ಆರ್ಥಿಕ ಅನಭಿವೃದ್ಧಿ

ವಿಕಿಪೀಡಿಯ ಇಂದ
Jump to navigation Jump to search

ಒಂದು ದೇಶದ ಆರ್ಥಿಕ ಅಭಿವೃದ್ಧಿಯನ್ನು ಅಲ್ಲಿನ ವೈಯಕ್ತಿಕ ಹಾಗೂ ರಾಷ್ಟ್ರೀಯ ವರಮಾನದ ಮೇಲೆ ಅಳೆಯುವುದಾದರೆ ಸ್ಥೂಲವಾಗಿ ಎಲ್ಲ ದೇಶಗಳನ್ನೂ ಅಭಿವೃದ್ಧಿ ಮತ್ತು ಅನಭಿವೃದ್ಧಿ ಎಂದು ಎರಡು ಭಾಗ ಮಾಡಬಹುದು. ಅನಭಿವೃದ್ಧಿ (ಅಂಡರ್ ಡೆವಲಪ್ಮೆಂಟ್) ಎಂಬ ಪದವನ್ನು ಅಲ್ಪಾಭಿವೃದ್ಧಿ, ಹಿಂದುಳಿಕೆ ಎಂಬ ಅರ್ಥದಲ್ಲಿ ಬಳಸಲಾಗಿದೆ. ಈಚೆಗೆ ಆರ್ಥಿಕವಾಗಿ ಹಿಂದುಳಿದ ಅನೇಕ ರಾಷ್ಟ್ರಗಳು ಮುಂದುವರಿಯಲು ಯೋಜನಾಬದ್ಧ ರೀತಿಯಲ್ಲಿ ಪ್ರಯತ್ನಿಸುತ್ತಿರುವುದರಿಂದ ಅಂಥವನ್ನು ಮುಂದುವರಿಯುತ್ತಿರುವ ರಾಷ್ಟ್ರಗಳೆಂದು ಕರೆಯುವುದು ವಾಡಿಕೆ. ವಿಶ್ವಸಂಸ್ಥೆ ಆರ್ಥಿಕ ದೃಷ್ಟಿಯಿಂದ ಎಲ್ಲ ರಾಷ್ಟ್ರಗಳನ್ನೂ ಮೂರು ಬಗೆಯಾಗಿ ವಿಂಗಡಿಸಿದೆ.

 1. ತಲಾ ಆದಾಯ ೯೧೫ ಡಾಲರುಗಳಿಗಿಂತ ಹೆಚ್ಚು ಇರುವ ದೇಶಗಳು ಹೆಚ್ಚು ವರಮಾನದ ರಾಷ್ಟ್ರಗಳು.
 2. ತಲಾ ಆದಾಯ ೩೧೦ ಡಾಲರುಗಳಷ್ಟಿರುವ ದೇಶಗಳು ಮಧ್ಯಮ ವರಮಾನದ ರಾಷ್ಟ್ರಗಳು.
 3. ತಲಾ ಆದಾಯ ೫೪ ಡಾಲರುಗಳಷ್ಟಿರುವುವು ಕಡಿಮೆ ವರಮಾನದ ರಾಷ್ಟ್ರಗಳು.

