ಆರ್ಥಿಕ ಭದ್ರತೆ
ಆದಾಯದ ಗತಿಯಲ್ಲಿ ಇಳಿಮುಖವಾದರೆ ಅಥವಾ ಆದಾಯಕ್ಕೆ ಕಾರಣಾಂತರದಿಂದ ಧಕ್ಕೆ ಬಂದರೆ, ಜನತೆಗೆ ಅತ್ಯಗತ್ಯವಾದ ಆವಶ್ಯಕತೆಗಳನ್ನು ಪುರೈಸಿ ಕೊಳ್ಳಲು ಸಾಧ್ಯವಾಗದೇ ಹೋಗುವ ಪರಿಸ್ಥಿತಿ ಉದ್ಭವಿಸಬಹುದು. ಆದ್ದರಿಂದ ಜನತೆಗೆ ನಿರ್ದಿಷ್ಟವಾದ ಒಂದು ಪ್ರಮಾಣದ ಆರ್ಥಿಕಭದ್ರತೆ ಎಲ್ಲ ಸಮಯದಲ್ಲೂ ಎಲ್ಲ ಸಮಾಜದಲ್ಲೂ ಅಗತ್ಯ. ಆರ್ಥಿಕರಕ್ಷಣೆ ಹಾಗೂ ಸಾಮಾಜಿಕರಕ್ಷಣೆ (ಎಕನಾಮಿಕ್ ಸೆಕ್ಯೂರಿಟಿ; ಸೋಷಿಯಲ್ ಸೆಕ್ಯೂರಿಟಿ) ಎಂಬ ಪದಗಳನ್ನು ಸಾಮಾನ್ಯವಾಗಿ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ೨೦ನೆಯ ಶತಮಾನದ ಪ್ರಥಮಾರ್ಧದಲ್ಲಿ ಈ ರೀತಿಯ ಭದ್ರತೆಯ ಕ್ರಮದ ಅಗತ್ಯವನ್ನು ಪ್ರಪಂಚದ ಎಲ್ಲ ರಾಷ್ಟ್ರಗಳೂ ಮನಗಂಡವೆಂದು ಹೇಳಬಹುದು. ಅತ್ಯಂತ ಅಗತ್ಯವಾದ ಆದಾಯವನ್ನು ಒದಗಿಸಲು, ಆರ್ಥಿಕ ಸಂಪತ್ತಿನ ಕೊರತೆಯಿಂದಾಗಿ ಅಸಮರ್ಥವಾದ ರಾಷ್ಟ್ರಗಳ ವಿಷಯದಲ್ಲಿ ಆರ್ಥಿಕ ಭದ್ರತೆಯ ಆವಶ್ಯಕತೆ ತೀರಾ ಹೆಚ್ಚು. ಜನಸಂಖ್ಯೆ ವೃದ್ಧಿಯಾಗುತ್ತಿದ್ದು ಅದಕ್ಕೆ ಅನುಗುಣವಾಗಿ ರಾಷ್ಟ್ರೀಯ ವರಮಾನ ಬೆಳೆಯಲು ಸಾಧ್ಯವಿಲ್ಲದೆ ಹೋಗುವ, ಇನ್ನೂ ಪ್ರಗತಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸ್ವಲ್ಪಮಟ್ಟಿನ ಆರ್ಥಿಕ ಭದ್ರತೆಯನ್ನು ಒದಗಿಸಿಕೊಡುವುದು ಸರ್ಕಾರದ ಜವಾಬ್ದಾರಿಯಾಗುತ್ತದೆ. ಕೈಗಾರಿಕೆಯೇ ಪ್ರಧಾನವಾದ ರಾಷ್ಟ್ರಗಳಲ್ಲಂತೂ ಹೆಚ್ಚಿನ ಜನರ ಆದಾಯ ವೇತನ ರೂಪದಲ್ಲೊ ಕೂಲಿಯ ರೂಪದಲ್ಲೊ ಇರುವುದರಿಂದ ಆದಾಯ ಯಾವಾಗಲೂ ಅನಿಶ್ಚಿತತೆಯ ಅಂಶಗಳನ್ನು ಒಳಗೊಂಡಿರುತ್ತದೆ. ಈ ಅನಿಶ್ಚಿತತೆ ನಿರುದ್ಯೋಗ, ಅವಘಡ, ಅಕಾಲಮರಣ, ವೃದ್ಧಾಪ್ಯ ಇವುಗಳ ರೂಪದಲ್ಲಿರುತ್ತದೆ. ಇಂಥ ಅನಿಶ್ಚಿತತೆಯ ಭಯವನ್ನು ಕಡಿಮೆ ಮಾಡಲು ಆರ್ಥಿಕ ಭದ್ರತೆ ತೀರಾ ಅಗತ್ಯವಾಗುತ್ತದೆ. ಹಿಂದೆ, ಇದನ್ನು ಎದುರಿಸಲು ವೈಯಕ್ತಿಕ ಉಳಿತಾಯ, ಆಸ್ತಿಗಳಿಕೆ, ವಿಮೆ ಮೊದಲಾದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ಆದರೆ ಈ ಕ್ರಮಗಳು ಜನಸಾಮಾನ್ಯರ ನಿಲುಕಿನಲ್ಲಿರಲು ಸಾಧ್ಯವಿರುತ್ತಿರಲಿಲ್ಲ. ಅದರಲ್ಲೂ ವೇತನದ ಮೂಲಕ ಆದಾಯವನ್ನು ಗಳಿಸುವವರು ಉಳಿತಾಯ ಮಾಡುವುದು ತೀರ ಕಷ್ಟದ ವಿಷಯವಾಗಿತ್ತು. ಹೀಗಾಗಿ ಆರ್ಥಿಕ ಭದ್ರತೆಯನ್ನು ಒದಗಿಸುವುದರ ಅಗತ್ಯವನ್ನು ಸರ್ಕಾರಗಳು ಮನಗಂಡವು. ಈಗ ಹೆಚ್ಚು ಕಡಿಮೆ ಎಲ್ಲ ರಾಷ್ಟ್ರಗಳೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಜನತೆಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತಿವೆ. ತಮ್ಮ ರಾಷ್ಟ್ರೀಯ ಆದಾಯದ ಒಂದು ಅಂಶವನ್ನು ಈ ಕಾರ್ಯಕ್ಕಾಗಿ ಮೀಸಲಾಗಿಡುತ್ತವೆ. ಸಾಧಾರಣವಾಗಿ, ನಿರುದ್ಯೋಗ ಪರಿಹಾರಧನ, ವೃದ್ಧಾಪ್ಯವೇತನ, ಹೆಂಗಸರಿಗೆ ತಾಯ್ತನ ಸಮಯದಲ್ಲಿ ವೇತನ, ಅವಘಡಕ್ಕಾಗಿ ಪರಿಹಾರಗಳ ಮೂಲಕ ಖಚಿತ ಆರ್ಥಿಕ ಭದ್ರತೆಯನ್ನು ಒದಗಿಸಲಾಗುತ್ತಿದೆ. ಹೆಚ್ಚಿನ ರಾಷ್ಟ್ರಗಳು ವೃದ್ಧರಿಗೆ, ವಿಧವೆಯರಿಗೆ ಮತ್ತು ಅವರ ಅವಲಂಬಿಗಳಿಗೆ, ಮತ್ತು ನಿರುದ್ಯೋಗಿಗಳಿಗೆ ಧನಸಹಾಯ ಮಾಡುವುದರ ಮೂಲಕ ಆರ್ಥಿಕಭದ್ರತೆಯನ್ನು ಒದಗಿಸುತ್ತವೆ. ಆರ್ಥಿಕಭದ್ರತೆಯ ಮೂರು ಮುಖ್ಯ ವಿಧಾನಗಳೆಂದರೆ;
- ಸಾಮಾಜಿಕ ವಿಮೆ (ಸೋಷಿಯಲ್ ಇನ್ಷೂರೆನ್ಸ್)
- ಸರ್ಕಾರಿ ಸಹಾಯ (ಪಬ್ಲಿಕ್ ಅಸಿಸ್ಟೆನ್ಸ್)
- ಸರ್ಕಾರದ ಸೇವೆ (ಪಬ್ಲಿಕ್ ಸರ್ವಿಸಸ್)
