ಆರ್ಥರ್ ಹೋಲ್ಲಿ ಕಾಂಪ್ಟನ್
ಆರ್ಥರ್ ಹೋಲ್ಲಿ ಕಾಂಪ್ಟನ್ | |
---|---|
ಜನನ | ೧೮೯೨ ಸೆಪ್ಟೆಂಬರ್ ೧೦ ಅಮೇರಿಕ |
ಮರಣ | ೧೯೬೨ ಮಾರ್ಚ್ ೧೫ |
ರಾಷ್ಟ್ರೀಯತೆ | ಅಮೇರಿಕ |
ಕಾರ್ಯಕ್ಷೇತ್ರಗಳು | ಭೌತವಿಜ್ಞಾನಿ |
ಅಮೇರಿಕದ ಭೌತವಿಜ್ಞಾನಿಯಾದ ಆರ್ಥರ್ ಹೋಲ್ಲಿ ಕಾಂಪ್ಟನ್‌ರವರು ೧೮೯೨ರ ಸೆಪ್ಟೆಂಬರ್ ೧೦ರಂದು ಓಹಿಯೋನಲ್ಲಿ ಜನಿಸಿದರು. ಮೊದಲು ಕ್ಷ-ಕಿರಣಗಳು ಅಲೆಗಳು ಎಂಬುದಾಗಿ ಅನೇಕ ವಿಜ್ಞಾನಿಗಳಿಂದ ಪ್ರತಿಪಾದಿಸಲಾಗಿತ್ತು. ಆದರೆ ಕ್ಷ-ಕಿರಣಗಳು ವಿದ್ಯುದಯಸ್ಕಾಂತ ವಿಕಿರಣಗಳ ಫೋಟಾನ್‌ಗಳಂತೆ ಕಣಗಳಂತೆ ವರ್ತಿಸುತ್ತವೆ ಮತ್ತು ಇಲೆಕ್ಟ್ರಾನ್‌ಗಳ ಸಂಘಟ್ಟನೆಯಿಂದ ಕ್ಷ-ಕಿರಣಗಳ ಆವೃತ್ತಿಗಳು ಕಡಿಮೆಯಾಗಿ, ತರಂಗದೂರಗಳೂ ಕಡಿಮೆಯಾಗುತ್ತದೆ ಎಂಬುದಾಗಿ ಕಾಂಪ್ಟನ್‌ರವರು ಕಂಡುಹಿಡಿದರು. ಅದಕ್ಕೆ ‘ಕಾಂಪ್ಟನ್ ಪರಿಣಾಮ’ ಎನ್ನುವುದು ವಾಡಿಕೆಯಾಗಿದೆ. ಮುಂದೆ ಬ್ರಿಟನ್ನಿನ ವಿಜ್ಞಾನಿ ಸಿ.ಟಿ.ಆರ್. ವಿಲ್ಸನ್‌ರವರ (೧೮೬೯-೧೯೫೯) ಮೇಘ ಕೋಷ್ಠದ (cloud chamber) ಸಹಾಯದಿಂದ ಕ್ಷ-ಕಿರಣಗಳು ಮತ್ತು ಇಲೆಕ್ಟ್ರಾನ್‌ಗಳ ನಡುವಿನ ಸಂಘಟ್ಟನೆಯ ಛಾಯಾಚಿತ್ರಗಳನ್ನು ತೆಗೆದು, ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಯಿತು. ಆಗ ಕಾಂಪ್ಟನ್ ಪರಿಣಾಮ ದೃಢೀಕೃತವಾಯಿತು. ಕಾಂಪ್ಟನ್ ಪರಿಣಾಮದ ಸಂಶೋಧನೆಗಾಗಿ ಕಾಂಪ್ಟನ್‌ರವರಿಗೆ ೧೯೨೭ರ ಭೌತವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಬ್ರಿಟನ್ನಿನ ವಿಜ್ಞಾನಿ ಸಿ.ಟಿ.ಆರ್. ವಿಲ್ಷನ್‌ರವರ ಜೊತೆ ನೀಡಲಾಯಿತು.[೧] ಕಾಂಪ್ಟನ್‌ರವರು ವಿಶ್ವಕಿರಣಗಳ (cosmic rays) (ನಮ್ಮ ಭೂಮಿಯ ಅನೇಕ ಪ್ರದೇಶಗಳಿಂದ) ಅಧ್ಯಯನವನ್ನು ನಡೆಸಿದರು. ಕೊನೆಯ ಪಕ್ಷ ವಿಶ್ವಕಿರಣಗಳ ಕೆಲವು ಘಟಕಗಳು ಆವೇಶಯುಕ್ತ ಕಣಗಳನ್ನು (charged particles) ಹೊಂದಿವೆ ಎಂಬ ವಿಷಯವನ್ನು ೧೯೩೮ರಲ್ಲಿ ಕಂಡುಹಿಡಿದರು. ವಿದಳನಕ್ರಿಯೆಯಲ್ಲಿ (fission) ಭಾಗಿಯಾಗುವ ಪ್ಲುಟೋನಿಯಮ್‌ನನ್ನು ಬೇರ್ಪಡಿಸುವ ವಿಧಾನವನ್ನು ಕಂಡುಹಿಡಿದ ತಂಡದ ನೇತೃತ್ವವನ್ನು ಕಾಂಪ್ಟನ್‌ರವರು ವಹಿಸಿಕೊಂಡಿದ್ದರು. ಅಲ್ಲದೆ ಎನ್ರಿಕೋ ಫರ್ಮಿಯವರ (೧೯೦೧-೧೯೫೪) ಜೊತೆ ಕೆಲಸ ಮಾಡಿ ಬೈಜಿಕ ಸರಪಳಿ ಕ್ರಿಯೆಯನ್ನು (nuclear chain reaction) ಉತ್ಪತ್ತಿ ಮಾಡುವುದರಲ್ಲಿ ಯಶಸ್ವಿಯಾದರು. ಅವರ ಆ ಯಶಸ್ಸು ಕೊನೆಗೆ ಪರಮಾಣು ಬಾಂಬು ತಯಾರಿಸುವ ಕಾರ್ಯದಲ್ಲಿ ಪರ್ಯಾವಸಾನಗೊಂಡಿತು.[೨] ಕಾಂಪ್ಟನ್ ರವರು ಕ್ಯಾಲಿಫೋರ್ನಿಯಾದ ಬಕ್ಲೀಯಲ್ಲಿ ೧೯೬೨ರ ಮಾರ್ಚ್ ೧೫ರಂದು ನಿಧನರಾದರು.[೩]
ಉಲ್ಲೇಖಗಳು
[ಬದಲಾಯಿಸಿ]- ↑ https://www.nobelprize.org/nobel_prizes/physics/laureates/1927/compton-facts.html
- ↑ http://www.osti.gov/accomplishments/compton.html
- ↑ https://www.google.co.in/search?client=ubuntu&channel=fs&q=Arthur+Holly+Compton&ie=utf-8&oe=utf-8&gfe_rd=cr&ei=A0waV-bgJ9HmuATRrZnQDQ#channel=fs&q=arthur+holly+compton+death