ಹೀಗೆ ರಾಷ್ಟ್ರಗಳಲ್ಲಿನ ಆರ್ಥಿಕ ಹಿಂದುಳಿಕೆಗೆ ಕಾರಣಗಳೇನು, ಮುಂದುವರಿದ ರಾಷ್ಟ್ರಗಳು ತಮ್ಮ ಪ್ರಗತಿಗೆ ಅನುಸರಿಸಿರುವ ಕ್ರಮಗಳೇನು, ಮುಂದುವರಿಯುತ್ತಿರುವ ರಾಷ್ಟ್ರಗಳು ಯಾವ ದಾರಿಯಲ್ಲಿ ಸಾಗುತ್ತಿವೆ ಎಂಬ ವಿಷಯಗಳನ್ನು ಇಲ್ಲಿ ಸೂಕ್ಷ್ಮವಾಗಿ ವಿವೇಚಿಸಲಾಗಿದೆ. ಒಂದು ದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾದ ಅಂಶಗಳು ಅನೇಕ ಇವೆ. ಅಲ್ಲಿನ ವಾತಾವರಣ, ಪ್ರಾಕೃತಿಕ ಸಂಪತ್ತು, ವ್ಯವಸಾಯ, ಕೈಗಾರಿಕೆಗಳು, ಅವುಗಳಿಗೆ ಬಳಸಲಾಗುವ ಯಾಂತ್ರಿಕ ತಾಂತ್ರಿಕ ಸಲಕರಣೆಗಳು, ಆಮದು ರಫ್ತುಗಳು, ಜನಸಂಖ್ಯೆ ಮತ್ತು ಅಭಿವೃದ್ಧಿ ಹೊಂದಲು ಒದಗುವ ಜನಶಕ್ತಿ, ಅವರಲ್ಲಿರುವ ಕ್ರಿಯಾಶಕ್ತಿ, ಅವರ ಸಾಮಾನ್ಯ ಮತ್ತು ತಾಂತ್ರಿಕ ವಿದ್ಯಾಸಂಪತ್ತು, ಆರೋಗ್ಯ, ಅವರ ಸಾಂಸ್ಕೃತಿಕ ಮಟ್ಟ, ರಾಜಕೀಯ ಸಂಬಂಧ, ಪ್ರಗತಿಯ ಬಗ್ಗೆ ಅಲ್ಲಿನ ಸರ್ಕಾರಗಳಿಗಿರುವ ಆಸಕ್ತಿ-ಇತ್ಯಾದಿಗಳೆಲ್ಲ ಆ ದೇಶದ ಬೆಳವಣಿಗೆಗೆ ಸಹಾಯಕವಾಗಿವೆ. ಇವುಗಳಲ್ಲಿ ಯಾವುದು ಕುಂಠಿತವಾದರೂ ದೇಶ ಅಭಿವೃದ್ಧಿ ಹೊಂದಲಾರದು. ಜೊತೆಗೆ ಚರಿತ್ರೆ ಈ ಬಗ್ಗೆ ತಿಳಿಸುತ್ತಿರುವ ಪಾಠ ಗಮನಾರ್ಹವಾಗಿದೆ. ವ್ಯಾಪಾರ ಮತ್ತು ವಸಾಹತುಶಾಹಿ ಧೋರಣೆಗಳುಳ್ಳ ಪಾಶ್ಚಾತ್ಯ ರಾಷ್ಟ್ರಗಳು 16ನೆಯ ಶತಮಾನದಲ್ಲಿ ನಡೆಸಿದ ಆರ್ಥಿಕ ಹಾಗೂ ರಾಜಕೀಯ ಆಕ್ರಮಣ ಗಳಿಂದಾಗಿ ಅನೇಕ ಪೌರಸ್ತ್ಯ ರಾಷ್ಟ್ರಗಳು ತೀವ್ರ ಶೋಷಣೆಗೆ ಒಳಗಾಗಿ ಹಿಂದುಳಿದಿವೆ. 20ನೆಯ ಶತಮಾನದಲ್ಲಿ ಹೊಸ ಪ್ರಜ್ಞೆ ಬೆಳೆದ ಮೇಲೆ ಶೋಷಿತ ರಾಷ್ಟ್ರಗಳು ಪ್ರತಿಭಟಿಸಿ ರಾಜಕೀಯ ಸ್ವಾತಂತ್ರ್ಯವನ್ನು ಗಳಿಸಿದವಾದರೂ ಅವುಗಳಲ್ಲಿ ಬಹುಪಾಲಿನವಕ್ಕೆ ಆರ್ಥಿಕ ಸ್ವಾತಂತ್ರ್ಯ ಇನ್ನೂ ದೊರೆತಿಲ್ಲ. ಈಚೆಗೆ ಅಭಿವೃದ್ಧಿಗಾಗಿ ರಾಷ್ಟ್ರಮಟ್ಟದ ಆಸಕ್ತಿ ಹೆಚ್ಚುತ್ತಿರುವಂತೆ ಅಂತಾರಾಷ್ಟ್ರೀಯ ಸೌಹಾರ್ದವೂ ಕಂಡುಬರುತ್ತಿರುವುದರಿಂದ ಪರಿಸ್ಥಿತಿ ಆಶಾದಾಯಕವಾಗಿದೆ. ಅಭಿವೃದ್ಧಿಗಾಗಿ ಒಂದು ರಾಷ್ಟ್ರ ಕೈಕೊಳ್ಳಬೇಕಾದ ಕಾರ್ಯಕ್ರಮಗಳು ಹೀಗಿವೆ :