ಸಾಮಾಜಿಕ ವಿಮೆಗೆ ಉತ್ಪಾದಕ, ಕೆಲಸಗಾರ, ಸರ್ಕಾರ, ಈ ಮೂರು ಅಥವಾ ಮೂರರಲ್ಲಿ ಮೊದಲೆರಡು ಹಣವನ್ನು ತುಂಬುತ್ತವೆ. ಈ ವಿಮೆ ಕೆಲಸಗಾರನಿಗೆ ಒಂದು ನಿರ್ದಿಷ್ಟವಾದ ರೂಪದಲ್ಲಿ ಆರ್ಥಿಕಭದ್ರತೆಯನ್ನು ಒದಗಿಸುತ್ತದೆ. ಇದರಿಂದ ಬರಬಹುದಾದ ಲಾಭ ಕೆಲಸಗಾರನ ವೈಯಕ್ತಿಕ ಆದಾಯ, ವಿಮೆಗೆ ಆತನ ಕೊಡುಗೆ-ಇವನ್ನು ಹೊಂದಿಕೊಂಡಿರುತ್ತದೆ. ಅಗತ್ಯವಿರುವ ವ್ಯಕ್ತಿಗಳಿಗೆ ಸರ್ಕಾರಿ ಸಹಾಯದ ಕಾರ್ಯಕ್ರಮ ಧನಸಹಾಯದ ರೂಪದಲ್ಲಿರುತ್ತದೆ. ಉದಾಹರಣೆಗೆ ಸರ್ಕಾರ ವಿಧವೆಯರಿಗೆ ಮತ್ತು ಅವರನ್ನು ಅವಲಂಬಿಸಿರುವ ಮಕ್ಕಳಿಗೆ ಅಗತ್ಯ ಆವಶ್ಯಕತೆಗಳನ್ನು ಪುರೈಸುವಷ್ಟು ಹಣ ಕೊಟ್ಟು ಆರ್ಥಿಕ ಭದ್ರತೆಯನ್ನು ಒದಗಿಸಬಹುದು. ಸರ್ಕಾರಿ ಸೇವೆಯ ರೂಪದಲ್ಲಿ ಒಂದು ರಾಷ್ಟ್ರದ ಪ್ರಜೆಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಕಾರ್ಯಕ್ರಮ, ಎಲ್ಲ ಕೆಲಸಗಾರರಿಗೂ ಅಗತ್ಯಬಿದ್ದಾಗ ಹಣ ಸಹಾಯಮಾಡುವುದು, ಬೇರೆ ರೀತಿಯ ಸೇವೆಗಳನ್ನು ಒದಗಿಸುವುದು-ಈ ಮೂಲಕ ಆಗುತ್ತದೆ. ಕ್ಷೇಮರಾಜ್ಯದ ಉದ್ದೇಶವಿರುವ ಭಾರತ ತನ್ನ ಪ್ರಜೆಗಳಿಗೆ ಸ್ವಲ್ಪಮಟ್ಟಿನ ಆರ್ಥಿಕ ಭದ್ರತೆಯನ್ನು ಒದಗಿಸುವ ಕಾರ್ಯಕ್ರಮಗಳನ್ನಿಟ್ಟುಕೊಂಡಿದೆ. ಸಾಮಾಜಿಕ ವಿಮೆ ಹೆಂಗಸರಿಗೆ ತಾಯ್ತನದ ಕಾಲದಲ್ಲಿ ಪರಿಹಾರಗಳ ಮೂಲಕ ಆರ್ಥಿಕ ಭದ್ರತೆಯನ್ನು ಒದಗಿಸಲಾಗುತ್ತಿದೆ. ಮೇಲೆ ಹೇಳಿದ ವಿಷಯ ಒಂದು ರಾಷ್ಟ್ರದ ಜನತೆಗೆ ದೊರೆಯಬಹುದಾದ ಆರ್ಥಿಕ ಭದ್ರತೆಗೆ ಸಂಬಂಧಿಸಿದ್ದು. ಹಾಗೆಯೇ ಒಂದು ರಾಷ್ಟ್ರದ ಆರ್ಥಿಕ ಭದ್ರತೆ ಮತ್ತು ವಿಶ್ವ ಆರ್ಥಿಕ ಭದ್ರತೆ ಮತ್ತು ಇವೆರಡರ ನಡುವಿನ ಸಂಬಂಧವನ್ನು ವಿವೇಚಿಸುವುದು ಸಾಧ್ಯ. ಪ್ರತಿಯೊಂದು ರಾಷ್ಟ್ರವೂ ಸ್ವಲ್ಪಮಟ್ಟಿನ ಆರ್ಥಿಕ ಭದ್ರತೆಯನ್ನು ಕಾಪಾಡಿಕೊಂಡು ಹೋಗುವುದು ಅತ್ಯಾವಶ್ಯಕವಾಗುತ್ತದೆ. ಒಂದು ರಾಷ್ಟ್ರದ ಆರ್ಥಿಕ ಭದ್ರತೆ ಆ ರಾಷ್ಟ್ರದಲ್ಲಿರುವ ಪ್ರಕೃತಿಸಂಪತ್ತು, ಶ್ರಮಸಂಪತ್ತು, ಬಂಡವಾಳಗಳ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಬಹುದು. ಇವು