಳಿಯತಕ್ಕದ್ದು. ಆಧುನಿಕ ಕಾಲಸರಣಿಯ ವಿಶ್ಲೇಷಣದಲ್ಲಿ ಉಳಿಯುವ ಈ ಅಂಶವನ್ನು ಆಂದೋಲನ (ಆಸಿಲೇಷನ್) ಎಂದು ಕರೆಯುವುದು ರೂಢಿಯಾಗಿದೆ. ಚಕ್ರೀಯ ಏರುಪೇರನ್ನು ಆಂದೋಲನದ ಒಂದು ವಿಶಿಷ್ಟ ರೂಪ ಎಂದು ಭಾವಿಸಬಹುದು. ಇದಕ್ಕೆ ನಿಯಮಿತ ಅಂಶ ಎಂಬ ಹೆಸರುಂಟು. I ಅಂಶವನ್ನು ಅನಿಯಮಿತ ಅಥವಾ ಯಾದೃಚ್ಛಿಕಾಂಶವೆಂದು ಕರೆಯುವುದು ಹೆಚ್ಚು ಉಪಯುಕ್ತವಾಗಿ ಕಂಡುಬರುತ್ತದೆ. ಪ್ರೌಢಗಣಿತದ ಸಹಾಯದಿಂದ ಮತ್ತು ಕೆಲವು ಇಚ್ಛಾಕಲ್ಪನೆಯ ಆಧಾರದ ಮೇಲೆ ನಿಯಮಿತ ಅಥವಾ ಆಂದೋಲನಾಂಶವನ್ನು ಕಂಡುಹಿಡಿಯಬಹುದು. ವೇಳಾಂತರ ವಿಶ್ಲೇಷಣದಿಂದಲೂ(ಪೀರಿಯಾಡಿಕಲ್ ಅನ್ಯಾಲಿಸಿಸ್) ಈ ಅಂಶವನ್ನು ಬೇರ್ಪಡಿಸಬಹುದು. ಅದಕ್ಕೆ ಜಟಿಲ ಗಣಿತಪ್ರಮೇಯಗಳ ಪರಿಜ್ಞಾನ ಬೇಕಾಗಿರುವುದರಿಂದ ಅದನ್ನು ಇಲ್ಲಿ ವಿವರಿಸಿಲ್ಲ.ಈ ಪ್ರಕಾರವಾಗಿ ದೀರ್ಘಕಾಲ ಪ್ರವೃತ್ತಿ, ಪಾರ್ವಣ ಚಲನೆ ಮತ್ತು ಚಕ್ರೀಯ ಏರುಪೇರುಗಳನ್ನು ಬೇರ್ಪಡಿಸಿ ತಿಳಿಯಬಹುದು. ಮೇಲಿನ ಹದಿನೈದು ಉದಾಹರಣೆಗಳನ್ನು ನೋಡಿದರೆ ಆರ್ಥಿಕ ಸಂಖ್ಯಾಶಾಸ್ತ್ರದ ಉದ್ದೇಶ, ವ್ಯಾಪ್ತಿ ಸ್ವಯಂಸ್ಪಷ್ಟವಾಗುತ್ತದೆ.