 1. ದೇಶದ ಬಂಡವಾಳವನ್ನು ರಚನಾತ್ಮಕ ಕಾರ್ಯಗಳಲ್ಲಿ ವಿನಿಯೋಗಿಸುವುದು. ಉಳಿತಾಯ ಯೋಜನೆಗಳಿಂದ, ರಾಷ್ಟ್ರೀಯ ಸಾಲಗಳಿಂದ, ಲಾಟರಿಗಳಿಂದ, ವಿದೇಶೀ ಸಾಲಗಳಿಂದ ಬಂಡವಾಳ ತುಂಬುವುದು.
 2. ಅಭಿವೃದ್ಧಿ ತ್ವರಿತಗೊಳ್ಳಬೇಕಾಗಿರುವುದರಿಂದ ಯೋಜನೆಗಳನ್ನು ಹಾಕಿಕೊಂಡು ಅತಿ ಶೀಘ್ರವಾಗಿ ಕೆಲಸ ನೆರವೇರುವಂತೆ ನೋಡಿಕೊಳ್ಳು ವುದು.
 3. ದೇಶದ ಸಂಪನ್ಮೂಲಗಳನ್ನು ಮುಖ್ಯವಾಗಿ ಪ್ರಾಕೃತಿಕ ಮತ್ತು ಜನರೂಪ ಇವುಗಳನ್ನು ಪುರ್ಣ ಬಳಸುವುದು.
 4. ಬೇಕಾದ ಯಾಂತ್ರಿಕ ಮತ್ತು ತಾಂತ್ರಿಕ ಸಹಾಯ ಸಹಕಾರಗಳನ್ನು ತಜ್ಞ ರಾಷ್ಟ್ರಗಳಿಂದ ಎರವಲು ಪಡೆಯುವುದು.
 5. ಸ್ಥಳೀಯ ಯೋಗ್ಯತೆಗ ಳನ್ನು ಯುಕ್ತ ರೀತಿಯಲ್ಲಿ ಬಳಸುವುದು.
 6. ಜನಸಂಖ್ಯೆಯನ್ನು ನಿಯಂತ್ರಿಸಿ ಇರುವ ಜನಬಲ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು.
 7. ಉಳುಮೆಯ ಕ್ರಮ, ವ್ಯಾಪ್ತಿಗಳನ್ನು ಸ್ಥಳೀಯ ಅಗತ್ಯಗಳಿಗನುಸಾರ ಬದಲಾಯಿಸುವುದು.
 8. ಜನರ ವಿದ್ಯಾಭ್ಯಾಸದ ಮಟ್ಟ ಹಚ್ಚುವಂತೆ ಮಾಡುವುದು.
 9. ಸಾಧಾರಣವಾಗುತ್ತಿರುವ ವಿನಾಶಕಾರಿ ಒಳಜಗಳಗಳು, ಯುದ್ಧಗಳು, ಮುಷ್ಕರಗಳು, ಮುಂತಾದವುಗಳನ್ನು ನಿವಾರಿಸಲು ಯತ್ನಿಸು ವುದು.
 10. ರಾಷ್ಟ್ರೀಯ ಆಮದು ರಫ್ತುಗಳನ್ನು ದೇಶದ ಹಿತದೃಷ್ಟಿಯಿಂದ ರೂಪಿಸುವುದು. ಭಾರತ ಸ್ವತಂತ್ರವಾದ ಮೇಲೆ ಈ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುತ್ತಿರುವುದನ್ನು ಒಂದು ನಿದರ್ಶನವಾಗಿ ತೆಗೆದುಕೊಳ್ಳಬಹುದು. ಮುಖ್ಯವಾಗಿ ದೇಶದ ಆರ್ಥಿಕ ಪ್ರಗತಿ ಅಲ್ಲಿನ ಜನರ ಕ್ರಿಯಾಶಕ್ತಿಯನ್ನು ಅವಲಂಬಿಸಿದೆ ಎನ್ನಬಹುದು.

ಆರ್ಥಿಕ ಬೆಳೆವಣಿಗೆ, ಆರ್ಥಿಕ ಯೋಜನೆಗಳು, ಆರ್ಥಿಕ ರಾಷ್ಟ್ರೀಯತೆ, ಆರ್ಥಿಕ ಸಂಪನ್ಮೂಲಗಳು, ಆರ್ಥಿಕ ಸ್ವಾತಂತ್ರ್ಯ