ವಿಪುಲವಾಗಿದ್ದರೆ ಆ ರಾಷ್ಟ್ರದ ಆರ್ಥಿಕ ಭದ್ರತೆ ಹೆಚ್ಚು ಸುರಕ್ಷಿತ. ಪ್ರಗತಿಶೀಲ ರಾಷ್ಟ್ರಗಳ ಆರ್ಥಿಕ ಭದ್ರತೆ, ಪ್ರಗತಿ ಹೊಂದಿದ ರಾಷ್ಟ್ರಗಳ ಸಹಕಾರದಿಂದ ನಿರ್ಧಾರವಾಗುತ್ತದೆ. ಪ್ರಗತಿ ಹೊಂದಿರುವ ರಾಷ್ಟ್ರಗಳು ಪ್ರಗತಿ ಹೊಂದುತ್ತಿರುವ ರಾಷ್ಟ್ರಗಳಿಗೆ ಬಂಡವಾಳ ಸರಬರಾಜು ಮಾಡಿ ಅವುಗಳ ಆರ್ಥಿಕ ಭದ್ರತೆಯನ್ನು ವೃದ್ಧಿಗೊಳಿಸುವುದು ಸಾಧ್ಯ. ಒಂದು ರಾಷ್ಟ್ರ ತನ್ನ ರಾಷ್ಟ್ರೀಯ ವರಮಾನವನ್ನು ಯಾವ ರೀತಿ ಪಡೆಯುತ್ತಿದೆ ಎನ್ನುವುದೂ ಆರ್ಥಿಕ ಭದ್ರತೆಯ ದೃಷ್ಟಿಯಿಂದ ತಿಳಿಯುವುದು ಅಗತ್ಯ. ಉದಾಹರಣೆಗೆ, ಒಂದು ರಾಷ್ಟ್ರೀಯ ವರಮಾನದ ಅತ್ಯಧಿಕ ಭಾಗವನ್ನು ವಿದೇಶೀ ವ್ಯಾಪಾರದಿಂದ ಗಳಿಸುತ್ತಿದ್ದರೆ, ಆ ರಾಷ್ಟ್ರದ ಆರ್ಥಿಕ ಭದ್ರತೆ ಹೆಚ್ಚಾಗಿ ಬೇರೆ ರಾಷ್ಟ್ರಗಳ ವ್ಯಾಪಾರನೀತಿಯಿಂದ ಪ್ರಭಾವ ಹೊಂದುತ್ತದೆ. ಒಂದು ಅತ್ಯಂತ ಗಮನಾರ್ಹ ಅಂಶವೆಂದರೆ ಒಂದು ರಾಷ್ಟ್ರದ ಆರ್ಥಿಕ ಭದ್ರತೆ ಇತರ ರಾಷ್ಟ್ರಗಳ ಸಹಕಾರದಿಂದ ವೃದ್ಧಿಹೊಂದುತ್ತ ಹೋಗಬಹುದು. ಎಲ್ಲ ರಾಷ್ಟ್ರಗಳೂ ವ್ಯಾಪಾರ, ಶ್ರಮ, ಆಮದು ರಫ್ತುಗಳನ್ನು ಮುಕ್ತವಾಗಿ ಮಾಡಿದ್ದೇ ಆದರೆ ಪ್ರಪಂಚದ ಒಟ್ಟಾರೆ ಸಂಪತ್ತು ತೀವ್ರವಾಗಿ ವೃದ್ಧಿಯಾಗಿ ಇಡೀ ವಿಶ್ವದ ಆರ್ಥಿಕ ಭದ್ರತೆ ಅತ್ಯಂತ ತೀವ್ರವಾಗಿ ವೃದ್ಧಿಯಾಗುತ್ತ ಹೋಗಲು ಸಾಧ್ಯ. ಈ ವಿಷಯ ವಿಶ್ವಶಾಂತಿಯ ದೃಷ್ಟಿಯಿಂದಲೂ ಮುಖ್ಯ ಎಂಬ ಅಂಶ ಗಮನಾರ್ಹ.
ಉಲ್ಲೇಖಗಳು
[ಬದಲಾಯಿಸಿ]- ↑ https://en.m.wikipedia.org/wiki/Economic_security
- ↑ "ಆರ್ಕೈವ್ ನಕಲು". Archived from the original on 2018-08-23. Retrieved 2018-08-27.
- ↑ https://en.m.wikipedia.org/wiki/Social_security